ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ನಾಗರಾಜ ಶೆಟ್ಟಿ ಓದಿದ ‘ರಾಗಿತೆನೆ’

ಹೆತ್ತೊಡಲ ಕಟುಮಧುರ ಗೀತೆ ʼ ರಾಗಿತೆನೆ ʼ  

-ಎಂ ನಾಗರಾಜ ಶೆಟ್ಟಿ

ಜಿ ಎನ್‌ ಧನಂಜಯ ಮೂರ್ತಿಯವರ ʼ ರಾಗಿತೆನೆʼ ಇತ್ತೀಚಿನ ದಿನಗಳ ಓದಿನಲ್ಲಿ ನನ್ನ ಮನಸ್ಸನ್ನು ತೀವ್ರವಾಗಿ ಕಲಕಿದ ಪುಸ್ತಕ. ಕೃತಿಯ ಹೆಸರು ಮೊದಲು ಆಕರ್ಷಣೆ ಹುಟ್ಟಿಸದಿದ್ದರೂ ʼ ಬುಡಕಟ್ಟು ಹೆಣ್ಣೊಬ್ಬಳ ಬಾಳಗಾಥೆʼ ಎನ್ನುವ ಉಪಶೀರ್ಷಿಕೆ ಓದಲು ಹಚ್ಚಿತು. ʼ ಅವ್ವನ ಮತ್ತು ಅವಳ ವಾರಿಗೆಯವರ ಜನ್ಮದಿನ ಇವತ್ತಿಗೂ ತೀರ್ಮಾನವಾಗದೆ ಉಳಿದಿರುವ ಕುಮಾರವ್ಯಾಸನ ಕಾಲದಂತೆ ʼ ಎನ್ನುವ ಮೊದಲ ವಾಕ್ಯದಿಂದ ʼ ಅವಳಿಗೆ ಒಂದು ದಿನವೂ ನನ್ನ ಕನಸಿನಲ್ಲಿ ಬರುವ ಇಚ್ಛೆಯಿಲ್ಲ, ಸತ್ತಾಗ ಬಾಯಿಗೆ ನೀರು ಬಿಡದ ಮಗನ ಕನಸಲ್ಲಿ ಅವಳಾದರೂ ಯಾಕೆ ಬರಬೇಕು?ʼ ಎನ್ನುವ ಕೊನೆಯ ವಾಕ್ಯದವರೆಗೂ ಓದಿ ಮುಗಿಸದೆ ಪುಸ್ತಕ ಕೆಳಗಿಡಲಾಗಲಿಲ್ಲ. ಲೇಖಕರ ಅವ್ವನ ಬಾಳಕತೆಯ ಸೊಗಸಾದ ನಿರೂಪಣೆಯ ನೂರಿಪ್ಪತ್ತಮೂರು ಪುಟಗಳ ಈ ಕಿರು ಪುಸ್ತಕ ಓದುವವರಲ್ಲೂ ಒಂದಲ್ಲೊಂದು ರೀತಿಯಲ್ಲಿ ತಾಯಿಯ ನೆನಪು ತರುವಂತಿದೆ.

ಬಿಸಿಲಿಗೆ ಅಂಜದೆ, ಮಳೆಗಾಗಿ ಕಾದು, ಉದುರು ಮಳೆ ಬಂದರೂ ಚೈತನ್ಯ ಆವಾಹಿಸಿಕೊಂಡು ಪ್ರತಿಕೂಲ ಪರಿಸ್ಥಿತಿಯಲ್ಲೂ ತೆನೆ ಬಿಟ್ಟು ಹಿಟ್ಟು ನೀಡುವ ರಾಗಿಯಂತೆ ಕಷ್ಟ ಕಾರ್ಪಣ್ಯಗಳನ್ನು ಉಂಡ ತಿಮ್ಮಮ್ಮನ ಬಾಳಗಾಥೆಗೆ ʼ ರಾಗಿತೆನೆʼ ಹೆಸರು ಚೆನ್ನಾಗಿ ಹೊಂದುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಅವ್ವನ ಶೋಕಗಾಥೆಯಾಗುವ, ಒಂದು ಸಮುದಾಯದ, ಒಂದು ಕಾಲಾವಧಿಯ ವೃತ್ತಾಂತವನ್ನು ಲೇಖಕರು ಸಣ್ಣ, ಸಣ್ಣ ಕಂತುಗಳಲ್ಲಿ ಪ್ರೀತಿ, ನೋವು ಮತ್ತು ವಿಷಾದದೊಡನೆ ಬೆಸೆಯುತ್ತಾರೆ. ತಾನು ಮಾನವಶಾಸ್ತ್ರವನ್ನು ಓದಿಕೊಂಡಿಲ್ಲ, ಸಮಾಜಶಾಸ್ತ್ರದ ಬಗ್ಗೆ ಸ್ವಲ್ಪ ಆದರವಿದೆ ಎಂದು ಹೇಳಿಕೊಂಡರೂ ಬರೆಹದಲ್ಲಿ ಸಮಾಜ ಶಾಸ್ತ್ರಜ್ಞನ ಚಿಕಿತ್ಸಕ ನೋಟವಿದೆ.

ಅಂಬೇಡ್ಕರ್ ನನಗೆ ದೇಶವೇ ಇಲ್ಲ ಅಂದಿದ್ದರು. ಬುಡಕಟ್ಟಿನವರು ವಾಸಿಸುವ ಹಟ್ಟಿಗಳಿಗೆ ಸ್ವಂತ ಹೆಸರೂ ಇರುವುದಿಲ್ಲ. ಅವರ ಹಟ್ಟಿಯನ್ನು ಪಕ್ಕದ ಹಳ್ಳಿಯ, ಊರಿನ ಮೊದಲಕ್ಷರವನ್ನು ಸೇರಿಸಿ ಹೇಳಬೇಕು. ಕೇತುಮಾರನ ಹಳ್ಳಿಯ ಸಮೀಪ ಇರುವುದರಿಂದ ಇವರ ಹಟ್ಟಿಯ ಹೆಸರು ಕೆ ಗೊಲ್ಲರಹಟ್ಟಿ. ಇಪ್ಪತ್ತೊಂದನೇ ಶತಮಾನದಲ್ಲೂ ಈ ಹಟ್ಟಿಗಳಲ್ಲಿ ರೂಢಿಯಲ್ಲಿರುವ ಮೌಢ್ಯ, ಕಂದಾಚಾರಗಳು ಬೆಚ್ಚುವಂತಿವೆ. ಬೇರೆ ಸಮುದಾಯದವರನ್ನು ಮನೆಗೆ ಸೇರಿಸದ, ತಮ್ಮವರಲ್ಲದ ಮನೆಯಲ್ಲಿ ಉಣ್ಣದ, ಹೆಂಡತಿಯ ಎಂಜಲು ಗಂಡ ಮುಟ್ಟದೇ ಇರುವಂತಹ, ತಪ್ಪಿದರೆ ದಂಡ ಕಟ್ಟಲೇಬೇಕಾದಂತಹ ಅನೇಕ ಕಟ್ಟಳೆಗಳು. ಹೆಣ್ಣನ್ನು ಗಂಡು ಮುಟ್ಟಿ ʼ ಮೂರು ಸಲ ಮುಟ್ಟಿದೆʼ  ಎಂದರೆ ಸಾಕು ಅವಳನ್ನು ಮದುವೆಯಾದಂತೆ; ಮೈನೆರೆದ ಹೆಣ್ಣು ಮಕ್ಕಳು ಒಂದು ವಾರ, ಋತುಮತಿಯಾದರೆ ಐದು ದಿನ- ಬಾಣಂತಿಯರು ತಿಂಗಳ ವರೆಗೆ ಹಟ್ಟಿಯಿಂದ ಹೊರಗಿರುವ ಕಟ್ಟು; ಮೆಟ್ಟಿನಿಂದ ಹೊಡೆಯುತ್ತೇನೆ ಎಂದು ಹೇಳಿದವನಿಗೂ ಹೊಡೆಸಿಕೊಂಡವನಿಗೂ ಸಿಗುವ ಶಿಕ್ಷೆ ಇಂತಹ ಅಮಾನವೀಯ ಆಚರಣೆಗಳು ಯಾವ ಶಿಕ್ಷಣಕ್ಕೂ ಬಗ್ಗದೆ ಇನ್ನೂ ಉಳಿದುಕೊಂಡಿವೆ ಎನ್ನುವುದು ಅಚ್ಚರಿಯನ್ನೂ, ಖೇದವನ್ನೂ ಉಂಟು ಮಾಡುತ್ತವೆ.

ತಿಮ್ಮಮ್ಮ ತನಗೆ ಇಷ್ಟವಿಲ್ಲದಿದ್ದರೂ ʼ ಮುಟ್ಟಿಸಿಕೊಂಡುʼ ಮದುವೆಯಾದವಳು; ಬುಡಕಟ್ಟು ಸಮುದಾಯದ ಗಂಡಾಳ್ವಿಕೆಯಲ್ಲಿ ಗಂಡನ, ಆತನ ತಂದೆಯ ಹೊಡೆತ ಬಡಿತಗಳಿಗೆ ಗುರಿಯಾದವಳು. ಎರಡು ಹೊತ್ತಿನ ಮುದ್ದೆ, ತಲೆಯ ಮೇಲಿನ ಸೂರಿಗೆ ಒದ್ದಾಡಿ, ನೋವಿನಲ್ಲಿ ಬದುಕನ್ನು ಅದ್ದಿ, ಒಡಹುಟ್ಟಿದವರಿಗೆ ಅಕ್ಕರೆ ತೋರಿ, ಮಕ್ಕಳ ಮೇಲೆ ಕರಡಿ ಪ್ರೀತಿ ತೋರಿಸಿದ ಆಕೆಗೆ ಕೊನೆಗಾಲದಲ್ಲೂ ನೆಮ್ಮದಿ ಎನ್ನುವುದು ಮರೀಚಿಕೆಯಾಗುತ್ತದೆ. ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿ ಪಡಬಾರದ ಕಷ್ಟ ಪಡುತ್ತಾಳೆ. ಕ್ಯಾನ್ಸರ್‌ ಗುಣಪಡಿಸಬೇಕಾದ ಆಸ್ಪತ್ರೆಯಲ್ಲಿ ಡಾಕ್ಟರ್‌ಗಳೇ ಜೀವ ಹಿಂಡಿ ಅಂತ್ಯ ಸಮೀಪಿಸುವಂತೆ ಮಾಡುತ್ತಾರೆ. ಆಕೆಯ ಕೊನೆಯ ದಿನಗಳ ದಾರುಣತೆ ಹೃದಯ ಹಿಂಡುತ್ತದೆ. ಇಷ್ಟವಾದವರು ದೂರವಾಗುತ್ತಾರೆ, ಸಾವನ್ನು ಎದುರು ನೋಡುತ್ತಾರೆ. ಮನುಷ್ಯ ಯಾಕೆ ಹೀಗೆ? ತಮಗೆ ನೀಡಿದ ಬೆಂಬಲ, ಸುಖ ಎಲ್ಲವನ್ನೂ ಮರೆತು ಸಾವನ್ನು ಬಯಸುವ ಮನಸ್ಥಿತಿ ಎಂಥದ್ದು ಎಂಬುದು ಚಿಂತೆಗೀಡು ಮಾಡುತ್ತದೆ.

ಅವ್ವನೇ ಸರ್ವಸ್ವವಾಗಿದ್ದರೂ ಅವ್ವನ ಬಾಳನ್ನು ʼ ರಾಗಿತೆನೆʼ ಒಂದು ಬಗೆಯ ನಿರ್ಲಿಪ್ತತೆಯಿಂದ ಕಟ್ಟಿ ಕೊಡುತ್ತದೆ. ಆಕೆಯ ಮೇಲಿನ ಪ್ರೀತಿ, ದೋಷಗಳನ್ನು ಬಚ್ಚಿಡಲು ಹೋಗುವುದಿಲ್ಲ. ತಾಯಿ ಮಗನ ಜಗಳವನ್ನೂ ಮುಚ್ಚಿಡದೆ, ತನ್ನ ತಪ್ಪುಗಳು, ಕೊರೆಯುತ್ತಿರುವ ಅಂತರಾಳದ ನೋವು, ಕೊನೆಗಾಲದ ಸಂಕಟಗಳು ಎಲ್ಲವನ್ನು ಇಟ್ಟುಕೊಂಡೂ ಕರುಣಾಜನಕವಾಗದೆ, ಗಾದೆ ಮಾತು, ಓದಿನ ಉಲ್ಲೇಖಗಳಿಂದ ಬರೆವಣಿಗೆ ಮುದ ನೀಡುತ್ತದೆ. ʼ ಚಿಕ್ಕಪ್ಪ ತೌರಲ್ಲ, ಮದುಕದ ಮರ ನೆರಳಲ್ಲʼ ʼ ಮೇವಿದ್ದ ಮನೆಗೆ ಎತ್ತು ಕೊಡಬೇಕು, ಉಣ್ಣಕ್ಕಿದ್ದ ಮನೆಗೆ ಹೆಣ್ಣು ಕೊಡಬೇಕುʼ ಮುಂತಾದ ಗಾದೆಗಳನ್ನು ಬಳಸಿಕೊಂಡ ರೀತಿಯಲ್ಲಿ ಸೊಗಸಿದೆ. ಕೆಲವೊಮ್ಮೆ ಲೇಖಕರು ತನ್ನ ಸಾಲುಗಳಿಗೆ ತಾನೇ ಮನಸೋತು ಬಲವಂತದಿಂದ ಶಬ್ದಗಳನ್ನೂ ತುರುಕುವುದೂ ಇದೆ. ಶೂಶ್ರೂಷೆ, ತರಭೇತಿ, ವಿಧ್ವಾಂಸ, ಅಚ್ಚಡ, ಅರಿದ ಮುಂತಾದ ಕಿರಿಕಿರಿ ಉಂಟು ಮಾಡುವ ಪದಗಳನ್ನು ಸರಿ ಮಾಡುವ ಅಗತ್ಯವೂ ಇದೆ.

ʼ ರಾಗಿತೆನೆʼ ಆತ್ಮಕತೆ, ಜೀವನ ಚರಿತ್ರೆ ಇತ್ಯಾದಿ ಪ್ರಕಾರಗಳಿಗೆ ಸೇರಿಸಲಾಗದ ವಿಶಿಷ್ಟ ಬಗೆಯ ಕೃತಿ. ಅವ್ವನ ನೆನಪನ್ನು ಎದೆಯಲ್ಲಿ ಕಾಪಿಟ್ಟುಕೊಂಡ ಜಿ ಎನ್‌ ಧನಂಜಯ ಮೂರ್ತಿ ಈ ಪುಸ್ತಕದ ಮೂಲಕ ಆಕೆಯನ್ನು ಅಮರಗೊಳಿಸಿದ್ದಾರೆ. ಸಾಹಿತ್ಯದ ಓದಿನಿಂದ ಅಳು ನುಂಗಿ ನಗುವ ಕಲೆ ನನಗೆ ದಕ್ಕಿತು ಎಂದವರು ಹೇಳುತ್ತಾರೆ. ಈ ಬಾಳಗಾಥೆ ಓದುವವರಿಗೂ ನೋವನ್ನು ಸಹಿಸುವ ಕಲೆ ಸಿದ್ಧಿಸಬಹುದು. ʼಅಹರ್ನಿಶಿʼ ಇಂತಹ ಅಪರೂಪದ ಪುಸ್ತಕವನ್ನು ಪ್ರಕಟಿಸುವ ಮೂಲಕ ತನ್ನ ಗರಿಮೆಯನ್ನು ಹೆಚ್ಚಿಸಿಕೊಂಡಿದೆ.

******

‍ಲೇಖಕರು avadhi

3 February, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading