‘ಮೀಡಿಯಾ ಮಿರ್ಚಿ’ ಹೀಗಿದೆ ನೋಡಿ

ನನ್ನಂಥ ಉತ್ಸಾಹಿಗಳಿಗೆ ಒಳ್ಳೆಯ ಸಾಥಿ

ನಾನಿನ್ನೂ ವಿದ್ಯಾರ್ಥಿಯಾಗಿದ್ದ ದಿನಗಳು. ಆ ಕಾಲದಲ್ಲಿ ನಾನು ಆಗಾಗ ಗಮನಿಸುತ್ತಿದ್ದ ಅಂಕಣ `ದಿ ಅದರ್ ಹಾಫ್’. `ದಿ ಹಿಂದು’ ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಪ್ರಕಟವಾಗುತ್ತಿದ್ದ ಆ ಅಂಕಣವನ್ನು ಕಲ್ಪನಾ ಶರ್ಮಾ ಬರೆಯುತ್ತಿದ್ದರು. ವಾಸ್ತವವಾಗಿ ಅದು ಸುದ್ದಿ ಮನೆಯ ಅಂಕಣವೇನೂ ಅಲ್ಲ. ಆದರೆ ಅದರಲ್ಲಿ ಆಯಾ ವಾರದಲ್ಲಿ ಸುದ್ದಿಯಾದ ದೇಶ-ವಿದೇಶಗಳ ವಿದ್ಯಮಾನಗಳು ಮತ್ತು ಅದನ್ನು ಮಾಧ್ಯಮ ಹೇಗೆ ನೋಡಿತು ಎಂಬುದನ್ನು ಚರ್ಚೆ ಮಾಡುತ್ತಿದ್ದರು. ಹೆಚ್ಚಾಗಿ ಮಹಿಳಾ ವಿಷಯಗಳು ಚರ್ಚೆಯಾಗುತ್ತಿದ್ದವು. ಬಹಳಷ್ಟು ಅಂಕಣಗಳಲ್ಲಿ ಮಾಧ್ಯಮ ತಳೆದ ನಿಲುವು, ಆ ವಿಷಯವನ್ನು ಬಿಂಬಿಸುವಲ್ಲಿ ಇದ್ದ ಸಾಧ್ಯತೆಗಳು, ಸುದ್ದಿ ಅಥವಾ ವಿದ್ಯಮಾನ ಮಹತ್ವ ಪಡೆದುಕೊಂಡ ರೀತಿ.. ಇತ್ಯಾದಿಗಳನ್ನು ಬರೆಯುತ್ತಿದ್ದರು.

ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟ ಮೇಲೆ ಸುದ್ದಿಯ ಮನೆ ಕುರಿತು ಅಂಥದ್ದೊಂದು ಅಂಕಣ ಕನ್ನಡದಲ್ಲೂ ಇರಬೇಕು ಅಂತ ಅನ್ನಿಸಿತ್ತು. ದೃಶ್ಯ ಮಾಧ್ಯಮ ಹೆಚ್ಚು ಪ್ರಭಾವಿ ಆದ ಮೇಲೆ, ಮಾಧ್ಯಮಗಳ ಹೊಣೆಗಾರಿಕೆ ಕುರಿತು ಚರ್ಚೆಗಳು ಆರಂಭವಾದಾಗ ಅಂಥ ಅಂಕಣ ಹೆಚ್ಚು ಪ್ರಸ್ತುತ ಅಂತ ಅನ್ನಿಸಿತ್ತು. ನಮ್ಮ ಕೆಲಸಗಳಿಗೆ ಕನ್ನಡಿ ಹಿಡಿಯುವ, ಆತ್ಮವಿಮರ್ಶೆ ಮಾಡಿಕೊಳ್ಳುವ, ಸರಿ ತಪ್ಪುಗಳನ್ನು ಚರ್ಚೆ ಮಾಡುವಂಥ ಮಾಧ್ಯಮವನ್ನು ಕುರಿತಾದ್ದೇ ಅಂಕಣ ಇದ್ದರೆ ಈ ಕ್ಷೇತ್ರದಲ್ಲಿ ಆರೋಗ್ಯಕರ ವಾತಾವರಣ ಇರುತ್ತದೆ ಅನ್ನೋದು ನನ್ನ ಅನಿಸಿಕೆ. ದಿವಸ್ಪತಿ ಹೆಗಡೆಯವರು ಟಿವಿ ಮಾಧ್ಯಮ ಕುರಿತು ಅಂಕಣ ಬರೆದರು. ಆದರೆ ಭಿನ್ನ ಮಾಧ್ಯಮಗಳನ್ನು ವಿಮರ್ಶಾತ್ಮಕವಾಗಿ ನೋಡುವ ಅಂಕಣವಿರಲಿಲ್ಲ.

‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟವಾದ ವಿಶ್ವೇಶ್ವರ ಭಟ್ಟರ `ಸುದ್ದಿಮನೆ ಕತೆ’ ಅಂಕಣ ಕೂಡ. ಅದರ ಹೆಸರೇ ಹೇಳುವಂತೆ ಇದು ಸುದ್ದಿ ಮನೆಯಲ್ಲಿ ನಡೆದ ಸ್ವಾರಸ್ಯಕರ ಘಟನೆಗಳನ್ನು ಹೇಳಿತು. ದೇಶ ವಿದೇಶಗಳ ಪತ್ರಿಕೋದ್ಯಮಿಗಳನ್ನು, ಪತ್ರಕರ್ತರನ್ನು ಪರಿಚಯಿಸಿತು. ಆದರೆ ಸುದ್ದಿಗಳನ್ನು, ಮಾಧ್ಯಮದ ನಡೆಗಳನ್ನು ಚರ್ಚೆ ಮಾಡುವ ಅಂಕಣ ಬೇಕಿತ್ತು. ಬಹುಶಃ ಕನ್ನಡದ ಸೀಮಿತ ವಲಯದಲ್ಲಿ ಅಂಥದ್ದೊಂದು ಸಾಧ್ಯತೆ ಇಲ್ಲವೇನೋ ಅನ್ನಿಸಿತ್ತು. ಯಾಕಂದ್ರೆ; ಯಾವುದೊ ಒಂದು ಪತ್ರಿಕೆಯಲ್ಲಿ ಬರುವ ಅಂಥ ಅಂಕಣ ಮತ್ತೊಂದು ಪತ್ರಿಕೆಯ ಬಗ್ಗೆ ಆಡಬಹುದಾದ ಮಾತು, ಪ್ರಸ್ತಾಪಿಸಬಹುದಾದ ವಿಷಯವನ್ನು ಆರೋಗ್ಯಕರವಾಗಿ ಸ್ವೀಕರಿಸುವ ಅವಕಾಶಗಳೇ ಕಡಮೆ ಇರಬೇಕು ಅಂತಲೂ ಅನುಮಾನ ಹುಟ್ಟಿಸಿತ್ತು.

ಈ ಹೊತ್ತಲ್ಲಿ ಜಿ.ಎನ್. ಮೋಹನ್ `ಮೀಡಿಯಾ ಮಿರ್ಚಿ’ ಹಿಡಿದುಕೊಂಡು ಬಂದರು. ಜಿ.ಎನ್. ಮೋಹನ್ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಬೆವರು ಬಸಿದವರು. ಎರಡೂ ಮಾಧ್ಯಮಗಳಲ್ಲಿ ಹಲವು ಪ್ರಯೋಗಗಳಿಗೆ ಕಾರಣರಾದವರು ಮತ್ತು ತಮ್ಮದೇ ಛಾಪು ಮೂಡಿಸಿದವರು. ಆ ಎಲ್ಲಾ ಅನುಭವಗಳ ದೊಡ್ಡ ರಾಶಿಯನ್ನು ತಮ್ಮ ಮುಂದೆ ಹಾಕಿಕೊಂಡು ಚುರುಕು ಮುಟ್ಟಿಸುವುದಕ್ಕಾಗಿ ಮಿರ್ಚಿ ಕೊಡಲಾರಂಭಿಸಿದರು.

ವರದಿಗಾರಿಕೆ, ಡೆಸ್ಕ್ ನಲ್ಲಿ ಆಗುವ ಅನಾಹುತಗಳು, ಪತ್ರಕರ್ತನ ಸಮಯಪ್ರಜ್ಞೆ ಸೇರಿದಂತೆ ಸುದ್ದಿ ಮನೆಯೊಳಗಿನ ಹಲವು ಸೂಕ್ಷ್ಮ ವಿಷಯಗಳನ್ನು ಕುರಿತು ತಮ್ಮದೇ ವೃತ್ತಿ ಜೀವನದ ಸ್ವಾರಸ್ಯಕರ ಅನುಭವಗಳನ್ನು ಬರೆದರು. ಕಾಡುವಂಥ ಹಲವು ಸಂಗತಿಗಳನ್ನು ಮೊಗೆ ಮೊಗೆದು ಅದಕ್ಕೆ ಸ್ವಲ್ಪ `ಮಿರ್ಚಿ’ಯನ್ನು ಸೇರಿಸಿ ಕೊಟ್ಟರು. ಸುಲಲಿತ ಶೈಲಿಯ ಅವರ ಬರವಣಿಗೆ, ಪ್ರತಿ ಅಂಕಣಕ್ಕೂ ಹಾಡು ಇಲ್ಲವೇ ಕವಿತೆಯ ಸಾಲಿನದ್ದೇ ಶೀರ್ಷಿಕೆ (ಮೋಹನ್ ಒಳ್ಳೆಯ ಕವಿ ಕೂಡ..).. `ಮಿರ್ಚಿ’ ರುಚಿಕರವಾಗಿ ಮೂಡಿ ಬರುವುದಕ್ಕೆ ಕಾರಣವಾಯಿತು! ಪ್ರತಿ ಅಂಕಣದಲ್ಲಿ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ `ಬುಕ್ ಟಾಕ್’, ಜೊತೆಗೆ ನೆಂಚಿಕೊಳ್ಳಲು `ಕೆಂಪ್ ಮೆಣಸಿನ್ಕಾಯ್’ ಪತ್ರಕರ್ತರನ್ನು, ಅದಕ್ಕಿಂತ ಹೆಚ್ಚಾಗಿ ಓದುಗರನ್ನು ಮುಟ್ಟಿ ಸುದ್ದಿ ಮನೆಯ ಒಳ ಹೊರಗನ್ನೂ ಬಿಚ್ಚಿಟ್ಟಿತು.

ಪಿ.ಸಾಯಿನಾಥ್, ಪಿವಿಆರ್, ಬಿಟಿ ಹತ್ತಿ, ರಾಮೋಜಿರಾವ್, ಈಟಿವಿ, ಪತ್ರಕರ್ತ ದಂಪತಿಗಳು, ಮಹಿಳಾ ಪತ್ರಕರ್ತೆಯರ ಸಂಕಷ್ಟಗಳು, ವಿದೇಶ ಚಾನೆಲ್ ಗಳು, ವರದಿಗಾರನಾಗಿದ್ದಾಗಿನ ಅನುಭವಗಳು, ಇವತ್ತಿನ ಪತ್ರಕರ್ತ ಹುಡುಗರು ಹೀಗೆ ಹತ್ತು ಹಲವು ವಿಷಯಗಳನ್ನು ವಾರಕ್ಕೊಮ್ಮೆ `ಮಿರ್ಚಿ’ ಸಹಿತ ಬಡಿಸಿದರು. ಈಗದು ಪುಸ್ತಕ ರೂಪದಲ್ಲಿ. ಇಂಥ ಪುಸ್ತಕಗಳು ಪತ್ರಕರ್ತರಾಗಬೇಕೆಂದು ಬಯಸುವ ವಿದ್ಯಾರ್ಥಿಗಳಿಗೆ, ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ನನ್ನಂಥ ಉತ್ಸಾಹಿಗಳಿಗೆ ಒಳ್ಳೆಯ ಸಾಥಿ.

`ಮೀಡಿಯಾ ಮಿರ್ಚಿ’ – ಒಂದು ಸುದ್ದಿಯನ್ನು ಹಲವು ಆಯಾಮಗಳಲ್ಲಿ ನೋಡಿ, ಯಾರನ್ನೂ ಟೀಕೆ ಮಾಡದೆ ಸುದ್ದಿಯನ್ನು ಹೀಗೂ ನೋಡಬಹುದಾಗಿತ್ತು ಎಂದು ಹೇಳುವ, ವಿಚಾರಗಳನ್ನು ಹೊಳೆಸುವ ಮೂಲಕ ಸುದ್ದಿಯ ಮನೆಯ ಸಂವೇದನೆಗೆ ಸಾಣೆ ಹಿಡಿಯುವ ಅವಕಾಶವಿದ್ದ ಅಂಕಣ. ಜಿ.ಎನ್.ಮೋಹನ್ ಅಂಕಣ ಬರೆಯುತ್ತಿದ್ದಾರೆ ಎಂದಾಗ ಮಾಧ್ಯಮ ಮಿತ್ರರಿದ್ದಲ್ಲಿ ಇದೇ ವಿಚಾರ ನಿರೀಕ್ಷೆಯನ್ನು ಹುಟ್ಟಿಸಿತ್ತು. ಮಿರ್ಚಿ ಆ ವಿಷಯದಲ್ಲಿ ಇನ್ನಷ್ಟು ತೀಕ್ಷ್ಣವಾಗಬಹುದಿತ್ತು. ಆದರೆ `ಮೀಡಿಯಾ ಮಿರ್ಚಿ’ ಒಬ್ಬ ಹಿರಿಯ ಪತ್ರಕರ್ತ, ತನ್ನ ಸಹೋದ್ಯೋಗಿಯೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಆಪ್ತತೆ ಮತ್ತು ವೃತ್ತಿ ಜೀವನಕ್ಕೆ ಅಗತ್ಯವಾಗುವ ಹಲವು ಸಂಗತಿಗಳು ಈ ಅಂಕಣ ಕೊಟ್ಟಿತು ಎನ್ನುವುದರಲ್ಲಿ ಎರಡು ಮಾತಿಲ್ಲ.

-ಕುಮಾರ್ ಎಸ್.

ಸುವರ್ಣ ನ್ಯೂಸ್ 24×7

 

‍ಲೇಖಕರು G

April 17, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: