ಪುರುಷೋತ್ತಮ ಬಿಳಿಮಲೆ ಓದಿದ ‘ಪುರಾಣ ಕನ್ಯೆ’

ಡಾ ಪುರುಷೋತ್ತಮ ಬಿಳಿಮಲೆ

ಕಾತ ಚಿಕ್ಕಣ್ಣನವರ ಪುರಾಣ ಕನ್ಯೆ ಕಾದಂಬರಿ ಒಂದು ಹೊಸ ಪ್ರಯೋಗ. ಅದನ್ನು ಅರ್ಥಮಾಡಿಕೊಳ್ಳದೇ ಹೋದರೆ ನಮಗೆ ಪುರಾಣ ಕನ್ಯೆಯ ಮಹತ್ವ ತಿಳಿಯದೇ ಹೋಗಬಹುದು. ಸಾಮಾನ್ಯವಾಗಿ ಕನ್ನಡದ ಓದುಗರಿಗೆ ʼಪುರಾಣʼ ಎಂದರೆ ಸಂಸ್ಕೃತದಲ್ಲಿ ರಚಿತವಾದ ೧೮ ಮಹಾಪುರಾಣಗಳು. ಅದರಲ್ಲಿ ಮತ್ಸ್ಯ, ಮಾರ್ಕಂಡೇಯ, ಭಾಗವತ, ವರಾಹ, ವಿಷ್ಣು, ವಾಯು, ಪದ್ಮ, ಗರುಡ, ಸ್ಕಂದ ಮೊದಲಾದುವು ಮತ್ತು ಅವುಗಳ ಉಪಕತೆಗಳು ಸೇರ್ಪಡೆಯಾಗುತ್ತವೆ.

ಈ ಪಟ್ಟಿಗೆ ಕೆಲವರು ರಾಮಾಯಣ, ಮಹಾಭಾರತ, ಭಾಗವತ ಮತ್ತಿತರ ಮಹಾಕಾವ್ಯಗಳನ್ನು ಸೇರಿಸುವುದೂ ಉಂಟು. ಇಂಥ ವೈದಿಕ- ಶಿಷ್ಟ ಪುರಾಣಗಳಿಂದ ಪ್ರೇರಣೆ ಪಡೆದು ಕನ್ನಡದಲ್ಲಿ ಅನೇಕರು ಪೌರಾಣಿಕ ಕಾದಂಬರಿಗಳನ್ನು ಬರೆದಿದ್ದಾರೆ. ದೇವುಡು, ತ ರಾ ಸು, ಅನುಪಮ ನಿರಂಜನ, ಶಂಕರ ಮೊಕಾಶಿ ಪುಣೇಕರ, ಸತ್ಯಕಾಮ, ಎಸ್. ಎಲ್. ಭೈರಪ್ಪ, ಜನಾರ್ದನ ಗುರ್ಕಾರ್, ಜ.ಹೊ. ನಾರಾಯಣ ಸ್ವಾಮಿ ಮೊದಲಾದವರನ್ನು ಇಲ್ಲಿ ನೆನಪಿಸಿಕೊಳ್ಳಬಹುದು.  ಇಲ್ಲಿ ಗಮನಿಸಬೇಕಾದ ಮುಖ್ಯಾಂಶವೆಂದರೆ ಈ ಕಾದಂಬರಿಗಳೆಲ್ಲವೂ ಸಂಸ್ಕೃತ ಪುರಾಣಗಳನ್ನು ಆಧರಿಸಿಯೇ ರಚಿತವಾಗಿವೆ. 

ನಮ್ಮ ನಡುವೆಯೇ ಪ್ರಚಲಿತದಲ್ಲಿರುವ ಜನಪದ ಪುರಾಣಗಳನ್ನೋ, ಜನಪದ ಮಹಾಕಾವ್ಯಗಳನ್ನೋ ಆಧರಿಸಿ ಒಳ್ಳೆಯ ಕಾದಂಬರಿ ಇದುವರೆಗೆ ಪ್ರಕಟವಾದದ್ದೇ ಇಲ್ಲ. ʼಪುರಾಣಕನ್ಯೆʼಯ ಮೂಲಕ ಕಾ ತ ಚಿಕ್ಕಣ್ಣನವರಿಗೆ ಅಂಥದ್ದೊಂದು ಮಿತಿಯನ್ನು ಮೀರಲು ಸಾಧ್ವವಾಗಿದೆ. ಆದುದರಿಂದ ಈ ಕಾದಂಬರಿಗೆ ಐತಿಹಾಸಿಕ ಮಹತ್ವವೂ ಇದೆ.  ಇಲ್ಲಿಯ ಪುರಾಣ ಕನ್ಯೆ ೧೮ ಮಹಾಪುರಾಣಗಳಿಂದ ಇಳಿದು ಬಂದವಳಲ್ಲ, ಬದಲು ನೆಲದಡಿಯಿಂದ ಎದ್ದು ಬಂದವಳು. 

ಕಾದಂಬರಿಯುದ್ದಕ್ಕೂ ಇದನ್ನು ಪ್ರೊಫೆಸರ್ ಸಂಜೀವಪ್ಪನವರು ಪ್ರಕಟಿಸುತ್ತಾ ಹೋಗುತ್ತಾರೆ. ಅವರು ಊರಿನ ಪ್ರತಿಯೊಂದು ಕತೆಗಳ ಹಿಂದಿನ ಜೀವ ಚೈತನ್ಯವನ್ನು ಕಾದಂಬರಿಯ ಮುಖ್ಯ ಪಾತ್ರ ನೀಲವೇಣಿಗೆ ದಾಟಿಸುತ್ತಾರೆ. ಕಾದಂಬರಿಯ ಕೊನೆಯಲ್ಲಿ ಬರುವ ಜನಪದ ರಾಮಾಯಣದ ಬಗ್ಗೆ ಪ್ರೊಫೆಸರ್ ಹೇಳುವುದು ಹೀಗೆ- ʼರಾಮಾಯಣ ಕತೆಯನ್ನೇ ಗಮನಿಸು. ರಾಮಾಯಣದ ವೈದಿಕ ಮನಸ್ಸು ಸೀತೆಯನ್ನು ಅಗ್ನಿಯಿಂದ ಸುಟ್ಟು ಬಂದು ತನ್ನ ಪವಿತ್ರತೆಯನ್ನು ಸಾಬೀತುಪಡಿಸು ಅಂತ ಶ್ರೀರಾಮನಿಂದ ಹೇಳಿಸುತ್ತದೆ. ಆದರೆ ಇನ್ನೊಂದು ಬಗೆಯ ರಾಮಾಯಣದ ಜನಪದ ಮನಸ್ಸು ಸೀತೆಯ ಪಾವಿತ್ರ್ಯವನ್ನು ಸಾಬೀತುಪಡಿಸಲು ʼಒಣಗಿರೊ ಜಂನೇರಳೆ ಮರವನ್ನು ತಬ್ಬಿ ಚಿಗುರುವಂಗೆ ಮಾಡುʼ ಅಂತ ಹೇಳುತ್ತದೆ. ನೋಡು ಇರೋದು ಒಂದೇ ಕತೆ. ಆದರೆ ಒಂದು ಸುಟ್ಟುಕೋ ಅನ್ನುತ್ತದೆ, ಇನ್ನೊಂದು ಚಿಗುರು ಅನ್ನುತ್ತದೆ. ಸುಡೋದು ನಾಶ. ಚಿಗುರೋದು ಜೀವ. ಮರ ಚಿಗುರಿದರೆ ಹಣ್ಣು ಬುಡುತ್ತದೆ. ಬುಟ್ಟು ಹೋದ ಹಕ್ಕಿಪಕ್ಷಿಗಳು, ದುಂಬಿ ಜೀರುಂಡೆಗಳು ಮತ್ತೆ ಬಂದು ಕೂಡುತ್ತವೆ. ಅಲ್ಲಿ ಜೀವ ಜಗತ್ತೇ ಪುನರ್ ನಿರ್ಮಾಣಗೊಳ್ಳುತ್ತದೆʼ. 

ಈ ನಿಟ್ಟಿನಲ್ಲಿ ನೋಡಿದಾಗ, ಕಾದಂಬರಿಕಾರ ತನ್ನ ಕತೆಗಳಿಗೆ ತಾನೇ ವಿಮರ್ಶಕನಾಗಿಯೂ ಕೆಲಸ ಮಾಡುತ್ತಿರುವ ಅಂಶ ಗೊತ್ತಾಗುತ್ತದೆ. ಈ ವೈಚಾರಿಕ ಎಚ್ಚರವು ಜನಪದ ಪುರಾಣಗಳನ್ನು ಮತ್ತು ಅದಕ್ಕೆ ಸೇರಿಕೊಂಡಿರುವ ಇತರ ಕಥನಗಳನ್ನು ಬಹಳ ಮುತುವರ್ಜಿಯಿಂದ ಕಾದಂಬರಿಯಲ್ಲಿ ಮರು ಸೃಷ್ಟಿ ಮಾಡುತ್ತದೆ.  ಇದು ಓದುಗನಿಗೆ ಹೊಸ ಅನುಭವವನ್ನು ನೀಡುತ್ತದೆ. ಚಿಕ್ಕಣ್ಣನವರು ಬಳಸುವ ಊರಿನ ಸಮೃದ್ಧ ಭಾಷೆಯು ಓದುಗನ ಮನಸ್ಸನ್ನು ಅರಳಿಸುತ್ತದೆ.  ಹೊಸ ವಸ್ತು, ತಂತ್ರ, ವಿನ್ಯಾಸ ಮತ್ತು ನಿರೂಪಣೆಯ ಲವಲವಿಕೆಯಿಂದ ರಂಜಿಸುವ ಈ ಕಾದಂಬರಿಯನ್ನು ಓದುವುದೆಂದರೆ, ತತ್ವಶಾಸ್ತ್ರವೊಂದರ ನವೀನ ಅಧ್ಯಾಯಕ್ಕೆ ಪ್ರವೇಶ ಪಡೆದಂತೆ. 

‍ಲೇಖಕರು Admin

September 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: