ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಮಾ ಮುಕುಂದ್ ಹೊಸ ಕವಿತೆ- ಬಿಸಿ, ಬಿಸುಪು, ತಂಪು…

ಉಮಾ ಮುಕುಂದ್

ನಿನಗಿಷ್ಟವಾದರೂ ಕಡುವಾದ ಸುಡು ಕಾಫಿ
ಬಿಸಿತಾಗದಿರಲು ಬೆರಳಿಗೆ, ಬಟ್ಟಲೊಳಗೊಂದು
ಬಟ್ಟಲಿಟ್ಟು ಚಪ್ಪರಿಸುತ್ತಿದ್ದೆ ಕೊನೆ ಹನಿತನಕ
ಮೊನ್ನೆಯವರೆಗೆ

ನಿನಗಿಷ್ಟವಾದರೂ ಹಬೆಯಾಡುವ ಬಿಸಿಯನ್ನ,
ಮೇಲೋಗರ, ಬೇಕೇಬೇಕಿತ್ತು ಉಣುವಾಗ
ತಲೆ ಮೇಲೆ ತಿರುಗುವ ತಣ್ಣನೆಯ ಪಂಕ
ಮೊನ್ನೆಯವರೆಗೆ

ಮೂಳೆ ಕೊರೆವ ಚಳಿಗಾಲದಲ್ಲಿ ರಗ್ಗು ಹೊದ್ದು
ಮಲಗಿದಾಗಲೂ ಬೇಕಿತ್ತು ತಂಪು ಗಾಳಿಗೆ,
ತೆರೆದ ಕಿಟಕಿ ಬಾಗಿಲು ಮೊನ್ನೆಯವರೆಗೆ

ತಂಪೆಣ್ಣೆಯೊತ್ತಿ ನೆತ್ತಿ, ಬೆನ್ನಿಗೆ ಎರೆದಾಗ
ಸುಡು ಸುಡು ನೀರ, ದಮ್ಮಯ್ಯ.. ಸಾಕು
ಬೆರೆಸು ತಣ್ಣೀರೆಂದು ಬೇಡಿಕೊಳ್ಳುತ್ತಿದ್ದೆ
ಮೊನ್ನೆಯವರೆಗೆ

ಕಾದು ಕೂತಿದ್ದ ಕಾಲನೆಂಬ ಕಳ್ಳ
ಕದ್ದೊಯ್ದಾಗ ನಿನ್ನ ಇದ್ದಕ್ಕಿದ್ದಂತೆ,
ಕಡೆಯ ಬಾರಿ ತಬ್ಬಿ ಕಳಿಸಿದೆವು
ಕಾದು ಕಾದಿದ್ದ ಕೆಂಡದೊಲೆಯ ತೆಕ್ಕೆಗೆ
ಉಸಿರು ನಿಲ್ಲಿಸಿದ ಮಾರನೆಗೆ..

ನಮ್ಮೊಡಲ ಕಾವು ಮತ್ತಷ್ಟು
ಸುಟ್ಟೀತೆಂದು ಅಂಜಿಕೊಂಡೆ ‌‌
ಎದೆಗಪ್ಪಿಕೊಂಡು ಮಡಕೆಯ
ವಿಸರ್ಜಿಸಿದೆವು ನಿನ್ನ ಅಸ್ತಿಯ
ಸಂಗಮದ ಕಡು ತಂಪಿಗೆ, ಕಡೆಗೆ..

‍ಲೇಖಕರು Admin

22 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading