ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಳಿಪೆಟ್ಟುಗಳ ತಿನ್ನುತ್ತಲೇ..

ಜೀವ ಸೆಲೆ

ಕೃಷ್ಣ ಶ್ರೀಕಾಂತ ದೇವಾಂಗಮಠ

 

ಉಳಿಪೆಟ್ಟುಗಳ ತಿನ್ನುತ್ತಲೇ
ಕುಲುಮೆಯಲ್ಲಿ ಕಾಯುತ್ತಲೇ
ಬೇಯುತ್ತಲೇ ಅರಳುವ
ಹದಗೊಳ್ಳುತ್ತಲೇ ಬೆರೆಯುವ
ಬೆರೆಸಿಕೊಳ್ಳುವ ಎಂದಿಗೂ ಬಾಡದ
ಸ್ವರ್ಣ ಮೂರ್ತಿ ಲಿಪಿ

ಘಮವ ಕತ್ತಲಿಗೆ ನೂಕಿ
ಬೆಳಕ ಅಡರಿಸಿದೆ
ಜಿಹ್ವೆಗೆ ಈ ನುಡಿಯದೇ ಚಪಲ
ಬೇರಾವುವೂ ರುಚಿಸುತ್ತಿಲ್ಲ
ಕಬ್ಬಿನದ ಕಡಲೆಯಂಥ ಸರಳನ್ನ
ಬೆನ್ನೆಲುಬಾಗಿಸಿಕೊಂಡು
ಏಳು ಹೆಡೆಯ ಸರ್ಪ ತುಳಿದ
ಕೃಷ್ಣನ ಕೊಳಲ ನಾದವಾಗಿ
ಮಧುರತೆಯ ಕಿವಿಗಳಿಗೆ
ಎರಕ ಹೊಯ್ಯುತ್ತದೆ ನುಡಿ

ಕೆಲವರಿಗಿದು ಮೊನಚಾದ ಸೂಜಿ
ಚುಚ್ಚುತ್ತದೆನ್ನುತ್ತಾರೆ
ದೂರದ ಪರಕೀಯರು
ಹಲವರಿಗೆ ಆಡಿದರೆ ಅಹಃ
ಅಡ್ಡಗಟ್ಟುತ್ತದೆ ಸ್ವಂತದವರೇ
ದಾರ ಪೊಣಿಸಿದರೆ ಹರಕು
ಮುರುಕುಗಳ ಬೆಸೆಯುತ್ತದೆ
ಒಳಕ್ಕೆ ನಾಟಿಸಿಕೊಂಡರೆ ಎದೆಯಲ್ಲಿ
ಸೆಳೆತದ ಹರಿವು ಪ್ರವಹಿಸುತ್ತದೆ
ಕನ್ನಡ ಚಿಗುರೊಡೆದು ಬಳ್ಳಿಯಂತೆ ಹಬ್ಬಿ
ಹೆಮ್ಮರವಾಗುತ್ತದೆ

ನುಡಿಯ ಪ್ರತಿ ಸೊಲ್ಲು ಬೆರಗುಗಳ
ನೇಯ್ದು ತೊಡಿಸುತ್ತದೆ
ಕವಿತೆಗಳು ಕಲ್ಲು ಹೃದಯ ಕರಗಿಸಿ ಕಥೆಯಾಗಿಸುತ್ತವೆ
ಕಲ್ಲಲ್ಲೂ ಜೀವ ಕುಡಿಯೊಡೆಯುತ್ತದೆ

ಇಲ್ಲಿ ಮಣ್ಣಿನ ಪ್ರತಿ ಕಣ ಚಿಣ್ಣದ ಹರಳು
ನೀರಿನ ಒಂದೊಂದು ಬಿಂದುವೂ ಅಮೃತ
ಇದ ಜೀವಂತ ಉಸಿರಾಡಿದರೆ
ಹಳೆ ನಡು ಹೊಸಗಣ್ಣಡದ
ಎಲ್ಲ ಎಲ್ಲರೂ ದಕ್ಕುತ್ತಾರೆ
ಸರಸ್ವತಿಯ ವಾಗ್ಬಂಡಾರವೂ

‍ಲೇಖಕರು admin

14 January, 2017

1 Comment

  1. ಅಕ್ಕಿಮಂಗಲ ಮಂಜುನಾಥ

    ಪದ್ಯ ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading