ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ಎಸ್ ಪ್ರಕಾಶ್ ಬಾಬು ಹೊಸ ಕವಿತೆ ‘ಮೂಳೆಗಳ ಮೆರವಣಿಗೆ’

ಎಂ ಎಸ್ ಪ್ರಕಾಶ್ ಬಾಬು

**


ಕುಕ್ಕರಗಾಲಲ್ಲಿ ಕುಳಿತು
ಕತ್ತು ಬಗ್ಗಿಸಿ
ನೆಲವ ಕೆರೆಯುತ್ತಿರುವೆ ಏಕೆ?
ನೀ ಕೆರೆದ ನೆಲದಿಂದ ನೀರ
ಬಯಕೆಯ ಕನಸಾ…

ಮೂರ್ಖ…ನೀ ಕೆರೆದ
ನೆಲದಿಂದ ಏಳುತ್ತಿವೆ
ಭೂತದ ಮೂಳೆಗಳು
ಏಳುತ್ತಿವೆ ಇತಿಹಾಸದ ಅಸ್ತಿಪಂಜರಗಳು

ಏಳುತ್ತಿವೆ ಭೂತಗಳು
ವರ್ತ-ಮಾನವ ಕೊಲ್ಲಲು
ಏಳುತ್ತಿವೆ ದೇವಾನು ದೇವತೆಗಳು
ತಳದಿಂದೊತ್ತಿ
ಪಕ್ಕೆ ಎಲುಬಿಂದೊತ್ತಿ
ಅತ್ತಿಂದಿತ್ತ ಇತ್ತಿಂದತ್ತ
ರಥವೇರಿದ
ದೇವತೆಗಳ ಮೂಳೆ ಮೆರವಣಿಗೆ

ಗೇಯ ಗೀತೆಗಳ
ಗಂಟೆ ಜಾಗಟೆಗಳ
ಶಂಖ ಘೋಷಗಳ
ಚೀತ್ಕಾರ
ರಾರಾಜಿಸುತ್ತಿವೆ ದೀಪಗಳು
ಮುಗ್ಧ ಜನರ ಒಡಲಸುಟ್ಟು
ಮನೆಮುರಿದು ಒತ್ತಟ್ಟಿಗಿಟ್ಟು
ಮಾಡ ಬನ್ನಿ, ಮೂಳೆಗಳಿಗೆ ಪ್ರಾಣ ಪ್ರತಿಷ್ಠೆ

ಇದ ಕಂಡು ಕಣ್ಣೀರ ಕೋಡಿ ಹರಿದಿತ್ತು
ಹರಿದ ಕಣ್ಣೀರ ನೀರು
ಊರುಕೇರಿಗಳಳೊಕ್ಕು, ಕೊಚ್ಚಿ
ಕೊಚ್ಚೆ ರಾಡಿ ಮಾಡಿತ್ತು
ರಚ್ಚೆ ಹಿಡಿದಂತೆ ಆಡುತ್ತಿದ್ದ
ನಾಡ ಮಕ್ಕಳು
ಬೊಗಸೆಯಲ್ಲಿಡಿದಿಡಿದು ನೀರ
ಕುಡಿದವು

ಇರಲಿ, ಇಷ್ಟು ದಿನ
ಸಾರಿಸಿ ಗುಡಿಸಿ ಒಪ್ಪ ಓರಣ
ಮಾಡಿಟ್ಟ ಅಂಗಳವ
ಈಡಾಡಿದಿರಲ್ಲೋ
ಆಳದಲಿ ಅಡಗಿದ್ದ
ಮೂಳೆಗಳ ಎಬ್ಬಿ ಎತ್ತಿದಿರಲ್ಲೋ
ಈಗ ನಿಮಗೆಲ್ಲಿಯಾ ಜಾಗ
ಎಲ್ಲೆಲ್ಲೂ ಮೂಳೆಗಳೇ ಈಗ

‍ಲೇಖಕರು Admin MM

19 March, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading