ಎಚ್ ಎಸ್ ವಿ ಕಾಲಂ: ಎದೆಯೊಳಗಿನ ಒತ್ತುಗಂಟು..

ತಾವರೆಯ ಬಾಗಿಲು-೧೫

ಕಾವ್ಯದ ಕ್ರಿಯಾಶೀಲತೆ ಕಾವ್ಯ ಜಗತ್ತಿನ ಅಂತರ್ಲೋಕಕ್ಕೆ ಸಂಬಂಧಿಸಿದ್ದೋ? ಅಥವಾ ಕಾವ್ಯ ಜಗತ್ತಿನ ಹೊರಗೆ ಸದಾ ಪ್ರವೃತ್ತಶೀಲವಾಗಿರುವ ಹೊರಲೋಕಕ್ಕೆ ಸಂಬಂಧಿಸಿದ್ದೊ? ತನ್ನ ಕಾವ್ಯದ ಉಪಯೋಗವೇನು ಎಂಬುದನ್ನು ಆದಿ ಕವಿ ಪಂಪ ಹೀಗೆ ವಿವರಿಸುತ್ತಾನೆ:

ಕರಮಳ್ಕರ್ತು ಸಮಸ್ತ ಭಾರತ ಕಥಾ ಸಂಬಂಧಮಂ ಬಾಜಿಸಲ್
ಬರೆಯಲ್ ಕೇಳಲೊಡರ್ಚುವಂಗಮಿದರೊಳ್ ತನ್ನಿಷ್ಟವಪ್ಪನ್ನಮು
ತ್ತರಮಕ್ಕುಂ ಧೃತಿ ತುಷ್ಟಿ ಪುಷ್ಟಿ ವಿಭವಂ ಸೌಭಾಗ್ಯಮಿಷ್ಟಾಂಗನಾ
ಸುರತಂ ಕಾಂತಿಯ ಗುಂತಿ ಶಾಂತಿ ವಿಭವಂ ಭದ್ರಂ ಶುಭಂ ಮಂಗಳಂ||
(ವಿಕ್ರಮಾರ್ಜುನ ವಿಜಯ, ೧೪ನೇ ಆಶ್ವಾಸ, ಕೊನೆಯ ಪದ್ಯ)

ಏನು ಹಾಗೆಂದರೆ? ಸರಳವಾಗಿ ಈವತ್ತಿನ ಕನ್ನಡದಲ್ಲಿ ಈ ಮಾತುಗಳನ್ನು ಪರಿಗ್ರಹಿಸೋಣ. “ಯಾರು ಪ್ರೀತಿಯಿಂದ ನನ್ನ ಸಮಸ್ತ ಭಾರತ ಕಥಾ ಪ್ರಬಂಧವನ್ನು ಓದುವರೋ, ಬರೆಯುವರೋ, ಕೇಳಲು ತೊಡಗುವರೋ ಅವರಿಗೆ ಧೃತಿ, ತುಷ್ಟಿ, ಪುಷ್ಟಿ, ವಿಭವ, ಸೌಭಾಗ್ಯ ಮತ್ತು ತಮಗೆ ಪ್ರಿಯವಾದ ಹೆಣ್ಣಿನೊಂದಿಗೆ ಸಂಯೋಗ ಉಂಟಾಗುವುದು”.

೧ ಧೃತಿ, ೨ ತುಷ್ಟಿ, ೩ ಪುಷ್ಟಿ, ೪ ವಿಭವ, ೫ ಸೌಭಗ್ಯ, ೬ ಇಷ್ಟಂಗನಾಸುರತಿ, ೭ ಕಾಂತಿ, ೮ ಶಾಂತಿ, ೯ ವಿಭವ.

ಫಲಶ್ರುತಿಯ ಈ ಪಟ್ಟಿಯನ್ನು ಸೂಕ್ಷ್ಮವಾಗಿ ಪರಿಶೀಲಿಸೋಣ.

ಓದುಗ, ಲಿಪಿಕಾರ, ಕೇಳುಗರಿಗೆ ಎಂಬುದಾಗಿ ತನ್ನ ಓದುಗ ವರ್ಗವನ್ನು ಮೂರು ಗುಂಪುಗಳಲ್ಲಿ ಕವಿ ಪರಿಗ್ರಹಿಸಿದ್ದಾನೆ. ಈವತ್ತಿನ ಸಂದರ್ಭದಲ್ಲಿ ಓದುಗ, ಬೆರಳಚ್ಚುಗ, ಕೇಳುಗ ಎಂದು ಆ ಗುಂಪುಗಳನ್ನು ಪುನರ್ಯೋಜಿಸಬಹುದು. ಈ ಮೂರು ವರ್ಗದಲ್ಲಿ ಆಳದಲ್ಲಿ ಕೃತಿಯನ್ನು ಪರಾಂಬರಿಸುವವನು ಓದುಗನೇ.

ಕಾವ್ಯಗ್ರಹಿಕೆಯ ಅತ್ತ್ಯುತ್ತಮ ಗಿರಾಕಿ ವಾಚಕ ಮಹಾಶಯನೇ. ಬೆರಳಚ್ಚುಗನಿಗೆ ಕಾವ್ಯದ ಸಂಯೋಜನೆ ಒಂದು ಯಾಂತ್ರಿಕ ಜೀವನೋದ್ಯಮ. ಇಷ್ಟು ಪುಟಗಳನ್ನು ಟೈಪ್ ಮಾಡಿದರೆ ಇಷ್ಟು ಹಣ ಎಂಬ ಆರ್ಥಿಕ ಲೆಕ್ಕಾಚಾರ ಉಂಟು. ಬೆರಳಚ್ಚು ಮಾಡುವವನು ಕಾವ್ಯವನ್ನು ಆನಂದಿಸುತ್ತಾ ಕೂಡಲಾಗುವುದಿಲ್ಲ. ಇನ್ನು ಮೂರನೇ ವರ್ಗದ ಕೇಳುಗ ಮಹಾಶಯ ಸ್ವಲ್ಪ ಏಕಾಗ್ರತೆ ಕಳೆದು ಕೊಂಡರೂ ಯಾವುದೋ ಒಂದು ಭಾಗವನ್ನು ಕುರುಡುಗೇಳುವ ಸಾಧ್ಯತೆ ಉಂಟು. ಹಾಗಾಗಿ ಸ್ವತಃ ಕಾವ್ಯವನ್ನು ಓದಿನ ಮೂಲಕ ಆಸ್ವಾದಿಸಲು ಕೂತ ವಾಚಕನೇ ಹೆಚ್ಚು ವಿಶ್ವಾಸಾರ್ಹ ಕಾವ್ಯಗ್ರಾಹಕ ಎಂದು ಸ್ಥೂಲವಾಗಿ ಗ್ರಹಿಸಬಹುದು.

ವಾಚಕನೂ ಸದಾ ಕಾಲ ಏಕಾಗ್ರ ಓದಿಗೆ ತೆತ್ತುಕೊಳ್ಳುತ್ತಾನೆ ಎಂಬುದು ಸಂದೇಹಾಸ್ಪದವಾದುದರಿಂದ ಈ ಗುಂಪು ಕಾವ್ಯವನ್ನು ಹೆಚ್ಚು ನಿಕಟವಾಗಿ ಗ್ರಹಿಸುವ ಸಾಧ್ಯತೆ ಉಂಟು ಎಂಬುದಷ್ಟೇ ಗ್ರಹೀತ ಹಿಡಿಯ ಬೇಕಾದದ್ದು. ಆಧುನಿಕ ಕಾಲದಲ್ಲಿ ಪಂಪನಂಥ ಕವಿಯನ್ನೂ ತಮ್ಮ ಸ್ವಸಂತೋಷಕ್ಕಾಗಿ ಏಕಾಂತದಲ್ಲಿ ಓದಿಕೊಳ್ಳುವ ಓದುಗರ ಗುಂಪು ಇದ್ದೇ ಇದೆ ಎಂದು ಭಾವಿಸಿ ನಾವು ಮುನ್ನಡೆಯೋಣ.

ಪುನರ್ಮುದ್ರಣ ಸಮಯದಲ್ಲಿ ಮೂಲ ಕಾವ್ಯವನ್ನು ಯಥಾವತ್ತಾಗಿ ಟೈಪಿಸುವ ಸಂದರ್ಭ ಇದೆ. ಶಾಲಾ ಕಾಲೇಜುಗಳಲ್ಲಿ, ವಿದ್ಯಾರ್ಥಿಗಳು ಕೇಳುಗರ ಗುಂಪಿಗೆ ಸೇರುತ್ತಾರೆ. ಆದರೆ ಅವರು ಕಾವ್ಯವನ್ನು ಆನಂದಿಸುವ ಸಾಧ್ಯತೆ ಹೇಳುಗರ (ಪ್ರಾಧ್ಯಾಪಕರ) ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಈವತ್ತು ಯಾವುದೂ ಆದರ್ಶದ ನೆಲೆಯಲ್ಲಿ ಪ್ರವೃತ್ತವಾಗಿರುವುದಿಲ್ಲ. ಕೆಲವು ಕಾಲೇಜುಗಳಲ್ಲಾದರೂ ಉತ್ತಮ ಗುಣಮಟ್ಟದ ಅಧ್ಯಾಪಕರು ಪಾಠ ಪ್ರವಚನಗಳನ್ನು ಇನ್ನೂ ನಿರ್ವಹಿಸುತ್ತಿರುವುದರಿಂದ ಆಯಾ ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿಗಳಾಗಿರುವವರು ಭಾಗ್ಯಶಾಲಿಗಳು ಎಂದು ಹೇಳಬಹುದು.

ಈಗ ಎಲ್ಲೆಲ್ಲೂ ನಡೆಯುವ ವಿಚಾರಸಂಕಿರಣಗಳು, ಸಾಹಿತ್ಯೋಪನ್ಯಾಸಗಳು ಹೆಚ್ಚಾಗಿ ಕಾವ್ಯದ ಬಹಿರಂಗದಲ್ಲೇ ಸಾಮಾನ್ಯವಾಗಿ ಹೆಚ್ಚು ಆಸಕ್ತಿ ವಹಿಸುತ್ತವೆ. ವಿಮರ್ಶೆ, ಮೌಲ್ಯಮಾಪನ, ವಿಚಾರ ಜಿಜ್ಞಾಸೆ, ಇತರ ಕವಿಗಳೊಂದಿಗೆ ತುಲನಾತ್ಮಕ ವಿವೇಚನೆ ಇತ್ಯಾದಿ. ಪಠ್ಯ ಅವರಿಗೆ ಆಧಾರ ಸಾಮಗ್ರಿ ಅಷ್ಟೆ! ಅದೇ ಆರಾಧನಾ ಮೂರ್ತಿಯಲ್ಲ.

ಪಂಪ ತನ್ನ ಕಾವ್ಯದಿಂದ ಏನೇನು ಲಾಭ ಉಂಟಾಗುವುದು ಎಂದು ಕೊಡುವ ಪಟ್ಟಿಯಲ್ಲಿ ವಿಭವ ಎಂಬುದು ಎರಡು ಬಾರಿ ಉಲ್ಲೇಖವಾಗಿದೆ! ಇನ್ನು ಪಟ್ಟಿಯಲ್ಲಿ ಬರುವ ಧೃತಿ, ತುಷ್ಟಿ, ಪುಷ್ಟಿ, ಕಾಂತಿ, ಶಾಂತಿ-ಇವಿಷ್ಟೂ ಓದುಗನ ಮನೋಲೋಕಕ್ಕೆ ಸಂಬಂಧಿಸಿದವು. ಉತ್ತಮ ಗುಣಮಟ್ಟದ ಕಾವ್ಯದ ಗ್ರಹಿಕೆಯಿಂದ ಓದುಗನ ಮನೋಲೋಕದ ಮೇಲೆ ಆಗುವ ಸತ್ಪರಿಣಾಮಗಳು ಏನು ಎಂಬುದನ್ನೇ ಇವು ಸೂಚಿಸುತ್ತಿವೆ.

ಕಾವ್ಯದ ಓದು ಎಂಬುದು ಎರಡು ಮನಸ್ಸುಗಳ ಮಿಲನದ ಸಂಭವವಾದುದರಿಂದ ಪಂಪನ ಮನಸ್ಸಿನ ಸಂಪರ್ಕ ನಮ್ಮ ಮನಸ್ಸನ್ನು ತಿದ್ದುವ, ತೀಡುವ, ತೃಪ್ತಗೊಳಿಸುವ, ಕೆಲವೊಮ್ಮೆ ಅತೃಪ್ತಿಗೀಡುಮಾಡುವ, ಶಾಂತಿ ನೀಡುವ, ಧಾರಣ ಶಕ್ತಿ ಹೆಚ್ಚಿಸುವ, ಜೀವನ ಸೂಕ್ಷ್ಮ ವಿವರಿಸುವ, ವೇದ್ಯಗೊಳಿಸುವ ಕೆಲಸವನ್ನು ಮಾಡಿಯೇ ಮಾಡುತ್ತದೆ. ಆದರೆ ಪಂಪ ಹೇಳುವ ವಿಭವ, ಮತ್ತು ಇಷ್ಟಾಂಗನಾಸುರತ ಎಂಬುದು ವಾಸ್ತವಿಕ ಜಗತ್ತಲ್ಲಿ ಸಂಭವಿಸಬೇಕಾದ ಲೌಕಿಕ ಎನ್ನಬಹುದಾದ ಸಂಗತಿಗಳಾಗಿವೆ.

ವಿಭವವೂ ಅಂತರಂಗಕ್ಕೆ ಸಂಬಂಧಿಸಿದ್ದಾದರೆ ನಮ್ಮ ತಕರಾರಿಲ್ಲ. ಇನ್ನು ಇಷ್ಟಾಂಗನಾಸುರತಿ… ಸುರತಿಯ ಅನುಭವ ಕಾವ್ಯದ ಓದಿನ ನಂತರದ ಅನುಭವವಾದಲ್ಲಿ ಹೆಚ್ಚು ಸ್ವಾದ್ಯವಾಗುವುದು ಎಂಬುದನ್ನಷ್ಟೇ ನಾವು ಮಾನ್ಯ ಮಾಡಬಹುದು. ನಾವು ನೋಡುವ ಒಳ್ಳೆಯ ನಾಟಕ, ಕೇಳುವ ಒಳ್ಳೆಯ ಸಂಗೀತ, ಕಾಣುವ ಒಳ್ಳೆಯ ಚಿತ್ರ ಜೀವನವನ್ನು ನಾವು ತೀವ್ರವಾಗಿ ಅನುಭವಿಸಲಿಕ್ಕೆ ನಮ್ಮ ಮನಸ್ಸನ್ನು(ತನ್ಮೂಲಕ ದೇಹವನ್ನು) ಶ್ರುತಿಗೊಳಿಸುವುದು ಎಂಬುದಂತೂ ಒಪ್ಪತಕ್ಕ ಮಾತೇ!

ಆದರೆ ಕುಮಾರವ್ಯಾಸ ಹೇಳುವಂತೆ ಕಾವ್ಯದ ಓದು ನಮಗೆ ವೇದಪಾರಾಯಣದ ಫಲ ಕೊಡುತ್ತದೆ, ಜ್ಯೋತಿಷ್ಟೋಮ ಯಾಗ ಮಾಡಿದ ಫಲ ನೀಡುತ್ತದೆ, ಕನ್ಯಾದಾನ, ವಸ್ತ್ರದಾನ ಮಾಡಿದ ಫಲ ನೀಡುತ್ತದೆ ಮುಂತಾದುವು ಕಾವ್ಯದ ಬಹಿರಂಗ ಜಗತ್ತಿನ ಪ್ರಸಕ್ತಿಗಳೇ ಆಗಿವೆ. ವೇದಪಾರಾಯಣದ ಫಲ ದೊರೆಯುವುದೆಂದು ನಾವು ಕುಮಾರವ್ಯಾಸ ಭಾರತವನ್ನು ಓದುವುದು ಅಪಾಮಾರ್ಗವೇ. ಬದುಕಿನ ಆಳದ ಅರಿವು ಮತ್ತು ರಸೋತ್ಕರ್ಷಕ್ಕಾಗಿಯೇ ನಾವು ಕುಮಾರವ್ಯಾಸನಂಥ ಮಹಾಕವಿಯನ್ನು ಓದಬೇಕಾಗಿರುವುದು.

ಕಾವ್ಯವು ಕೇವಲ ಅರಿವು ಮತ್ತು ಆನಂದವನ್ನಷ್ಟೆ ಕೊಟ್ಟರೆ ಸಾಲದು. ಅದು ಸಾಮಾಜಿಕ ಜವಾಬುದಾರಿಯನ್ನು ನಿರ್ವಹಿಸಬೇಕು ಎಂಬುದಾಗಿ ಕೆಲವು ಪ್ರಸ್ಥಾನದವರು ಈಗ ಗಟ್ಟಿ ದನಿಯಲ್ಲಿ ಹೇಳುತ್ತಿರುವರು. ಕಾವ್ಯದಿಂದ ಸಾಮಾಜಿಕ ಕ್ರಾಂತಿ ಸಂಭವಿಸಲಾರದು ಎಂದು ಹೇಳುವುದು ಮೊಂಡುತನದ ಮಾತು. ಸಾಮಾಜಿಕ ಬದಲಾವಣೆಗೆ ವೇಗವರ್ಧಕದಂತೆ ಸಾಹಿತ್ಯ ನಿಯುಕ್ತವಾಗಬಹುದು.

ನಮ್ಮ ಹಳೆಯ ಸಾಹಿತ್ಯ ಧಾರ್ಮಿಕತೆಯನ್ನು(ತಾನು ಒಪ್ಪಿದ ಧರ್ಮದ ಚಿಂತನೆಗಳನ್ನು) ಪ್ರಚಾರ ಮಾಡುವುದು ತನ್ನ ಪರಮ ಉದ್ದೇಶವೆಂದೇ ಕಾರ್ಯಪ್ರವೃತ್ತವಾಗಿತ್ತು. ಪಂಪಾದಿಗಳಿಗೆ ಜೈನಧರ್ಮದ ನಂಬಿಕೆಗಳನ್ನು ಸಮಾಜದಲ್ಲಿ ಬಿತ್ತುವ ದರ್ದು ಇತ್ತು. ಭಾಗವತ ಧರ್ಮದ ತತ್ವವನ್ನು ಪ್ರಚುರಪಡಿಸುವುದು ಕುಮಾರವ್ಯಾಸಾದಿ ಕವಿಗಳ ಉದ್ದೇಶವಾಗಿತ್ತು. (ಇಲ್ಲಿ ನೋಳ್ಪುದು ಪದುಮನಾಭನ ಮಹಿಮೆ-ಎಂಬ ಕುಮಾರವ್ಯಾಸನ ಉಕ್ತಿಯನ್ನು ಗಮನಿಸಿ). ವಚನ ಮತ್ತು ದಾಸ ಸಾಹಿತ್ಯಗಳಂತೂ ಸಾಮಾಜಿಕ ನಿಯೋಗವನ್ನು ತಮ್ಮ ಪ್ರಧಾನ ಉದ್ದೇಶವಾಗಿ ಮಾನ್ಯ ಮಾಡಿದ್ದವು.

ಆಧುನಿಕ ಸಾಹಿತ್ಯವಷ್ಟೇ ತನ್ನ ನೈಜ ಸ್ವಾಯತ್ತತೆಯಲ್ಲಿ ಪ್ರವೃತ್ತವಾದದ್ದು. ಒಪ್ಪಿತ ಮೌಲ್ಯಗಳ ಮಂಡನೆ ಇಲ್ಲಿ ಮುಖ್ಯವಲ್ಲ. ಹೊಸ ಮೌಲ್ಯಗಳ ಶೋಧನೆ ಇಲ್ಲಿ ಮುಖ್ಯ. ಜೊತೆಗೆ ಅನುಭವದ ಒಳಲೋಕಗಳನ್ನು ಆದಷ್ಟು ಸಮಗ್ರವಾಗಿ, ಪ್ರಾಮಾಣಿಕವಾಗಿ, ಸರ್ವಗ್ರಾಹಿಯಾಗಿ ಮತ್ತು ಕಲಾತ್ಮಕವಾಗಿ ಗ್ರಹಿಸಬೇಕೆಂಬುದು ನಮ್ಮ ಹೊಸಕವಿಗಳ ಕಾವ್ಯದ ಗುರಿಯಾಗಿತ್ತು. ಸಮಷ್ಟಿಗಿಂತ ವ್ಯಷ್ಟಿ ಲೋಕ ಅವರಿಗೆ ಮುಖ್ಯವೆನಿಸಿತ್ತು. ಆನಂತರದ ದಲಿತ ಬಂಡಾಯ ಚಳುವಳಿಗಳು ಮತ್ತೆ ಸಮಾಜ ಮತ್ತು ಸಮಷ್ಟಿ ತುಡಿತವನ್ನು ವಿಶೇಷವಾಗಿ ತೋರಿದವು. ಈ ಎಲ್ಲ ಹಿನ್ನೆಲೆಯಲ್ಲಿ ಸುಬ್ಬಣ್ಣ ರಂಗನಾಥ ಎಕ್ಕುಂಡಿ ಎಂಬ ಬಹು ಮುಖ್ಯ ಆಧುನಿಕ ಕವಿಯೊಬ್ಬರ “ಇಬ್ಬರು ರೈತರು” ಎಂಬ ಸೊಗಸಾದ ಕವಿತೆಯನ್ನು ನಾವು ಗಮನಿಸೋಣ:

ಇಬ್ಬರು ರೈತರು
-ಸು.ರಂ.ಎಕ್ಕುಂಡಿ

ಇದೇ ಮನೆ ಇರಬೇಕು ಕುಂಭರಾಮ, ಕಂ
ಡೆಯ ಚೈತ್ರವೇ ಹೂಡಿದೆ ಬಿಡಾರ ಇಲ್ಲಿ
ಚಿಗುರೆಲೆ ಮೊಗ್ಗೆಗಳು ತುಂಬಿವೆ ದುಂ
ಬಿಗಳು ರಸ ಬಯಸಿ ಬಂದಿವೆ ಶಬ್ದದಲ್ಲಿ”

“ಹಾಗೆಂದು ತೋರುವುದು ಭೈರೂಸಿಂಹ ಇ
ಲ್ಲೆಲ್ಲ ಜಿಂಕೆ ಓಡಾಡಿವೆ, ಮುದವ ತಾಳಿ,
ಹೂವುಗಳ ಕೆನ್ನೆಯಲ್ಲಿರುವ ಹನಿ ಉದು
ರಿಸಿ, ಬೀಸುತಿದೆ ಪರಿಮಳದ ತಂಪುಗಾಳಿ”.

ಬಂದಿರುವ ಬಂಧುಗಳ ಬರಮಾಡಿಕೊಳ್ಳ
ಲು, ತೆರೆದ ತೋಳುಗಳಂತೆ, ಬಿಚ್ಚಿಕೊಂಡು.
ಕಾದಿರುವ ಬಾಗಿಲದಿ ಧ್ವನಿಗಳು ಕೇಳ
ಲು, ಇವರೇ ಅವರಿರಬೇಕು ಅಂದುಕೊಂಡು

ಕೈಮುಗಿದು ಕಾದಿರಲು, ಹೊರಗೆ ಬಂದರು
ಆತ; ಮಂಜಿರದ ಮುಂಜಾವಿನಂಥ ಬಟ್ಟೆ,
ಹೆಗಲಲ್ಲಿ ಶಾಲು ಮುಖದಲ್ಲಿ ನಗೆ, ಕೂ
ತಂತೆ, ಹೊಂಬಾಳೆ ಎಲೆಯಲ್ಲಿ ಒಂದು ಚಿಟ್ಟೆ.

ಅಂದರು “ಒಳಗೆ ಬನ್ನಿರಿ, ಏನು ಬೇಕಿತ್ತು?
ಯಾರು ತಾವೆ”ನಲು ಅನುಮಾನಗೊಂಡು.
ಬಂದವರು ಅಂದರು: “ಶಿವರಾತ್ರಿ ಅಲ್ಲವೆ?
ನಾವಿಲ್ಲಿ ಬಂದದ್ದು ಯಾತ್ರೆಗೆಂದು.

ನಾವಿಬ್ಬರೂ ನೆರೆಹೊರೆ. ರೈತರು. ಮಹಾ
ಕಾಲೇಶ್ವರನ ಕಂಡು, ಹರ್ಷಗೊಂಡು,
ದೊಡ್ಡವರು ತಾವೆಂದು ಕೇಳಿ ಬಂದೆವು ಇ
ಲ್ಲಿ, ಹೋಗೋಣವೆಂದು ತಮ್ಮನ್ನು ಕಂಡು.

ಕವಿರತ್ನ ಕಾಲಿದಾಸರು ನೀವೆ ಅಲ್ಲವೆ?
ಕಣ್ವಪುತ್ರಿಯ ದೊರೆಗೆ ಒಪ್ಪಿಸಿದಿರಿ.
ಅಂದು ಶಾಪಗ್ರಸ್ತ ಬಲೆಗಿದಿರಾಗಿದ್ದ
ನಾಹುತವ, ಉಂಗುರದಿ ತಪ್ಪಿಸಿದಿರಿ?

ಅಂಬಿಕೆಯ ಮುಗ್ಧ ಮೌನದ ಹೆರಳು ಕಂ
ಪಿನಲಿ, ಹಸೆಯನೇರಿದ ಶಿವನ ಕರುಣೆ ಹಾಡಿ
ರಸದ ಕಾವಡಿ ಹೊತ್ತು, ಋತುಚಕ್ರ, ಚೆ
ಲುವೆಯರ, ಬೆಟ್ಟಗಳ ಮೋಡಗಳ, ಮಾತನಾಡಿ.

ಕೀರ್ತಿವೃಕ್ಷದ ಹೂವು ನೀವಲ್ಲವೆ?” ಎನಲು
ಮುಜುಗರದ ಧ್ವನಿಯಲಿ ಕರೆದು…ಒಳಗೆ
ಬಂದವರ ಸತ್ಕರಿಸಿ ಕೇಳಿದರು ಕವಿ. “ಇ
ನ್ನೇನಾದರೂ ಆಗಬೇಕೆ ತಮಗೆ?”

ಭೈರೋಸಿಂಹ ಅಂದರು,”ಹೌದು ಸ್ವಾಮಿ, ಹೌ
ದು. ನೀವು ಕಳಿಸಿದಿರಲ್ಲ ಒಂದು ಮೋಡ,
ರಾಮಗಿರಿಯಿಂದ ಅಲಕಾವತಿಯ ಯಕ್ಷಿ
ಣಿಗೆ, ಆ ಕುರಿತೆ ಒಂದಷ್ಟು ತಮ್ಮ ಕೂಡ

ಬಿನ್ನವಿಸಲೆಂದು ಬಂದದ್ದು ನಾವಿಬ್ಬರೂ.
ಬಾಯೊಣಗಿ ನಿಂತಿಹುದು ನಮ್ಮ ಪಯರು
ಹನಿ ನೀರಿಲ್ಲದೆ. ಮೋಡಕ್ಕೆ ಹೇಳುವಿರೆ?
“ದಾರಿಯಲ್ಲಿವರಿಗೂ, ನೀರು ಸುರಿಸು”.

ಸಡಿಲ ಹೆಣಿಗೆಯ ರಚನೆಯಾದರೂ ಇದೊಂದು ಬಹು ಸುಂದರ ಕವಿತೆ. ಇಬ್ಬರು ರೈತರು ಉಜ್ಜಯಿನಿಗೆ ಮಹಾಕಾಲ ದೇವಾಲಯದ ಶಿವರಾತ್ರಿಯ ಯಾತ್ರೆಗೆ ಬಂದಿದಾರೆ. ಉಜ್ಜಯಿನಿಯಲ್ಲೇ ಕವಿ ಕಾಲಿದಾಸ ಇರುವುದು ಅವರಿಗೆ ಗೊತ್ತು. ಅವರ ಹಳ್ಳಿಯಲ್ಲಿ ಮಳೆಯಿಲ್ಲದೆ ಪಯರು ಒಣಗಿ ನಿಂತಿದೆ. ಕಾಲಿದಾಸನಾದರೋ ತನ್ನ ಕಾವ್ಯಗಳಲ್ಲಿ ಅಸಾಧ್ಯವೆನಿಸಿದ ಅನೇಕ ಪರೋಪಕಾರ ಕಾರ್ಯಗಳನ್ನು ನಿರ್ವಹಿಸಿದವನು. ಎಲ್ಲಕ್ಕಿಂತ ಮಿಗಿಲಾಗಿ ಮೇಘದೂತ ಕಾವ್ಯದಲ್ಲಿ ಒಂದು ಮೇಘವನ್ನು ಅಲಕಾನಗರಿಯಲ್ಲಿದ್ದ ಯಕ್ಷಿಯ ಕಡೆಗೆ ಸಂದೇಶವಾಹಕನಾಗಿ ಕಳಿಸಿಕೊಟ್ಟವನು.

ಅಂದರೆ ಮೋಡವೂ ಕವಿಯ ಮಾತು ಕೇಳುವುದೆಂದಾಯಿತು. ಮತ್ತೊಮ್ಮೆ ಮೋಡಕ್ಕೆ ಹೇಳಿ ದಾರಿಯಲ್ಲಿ ನಮ್ಮ ಹೊಲಗಳಿಗೂ ನೀರು ಸುರಿಸಲು ಹೇಳಬಾರದೆ? ಈ ಬೇಡಿಕೆಯ ಹಿಂದೆ ರೈತರ ಮುಗ್ಧತೆ ಇದೆ. ಅವರಿಗೆ ಕವಿಯ ಬಗ್ಗೆ ಅಪಾರವಾದ ನಂಬಿಕೆ! ರೈತರ ಬಿನ್ನಪಕ್ಕೆ ಕಾಲಿದಾಸನ ಉತ್ತರವೇನು ಎಂಬುದು ಕವಿತೆಯಲ್ಲಿ ಅನುಕ್ತವಾಗಿಯೇ ಉಳಿದಿದೆ. ಅದೇ ಕವನದ ಅದ್ಭುತವೆನಿಸುವ ದ್ವನಿ. ರೈತರ ಬೇಡಿಕೆಯನ್ನು ಕವಿ ಈಡೇರಿಸಲಾರ ಎನ್ನುವುದು ಸ್ಪಷ್ಟ.

ಕಾವ್ಯದಲ್ಲಿ ಕವಿ ಏನೂ ಮಾಡಬಲ್ಲ. ಆದರೆ ಕಾವ್ಯದ ಚೌಕಟ್ಟಿನ ಹೊರಗೆ ಅವನ ಮಾತು ನಡೆಯುತ್ತದೆ ಎನ್ನಲು ಬರುವುದಿಲ್ಲ. ಕಾಲಿದಾಸನ ಅಸಹಾಯಕತೆ ಮೌನದಲ್ಲಿಯೂ ಆಕಾರ ಪಡೆಯುವಂತಿದೆ. ವಾಸ್ತವ ಜಗತ್ತಲ್ಲೂ ಕವಿಗಳ ಮಾತು ನಡೆಯುವಂತಿದ್ದರೆ! ಅದೊಂದು ಅದ್ಭುತ ಆಶಯ. ಆದರೆ ಅದು ನಡೆಯಲಾರದ್ದು ಎಂಬುದು ಕವಿಗೆ ಅತ್ಯಂತ ನೋವಿನ ಸಂಗತಿ. ಚೌಕಟ್ಟಿನ ಒಳಗೆ ಕವಿ ಏನು ಬೇಕಾದರೂ ಮಾಡಬಲ್ಲ; ಚೌಕಟ್ಟಿನ ಹೊರಗೆ ಅವನು ಅಸಹಾಯಕ. ಮಾ

ರ್ಕ್ಸ್ ಸಿದ್ಧಾಂತದ ಆರಾಧಕರಾದ ಎಕ್ಕುಂಡಿಯವರಿಗೆ ಇದೊಂದು ಅಂತರಂಗದ ಬಿಕ್ಕಟ್ಟು. ಮಳೆ ಮಾಡಬಹುದಾದ ಕೆಲಸವನ್ನು ಅಂತಃಬಾಷ್ಪ ನಿರ್ವಹಿಸಲಾರದೆಂಬುದು ಎಕ್ಕುಂಡಿಯಂಥ ಸಮಾಜವಾದೀ ಕವಿಗೆ ಅರಗಿಸಿಕೊಳ್ಳಲಾರದ ಒಂದು ಬೆಂಕಿಯ ತುತ್ತೇ ಆಗಿರಬಹುದು. ಇದು ಹೆರವರ ನೋವಿಗೆ ಮನ ಮಿಡಿಯುವ ಕವಿಗಳನ್ನು ಯಾವತ್ತೂ ತಲ್ಲಣಗೊಳಿಸುವ ಹೃದಯದೊಳಗಿನ ಒತ್ತುಗಂಟು.

‍ಲೇಖಕರು Admin

December 31, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಅನೇಕ ಸರ್ತಿ ಓದಿದ್ದೇನೆ ಸರ್ ಈ ಲೇಖನ. ಬಹಳ ಇಷ್ಟವಾಯ್ತು. ತಮಗೆ ಕೃತಜ್ಞತೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: