ಎಂ ನಾಗರಾಜ ಶೆಟ್ಟಿ ಕಂಡಂತೆ ‘ಪಾಲಾರ್’

                     ʼಪಾಲಾರ್‌ʼ ಎಂಬ ಪ್ರತಿರೋಧದ ಗಟ್ಟಿದನಿ

   ಎಂ ನಾಗರಾಜ ಶೆಟ್ಟಿ

ಮರ್ಯಾದೆಗೇಡು ಹತ್ಯೆಗಳಿದ್ದರೂ ʼಸೈರಾಟ್‌ʼ ಚಿತ್ರದಂತಲ್ಲ; ʼಜೈ ಭೀಮ್‌ʼ ರೀತಿಯಲ್ಲಿ ಕಸ್ಟಡಿ ಡೆತ್‌ ಕೂಡಾ ಇಲ್ಲ, ʼಪಾಲಾರ್‌ʼ ಸಿನಿಮಾ ಜಾತಿ ಸಂಘರ್ಷವನ್ನು ಹೇಳುವ ರೀತಿಯೇ ಬೇರೆ. ಇದು ದಲಿತರ ನೋವು, ಭೂಮಿಯ ಹಕ್ಕು, ಮಹಿಳೆಯರ ಅಸಹಾಯಕತೆ ಇವೆಲ್ಲದರೊಂದಿಗೆ ಜಾತಿ ಅಹಂಕಾರವುಳ್ಳವರ ಕತೆಯಾಗಿದೆ.  

ಅಸಮಾನತೆಯನ್ನು ತೋರಿಸುವ,ಜಾತಿ ಸಮಸ್ಯೆಯನ್ನು ಎತ್ತಿಕೊಂಡ ಸಿನಿಮಾಗಳು ಕನ್ನಡದಲ್ಲಿ ಬಹಳಷ್ಟು ಕಡಿಮೆ. ಸಂಸ್ಕಾರ, ಹೇಮಾವತಿ ಮುಂತಾದ ಕೆಲವು ಅಪವಾದಗಳಿರಬಹುದು. ತಮಿಳು, ಮಲಯಾಳಂ, ಮಾರಾಠಿ ಚಿತ್ರರಂಗ ಇಂತಹ ಚಿತ್ರಗಳಿಂದ ಹೆಸರು ಮಾಡುತ್ತಿವೆ. ಆ ಭಾಷೆಯ ಚಿತ್ರಗಳನ್ನು ನೋಡಿ ಮೆಚ್ಚುವ ಚಿತ್ರಪ್ರೇಮಿಗಳು ಕನ್ನಡದಲ್ಲಿ ಇಂತಹ ಚಿತ್ರಗಳ ಕೊರತೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ. ಜೀವಾ ನವೀನ್‌ ʼಪಾಲಾರ್‌ʼ ಚಿತ್ರ ಮೂಲಕ ದೊಡ್ಡ ಮಟ್ಟದಲ್ಲಿ ಈ ಕೊರತೆಯನ್ನು ನೀಗಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ.

ತಳ ಸಮುದಾಯದ ಜನರ ಮೇಲೆ ದೇಶದಲ್ಲಿ ಒಂದಿಲ್ಲೊಂದು ಕಡೆ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಅವಿಭಜಿತ ಕೋಲಾರ ಜಿಲ್ಲೆ ಇದಕ್ಕೆ ಹೊರತಲ್ಲ. ಕಂಬಾಲಪಲ್ಲಿಯ ದಲಿತರ ಸಜೀವ ದಹನ, ನಾಗಲಾಪಲ್ಲಿಯಲ್ಲಿ ತಾಯಿ ಮಕ್ಕಳ ಕೊಲೆ, ಅನಸೂಯಮ್ಮನ ಅತ್ಯಾಚಾರದಂತಹ ಘಟನೆಗಳು ಕೋಲಾರ ಜಿಲ್ಲೆಯ ಕಪ್ಪು ಚುಕ್ಕೆಗಳು. ʼಪಾಲಾರ್‌ʼ ಸಿನಿಮಾದ ವಸ್ತು ಕೂಡಾ ಅದೇ ಜಿಲ್ಲೆಗೆ ಸಂಬಂಧಪಟ್ಟಿದ್ದು.

ಬಲಾಢ್ಯರಿಗೆ ರಾಜಕೀಯ ಅಧಿಕಾರ ದಕ್ಕಲು ದಲಿತರು ಬೇಕು, ಸರಕಾರ ನೀಡಿದ ಭೂಮಿಯನ್ನು ದಲಿತರು ಅನುಭವಿಸುವಂತಿಲ್ಲ, ದಲಿತ ಯುವಕ ಮೇಲ್ಜಾತಿಯ ಹೆಣ್ಣನ್ನು ಮದುವೆಯಾದರೆ ಅವನನ್ನು ಹತ್ಯೆ ಮಾಡಿದರಷ್ಟೇ ಸಮಾಧಾನ. ಇಷ್ಟೇ ಅಲ್ಲ, ಪ್ರಾಯಕ್ಕೆ ಬಂದ ಗಂಡು ಮಕ್ಕಳನ್ನು ಕಣ್ಣೆದುರೇ ಕಳೆದುಕೊಳ್ಳುವ ಅಪ್ಪ, ಅಮ್ಮ. ಮದುವೆಯಾದ ದಿನವೇ ಗಂಡನ ಕೊಲೆಗೆ ಸಾಕ್ಷಿಯಾಗುವ ಹೆಣ್ಣುಮಗಳು. ಇಂತಹ ಅಸಹಾಯಕ, ನೋವಿನ, ಆಕ್ರೋಶದ ಪರಿಸ್ಥಿತಿಯನ್ನು ಕಾಣಿಸುವ ಸಿನಿಮಾದಲ್ಲಿ ಬದುಕು ಕಟ್ಟಿಕೊಳ್ಳುವ  ದಾರಿಯೂ ಇದೆ.

ಚಿತ್ರದ ನಾಯಕಿ ರತ್ನಾ, ನಡುರಾತ್ರಿಯಲ್ಲಿ ಕೊಲ್ಲಲು ಹೊರಟು ನಿಂತ ಮಾವನಿಗೆ “ಪ್ಲಾನ್‌ ಮಾಡೋಣ” ಅನ್ನುತ್ತಾಳೆ. ಮಾವ-ಅತ್ತೆಯೊಂದಿಗೆ ಉಳುಮೆ ಮಾಡಿ, ಬೆಳೆ ಬೆಳೆಯುವ ಸಾಹಸ ಮಾಡುತ್ತಾಳೆ. ಆಕ್ರೋಶ ಆಕೆಯ ಕಣ್ಣುಗಳಲ್ಲಿದೆ. ವಿರೋಧ ಮಾತುಗಳಲ್ಲಿವೆ.

ಚಿತ್ರದ ನಾಯಕ ಮುನಿರಾಜು ಹಾಡುಗಾರ, ಕನಸುಗಾರ. ತನ್ನ ತಪ್ಪಿಗೆ ಶಿಕ್ಷೆಯನ್ನೂ ಅನುಭವಿಸುತ್ತಾನೆ.ಆತ ಮಾಡಲಾಗದ್ದನ್ನು ರತ್ನ ಪೂರೈಸುತ್ತಾಳೆ; ಅತ್ತೆ, ಮಾವನಿಗೆ ಅವಳೇ ಆಸರೆ.

ಎಲ್ಲವನ್ನೂ ಕಿತ್ತುಕೊಂಡೂ ಬಾಳಲು ಬಿಡದ ಮೇಲ್ಜಾತಿಯ ಜಮೀನ್ದಾರ. ಕಳೆದುಕೊಂಡ ಜನ ಸಡ್ಡು ಹೊಡೆಯುತ್ತಾರೆ,ಸಂವಿಧಾನದ ತೋರಿದ ಮಾರ್ಗದಲ್ಲಿ ನಡೆದು ಹಕ್ಕುಗಳನ್ನು ಉಳಿಸಿಕೊಳ್ಳುವ ಮಾರ್ಗವನ್ನೂ ಹುಡುಕುತ್ತಾರೆ. ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಮಹಿಳೆ ಪರಿಹಾರ ಹುಡುಕುತ್ತಾಳೆ. ಶುರುವಲ್ಲಿ ಹೆಂಡತಿಯ ಕೆನ್ನೆಗೆ ಬಾರಿಸುವ ಮೇಲ್ಜಾತಿಯ ಗಂಡಿನ ಅಹಂಕಾರವನ್ನು ಕೊನೆಗೊಳಿಸುವುದು ಹೆಣ್ಣೇ. ಚಿತ್ರ ದಲಿತ ಶಕ್ತಿಗೆ ನಾರಿಶಕ್ತಿಯನ್ನು ಬೆಸೆಯುತ್ತದೆ.

ಸಾಮಾನ್ಯ ಚಿತ್ರಗಳಿಗಿಂತ ಭಿನ್ನವಾಗಿ ʼಪಾಲಾರ್‌ʼನಲ್ಲಿ ಮದುವೆಯ ಆಡಂಬರಕ್ಕಿಂತ ಮರಣಕ್ಕೆ ಹೆಚ್ಚು ಸಿದ್ಧತೆಯಿದೆ. ಸರ್ಕಾರಿ ಅಧಿಕಾರಿಯ ಜೊತೆಯಲ್ಲಿ ಉಣ್ಣಲು ಕೂತವರು ಆತ ದಲಿತನೆಂದು ತಿಳಿದಾಗ ಎದ್ದು ಬಿಡುತ್ತಾರೆ. ಇವೆಲ್ಲವೂ ಕಟ್ಟು ಕತೆಯಂತಿಲ್ಲ; ಇಲ್ಲಿ ನಡೆಯುತ್ತಿರುವುದು ಹೀಗೆಯೇ ಎನ್ನುವುದನ್ನು ಚಿತ್ರ ತೋರಿಸುತ್ತದೆ.

ಕೋಲಾರ ಜಲ್ಲೆಯವರೇ ಆದ ನಿರ್ದೇಶಕ ಜೀವಾ ನವೀನ್‌ ಕಂಡುಂಡ ಸತ್ಯವನ್ನು ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆ. ಚಿತ್ರೀಕರಣ ಹೊರಾಂಗಣದಲ್ಲೆ ನಡೆದಿದ್ದುದರಿಂದ ಚಿತ್ರಕ್ಕೆ ದಟ್ಟವಾದ ಪ್ರಾದೇಶಿಕತೆ ದಕ್ಕುತ್ತದೆ. ಗುಡ್ಡ, ಬಂಡೆ, ಕೊಳ, ಹೊಲಗಳ ಕೋಲಾರ ಜಿಲ್ಲೆಯ ಗಡಿಭಾಗದ ಸುಂದರ ಪ್ರಕೃತಿಯ ದರ್ಶನವೂ ಇಲ್ಲಿದೆ. ಆದರೆ ಕ್ಯಾಮರಾ ಕೆಲಸದಲ್ಲಿ ಇನ್ನಷ್ಟು ಪರಿಶ್ರಮದ ಅಗತ್ಯ  ಕಾಣುತ್ತದೆ.

ತೆಲುಗು ಮಿಶ್ರಿತ ಪ್ರಾದೇಶಿಕ ಸೊಗಡಿನ ಕನ್ನಡ ಸೊಗಸಾಗಿದೆ. ಅಲ್ಲಿಯವರೇ ಆದ ತಿಲಕ್‌ರಾಜ್‌ ಮತ್ತು ಉಮಾ ವೈ ಜಿ ಸಂಭಾಷಣೆ ಹೇಳುವ ರೀತಿ ತುಂಬಾ ಚೆನ್ನಾಗಿದೆ.ಹಾಸ್ಯಕ್ಕೆಂದೇ ಪ್ರತ್ಯೇಕ ಪ್ರಸಂಗಗಳನ್ನು ಸೃಷ್ಟಿಸದೆ ಆಡು ಮಾತಲ್ಲೆ ಕಚಕುಳಿಯಿಡುತ್ತಾರೆ. ಹಾಡುಗಳಲ್ಲಿ ಅತಿರೇಕವಿಲ್ಲ. ಕೆಲವೆಡೆ ಹಿನ್ನೆಲೆ ಸಂಗೀತ ಅಗತ್ಯಕ್ಕಿಂತ ಹೆಚ್ಚು ಸದ್ದು ಮಾಡುತ್ತದೆ.

ಚಿತ್ರದ ನಟನಟಿಯರಲ್ಲಿ ಹೆಚ್ಚಿನವರು ಹೊಸಬರು. ತೆಲುಗು ಚಿತ್ರವೊಂದರಲ್ಲಿ ಈಗಾಗಲೇ ನಟಿಸಿರುವ ನೀನಾಸಂ ಪದವೀಧರೆ ಉಮಾ ವೈಜಿಗೆ ಪ್ರಮುಖ ಪಾತ್ರವಿದೆ. ಪಾತ್ರಕ್ಕೆ ಸಮರ್ಪಕವಾಗಿ ಹೊಂದಿಕೊಳ್ಳುವ ಅಭಿನಯ ಅವರದು. ಮಧ್ಯಂತರದ ನಂತರ ಚಿತ್ರವನ್ನು ಅವರೇ ಮುನ್ನಡೆಸುತ್ತಾರೆ.

ನಾಯಕ ನಟ ತಿಲಕ್‌ರಾಜ್‌  ಎನೆಎಸ್‌ಡಿ ಪದವೀಧರ. ಮೊದಲ ಚಿತ್ರದಲ್ಲೆ ಪರಿಣಿತನಂತೆ ನಟಿಸಿದ ತಿಲಕ್‌ರಾಜ್‌ಗೆ  ಉತ್ತಮ ಭವಿಷ್ಯ ಹಾರೈಸಬಹುದು. ಜಮೀನ್ದಾರನ ಪಾತ್ರದ ಮಹೇಶ್‌ ಬಾಬು ಗಮನ ಸೆಳೆಯುತ್ತಾರೆ. ಅವಕಾಶ ದೊರೆತರೆ ಕನ್ನಡಕ್ಕೆ ಮತ್ತೊಬ್ಬ ಒಳ್ಳೆಯ ಖಳನಾಯಕನಾಗುವ ಸಾಮರ್ಥ್ಯವಿದೆ. ಚಿತ್ರತಂಡ ಪಾತ್ರಕ್ಕೆ ಹೊಂದುವ ನಟವರ್ಗವನ್ನು ಆಯ್ಕೆ ಮಾಡಿ ಸೂಕ್ತ ಅಭಿನಯ ಕೊಡಿಸುವಲ್ಲಿ ಸಫಲವಾಗಿದೆ.

ʼಪಾಲಾರ್‌ʼ ಜೀವಾ ‌ನವೀನರ ಮೊದಲ ಚಿತ್ರವಾದ್ದರಿಂದ ಕೊರತೆಗಳಿಲ್ಲದಿಲ್ಲ. ಹೇಳಲು ಅವರಿಗೆ ಬಹಳಷ್ಟಿದೆ ಎನ್ನುವುದು ಚಿತ್ರ ನೋಡುವಾಗ ಅರಿವಾಗುತ್ತದೆ. ಅದನ್ನೆಲ್ಲ ಒಂದೇ ಬಾರಿ ಹೇಳಲು ಅವಸರಿಸದೆ, ಸಂಯಮ ವಹಿಸಿದ್ದರೆ ಚೆನ್ನಾಗಿತ್ತು. ಚುರುಕಾದ ಸಂಕಲನದ ಕೊರತೆ, ಚಿತ್ರದ ಕೊರತೆಯೂ ಹೌದು. ಮುಖ್ಯವಾಗಿ ಚಿತ್ರದ ಅವಧಿಯನ್ನು ಕಡಿತ ಮಾಡಿ, ಅನವಶ್ಯಕ ದೃಶ್ಯಗಳಿಗೆ ಕತ್ತರಿ ಆಡಿಸಿದ್ದರೆ ಖಂಡಿತಾ ಪರಿಣಾಮಕಾರಿಯಾಗುತ್ತಿತ್ತು.

ಕತೆ, ಚಿತ್ರಕತೆ, ಸಂಬಾಷಣೆ ಮತ್ತು ನಿರ್ದೇಶನದ ಹೊಣೆ ಹೊತ್ತ ಜೀವಾ ನವೀನ್‌ರವರ ಶ್ರಮ ಚಿತ್ರದಲ್ಲಿ ಎದ್ದು ಕಾಣುತ್ತದೆ. ಹೆಸರಾಂತ ನಿರ್ದೇಶಕರು ಧೈರ್ಯಮಾಡದ ಸಾಮಾಜಿಕ ಕಳಕಳಿಯ ವಿಷಯವನ್ನು ಅವರು ಎತ್ತಿಕೊಂಡಿದ್ದಾರೆ. ಈ ಚಿತ್ರ ಮೂಲಕ ಭರವಸೆ ಮತ್ತು ನಿರೀಕ್ಷೆಗಳನ್ನು ಹುಟ್ಟಿಸಿದ್ದಾರೆ. ಅವರ ಶ್ರಮಕ್ಕೆ ತಕ್ಕ ಪ್ರೋತ್ಸಾಹ ದೊರೆತರೆ ಇನ್ನಷ್ಟು ನೀಲಿ ಹೂಗಳು ಅರಳುತ್ತವೆ.

‍ಲೇಖಕರು avadhi

February 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: