ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಷಾ ನರಸಿಂಹನ್ ಕವಿತೆ – ಸೀರೆ ಮತ್ತು ಕವಿತೆ

ಉಷಾ ನರಸಿಂಹನ್

ಉಡುವ ಸೀರೆ ಉಟ್ಟವರ ತೋರಬೇಕು…
ತೋರದಂತೆಯೂ ಇರಬೇಕು !
ಕವಿತೆಯೂ ಹಾಗೇ…
ಬರೆದರೂ ಬರೆದಂತಿರಬಾರದು !
ಒಳಗುಟ್ಟುಗಳ ಬಿಟ್ಟು ಕೊಡದೆ
ಪಟ್ಟಾಗಿ ಬಚ್ಚಿಟ್ಟುಕೊಂಡು ಯಾವ
ಚಿಂತನ ಮಂಥನಗಳಲೂ ನವನೀತವಾಗದೆ
ಮೊಗರಾಗಬೇಕು !

ಬೆರಳ ನಡುವೆ ನಾಜೂಕಾಗಿ ನಿರಿ ಹಿಡಿವಾಗ
ಹೆಗಲಿಂದ ತೊಂಗುವ ಸೆರಗಿನ ಪರಿವೆಯಿರಬೇಕು…
ಇಲ್ಲ

ಮೊದಲಿಗೇ ಸೆರಗು ಒಪ್ಪ ಮಾಡಿ ಪಿನ್ನು ಸಿಕ್ಕಿಸಿದರೂ
ಕಡಿಮೆಯಾಗಿಬಿಡುವ ನೆರಿಗೆಗಳ ಅರಿವಿರಬೇಕು !
ಭಾವಾರ್ಥ ಕೋಶಗಳ ಅಕ್ಕರಗಳಾಗಿಸುವ ಹೊತ್ತಲ್ಲಿ
ಪದಪದಕೂ ಒಸರುವ ರಸಾರ್ದ್ರತೆ ತೇವ ಕೈ
ಹತ್ತದಂತಿರಬೇಕು !
ಹಾಗೆಂದು ಒಣ ಒಣ ಬರೆದು ಬಿಟ್ಟರೆ ತೇವ ತಡುಕುತ್ತಾ
ಬಾವಿ ತೋಡದಂತಿರಬೇಕು !

ಹಿಡಿದ ನೆರಿಗೆ ದಾಟಿ ಮೋಹಕ ನಡುವ ಹಾಯ್ದು
ವಕ್ಷದ ಬಿಗುಪನಪ್ಪಿ ಹೆಗಲಿಗೇರುವ ಸೀರೆ
ಎಲ್ಲವನು ಮುಚ್ಚಿಡುತ್ತಲೇ ಬಿಚ್ಚಿಟ್ಟಂತೆ ಕೆಣಕಬೇಕು !
ಬರೆದ ಪದಪದಲ್ಲೂ ಗುಟ್ಟು ಗುಮಾನಿ
ಪೊಲ್ಲು ಪಕಳೆಗಳ ನವಿರಿದ್ದರೂ
ಎಲ್ಲೂ ಗುಲ್ಲಾಗದೆ ಗಂಭೀರಶರಧಿಯ
ಶಾಂತಮೈಯ್ಯಂತಿರಬೇಕು.

ನಡುವಿನಲ್ಲಿ ಕಾಮನಡವು,
ಪಾದಗಳೂ ಕಾಮಜತಿಯಾಗುವುದು
ನೀರೆಯನ್ನೂ ಒರೆದು ತೋರುವ ಸೀರೆಯ ಹಾಗೆ…
ಗುಟ್ಟು ಗುಮಾನಿಗಳ ಸುಳಿ,
ತಿರುಗಣೆ ಮಡುಗಳ ಗಿರಿಗಿಟ್ಟಲೆಯಾಡುತ್ತಲೆ
ಮೈಸೊಕ್ಕಿಗೆ ಸುಲಭದಕ್ಕದ ಮಾನಿನಿಯ ಮೋಹಕ
ಚೆಲುವಂತೆ ಕವಿತೆಯಿರಬೇಕು.

‍ಲೇಖಕರು Admin

5 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading