ಎಚ್ ಎಸ್ ವಿ ಕಾಲಂ: ಕಾವ್ಯಾತುರಾಣಾಂ..

ತಾವರೆಯ ಬಾಗಿಲು-೧೦
ಎಚ್.ಎಸ್.ವೆಂಕಟೇಶ ಮೂರ್ತಿ

ಮಹಾಕವಿ ಕಾಳಿದಾಸನ ‘ಕುಮಾರಸಂಭವ’ ಸಂಸ್ಕೃತದ ಪಂಚಮಹಾಕಾವ್ಯಗಳಲ್ಲಿ ಒಂದು. ಅದರ ನಾಯಕ ಜಗತ್ಪಿತೃವಾದ ಸಾಕ್ಷಾತ್ ಶಿವ. ನಾಯಕಿ ಜಗನ್ಮಾತೆಯಾದ ಪಾರ್ವತಿ. ಎಂಟು ಸರ್ಗದ ಮಹಾಕಾವ್ಯ. ಎಂಟನೇ ಸರ್ಗದಲ್ಲಿ ಹೊಸದಾಗಿ ವಿವಾಹವಾದ ಪಾರ್ವತೀಪರಮೇಶ್ವರರ ಸಂಯೋಗಶೃಂಗಾರದ ಚಲಿತಚಿತ್ರಾವಳಿಗಳು ಚಿತ್ರಿತವಾಗಿವೆ. ಜಗತ್ತಿನ ತಾಯಿ ತಂದೆಯರ ಸಂಯೋಗವನ್ನು ಇಷ್ಟು ಬಿಡುಬೀಸಾಗಿ ವರ್ಣಿಸಬಹುದೆ? ಸಂಪ್ರದಾಯಶೀಲರಾದ ಭಕ್ತರಿಗೂ, ಧರ್ಮಭೀರುಗಳಾದ ಮರ್ಯಾದಸ್ತರಿಗೂ, ಇದು ನುಂಗಲಾರದ ಬಿಸಿತುಪ್ಪ.

shiva-parvatiಕುಮಾರಸಂಭವದ ಎಂಟನೇ ಸರ್ಗವನ್ನು ಓದುವ ವ್ಯಾಖ್ಯಾನಿಸುವ ಸಂಪ್ರದಾಯ ತಪ್ಪಿಹೋಯಿತು. ಜಗತ್ತಿನ ತಾಯಿ ತಂದೆಯರ ಸಂಭೋಗವನ್ನು ಇಷ್ಟು ಮುಕ್ತವಾಗಿ ವರ್ಣಿಸಿದನೆಂದೇ ಕಾವ್ಯ ಎಂಟನೇ ಸರ್ಗಕ್ಕೇ ಸ್ಥಗಿತವಾಗಿ ಹೋಯಿತು. ಕಾವ್ಯದ ಹೆಸರು ಕುಮಾರ ಸಂಭವ. ಕುಮಾರಸ್ವಾಮಿಯ ಜನನದ ಮೊದಲೇ ಕಾವ್ಯ ನಿಲ್ಲಬಾರದಿತ್ತು. ಆದರೆ ಕವಿಯ ಅಚಾತುರ್ಯದಿಂದ ಕಾವ್ಯವು ಪೂರ್ಣವಾಗುವ ಯೋಗ ತಪ್ಪಿಹೋಯಿತು-ಎಂದು ಮುಂತಾಗಿ ಕತೆಗಳು ಹುಟ್ಟಿದವು. ಹಾಗಾದರೆ ನಾವು ಎಂಟನೇ ಸರ್ಗವನ್ನು ಓದುವುದು ಬೇಡವೇ?

ಈ ಬಿಕ್ಕಟ್ಟಿಗೆ ಉತ್ತರವಿದೆ. ನಾವು ಕಾವ್ಯವನ್ನು ಆಸ್ವಾದಿಸುವಾಗ ಯಾವ ಭಾವಸ್ಥಿತಿಯಲ್ಲಿ ಕಾವ್ಯದ ಅನುಸಂಧಾನಕ್ಕೆ ತೊಡಗಬೇಕು? ಪುತಿನ ಹೇಳುತ್ತಾರೆ: ಕಾವ್ಯವನ್ನು ಓದುವಾಗ ನಮ್ಮಲ್ಲಿ ಇರಬೇಕಾದದ್ದು ಪೂಜ್ಯಭಾವವಲ್ಲ; ಪ್ರೇಮಭಾವ. ಪುತಿನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುತ್ತಾರೆ. ಕಾವ್ಯದ ಓದಿಗೆ ಬೇಕಾದದ್ದು ಒಂದು ಬಗೆಯ ಇರ್ರೆವರೆನ್ಸ್. ಮುಜುಗರವಿಲ್ಲದ ಆಪ್ತ ಸಲುಗೆ ಮತ್ತು ನಿರಾವಲಂಬ. ಪಾರ್ವತಿ-ಪರಮೇಶ್ವರರ ಬಗ್ಗೆ ಪೂಜ್ಯ ಭಾವವಿರಿಸಿಕೊಂಡು ನೀವು ಅವರ ಉದ್ರಿಕ್ತ ರತಿಯನ್ನು ಪರಿಭಾವಿಸಲಾರಿರಿ. ಕಾವ್ಯವೆಂಬುದು ಧರ್ಮಶ್ರವಣವೆಂದು ಮಡಿಯುಟ್ಟು ಕುಳಿತೆವೋ ನಾವು ಅದನ್ನು ಮುಕ್ತವಾಗಿ ಅನುಭವಿಸಲಾರೆವು. ಕಾವ್ಯವಾದರೋ ತನ್ನ ಪಾತ್ರಗಳ ಮೂಲಕ ನಮ್ಮನ್ನೇ ಅಭಿನಯಿಸಿ ತೋರುವುದೆಂಬ ಅರಿವಿದ್ದರೆ ಮಾತ್ರ ನಮಗೆ ಕಾವ್ಯದಲ್ಲಿ ತಾದಾತ್ಮ್ಯ ಸಾಧ್ಯವಾದೀತು. ಕುಮಾರಸಂಭವದ ಬಹು ಸುಂದರವಾದ ಈ ಪದ್ಯವನ್ನು ಗಮನಿಸಿ:

ತೇನ ಭಂಗಿವಿಷಮೋತ್ತರಚ್ಛದಂ ಮಧ್ಯ ಪಿಂಡಿತವಿಸೂತ್ರ ಮೇಖಲಂ
ನಿರ್ಮಲೇಪಿ ಶಯನಂ ನಿಶಾತ್ಯಯೇನೋಜ್ಝಿತಂ ಚರಣರಾಗಲಾಂಛಿತಂ||೮೯||

(ಕಾಮಕೇಳಿಯ) ಬಗೆ ಬಗೆಯ ಭಂಗಿಗಳಿಂದಾಗಿ ಹಾಸಿಗೆಯ ಮೇಲುವಾಸು ಮಡಿಕೆ ಮಡಿಕೆಯಾಗಿತ್ತು; (ಹಾಸಿಗೆಯ ಮಧ್ಯೆ) ಉಡದಾರ ತುಂಡಾಗಿ ಮುದ್ದೆಯಾಗಿ ಬಿದ್ದಿತ್ತು; ಅಲ್ಲಿ ಅಲತಿಗೆ ಬಳಿದ ಪಾದದ ಗುರುತು ಮೂಡಿತ್ತು. ರಾತ್ರಿ ಕಳೆದು ಸೂರ್ಯ ಮೇಲೆದ್ದು ಬಂದರೂ ಶಿವನು (ಹಾಸಿಗೆ ಬಿಟ್ಟು) ಮೇಲೆದ್ದಿರಲಿಲ್ಲ. (ಗದ್ಯಾನುವಾದ: ಡಾ|ಶ್ರೀರಾಮಭಟ್ಟ)

ಹೊದಿಕೆಯೊಳ ಮಡಿಕೆಯೊಳಗೇರು ತಗ್ಗುಗಳಿರುವ
ಹರಿದೊಗೆದ ಮೇಖಲೆಯು ನಡುವೆ ಇರುವ
ಅಲತಿಗೆಯ ಅಡಿಯ ಗುರುತೆಸೆಯುವಾ ಶಯ್ಯೆಯನು
ಬೆಳಗಾದರೂ ಹರನು ಬಿಟ್ಟೇಳನು.
(ಪದ್ಯಾನುವಾದ: ಡಾ|ಎಸ್.ವಿ.ಪರಮೇಶ್ವರಭಟ್ಟ)

ಮಲ್ಲಿನಾಥನಂತೂ ಕುಮಾರಸಂಭವದ ವ್ಯಾಖ್ಯಾನವನ್ನು ತನ್ಮಯಚಿತ್ತನಾಗಿ ನಡೆಸಿದ್ದಾನೆ. ಅದರಲ್ಲಿಯೂ ಎಂಟನೇ ಕಾಂಡದ ಕೆಲವು ಪದ್ಯಗಳನ್ನು ಆತ ವ್ಯಾಖ್ಯಾನಿಸುವ ಸೊಗಸೇ ಸೊಗಸು. ಶಿವಶಿವೆಯರು ಇರುಳೆಲ್ಲಾ ಮಿಲನದಾಟದಲ್ಲಿ ತೊಡಗಿದ್ದಾರೆ. ಅವರ ಸುಪ್ಪತ್ತಿಗೆಯ ಮೇಲ್ವಾಸು ಮುದುಡಿ ಮುದ್ದೆಯಾಗಿದೆ. ಶುಭ್ರವಾದ ಅದರ ಮೇಲೆ ಹರಿದುಬಿದ್ದ ಕಟಿಸೂತ್ರ. ಅಲತಿಗೆಯನ್ನು ಬಳಿದ ಪಾರ್ವತಿಯ ಅಂಗಾಲಿನ ಗುರುತು ಮೇಲ್ವಾಸಿನ ಮೇಲೆ. ಮಲ್ಲಿನಾಥ ಹೇಳುತ್ತಾನೆ. ಆಕೆ ಪುರುಷಾಯಿತದ ಭಂಗಿಯಲ್ಲಿ ಶಿವನೊಂದಿಗೆ ಕ್ರೀಡಿಸಿರಬೇಕೆಂಬುದನ್ನು ಮೇಲ್ವಾಸಿನ ಮೇಲಿರುವ ಈ ಅಂಗಾಲ ಗುರುತುಗಳು ಸೂಚಿಸುತ್ತಿವೆ!

ಇನ್ನೊಂದು ಪದ್ಯ:

ದರ್ಪಣೇ ಚ ಪರಿಭೋಗದರ್ಶಿನೀ ಪೃಷ್ಠತಃಪ್ರಣಯಿನೋ ನಿಷೇದುಷಃ
ಪ್ರೇಕ್ಷ್ಯಬಿಂಬಮನು ಬಿಂಬಮಾತ್ಮನಃ ಕಾನಿ ಕಾನಿ ನ ಚಕಾರ ಲಜ್ಜಯಾ||೧೧||

ಕನ್ನಡಿಯಲ್ಲಿ ಸಂಪನ್ನ ಸಂಭೋಗದ (ಕಾಲದಲ್ಲಿ ಉಂಟಾದ ನಖಕ್ಷತಾದಿ) ಚಿಹ್ನೆಗಳನ್ನು ನೋಡುತ್ತಿರುವವಳು ತನ್ನ ಪ್ರತಿಬಿಂಬದ ಹಿಂದೆ ನಲ್ಲನ ಪ್ರತಿಬಿಂಬವನ್ನು ಕಂಡು ನಾಚಿಕೆಯಿಂದ (ತನ್ನ ದೇಹದಲ್ಲಾದ ನಖಕ್ಷತಗಳನ್ನು ಮುಚ್ಚಿಕೊಳ್ಳಲು) ಏನೇನು ತಾನೆ ಮಾಡಲಿಲ್ಲ? (ಗದ್ಯಾನುವಾದ: ಡಾ|ಶ್ರೀರಾಮಭಟ್ಟ)

ಮುಕುರದೊಳು ನೋಳ್ಪಂದು ಭೋಗಸುಖ ಚಿಹ್ನೆಯನು
ಹಿಂದಿರುವ ಪತಿಯ ಪ್ರತಿಬಿಂಬವದನು
ತನ್ನ ಬಿಂಬದ ಹಿಂದೆ ಕಂಡೊಡನೆ ಲಜ್ಜೆಯಿಂ-
ದೇನೇನಗೈದಳದನೇವೇಳ್ವದು.
(ಪದ್ಯಾನುವಾದ: ಡಾ|ಎಸ್.ವಿ.ಪರಮೇಶ್ವರಭಟ್ಟ)

shiva5ಕಾಮದ ಹೊಸ ಅನುಭವವನ್ನು ಆಸ್ವಾದಿಸುವ ಕುತೂಹಲ, ನಲ್ಲ ಅದನ್ನು ಕಂಡುದು ಕಂಡಾಗ ಉಂಟಾದ ಸಹಜವಾದ ಲಜ್ಜಾಭಾವ, ನಲ್ಲನೇ ಮಾಡಿದ ಗುರುತುಗಳನ್ನು ಅವಿತಿಟ್ಟುಕೊಳ್ಳುವಲ್ಲಿ ಹೊಸ ವಧುವಿನ ಗಡಿಬಿಡಿ ಎಷ್ಟು ಸಹಜವಾಗಿ ಈ ಪದ್ಯದಲ್ಲಿ ವರ್ಣಿತವಾಗಿವೆ!

ಊರುಮೂಲನಖಮಾರ್ಗರಾಜಭಿಃ ತತ್ ಕ್ಷಣಂ ಹೃತವಿಲೋಚನೋ ಹರಃ
ವಾಸಸಃ ಪ್ರಶಿಥಿಲಸ್ಯ ಸಂಯಮಂ ಕುರ್ವತೀಂ ಪ್ರಿಯತಮಾಮವಾರಯತ್||೮೭||

(ಗಂಧಮಾದನ ಕಾಡಿನಿಂದ ಗಾಳಿ ಬೀಸಿ ಬಂದ) ಆ ಕ್ಷಣದಲ್ಲಿ (ವಸ್ತ್ರ ಹಾರಿದ್ದರಿಂದ) ತೊಡೆಯ ಬುಡದಲ್ಲಿ ನಖಕ್ಷತಗಳ ಸಾಲು ಶೋಭಿಸಿ ಹರನ ಕಣ್ಸೆಳೆಯಿತು. ಸಡಿಲಿ ಹೋದ ಬಟ್ಟೆಯನ್ನು ಕಟ್ಟಿಕೊಳ್ಳುವ ನಲ್ಲೆಯನ್ನು ಆತ ತಡೆದ.
(ಗದ್ಯಾನುವಾದ: ಡಾ|ಶ್ರೀರಾಮಭಟ್ಟ)

ಊರುಮೂಲದೊಳಾದ ಆ ನಖಕ್ಷತಗಳಿಂ-
ದಪಹೃತವಿಲೋಚನನು ಅಂದು ಹರನು
ಸಡಿಲಗೊಂಡಿರುವುಡೆಯ ಬಿಗಿದೆಳೆಯುವದ್ರಿಜೆಯ
ಕೈವಿಡಿದು ಪ್ರಿಯತಮೆಯ ತಡೆದಿರ್ದನು.
(ಪದ್ಯಾನುವಾದ: ಡಾ|ಎಸ್.ವಿ.ಪರಮೇಶ್ವರಭಟ್ಟ)

ಇಲ್ಲಿ ಕೆಲವು ಮೂಲಭೂತ ಪ್ರಶ್ನೆಗಳಿವೆ. ಸ್ತ್ರೀಪುರುಷರ ಕಾಮದಾಟವನ್ನು ಹೀಗೆ ಐಂದ್ರಿಯಕ ಲೋಲುಪ್ತಿಯಲ್ಲಿ ಬಣ್ಣಿಸುವ ಅಗತ್ಯವುಂಟೆ? ಇದು ರುಚಿಗೆ ಸಂಬಂಧಿಸಿದ ವಿಷಯ. ಸೃಷ್ಟಿಶೀಲವಾದ ಅನುವರ್ತನೆಗಳು ಎಲ್ಲ ಕಾಲಕ್ಕೂ ನಡೆಯತಕ್ಕವೇ. ಇದು ಪ್ರಕೃತಿಯೇ ಗಂಡು ಹೆಣ್ಣಲ್ಲಿ ಇರಿಸಿರುವ ಕಾಮಾಗ್ನಿ. ಸಂಭೋಗವು ಕೇವಲ ಪ್ರಜನನಾಸಕ್ತಿಯಲ್ಲ. ಅದೊಂದು ಆನಂದದ ಅನುಭಾವ ಎಂಬುದು ನಮ್ಮ ಹಳೆಯ ಕವಿಗಳ ಅಭಿಮತವಾಗಿತ್ತು. ಆದರೆ ಕಾಳೀದಾಸನಂಥವನಿಗೆ ಕಾಮವು ಧರ್ಮಾವಿರುದ್ಧ ಕಾಮವಾಗಿರಬೇಕು. ಆಗಲೇ ಅದು ಸಮ್ಮತ. ಆವತ್ತಿನ ಶೃಂಗಾರ ಕ್ರಿಯೆಗಳೆಲ್ಲಾ ಈವತ್ತು ಭಾಷೆಗೆ ಅನುವಾದಿಸಲ್ಪಟ್ಟಿವೆ. ಭೋಗವೆನ್ನುವುದೂ ಎರಡೂ ಪಕ್ಷಗಳಿಂದಲೂ ಪ್ರವೃತ್ತವಾಗುವಂಥದ್ದು.

ಪಾರ್ವತಿಯ ಪಾದದ ಅಲತಿಗೆಯ ಗುರುತು ಸೂಚಿಸುವ ಪುರುಷಾಯಿತವು ಸ್ತ್ರೀಪುರುಷರ ನಡುವಿನ ಅಂತರವನ್ನು ತೊಡೆದು ಹಾಕುವಂಥದ್ದಾಗಿದೆ. ಭೋಗವೃತ್ತಿಯು ಏಕಮುಖಿಯಲ್ಲವೆಂಬುದನ್ನೂ ಸೂಚಿಸಿ ಪ್ರಕೃತಿ ಪುರುಷರ ನಡುವೆ ಸಮಾನಸ್ಕಂಧತೆಯನ್ನು ಸಾಧಿಸಿ ತೋರಿಸುವಂಥದ್ದೂ ಆಗಿದೆ. ಆನಂದಮಾರ್ಗದ ಅನಂತವಾದ ಸಹಜ ಸುಂದರ ಮುಖಗಳ ಶೋಧನೆಯಿಂದ ವಿಮುಖರಾಗುವುದು ನಮ್ಮ ಅನುಭವಜಗತ್ತಿಗಾಗುವ ನಷ್ಟವೆಂದೇ ನಮ್ಮ ಪ್ರಾಚೀನರ ಅಭಿಮತ.ಭೋಗದ ಚೆಲುವನ್ನು ಕೈವಾರಿಸಿದಷ್ಟೇ ತೀವ್ರವಾಗಿ ವೈರಾಗ್ಯದ ಧೀರ ನಿಲುವನ್ನೂ ಅವರು ಸ್ತುತಿಸಿದರು. ಗಿರಿಜೆಗೆ ಶಿವ ಸೋತದ್ದಾದರೂ ಅವಳ ಚೆಲ್ವಿಕೆಗಲ್ಲ; ಘೋರವಾದ ತಪಸ್ಸಿಗೆ. ವಿಚಿತ್ರವಾದ ಈ ಯೋಗ ಭೋಗದ ಮೇಳ ನಮ್ಮನ್ನು ಬೆರಗುಗೊಳಿಸುವಂಥದ್ದು.

‍ಲೇಖಕರು Admin

November 26, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. Anonymous

    ಯಾವುದುತೀವ್ರಾನುಭವಕ್ಕೆಕಾರಣವಾಗುವುದೊಅದುಸ್ವಾಗತ

    ಪ್ರತಿಕ್ರಿಯೆ
  2. Girijashastry

    ಫ್ರಾಯ್ಡ್ , ಸಂಭೋಗದಲ್ಲಿ ಸ್ತ್ರೀ ಕೇವಲ ಒಬ್ಬ passive partner, just an object ಎನ್ನುತ್ತಾನೆ. ಕಾಲಿದಾಸನ ಈ ಪಾರ್ವತಿ ಪುರುಷಾಯಿತ ಪ್ರಸಂಗವು ಫ್ರಾಯ್ಡ್ ನ ಅಭಿಪ್ರಾಯ ವನ್ನು ಬುಡಮೇಲು ಮಾಡಿದೆ. ಈ ಪ್ರಸಂಗವನ್ನು ಹಂಚಿಕೊಂಡಿದ್ದಕ್ಕೆ ವಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: