ಎಚ್ಚೆಸ್ವಿ ಅನಾತ್ಮ ಕಥನ: ಅದುರುಕೃಷ್ಟನ ಕಥೆ……

ಎಚ್ ಎಸ್ ವೆಂಕಟೇಶ ಮೂರ್ತಿ

ಅನಾತ್ಮಕಥನ-ಹನ್ನೊಂದು

ಅದುರುಕೃಷ್ಟ ಎಂಬ ಆಸಾಮಿಯನ್ನು ವಾಸ್ತವವಾಗಿ ನಾನು ನೋಡಿಯೇ ಇಲ್ಲ. ಆದರೆ ಅವ ಹೀಗೇ ಇದ್ದಾನೆ ಎಂದು ಕರಾರುವಾಕ್ಕಾಗಿ ನಾನು ಹೇಳಬಲ್ಲೆ. ಅಕಸ್ಮಾತ್ ಅವ ಎದುರಿಗೆ ಬಂದರೆ ನೀವೇ ಅಲ್ಲವೆ ಅದುರುಕೃಷ್ಟ ಎಂದು ಬೆಟ್ಟಿಟ್ಟು ಕೇಳಬಲ್ಲೆ. ಹಾಗೆ ಅವನ ಆಕಾರ , ನಡಾವಳಿ ನನ್ನ ಕಣ್ಣಿಗೆ ಕಟ್ಟಿವೆ. ಹಾಗೆ ಅದುರುಕೃಷ್ಟ ನನ್ನತಿಪರಿಚಿತ ಆಪ್ತೇಷ್ಟನಾದದ್ದು ನಮ್ಮ ಭೀಮಜ್ಜಿಯ ಕಥನಶಕ್ತಿಯಿಂದ. ಅದುರಕೃಷ್ಟನ ಕಥೆ ಬಾಲ್ಯದಲ್ಲಿ ಭೀಮಜ್ಜಿ ಮತ್ತೆ ಮತ್ತೆ ನಮಗೆ ಹೇಳುತ್ತಿದ್ದ ಮನರಂಜನೆಯ ಕಥೆಯಾಗಿತ್ತು.

ಆದರೆ ಅವನು ಕೇವಲ ಕಥೆಯ ಪಾತ್ರವಲ್ಲ ಎನ್ನುವುದಕ್ಕೆ ನನ್ನ ಈ ಬೆಂಗಳೂರು ಮನೆಯಲ್ಲೂ ಅವನು ಬಿಟ್ಟುಹೋಗಿರುವ ಸಾಕ್ಷ್ಯಗಳಿವೆ. ದೇವರ ಮಂಟಪದಲ್ಲಿ ನಾನು ಚಿಕ್ಕಂದಿನಿಂದ ನೋಡುತ್ತಾ ಬಂದಿರುವ ಒಂದು ದಿವಿನಾದ ಹಿತ್ತಾಳಿಯ ಪ್ರಭಾವಳಿಯುಂಟು. ಆ ಪ್ರಭಾವಳಿಯಲ್ಲಿ ನಮ್ಮ ಅಜ್ಜ ಮಾರುತಿಯ ಕೈಮುಗಿದ ಭಂಗಿಯ ಹಿತ್ತಾಳೆ ವಿಗ್ರಹವನ್ನಿರಿಸಿ ಪೂಜೆಮಾಡುತ್ತಿದ್ದರು. ನಮ್ಮ ಅಜ್ಜ ತೀರಿಕೊಂಡು ಮನೆ ಪೂಜೆನನ್ನ ಜವಾಬುದಾರಿಗೆ ಬಂದಮೇಲೆ ಮಾರುತಿಯ ಬದಲು ಕಾಳಿಂಗಮರ್ದನ ಕೃಷ್ಣನನ್ನು ನಾನು ಪ್ರಭಾವಳಿಯಲ್ಲಿ ಇರಿಸಲು ತೊಡಗಿದೆ. ಅದು ನನ್ನ ಬಾಲ್ಯದ ವಿಷಯ.

ನನಗೆ ಮದುವೆಯಾಗಿ ರಾಜಲಕ್ಷ್ಮಿ ಮನೆಗೆ ಬಂದಮೇಲೆ ಪೂಜೆಯ ಜವಾಬುದಾರಿ ಅವಳು ವಹಿಸಿಕೊಂಡಳು. ಅವಳು ಪರ್ವತ ಮಲ್ಲಿಕಾರ್ಜುನನ ವಿಗ್ರಹವನ್ನು ಪ್ರಭಾವಳಿಯಲ್ಲಿ ಇರಿಸಿದಳು. ಶಿವಗಂಗೆಯ ಗವಿಗಂಗಾಧರೇಶ್ವರ ನಮ್ಮ ಮನೆ ದೇವರಾದ ಕಾರಣ ಶಿವ ಪಾರ್ವತಿಯೇ ಅಗ್ರಪೀಠದಲ್ಲಿ ಇರಬೇಕೆಂಬುದು ಅವಳ ವಾದವಾಗಿತ್ತು. ಅವಳು ಹೋದ ಮೇಲೆ ಸೊಸೆಯರು ಅಗ್ರಪೀಠದಲ್ಲಿ ಶಿವಪಾರ್ವತಿಯನ್ನೇ ಇರಿಸುವ ಸಂಪ್ರದಾಯವನ್ನು ಮುಂದುವರೆಸಿದರು. ನಿಜ ಹೇಳಬೇಕೆಂದರೆ ನನಗೆ ಈ ದೇವಮೂರ್ತಿಗಳ ಪೂಜೆ ಪುರಸ್ಕಾರದಲ್ಲಿ ಸ್ವಲ್ಪಮಟ್ಟಿನ ನಂಬಿಕೆಯೂ ಇಲ್ಲ. ನನ್ನ ಆಧುನಿಕತೆಯ ಜಂಭ ಮೆರೆಸುವುದಕ್ಕಾಗಿ ಈ ಮಾತು ಹೇಳುತ್ತಿಲ್ಲ. ಆದರೂ ನಮ್ಮ ಮನೆಯ ದೇವ ಮೂರ್ತಿಗಳನ್ನು ಮುಟ್ಟಿದಾಗ ವಿಚಿತ್ರವಾದ ಕಂಪನಕ್ಕೆ ನಾನು ಈಗಲೂ ಒಳಗಾಗುತ್ತೇನೆ. ಅದಕ್ಕೆ ಕಾರಣ ಈ ಮೂರ್ತಿಗಳು ನನ್ನ ಪ್ರಾಚೀನರೊಂದಿಗೆ ತಕ್ಷಣ ನನ್ನ ಸಂಬಂಧವನ್ನು ಸ್ಥಾಪಿಸುವ ಸಂಪರ್ಕಸೇತುಗಳಾಗಿವೆ. ನನ್ನ ಅಜ್ಜ ಭೀಮಣ್ಣ. ಅವರ ತಂದೆ ಮಲ್ಲಪ್ಪ. ಅವರ ತಂದೆ ಪರ್ವತಪ್ಪ. ಯಾವ ಮಲ್ಲಿಕಾರ್ಜುನನ್ನು ನಾನು ಕಲ್ಪಿಸಲಿಕ್ಕೇ ಸಾಧ್ಯವಿಲ್ಲದ ನನ್ನ ಮುತ್ತಜ್ಜ ಮುಟ್ಟಿಗೆಯಲ್ಲಿ ಹಿಡಿದು ತಿಕ್ಕಿ ತೊಳೆದು ಅಭ್ಯಂಗ ಮಾಡಿಸಿ, ಗಂಧಾಕ್ಷತೆ ಪುಷ್ಪಗಳಿಂದ ಪೂಜಿಸುತ್ತಿದ್ದರೋ ಅದೇ ಮಲ್ಲಿಕಾರ್ಜುನ ಮೂರ್ತಿ ಈಗ ನನ್ನ ಕರಸ್ಥಲ ಸಂಪುಟದಲ್ಲಿ ವಿರಾಜಮಾನವಾಗಿದೆ. ಆ ಮೂರ್ತಿಗೆ ನನ್ನ ತಾತ ಮುತ್ತಾತರ ಅಂಗೈ ಸ್ಪರ್ಶ ಅಂಟಿಕೊಂಡಿದೆ. ಆ ಮೂರ್ತಿಯಲ್ಲಿ ಅವರ ಕೈಬಿಸುಪು ಐಕ್ಯಗೊಂಡಿದೆ. ಅವರ ನೋಟಗಳು ಈ ಮೂರ್ತಿಯ ಮೈಯಲ್ಲಿ ನಾಟಿಹೋಗಿವೆ.

ಈಗ ನೂರಾರು ವರ್ಷಗಳ ನಂತರ ನಾನು ಅದೇ ಮೂರ್ತಿಯನ್ನು ಕೈಯಲ್ಲಿ ಹಿಡಿದು ಕುಳಿತಿದ್ದೇನೆ. ಕೆಲವು ಮೂರ್ತಿಗಳು ಎಷ್ಟು ಹಳೆಯವೆಂದರೆ ಅವುಗಳ ಮುಖ ಮೂತಿ ಪೂರ್ತಿ ಸವೆದೇ ಹೋಗಿದೆ. ಉದಾಹರಣೆಗೆ ಕಾಲಭೈರವನ ಕಪ್ಪುಶಿಲೆಯ ಮುಷ್ಟಿ ಎತ್ತರದ ವಿಗ್ರಹ. ಆದರೂ ಆ ಮೂರ್ತಿಯನ್ನು ವಿಸರ್ಜಿಸುವ ಎಂದು ನನಗೆ ಯಾವತ್ತೂ ಅನ್ನಿಸಿಲ್ಲ. ನಮ್ಮ ಮುತ್ತಾತ ಪರ್ವತಪ್ಪನ ಮುತ್ತಾತನ ಕಾಲದಿಂದ ಅದು ನಮ್ಮಲ್ಲಿ ಪೂಜೆಗೊಳ್ಳುತ್ತಾ ಬಂದಿರಬೇಕು. ಇದೊಂದು ವಿಚಿತ್ರ ವಿದ್ಯಮಾನವೇ ಸರಿ. ಎರಡುವರ್ಷಗಳ ಹಿಂದೆ ನನ್ನ ಗೆಳೆಯ ಆನಂದರಾಮ ಉಪಾಧ್ಯ ತಮ್ಮ ಪತ್ನಿ ಪ್ರೇಮಾ ಅವರೊಂದಿಗೆ ಮಾನಸಸರೋವರದ ಯಾತ್ರೆ ಮುಗಿಸಿಕೊಂಡು ಬಂದರು. ಅವರು ಬರುವಾಗ ಮಾನಸ ಸರೋವರದ ತೀರದಿಂದ ಆಯ್ದು ತಂದ ಒಂದು ಮುಷ್ಟಿಗಾತ್ರದ ಕಲ್ಲನ್ನು ನನಗೆ ಸ್ಮರಣಿಕೆಯಾಗಿ ನಿಡಿದರು. ಮಾನಸಸರೋವರದ ಆ ಕಲ್ಲನ್ನು ಷೋಕೇಸಲ್ಲಿಡಲು ಯಾಕೋನನ್ನ ಮನಸ್ಸು ಒಪ್ಪಲಿಲ್ಲ. ಅದನ್ನು ನಮ್ಮ ದೇವರ ಮಂಟಪದಲ್ಲಿ ಇಟ್ಟುದಾಯಿತು. ಈಗ ಉಳಿದ ದೇವ ಮೂರ್ತಿಗಳೊಂದಿಗೆ ಆ ಮಾನಸಶಿಲೆಯೂ ಪೂಜೆಗೊಳ್ಳುತ್ತಾ ಇದೆ. ನಾನು ಕೆಲವು ಬೆಳಿಗ್ಗೆ ಗೀತೆಯನ್ನೋ, ಕುಮಾರವ್ಯಾಸ ಅಥವಾ ಪಂಪನನ್ನೋ ದೇವರ ಮನೆಯಲ್ಲಿ ಕೂತು ಕೆಲವು ಸಮಯ ಓದುತ್ತೇನೆ. ಹಾಗೆ ಓದುವಾಗ ಒಂದುದಿನ ನನಗೆ ಒಂದು ವಿಚಿತ್ರ ಅನುಭೂತಿಯಾದದ್ದುಂಟು. ಅದನ್ನೊಂದು ಭ್ರಾಮಾತ್ಮಕ ಕಲ್ಪನೆಯೆಂದೇ ನೀವು ಭಾವಿಸಿ. ಒಮ್ಮೆಗೇ ಮಾನಸದ ಆ ಕಲ್ಲಿಂದ ಸರೋವರವೊಂದರ ತರಂಗೋದ್ಘೋಷ ಬಲು ಸಣ್ಣ ದನಿಯಲ್ಲಿ ಹೊರಹೊಮ್ಮುತ್ತಿರುವಂಥ ಅನುಭೂತಿ! ತಕ್ಷಣ ಆ ಶಿಲೆಯನ್ನು ಕೈಯಲ್ಲಿ ಎತ್ತಿಕೊಂಡು ಕಿವಿಯ ಬಳಿ ಹಿಡಿದು ಕೇಳಿದೆ. ಇಲ್ಲ. ಯಾವ ಧ್ವನಿಯೂ ಅದರಿಂದ ಹೊಮ್ಮುತ್ತಿಲ್ಲ….ನನ್ನ ಕನಸಿನ ಕೇಂದ್ರವಾದ ಮಾನಸಸರೋವರದೊಂದಿಗೆ ನನ್ನನ್ನು ಸಂಬಂಧಿಸಲು ಆ ಕಲ್ಲಿಗೆ ಸಾಧ್ಯವಾಯಿತು ಎಂಬುದಂತೂ ನಿಜ.

ನಮ್ಮ ದೇವರ ಮನೆಯಲ್ಲಿ ಇರುವ ದೇವ ಮೂರ್ತಿಗಳಲ್ಲಿ ಕೆಲವು ಹೀಗೆ ಶತಮಾನಗಳಿಂದ ಕೈ ದಾಟಿಕೊಂಡು ಬಂದಂಥವು. ಆದರೆ ಆ ಪ್ರಭಾವಳಿ ಮಾತ್ರ ನಮ್ಮ ಪ್ರಾಚೀನರ ಆಸ್ತಿಯಲ್ಲ; ಅದುರುಕೃಷ್ಟನಿಂದ ಆಕಸ್ಮಿಕವಾಗಿ ಒದಗಿಬಂದ ಪ್ರಾಪ್ತಿ. ಅದುರುಕೃಷ್ಟ ಕೇವಲ ಭೀಮಜ್ಜಿಯ ಕಲ್ಪನೆಯಲ್ಲ, ವಾಸ್ತವ ವ್ಯಕ್ತಿ ಎಂಬುದಕ್ಕೆ ಪುರಾವೆಯಾಗಿ ಅವನ ಪ್ರಭಾವಳಿ ನಮ್ಮ ದೇವರ ಕೋಣೆಯಲ್ಲಿ ಈವತ್ತೂ ಉಳಿದಿದೆ. ಬಹಳ ಸುಂದರವಾದ ಪ್ರಭಾವಳಿಯದು. ಮೆಟ್ಟಿಲುಮೆಟ್ಟಿಲ ಪಿರಮಿಡ್ಡಾಕೃತಿಯ ಪೀಠ. ಅದರ ಹಿಂದೆ ನಾಗರ ಹೆಡೆಬಿಚ್ಚಿದ ಪ್ರಭಾವಳಿ. ಅದನ್ನು ರಂಗವಲ್ಲಿ ಮತ್ತು ಹುಣಿಸೇ ಹುಳಿಯಲ್ಲಿ ಚೆನ್ನಾಗಿ ತಿಕ್ಕಿ ತೊಳೆದು ಮಂಟಪದಲ್ಲಿ ಇಟ್ಟು, ಅದರ ಮೇಲೆ ಪರ್ವತಮಲ್ಲಿಕಾರ್ಜುನನನ್ನು ಇಟ್ಟಾಗ , ನೀಲಾಂಜನದ ಬೆಳಕಲ್ಲಿ ಇಡೀ ಪ್ರಭಾವಳಿ ಕಣ್ಣುಕೋರೈಸುವಂತೆ ಹೊಳೆಯುವುದನ್ನು ನೀವು ನೋಡಬೇಕು. ಪೂಜೆಗೆ ಆಸ್ತಿಕತೆಯ ಅಗತ್ಯವೇ ಇಲ್ಲ ಎಂದು ನನಗೆ ಅನೇಕ ಬಾರಿ ಅನಿಸಿದೆ. ವಾಸ್ತವವಾಗಿ ಅದೊಂದು ಸೌಂದರ್ಯಾವರ್ತದ ಪ್ರಜ್ಞಾಪೂರ್ವಕ ವಿನ್ಯಾಸ. ನೀಲಾಂಜನದ ನೆರಳು ಬೆಳಕಿನಾಟದಲ್ಲಿ ನಡೆಯುವ ಕಲಾಚಮತ್ಕಾರ. ದಾಸವಾಳ ಎಲ್ಲಿಡಬೇಕು, ಸೇವಂತಿಗೆ ಎಲ್ಲಿ ಇಡಬೇಕು, ಮಲ್ಲಿಗೆಯ ಜಾಗ ಯಾವುದು, ಕರ್ಣಕುಂಡಲ ಎಲ್ಲಿ ತೂಗಬಿಡಬೇಕು, ತುಳಸಿಯ ದಂಡೆಗೆ ಜಾಗ ಯಾವುದು ಇದೆಲ್ಲಾ ಬರೀ ಭಕ್ತಿಯಿಂದ ನಿರ್ಧಾರಿತಗೊಳ್ಳುವ ಸಂಗತಿಯಲ್ಲ. ಕಲಾನಿರ್ಮಾಣದ ಏಕಾಗ್ರತೆಯೇ ಇಲ್ಲಿ ನಿಜಕ್ಕೂ ಕ್ರಿಯಾಶೀಲವಾಗುವಂಥದ್ದು.

ನಮ್ಮ ದೇವರ ಮನೆಯ ಪ್ರಭಾವಳಿಯಿಂದ ಅದುರುಕೃಷ್ಟ ಈವತ್ತೂ ನನ್ನ ಆಪ್ತ ಬಂಧುವಾಗಿಯೇ ಉಳಿದುಕೊಂಡಿದ್ದಾನೆ. ಪ್ರಭಾವಳಿಯ ಬಗ್ಗೆ ನನಗಿರುವ ಗೌರವಾದರಕ್ಕೆ ನನ್ನನ್ನು ಬಾಲ್ಯದಿಂದ ಕಾಡುತ್ತಿರುವ ತಪ್ಪಿತಸ್ಥ ಭಾವವೂ ಕಾರಣವಾಗಿದೆ ಎನ್ನಬಹುದು. ಈ ಅದುರುಕೃಷ್ಟ ಮಹಾಶಯ ನಮ್ಮ ಮನೆಗೆ ಬಂದದ್ದು ನಾನು ಹುಟ್ಟುವುದಕ್ಕೂ ಮುನ್ನ. ಪಡಸಾಲೆಯ ಕೋಣೆಯಲ್ಲಿ ಅವನು ಬಾಡಿಗೆಗೆ ಇದ್ದನಂತೆ. ಪ್ರಾಥಮಿಕ ಶಾಲೆಯ ಅಧ್ಯಾಪಕನಾಗಿ ಬಂದ ಆ ಮನುಷ್ಯ ಆಗಿನ್ನೂ ಬ್ರಹ್ಮಚಾರಿ. ಬೆಳಿಗ್ಗೆ ಸೂರ್ಯ ಮೂಡುವುದಕ್ಕೆ ಮೊದಲೇ ಎದ್ದು ಗಣೇಶನ ಬಾವಿಗೆ ಹೋಗಿ, ತಣ್ಣೀರು ಸೇದಿ ತಲೆಯಮೇಲೆ ಸುರಿದುಕೊಂಡು, ಒದ್ದೆಯಲ್ಲೇ ಮನೆಗೆ ಬಂದು ತನ್ನ ಪೂಜಾದಿ ಅನುಷ್ಠಾನದಲ್ಲಿ ತೊಡಗಿಕೊಳ್ಳುತ್ತಿದ್ದನಂತೆ. ಅವನ ಪೂಜಾನುಷ್ಠಾನಕ್ಕೆ ಭಕ್ತಿ ಕಾರಣ ಎಂದು ನೀವು ಊಹಿಸಬೇಡಿ. ಭಯವೇ ಅವನ ಅನುಷ್ಠಾನಗಳ ಮೂಲ ತಳಹದಿ. ಮೂಲೆಯಲ್ಲಿ ಹಲ್ಲಿ ಲೊಚಗುಟ್ಟಿದರೆ ಅವನಿಗೆ ದಿಗಿಲು. ಎಡ ಹುಬ್ಬು ಅದುರಿದರೆ ಅವನಿಗೆ ದಿಗಿಲು. ಹಲ್ಲಿಯೊಂದು ಆಯತಪ್ಪಿ ಮೈ ಮೇಲೆ ಬಿದ್ದಿತೋ ಮುಗಿದೇ ಹೋಯಿತು. ನಮ್ಮ ಸೀತಜ್ಜಿಯ ಅತ್ತೆ ರಂಗಜ್ಜಿಯ ಹತ್ತಿರ ಓಡಿ ಬಂದು ರಂಗಮ್ಮನೋರೇ…ಹಲ್ಲಿ ಎಡ ಭುಜದ ಮೆಲೆ ಬಿತ್ತು…ಏನು ಕಾದಿದೆಯೋ ಕಾಣೆ…ಪರಿಹಾರಕ್ಕೆ ಏನು ಮಾಡಬೇಕು…ಹೇಳಿಯಮ್ಮ ಎಂದು ಗೋಗರೆಯೋನಂತೆ. ದೇವರ ಮುಂದೆ ತುಪ್ಪದ ದೀಪ ಹಚ್ಚಿಟ್ಟು ನೂರು ಗಾಯತ್ರಿ ಮಾಡಿಯಪ್ಪಾ…ಅಶುಭನಿವಾರಣೆ ಆಗತ್ತೆ ಅನ್ನೋರಂತೆ ರಂಗಜ್ಜಿ!

ಹೆಚ್ಚೂಕಮ್ಮಿ ಇದೇ ಸಮಯದಲ್ಲಿ ಬೆಂಗಳೂರಿಂದ ನಮ್ಮ ಅಜ್ಜನ ಸೋದರಳಿಯಂದರು(ಕಿಟ್ಟಮಾವ ಮತ್ತು ವಾಸಮಾವ) ರಜಾಕ್ಕೆ ಅಂತ ಹೋದಿಗ್ಗೆರೆಗೆ ಬಂದಿದ್ದಾರೆ. ಇನ್ನೂ ಹದಿನೇಳು ಹದಿನೆಂಟರ ತುಂಟ ಹುಡುಗರು. ಅದುರುಕೃಷ್ಟ ಅವರಿಗೆ ತಮಾಷೆಯ ವಿಷಯವಾಗಿ ಹೋದ. ಈ ಮನುಷ್ಯನನ್ನು ಹೆದರಿಸಬೇಕು ಅಂತ ಕಿಟ್ಟಮಾವ ಮತ್ತು ವಾಸ ಮಾವ ಇಬ್ಬರೂ ಒಂದು ಉಪಾಯ ಮಾಡಿದರಂತೆ. ಕೃಷ್ಟ ಶಾಲೆಗೆ ಹೋದ ಮೇಲೆ ಸುಣ್ಣದ ನೀರಲ್ಲಿ ಕಾಲದ್ದಿಕೊಂಡು ಅಟ್ಟದಿಂದ ಕೃಷ್ಟನ ರೂಮಿಗೆ ಏಣಿ ಹಾಕಿಕೊಂಡು ಇಳಿದು ಅಲ್ಲೆಲ್ಲಾ ಓಡಾಡಿ ಬಂದಿದ್ದಾರೆ. ಕೃಷ್ಟ ಸಾಯಂಕಾಲ ಶಾಲೆಯಿಂದ ಬಂದು ಬಾಗಿಲು ತೆರೆದು ನೋಡಿದರೆ ಕೋಣೆಯ ತುಂಬ ಬೆಳ್ಳನೆ ಹೆಜ್ಜೆಗಳು. ಎದೆ ಜಲ್ಲೆಂದು ಹೋಗಿದೆ ಕೃಷ್ಟನಿಗೆ. ಆತ ರಂಗಮ್ಮನ ಬಳಿಗೆ ಓಡಿ ಬಂದಿದಾನೆ. ರಂಗ್ಮ್ನೋರೇ..ರಂಗಮ್ನೋರೇ…ಕೋಣೆಯ ತುಂಬ ಹೆಜ್ಜೆ ಕಾಣ್ತಾ ಇವೆ…ಏನು ಗ್ರಾಚಾರವೋ…ನೋಡುಬನ್ನಿ ಮೊದಲು…!

ರಂಗಜ್ಜಿ ಹೆಜ್ಜೆಗಳನ್ನು ನೋಡಿ “ಅಯ್ಯೋ…ಕೃಷ್ಟಾ ಇವು ಬ್ರಹ್ಮರಾಕ್ಷಸನ ಹೆಜ್ಜೆಗಳು ಕಾಣಪ್ಪ….ನಿನ್ನ ದೇವರೇ ಕಾಪಾಡಬೆಕು!”. “ರಂಗಮ್ಮನೋರೇ ಇದಕ್ಕೆ ಪರಿಹಾರ ಏನೂ ಇಲ್ಲವೇ?”. “ಯಾಕಿಲ್ಲ! ಮೂರುಜನ ಬ್ರಾಹ್ಮಣರಿಗೆ ಮೃಷ್ಟಾನ್ನ ಭೋಜನ ಹಾಕಿಸಿ ತಲಾ ಹತ್ತು ರೂಪಾಯಿ ದಕ್ಷಿಣೆ ಕೊಡು…ಮತ್ತೆ ಇತ್ತ ಸುಳಿಯೋದಿಲ್ಲ ಬ್ರಹ್ಮರಾಕ್ಷಸ…” .”ರಂಗಮ್ಮನೋರೇ ನೀವೇ ಮಡೀಲಿ ಅಡುಗೆ ಮಾಡಿಬಿಡಿ. ಸಂತರ್ಪಣೆ ಆಗಿಯೇ ಬಿಡಲಿ…!”

ಮುಂದಿನ ವಾರ ಮತ್ತೆ ಬ್ರಹ್ಮರಾಕ್ಷಸನ ಹೆಜ್ಜೆ ಗುರುತು. ಮತ್ತೆ ಬ್ರಾಹ್ಮಣರಿಗೆ ಸಂತರ್ಪಣೆ. ದಕ್ಷಿಣೆ. ಮುಂದಿನ ಮಂಗಳವಾರ ಅಮಾವಾಸ್ಯೆ. ಆವತ್ತಂತೂ ಕೆಂಪು ಕಪ್ಪು ಬಿಳಿ ಹೆಜ್ಜೆಗಳು ಕೋಣೆಯ ತುಂಬ. “ರಂಗಮ್ಮನೋರೇ…ಈವತ್ತು ಬಿಳೀ ಹೆಜ್ಜೆ ಜತೆ ಕೆಂಪು ಕಪ್ಪು ಹೆಜ್ಜೆಗಳೂ ಕಾಣ್ತಾ ಇವೆ”. “ಓಹೋಹೋ…! ಬ್ರಹ್ಮರಾಕ್ಷಸ ತನ್ನ ಹೆಂಡತಿ ಮಕ್ಕಳನ್ನೂ ಜತೇಲಿ ಕರ್ಕಂಡು ಬಂದಿದೆ…ಇಡೀ ಬ್ರಾಹ್ಮಣರ ಕೇರಿಗೇ ಊಟ ಹಾಕಿಸಬೇಕಾಗತ್ತೆ ನೀನು…!”

ಅದುರುಕೃಷ್ಟ ಮತ್ತೆ ಮಾತಾಡಿಲ್ಲ. ಮಾರನೇ ಬೆಳಿಗ್ಗೆ ನೋಡಿದರೆ ಅವನ ಕೋಣೆಯ ಬಾಗಿಲು ಹಾರುಹೊಡೆದಿದೆ. ಮುಂಬಾಗಿಲು ತೆರೆದುಕೊಂಡಿದೆ. ತನ್ನ ಸಾಮಾನು ಸರಂಜಾಮು ದೇವರು ದಿಂಡರು ಎಲ್ಲಾ ಇದ್ದ ಕಡೆಯೇ ಬಿಟ್ಟು ಅದುರುಕೃಷ್ಟ ಮಾಯವಾಗಿಬಿಟ್ಟಿದ್ದಾನೆ! ಅಯ್ಯೋಪಾಪ..ಇಷ್ಟು ಹೆದರಿಸಬಾರದಿತ್ತು ಅವನನ್ನ-ಅಂತ ಆಮೇಲೆ ಎಲ್ಲ ಹಲುಬಿಕೊಂಡಿದ್ದಾರೆ. ಕೃಷ್ಟನ ದೇವರುಗಳನ್ನೆಲ್ಲಾ ನಮ್ಮ ಅಜ್ಜ ಹರಿಹರಕ್ಕೆ ಹೋಗಿ ತುಂಗಭದ್ರಾ ನದಿಯಲ್ಲಿ ಮುಳುಗಿಸಿ ಬಂದರಂತೆ. ಪ್ರಭಾವಳಿ ಮಾತ್ರ ನಮ್ಮ ಮನೆಯಲ್ಲಿ ಉಳಿಯಿತು. ಯಾವತ್ತಾದರೂ ಬಿಡುವು ಮಾಡಿಕೊಂಡು ಬನ್ನಿ. ನಿಮಗೆ ಅದುರುಕೃಷ್ಟನ ಪ್ರಭಾವಳಿ ತೋರಿಸುತ್ತೇನೆ. ನೋಡಿಕೊಂಡು ಹೋಗುವಿರಿಯಂತೆ…

 

 

 

 

‍ಲೇಖಕರು G

April 17, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. subbanna mattihalli

    vartamaanadalli Buutavannu srustisuvudu, Adondu adbhuta kale.
    Adu tamage siddiside. Aduru krishna
    jeevantavaagi kaaduttaane.Mugdate,bhakti,mattu kandaa
    chaara ellavu seridaaga muuduva vichitra sannivesha nagu barisuttade.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: