ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ವಿ ಶಶಿಭೂಷಣ ರಾಜು ಕವಿತೆ- ಬದಲಾಗಲೇ ಇಲ್ಲ!..

ಎಂ ವಿ ಶಶಿಭೂಷಣ ರಾಜು

ಹುಚ್ಚು ಮನಸಿನ ಹದ್ದು ಮೀರಿದ
ವಿನಾಶಗಳ ಕಂಡು
ಕೆಚ್ಚು ತುಂಬಿದ ಎದೆಯೊಳಗೆ ಸುರಿದ
ಭಯ ಆತಂಕಗಳು ಬೆಳೆದು
ಸಾಗುವ ದಾರಿಗಳ ತಡೆದು
ಮೆದುಳು ತಿರಿಚಿದರೂ
ಬದಲಾಗಲೇ ಇಲ್ಲ

ಅಷ್ಟ ಐಶ್ವರ್ಯಗಳ, ಕನಸನು ತೂರಿ
ಇಷ್ಟಮಳೆಯ ಆಗಸವ ತೋರಿ
ರಂಗು ರಂಗಿನ ಕಾಮನಬಿಲ್ಲನು ಮೂಡಿಸಿ
ಝರ್ರನೆ ಮೇಲಕೆ ಎತ್ತಿ
ಆಡುಮಣೆಯಲಿ ಆಡಿಸಿ
ಕಂದಕಗೆ ಜಾರಿಸಿದರೂ
ಬದಲಾಗಲೇ ಇಲ್ಲ

ಹಿಗ್ಗುವುದು ತಬ್ಬಿದಾಗ
ಕತ್ತನು ಮೇಲೆತ್ತಿ ಜಂಬದಿಂದ ಜಗ ನೋಡುವುದು
ಸ್ವರ್ಗಕ್ಕೆ ಮೂರೇಗೇಣು ಎಂದು
ಇರದ ಮೆಟ್ಟಿಲೇರುವುದು,
ಮರೆತು ಎಲ್ಲವ, ಆಮೇಲೇರಿದಾಗ
ಸರಕ್ಕನೆ ಬಿಟ್ಟ ಕೈಯಿಂದ
ಪಾತಾಳ ಜಾರಿದರೂ
ಬದಲಾಗಲೇ ಇಲ್ಲ

ಇಲ್ಲಿಯ ಸುಖವ ಮೂದಲಿಸಿ
ಅಲ್ಲೆಲ್ಲೋ ಇರುವ ಸುಖಕ್ಕೆ ಧಾವಿಸುವುದು
ಇಲ್ಲಿಯ ತೊರೆಯ ನೀರಿಗೆ ಹೀಗೆಳೆದು
ಅಲ್ಲಿಯ ಕಲ್ಲು ಕುಟ್ಟುವುದು
ಜಿನುಗಿದ ಪಸೆಗೆ ಹಂಬಲಿಸಿ
ದಾಹವನದಿಮಿಡಿದು, ಗಂಟಲು ಒಣಗಿದರೂ
ಬದಲಾಗಲೇ ಇಲ್ಲ

ಎಲ್ಲವೂ ತೆರೆದು ಬಯಲಾದರೂ
ಸಲ್ಲುವ ಬಯಕೆಗೆ ಕಾತರಿಸಿ
ದಾರಿಗುಂಟ ಜಾರಿದ ಸುಖಗಳ ನೆನಸಿ
ತಪ್ಪಿಗೆ ಪಶ್ಚಾತಾಪ ಪಟ್ಟು
ಒಪ್ಪಿತ ಜೀವನ ನಡೆಸಿದರೂ
ಮತ್ತೆಳೆಯುವ, ಜಗವ ಕಂಡು
ಬದಲಾಗಲೇ ಇಲ್ಲ

‍ಲೇಖಕರು Admin

7 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading