ಕಿರಣ ಭಟ್ ಕಂಡಂತೆ ‘ಗುಣಮುಖ’

ಕಿರಣ ಭಟ್

ನಾಟಕ : ‘ಗುಣಮುಖ’
ರಚನೆ: ಪಿ. ಲಂಕೇಶ್
ನಿರ್ದೇಶನ: ಛಾಯಾ ಭಾರ್ಗವಿ.
ಪ್ರಸ್ತುತಿ: ಅದಮ್ಯ ರಂಗಸಂಸ್ಕೃತಿ.
ನೋಡಿದ್ದು: ನಾಟಕ ಬೆಂಗಳೂರು ಉತ್ಸವದಲ್ಲಿ.

ನಾಟಕ ಪ್ರಾರಂಭವಾಗೋದು ತೀವ್ರ ಅಶಾಂತ ವಾತಾವರಣದಲ್ಲಿ. ಅಸಾಧ್ಯ ಅಸಹನೆಯ, ನಾದಿರ್ ಶಾ ಕೂಗಾಡುತ್ತ ನಡೆಸುವ ಒಂದು ವಿಚಾರಣೆಯೊಂದಿಗೆ. ಮುಗಿಯೋದು ಎಲ್ಲರೊಡನೆ ಮಂಡಿಯೂರಿ ಕುಳಿತು ಆತ ಮಾಡುವ ಶಾಂತವಾದ ಪ್ರಾರ್ಥನೆಯೊಂದಿಗೆ.
ಈ ನಡುವೆ ಅರಾವರಣಗೊಳ್ಳೋದು ಮೊಘಲರ ಕಾಲದ ಕ್ಷುದ್ರ ರಾಜಕೀಯ. ನಾದಿರ್ ಶಾ ನೊಳಗೆ ಸೇರಿಕೊಂಡು ಆತನನ್ನ ಹಿಂಸಿಸುತ್ತಿರುವ ರೋಗ ಮತ್ತು ಚೀರಾಡುತ್ತ, ‘ಕೊಂದೇ ಬಿಡುವೆ ‘ಎಂದು ಬೆದರಿಸುವ ಆತನನ್ನ ಅಷ್ಟೇ ಶಾಂತವಾಗಿ ಎದುರಿಸುವ ಹಕೀಮ್ ಅಲಾವಿ ಖಾನ್ ರ ವ್ಯಕ್ತಿತ್ವ.

ಪರ್ಷಿಯಾದಿಂದ ಲಕ್ಷಾನುಲಕ್ಷ ಸೈನ್ಯದೊಂದಿಗೆ ಭಾರತವನ್ನ ಹೊಕ್ಕು, ಒಳ ರಾಜಕೀಯದಿಂದಲೇ ಕೃಷವಾಗಿರುವ ಮೊಘಲರನ್ನ ಸದೆಬಡಿದು ಬಹುಭಾಗವನ್ನು ವಶಪಡಿಸಿಕೊಂಡ ನಾದಿರ್ ಶಾ, ಮಾತೆತ್ತಿದರೆ ಕತ್ತಿಯೆತ್ತುವಂಥವನು. ಹಿಂಸೆಯೇ ಆತನ ಸ್ಥಾಯೀಭಾವ. ಯುದ್ಧದ ಹಿಂಸೆ, ರಕ್ತ ಅಂದರೆ ಆತನಿಗೆ ಹರ್ಷ .ಇಂಥ ಹಿಂಸಾಪ್ರೀತಿ, ಕ್ರೌರ್ಯ, ಹುಂಬತನ, ಸೊಕ್ಕು,ಹಟಮಾರಿತನ ಆವನನ್ನ ರೋಗಿಯಾಗಿಸಿಬಿಡ್ತವೆ. ಸರಿಪಡಿಸಲಾಗದ ಅಸಾಧ್ಯ ರೋಗವದು. ಇಂಥ ರೋಗವನ್ನು ಒಳಗಿಟ್ಟುಕೊಂಡ ಆತ ಸಂಶಯ ಬಂದವರನ್ನೆಲ್ಲ ಮತ್ತೆ ಮತ್ತೆ ಕೊಲ್ತಾ ಮಾನಸಿಕವಾಗಿ ಇನ್ನಷ್ಟು ಕ್ಷೋಭಿತನಾಗ್ತಾನೆ. ಕೊನೆಗೂ, ಮುದಿ ಪ್ರಾಯದ ಬಡ ಹಕೀಮ್ ಇಂಥ ರೋಗದಿಂದ ಆತನನ್ನು ಆಚೆಗೆ ತರುವಲ್ಲಿ ಯಶಸ್ವಿಯಾಗ್ತಾನೆ.

ಲಂಕೇಶ್ ರ ಮಹತ್ವದ ನಾಟಕವಿದು. ಇತಿಹಾಸದ ಘಟನೆಗಳನ್ನಿಟ್ಟುಕೊಂಡು ಸಮಕಾಲೀನ ಸೆಳಕು ತೋರುವ ಈ ನಾಟಕದ ತುಂಬ ಪ್ರಸ್ತುತ ವಿದ್ಯಮಾನಗಳೆಡೆ ಬೊಟ್ಟು ಮಾಡುವ ಸಂಭಾಷಣೆಗಳಿವೆ. ಈ ರಂಗಪ್ರಯೋಗ ಇಂಥ ಸಂಭಾಷಣೆಗಳನ್ನ ಒಪ್ಪವಾಗಿ ಒಪ್ಪಿಸುವ ಪ್ರಯತ್ನ ಮಾಡುತ್ತದೆ.ನಾಟಕದ ಅನೇಕ ‘ ಪಂಚ್’ ಗಳು ನೇರ ನಾಟುವಂತಿವೆ. ಟೆಕ್ಟ್ ದೃಷ್ಟಿಯಿಂದ ತುಸು ಗಟ್ಟಿಯೇ ಆದ ಪ್ರಯೋಗವಿದು.
ನಾಟಕದುದ್ದಕ್ಕೂ ಸ್ಥಾವರದಂತೆ ನಿಂತಿರುವ ಬೆಳಕಿನ ವಿನ್ಯಾಸದಿಂದ ಚೆಂದಗೊಂಡ ಸರಳ ರಂಗಸಜ್ಜಿಕೆ ಯ ನಡುವೆ ಅಷ್ಟೇ ಸರಳವಾಗಿ ಕಟ್ಟಿದ ನಾಟಕ. ದೃಶ್ಯ ಬದಲಾವಣೆಗೆ ಮತ್ತು ಕೆಲವು ಮಾತುಗಳ ಕೊನೆಗೆ ಸೀಮಿತವಾಗಿ ಸಂಗೀತದ ಬಳಕೆಯಿದೆ. ನಾಟಕದ ಕೊನೆಯಲ್ಲಿ ಪ್ರಾರ್ಥನೆಗೆ ಬಳಸಿದ ರೆಕಾರ್ಡೆಡ್ ಸಂಗೀತ ಹಿತವಾಗಿ ಮಿಳಿತವಾಗಿದೆ.

ನಟರೆಲ್ಲ ಪಾತ್ರಗಳಿಗೆ ಜೀವ ಕೊಡುವ ಪ್ರಯತ್ನ ಮಾಡಿದ್ದಾರೆ. ತುಸು ಅತಿ ಎನಿಸಿದರೂ ನಾದಿರ್ ಶಾ ನ ಪಾತ್ರದ ಕಟ್ಟುವಿಕೆ ಆತನ ಮನೋಭಾವದ ರೂಪಕದಂತಿದೆ. ಉಳಿದ ಪಾತ್ರಗಳನ್ನೂ ಇದೇ ಲೆವಲ್ ನಲ್ಲಿ ಪೋಷಿಸಬಹುದಿತ್ತೇನೋ. ಶ್ರಾವ್ಯ ವಿಭಾಗ ದಲ್ಲಿ ಕಾಣುವ ಶಕ್ತಿ ದೃಶ್ಯ ವಿಭಾಗದಲ್ಲೂ ಇದ್ದಿದ್ರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ.

ಇನ್ನೇನು ನಾಟಕ ಮುಗಿಯಲಿಕ್ಕಿದೆ. ಹಿರಿಯ ಹಕೀಮ್ ನಾದಿರ್ ಶಾ ನನ್ನ ಗುಣಪಡಿಸಿದ್ದಾನೆ. ಶಾಂತನಾದ ನಾದಿರ್ ಶಾ ಹಕೀಮ್ ನನ್ನ ಒಂದು ಪ್ರಶ್ನೆ ಕೇಳುತ್ತಾನೆ.

“ನಾನು ಇಲ್ಲಿಯೇ ಇರಲೇ ಅಥವಾ ಭಾರತ ಬಿಟ್ಟು ಹೋಗಲೇ?” ಅಷ್ಟೇ ಶಾಂತವಾಗಿ ಹಕೀಮ್ ಉತ್ತರಿಸುತ್ತಾನೆ. ” ನಾನು ಭಾರತೀಯ. ಇಲ್ಲಿಯ ನೆಲ, ಜಲ, ಸಂಸ್ಕೃತಿ ನನ್ನನ್ನು ಬೆಳೆಸಿವೆ. ನೀನು ಭಾರತ ಬಿಟ್ಟು ಹೊರಡು” ಇದು ಭಾರತ.

‍ಲೇಖಕರು Admin

December 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: