ಎಗ್ಜಾಂ ಹಾಲ್ ತೊರೆದು ಹೋಗುವ ಜೋಗಿಗಳು..

ಮಾಲಾ ಮ ಅಕ್ಕಿ ಶೆಟ್ಟಿ

ವರ್ಷದ ಹಿಂದಿನ ಮಾತಿದು.ದ್ವಿತೀಯ ಪಿಯುಸಿ ರೆಗ್ಯುಲರ್ ವಿದ್ಯಾರ್ಥಿಗಳು ಕೊರೊನಾದ ಕೃಪಾಕಟಾಕ್ಷದಿಂದ ಪರೀಕ್ಷೆ ಬರಿಯದೇ ಪಾಸ್ ಆದರು.ಇನ್ನೂ ಇದೇ ಕೊರೋನಾ ಎಕ್ಸ್ಟ್ರನಲ್ ಅಥವಾ ಪ್ರೈವೇಟ್ ಕ್ಯಾಂಡಿಡೇಟಗಳಿಗೆ ಒಲಿದಿರಲಿಲ್ಲ; ಪಾಪದ ಜೀವಿಗಳು. ಇವರ ಜೊತೆ ಪುಕ್ಕಟ್ಟೆ ಪಾಸಾಗುವುದು ಬೇಡ ಎಂದು ಕೆಲವರು ರಿಜಲ್ಟ್ ರಿಜೆಕ್ಟ ಮಾಡಿದ ವಿದ್ಯಾರ್ಥಿಗಳಗೂ ಇದ್ದರು.‌ ಸ್ವತಃ ಬರದೇ ‌ಪಾಸಾಗಬೇಕೆಂಬ ‌ಅಪ್ಪಟ ಛಲ ಇವರದು.‌ ಇಂಥವರಿಗೆಲ್ಲ ಅಗಸ್ಟ್ ನಲ್ಲಿ ( aug 2021) ಪರೀಕ್ಷೆಯನ್ನು ಸರ್ಕಾರ ನಿಗದಿಪಡಿಸಿತ್ತು. 10:15 ರಿಂದ 1:30ರವರೆಗೆ ಇರೋ ಪರೀಕ್ಷೆಗೆ ರೂಮ್ ಇನ್ವಿಜಿಲೇಟರ್ ಆಗಿ ಕಾರ್ಯನಿರ್ವಹಿಸುವುದು ಎಂದಿನಂತೆ ಇದ್ದೇ ಇತ್ತು. ದಿನವೂ ಐವತ್ತು ಕಿಮೀ ಅಂತರವನ್ನು ಬಸ್ ನ ಮೂಲಕ ಪ್ರಯಾಣಿಸುವುದು ಬೆನ್ನಿಗಂಟಿದ ಕಾಡುವ ಬೇತಾಳದಂತೆ ಅನಿವಾರ್ಯ.ಕಾಲೇಜಿನವರು 9:30 ಕ್ಕೆ ಇರಬೇಕೆಂದಿದ್ದರು.ಡ್ಯೂಟಿ ಇದ್ದ ದಿನ ಪುಸು ಪುಸು ಎಂದು ತಯಾರಾಗಿ, ದಡ ದಡ ಓಡಿ ಬಸ್ಸಿಡಿದು ಈ ಮಳೆಗಾಲದಲ್ಲೂ ಬೆವರು ಸುರಿಸುತ್ತಾ 9:40ಕ್ಕೆ ತಲುಪುವುದರಲ್ಲಿ ಉಸ್ ಉಸ್ ಅನ್ನುತ್ತಿದ್ದೆ. ಇವರನ್ನೂ ಸರಕಾರ ಏಕೆ ಪಾಸ್ ಮಾಡಲಿಲ್ಲ ಅನ್ನೋದು ಜೊತೆಗೆ ಎಕ್ಸಾಂ ನಡೆಸೋದೇ ಆಗಿದ್ರೆ ಅವರನ್ನು ಏಕೆ ಪಾಸ್ ಮಾಡಬೇಕಿತ್ತೆಂದು ವಿಚಾರಿಸುತ್ತ, ವಾರ್ನಿಂಗ್ ಬೆಲ್ ಹಾಕಿದ್ದನ್ನು ಅನುಸರಿಸಿ, ನನಗೆ ಅಲೊಟ್ ಆದ ರೂಮ್ಗೆ ಹೋದೆ.

ಸೋಷಿಯಲ್ ಡಿಸ್ಟೆನ್ಸ್ ಎಂದು 1ಬ್ಲಾಕ್ ನಲ್ಲಿ ಬರೀ ಹತ್ತು ಮಕ್ಕಳು.ಮೊದಲು 24‌ ‌ಹುಡುಗರು ‌ಇರತಿದ್ರು. ‌ರೂಮ್ ‌ಹೊಕ್ಕಾಗ ಇದ್ದದ್ದು ಬರೀ 6 ವಿದ್ಯಾರ್ಥಿಗಳು. ಇನ್ನೂ ಬರಬಹುದೆಂದು ಪರೀಕ್ಷೆಯ ನಿಯಮಗಳನ್ನು ಹೇಳಿ, ಬೇಂಚ್ ಮತ್ತು ಅವರನ್ನು ಚೆಕ್ ಮಾಡಿದೆ. ಕಾಪಿ ಇದ್ದರೆ ‌ಅಪರಾಧವೆಂದು, ಕಾರ್ಯಕ್ರಮಗಳು ‌ಕಡಿಮೆಯಾದ ಈ ‌ಕರೋನಾದಲ್ಲಿ ‌ನನ್ನ ‌ಸಣ್ಣ ‌ಭಾಷಣವೂ ‌ಆಯಿತು.ಸರಿಯಾಗಿ 10:15ಕ್ಕೆ ಕ್ವೆಶನ್ ಪೇಪರ್ ಕೊಟ್ಟು ಹಾಲ್ ಟಿಕೇಟ್ಗೆ ಸಹಿ ಹಾಕಲಾರಂಭಿಸಿದೆ. ಇನ್ನೂ 4 ವಿದ್ಯಾರ್ಥಿಗಳ ಸುಳಿವಿಲ್ಲ. 10:30 ಗೆ ಆನ್ಸರ್ ಶೀಟ್ ಕೊಟ್ಟು, ನೋಂದಣಿ ಸಂಖ್ಯೆ, ಸಬ್ಜೆಕ್ಟ್, ಸಬ್ಜೆಕ್ಟ್ ಕೋಡ್ ಹಾಕುವಂತೆ ಹೇಳಿ ಬಾಗಿಲ ಕಡೆ ನೋಡಿದಾಗ ಒಬ್ಬ ಬಂದು ತನ್ನ ಬೇಂಚಿನಲ್ಲಿ ಕೂತ. ಅವನಿಗೆ ಕ್ವೆಶನ್ ಪೇಪರ್ ಹಾಗೂ ಆನ್ಸರ್ ಶೀಟ್ ಕೊಟ್ಟೆ. ಇನ್ನೂ 3 ಇಲ್ಲ.ಹತ್ತು ವರ್ಷದ ಸರ್ವಿಸ್ ನಲ್ಲಿ ಹೀಗೆ ಆಗಿರಲಿಲ್ಲ. 10:45ಕ್ಕೆ ಒಬ್ಬ ಬಂದ. “ಯಾಕ ಲೇಟ್”‌ಅಂದ್ರೆ,” ಬಸ್ ಬಾಳ ರಷ್ ಇತ್ತು..ಡ್ರೈವರ್ ಲೇಟ್ ಬಂದರಿ”ಅಂದ. “ಯಾವೂರು?” ‌ಅಂದಾಗ “ಕಿತ್ತೂರಿಂದ ಬಂದ್ನಿ ಮೇಡಂ” ಅಂದ. ಬೈಲಹೊಂಗಲಕ್ಕೆ ಕಿತ್ತೂರಿನಿಂದ ಸ್ವಲ್ಪ ಬಸ್ ಕಡಿಮೆಯೇ. ಹೀಗಾಗಿ ಲೇಟ್ ಆಗಿರಬಹುದೆಂದುಕೊಂಡೆ.

ಇನ್ನೊಂದಿಷ್ಟು ನಿಮಿಷ ಅಂದ್ರೆ10:55 ಕ್ಕೆ ಇನ್ನೊಬ್ಬ ಬಂದ. ಅವನಿಗೂ ಹೀಗೆ ಕೇಳಿದಾಗ ಕಿತ್ತೂರದಿಂದ ಅಂದ.”ಇಲ್ಲೊಬ್ಬ ಈಗ  ಹತ್ತು ನಿಮಿಷದ ಹಿಂದೆ ಕಿತ್ತೂರದಿಂದಲೇ ಬಂದ. ನೀನ್ಯಾಕೆ ಲೀಟ್?” ಅಂದ್ರೆ “ಇಲ್ಲ ಮೇಡಂ ಅಲ್ಲೊಬ್ರು ತೀರಕೊಂಡಿದ್ರು, ಹೋಗಿದ್ದೆ” ಅಂದ. ಪರೀಕ್ಷೆಗೆ ಅರ್ಧಗಂಟೆವರೆಗೆ ಪರವಾನಗಿ ಇದ್ದಾಗ ಏನೂ ಅನ್ನುವಂತಿಲ್ಲ.ಆದ್ರೂ ಒಬ್ಬ ಗೈರ ಇದ್ದ. ಆತ 11:00 ಆದ್ರೂ ಬರಲಿಲ್ಲ. ಇಬ್ಬರಿಗೂ ಕ್ವೆಶನ್ ಪೇಪರ್ ಮತ್ತು ಆನ್ಸರ್ ಪೇಪರ್ ಕೊಟ್ಟು, ನಾನು ಸಹಿ ಮಾಡುವಲ್ಲಿ ಮಾಡಿ ಅವರಿಗೂ ಸಹಿ ಮಾಡುವಂತೆ ಹೇಳಿ, ವಾಸ್ಕೋಡಿಗಾಮ್ ಸುತ್ತ ಹಾಕುವಂತೆ ಇಡೀ ರೂಮ್ ಸುತ್ತ ಹಾಕತೊಡಗಿದೆ. ನಂತರ ನೋಂದಣಿ ಸಂಖ್ಯೆ ಸರಿಯಾಗಿ ಬರೆದಿದ್ದನ್ನು ಖಚಿತ ಪಡಿಸಿಕೊಂಡು, ಹಾಳೆಯಲ್ಲಿ ಅವರ ನೋಂದಣಿ ಸಂಖ್ಯೆ, ಆನ್ಸರ್ ಪೇಪರ್ ನಂ ಬರೆದೆ, ನನ್ನ ಸಹಿ, ಅವರ ಸಹಿ ತೆಗೆದುಕೊಂಡದ್ದಾಯಿತು. ಅಲ್ಲಿ ಇಲ್ಲಿ ಒಂದಿಷ್ಟು ಬಂದರುಗಳೆಂಬ ವಿರಾಮ ತೆಗೆದುಕೊಂಡು ಮತ್ತೆ ಹಡಗು ಚಲಾಯಿಸುತ್ತಿದ್ದೆ.

ರೌಂಡ್ಸ್ ತೆಗೆದುಕೊಳ್ಳುವಾಗ ಹುಡುಗರನ್ನು ಬಾಗಿಲನ್ನು, ಕಿಡಕಿಗಳನ್ನು, ಬೆಂಚುಗಳನ್ನು ಬರೆಯುವುದನ್ನು ನೋಡುತ್ತಾ ನಿಂತು ಕಾಪಿ ಮಾಡುತ್ತಿಲ್ಲವೆಂದು ಖಚಿತಪಡಿಸಿಕೊಳ್ಳುತ್ತಿದ್ದೆ. ಕೆಲವು ಸಲ ನಾವು ನಮ್ಮ ಶರ್ಲಾಕ್ ಹೋಮ್ಸನ ವ್ಯಕ್ತಿತ್ವದಿಂದ ಸಂಶಯಪಟ್ಟ ವಿದ್ಯಾರ್ಥಿಗಳಲ್ಲಿ ಕಾಪಿ ಇರೋದೇ ಇಲ್ಲ, ಅದು ಸಿಗೋದು ಮತ್ತೊಬ್ಬನ ಹತ್ತಿರ. ಆತ ನಮ್ಮ ಕಣ್ಣಲ್ಲಿ ರಾಮ್ ಆಗಿರತಾನೆ. ಕಾಪಿ ಸಿಕ್ಕಾಗ ರಾವಣನಾಗಿ ಬದಲಾಗತಾನೆ. 12:00ಕ್ಕೆ ಹತ್ತು ನಿಮಿಷ ಉಳಿದಿತ್ತು, ಮೊದಲನೇ ಬೆಂಚಿನಲ್ಲಿ ಕುಳಿತವ ನನ್ನನ್ನೇ ನೋಡುತ್ತಿದ್ದ. ನಾನು ನೋಡಲು ಶುರುವಿಟ್ಟಾಗ ನೋಟ ಬದಲಾಯಿಸುತ್ತಿದ್ದ. ಇದು 3 ಬಾರಿ ಆಯಿತು. ಬಾಗಿಲಿಗೆ ಆಧಾರವಾಗಿ ನಿಂತು ಅವನನ್ನು ನೋಡಿದೆ. ಮುಖದಲ್ಲಿ ಬೇಸರ, ಹೇಳಲಾರದ ನೋವು. ದೃಷ್ಟಿ ಎದುರಿಸದೇ ಕೆಳಗೆ ನೋಡುವ ಆತನದು ಕುತೂಹಲ ವ್ಯಕ್ತಿತ್ವ. ಏನೋ ಹೇಳಬೇಕು ಅನ್ನುತ್ತಿದ್ದಾನೆ  ಆದರೆ ಆಗುತ್ತಿಲ್ಲ. ಸಂಪೂರ್ಣ ಧೈರ್ಯತುಂಬಿ ಕೈಯಿಂದ ಪೇಪರ್ ಎತ್ತಿ ಕೊಡುವಂತೆ ವರ್ತಿಸಿದ. “ಏನು?” ಎಂದಾಗ “ನಾನು ಹೋಗ್ತಿನಿ ಮೇಡಂ ನನ್ನನ್ನು ಬಿಡಿ” ಎಂದ. “ಅಲ್ಲಾ ಈಗ ಬರೀ 12:00 ಆಗಲಿಕ್ಕೆ ಬಂದದ. ಇನ್ನೂ ಟೈಮ್ ಅದ. ಬರಿಯಲಾ” ಎಂದು ಮೆಲ್ಲಗೆ, ‌ಇತರ ‌ಹುಡುಗರಿಗೆ ‌ತೊಂದರೆ ಆಗದಂತೆ ಅಂದಾಗ, “ಮೆಡಮ್ ಏನೂ ಬರೆಯಲು ಆಗಲ್ಲ ನನ್ನನ್ನು ಬಿಟ್ಟುಬಿಡಿ” ಎಂದು ಜಗತ್ತಿನ ಎಲ್ಲರ ಸಪ್ಪೆ ಮುಖವನ್ನು ಹೊತ್ತು ಕಳಕಳಿಯಿಂದ ಕೇಳಿದ. ನಿನ್ನ ಕ್ವೆಶನ್ ಪೇಪರ್ ಇಲ್ಲೇ ಕೊಡಬೇಕಾಗುತ್ತೆ ನಿನ್ನ ಜೊತಿ ಒಯ್ಯಾಕ ಕೊಡಲ್ಲ” ಅಂದಾಗ “ಕ್ವೆಶನ್ ಪೇಪರ್ ಬೇಡ ನನಗೆ” ಅಂದು ಕೊಟ್ಟು ಎದ್ದುನಿಂತು “ಹೋಗುತ್ತೇನೆ ಮೇಡಂ”ಅಂದ. “ಹೋಗ್ಲೇ ಬೇಕಾ?” ಅಂದಾಗ “ಹುಃ” ಅಂದ. “ಆಯ್ತು ಹೋಗು” ಎಂದು ಪೇಪರ್ ಕೊಟ್ಟಿದ್ದರ ಬಗ್ಗೆ ಸಹಿ ತೆಗೆದುಕೊಂಡು ಆನ್ಸರ್ ಪೇಪರ್ ಮತ್ತು ಕ್ವೆಶನ್ ಪೇಪರ್ ತೆಗೆದುಕೊಂಡು ಕಳುಹಿಸಿದೆ.

ಇನ್ನೂ 5 ನಿಮಿಷವೂ ಕಳೆದಿರಲಿಲ್ಲ, ಇನ್ನೊಬ್ಬ ಅದೇ 15 ನಿಮಿಷ ಲೇಟ್ ಬಂದಿದ್ದನಲ್ಲ ಅವನೆದ್ದು ನಿಂತು “ಮೆಡಂ ನಾನೂ ಹೋಗ್ತಿನಿ. ಪೇಪರ್ ತಗೊಳ್ಳಿ” ಅಂದ.” ಅಲ್ಲಾ ಇನ್ನೂ ಎಷ್ಟ ಟೈಮಿದೆ, ಬರಿಯಲಾ” ಎಂದು ಸಾವಕಾಶವಾಗಿ ನುಡಿದೆ.”ಇಲ್ಲ ಮೇಡಂ, ಇನ್ನೂ ಬರಿಯಾಕ ಆಗಲ್ಲ” ಅಂದ. “ಹೌದು ನೀ ಯಾಕ್ ಪಿಯುಸಿ ಎಕ್ಸ್ಟರ್ನಲ್ ಕಟ್ಟಿದಿಯಾ?” ಪ್ರಶ್ನಿಸಿದಾಗ “ಗೌರ್ಮೆಂಟ್ ಜಾಬ್ ಗೆ ಬೇಕಿತ್ತು. ತಿಳಿದಷ್ಟು ಬರೆದಿದ್ದೇನಿ” ಎಂದ. “ಓಹ! ಇನ್ನಷ್ಟು ಬರೆಯಬಹುದಿತ್ತಲ್ಲ”, “ಮೆಡಂ ನಂದು ಐಟಿಐ.ಅದರ ಮ್ಯಾಲ ಡಿಗ್ರಿಗೆ ಎಡ್ಮಿಷನ್ ತಗೋಬಹುದು.ಇವತ್ತ ಎಡ್ಮಿಷನ್ ಮಾಡಿ ಹೋಗುತ್ತೇನೆ. ಅದಕ್ಕೆ ಹೋಗ್ತೀನಿ ಅಂದಿದ್ದು” ಎಂದ. “ಆಯ್ತಪ್ಪ ಇಲ್ಲಿ ಸಹಿ ಮಾಡು ಕ್ವೆಶನ್ ಪೇಪರ್ ಬಿಟ್ಟು ಹೋಗು” ಎಂದು ಈ ಎರಡನೇಯವನನ್ನೂ ಕಳುಹಿಸಿದೆ. ಮತ್ತೆ ಅದೇ ವಾಸ್ಕೋಡಿಗಾಮನ ಹಡಗನ್ನು ತಳ್ಳುತ್ತಾ ಬಂದರುಗಳನ್ನು ಆಗಾಗ ತಲುಪುತ್ತಿದ್ದೆ.

“ಮೇಡಂ ಟೈಮ್ ಎಷ್ಟಾತ್ ರೀ?” ಅಂತ ಒಬ್ಬ ಕೇಳಿದ. “12:10 ಆಯ್ತು” ಅಂದೆ. “ಅಷ್ಟಾತಾ? ನಾನು ಹೋಗೋ ಟೈಮ್ ಆತು” ಅಂದ. ಟೈಮ್ ಆತು ಅಂದ್ರೆ ಏನು ಎಂದು ಯೋಚಿಸತೊಡಗಿದೆ. ಹಿಂದೆ 2 ದಿನ ಆಧ್ಯಾತ್ಮಿಕ ಉಪನ್ಯಾಸದ ಪ್ರಭಾವ ಜಾಸ್ತಿಯಾಗಿ, ಟೈಮ್ ಆತು ಹೋಗಬೇಕು ಅನ್ನೋದು ನನ್ನನ್ನು ಎಲ್ಲೆಲ್ಲೋ ಕರೆದೊಯ್ಯಿತು. “ಹಂಗಂದ್ರ ಏನಪಾ?”  ಅಂದಾಗ, “ಮೇಡಂ, ನಾನು ಪ್ರತಿ ಪೇಪರ್ 12:00ವರೆಗೆ ಅಷ್ಟೇ ಬರೀತೀನಿ. ಇವತ್ತು ಹತ್ತು ನಿಮಿಷ ಜಾಸ್ತಿ ತಗೊಂಡ್ನಿ. ಇನ್ನ ನಾ ಹೊರಗ ಹೋಗಬೇಕ್” ಅಂದ. “ಅಲ್ಲೋ, ಅವಾಗಿಂದ ನೋಡಾಕತೆನಿ ಭಾರಿ ಕಾನ್ಸಟ್ರೇಟ್ ಮಾಡಿ ಬರಿಯಾತಿ,  ಓದಿ ಅನಸ್ತದ. ಇನ್ನಷ್ಟು ಬರೀ ಬಹುದಲ್ಲಾ” ಅಂದಾಗ, “ಮೇಡಂ ನನ್ನ ತಲ್ಯಾಗ ಇದ್ದದ್ದೆಲ್ಲಾ ಸೊಸೇನಿ. ಇನ್ನಷ್ಟ ವಿಷಯ ಇಲ್ಲ” ಅಂದಾಗ, “ಹೌದು ಹಂಗಾರ ನಾನು ಇನ್ನಷ್ಟ ಸೊಸಾಕ ತಯಾರಿಲ್ಲ ಬಿಡಪಾ. ಹೌದು ನೀ ಯಾಕ ಈ ಕರೋನಾದಾಗ ಎಕ್ಸ್ಟ್ರನಲ್ ಕಟ್ಟಿದಿ” ಅಂದ್ರ “ಮೇಡಂ ಈ ಕರೋನಾದಿಂದ ನಾ ಪಿಯುಸಿ ಫಸ್ಟ್ ಇಯರ್ ಪಾಸಾದೆ”ಅಂದ.”ಅಂದ್ರೆ ಏನೋ?”

ಅಂದಾಗ “ಮೇಡಂ ನನ್ನ ಹತ್ತನತ್ತೆ 82% ಆಗೇತಿ ಅಂತ ಮನ್ಯಾಗಿನವರ ಒತ್ತಾಯದಿಂದ ಸೈನ್ಸಿಗೆ ಹಚ್ಚಿದ್ರ. ನಾ ಒಂದ ವಾರ ಅಗದಿ ಸಿನ್ಸೀಯರಾಗಿ ಬಂದೆ. ಒಂದೂ ಸೈನ್ಸ್ ಪದ ತಲ್ಯಾಗ ಹೊಕ್ಕಲಿಲ್ಲ. ಎಲ್ಲಾ ತೆಲಿ ಮ್ಯಾಲ ಕುಂತ, ಕುಣದ ಹೋದವು. ಎಂಟನೇ ದಿನದಿಂದ ಕಾಲೇಜು ಬರ್ಲಿಲ್ಲ. ಫೇಲ್ ಆದ್ರೆ ಆತ. ಇಂಟರೆಸ್ಟ್ ಇಲ್ಲದ ತಗೊಂಡ ಏನ್ ಮಾಡ್ಲಿ ಮೇಡಂ? ಅವಾಗ ಈ ಕೊರೊನಾ ಬಂತ ನೋಡ್ರಿ, ಎಲ್ಲಾ ಪಿಯುಸಿ ಫಸ್ಟ್ ಇಯರ್ ವಿದ್ಯಾರ್ಥಿಗಳನ್ನ ಪಾಸ್ ಮಾಡಿದ್ರ. ಇನ್ನು ಎರಡನೇ ವರ್ಷ ಸೈನ್ಸ್ ಹಚ್ಚಲಿಲ್ಲ.ಗ್ಯಾರಂಟಿ ಫೇಲ್ ಅಂತ ಗೊತ್ತಿತ್ತ. ಅದಕ್ಕೆ ಎಕ್ಸ್ ಟರ್ನಲ್ ಆರ್ಟ್ಸ್ ಮಾಡಿದೆ. ಎಕ್ಸಾಂ ಕಟ್ಟಿದೆ. ಮನ್ಯಾಗ ಎಷ್ಟ ತಿಳಿತದೋ ಅಷ್ಟ ಅಭ್ಯಾಸ ಮಾಡಿ, ಚಾಣಗಿ ಸೊಸೆನಿ” ಅಂದ.” ಹೌದಾ, ಹಂಗಾರ ನೀ ಹೋಗ್ಬೇಕಂದ್ರ ಹೋಗಪಾ. ಇಲ್ಲಿ ಸಹಿ ಮಾಡಿ, ಕ್ವೆಶನ್ ಪೇಪರ್, ಆನ್ಸರ್ ಪೇಪರ್ ಇಡ. ಇನ್ನೊಂದಿಷ್ಟ ಬರದಿದ್ರ ಪಾಸ್ ಆಗ್ತಿದ್ದೀನೋ ಅನಿಸ್ತ” ಅಂದಾಗ, “ಮೇಡಂ ಈಗ ಏನು ಬರದೆನಲ್ಲಾ, ಅದ್ರಿಂದ ನಾ ಗ್ಯಾರಂಟಿ ಪಾಸ್ ಆಗಬೇಕ. ಅಷ್ಟ ಅಂತಿ ಕರೆಕ್ಟ ಬರದೇನಿ” ಅಂದ. ಅವನ ಆತ್ಮವಿಶ್ವಾಸವನ್ನು ನೋಡಿ ಅಷ್ಟೇ ಹೆಮ್ಮೆಪಟ್ಟು ಹೋಗಲು ಪರವಾನಿಗೆ ಕೊಟ್ಟೆ.

ವಾಸ್ಕೋಡಿಗಾಮನ ಪರ್ಯಟನೆ ಮುಂದುವರಿಯಿತು ಸ್ವಲ್ಪ ಖುಷಿಯಲ್ಲಿ. ಇನ್ನೇನು 1ಗಂಟೆಯಷ್ಟೇ ಉಳಿದಿರೋದು ಸುಪರ್ ವಿಜನ್ ಮುಗಿಯಿತೆಂದು. ಸರಿಯಾಗಿ 12:30ಕ್ಕೆ ಕಿತ್ತೂರಿನಿಂದ ಲೇಟ್ ಬಂದವ ಯಾರೋ ತೀರಿಕೊಂಡಿದ್ದರು ಅಂದಿದ್ರಲ್ಲಾ ಅವನೂ ನನ್ನನ್ನು ಕರೆದು “ಮೇಡಂ ಪೇಪರ್ ತಗೊಳ್ರಿ, ಹೋಗ್ತೀನಿ” ಅಂದ್ರು. ಸ್ವಲ್ಪ ದೊಡ್ಡವರಂತೆ ಕಂಡರು. ದೊಡ್ಡೋರು ಅಂದಾಗ ಮೂವತ್ತು ನಲವತ್ತು ವಯಸ್ಸು ಅಲ್ಲ. ಸಾಮಾನ್ಯವಾಗಿ 18 ರಿಂದ 22 ವರೆಗೆ ಇದ್ದವರು ಹೆಚ್ಚು ಎಕ್ಟ್ರನಲ್ ಎಗ್ಜಾಂ ಬರಿತಾರೆ. ಇವರು ಇಪ್ಪತ್ತೈದು ದಾಟಿರಬಹುದೆಂದು ‌ಅನಸ್ತು.‌ಬೆಂಚ್ ಹತ್ತಿರಕ್ಕೆ ಹೋಗಿ,‌ ನಿಧಾನಕ್ಕೆ”ಯಾಕೆ ಇನ್ನಷ್ಟ ಬರಿಬಹುದಲ್ಲಾ?. ಈಗ 12:30″ ಅಂದೆ. ” ಇಲ್ಲ ಮೇಡಂ, ನಾನು ಪಾಸ್ ಆಗುವಷ್ಟು ಬರದಿನಿ. ಕೆಲವರು ಪಿಯುಸಿ ಮಾಡಕೊ ಅಂದಿದ್ರು. ಅದಕ್ಕೆ ಬ್ಯುಸಿ ಇದ್ದರೂ ಓದಿಕೊಂಡು ಬರದೆನಿ. ಪಾಸಾಗ್ತೆನಿ. ಮತ್ತೆ ನಂದು ಎಂಟನತ್ತೆವರೆಗೂ ಸಂಸ್ಕೃತ. ಅದರ ಬೇಸ್ ಮ್ಯಾಲೆ B.A ಸಂಸ್ಕೃತ ಆಗಿದೆ. M.A. ಫಿಲೋಸಫಿ ಮುಗಿಸಿದಿನಿ. ಮೈಸೂರು ಯುನಿವರ್ಸಿಟಿಯಿಂದ ಪಿಎಚ್ ಡಿಗೆ ಪ್ರಯತ್ನ ಮಾಡ್ತಾ ಇದ್ದಿನಿ. ಅದರ ಮ್ಯಾಲ ನನಗ ಜಾಬ್ ಸಿಗಬಹುದು ಅಂತ ಆಸೆ ಅದ. ಪಿಯುಸಿ ಹಂಗ ಬರದಿನಿ. ನಾನು ಐಳಗೋಳರಾಂವ, ಸಂಸ್ಕೃತದ ಬಗ್ಗೆ ಒಲವಿತ್ತ” ಎಂದು ನಾನು ಯಾಕೆ ಸಂಸ್ಕೃತ ಓದಿದ್ರಿ ನಮ್ಮ ಕಡೆ ಇದರ ಬಗ್ಗೆ ಕಾಳಜಿಯಿಲ್ಲ ಎಂದು ಕೇಳಿದ್ದಕ್ಕೆ ಹಿಂಗ್ ಉತ್ತರ ಕೊಟ್ಟಿದ್ರು. ಅರೆ ವಾವ್!!! ಅಂದಿತ್ತು ಮನ. ನೋಡಿದ್ರೆ ಎಕ್ಸ್ ಟರ್ನಲ್ ಇದ್ರೂ ಏನೇನ್ ಡಿಗ್ರಿ ಮಾಡಿಕೊಂಡಿದ್ದಾರೆ ಅನಿಸಿತ್ತು. ರೂಮ್ ಒಳ ಬಂದ ಕೂಡಲೇ ಯಾಕ್ ಲೇಟ್ ಅಂದಾಗ ಅಲ್ಲೊಬ್ಬ್ರ ತೀರಿಕೊಂಡಿದ್ರ ಅನ್ನೋದರ ಉತ್ತರ ನನಗ ಸಿಕ್ಕಿತ್ತು. ” ಆಯ್ತು ಕ್ವೆಶನ್ ಪೇಪರ್ ಮತ್ತು ಆನ್ಸರ್ ಪೇಪರ್ ಇಡ್ರಿ” ಅಂದು ಅನುಮತಿ ಕೊಟ್ಟೆ. ಸರಸರನೆ ರೂಮ್ ನಿಂದ ಹೊರಗೆ ಹೋದರು.

 12:50ಆಗಿತ್ತು. ಇನ್ನೇನು ಬರೀ ನಲವತ್ತು ನಿಮಿಷ ಅಂದ್ರೆ ಮತ್ತೊಬ್ಬ ಎದ್ದು “ಪೇಪರ್ ತಗೊಳ್ಳಿ ಮೇಡಂ” ಅಂದ. ನಾನು ಮತ್ತದೇ ಪಲ್ಲವಿ ಇನ್ನೊಂದಿಷ್ಟು ಬರಿಯೆಂದು ಹಾಡಿದೆ.” ಇಲ್ಲ ಮೇಡಂ ನನಗೆ ಸ್ವಲ್ಪ ಹುಷಾರಿಲ್ಲ. ಓದಿದ್ದ ಅಷ್ಟನ್ನೂ ಬರದೆನಿ. ಪಾಸಾಗ್ತಿನಿ” ಅಂದ. ಅವನು ಹೇಳಿದ ಹಾಗೆ ನಮಗೆಲ್ಲಾ ಸ್ವಲ್ಪ ಶೆಕೆ ಎನಿಸಿದರೆ ಆತ ಸ್ವೆಟರ್ ಹಾಕಿದ್ದ.ವೀಕ ಅನಿಸಿದ. ” ಯಾಕ್ ಎಕ್ಸ್ಟ್ರನಲ್ ಎಕ್ಜಾಂ”ಅಂದ್ರ,”ಹತ್ತನತ್ತೆ ಆದ ನಂತರ ದೊಡ್ಡಪ್ಪನ ಅಗ್ರಿಕಲ್ಚರ್ ಆಫೀಸ್ನಲ್ಲಿ ಕುಳಿತು ಅಲ್ಲಿಯ ಎಲ್ಲಾ ವ್ಯವಹಾರ ಕಲಿತೆ. ಕೃಷಿಕರಿಗೆ ಬೇಕಾದ ಎಲ್ಲ ಸಾಮಾನುಗಳ ಮಾಹಿತಿ, ಉಪಯೋಗ ಅವರಿಗೆ ಹೇಳುವುದರಲ್ಲಿ ಬ್ಯೂಜಿ ಆದೆ. ಹೀಗಾಗಿ ಕಾಲೇಜಿಗೆ ಹಚ್ಚದೆ ನೇರವಾಗಿ ಪಿಯುಸಿ ಎಕ್ಸಾಮ್ ಕಟ್ಟಿದಿನಿ” ಅಂದ. ಅವನದು ಅವಶ್ಯಕ ಸಹಿ, ಪೇಪರ್ ಪಡೆದು ಕಳುಹಿಸಿದೆ.

3:15 ನಿಮಿಷದ ಸುಪರ್ ವಿಜನ್ ಕೆಲಸದಲ್ಲಿ ಕೊನೆಗೆ 4ವಿದ್ಯಾರ್ಥಿಗಳು ಇದ್ದರು. ಅವರು ಸಂಪೂರ್ಣವಾಗಿ ಮುಗಿಯುವವರೆಗೂ ಬರೆದು ಪೇಪರ್ ಕೊಟ್ಟರು. ಪೇಪರ್ ಕಲೆಕ್ಟ್ ಮಾಡಿ ಹೊರ ಬರುವಾಗ ಒಬ್ಬ “ಮೇಡಮ್ ಮೊದಲ್ ಹುಡುಗ ಹೋದನಲ್ರೀ, ಆತ ಪ್ರತಿ ಎಗ್ಜಾಂ ನನ್ ಮುಂದ ಬಂದಾನ್ರೀ. ಯಾವ್ ಪೇಪರ್ರೂ ಏನೂ ಬರೆದಿಲ್ಲ. ಕರೆಕ್ಟ 11:30 ಗೆ ಹೊರಗ ಹೋಗಿದಾನ. ಯಾಕಾದ್ರೂ ರೊಕ್ಕ ಹಾಕಿ ಪೇಪರ್ ಕಟ್ಟತಾರೋ ದೇವರಿಗೇ ಗೊತ್ತ. ಎಲ್ಲಾ ವೇಸ್ಟ್ ನೋಡ್ರಿ” ಅನ್ಕೊಂತ ನನ್ನ ಜೊತೆ ಬಂದ.”ಹುಃ ,ಹೌದು ನಿಜ. ನೀವು ಏನ್ ಮಾಡ್ಕೊಂಡಿದೀರಿ?” ಅಂದಾಗ “ನಾನು ಡಿಪ್ಲೊಮಾ ಮೆಕ್ಯಾನಿಕಲ್ ಇಂಜಿನಿಯರ್, ಪುಣೆಯಲ್ಲಿ ವರ್ಕ್ ಮಾಡ್ತಿನಿ. ಮನೆಯಿಂದ ದೂರ ಇದ್ದು ಬೇಜಾರಾಗೆದ್ರಿ. ಪಿಯುಸಿ ಸೆಕೆಂಡ್ ಇಯರ್ ಮಾಡ್ಕೊಂಡು ಡಿಗ್ರಿ ಮಾಡ್ಕೊಂಡು ಇಲ್ಲೆ ಕರ್ನಾಟಕದಲ್ಲೆ ಏನಾದ್ರೂ ಕೆಲಸ ಮಾಡಬೇಕೆಂದು ಎಕ್ಸಾಂಗೆ ಬಂದೆ” ಎಂದ. ಆತ 10:15 ರಿಂದ 1:30 ರವರೆಗೆ ತಲೆ ಕೆಳ ಹಾಕಿ ಬರೆದ ವ್ಯಕ್ತಿ. ರೂಮ್ ತೆರೆದು ಹೋಗುವುದರಲ್ಲಿ ಉಳಿದಿದ್ದ ಈ 4 ಜನ ನಿಜಕ್ಕೂ ಗಂಭೀರದಿಂದ ಪೇಪರ್ ಬರೆದುಕೊಟ್ಟಿದ್ದರು.

ಎಕ್ಸ್ಟ್ರರ್ನಲ್ ಎಗ್ಜಾಂ ಕೆಲವರಿಗೆ ಶಿಕ್ಷೆಯಾಗಿದ್ದರೆ ಇನ್ನೊಬ್ಬರಿಗೆ ಗಂಭೀರ ವಿಷಯವಾಗಿದ್ದು, ಸ್ವತಃ ಓದಿ, ತಿಳಿದುಕೊಂಡು ಬರೆಯುವ ಜವಾಬ್ದಾರಿ ಅವರ ಮೇಲಿತ್ತು. ದುಡ್ಡಿನ ಮಹತ್ವವೇ ತಿಳಿಯದೇ ಪರೀಕ್ಷೆ ಕಟ್ಟಿ, ಎನ್ನನ್ನೂ ಓದದೇ ಹಾಗೆ ಎಗ್ಜಾಂ ಹಾಲ್  ತೊರೆಯುವುದು, ಯಾವ ಉದ್ದೇಶ ಇಟ್ಟುಕೊಂಡು ಹಣ ವ್ಯಯಿಸಿದರಂತಾ ತಿಳಿಯಲ್ಲ. ಅದೇ ವೇಳೆ ಜವಾಬ್ದಾರಿ ಅರಿತು ಸ್ವತಃ ಓದಿ,ನೆನಪಿದ್ದಷ್ಟು ಬರೆದವರು ಜೀವನವನ್ನು ಅರ್ಥ ಮಾಡಿಕೊಂಡವರೆಂಬುದು ತಿಳಿಯುತ್ತದೆ. ಅರಿತು ನಡೆದವರಿಗೆ ಎಲ್ಲವೂ ಸರಳ ಅನ್ನೋದು ಎಚ್ಚರಿಸಿದಂತಿತ್ತು.

‍ಲೇಖಕರು avadhi

February 21, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಮಲ್ಲಿಕಾರ್ಜುನ ಶೆಲ್ಲಿಕೇರಿ

    ಬಹುಶಃ ಇಂಥಾ ಜೋಗಿಗಳು ಎಲ್ಲಾ ಕಾಲಕ್ಕೂ ಇರುವಂತವರೆ. ಯಾಕೆಂದರೆ ನಾವು ಪಿ ಯು ಸಿ ಬರೆಯುವ ವೇಳೆ ಇಂಥ ಜೋಗಿಗಳು ಇದ್ದರು. ಬೆರಳೆಣೆಯಷ್ಟು ಜನ ಮಾತ್ರ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರೆ ಬಹಳಷ್ಟು ಜನ ಮನೆಯಲ್ಲಿನ ಒತ್ತಾಯಕ್ಕೊ ಅಥವಾ ಪಿ ಯು ಸಿ ಆದ್ರೆ ನೌಕರಿ ಸಿಗಬಹುದೆಂಬ ದೂರಿನಾಸೆಗೂ ಬರುತ್ತಿದ್ದರಾದ್ದರಿಂದ ನಡು ಮಧ್ಯೆ ಎಗ್ಜಾಂ ಹಾಲ್ ತೊರೆದು ಹೋಗುವ ಜೋಗಿಗಳೆ. ಸ್ವಾನುಭವ ಆದರೂ ಪ್ರಬಂಧ ರೂಪದಲ್ಲಿ ಓದಿಸಿಕೊಂಡು ಹೋಗುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: