ಎಂ ಎಸ್ ಮೂರ್ತಿ ಕಾದಂಬರಿ ‘ಬೌಲ್’

ಇರುವಿಕೆ ಮತ್ತು ಆಗುವಿಕೆ…

ಪ್ರೊ ಎನ್ ಮನು ಚಕ್ರವರ್ತಿ

ಒಬ್ಬ ಕಲಾವಿದನಿಗೆ ಅತ್ಯಂತ ಸವಾಲಾದ ಕೆಲಸವೆಂದರೆ ಅಮೂರ್ತ ವಿಚಾರಗಳನ್ನು, ತಾತ್ವಿಕ ಪರಿಕಲ್ಪನೆಗಳನ್ನು, ಅನುದಿನದ ಬದುಕಿನ ವಾಸ್ತವದ ಭೌತಿಕ ಆಯಾಮಗಳನ್ನು ಪ್ರತಿ ಧ್ವನಿಸುವ ಅನುಭವಗಳಾಗಿ ಪರಿವರ್ತಿಸುವುದು. ಕಲಾಕೃತಿಗಳನ್ನು ಗಟ್ಟಿ ಪ್ರತಿಮೆಗಳನ್ನು ಆಧರಿಸಿ ಸಂರಚಿತಗೊಳ್ಳುವ೦ತಹದು. ಅಸ್ಪಷ್ಟ ರೂಪ, ಆಕಾರಗಳಿಗೆ ದಕ್ಕದ ಅಂಶಗಳನ್ನು ನಿರಾಕರಿಸುವ ವ್ಯಕ್ತ ಪರಿಕಲ್ಪನೆಗಳೊಂದಿಗೆ ಕಲಾಕೃತಿಗಳು ಮುಖಾಮುಖಿಯಾಗುತ್ತವೆ. ಒಂದು ಪ್ರತಿಮೆಯ ಅವಲೋಕನವು ವ್ಯಕ್ತಿಯನ್ನು ಭೌತಿಕ ಸತ್ಯದ ಹಲವಾರು ಆಯಾಮಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ.

ಅನೇಕ ಅನುಭಾವಿ, ಪರಿಣಿತ, ಶ್ರೇಷ್ಠ ಕಲಾವಿದರು ಎನಿಸಿಕೊಂಡವರು ಭೌತಿಕ ವಸ್ತುವಿನ ಅಗೋಚರ ಆಯಾಮಗಳನ್ನು ಪ್ರತಿಮೆಗಳ ಮೂಲಕ ಅನಾವರಣಗೊಳಿಸುತ್ತಾರೆ. ತನ್ಮೂಲಕ ವಸ್ತುಗಳೊಂದಿಗೆ ಉಂಟಾಗುವ ಭಾವನೆಗಳು ಮತ್ತು ಹೊಳಹುಗಳೊಂದಿಗೆ ಸಂಬ೦ಧ ಸೃಷ್ಟಿಸುತ್ತಾರೆ. ಈ ಮಾತಿನ ಮುಂದುವರಿಕೆಯಾಗಿ ಗಮನಿಸುವುದಾದರೆ, ಮಾನವ ಜನಾಂಗಕ್ಕೆ ಸಂಬ೦ಧಿಸಿದ ಸ್ವಪ್ರಜ್ಞೆಯು ಸುತ್ತಣ ಜಗತ್ತಿನಿಂದ ಸ್ವತಂತ್ರವಾದುದಲ್ಲ ಮತ್ತು ಖಚಿತವಾಗಿ ಮಾನವ ಪ್ರಜ್ಞೆಯು ಭೌತಿಕ ಅಸ್ತಿತ್ವದಲ್ಲಿ ಸಾಕಾರಗೊಳ್ಳುವಂತಹುದು ಎಂದು ಅರಿಯಬಹುದು. ಹಾಗಾಗಿ ಬದುಕಿನ ಅರ್ಥದ ಹುಡುಕಾಟಕ್ಕೆ ವೈಯಕ್ತಿಕ ವ್ಯಷ್ಠಿಯ ಮಹತ್ವವನ್ನು ಗ್ರಹಿಸಿಲು ನಮ್ಮ ಸುತ್ತಲ ಸಮಾಜದ ಬಹುತ್ವದ ಅವಿರ್ಭಾವವನ್ನು ಗ್ರಹಿಸುವುದು ಅತ್ಯಂತ ಅಗತ್ಯವಾದ ಅಂಶ.
ಭೌತಿಕತೆಗೆ ಪ್ರಾಶಸ್ತ್ಯ ನೀಡದ, ಸಹಜತೆಗೆ ಹೊರತಾದ ಯಾವುದೇ ಅತೀಂದ್ರಿಯ, ಆಧ್ಯಾತ್ಮಿಕ ಹುಡುಕಾಟವೆಂಬುದಕ್ಕೆ ಅರ್ಥವಿಲ್ಲ.

ಮಾನವನ ಅಸ್ತಿತ್ವದ ಅರ್ಥವಂತಿಗೆ, ಮೌಲ್ಯಗಳ ಕುರಿತ ಕೃತಿಗಳು, ಪ್ರತಿಪಾದನೆಗೆ ಸಕ್ರಿಯವಾಗಿ ತೊಡಗಿಸಿಕೊಂಡ, ಚಿಂತಕರು, ತತ್ವಜ್ಞಾನಿಗಳು ನಮ್ಮಲ್ಲಿ ಬಹಳ ಇದ್ದಾರೆ. ಇಂತಹ ತತ್ವಜ್ಞಾನಿಗಳ ವಿಚಾರ ಮತ್ತು ಅವರ ಕೃತಿಗಳು ಮಾನವನ ಬದುಕಿನ ಮೌಲ್ಯಗಳನ್ನು ಅರ್ಥೈಸುವ ಹಾಗೂ ತನಿಖೆ ಮಾಡುವ ಕ್ರಮಗಳು ವಿಭಿನ್ನವಾಗಿವೆ. ಇಂತಹ ಪರಿಕಲ್ಪನೆಗಳಲ್ಲಿ ಪಾರಮಾರ್ಥಿಕವಾದಿಗಳು, ಅಸ್ತಿತ್ವವಾದಿಗಳು ಹಾಗೂ ಐಹಿಕವಾದಿಗಳು, ಸಂದೇಹವಾದಿಗಳು, ವಿಚಾರವಾದಿಗಳು ಇತ್ಯಾದಿ ಚಿಂತಕರು ಬದುಕು ಅರ್ಥಗಳನ್ನು ಕುರಿತು ವಿಸ್ಮಯಕರವಾದ, ವಿಸ್ತೃತವಾದ ವಿವರಣೆಗಳನ್ನು ನೀಡುತ್ತಾ ಬಂದಿದ್ದಾರೆ.

ಸಾಹಿತ್ಯಲೋಕ ಸೃಷ್ಟಿಸುವ ಉತ್ಕೃಷ್ಟ ಕೃತಿಗಳಲ್ಲಿ ಬದುಕಿನ ಸಂಕಟ, ಪ್ರಕ್ಷುಬ್ದತೆಗಳ ಅನುಭವ ತೀವ್ರತೆಗಳಿಗೆ ಈಡಾದ ನಿಗೂಢ ಸತ್ಯದ ಶೋಧನೆಯ ಹುಡುಕಾಟದ ಚಿತ್ರಣವನ್ನು ಕಾಣಬಹುದು. ಪೊಳ್ಳು ಸತ್ಯವನ್ನು ನಿರಾಕರಿಸುವ ಆತ್ಮವಿಶ್ವಾಸ ಸಹಿಸುವ ಶಕ್ತಿ ಸಂಕಟವನ್ನು ಮೌನವಾಗಿ ಬೇಗುದಿಗಳ ಅನುಭವದ ನಿಗೂಢತೆಯ ಲೋಕದ ಅಂತರ೦ಗದೊಳಗೆ ಪ್ರವೇಶಿಸುವ ಮುಕ್ತತೆ, ಈ ಎಲ್ಲವೂ ಸತ್ಯವನ್ನು ಹುಡುಕುವ ದಾರಿಯ ಭಾಗಗಳೇ ಆಗಿವೆ. ಅಂತಿಮವಾಗಿ ಈ ನಿಜಗಳನ್ನು ಅನ್ವೇಷಕರು ಕಾಣದೆಯೇ ಇರಬಹುದು. ಅನೂಹ್ಯ, ನೋವು, ಮುಗಿಯದ ಸಂಘರ್ಷ, ತಾಕಲಾಟಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯವು ಈಗಾಗಲೇ ಅನನ್ಯ ಸತ್ಯದ ಅನ್ವೇಷಣೆಗೆ ಬಳಸುತ್ತಿರುವ ಸ್ವಾನುಕೂಲ ಸಿದ್ದಮಾದರಿಗಳನ್ನು ವರ್ಜಿಸುವಾಗ ಸೃಷ್ಟಿಯಾಗುವಂತಹದು. ಇಂತಹದ ದೃಢ ನಿರಾಕರಣೆಗೆ ಕಾರಣವಾದ ವ್ಯಷ್ಠಿಗಳ ಚೈತನ್ಯವೇ ಸೃಜನಶೀಲ ಲೇಖಕನಿಗೆ ತನ್ನ ಅನ್ವೇಷಣೆಯ ಕೇಂದ್ರವಾಗುತ್ತದೆ.

ಎಂ.ಎಸ್. ಮೂರ್ತಿಯವರ ‘ಬೌಲ್'ಕಾದಂಬರಿಯು ವ್ಯಷ್ಟಿಗಳ ಸತ್ಯಾನ್ವೇಷಣೆಯ ವಿಭಿನ್ನ ಬಗೆಗಳ ನಿಗೂಢ ಲೋಕಗಳಿಗೆ ನಮ್ಮನ್ನು ಕರೆದೊಯ್ದು ನಮ್ಮ ವ್ಯಕ್ತಿತ್ವದ ವಾಸ್ತವ ಸತ್ಯವನ್ನು ವೈವಿಧ್ಯಮಯ ರೀತಿಯಲ್ಲಿ ಶೋಧಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಈ ಕಾದಂಬರಿಯು ಸ್ಥಳೀಯ ಇಹಜೀವನದ ಸತ್ಯ ಕೇಂದ್ರಿತವಾಗಿದ್ದು ನಮ್ಮೆಲ್ಲರಿಗೆ ಪರಿಚಿತವಿರುವ ನಗರ ಸ್ಥಳಗಳಿಂದ ದೂರವಾಗಿರುವ ಹಾಗೂ ನಮಗೆ ಚಿರಪರಿಚಿತವಾದ ಮಹಾನಗರ ಕೇಂದ್ರಗಳಿ೦ದಲೂ ದೂರವಾದಂತಹ ಸ್ಥಳೀಯ - ಪ್ರಾಪಂಚಿಕ ವಾಸ್ತವದಲ್ಲಿ ನೆಲೆಗೊಂಡಿರುವ ಕಾದಂಬರಿಯಾಗಿದೆ. ಕಾದಂಬರಿಯ ಪಾತ್ರಗಳು ಕೂಡ, ನಾವು ತಲತಲಾಂತರದಿ೦ದ ಸಹಜವಾಗಿ ಬಾಳಿ ಬದುಕಿದ ಸಮಾಜ ಹಾಗೂ ಬೆಳೆದುಬಂದ ಸಂಸ್ಕೃತಿಗಿ೦ತಲೂ ಸಂಪೂರ್ಣವಾಗಿ ಭಿನ್ನವಾಗಿರುವ ಅನನ್ಯ ಹಾಗೂ ಅಪರಿಚಿತವಾಗಿರುವ ವ್ಯಕ್ತಿತ್ವಗಳಾಗಿವೆ.

ಈ ಕಾದಂಬರಿಯ ಮೂಲಕ ಮೂರ್ತಿಯವರು ನಮ್ಮ ಅರಿವಿಗೆ ಬಂದಿರದ ಅನುಭಾವದ ಲೋಕವೊಂದನ್ನು ಸೃಷ್ಟಿಸಿದ್ದಾರೆ. ನಮ್ಮ ಅರಿವಿಗೆ ಬಂದಿರದ ಅನೇಕ ಅನುಭವಗಳನ್ನು ಎದುರುಗೊಳ್ಳುವ ಕುತೂಹಲದೊಂದಿಗೇ ನಾವು ಇಲ್ಲಿ ಪ್ರವೇಶಿಸಬೇಕಿದೆ. ಇಂಥ ಅನ್ಯತಾಭಾವದ ಗುಣಲಕ್ಷಣಗಳು ಈ ಕಾದಂಬರಿಯ ಅತ್ಯಂತ ಚೋದಕ ಗುಣಗಳಾಗಿವೆ. ನಮ್ಮ ಕಾಲದ ಪ್ರಮುಖ ಸಮಾಜೋ-ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳು ಹಾಗೂ ಸೃಜನಾತ್ಮಕ ಚೈತನ್ಯವನ್ನು ಹತ್ತಿಕ್ಕುವ ಸಂದರ್ಭದಲ್ಲಿ, ತಾತ್ವಿಕ, ಬೌದ್ಧಿಕ ದಿವಾಳಿತನದ ಸನ್ನಿವೇಶದಲ್ಲಿ, ಮೂರ್ತಿಯವರ ಬೌಲ್’ ನಮ್ಮ ದೈನಂದಿನ ವಾಸ್ತವಗಳಿಂದ ದೂರವಿರುವ ವಿಶಾಲ ಜಗತ್ತೊಂದನ್ನು ನಮಗೆ ಪರಿಚಯಿಸುತ್ತದೆ.

ಬೌಲ್' ಎಂತಹ ಕೃತಿಯೆಂದರೆ ಅದುಪ್ರಗತಿಪರ’ ವಿಮರ್ಶಕರು ಮತ್ತು ಚಿಂತಕರಿ೦ದ ಅಪ್ರಸ್ತುತ, ಅಸ್ಪಷ್ಟ, ಅಸಂಗತ ಎಂದೆಲ್ಲ ಕರೆಸಿಕೊಳ್ಳುವ ಅಪಾಯವನ್ನು ಎದುರಿಸುವಂತಹ ಪಾತ್ರಗಳನ್ನು ಮತ್ತು ಸನ್ನಿವೇಶಗಳ ಜಗತ್ನನ್ನು ಸೃಷ್ಟಿಸಿಕೊಂಡಿದೆ. ಕೃತಿಕಾರರ ಈ ಧೀಮಂತಿಕೆ ‘ಬೌಲ್’ ಕೃತಿಯಲ್ಲಿ ವ್ಯಕ್ತವಾಗುತ್ತವೆ. ಆಧುನಿಕ ಜಗತ್ತಿನ ಎಲ್ಲ ಉದ್ವಿಗ್ನತೆಗಳನ್ನು, ದ್ವಂದ್ವಗಳನ್ನು ಮತ್ತು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಚಿಂತನಾಕ್ರಮಗಳನ್ನು ಪ್ರಬಲ ರಚನಾತ್ಮಕ ಮೌಲ್ಯಗಳನ್ನು ‘ಬೌಲ್’ನಲ್ಲಿ ಚರ್ಚೆಗೆ ತರಲು ಸಾಧ್ಯವಿಲ್ಲ. ಇತಿಹಾಸದ ನೇರ ರೇಖೀಯ ಮತ್ತು ಕಾಲಾನುಕ್ರಮದ ಅಂಶಗಳನ್ನು ಬಲವಾಗಿ ನಂಬುವ೦ತಹವರು ಬೌಲ್' ಎಂಬ ಶಬ್ದವು ನಮ್ಮೆದುರಿಗೆ ಇರಿಸುವ ಅರ್ಥವನ್ನು ಮುನ್ನೆಲೆಗೆ ತರುವುದನ್ನು ತೀವ್ರವಾಗಿ ನಿರಾಕರಿಸಬಹುದು.

ವಾಸ್ತವವಾಗಿ ಸಮಕಾಲೀನತೆಯ ಜೊತೆಗೆ ಸರಾಗವಾಗಿ ತಮ್ಮ ತಮ್ಮ ಕಲ್ಪನೆಗಳೊಂದಿಗೆ ಹೊಂದಿಕೊAಡು ಬದುಕುವ ಜನ ಈ ಕೃತಿಯನ್ನು ಕುರಿತು ಆಧುನಿಕ ಜಗತ್ತಿನ ಮನೋಭಾವ ಮತ್ತು ಚೈತನ್ಯಗಳೊಂದಿಗೆ ಬೆರೆಯದ ಅ-ಐತಿಹಾಸಿಕ ಕಥನವೆಂದೂ, ಯಾವುದೇ ಅರ್ಥವಾಗಲಿ, ಪ್ರಾಮುಖ್ಯತೆಯಾಗಲಿ ಹೊಂದಿರದ ಕೃತಿ ಇದಾಗಿದೆ ಎಂದು ಜರೆಯಲೂಬಹುದು. ಇತಿಹಾಸವು ಹೇಗಿರುತ್ತದೆ ಮತ್ತು ನಾವು ಅದರಿಂದ ಏನನ್ನು ಪಡೆಯಬಹುದು ಎಂದು ಚಿಂತಿಸುತ್ತ ಈ ಕೃತಿಯ ಇತಿಹಾಸದ ಪ್ರಜ್ಞೆಯನ್ನು ವಿಸ್ತರಿಸುತ್ತಲೇ ನಮ್ಮ ವಿಶ್ಲೇಷಣೆ ಮುಂದುವರಿಯಬೇಕಾಗುತ್ತದೆ. ಇತಿಹಾಸದ ಅನಂತ ಸಾಧ್ಯತೆಗಳನ್ನು ಐತಿಹಾಸಿಕ ದೃಷ್ಟಿಕೋನದಲ್ಲಿಯೇ ನೋಡುವಂತೆ ‘ಬೌಲ್’ ನಮ್ಮನ್ನು ಒತ್ತಾಯಿಸುತ್ತದೆ. ಆದರೆ ಆಧುನಿಕ ಇತಿಹಾಸದ ನಮ್ಮ ರಚನೆಗಳನ್ನು ಮೀರಿ ಚಲಿಸುವುದು, ವಿಭಿನ್ನ ಇತಿಹಾಸಗಳನ್ನು ಅಳವಡಿಸಿಕೊಳ್ಳುವ ಕಲ್ಪನೆಯನ್ನು ಅಭಿವೃದ್ಧಿಪಡಿಸುವುದು ಹಾಗೂ ಇತಿಹಾಸದ ಬಗ್ಗೆ ನಮ್ಮ ಏಕರೂಪದ ದೃಷ್ಟಿಕೋನವನ್ನು ವಿಸ್ತರಿಸಿಕೊಳ್ಳುವುದು ನಮಗೆ ಬಿಟ್ಟದ್ದು.

‘ಬೌಲ್’ ಕಾದಂಬರಿಯ ಈ ಪ್ರಜ್ಞೆಯು ವೃತ್ತಾಕಾರವಾಗಿದ್ದು, ನಾಗರೀಕತೆಯ ಕಥನವಾಗಿದ್ದು ಸಮಕಾಲೀನ ವಿಚಾರಗಳಿಂದಾಗಿಲಿ, ರಾಜಕಾರಣದಿಂದಾಗಲಿ ನಿಯಂತ್ರಿಸಲ್ಪಡುವುದಿಲ್ಲ. ‘ಬೌಲ್’ ಕಾದಂಬರಿಯ ಬಗ್ಗೆ ಮತ್ತೊಂದು ದೋಷಾರೋಪಣೆ ಏನಾಗಬಹುದೆಂದರೆ ಅದರ ಸೈದ್ಧಾಂತಿಕ ಸಮಸ್ಯೆಗಳು ಹಾಗೂ ಅತೀಂದ್ರಿಯ ಮತ್ತು ಆಧ್ಯಾತ್ಮಿಕ ಕಾಳಜಿಗಳೊಂದಿಗೆ ಲಕ್ಷಾಂತರ ಜನರ ಸಂಕಟಗಳು, ಅಧಿಕಾರ ಮತ್ತು ಅಧಿಕಾರ ಕೇಂದ್ರಿತ ವ್ಯವಸ್ಥೆಯ ಕ್ರರ‍್ಯ ಮತ್ತು ಅಮಾನವೀಯತೆಗಳು ಈ ಆಧುನಿಕ ಜಗತ್ತಿನ ಪ್ರಮುಖ ವಿಪತ್ತುಗಳು ಎಂದು ಭಾವಿಸಿದವರಿಂದಲೂ ಈ ಕೃತಿ ನಮ್ಮ ಕಾಲಕ್ಕೆ ಅಪ್ರಸ್ತುತವೆನಿಸಬಹುದು. ನಿರಾಶ್ರಿತರ, ವಲಸಿಗರ, ಕಾರ್ಮಿಕ ವರ್ಗಗಳ ದುಃಸ್ಥಿತಿ, ಬುಡಕಟ್ಟು ಮತ್ತು ವಿವಿಧ ಸ್ಥಳೀಯ ಸಮುದಾಯಗಳ ಉಳಿವಿಗಾಗಿ ನಡೆಯುವ ಹೋರಾಟ ನಿರಂತರವಾಗಿ ನಡೆಯುತ್ತಲೇ ಇವೆ.

‘ಬೌಲ್’ನ ತಳಹದಿ ನಗರ ಕೇಂದ್ರಗಳಲ್ಲಿನ ಸ್ವರೂಪವನ್ನು, ಬೃಹತ್ ಮಹಾನಗರಗಳ ಬದುಕನ್ನು ಮಾತ್ರ ಕೇಂದ್ರವಾಗಿಟ್ಟುಕೊಳ್ಳುವ ಕಲಾವಿದರಿಗೆ ಒಪ್ಪಿಕೊಳ್ಳಲು ಕಷ್ಟವಾಗಬಹುದು. ಆಧ್ಯಾತ್ಮಿಕ ಮತ್ತು ಅತೀಂದ್ರಿಯ ಅನುಭವಗಳಿಗೆ ತೆರೆದುಕೊಳ್ಳದ ಜನವರ್ಗಕ್ಕೆ ಈ ಕೃತಿ ತೊಡಕಾಗಬಹುದು. ಎಲ್ಲೆಲ್ಲಿ ಅನೈತಿಕ ರಾಜಕಾರಣವು ಶಕ್ತಿಮೀರಿ ತನ್ನ ಕಬಂಧಬಾಹುಗಳನ್ನು ಚಾಚಿಕೊಂಡು ಆಧುನಿಕ ನಾಗರಿಕತೆಯನ್ನು ಅರಾಜಕತೆಯತ್ತ ದೂಡುತ್ತಿದೆಯೋ ‘ಬೌಲ್’ ಅಂಥ ನಾಗರಿಕತೆಯನ್ನು ತನ್ನದೇ ವಿಶಿಷ್ಟವಾದ ರೀತಿಯಲ್ಲಿ ತೀಕ್ಷ್ಣ ವಾಗಿ ಟೀಕಿಸುತ್ತದೆ. ‘ಬೌಲ್’ ಯಾವುದೇ ದೃಷ್ಟಿಯಿಂದಲೂ ರಾಜಕೀಯ ಕಾದಂಬರಿಯಲ್ಲ, ಆದರೆ ಯಾವುದೇ ಸಂವೇದನಾಶೀಲ ಓದುಗರು ಇದರಲ್ಲಿ ಬರುವ ಪ್ರಭುತ್ವದ ಅಧಿಕಾರದ ಕಟುಟೀಕೆಗಳನ್ನು ಗ್ರಹಿಸದೆ ಇರಲಾರರು. ಹಾಗೆಯೇ ಈ ಕೃತಿಯು ವ್ಯಕ್ತಿಗಳು ಆಕ್ರಮಣಕಾರಿಯಾಗಿ, ಇತರರ ಬಗ್ಗೆ ಭಾವುಕರಾಗದೆ ಸ್ವಯಂಕೇ೦ದ್ರಿತರಾಗಿ ಮನಸೋಇಚ್ಛೆ ಬದುಕುವುದನ್ನು ರೂಢಿಸಿಕೊಂಡ ರೀತಿಯ ಸ್ವಾಧೀನ ಪ್ರಪಂಚವೊ೦ದರ ಸ್ವರೂಪದ ಬಗೆಗೆ ಗಹನವಾಗಿ ಚಿಂತಿಸುವ೦ತೆ ಮಾಡುತ್ತದೆ.

ಈ ನಿಟ್ಟಿನಲ್ಲಿ ‘ಬೌಲ್' ಬಂಡವಾಳದ ಶಕ್ತಿ ಕೇಂದ್ರದ೦ತೆ ನಿರ್ಮಿಸಲಾದ ಈ ಪ್ರಪಂಚದ ಸಂವೇದನಾಶೂನ್ಯ ಮಾರ್ಗಗಳ ಮೇಲೆ ದಾಳಿ ಮಾಡುತ್ತದೆ. ಇನ್ನೂ ವಿಸ್ತರಿಸಿ ಹೇಳುವುದಾದರೆ, ನಮ್ಮ ಸುತ್ತಲೂ ಅಸ್ತಿತ್ವದಲ್ಲಿರುವ ಈ ಸ್ಥಳೀಯ ಜಗತ್ತುಗಳನ್ನು ಈ ಕೃತಿ ಸ್ಥಾಪಿಸುತ್ತದೆ. ಕಾರ್ಪೊರೇಟ್ ಜಗತ್ತಿನ ಯೋಜನೆಗಳ ಆಳವಾದ ಉದ್ದೇಶಗಳನ್ನು ಪರೋಕ್ಷವಾಗಿ ಈ ಕೃತಿಯು ಸೂಕ್ಷ್ಮವಾಗಿ ಬಗೆದು ತೋರಿಸುತ್ತದೆ. ಬಲಶಾಲಿ ಕಾರ್ಪೊರೇಟ್ ಜಗತ್ತು ತನ್ನೆಲ್ಲ ಶಕ್ತಿಯನ್ನು ಕ್ರೋಢೀಕರಿಸಿಕೊಂಡು ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಮೂಲಕ ಎಲ್ಲವನ್ನು ಹೇಗೆ ಸ್ವಾಧೀನಪಡಿಸಿಕೊಳ್ಳುತ್ತದೆ ಎಂಬ ವಿಚಾರವೂ ಇಲ್ಲಿ ವ್ಯಕ್ತವಾಗುತ್ತದೆ. ಇವುಗಳಲ್ಲಿ ಯಾವುದನ್ನೂ ಈ ಕೃತಿಯಲ್ಲಿ ನೇರವಾಗಿ, ಸ್ಪಷ್ಟವಾಗಿ ಹೇಳಲಾಗಿಲ್ಲ.

‘ಬೌಲ್’ ಈ ಎಲ್ಲ ಅಂಶಗಳನ್ನು ಸೂಚ್ಯ ರೀತಿಯಲ್ಲಿ ಮುನ್ನೆಲೆಗೆ ತರುತ್ತದೆ. ಇಂಥ ರಚನಾತ್ಮಕ ನಿರೂಪಣೆಗೆ ಸಂವೇದನಾಶೀಲರಾಗುವ ಮೂಲಕ ಅಂತಹ ಚಿಂತನೆ ಮತ್ತು ಕಾಳಜಿಗಳ ಕಡೆಗೆ ಮುಖಮಾಡುವುದು ನಮಗೆ ಬಿಟ್ಟಿದ್ದು. ಇಡೀ ಕೃತಿಯಲ್ಲಿ ಯಾವುದನ್ನೂ ವಿವರವಾಗಿ ಹೇಳಲಾಗಿಲ್ಲ. ಪ್ರಾಸಂಗಿಕ ಘಟನೆಗಳಲ್ಲಿ ಮತ್ತು ನಿರ್ಣಾಯಕ ಕ್ಷಣಗಳಲ್ಲಿ ಪಾತ್ರಗಳು ಮಾಡುವ ನಿರ್ಧಾರಗಳ ಮೂಲಕ ಕಾದಂಬರಿಯು ತನ್ನ ಆಳದ ವಿಷಯಾಧಾರಿತ ಕಾಳಜಿಗಳನ್ನು ವಿಶದಪಡಿಸುತ್ತದೆ. ಮನುಷ್ಯರ ನಿರ್ಣಾಯಕ ನಿರ್ಧಾರಗಳು ಕೇವಲ ಅವರ ವೈಯಕ್ತಿಕ ಆದ್ಯತೆಗಳು ಮತ್ತು ವ್ಯಕ್ತಿಗಳ ಇಷ್ಟಾನಿಷ್ಟಗಳ ಬಗೆಗಷ್ಟೇ ಸೀಮಿತಗೊಂಡಿರುವುದಿಲ್ಲ. ಇಲ್ಲಿ ವ್ಯಕ್ತಿಗಳ ಅಸ್ತಿತ್ವವಾದದ ಆಯ್ಕೆಗಳು ಮತ್ತು ಆಘಾತಕಾರಿಯಾದ ಅನಿರೀಕ್ಷಿತ ಸಂದರ್ಭಗಳು ಮತ್ತು ವಿನಾಶಕಾರಿ ಅನುಭವಗಳನ್ನು ಅವರು ಹೇಗೆ ಎದುರಿಸುತ್ತಾರೆ ಎಂಬುದನ್ನು ಉದಾಹರಿಸಿ ಹೇಳಲಾಗಿದೆ. ಆಧುನಿಕ ಬದುಕು ಎಂತಹ ಗೊಂದಲ, ಆತಂಕ ಮತ್ತು ಅಸಹನೀಯತೆಯಿಂದ ಕೂಡಿದೆ ಎಂಬುದನ್ನು ಈ ಕಾದಂಬರಿಯ ಚಿಂತನೆಯ ಮೂಲಕವೂ ಗಮನಿಸಬಹುದು.

‘ಬೌಲ್’ನ ಮತ್ತೊಂದು ವೈಶಿಷ್ಟ್ಯತೆ ಏನೆಂದರೆ ಅದೊಂದು ಶುದ್ದತೆಯ ಕೃತಿಯಾಗಿಲ್ಲದಿರುವುದು. ಅಂದರೆ ಕೇವಲ ರೂಪಕಗಳ ಮೂಲಕ ಒಳಾರ್ಥಗಳನ್ನು ಹೇಳುವ ಪಠ್ಯವೂ ಅಲ್ಲದಿರುವುದು. ಸಾಂಕೇತಿಕ ಮತ್ತು ಒಳಾರ್ಥ ನೀಡುವ ಕೃತಿಗಳು ನೈಜ ಪ್ರಪಂಚದೊ೦ದಿಗೆ ಗಂಭೀರ ಮತ್ತು ತೀವ್ರವಾದ ಮಾತುಕತೆಗಳನ್ನು ಸ್ಥಾಪಿಸುವುದಿಲ್ಲ. ಜಗತ್ತಿನ ಪ್ರಕ್ಷುಬ್ಧತೆ ಮತ್ತು ಗದ್ದಲಗಳನ್ನು ತಮ್ಮ ಸಾಂಕೇತಿಕ ವಿಧಾನಗಳ ಮೂಲಕ ಸೆರೆಹಿಡಿಯಲು ಫ್ರಾನ್ಸ್ ಕಾಫ್ಕಾನಂತಹ ಅಸಾಮಾನ್ಯರಿಗೆ ಮಾತ್ರವೇ ಸಾಧ್ಯ. ವಾಸ್ತವಿಕತೆಯನ್ನು ನೋಡುವ ಪ್ರವೃತ್ತಿಯು ಆಲೋಚನೆ, ಭಾವನೆ ಮತ್ತು ಸೌಂದರ್ಯೋಪಾಸನೆಯ ವಿಷಯಗಳನ್ನು ಕೀಳು ಎನ್ನುವುದಲ್ಲದೇ ಆಡಂಬರದ ಮತ್ತು ನಿರರ್ಥಕವಾದ ವಿಚಾರವೆಂದು ಪರಿಗಣಿತವಾಗುತ್ತಿದೆ. ನಿಜ ಹೇಳಬೇಕೆಂದರೆ, ವಾಸ್ತವಿಕತೆಯ ಆಧುನಿಕ ಇತಿಹಾಸದ ಶಕ್ತಿಗಳ ದಟ್ಟವಾದ ಮತ್ತು ಸಂಕೀರ್ಣವಾದ ಚಲನೆಗಳನ್ನು ಈ ಕೃತಿ ಸೆರೆಹಿಡಿಯುತ್ತದೆ. ನೈಜತೆಯ ಶ್ರೇಷ್ಠ ಕೃತಿಗಳು ಸಾಂಕೇತಿಕ ನಡೆಯ ಎಲ್ಲಾ ಸೂಕ್ಷ್ಮ ವ್ಯತ್ಯಾಸಗಳನ್ನು ಎತ್ತಿ ತೋರಲು ಶಶಕ್ತವಾಗಿವೆ. ಈ ಅರ್ಥದಲ್ಲಿ ವಾಸ್ತವಿಕತೆ ಮತ್ತು ಸಾಂಕೇತಿಕತೆಯು ಪರಸ್ಪರ ವಿರುದ್ಧವಲ್ಲ.

ಸಾಮಾನ್ಯ ಕೆಲಸ ಕಾರ್ಯಗಳ ರಚನೆಯನ್ನು ರೂಪಿಸುವಂಥ ಅಸಾಮಾನ್ಯ ಕಥೆ ಹೇಳುವ ‘ಬೌಲ್’ ನಮ್ಮ ಕಾಲದ ಅತ್ಯಂತ ಮಹತ್ವದ ಕೃತಿಯಾಗಿದೆ. ಇಡೀ ಕೃತಿಯು ಸನ್ಯಾಸಿಯಾದ ಭಿಕುವಿನ ಸುತ್ತ ಸುತ್ತುತ್ತದೆ. ತನ್ನ ಗುರು ಉಡುಗೊರೆಯಾಗಿ ನೀಡಿದ ಕೇವಲ ಒಂದು ಬಟ್ಟಲನ್ನೇ ಹಿಂಬಾಲಿಸುತ್ತ ಈ ಕೃತಿ ಸಾಗುತ್ತದೆ. ಸ್ವತಃ ಆತನೇ ಜೀವನವು ವಿಧಿಸಿದ ಮಿತಿ ಮತ್ತು ನಿರ್ಬಂಧಗಳಿ೦ದ ಪರಿಪೂರ್ಣವಾದ ಮೀರುವಿಕೆಯನ್ನು ಬಯಸುತ್ತಲೇ ಇರುತ್ತಾನೆ. ಆತ ಹುಡುಕುವ ಪರಿಪೂರ್ಣ ಶೂನ್ಯತೆಯು ಆತನ ನಿರ್ವಾಣವಾಗಿದೆ. ಜಗತ್ತಿಗೆ ಸೇರಿದ ಎಲ್ಲವನ್ನೂ ನಿರಾಕರಿಸುವುದು ಮತ್ತು ಬಿಡಿಸಿಕೊಳ್ಳುವುದು ಆತನಿಗೆ ಅನಿವಾರ್ಯವಾಗಿದೆ.

ಆ ತಪಸ್ವಿಯು ಬಳಸುವ ದಾರಿಗಳು ಮತ್ತು ಆತನ ಭಿಕ್ಷಾಪಾತ್ರೆಯನ್ನು ಹೊರತುಪಡಿಸಿದರೆ ಬದುಕುಳಿಯಲು ಆತನಲ್ಲಿ ಬೇರೇನೂ ಇಲ್ಲ. ವಾಸ್ತವವಾಗಿ ತನ್ನ ಭೌತಿಕ ಉಳಿವಿಗಾಗಿ ಮೂಲಭೂತವಾಗಿ ಅಗತ್ಯವಿಲ್ಲದ ಎಲ್ಲವನ್ನೂ ಆತ ಬರಿದುಮಾಡಿಕೊಳ್ಳಬೇಕು. ಕಾದಂಬರಿಯ ನಿರೂಪಣಾ ರಚನೆಯಲ್ಲಿ ಮತ್ತು ಭಿಕುವಿನ ದಿನನಿತ್ಯದ ಅಸ್ತಿತ್ವದಲ್ಲಿ ಸಾಹಿತ್ಯಿಕ ಮತ್ತು ಶೂನ್ಯತೆಯ ರೂಪಕಗಳ ಅರ್ಥವನ್ನು ಒಟ್ಟಿಗೆ ಹೆಣೆಯಲಾಗಿದೆ. ಬಿಕು' ಎಂಬ ಹೆಸರೇ ಬೌದ್ಧ ಸನ್ಯಾಸಿಯ ಮಾರ್ಗಗಳನ್ನು ಸೂಚಿಸುತ್ತದೆ. ಭಿಕುವಿನ ಪರಿಪೂರ್ಣತೆ ಮತ್ತು ಅಂತಿಮ ಸ್ಥಿತಿಯು ಆತನ ಸಂಪೂರ್ಣ ಶೂನ್ಯತೆಯಲ್ಲಿಯೇ ಕಾಣಬಹುದು. ಪೂರ್ಣತೆ ಎಂಬುದು ಶೂನ್ಯತೆಯಲ್ಲಿಯೇ ಅಡಗಿರುವಂಥದ್ದು. ದುರಾಸೆ, ಅಸೂಯೆ, ಈರ್ಷ್ಯೆಗಳು ಹೇಗೆ ವ್ಯಕ್ತಿ ಮತ್ತು ಸಮಾಜಗಳ ಪ್ರಜ್ಞೆಯ ಮೇಲೆ ತಮ್ಮ ನಿಯಂತ್ರಣ ಸಾಧಿಸಿಕೊಂಡು ಆಧುನಿಕತೆಯ ಸೋಗಿನಲ್ಲಿ ಜಗತ್ತನ್ನು ಬಂಜರನ್ನಾಗಿಸುತ್ತವೆ ಎಂಬುದನ್ನು ಸೂಚ್ಯವಾಗಿ ಈ ಕೃತಿಯು ಸುಳಿವು ನೀಡುತ್ತದೆ. ಸ್ಪರ್ಧೆಯ ಹೆಸರಿನಲ್ಲಿ ಮನುಷ್ಯರು ಒಬ್ಬರನ್ನೊಬ್ಬರು ಮುಗಿಸಲು ಹವಣಿಸುವ ನಿರ್ದಯ, ಅನಾಗರಿಕ ಶಕ್ತಿ, ಅಂತಿಮವಾಗಿ ಮನುಕುಲದ ಸರ್ವನಾಶಕ್ಕೆ ಕಾರಣವಾಗುವುದನ್ನು ಕುರಿತು ಈ ಕೃತಿಯು ಗಂಭೀರವಾಗಿ ಧ್ಯಾನಿಸುತ್ತದೆ.

ಶಕ್ತಿ ಮತ್ತು ಶೌರ್ಯದ ದೈತ್ಯ ನಿರ್ಮಾಣದ ಇತಿಹಾಸದ ಎದುರು ಭಿಕು ಮತ್ತು ಆತನ ಸುತ್ತಲ ಜಗತ್ತಿನ ಮೂಲಕ ಪರ್ಯಾಯ ಇತಿಹಾಸವೊಂದನ್ನು ಈ ಕೃತಿಯು ಕಾಣಿಸುತ್ತದೆ. ಇದು ಕೇವಲ ಅವಶ್ಯಕತೆಗಳ ಮೇಲೆ ನಿಂತಿರುವ ಜಗತ್ತು. ಇದು ಏನನ್ನೂ ಗಳಿಸದ ಮನುಷ್ಯರು ವಾಸಿಸುವ ಪ್ರದೇಶ. ಕೆಲವು ಸಂದರ್ಭಗಳಲ್ಲಿ ತಕ್ಕಮಟ್ಟಿಗೆ ಗಳಿಸಿದವರು ಅದೆಲ್ಲವನ್ನೂ ತ್ಯಜಿಸುತ್ತಾರೆ, ತಮ್ಮ ಗಳಿಕೆಗಿಂತ ದೂರವಿರುತ್ತಾರೆ; ಬಹುತೇಕ ಏನೂ ಇಲ್ಲದ ಬದುಕು ಸಾಗಿಸುತ್ತಾರೆ; ಮನುಕುಲದ ಬಗೆಗೆ ಒಂದಷ್ಟು ಕಾಳಜಿಯನ್ನೂ ವಹಿಸುತ್ತಾರೆ. ಒಂದು ದಿನದ ಕೂಳನ್ನು ಹೊಂದಿಸುವುದು ಹೇಗೆಂದು ಚಿಂತಿಸುತ್ತಾ ತಮ್ಮ ಉಳಿವಿಗಾಗಿ ಪ್ರತಿಕ್ಷಣವೂ ಹೆಣಗಾಡಬೇಕಾದವರ ಜೊತೆಗೆ ನಾವೂ ಮುಖಾಮುಖಿಯಾಗುತ್ತೇವೆ. ಎಲ್ಲಾ ತಾತ್ವಿಕ ಕಾಳಜಿಗಳು ಮತ್ತು ಆಧ್ಯಾತ್ಮಿಕ ಅನ್ವೇಷಣೆಗಳು, ಮೂರ್ತರೂಪದ ಭೌತಿಕ ವಿವರಗಳ ವಾಸ್ತವಿಕ ಸನ್ನಿವೇಶಗಳ ಮತ್ತು ದೈನಂದಿನ ಬದುಕಿನ ಮೂಲಕ ಈ ಕಾದಂಬರಿಯಲ್ಲಿ ಅಭಿವ್ಯಕ್ತಿ ಪಡೆಯುತ್ತವೆ.

ಕೃತಿಗಳ ದೊಡ್ಡ ತಾತ್ವಿಕ ದೃಷ್ಟಿಕೋನಗಳನ್ನು ಸೃಷ್ಟಿಸಲು ಮಾನವ ಅಸ್ತಿತ್ವದ ವಾಸ್ತವಿಕ ಅಂಶಗಳು ಏಕತ್ರವಾಗಿ ಹೊರಹೊಮ್ಮುತ್ತವೆ. ಇಡೀ ಕೃತಿಯಲ್ಲಿ ಎಲ್ಲಿಯೂ ಪ್ರಯೋಗಾತ್ಮಕ ಸತ್ಯದ ಮೂಲಕ ಸ್ವತಂತ್ರವಾದ ಅಮೂರ್ತ ಚಿಂತನೆಯು ಗೋಚರವಾಗುವಂತೆ ಕಾಣುವುದಿಲ್ಲ. ಬದುಕಿನ ನೈಜ, ಭೌತಿಕ ಅನುಭವಗಳು ಕೃತಿಯ ವಿಶಾಲ ಬೌದ್ಧಿಕ ಆಯಾಮಗಳನ್ನು ತೋರುತ್ತವೆ. ಇತಿಹಾಸ ಮತ್ತು ಆಧ್ಯಾತ್ಮಿಕತೆಯು ಇಲ್ಲಿ ಪರಸ್ಪರ ಸಮಾಗಮಿಸಿವೆ. ಮೂರ್ತಿಯವರ ‘ಬೌಲ್’ ಕೃತಿಯು ಜಪಾನಿನ ಅತ್ಯಂತ ಶ್ರೇಷ್ಟ ಚಲನಚಿತ್ರ ನಿದೇರ್ಶನರಲ್ಲಿ ಒಬ್ಬರಾದ ‘ಕೆಂಜಿ ಮಿಜೋಗೋಚಿ’ಯ (Kenji Mizoguchi) ‘ಸಾಂಶೋ ದಿ ಬೈಲಿಫ್’ (Sansho The Bailiff) ಚಲನಚಿತ್ರವನ್ನು ನೆನಪಿಗೆ ತರುತ್ತದೆ. ಬದುಕಿನ ಅತ್ಯಂತ ಮಹತ್ವಪೂರ್ಣ ನಿರ್ಧಾರಗಳು, ಪ್ರಜ್ಞಾಪೂರ್ವಕ ಆಯ್ಕೆಗಳಿಂದಾಗಲಿ ನಿರ್ದಿಷ್ಟ ವರ್ತನೆಗಳಿಂದಾಗಲಿ ಹೆಚ್ಚು ವಿಕಸನಗೊಂಡ ವಿಚಾರಗಳಿಂದಾಗಲಿ ಹೊರಹೊಮ್ಮುವುದಿಲ್ಲವೆಂದು ‘ಬೌಲ್’ ಧಾರಾಳವಾಗಿ ಸ್ಪಷ್ಟಪಡಿಸುತ್ತದೆ.

ಬದುಕಿನ ವೈಪರೀತ್ಯಗಳು ನಮಗೆ ಸಂಪೂರ್ಣವಾಗಿ ಅನಿರೀಕ್ಷಿತ ಅಪರಿಚಿತವಾಗಿರುತ್ತವೆ; ಅಲ್ಲದೇ ಅವು ನಮ್ಮಲ್ಲಿ ಅದ್ಭುತ ಆಶ್ಚರ್ಯಗಳನ್ನು ಉಂಟುಮಾಡುತ್ತವೆ. ಜೀವನದ ಅನೇಕ ತಿರುವುಗಳು ನಮ್ಮನ್ನು ವಿಚಿತ್ರವಾದ ದಿಕ್ಕಿನಲ್ಲಿ ಎಳೆದೊಯುತ್ತವೆ ಹಾಗೂ ಬದುಕಿನ ಹಾದಿಯನ್ನೇ ಬದಲಾಯಿಸುತ್ತವೆ ಅಥವಾ ಬದಲಾಯಿಸುವಂತೆ ಒತ್ತಾಯಿಸುತ್ತವೆ. ಅಪರಿಚಿತ, ನಿಗೂಢ ಪಥಗಳನ್ನು ಅನುಸರಿಸಲು ನಮ್ಮನ್ನು ಬಲವಂತಪಡಿಸುತ್ತವೆ. ಇವುಗಳು ಬದುಕಿನ ಕರಾಳ ಮುಖಾಮುಖಿಗಳಾಗಿದ್ದು, ಇವುಗಳಿಂದಲೇ ನಾವು ನಮ್ಮ ಮಾರ್ಗಗಳನ್ನು ರೂಪಿಸಿಕೊಳ್ಳಬೇಕು. ಬೆಳಕನ್ನು ಹುಡುಕಿಕೊಳ್ಳಬೇಕು. ಕಗ್ಗತ್ತಲ ಕೂಪಗಳಿಂದಲೇ ನಾವು ಜೀವನದ ಪ್ರಕಾಶಮಾನ ಕಿರಣಗಳನ್ನು ಹಿಡಿದಿಟ್ಟುಕೊಳ್ಳಬೇಕು. ಭಿಕುವಿನ ಅನುಭವಕ್ಕೆ ಬರುವುದೂ ಇದೇ. ಯಾವುದೇ ಸಾಮಾನ್ಯ ಸಂಸಾರಸ್ಥನ ಅನುಭವಕ್ಕೆ ದಕ್ಕುವ ಕಷ್ಟಕಾರ್ಪಣ್ಯಗಳ ಪಯಣವನ್ನುಭಿಕು’ ಕೂಡ ಆಕಸ್ಮಿಕವಾಗಿ ಅನುಭವಿಸುತ್ತಲೇ ಬದುಕಿನ ಅನೇಕ ಘಟನೆಗಳಿಗೆ ಮುಖಾಮುಖಿಯಾಗಿ ಹೊಸ ಪಯಣವೊಂದನ್ನು ಆರಂಭಿಸಿಕೊ೦ಡು ಪರಿವರ್ತಿತನಾಗುತ್ತಾನೆ. ಈ ಅನುಭವಗಳು ಆತನನ್ನು ಹೊಸ ಮನುಷö್ಯನನ್ನಾಗಿ ರೂಪಿಸುತ್ತವೆ. ಸನ್ಯಾಸಿಗಳ ಲೋಕದ ಸಾನಿಧ್ಯ ಮತ್ತು ಗೃಹಸ್ಥನ ತತ್ಕಾಲದ ವಾಸ್ತವ ಬಲು ಸ್ಪಷö್ಟವಾಗಿ ಸಾಮಾನ್ಯ ಬದುಕಿನ ಸ್ವಭಾವ, ಸಾಮಾನ್ಯತೆಯ ವಾಸ್ತವತೆಯು ಸನ್ಯಾಸಿಯ ಅತೀಂದ್ರಿಯ ಸ್ಥಿತಿಗಿಂತ ಖಂಡಿತವಾಗಿಯೂ ಕೆಳಮಟ್ಟದಲ್ಲಿಲ್ಲ ಎಂದು ಈ ಕೃತಿ ಸ್ಪಷ್ಟವಾಗಿ ತೋರಿಸುತ್ತದೆ.

ಸಾಮಾನ್ಯ ಬದುಕಿನ ಆಚೆಗೆ ವೈರಾಗ್ಯಕ್ಕೆ ವಿನಾಯಿತಿ ನೀಡುವ ಸಕಲ ಶ್ರೇಣೀಕೃತ ರಚನೆಗಳನ್ನು ‘ಬೌಲ್’ ಕೆಡವಿಹಾಕುತ್ತದೆ. ಇದು ದಿನನಿತ್ಯದ ಲೌಕಿಕ ವಿಷಯಗಳೊಂದಿಗೆ ಹೋರಾಡುವ ಸಾಮಾನ್ಯ ಮನುಷ್ಯನನ್ನು ಮೀರಿದುದು ಎಂಬ ಕಲ್ಪನೆಯನ್ನು ಛಿದ್ರಗೊಳಿಸುತ್ತದೆ. ಮಾನವ ಅಸ್ತಿತ್ವದ ಸಾಮಾನ್ಯ ಮತ್ತು ಪ್ರಾಪಂಚಿಕ ವಿವರಗಳಿಗೆ ಅಗಾಧವಾದ ಗೌರವ ಹೊಂದಿರುವವರು ಮಾತ್ರವೇ ಇದರ ಪವಿತ್ರವಾದ ಮತ್ತು ಅನಂತವಾದ ನೋಟವನ್ನು ಗ್ರಹಿಸಬಲ್ಲರು. ಬೌಲ್' ಅನನ್ಯವಾದ ಜಾತ್ಯಾತೀತತೆಯಲ್ಲಿ ನೆಲೆಗೊಂಡಿದ್ದು, ಶ್ರೇಷ್ಠ ಆಧ್ಯಾತ್ಮಿಕತೆಯು ಸದಾ ಪ್ರಾಪಂಚಿಕ ಮತ್ತು ಭೌತಿಕತೆಯು ತನ್ನ ಬಲವಾದ ಬುನಾದಿಯ ಮೇಲೆ ನಿಂತಿದೆ ಎಂಬುದನ್ನು ಮತ್ತೆ ಮತ್ತೆ ಮನದಟ್ಟು ಮಾಡುತ್ತದೆ. ಇದು ಬರಿದಾದ ಮತ್ತು ಟೊಳ್ಳಾದ ಅಮೂರ್ತ ತಳಹದಿಯ ಮೇಲೆ ಕಟ್ಟಲಾಗಿಲ್ಲ.

‘ಬೌಲ್’ ಕೃತಿಯ ದೊಡ್ಡ ಶಕ್ತಿಯೆಂದರೆ ಆಧ್ಯಾತ್ಮಿಕತೆ ಮತ್ತು ಆಧ್ಯಾತ್ಮಿಕ ಉತ್ಕೃಷö್ಟತೆಯ ಕುರಿತ ನಮ್ಮ ಸಂತೃಪ್ತ ಮತ್ತು ಜಡಕಲ್ಪನೆಗಳಿಗೆ ಇದು ಸವಾಲೆಸೆಯುತ್ತದೆ. ಆಧ್ಯಾತ್ಮಿಕತೆಯ ನಿಜಸ್ವರೂಪವೇನು ಎಂಬುದರ ಕುರಿತು ಮಂಥನ ಮಾಡುವುದಕ್ಕೆ ಈ ಕೃತಿಯೊಂದು ಅತ್ಯುತ್ತಮ ಸಾಕ್ಷಿಯಾಗಿದೆ. ಮನುಷ್ಯರ ಬದುಕಿನಲ್ಲಿ ಲೋಕ ರೂಪಾಂತರವು ಅತ್ಯಂತ ಭಯಾನಕ ಘಟನೆಗಳ ಮೂಲಕವೇ ಸಂಭವಿಸುತ್ತದೆ. ಭಿಕುವಿನ ಜೊತೆಗೆ ಸಂಭವಿಸುವುದೂ ಇದೇ. ಆ ತಪಸ್ವಿಯು ಕಾಡಿನ ಮೂಲಕ ಹಾದುಹೋಗುವಾಗ ಆತನ ಏಕೈಕ ಆಸ್ತಿಯಾದ ಭಿಕ್ಷಾಪಾತ್ರೆಯನ್ನು ಕಸಿದುಕೊಳ್ಳುವ ಕಳ್ಳನೊಬ್ಬ ಎದುರಾಗುತ್ತಾನೆ. ಕಳ್ಳನ ಸವಾಲುಗಳನ್ನು ಎದುರಿಸುತ್ತಾನೆ. ಈ ಸವಾಲುಗಳೂ ಹಲವು ಹಂತಗಳಲ್ಲಿ ನಡೆಯುತ್ತವೆ. ಹಿಂಸೆಯ ವಿರುದ್ಧ ಅಹಿಂಸೆ; ಆಕ್ರಮಣಶೀಲತೆಯ ವಿರುದ್ಧ ನಿಗ್ರಹ; ತ್ಯಜಿಸುವಿಕೆಯ ವಿರುದ್ಧ ಸ್ವಾಧೀನತೆ; ಗೃಹಸ್ತನ ಲೌಕಿಕ ಕರ್ತವ್ಯಗಳ ವಿರುದ್ಧ ಸನ್ಯಾಸಿ ಜೀವನ ಇತ್ಯಾದಿ.

ಕಾಲ್ಪನಿಕ ಕತೆಯೊಂದರ ಸೌಂದರ್ಯದ ಲಕ್ಷಣಗಳಲ್ಲಿ ರಾಜಿ ಮಾಡಿಕೊಳ್ಳದೆ ‘ಬೌಲ್’ ಕಾದಂಬರಿಯು ತನ್ನ ನಿರೂಪಣಾ ರಚನೆಯಲ್ಲಿ ಯಾರನ್ನೂ ಮೌಲ್ಯೀಕರಿಸದೆ ಬಹುಮುಖ್ಯವಾದ ತಾತ್ವಿಕ ಪ್ರಶ್ನೆಗಳನ್ನು ಹೆಣೆಯುತ್ತದೆ. ಸೃಜನಶೀಲ ಮತ್ತು ತಾತ್ವಿಕತೆ ನಡುವಿನ ಸಮತೋಲನವೇ ‘ಬೌಲ್’ನ ಗಮನಾರ್ಹ ಗುಣವಾಗಿದೆ. ಕೃತಿಯ ಆರಂಭದಲ್ಲಿಯೇ ಭಿಕು ಆಕ್ರಮಣಕಾರಿ ಮಾಲಿಂಗನನ್ನು ಕೊಲ್ಲುತ್ತಾನೆ. ನಂತರ ಆ ಕೃತ್ಯಕ್ಕೆ ಮಾಲಿಂಗನನ್ನೇ ಬಹಿರಂಗವಾಗಿ ಹೊಣೆಗಾರನನ್ನಾಗಿ ಮಾಡಲು ನೈತಿಕವಾಗಿ ಬದ್ಧನಾಗುತ್ತಾನೆ. ವ್ಯಕ್ತಿಗತ ಇಚ್ಛೆ ಮತ್ತು ಸ್ವಾತಂತ್ರ್ಯಗಳನ್ನು ವಿಶೇಷವಾಗಿ ಅಲೆಮಾರಿ ಸನ್ಯಾಸಿಗೆ ಸಂಬ೦ಧಿಸಿದರೆ, ಅವು ಬದುಕಿನ ನಿರ್ಣಾಯಕ ರಚನೆಯಿಂದ ವಂಚಿತವಾಗುತ್ತವೆ. ನಿಜವಾದ ಅಸ್ತಿತ್ವವಾದದ ಪ್ರಜ್ಞೆಯಲ್ಲಿ ಗ್ರಹಿಸಿದರೆ ಕಾದಂಬರಿಯ ಮೂಲ ತಿರುಳಾದ ಸ್ವಾತಂತ್ರ್ಯ ಮತ್ತು ನಿರ್ಣಾಯಕತೆಯ ಈ ಗುಣವೇ ಕಾದಂಬರಿಗೆ ಅತ್ಯಂತ ಅಧಿಕೃತ ಕಲಾತ್ಮಕತೆಯನ್ನು ನೀಡುತ್ತದೆ. ಭಿಕು ತಾನು ಕೊಂದವನ ಮಡದಿ ಮತ್ತು ಮಗನನ್ನು ಸಂತೈಸುತ್ತಾನೆ. ನಂತರ ಆ ಕುಟುಂಬದ ಜವಾಬ್ದಾರಿಯನ್ನೂ ಹೊರುತ್ತಾನೆ. ತಾಯಿ ಮತ್ತು ಮಗು ಅನಾಥರಾಗದಂತೆ ನೋಡಿಕೊಳ್ಳುತ್ತಾನೆ. ಆಶ್ರಯದಾತನಾಗಿ ಆ ಸನ್ಯಾಸಿಯ ಪಾತ್ರವು ಸತ್ಯಶೋಧನೆಯ ಭಾಗವಾಗುತ್ತದೆ. ಸಂಸಾರವನ್ನು ಭದ್ರವಾಗಿಡಲು ಒಬ್ಬ ಗಂಡ ಮತ್ತು ತಂದೆಯಾದವನು ಮಾಡುವ ಎಲ್ಲವನ್ನು ಭಿಕು ನಿರ್ವಹಿಸುತ್ತಾನೆ. ಸನ್ಯಾಸಿಯ ತ್ಯಾಗಗಳು ಸುಮಲತೆ ಮತ್ತು ಆನಂದರ ಬದುಕಿನ ಮೇಲೆ ಬೀರುವ ಅಸಾಧಾರಣ, ಪರಿಣಾಮಕಾರಿ ವಿಧಾನಗಳು, ವಾಸ್ತವವಾಗಿ ಭಿಕು ನಡೆಸಿದ ಅನೈಚ್ಛಿಕ ಕ್ರಿಯೆಗೆ ವಿಮೋಚನೆಯ ಅಂಶಗಳಾಗಿವೆ. ಬುದ್ಧನು ಧಮ್ಮಪದದಲ್ಲಿ ``ಶ್ರದ್ಧೆಯಿಂದ ನಿಮ್ಮ ಮೋಕ್ಷವನ್ನು ಸಾಧಿಸಿ'' ಎಂದು ಹೇಳಿದಂತೆ, ಸನ್ಯಾಸಿಯ ಬದುಕಿನಲ್ಲಿ ಸ್ಥಾನವಿಲ್ಲದ ಎಲ್ಲಾ ಸಾಮಾನ್ಯ ಕೆಲಸಕಾರ್ಯಗಳನ್ನು ನಿರ್ವಹಿಸುವ ಮೂಲಕ ಭಿಕು ತನ್ನ ಮೋಕ್ಷವನ್ನು ಸಾಧಿಸುತ್ತಾನೆ. ಈ ನಿಟ್ಟಿನಲ್ಲಿ ಸೃಜನಶೀಲ ಬರವಣಿಗೆಯ ಆಯಾಮಗಳನ್ನು ತೆರೆಯುವ ಕಾಲ್ಪನಿಕ ರಚನೆಗಳನ್ನು ಹೊಸ ದಿಗಂತಗಳಿಗೆ ಕೊಂಡೊಯ್ಯುವ ಕಾದಂಬರಿ ‘ಬೌಲ್’. ಈ ಕೃತಿಯು ‘ವಾಸ್ತವಿಕತೆ’, ‘ಸಾಮಾಜಿಕ ವಾಸ್ತವಿಕತೆ’ ‘ಸಾಂಕೇತಿಕತೆ’, ‘ರೂಪಕ’ ಮುಂತಾದ ಲೇಬಲ್‌ಗಳ ಮರು ವ್ಯಾಖ್ಯಾನಕ್ಕೆ ಆಹ್ವಾನಿಸುತ್ತ ಇವೆಲ್ಲವನ್ನೂ ಪ್ರತ್ಯೇಕವಾಗಿ ಮತ್ತು ಸ್ವತಂತ್ರವಾಗಿ ಅರ್ಥಮಾಡಿಕೊಳ್ಳಬಾರದು ಎಂದು ‘ಬೌಲ್’ ನಿರೂಪಿಸುತ್ತದೆ. ನಮಗೆ ಪರಿಚಯವಿಲ್ಲದ ಈ ಎಲ್ಲವೂ ಕಾಲ್ಪನಿಕ ಮತ್ತು ಅಲಂಕಾರಿಕವಲ್ಲದ ನಮ್ಮ ನಿಜದ ಜಗತ್ತಿನಲ್ಲಿ ನೆಲೆಗೊಂಡಿರುವುದು ಗಮನಾರ್ಹ ವಿಚಾರ. ಮಠಗಳು, ಸನ್ಯಾಸಿಗಳು, ವ್ಯಾಪಾರಸ್ಥರು, ಮಾರುಕಟ್ಟೆಗಳು, ಕಾರ್ಮಿಕರು, ಸ್ಥಳೀಯ ವಿಧಿವಿದಾನಗಳು, ಧ್ಯಾನಕೇಂದ್ರಗಳು, ಆಧ್ಯಾತ್ಮಿಕ ಪ್ರವಚನಗಳು, ದಿನನಿತ್ಯದ ಸಹಜ ಮಾತುಕತೆಗಳು, ನಾವು ವಾಸಿಸುವ ಜಗತ್ತಿನಲ್ಲಿ ನಡೆಯುತ್ತಲೇ ಇರುತ್ತವೆ. ಪಾತ್ರಗಳು, ಅವು ಪ್ರತಿಬಂಧಿಸುವ ಪ್ರದೇಶಗಳು ಮತ್ತು ಅವುಗಳ ನಿಜವಾದ ಭೌತಿಕ ವಾಸ್ತವಗಳು ನಮ್ಮೊಂದಿಗೆ ಹೊಂದಿಕೆಯಾಗದಿದ್ದರೂ ಸಹ ಆಧ್ಯಾತ್ಮಿಕತೆಯ ಸಾಮಾಜಿಕ ವಾಸ್ತವತೆ ಸಾಮಾನ್ಯವಾದ ‘ಬೌಲ್’ನ (ಬಟ್ಟಲಿನ) ಮೂಲಕ ನಮಗೆ ನಿಲುಕುತ್ತದೆ. ಪರಿಚಿತ ಮತ್ತು ಅಪರಿಚಿತತೆಗಳ ಸಹಯೋಗದಿಂದ ಇಂಥ ‘ನವ ವಾಸ್ತವ’ಗಳು ಹುಟ್ಟಿಕೊಳ್ಳುತ್ತವೆ. ‘ಬೌಲ್’ ಒಂದು ಅಸಾಧಾರಣ ಕೃತಿಯಾಗಿದ್ದು ಅದು ಪ್ರವಾದಿಯಂತೆ ಭವಿಷ್ಯತ್ತನ್ನು ಕಾಣಿಸುವ ದೂರದೃಷ್ಟಿಯನ್ನು ಹೊಂದಿದೆ. ಎಲ್ಲ ಸಾಕಾರಗಳ ಮೂಲಕ ಅಸ್ತಿತ್ವದ ಹೊಸ ವಿಧಾನಗಳನ್ನು ಮತ್ತು ವಿನಾಯಿತಿಗಳನ್ನು ಇದು ಸೂಚಿಸುತ್ತದೆ. ಕಥಾಹಂದರದ ಕೃತಿಯಾಗಿ ‘ಬೌಲ್’ ಭವಿಷö್ಯದ ಸಂವೇದನೆಗಳನ್ನು ನೈಜ ವರ್ತಮಾನದಲ್ಲಿ ಬೇರೂರಿಸುತ್ತದೆ. ಇದು ಅತ್ಯಂತ ಕಠಿಣ ಪರಿಶ್ರಮ ಮತ್ತು ದೈಹಿಕ ಶ್ರಮದ ಮೂಲಕ ಭಿಕುವಿನ ಎಲ್ಲಾ ತಪಸ್ವಿ ಗುಣಗಳನ್ನು ಅಭ್ಯಸಿಸುವ, ಗಮನಿಸುವ, ಅಳವಡಿಸಿಕೊಳ್ಳುವ ಚಿಕ್ಕ ಮಗು ಆನಂದನ ಮೂಲಕ ಚಿತ್ರಿತಗೊಂಡಿದೆ. ಭೌತಿಕ ದೇಹದ ವೈಭವವನ್ನು, ಭೌತಿಕ ಅಸ್ತತ್ವದ ಸಾರ ಮತ್ತು ದೈಹಿಕ ಶ್ರಮಕ್ಕೆ ಹಾಗೂ ತನ್ಮೂಲಕ ಅರಳುವ ಆಧ್ಯಾತ್ಮಿಕ, ಅಲೌಕಿಕ ಗುಣಗಳಿಗೆಬೌಲ್’ ಅಪಾರ ಗೌರವವನ್ನು ತೋರುತ್ತದೆ. ಆನಂದ ಬುದ್ಧನ ಪ್ರಧಾನ ಶಿಷ್ಯನ ಗುಣಗಳನ್ನು ಭಿಕುವಿನ ಮೂಲಕ ಪಡೆದು ಬುದ್ಧನಂತೆಯೇ ಸನ್ಯಾಸದ ಕಡೆಗೆ ಸೆಳೆಯಲ್ಪಟ್ಟು ವಾಸ್ತವದ ನೆಲೆಯ ಮೂಲಕವೇ ಸನ್ಯಾಸತ್ವವನ್ನು ಒಪ್ಪಿಕೊಳ್ಳುತ್ತಾನೆ.

‘ಬೌಲ್’ ಒಂದು ಅನನ್ಯ ಕೃತಿಯಾಗಿದ್ದು ಅದು ಪ್ರಾಚೀನ ವ್ಯಕ್ತಿತ್ವಗಳನ್ನು ಆಧುನಿಕ ಸಂವೇದನೆಯೊ೦ದಿಗೆ ಸುಂದರವಾಗಿ ಮರುಸೃಷ್ಟಿಸುತ್ತದೆ. ಬುದ್ಧ, ಆನಂದ, ಜಗತ್ತಿನ ಸಕಲ ತಾಯಂದಿರು ಇವರೆಲ್ಲ ಸಮಕಾಲೀನ ಪ್ರಪಂಚದ ಸಾಮಾನ್ಯ ಮನುಷ್ಯರೊಂದಿಗೆ ಪರಸ್ಪರ ಸಂಬ೦ಧ ಹೊಂದಿದ್ದಾರೆ. ಈ ಸಾಮಾನ್ಯ ಮನುಷö್ಯರು ಅಸಾಮಾನ್ಯ ಅನ್ವೇಷಕರಾಗಿ ವರ್ತಮಾನದ ಬುದ್ಧರಾಗುವವರು ಹಾಗೂ ಅಕಾಲಾತೀತ ಚೇತನದ ಅನಂತವಾದ ಮತ್ತು ಶಾಶ್ವತವಾದ ನವೀಕರಣದ ಮೂಲಕ ಮಾತ್ರವೇ ಈ ಪರಭಕ್ಷಕ ಪ್ರಪಂಚವು ತನ್ನ ಮೋಕ್ಷವನ್ನು ಹುಡುಕಿಕೊಳ್ಳಬಹುದು. ಇದರ ಅಗಾಧವಾದ ಪರಿಣಾಮ ಯಾವುದೆಂದರೆ ಅನಂತಕಾಲದ ಇರುವಿಕೆ; ಕಾದಂಬರಿಯಲ್ಲಿ ಬರುವ ಮುದುಕ – ಆತ ಭೂತ, ವರ್ತಮಾನ ಮತ್ತು ಭವಿಷ್ಯಕ್ಕೆ ನೇರ ಪೂರಕ ಸಾಕ್ಷಿಯಾಗಿದ್ದಾನೆ. ಮೂಲತಃ ‘ಬೌಲ್’ ಕೃತಿಯ ಪ್ರಧಾನ ಕೇಂದ್ರ ಬಿ೦ದುವೇ ವರ್ತಮಾನವನ್ನು ಅಭಿನಂದಿಸುತ್ತಲೇ ಭವಿಷ್ಯದೊಳಗೆ ಕೊಂಡೊಯ್ಯುವ ಈ ಗೌರವಾನ್ವಿತ ವಯೋವೃದ್ಧ ‘ಅಜ್ಜ’. ‘ಬೌಲ್’ ಒಂದು ಪ್ರಧಾನಧಾರೆಯ ಮಹತ್ವದ ಕೃತಿಯಾಗಿದ್ದು, ಇದು ವ್ಯರ್ಥವಾದ, ನಿರರ್ಥಕವಾದ, ಅಮೂರ್ತ ತಾತ್ವಿಕ ನಿರೂಪಣೆಯನ್ನೇನೂ ಹೊಂದಿಲ್ಲ.

ಈ ಗುಣಗಳನ್ನು ಗ್ರಹಿಸಲಾಗದೆ ತಪ್ಪಿದಲ್ಲಿ ಇದರ ನಿರೂಪಣಾ ರಚನೆಯನ್ನು ಸಂಪೂರ್ಣ ತಪ್ಪಾಗಿ ಅರ್ಥೈಸಿಕೊಳ್ಳುವುದು ಮತ್ತು ಅದರ ವಿಷಯಾಧಾರಿತ ಆದ್ಯತೆಗಳನ್ನು ತಪ್ಪಾಗಿ ಗ್ರಹಿಸುವುದು ಎಂದರ್ಥ. ಕಾಲ್ಪನಿಕ ಅಂಶಗಳಿ೦ದ ಹಂತಹ೦ತವಾಗಿ ಹೊರಹೊಮ್ಮುವ ಈ ಕೃತಿಯು ಅತ್ಯಂತ ಅಧಿಕೃತವಾದ ತಾತ್ವಿಕ ಕಲ್ಪನೆಗಳನ್ನು ರೂಪಿಸುತ್ತದೆ. ಇದೊಂದು ಮೂಲಭೂತವಾದ ತಾತ್ವಿಕ ವಿಚಾರಗಳನ್ನು ಅಪ್ಪಿಕೊಳ್ಳುವ ಸುಂದರ ಕಲಾಕೃತಿಯಾಗಿದೆ. ತತ್ವಶಾಸ್ತ್ರವು ತನ್ನ ಸತ್ವ, ಆಹಾರ ಮತ್ತು ಪೋಷಣೆಯನ್ನು ಕಂಡುಕೊಳ್ಳುವುದು ಸರ್ವರ ಬದುಕಿನ ಸಾಮಾನ್ಯತೆಯಲ್ಲಿ. ‘ಬೌಲ್’ ಈ ಅಂಶವನ್ನೇ ಸಂಪೂರ್ಣ ಅನುಕರಣೀಯ ರೀತಿಯಲ್ಲಿ ಉದಾಹರಿಸಿ ನಮಗೆ ತೋರಿಸುತ್ತದೆ. ಈ ಕೃತಿಯ ಮೂಲಕ ಎಂ.ಎಸ್. ಮೂರ್ತಿಯವರು ಅತ್ಯಂತ ಸಮರ್ಥ ರೀತಿಯಲ್ಲಿ ನಮ್ಮ ಪ್ರಜ್ಞೆಯನ್ನು ಅರಳಿಸುವ ಕೆಲಸ ಮಾಡಿದ್ದಾರೆ.

ಖಾಲಿ ಪಾತ್ರೆಯನ್ನಿಡಿದು…

ಡಾ ಎಂ ಎಸ್ ಮೂರ್ತಿ

ಲೋಕದ ಕಣ್ಣು, ನಮ್ಮ ಕಣ್ಣು ಆಗುತ್ತದೆ. ನಮ್ಮ ನೋಟ, ಲೋಕದ ನೋಟವೂ ಆಗುತ್ತದೆ. ಹಾಗೆ ಆಗುತ್ತಿರುವ ಈ ಚಲನೆಯನ್ನು ಗಮನಿಸುತ್ತಾ ಅದರ ಧ್ವನಿಯನ್ನು ಆಲಿಸುತ್ತಾ ಇರುವಾಗ ನಮಗೆ ಒಟ್ಟಾರೆ ಒಂದು ತಿಳಿವು ಬರುತ್ತದೆ. ಅದನ್ನು ನಮ್ಮ ಪ್ರಜ್ಞೆಯೂ ಗಮನಿಸುತ್ತದೆ. ಅಲ್ಲಿಂದಲೇ ನಮಗೊಂದು ರೂಪಕ, ಆಕಾರ, ವ್ಯಕ್ತಿತ್ವ ರೂಪುಗೊಳ್ಳುತ್ತದೆ.

ಇಂತಹ ಒಂದು ತಿಳಿವಿನಿಂದ ಮತ್ತು ನನ್ನ ಅಕ್ಷರದ ಆಸಕ್ತಿಯ ತುಡಿತದಿಂದ ಬರೆದ ಈ ಕಾದಂಬರಿಯ೦ತಹ ದೊಡ್ಡ ಕ್ಯಾನ್ವಾಸ್‌ನ ಮುಂದೆ ನಿಲ್ಲುವ ಧೈರ್ಯ ನನಗೆ ಅಂತೂ ದಕ್ಕಿದೆ. ಬರೆದು ಮುಗಿದ ಮೇಲೆ, ಅನ್ಯನಾಗಿ ಓದಿದೆ. ಮತ್ತೆ ಓದಿದೆ, ಮತ್ತೊಮ್ಮೆ ಓದಿದೆ. ಅನೇಕ ತಪ್ಪುಗಳು, ಅಪಬ್ರಂಶಗಳು ಕಂಡವು. ಆತಂಕವಾಯಿತು. ನನ್ನ ಮಿತಿ ಲೋಕಕ್ಕೆ ಕಾಣಿಸಲು ನನಗೆ ಸಂಕೋಚವೇನೂ ಇಲ್ಲ. ಆದರೆ, ಅದು ಕಲಾಕೃತಿಯಾಗದೆ ಕನಿಷ್ಟ ಕೌಶಲ್ಯವಿಲ್ಲದೆ ಲೋಕದೆದುರು ದೊಡ್ಡದಾಗಿ ತೋರಿಸುವುದು ನನ್ನಂತಹವನಿಗೆ ಸಂಕೋಚವೇ. ಹಾಗಾಗಿ ಸುಮಾರು ಇಪ್ಪತ್ತು ಸಲ ನನ್ನ ಈ ಕಾದಂಬರಿಯನ್ನು ನಾನೇ ಓದಬೇಕಾಯಿತು. ತಿದ್ದಿ, ತೀಡಿ ಕೊನೆಗೂ ನಿಲ್ಲಿಸಿ, ನನ್ನ ಹಿರಿಯ ಅಂತರ೦ಗ-ಬಹಿರ೦ಗದ ಮಾತುಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದಾದ ಕೆಲವೇ ಸಹೃದಯರಿಗೆ, ಸಂವೇದನಾಶೀಲರಿಗೆ ಕಾದಂಬರಿಯನ್ನು ತೋರಿಸಿದೆ. ಅವರೆಲ್ಲರೂ ಪ್ರೀತಿಯಿಂದ ಓದಿ ತಮ್ಮ ಮುಕ್ತವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ನನ್ನ ವಿಶ್ವಾಸ ಇಮ್ಮಡಿಯಾಯಿತು. ಪ್ರಕಟಣೆಗೆ ಕಳಿಸಿದೆ.

ನಾಲ್ಕು ದಶಕಗಳ ನನ್ನ ಆಸಕ್ತಿಯ ಗಂಭೀರ ಸಾಹಿತ್ಯಾಸಕ್ತಿಯ ಓದು ನನ್ನ ಈ ಬಾರಿ ಕಾದಂಬರಿಯ ಬರವಣಿಗೆಗೆ ಉಪಯೋಗಕ್ಕೆ ಬಂದಿದೆ. ಹಾಗಾಗಿ ಕಲೆಯ ನಿಶ್ಶಬ್ಧದೊಳಗೆ ಸಾವಧಾನವಾಗಿ ನಡೆದ ನನಗೆ ಸಾಹಿತ್ಯದ ಶಬ್ದಗಳಿಗೆ ತೆರೆದುಕೊಳ್ಳುವುದು ಕಷ್ಟವಾಗಲಿಲ್ಲ. ವಿಶಾಲ ಅರ್ಥದಲ್ಲಿ ಎಲ್ಲ ಅಭಿವ್ಯಕ್ತಿಗಳು ಕಲೆಯೇ. ಆದರೆ ಥಳುಕನ್ನು, ಕೌಶಲ್ಯ, ಚಮತ್ಕಾರಗಳನ್ನು ಮಾತ್ರ ನಾವು ಕಲೆಯೆಂದು ಭ್ರಮಿಸುವ ಒಂದು ಪೊಳ್ಳು ಆಸಕ್ತಿಯನ್ನು ನಮ್ಮ ಸಮಾಜ ಆಧುನಿಕ ಸಂಸ್ಕೃತಿ ಸಾಧಿಸಿಕೊಂಡಿದೆ. ನಮ್ಮ ಜನಪದ ಪ್ರಜ್ಞೆಗೆ ದಕ್ಕಿದ ಕಲೆಯ ಜೀವನ ಮೀಮಾಂಸೆ ನಮಗೆ ಯಾಕೋ ದಕ್ಕಲಿಲ್ಲ. ಕಾಣುವುದಕ್ಕಿಂತಲೂ ತೋರುವುದರಲ್ಲೇ ನಮಗೆ ಹೆಚ್ಚು ಆಸಕ್ತಿ. ಯಾರೋ ತೋರಿದ ದಾರಿ ನಮ್ಮ ಬದುಕಿಗೆ ವಿಮುಖವಾಗಿದೆ ಎಂದು ಅರಿವಿಗೆ ಬಂದರೂ ಸಮೂಹ ಸನ್ನಿಗೊಳಗಾದಂತೆ ಸುಮ್ಮನೆ ಎಲ್ಲಿಗೋ ನಡೆಯುತ್ತಲೇ ಇದ್ದೇವೆ.

ನಮ್ಮ ಹಿರಿಯರ ಬದುಕಿನ ಮೌನ, ನಿಶ್ಶಬ್ದ ಧ್ಯಾನ ಯಾವುದೂ ನಮಗೆ ಮುಖ್ಯ ಅನಿಸುತ್ತಿಲ್ಲ.ಒಬ್ಬ ದಾರಿಹೋಕನನ್ನು ಗುರು'ವೆಂದು ಗುರುತಿಸಿದ ನಮ್ಮ ಪೂರ್ವಜರ ಅಂತಃಪ್ರಜ್ಞೆಯ ಬಗ್ಗೆ ನಮ್ಮ ವಿಶ್ವಾಸವಿಲ್ಲದೆ ಹೋಯಿತು. ಒಂದು ನೆಲದಲ್ಲಿ ಬಾಳುವ ಅಸಂಖ್ಯಾತ ಜನರಲ್ಲಿ ಪ್ರತಿಯೊಬ್ಬನಲ್ಲೂ ಒಂದೊ೦ದು ಧರ್ಮ ಇರುತ್ತದೆ. ಅವನ ಪ್ರಜ್ಞೆಯಲ್ಲಿಯೇ ಒಂದು ನೀತಿಯ ಬೆಳಕು ಕಾಣುತ್ತಿರುತ್ತದೆ. ವ್ಯಕ್ತಿಯೊಳಗಿನ ಈ ಬೆಳಕು ಮಾತ್ರ ಆತನನ್ನು ಅಥವಾ ಅವಳನ್ನು ಅವಲಂಬಿಸಿದ, ಎಲ್ಲರನ್ನು ಪ್ರಕೃತಿ, ಪರಿಸರ ಉಳಿಸಿ ಬೆಳೆಸಬಲ್ಲದು. ಕೇವಲ ಒಂದೇ ಧರ್ಮ ಯಾರನ್ನೂ ಉಳಿಸಲಾರದು. ಸಾವಿರಾರು ವರ್ಷಗಳಿಂದ ಲೌಕಿಕದ ಎಲ್ಲ ಸಂಘರ್ಷಗಳನ್ನು ಜೊತೆಯಾಗಿ ಚೀಲದಲ್ಲಿ ತುಂಬಿಕೊ೦ಡೇ ನಮ್ಮ ಜನಪದರು ಇಷ್ಟು ದೂರ ಕಾಲುದಾರಿಯಲ್ಲೇ ನಡೆದು ಬಂದಿದ್ದಾರೆ. ತಮ್ಮ ತಮ್ಮ ಬದುಕನ್ನು ನಿಕಷಕ್ಕೆ ಒಡ್ಡಿಯೇ ಬೆಂದು, ಬದುಕಿ ತೋರಿದ್ದಾರೆ. ಅವರ ಬದುಕಿನ ನಿಷ್ಠೆಯಲ್ಲಿ ಎಲ್ಲವೂ ಆಗಿದೆ. ಜೀವನ ಪ್ರೀತಿ ಇರಿಸಿಕೊಂಡ ಯಾರಿಗೂ ಇದು ಅರ್ಥವಾಗದ ದೊಡ್ಡ ಮೀಮಾಂಸೆಯಲ್ಲ. ಅರ್ಥ, ಅನರ್ಥದ ಬಗ್ಗೆ ವಾದ ಮಾಡುವ ಇಬ್ಬರಿಗೂ ತಾವು ಸುಳ್ಳು ಹೇಳುತ್ತಿದ್ದೇವೆ ಎಂದು ತಿಳಿದಿರುತ್ತದೆ. ಆದರೂ ವಾದ ನಡೆಯುತ್ತದೆ. ವಾದದಲ್ಲಿ ಮಾತು ಬಲ್ಲವನು ಗೆಲ್ಲುತ್ತಾನೆ. ಆಗದವನು ಸೋಲುತ್ತಾನೆ. ಇಬ್ಬರನ್ನು ದೂರದಲ್ಲಿ ನಿಂತು ನೋಡುವವನು ಇಬ್ಬರಿಗೂ ಒಂದು ತಂಬಿಗೆ ನೀರು ತಂದುಕೊಡುತ್ತಾನೆ.

ಜೀವನ ಪ್ರೀತಿಗೆ ಇದು ಸಾಕಲ್ಲವೆ, ಇದು ಜೀವನ ದರ್ಶನವಲ್ಲವೇ? ಈ ಇಬ್ಬರೂ ಈ ದಾರ್ಶನಿಕನನ್ನು ಗಮನಿಸದಿದ್ದರೆ ಏನು ಪ್ರಯೋಜನ? ಮೂರು ದಶಕಗಳಬುದ್ಧ ಪ್ರಜ್ಞೆಯ ಅನ್ವೇಷಣೆಯಲ್ಲಿ ನನ್ನ ಕಲಾಕೃತಿಗಳಿಗೆ ರೂಪಕವಾಗಿ ದಕ್ಕಿದ್ದು ಬುದ್ಧನೆಂಬ ಬೆಳಕು, ೨೦೦೦ ನಂತರ ನಿಶ್ಶಬ್ಧ'. ೨೦೧೮ರಲ್ಲಿ ‘ಬೌಲ್’ ಸರಣಿ ಕಲಾ ಪ್ರದರ್ಶನ ನಡೆದು ಬುದ್ಧನ ಬೆಳಕಿನಲ್ಲಿ ಕಂಡ ಈ ಭಿಕ್ಷಾಪಾತ್ರೆ' ಎಂಬ ರೂಪಕ ಅತ್ಯಂತ ನಿರ್ಲಕ್ಷಗೊಂಡ ಬುದ್ಧನ ಜೀವನದ ಆರಂಭದಿ೦ದ ಕೊನೆಯ ದಿನದವರೆಗೂ ಅವನ ಜೊತೆಗಿದ್ದ ವಸ್ತು. ಅದು ಅವನ ಆರಂಭದಿ೦ದ ಅಂತ್ಯದವರೆಗೂ ಅವನ ಕೈಯಲಿದ್ದ ಬಿಕ್ಷಾಪಾತ್ರೆ. ಅದು ಅವನಿಗೆ ಜಡವಸ್ತುವಲ್ಲ. ಅದೊಂದು ರೂಪಕ. ಅದನ್ನು ಆತ ಜತನದಿಂದ ಕಾಯ್ದುಕೊಂಡಿದ್ದ. ಲೋಕಕ್ಕೆ ಈಬಿಕ್ಷಾಪಾತ್ರೆ’ ಮೂಲಕವೇ ತನ್ನ ಜೀವಿತವರೆಗೂ ಏನನ್ನೋ ಸೂಚಿಸುತ್ತಲೇ ಇದ್ದ, ಅವನ ನಿಶ್ಶಬ್ಧದ ಈ ಸೂಚನೆಗಳನ್ನು ಅವನೊಂದಿಗಿದ್ದ ಕೆಲವರು ಪಾಲಿಸಿದ್ದರೋ ಏನೋ, ಇಂತಹ ಪಾತ್ರೆ ಈಗ ನನಗೆ ಮುಖ್ಯವಾಗಿ, ಒಂದು ರೂಪಕವಾಗಿ ಕಂಡಿದೆ. ಅದೇ ಬುದ್ಧನ ‘ತ್ರಿಪಿಟಕ’ದ ಗೂಡಾರ್ಥ ಎಂದು ನನ್ನ ನಂಬಿಕೆ. ತೆರೆದ, ಬೋರಲು ಹಾಕಿದ, ಮತ್ತೆ ತೆರೆದ ಈ ಭಿಕ್ಷಾಪಾತ್ರೆಯ ಮೂರು ಸ್ಥಿತಿಗಳು, ಬಳಕೆ, ಜೀವನದ ನಿರತ-ನಿರಂತರತೆಯನ್ನು ತೋರಿಸುವ ಸರಳ ಸೂಚನೆ. ತೆರೆದಿಟ್ಟ ಪಾತ್ರೆಗೆ ಯಾರೋ ಸುರಿದ ಆಹಾರ, ಅವನಿಗೆ ಅಂದಿನ ಜೀವದ್ರವ. ನಂತರ ಅದನ್ನು ತೊಳೆದು ಶುಚಿ ಮಾಡಿ ಮಗುಚಿ ಹಾಕಿದರೆ ಮುಗಿಯಿತು ಅಂದಿನ ಸ್ವೀಕಾರ. ಬೋರಲು ಹಾಕಿದ ಭಿಕ್ಷಾಪಾತ್ರೆಗೆ ಏನನ್ನಾದರೂ ತುಂಬಿಸಲು ಸಾಧ್ಯವೆ? ಬದುಕಿಗೆ ಇನ್ನು ಸಾಕು' ಎನ್ನಲು ಇದಕ್ಕಿಂತಲೂ ಉತ್ತಮ, ಸರಳ ನಡೆಯುಂಟೆ. ಇದೊಂದು ಸಂಕೀರ್ಣ ಸೂಚನೆ. ಅವನ ಈ ಸೂಚನೆ ಜಗತ್ತಿನ ಪ್ರಜ್ಞಾವಂತರಿ೦ದ ಮುಗ್ಧರವರೆಗೂ ಸರಳವಾಗಿ ಅರ್ಥವಾಗುವಂತಹವು. ಸ್ವೀಕಾರ, ನಿರಾಕರಣೆಗಳ ಜವಾಬ್ದಾರಿಯನ್ನು ಮಾರ್ಮಿಕವಾಗಿ, ಮುಕ್ತವಾಗಿ ತೋರಿದ ಅವನ ಈ ನಡೆ ಈ ಆಧುನಿಕ ಕಾಲದಲ್ಲೂ, ನಮ್ಮ ಧಾವಂತದ ಜೀವನದ ಇತಿಮಿತಿಯಲ್ಲೂ ಪ್ರಸ್ತುತವಾಗಿದೆ. ಹಾಗಾಗಿ ಬುದ್ಧನ ಈ ಭಿಕ್ಷಾಪಾತ್ರೆ ನನ್ನ ಬದುಕಿಗೂ ದಕ್ಕಿದ ಬಹುದೊಡ್ಡ ರೂಪಕ. ಭಿಕ್ಷಾಪಾತ್ರೆಯ ಈ ಆಕಾರವೇ ವಿಸ್ತಾರವಾಗಿ, ಬಿಡಿ, ಬಿಡಿಯಾಗಿ ಇಲ್ಲಿನ ಅಕ್ಷರದ ಸಾಲುಗಳಾಗಿವೆ. ಅಕ್ಷರವೂ ಚಿತ್ರವೇ. ಅಕ್ಷರದ ತಾಯಿ ಚಿತ್ರವೇ. ಈ ಕಾದಂಬರಿಯ ಶೀರ್ಷಿಕೆಬೌಲ್’ ಎಂದು ಬಳಸಿರುವುದಕ್ಕೆ ಬಹು ಮುಖ್ಯ ಕಾರಣ; ಈಗಾಗಲೇ ಬೌಲ್' ಚಿಂತನೆ ಜಾಗತಿಕ ನೆಲೆಯಲ್ಲಿ ತನ್ನ ಅರ್ಥ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಅಲ್ಲಿ ಅದು ಕೇವಲ ಭಿಕ್ಷಾಪಾತ್ರೆಯಾಗಿಲ್ಲ. ಅದೊಂದು ವಿಶಾಲ ಅರ್ಥದ ಅಸ್ಮಿತೆ. ನನಗೆ ಲೋಕಸತ್ಯ ಕಾಣಿಸಿದ ಮೂರ್ತ- ಅಮೂರ್ತಗಳ ನಡುವಿನ ವಾಸ್ತವ ಚಿಂತನೆ. ಈ ಎಲ್ಲವನ್ನು ಅದರ ಧ್ವನಿಯಲ್ಲೇ ನನ್ನ ಕನ್ನಡದ ಓದುಗರಲ್ಲಿ ಹಂಚಿಕೊಳ್ಳುವುದು ನನಗೆ ಮುಖ್ಯ ಅನಿಸಿದೆ. ಹಾಗಾಗಿಬೌಲ್’ ಕಾದಂಬರಿಯ ಮುಖಪುಟದಲ್ಲಿ ಶೀರ್ಷಿಕೆಯಾಗಿ ದಾಖಲಾಗಿದೆ.

ಮೆಲುದನಿಯಲ್ಲೇ, ಹೇಳಬೇಕಾದ್ದನ್ನು ಸ್ಪಷ್ಟವಾಗಿ, ಸರಳವಾಗಿ ವ್ಯಕ್ತಪಡಿಸುವ ದಶಕಗಳ ನನ್ನ ಹಿರಿಯ ಆಪ್ತ ಮಿತ್ರರಾದ ಪ್ರೊ. ಎನ್ ಮನು ಚಕ್ರವರ್ತಿ ಅಷ್ಟು ಸುಲಭದಲ್ಲಿ ದಕ್ಕುವ ವ್ಯಕ್ತಿಯಲ್ಲ. ಲೋಕವನ್ನು ಗಮನಿಸುವ, ಸಂಕೀರ್ಣತೆಯನ್ನು ಅದರ ಸಂವೇದನೆಗೆ ಧಕ್ಕೆಯಾಗದಂತೆ ಅತ್ಯಂತ ಬದ್ಧತೆಯಿಂದ ಬರೆಯುವ ಮತ್ತು ಅಷ್ಟೇ ಅಧಿಕೃತವಾಗಿ ಮಾತನಾಡಬಲ್ಲ ಸಂವೇದನಾಶೀಲರಾದ ಮನು ನನ್ನ ಈ ಕಾದಂಬರಿಯನ್ನು ಓದಿ ವಿಸ್ತೃತವಾದ ಮುನ್ನುಡಿಯನ್ನು ಬರೆದಿದ್ದಾರೆ. ಮುನ್ನುಡಿಯ ಜೊತೆಗೆ ಕಾದಂಬರಿಯನ್ನು ಓದುವಾಗ ಇದು, ಇಲ್ಲದಿದ್ದರೆ ನನ್ನ ಈ ಕಾದಂಬರಿ ಅಪೂರ್ಣವಾಗುತ್ತಿತ್ತು ಎಂದು ಒಂದು ಕ್ಷಣ ಅನಿಸಿದೆ. ಹಾಗೆ ನನಗೆ ಅನಿಸಿದ್ದರಲ್ಲಿ ಯಾವ ಉತ್ಪೇಕ್ಷೆಯೂ ಇಲ್ಲ. ಅವರು ತಮ್ಮ ಮುನ್ನುಡಿಯ ಮೂಲಕ ಕೃತಿಯನ್ನು ಓದುಗರು ಸಹಜವಾಗಿ ಪ್ರವೇಶಿಸಲು ಅನುವು ಮಾಡಿಕೊಟ್ಟು ನನ್ನನ್ನು ಗೌರವಿಸಿದ್ದಾರೆ. ಅವರ ಈ ಗೌರವ, ಪ್ರೀತ್ಯಾದರಗಳಿಗೆ ನಾನೆಂದೂ ಋಣಿ ಎಂದಷ್ಟೇ ಹೇಳಬಲ್ಲೆ.

ನನ್ನ ಆತ್ಮೀಯ ಮಿತ್ರರೂ, ಕನ್ನಡ, ತಮಿಳಿನ ಜನಪ್ರಿಯ ಸಾಹಿತಿ ಮತ್ತು ಕನ್ನಡದ ಸಾಹಿತಿಗಳ ನೆಚ್ಚಿನ ಭಾಷಾಂತರಕಾರರೂ ಆಗಿರುವ ನಲ್ಲತಂಬಿ ಅವರು ಈಗಾಗಲೇ ನನ್ನ ‘ಯಶೋಧರೆ ಮಲಗಿರಲಿಲ್ಲ’ ನಾಟಕವನ್ನು ತಮಿಳಿಗೆ ಸೊಗಸಾಗಿ ಭಾಷಾಂತರಿಸಿದ್ದಾರೆ. ಇಂತಹ ಸಾಹಿತ್ಯಾಸಕ್ತ ಮಿತ್ರರು ‘ಬೌಲ್' ಕಾದಂಬರಿಯ ವಸ್ತುವನ್ನು ನನ್ನಿಂದ ಕೇಳಿಯೇ ಇಷ್ಟಪಟ್ಟದ್ದು, ಹಸ್ತಪ್ರತಿ ಪಡೆದು ಓದಿ, ತಮಿಳು ಭಾಷೆಗೆಬೌಲ್’ ನ್ನು ತರ್ಜುಮೆ ಮಾಡಿದ್ದು ಈ ಕಾದಂಬರಿಗೆ ಗೌರವ ತಂದಿದೆ. ನಮ್ಮ ಕುಟುಂಬದ ಭಾಗವೇ ಆದ ಪ್ರೊ. ಹೆಚ್.ಎಸ್. ರಾಘವೇಂದ್ರರಾವ್ ಮತ್ತು ಶ್ರೀಮತಿ ನಿರುಪಮ ಅವರು ಎಂದಿನ ಪ್ರೀತಿಯಿಂದಲೇ ಈ ಕಾದಂಬರಿಯನ್ನು ಓದಿ ತಮ್ಮ ಅಭಿಪ್ರಾಯ ನನ್ನೊಂದಿಗೆ ಹಂಚಿಕೊ೦ಡಿದ್ದಾರೆ.

ಮಿತ್ರ ಮಲ್ಲಿಕಾರ್ಜುನ ಮಹಾಮನೆ ‘ಬೌಲ್' ಕಾದಂಬರಿಯ ವಸ್ತು ವಿವರಣೆಯನ್ನು ಕೇಳಿಯೇ ಕಾದಂಬರಿಯನ್ನು ಆಸಕ್ತರ ಮುಂದೆ ವಾಚನ ಮಾಡಿಸುವ ಯೋಜನೆಯನ್ನೇ ರೂಪಿಸಿದರು. ಅವರೊಂದಿಗೆ ಬರಹಗಾರ ಮಿತ್ರರಾದ ರಾಜಪ್ಪ ದಳವಾಯಿ, ವಿವೇಕಾನಂದ ಕೈಜೋಡಿಸಿದರು. ನನ್ನದೇ ಕಾದಂಬರಿಯನ್ನು ಅನ್ಯನಾಗಿ ಕೇಳಿಸಿಕೊಳ್ಳುವ ಆ ಅನುಭೂತಿಗೆ ಕುತೂಹಲದಿಂದ ಕಾದೆ. ಈ ಕಾರ್ಯಕ್ರಮಕ್ಕೆ ಕಳಶವಿದ್ದಂತೆ ಅತ್ಯಂತ ಸೂಕ್ತವಾದ ಕನ್ನಡ ಕಲಾ ಪ್ರತಿಭೆಯಾದ ಜನಪ್ರಿಯ ನಟ, ವಾಗ್ಮಿ, ಚಿಂತಕರೂ ಆದ ಮಿತ್ರ ಸುಚೀಂದ್ರ ಪ್ರಸಾದ್ ಅವರ ಧ್ವನಿಯಲ್ಲಿ ಸುಮಾರು ಆರು ತಾಸು ಕಾಲ ಇಡೀ ಕಾದಂಬರಿಯ ವಾಚನವಾಯಿತು. ಶ್ರದ್ಧಾಸಕ್ತಿಯನ್ನು ಅರಳಿಸುವ ಅವರ ಕಂಚಿನ ಧ್ವನಿ ನೆರೆದಿದ್ದ ಎಲ್ಲ ಪ್ರೇಕ್ಷಕರು ಪೂರ್ಣ ಕಾದಂಬರಿಯ ಓದಿನ ಸೊಗಸನ್ನು ಆಸ್ವಾದಿಸಲು ಪ್ರೇರಣೆಯಾಯಿತು.

ದಣಿವರಿಯದ ಅವರ ವಾಚನಾಶಕ್ತಿ ಮತ್ತು ಕಾದಂಬರಿಯನ್ನು ಸ್ವಯಂ ನಾಲ್ಕು ಬಾರಿ ಓದಿ ಅವರು ಕಾದಂಬರಿಯ ಧಾತುವನ್ನು ಕುರಿತು ಆಡಿದ ಕೆಲವೇ ಮಾತುಗಳು ನನ್ನನ್ನು ಮೂಕನನ್ನಾಗಿಸಿದವು. ಕಲಾವಿದ ಮಿತ್ರ ಸುಚೀಂದ್ರ ಪ್ರಸಾದ್ ಅವರ ವಿದ್ವತ್ತಿಗೆ ಪ್ರಾಮಾಣಿಕ ಓದಿಗೆ ಮತ್ತು ಪ್ರೀತಿ ವಿಶ್ವಾಸಗಳಿಗೆ ನಾನೆಂದೂ ಋಣಿ. ಅನೇಕ ಸಾಹಿತ್ಯಾಸಕ್ತ ಆತ್ಮೀಯರು ಕಾದಂಬರಿ ವಾಚನದ ಇಂತಹದೊ೦ದು ಚಾರಿತ್ರಿಕ ಸಂದರ್ಭದಲ್ಲಿ ಕಾದಂಬರಿಯನ್ನು ಪೂರ್ಣ ಕೇಳುವ ಸೌಜನ್ಯ ತೋರಿದ್ದಾರೆ. ಹಿರಿಯ ನಿರ್ದೇಶಕರಾದ ಹುಲಿ ಚಂದ್ರಶೇಖರ್ ‘ಬೌಲ್’ ಸಿನಿಮಾ ನಿರ್ದೇಶಿಸಲು ಚಿತ್ರಕಥೆ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಆತ್ಮೀಯರಾದ ಗಿರೀಶ್ ಕಾಸರವಳ್ಳಿ, ಪ್ರೊ. ಹೆಚ್.ಎಸ್. ರಾಘವೇಂದ್ರ ರಾವ್, ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ, ಡಾ. ಡಿ.ಸಿ. ಗೀತಾ, ಎಂ.ಆರ್. ಭಗವತಿ, ಮರಿಯಯ್ಯಸ್ವಾಮಿ, ತುಂಬಾಡಿ ರಾಮಯ್ಯ, ಡಾ. ಕರೀಗೌಡ ಬೀಚನಹಳ್ಳಿ, ಡಾ. ಕೆ.ಸಿ. ಶಿವಾರೆಡ್ಡಿ, ಡಾ. ನೂರ್ ಅಹಮದ್, ಡಾ. ಸುಭಾಷ್ ರಾಜಮನೆ ಈ ಎಲ್ಲರಿಗೂ ನನ್ನ ಕೃತಜ್ಞತೆಗಳು. ಇವರುಗಳು ಕಾದಂಬರಿಯ ಕರಡು ಓದಿ ತಮ್ಮ ಅಮೂಲ್ಯ ಅಭಿಪ್ರಾಯ ನೀಡಿ ಸಹಕರಿಸಿದ್ದಾರೆ. ತನ್ನ ಕಾರ್ಯಬಾಹುಳ್ಯದ ನಡುವೆಯೂ ‘ಬೌಲ್’ನ್ನು ಸೌಜನ್ಯದಿಂದ ಓದಿದ ನನ್ನ ಶ್ರೀಮತಿ ರತ್ನ, ಮೂಲ ಪ್ರತಿಯ ನನ್ನ ಕೈಬರಹದ ಮಿತಿಯನ್ನು ಸಹಿಸಿ ತನ್ನ ಮಿತಿಯಲ್ಲೇ ಕನ್ನಡದಲ್ಲಿ ಡಿಟಿಪಿ ಮಾಡಿದ ಆದಿತ್ಯ ಮತ್ತು ಮುಖಪುಟ ವಿನ್ಯಾಸ ರೂಪಿಸಿದ ಸಿದ್ಧಾರ್ಥ. ಈ ಕಾದಂಬರಿಯನ್ನು ಪೂರ್ಣವಾಗಿ ಓದಲು ಕಾತರಿಸುತ್ತಿರುವ ನನ್ನ ಮಗಳಂತಿರುವ ಸೊಸೆ ಸಿಂಚನ ಈ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ.

ಈ ಕಾದಂಬರಿಯಲ್ಲಿ ಹೆಚ್ಚು ಪಾತ್ರಗಳಿಲ್ಲ. ಸುಮಲತೆ, ಮಾಲಿಂಗ, ಆನಂದ, ಬಿಕು, ಗುರುಗಳು, ಅಜ್ಜ ಇಷ್ಟೇ ಮುಖ್ಯ ಪಾತ್ರಗಳು. ಇವೆಲ್ಲವೂ ತಮ್ಮ, ತಮ್ಮ ನೆಲೆಯಲ್ಲಿ, ಅವುಗಳ ಸಂಸ್ಕಾರದ ಮಿತಿಯಲ್ಲಿ ವ್ಯಕ್ತಿತ್ವಗಳಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿವೆ. ಇವು, ನನ್ನ ಪ್ರಜ್ಞೆಯ ಮಿತಿಯಲ್ಲಿ ಹೊಳೆದ ಅಕಾರಕ್ಕೆ ದಕ್ಕಿದಂತೆ ಈ ಕಥೆಯನ್ನು ಮುನ್ನಡೆಸಿವೆ. ಕಾದಂಬರಿಯ ಈ ಪಾತ್ರಗಳು, ಅಕ್ಷರಗಳು, ಪುಟಗಳು ಓದುಗರ ಓದಿಗೆ ಅನುವು ಮಾಡಿ ಕೊನೆಯ ಪುಟದವರೆಗೂ ಕರೆದೊಯ್ಯುವಂತಾದರೆ ನನ್ನ ಈ ಮೊದಲ ಬಹುಶಃ ಕೊನೆಯ ಕಾದಂಬರಿಯು ಸಾರ್ಥಕತೆ ಪಡೆದಂತೆ. ಈ ಬೌಲ್' ಕಾದಂಬರಿಯ ಕುರಿತಂತೆ ಪುಸ್ತಕ ಕೊಂಡು ಓದಿದ ಸಹೃದಯ ಓದುಗರಿಂದ ಮುಕ್ತ ಪ್ರತಿಕ್ರಿಯೆಯನ್ನು ನಾನು ಸ್ವಾಗತಿಸುತ್ತೇನೆ. ಇಷ್ಟೆಲ್ಲಾ ನಂತರ ಬಹು ಮುಖ್ಯವಾಗಿ ಕಾದಂಬರಿಯ ಡಿ.ಟಿ.ಪಿ. ಮಾಡುವ ಹಂತದಲ್ಲೇ ಈ ಕೃತಿಯನ್ನು ನಾನೇ ಪ್ರಕಟಿಸುತ್ತೇನೆ ಎಂದು ಆಶಯ ವ್ಯಕ್ತಪಡಿಸಿದ ಜಿ.ವಿ. ಧನಂಜಯ ಅವರು ತಮ್ಮ ಕಿರಂ ಪ್ರಕಾಶನದ ಮೂಲಕಬೌಲ್’ ಕಾದಂಬರಿಯನ್ನು ಹೊರತರುತ್ತಿದ್ದಾರೆ. ಅವರ ಆಸಕ್ತಿ, ನಿಷ್ಠೆಗೆ ನಾನು ಋಣಿಯಾಗಿದ್ದೇನೆ.

ಇನ್ನು ಪುಸ್ತಕವನ್ನು ಅಂದವಾಗಿ ಮುದ್ರಿಸಿದ ಉಷಾ ಗ್ರಾಫಿಕ್ಸ್ ಅವರಿಗೆ, ಜನರಿಗೆ ತಲುಪಿಸುವ ಮಾರಾಟಗಾರರಿಗೆ, ಕೊಂಡು ಓದುವ ಸಹೃದಯ ಓದುಗ ಮಿತ್ರರಿಗೆ ನನ್ನ ಅನಂತಾನ೦ತ ಕೃತಜ್ಞತೆಗಳು.

‍ಲೇಖಕರು Admin

August 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: