ಉದಿ,ನಾನೂ ಕಳೆದು ಹೋಗಿದ್ವಾ?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್ನ ಭಾಗವಾಗಿರುವ ಶರ್ಮಾ ರಚಿಸಿದ ಆಕೆ ಮಕ್ಕಳನ್ನು ರಕ್ಷಿಸಿದಳುಕೃತಿ ಅತ್ಯಂತ ಜನಪ್ರಿಯ ಬಹುರೂಪಿಈ ಕೃತಿಯನ್ನು ಪ್ರಕಟಿಸಿದೆ. 

ಸಾಮಾಜಿಕ ವಿಷಯಗಳ ಬಗ್ಗೆ ಆಳ ನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

‘ರೈಟ್‌ ರೈಟ್‌… ಬುರ್ರ್‌ ಬುರ್ರ್‌ ಬುರ್ರೋ…ʼ

ನಾವಿಬ್ರೂ, ಅದೆ ಉದಿ ಮತ್ತು ನಾನು ಬಸ್‌ ಆಟ ಆಡ್ತಿದ್ವಿ. ದಾರ ಕಟ್ಟಿಕೊಂಡು ಒಬ್ಬರು ಮುಂದೆ ಇನ್ನೊಬ್ಬರು ಹಿಂದೆ. ಮುಂದೆ ಇದ್ದ ಉದಿ ಡ್ರೈವರ್‌ ನಾನು ಕಂಡಕ್ಟರ್‌.

ರಾಜಾಜಿನಗರದ ನಮ್ಮ ಮನೆಯ ಮುಂದಿನಿಂದ ಓಡಿಕೊಂಡು, ಅಲ್ಲಲ್ಲಾ… ಬಸ್‌ ಓಡಿಸಿಕೊಂಡು ಜಿ ಆರ್ ವಿಶ್ವನಾಥ್‌ ಬರುತ್ತಿದ್ದ ಮನೆ ಮುಂದೆ ಓಡಿ, ಕಾಕಾ ಅಂಗಡಿ ಸುತ್ತಿಕೊಂಡು ಅಂಬಾಭವಾನಿ ದೇವಸ್ಥಾನದ ರಸ್ತೆಗೆ ಹೋಗಿ ಅಲ್ಲಿನ ಖಾಲಿ ಸೈಟಿನ ಪಕ್ಕದಲ್ಲಿ ತೂರಿಕೊಂಡು ರಸ್ತೆ ಕೊನೆಯಲ್ಲಿದ್ದ ಸೌದೆ ಅಂಗಡಿ ದಾಟಿಕೊಂಡು ನಮ್ಮ ರಸ್ತೆಯಲ್ಲಿದ್ದ ದೊಡ್ಡ ಮನೆಗಳ ಮುಂದಿನಿಂದ ಮತ್ತೆ ನಮ್ಮ ಮನೆಗಳ ಹತ್ತಿರ ಬಂದು ಬಸ್‌ ನಿಲ್ಲಿಸಿದೆವು.

ಬಸ್‌ ಇಳಿದ ಮೇಲೆ ಸುಮ್ಮನಿರಲಿಕ್ಕೆ ಆಗುತ್ತದೇನು? ಕಾಫಿ ಕುಡಿದು ಸಿಗರೇಟ್‌ ಸೇದಿ ಮತ್ತೆ ‘ರೈಟ್‌ ರೈಟ್…‌ ಬುರ್ರೋ…ʼ

ಉದಿ, ಅಂದ್ರೆ ಉದಯ ನನಗಿಂತ ಪ್ರಾಯಶಃ ಒಂದು ವರ್ಷ ದೊಡ್ಡವ, ನಮ್ಮ ಮನೆಯ ವಠಾರದ ಹಿಂದಿನ ವಠಾರದ ವಾಸಿ. ಅವನ ಮನೆಯಲ್ಲಿ ಅವನನ್ನೂ ಸೇರಿಸಿ ಸುಮಾರು ಏಳು ಮಕ್ಕಳು ಅಪ್ಪ ಅಮ್ಮ. ಅವರಪ್ಪ ಟೈಲರ್‌ ಕೆಲಸ ಮಾಡುತ್ತಿದ್ದರು.

ನಮ್ಮ ಮನೆಯೆ ಚಡ್ಡಿ, ಲಂಗ, ಶರ್ಟು ಎಲ್ಲ ಹೊಲಿಯುತ್ತಿದ್ದು ಅವರೇ. ನಾನು ಉದಿ ಒಂದು ತರಹದ ಜೀವದ ಗೆಳೆಯರು. ಗೋಲಿ, ಲಗೋರಿ, ಚಿಣ್ಣಿದಾಂಡು, ಐಸ್‌ಪೈಸ್‌, ಬಸ್ಸಾಟ ಎಲ್ಲ ಆಟದಲ್ಲೂ ಸದಾ ಜೊತೆಗೆ. ಅವನು ಯಾವ ಸ್ಕೂಲಿಗೆ ಹೋಗುತ್ತಿದ್ದನೋ ಮರೆತಿದೆ. ಶಾಲೆ ಮುಗಿಯಿತೆಂದರೆ, ಮನೆಗೆ ಸೇರಿದ ಕೂಡಲೇ ನಮ್ಮಿಬ್ಬರದೂ ಜೊತೆ.

ಈ ಘಟನೆಯಾದಾಗ ನಾನು ಎರಡನೇ ಕ್ಲಾಸ್‌ ದಾಟಿದ್ದೆ ಎನ್ನುವ ನೆನಪು. 

ಈ ಬಾರಿ ಬಸ್‌ ಹಿಂದಿನ ರಸ್ತೆಗೆ ಹೋಯಿತು. ಅಲ್ಲಿ ಸುತ್ತಿಕೊಂಡು ಇನ್ನೇನು ಸೌದೆ ಅಂಗಡಿ ಹತ್ತಿರ ತಿರುಗಿ ಬರಬೇಕು, ಆಗಲೇ ಎದುರಿನಿಂದ ಬರುತ್ತಿದ್ದ ಒಂದು ಆಟೋ ತಟಕ್‌ ಅಂತ ನಮ್ಮ ಎದುರು ನಿಂತಿತು. ‘ಬನ್ರೋ… ರೌಂಡಿಗೆ ಬರ್ತೀರಾ…ʼ ಅಂತ ಆಟೋದಲ್ಲಿದ್ದವರು ಕರೆದರು.

ಅದೇನು ಮಾಯವೋ ಗೊತ್ತಿಲ್ಲ ಇಬ್ಬರೂ ಚಕ್‌ ಅಂತ ಹಾರಿ ಆಟೋದಲ್ಲಿ ಕೂತೆವು. ಆಟೋ ಬರೋ ಅಂತ ಹೊರಟಿತು. ಡ್ರೈವರ್‌ ಅಲ್ಲದೆ ಇನ್ನೊಬ್ಬರು ಯಾರೋ ಗಂಡಸರಿದ್ದರು. ಅವರು ಉದಯನನ್ನ ಏನೋ ಮಾತನಾಡಿಸಿದರು. ಅವನೇನೋ ಹೇಳ್ತಿದ್ದ. ಅವನಿಗವರು ಗೊತ್ತಿರಬೇಕೆಂದು ಅಂದುಕೊಂಡ ನಾನು ಆಟೋದ ವೇಗ, ಗಾಳಿ ಬರುವ ರಭಸಕ್ಕೆ ಮೈಮರೆತವನಂತೆ ಕುಳಿತಿದ್ದೆ.

ಆಟೋ ಶನಿ ದೇವಸ್ಥಾನದ ಕಡೆಗೆ ಅಪ್‌ ಹತ್ತಿತು, ನವರಂಗ್‌ ಥಿಯೇಟರ್‌ ಕಡೆ ತಿರುಗಿತು ರಂಯೋ ಅಂತ ಓಡಿ ಮುಂದಕ್ಕೆ ಹೋಗಿ ಎಡಕ್ಕೆ ತಿರುಗಿ ಬಸವೇಶ್ವರ ಶಾಲೆಯ ಮುಂದೆ ಸಾಗಿತು. ಅಲ್ಲಿಂದ ಇ ಎಸ್‌ ಐ ಆಸ್ಪತ್ರೆ ಹತ್ತಿರ ಬಲಕ್ಕೆ ತಿರುಗಿ ಹೊಸಳ್ಳಿ ಕಡೆ ಸಾಗಿತ್ತು.

ಹೊಸಳ್ಳಿ ಕಡೆಯಿಂದ ಕೋತಿ ಬಂಡೆಯ ತನಕ ಹೋಗಿ ಅಲ್ಲಿ ಸ್ವಲ್ಪ ಹೊತ್ತು ನಿಂತಿತು. ‘ಏ ಕೂತ್ಕೊಂಡಿರ್ರೋʼ ಅಂತ ಹೇಳಿದ ಆಟೋ ಡ್ರೈವ್‌ ಮಾಡ್ತಿದ್ದವ್ರು ಇನ್ನೊಬ್ರು ಹೋಗಿ ಅಲ್ಲೇ ಪೊದೆಯ ಹತ್ತಿರ ನಿಂತು ಉಚ್ಚೆ ಮಾಡಿದ್ರು. ಏನೋ ಮಾತಾಡಿಕೊಂಡು ಬಂದವರು ಮತ್ತೆ ಹೊರಟರು. ಉದಿ ನಾನೂ ಏನೋ ಮಾತಾಡಿಕೊಂಡು ಮಜಾ ತೊಗೊಳ್ತಿದ್ವಿ. 

ಮತ್ತೆ ಹೊರಟ ಆಟೋ ಹೊಸಳ್ಳಿಯ ಒಳ ರಸ್ತೆಗಳಲ್ಲಿ ಸಾಗಿ ಇ ಎಸ್ ಐ ಆಸ್ಪತ್ರೆ ಮುಂದೆ ಎಳನೀರು ಮಾರುವವರೊಬ್ಬರ ಎದುರು ನಿಂತು. ‘ಇಳೀಬೇಡಿʼ ಅಂತ ನಮಗೆ ಹೇಳಿದ ಅವರಿಬ್ಬರೂ ಹೋಗಿ ಎಳನೀರಿನವನ ಹತ್ತಿರ ಏನೋ ಮಾತನಾಡುತ್ತಿದ್ದರು. 

ಅವರ್ಯಾರು? ಎಲ್ಲಿಯವರು? ನಮ್ಮನ್ನ ಯಾಕೆ ಹೀಗೆ ಆಟೋದಲ್ಲಿ ಕರೆದುಕೊಂಡು ಹೋದರು? ಈ ಎಲ್ಲ ಪ್ರಶ್ನೆಗಳು ನಮಗಿಬ್ಬರಿಗೆ ಬಂದಿರಲೇ ಇಲ್ಲ. ಅವರು ಉದಿಗೆ ಗೊತ್ತಿರುವವರು ಅಂತ ನಾನು ಅಂದುಕೊಂಡಿದ್ದರಿಂದ ಆ ಬಗ್ಗೆ ನಾನು ಏನೂ ಕೇಳಲಿಲ್ಲ. ಅವನಂತೂ ನನ್ನ ಏನೂ ಪ್ರಶ್ನಿಸಲೂ ಇಲ್ಲ!

ಸ್ವಲ್ಪ ಹೊತ್ತು ಆದ ಮೇಲೆ ನಮಗೂ ಎಳನೀರು ತಂದು ಕೊಟ್ಟರು. ನೀರು ಕುಡಿದ ಮೇಲೆ ಅದರೊಳಗಿನ ತಿರುಳಿನ ಕಾಯಿ ಕೊಟ್ಟರು. ಡ್ರೈವರ್‌ ಮಾತ್ರ ಬಂದರು. ಹೋಗೋಣ ಎಂದರು. ಆಟೋ ಹೊರಟಿತು. ಈಗ ಹೆಚ್ಚಿನ ಸುತ್ತಾಟವಿಲ್ಲದೆ, ನೇರವಾಗಿ ನಮ್ಮ ಮನೆಯ ಬೀದಿಯ ಕೊನೆಯಲ್ಲಿದ್ದ ಸೌದೆ ಮಂಡಿಯ ಬಳಿ ಇಳಿಸಿ, ‘ಜೋಪಾನ. ಮನೆಗ್ಹೋಗಿʼ ಎಂದು ಆಟೋ ಹೊರಟು ಹೋಯಿತು. 

ನಾವಿಬ್ಬರೂ ನಿಧಾನವಾಗಿ ಕೈಯಲ್ಲಿದ್ದ ಕಾಯಿ ತಿಂದುಕೊಳ್ಳುತ್ತಾ ಮನೆಯ ಕಡೆ ಹೆಜ್ಜೆ ಹಾಕಿದೆವು. ಎಷ್ಟು ಹೊತ್ತು ಆಗಿತ್ತೋ ಗೊತ್ತಿಲ್ಲ. ನಮ್ಮ ಪಾಡಿಗೆ ನಾವು. ಆಗಲೇ ನಮ್ಮ ಮನೆಗಳಿದ್ದ ವಠಾರದ ಬಳಿ ಒಂದಷ್ಟು ಜನ ನಿಂತಿದ್ದಾರೆ. ನನ್ನಮ್ಮ ಉದಯನಮ್ಮ ಹೀಗೆ ಸಾಕಷ್ಟು ಜನ. 

ಯಾರೋ ಹೇಳಿದ್ದು ಸ್ಪಷ್ಟ ಕೇಳಿಸಿತು, ‘ಬಂದ್ರು ನೋಡಿ ರಾಜಕುಮಾರರುʼ ಅಷ್ಟೆ. ಉದಿಯ ಅಮ್ಮ ದಢಕ್‌ ಅಂತ ಬಂದದ್ದೇ ಅವನ ಬೆನ್ನಿಗೆ ಬಾರಿಸಿ, ಎಳೆದು ನೂಕಿದರು. ಅವನ ಕೈಲಿದ್ದ ಕಾಯಿ ಚೂರು ಅಷ್ಟು ದೂರ ಬಿತ್ತು. ಅವನು ಎತ್ತಿದ ಸ್ವರಕ್ಕೆ ನಾನು ಬೆಚ್ಚಿ ಬಿದ್ದೆ. ಅವನು ಮೋರಿಯೊಳಗೆ ಬೋರಲು ಬಿದ್ದು ಕೈಕಾಲು ಒದರುತ್ತಾ ಕೂಗುತ್ತಿದ್ದ.

ಉದಯನ ಅಮ್ಮ ಮೋರಿಯಲ್ಲೇ ಅವನನ್ನ ಹಾಕಿಕೊಂಡು ತುಳಿದು ಏನೋ ತಮಿಳಿನಲ್ಲಿ ಬೈಯುತ್ತಿದ್ದರು. ಆಮೇಲೆ ಎತ್ತಿ ರಸ್ತೆಗೆ ತಂದು ಎಳೆದುಕೊಂಡು ಮನೆಯ ಕಡೆ ಹೋದರು. ಇದೆಲ್ಲಾ ಕೆಲವು ಕ್ಷಣಗಳಲ್ಲಿ ಆಗಿ ಹೋಯಿತು. ಸುತ್ತ ಇದ್ದ ಜನರೆಲ್ಲಾ ಒಂಥರಾ ನೋಡ್ತಿದ್ರು. ಯಾರೂ ಬಿಡಿಸಲು ಮುಂದಾಗಲಿಲ್ಲ. ನನಗೆ ಕೈಕಾಲು ನಡುಗಲು ಶುರುವಾದವು.

ಆದರೆ ಯಾಕೆ ಗೊತ್ತಾಗ್ಲಿಲ್ಲ. ನಮ್ಮಮ್ಮನ್ನ ನಾನು ಆಗ ಸರಿಯಾಗಿ ನೋಡಿದೆ. ಅಮ್ಮ ಹೇಳಿದ ಮಾತು ಕೇಳಿತು, ‘ಒಳಗೆ ಹೋಗಿ ಕೈಕಾಲು ತೊಳೆದುಕೊಂಡು ಕೂತ್ಕೋ, ಬರ್ತೀನಿʼ ನಾನು ತೆಪ್ಪಗೆ ಒಳಗೆ ಹೋದೆ. ಅಮ್ಮ ಬಂದವರೇ ಅಡುಗೆ ಮನೆಗೆ ಹೋಗಿ ಒಂದು ಲೋಟದಲ್ಲಿ ಹಾಲು ಹಾಕಿಕೊಂಡು ಬಂದು ನನಗೆ ಕೊಟ್ಟರು. ‘ಹೇಳದೇ ಕೇಳದೇ ಹಾಗೆಲ್ಲಾ ಹೋಗಬಾರದು. ನೀವು ಕಳೆದು ಹೋಗಿದ್ದೀರಿ ಅಂತಾನೇ ಎಲ್ಲ ಅಂದ್ಕೊಂಡಿದ್ವಿ ಅಪ್ಪ ಬಂದ ಮೇಲೆ ಮಾತನಾಡೋಣʼ ಎಂದರು. 

‘ಅಪ್ಪ ಬಂದ ಮೇಲೆ ಮಾತನಾಡೋಣʼ ಅಮ್ಮ ನಿಜವಾಗಿಯೂ ಅದನ್ನ ಹೇಳಿದಳಾ, ಅಥವಾ ನಾನಂದುಕೊಂಡಿದ್ದಾ ಸ್ವಲ್ಪ ಅಯೋಮಯ. ಅವತ್ತು ನನ್ನ ಅಕ್ಕಂದಿರಾರೂ ಮನೆಯಲ್ಲಿ ಇರಲಿಲ್ಲವಾ, ಗೊತ್ತಿಲ್ಲ. ಅಮ್ಮನಿಗೆ ಎಲ್ಲ ಹೇಳಿದೆ. ಅಮ್ಮ ಕೇಳಿದಳು. ಸುಮ್ಮನೆ ತಲೆಯಾಡಿಸಿದಳು.

ನಾನು ಯಾಕೆ ಅವರ ಜೊತೆ ಹೋದೆ, ಅವರು ನಮ್ಮನ್ನ ಯಾಕೆ ಹಿಂದೆ ಬಿಟ್ಟು ಹೋದರು, ಅವರು ಯಾರು… ಊಹೂ! ನನಗವುಗಳಿಗೆ ಉತ್ತರ ಆಗಲೂ ಸಿಕ್ಕಿರಲಿಲ್ಲ, ಆಮೇಲೂ ಸಿಕ್ಕಿಲ್ಲ. ಆ ಆಟೋದವರನ್ನ ನಾನು ಮತ್ತೆ ಎಂದೂ ನೋಡಲೇಯಿಲ್ಲ. ಉದಿಯೂ ಆ ಬಗ್ಗೆ ಏನೂ ಹೇಳಲಿಲ್ಲ. 

ಅಪ್ಪ ಬಂದ ಮೇಲೆ… ಏನಾಯ್ತು! 

‘ಹೌದೇನೋ… ಯಾರ್ಯಾರ್ ಜೊತೇಲೋ ಹಾಗೆಲ್ಲಾ ಹೋಗಬಾರದು. ಮಕ್ಕಳು ಕಳೆದು ಹೋದರೆ ಹುಡುಕೋದು ತುಂಬಾ ಕಷ್ಟ. ಪೊಲೀಸ್‌ ಕಂಪ್ಲೇಂಟ್‌ ಕೊಡಬೇಕು. ಸಿಗೋದೇ ಇಲ್ಲʼ ಅಷ್ಟೇ ಅಪ್ಪ ಹೇಳಿದ್ದು. ಕೆಲವು ಬಾರಿ ಸರಿಯಾಗಿ ಅಪ್ಪ ನನಗೆ ಭಾರಿಸಿದ್ದಾರೆ. ಆದರೆ ಆ ಹೊತ್ತು ಒಂದು ಏಟೂ ಬೀಳಲಿಲ್ಲ ಮತ್ತು ನನ್ನ ಮೇಲೆ ಕೆಟ್ಟದಾಗಿ ಮಾತಾಡಿ ಬೈಯಲೂ ಇಲ್ಲ. ಬೈದಿದ್ರೆ, ಹೊಡೆದಿದ್ರೆ..!

ಈಗಲೂ ಮಕ್ಕಳು ಕಳೆದು ಹೋಗೋದು, ತಪ್ಪಿ ಹೋದವರು, ಓಡಿಸಲ್ಪಟ್ಟವರು [ಮಕ್ಕಳನ್ನು ಓಡಿ ಹೋಗುವಂತೆ ಮಾಡಲಾಗುತ್ತದೆ, ಹೀಗಾಗಿ ಮಕ್ಕಳು ಓಡಿ ಹೋದರು ಎನ್ನುವುದಕ್ಕಿಂತಲೂ ‘ಓಡಿಸಲ್ಪಟ್ಟವರುʼ ಎಂದೇ ಬಳಸಬೇಕು], ಮಕ್ಕಳನ್ನು ಕದಿಯುವುದು-ಮಾರುವುದು ವಾಸ್ತವ.

ಪ್ರತಿವರ್ಷ ಭಾರತದಲ್ಲಿ ಸುಮಾರು ೫೦ರಿಂದ ೬೦ ಸಾವಿರ ಮಕ್ಕಳು ಕಾಣೆಯಾಗುತ್ತಾರೆ. ಪ್ರತಿ ಹತ್ತು ನಿಮಿಷಕ್ಕೆ ಒಂದು ಮಗು ಕಾಣೆಯಾಗುತ್ತದೆ ಎಂಬುದು ರಾಷ್ಟ್ರೀಯ ಅಪರಾಧ ದಾಖಲೆಯ ಬ್ಯೂರೋ ಹೇಳುತ್ತದೆ. ಇದು ಪೊಲೀಸ್‌ ಠಾಣೆಯಲ್ಲಿ ದಾಖಲಾದ ದೂರುಗಳ (ಎಫ್‌ ಐ ಆರ್)‌ ಸಂಖ್ಯೆ.

ಈ ದಿನಗಳಲ್ಲೂ ಮಕ್ಕಳು ಕಣ್ಮರೆಯಾದಾಗ ಎಷ್ಟೋ ಜನ ಪೊಲೀಸ್‌ ದೂರು ಕೊಡುವುದೇ ಇಲ್ಲ. ಅದರಲ್ಲೂ ಹೆಣ್ಣುಮಕ್ಕಳು ಕಾಣೆಯಾದಾಗ ಬಹಳಷ್ಟು ಜನ ದೂರು ಕೊಡುವುದಿಲ್ಲ ಅಥವಾ ದೂರು ಕೊಡದಿರಲು ಅವರ ಮನವೊಲಿಸಲಾಗುತ್ತದೆ. ಇದಕ್ಕೆ ನೂರಾರು ಕಾರಣಗಳು [ದೂರ ಕೊಡದಿರುವುದು ಇತ್ಯಾದಿ ಕುರಿತು ಮತ್ತೆ ಬರೆಯುತ್ತೇನೆ]. ಹೀಗಾಗಿ ಲೆಕ್ಕದಂತೆ ಹೆಣ್ಣುಮಕ್ಕಳಿಗಿಂತಾ ಗಂಡು ಮಕ್ಕಳು ಕಾಣೆಯಾಗುವ ಪ್ರಕರಣಗಳೇ ಹೆಚ್ಚು!

ಕಾಣೆಯಾದ ಮಕ್ಕಳಲ್ಲಿ ಅರ್ಧಕ್ಕೂ ಹೆಚ್ಚು ಜನ ಪತ್ತೆಯಾಗುವುದೇ ಇಲ್ಲ ಎನ್ನುವುದು ಇನ್ನೊಂದು ವಿಚಾರ. ಕೆಲವು ವರ್ಷಗಳ ಹಿಂದಿನ ತನಕವೂ ಮಕ್ಕಳು ಕಣ್ಮರೆಯಾದರೆ ಕಾನೂನಿನ ಯಾವ ಅಂಶದಡಿ ದೂರು ದಾಖಲೆ ಮಾಡಿಕೊಳ್ಳಬೇಕು ಎಂದು ಪೊಲೀಸ್‌ ಠಾಣೆಗಳಲ್ಲಿ ಸ್ಪಷ್ಟತೆಯಿರಲಿಲ್ಲ. ಹೀಗಾಗಿ ಎಫ್‌ ಐ ಆರ್‌ ಸಮರ್ಪಕವಾಗಿ ಆಗುತ್ತಿರಲಿಲ್ಲ. ಅದರಿಂದಾಗಿ ಮಕ್ಕಳನ್ನು ಹುಡುಕುವ ಕೆಲಸಗಳ ಬಗ್ಗೆ ವಿಶ್ವಾಸವೇ ಇರುತ್ತಿರಲಿಲ್ಲ. 

ನನ್ನ ಕೆಲಸದಲ್ಲಿ ಕಳೆದು ಹೋದ, ನಾಪತ್ತೆಯಾದ, ಅಪಹರಿಸಲ್ಪಟ್ಟ ಹೀಗೆ ಹಲವಾರು ಹಿನ್ನೆಲೆಯ ನೂರಾರು ಸಾವಿರಾರು ಮಕ್ಕಳನ್ನು ಭೇಟಿಯಾಗಿದ್ದೇನೆ. ಸಾಕಷ್ಟು ಮಕ್ಕಳನ್ನು ಅವರ ಮನೆ ಅಥವಾ ಸಂಬಂಧಿಗಳಿಗೆ ಸಂಪರ್ಕಿಸುವ, ತಲುಪಿಸುವ ಕೆಲಸವನ್ನೂ ಮಾಡಿದ್ದೇನೆ.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಚೈಲ್ಡ್‌ಲೈನ್‌ ೧೦೯೮, ಕಳೆದು ಹೋದ ಮಕ್ಕಳ ಹುಡುಕುವ ಬ್ಯೂರೋ, ಪೊಲೀಸ್‌ ಮತ್ತು ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕ ಎಂಬ ವ್ಯವಸ್ಥೆಗಳು ಈಗ ಇದೆ.

ಜೊತೆಗೆ ನೂರಾರು ಸ್ವಯಂಸೇವಾ ಸಂಘಟನೆಗಳ ಪ್ರತಿನಿಧಿಗಳು ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣಗಳು, ಮಾರುಕಟ್ಟೆಗಳು ಇಲ್ಲೆಲ್ಲಾ ಹರಡಿಕೊಂಡಿದ್ದು, ದಾರಿ ತಪ್ಪಿ ಬಂದಿರುವ ಅಥವಾ ತೊಂದರೆಯಲ್ಲಿರುವ ಮಕ್ಕಳನ್ನು ಗುರುತಿಸಿ ಅವರನ್ನು ರಕ್ಷಣಾ ವಲಯಕ್ಕೆ ಕರೆತಂದು ಆಪ್ತ ಸಮಾಲೋಚನೆಯ ಕ್ರಮಗಳನ್ನು ಬಳಸಿ ಅವರ ವಿವರಗಳನ್ನು ಪಡೆದು ಸಹಾಯ ಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ಎಷ್ಟು ಬೇಕೋ ಅಷ್ಟೇ ಮಕ್ಕಳ ಪೋಷಕರು ಮತ್ತು ಸಂಬಂಧಿತರಿಗೂ ಆಪ್ತ ಸಮಾಲೋಚನೆ ಬೇಕಾಗುತ್ತದೆ. 

ಮಕ್ಕಳಿಗೆ ಅವರ ಪೋಷಕರೊಂದಿಗಿರುವ ಹಕ್ಕು ಇದೆ ಎನ್ನುತ್ತದೆ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೯ ಮತ್ತು ೧೦. ಅದನ್ನು ಸಾಕಾರಗೊಳಿಸುವ ಜವಾಬ್ದಾರಿ ಪೋಷಕರದ್ದು ಎಂದು ಪರಿಚ್ಛೇದ ೧೮ ಹೇಳುತ್ತದೆ. ಪೋಷಕರಿಗೆ ತಮ್ಮ ಮಕ್ಕಳನ್ನು ಕಾಪಾಡುವ, ಅವರ ಶ್ರೇಯೋಭಿವೃದ್ಧಿಯಲ್ಲಿ ತೊಡಗುವ ಹಾಗೂ ಸರ್ಕಾರದ ವ್ಯವಸ್ಥೆಗೆ ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ಇದೆ.

ಸಂವಿಧಾನದಲ್ಲಿ ಎಲ್ಲರಿಗೂ ಇರುವಂತೆ ಮಕ್ಕಳಿಗೆ ಪರಿಚ್ಛೇದ ೨೧ ಜೀವಿಸುವ ಹಕ್ಕು ಇದೆ. ಅದರೊಡನೆ ೨೧.ಎ ಪ್ರಕಾರ ೬ರಿಂದ ೧೪ನೇ ವರ್ಷದ ವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕಿದೆ.

ಅದಕ್ಕೆ ಜಂಟಿಯಾಗಿ ಮೂಲಭೂತ ಕರ್ತವ್ಯಗಳಲ್ಲಿ ೫೧ ಕೆ ಹೇಳುವುದು, ‘೬ರಿಂದ ೧೪ ವರ್ಷದೊಳಗಿನ ತಮ್ಮ ಮಕ್ಕಳಿಗೆ ಪೋಷಕರು ಶಿಕ್ಷಣ ಹೊಂದುವ ಅವಕಾಶಗಳನ್ನು ಮಾಡಿಕೊಡಬೇಕುʼ ಆದರೆ, ಇಂತಹದೊಂದು ನಿರ್ದೇಶನವನ್ನು ಸಂವಿಧಾನ ಪೋಷಕರಿಗೆ ಬೇರೆ ವಿಚಾರಗಳ ಬಗ್ಗೆ ಕೊಟ್ಟಿಲ್ಲವಲ್ಲಾ ಎಂದು ನಾನು ಯೋಚಿಸುತ್ತಿರುತ್ತಲೇ ಇರುತ್ತೇನೆ.

‘ಮಕ್ಕಳಿಗೆ ಆಹಾರ ಕೊಡಿ, ಆರೋಗ್ಯ ನೋಡಿಕೊಳ್ಳಿ, ಹೊಡೆಯಬೇಡಿ, ಹಂಗಿಸಬೇಡಿ, ಅವಕಾಶ ಮಾಡಿಕೊಡಿ, ಕಳೆದು ಹೋಗದಂತೆ ನೋಡಿಕೊಳ್ಳಿ ಇತ್ಯಾದಿʼ ಎಲ್ಲವನ್ನೂ ಸರ್ಕಾರವೇ ಮಾಡುತ್ತದೆ!

ಸರ್ಕಾರ ತಾನೇ ತಾನಾಗಿ ಕಳೆದು ಹೋದ ಮಕ್ಕಳನ್ನು ಹುಡುಕುವುದಿಲ್ಲ. ಸರ್ಕಾರದ ಪ್ರತಿನಿಧಿಗಳಾದ ಪೊಲೀಸರಿಗೆ ನಾವೇ ದೂರು ಕೊಡಬೇಕು. ಹೀಗಾಗಿ ಮಕ್ಕಳು ಕಣ್ಮರೆಯಾದರು, ಕಾಣೆಯಾದರು, ಕಳೆದು ಹೋದರು ಎಂದಾಗಲೆಲ್ಲಾ ಕಾನೂನಿನಂತೆ ಮತ್ತು ಸಮಾಜದ ನಡೆ-ನುಡಿಯಂತೆ ಮಕ್ಕಳನ್ನು ಹುಡುಕುವ ಮತ್ತು ಅವರ ಪೋಷಕರೊಡನೆ ಒಂದಾಗಿಸುವ ಕೆಲಸವನ್ನು ಆರಂಭಿಸಲೇಬೇಕು.  

ಪೊಲೀಸ್‌ ಠಾಣೆಗೆ ಹೋಗಿ ದೂರು ಕೊಡಲು ಹಿಂಜರಿಯುವ ಎಷ್ಟೋ ಜನ ಶಾಸ್ತ್ರ ಕೇಳುವುದು, ಅಂಜನ ಹಾಕಿಸುವುದು, ನಾಡಿ ಭವಿಷ್ಯ ಕೇಳುವುದು ಮಾಡಿ, ಅಲ್ಲಿರಬಹುದು, ಇಲ್ಲಿರಬಹುದು ಎಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಓಡಾಡುತ್ತಾರೆ. ಎಲ್ಲೋ ಕೆಲವರಿಗೆ ಈ ಓಡಾಟ ಫಲ ಕೊಟ್ಟಿರಬಹುದು. ಆದರೆ ಸಾಕಷ್ಟು ಜನರಿಗೆ ಮಕ್ಕಳ ರಕ್ಷಣೆಗಾಗಿ ಚಾಲ್ತಿಗೆ ಬಂದಿರುವ ವ್ಯವಸ್ಥೆಗಳ ಬಗ್ಗೆ ಇನ್ನೂ ತಿಳಿದಿಲ್ಲ. 

ಆದರೆ ತೀರಾ ಇತ್ತೀಚಿನವರೆಗೆ ಕಳೆದು ಹೋದ ಮಕ್ಕಳನ್ನು ಕುರಿತು ಪೊಲೀಸರು ಗಭೀರವಾಗಿ ಪರಿಗಣಿಸುತ್ತಲೇ ಇರಲಿಲ್ಲ ಎಂದರೆ ಆಶ್ಚರ್ಯಪಡಬೇಕಿಲ್ಲ. ಕೈಲಾಸ್‌ ಸತ್ಯಾರ್ಥಿಯವರ ನೇತೃತ್ವದ ‘ಬಚಪನ್‌ ಬಚಾವ್‌’ ಆಂದೋಲನ ಸರ್ವೋಚ್ಚ ನ್ಯಾಯಾಲಯದಲ್ಲಿ ‘ಕಳೆದು ಹೋಗುವ ಮಕ್ಕಳನ್ನು ಕುರಿತು ಸರ್ಕಾರಕ್ಕೆ ನಿರ್ದೇಶನ ನೀಡಿʼ ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಿದ್ದರು.

ಅದನ್ನು ವಿಲೇವಾರಿ ಮಾಡಿದ ನ್ಯಾಯಾಲಯ ಸರ್ಕಾರಕ್ಕೆ ನೀಡಿದ ಪ್ರಮುಖ ನಿರ್ದೇಶನಗಳು:

*ಮಕ್ಕಳು ಕಳೆದು ಹೋಗಿದ್ದಾರೆ ಎಂದು ಯಾರೇ ಪೊಲೀಸ್‌ ಠಾಣೆಗೆ ಬಂದರೂ ಯಾವುದೇ ನೆಪ ಒಡ್ಡದೆ, ತಡ ಮಾಡದೆ, ಗಣನೆಗೆ ತೆಗೆದುಕೊಂಡು, ದೂರು ದಾಖಲಿಸಿಕೊಳ್ಳಬೇಕು

*ಹಾಗೆಯೇ ಎಲ್ಲಿಯಾದರೂ ದಾರಿ ತಪ್ಪಿದ, ತೊಂದರೆಯಲ್ಲಿರುವ ಮಕ್ಕಳು ಸಿಕ್ಕಿದರೆ ಅವರನ್ನು ಕುರಿತೂ ದಾಖಲಿಸಿಕೊಳ್ಳಬೇಕು

*ಮಕ್ಕಳು ಕಳೆದು ಹೋಗಿರುವ ಎಲ್ಲ ಪ್ರಕರಣಗಳನ್ನು ಕಳೆದು ಹೋದವರು ನೀಡಿದ ದೂರು ಮತ್ತು ಸಿಕ್ಕ ಮಕ್ಕಳನ್ನು ಕುರಿತು ಮಾಡಿಕೊಂಡ ದಾಖಲೆ ಈ ಎರಡನ್ನೂ ಹೊಂದಿಸುವ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು

*ಮಕ್ಕಳು ಕಳೆದು ಹೋದ ಎಲ್ಲ ಪ್ರಕರಣಗಳನ್ನು ಭಾರತ ದಂಡ ಸಂಹಿತೆಯ ಸೆಕ್ಷನ್‌ ೩೬೨ (ಅಪಹರಣ) ಎಂದೇ ಪರಿಗಣಿಸಿ ದೂರು ದಾಖಲಿಸಿಕೊಳ್ಳಬೇಕು

*ನಾಲ್ಕು ತಿಂಗಳೊಳಗೆ ಮಗು ಸಿಗದಿದ್ದಲ್ಲಿ ಆಯಾ ಪ್ರಕರಣಗಳನ್ನು ಸಾಗಣೆ ಮತ್ತು ಮಾರಾಟದ ಪ್ರಕರಣವೆಂದು ಪರಿಗಣಿಸಿ, ಮಾನವ ಕಳ್ಳಸಾಗಣೆ ತಡೆ ಘಟಕಕ್ಕೆ ರವಾನಿಸಬೇಕು 

ಇಷ್ಟೆಲ್ಲಾ ಇದ್ದರೂ ಇತ್ತೀಚೆಗೆ (೨೦೧೯) ಮದ್ರಾಸ್‌ ಉಚ್ಚ ನ್ಯಾಯಾಲಯ ಒಂದು ಪ್ರಶ್ನೆ ಎತ್ತಿದೆ, ‘ಜನರು ಕಾಣೆಯಾದರೆ ಅದನ್ನು ಕುರಿತು ಪೊಲೀಸ್‌ ದೂರು ದಾಖಲಿಸಿಕೊಳ್ಳಲು ನಮ್ಮ ಕಾನೂನಿನಲ್ಲಿ ಪ್ರತ್ಯೇಕವಾದ ಸೆಕ್ಷನ್‌ ಇಲ್ಲವೆ? ಹೀಗೊಂದು ಕಾನೂನಿನ ಅವಕಾಶ ಮಾಡಿಕೊಡಲು ಸಾಧ್ಯವಿದೆಯೆ?ʼ ಎಂದು ಹೇಳಿ ಕೇಂದ್ರ ಸರ್ಕಾರಕ್ಕೆ ಉತ್ತರಿಸಲು ಕೇಳಿದೆ.  

ಹಿಂದೆ ನಾವು ನೋಡಿದ್ದ ಎಷ್ಟೋ ಸಿನೆಮಾಗಳಲ್ಲಿ ಕೇಳಿದ ಕತೆಗಳಲ್ಲಿ ಅಥವಾ ನಮ್ಮದೇ ಕುಟುಂಬಅಕ್ಕಪಕ್ಕದ ಮನೆಗಳಲ್ಲಿ ಆದ ಘಟನೆಗಳನ್ನು ನೆನಪಿಸಿಕೊಳ್ಳಿ:

ಊರಿನಿಂದ ಓಡಿ ಹೋಗುವ ಹುಡುಗ ದೊಡ್ಡ ಡಾನ್‌ ಆಗುವುದು, ಹೀರೋ ಆಗುವುದು, ರಾಜಕಾರಣಿಯಾಗುವುದು, ಹೋಟೆಲ್‌ನಲ್ಲಿ ಟೇಬಲ್‌ ಉಜ್ಜುತ್ತಾ ಇದ್ದ ಹುಡುಗ ಆಮೇಲೆ ದೊಡ್ಡ ಹೋಟೆಲ್‌ ಮಾಲೀಕನಾಗುವುದು, ಇತ್ಯಾದಿ.

ಆದರೆ ಕಣ್ಮರೆಯಾದ ಎಲ್ಲ ಮಕ್ಕಳಿಗೂ ಈ ಅದೃಷ್ಟ ಇರುವುದಿಲ್ಲ. ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಕೆಲಸಗಳಿಗೆ, ದುಡಿಮೆಗೆ, ಅತ್ಯಂತ ಶೋಷಣಾಮಯ ಬದುಕಿಗೆ, ಸೂಳೆಗಾರಿಕೆಗೆ, ಭಿಕ್ಷೆಗೆ, ಅಪರಾಧಿಕ ಜಗತ್ತಿಗೆ ಸೇರಿ ಹೋಗುತ್ತಾರೆ.

ಅಲ್ಲಿಂದ ಬಿಡುಗಡೆ ಎನ್ನುವುದು ಮರೀಚಿಕೆ. ಆದಾಗ್ಯೂ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳನ್ನು ಇಂತಹ ಕೂಪಗಳಿಂದ ಬಿಡುಗಡೆ ಮಾಡುವ ವ್ಯವಸ್ಥೆ ಸ್ವಯಂಸೇವಾ ಸಂಘಟನೆಗಳು ಮತ್ತು ಸರ್ಕಾರದ ನೆರವಿನಿಂದ ನಡೆದಿದೆ.

(ಈ ಕುರಿತು ಮುಂದೆ ಬರೆಯುವೆ)

‍ಲೇಖಕರು ವಾಸುದೇವ ಶರ್ಮ

September 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: