‘ಸಂಕ’ ಸಂಕಥನ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. 

ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ಅವಧಿಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

ಹೆಚ್ಚು ಸಂಬಳ  ಬರುತ್ತಿದ್ದ ಕೆಲಸಗಳನ್ನು ಬಿಟ್ಟು ಕೊನೆಗೆ ನಾನು ಪತ್ರಕರ್ತನಾದದ್ದು, ಅದೂ ಕಡಿಮೆ ಸಂಬಳಕ್ಕೆ ‘ತಾಯಿನಾಡು’ ಸೇರಿದ್ದು ಮನೆಯಲ್ಲಿ ತಂದೆತಾಯಿಯರಿಗೆ ಸ್ವಲ್ಪ ಅಸಮಾಧಾನ ಉಂಟುಮಾಡಿತ್ತು.

ತಂದೆಗೆ ಬರುತ್ತಿದ್ದ ಅಲ್ಪ ವೇತನದಿಂದ ಒಂಭತ್ತು ಮಕ್ಕಳ ಸಂಸಾರ ಸಾಗಬೇಕಿತ್ತು. ಇನ್ನೂ ವಿದ್ಯಾರ್ಥಿಗಳಾಗಿದ್ದ ತಮ್ಮಂದಿರು-ತಂಗಿಯರು. ಅಸಮಾಧಾನ ಸಹಜವಾಗಿತ್ತು. ಆದರೆ ತಂದೆ ನನ್ನ ಪರವಾಗಿದ್ದರು.

ಇಷ್ಟವಿಲ್ಲದ ಕೆಲಸ ಮಾಡಬೇಡ ಎಂಬುದೇ ಅವರ ನಿಲುವಾಗಿತ್ತು. ಮಾಡುವ ಕೆಲಸದಲ್ಲಿ ಕಾಯಕದ ಪ್ರೀತಿ ಇರಬೇಕು, ಕಾಯಕ ಶುದ್ಧಿ ಇರಬೇಕು ಎಂಬುದು ಅವರು ಬೋಧಿಸಿದ ನೀತಿಯಾಗಿತ್ತು.

ಬರಹಗಾರನಾಗಿ ಬೆಳೆಯಲು ಪತ್ರಿಕಾ ವೃತ್ತಿಯಲ್ಲಿ ಅವಕಾಶಗಳಿದ್ದವು. ವಿಶೇಷ ವರದಿ, ನುಡಿ ಚಿತ್ರಗಳು ಹೀಗೆ ಸುದ್ದಿ ಸಂಪಾದಕರು ನನಗೆ ಬರೆಯಲು ಅವಕಾಶಗಳನ್ನು ಕಲ್ಪಿಸಿ ಕೊಡುತ್ತಿದ್ದರು.

ಆದರೆ, ಈ ಬಾಬ್ತು ನನ್ನ ಓಡಾಟದ ಖರ್ಚುಗಳನ್ನೂ ಆಫೀಸ್ ಕೊಡುತ್ತಿರಲಿಲ್ಲ. ಬರೆಯುವ ಉತ್ಸಾಹ, ಕಲಿಯುವ ಉತ್ಸಾಹ ಎರಡೂ ಇತ್ತು. ಅವಕಾಶಗಳೂ ಇದ್ದವು. ಆದರೆ ಹಣದ ಮುಗ್ಗಟ್ಟಿನಿಂದಾಗಿ ಖಿನ್ನತೆ ಆವರಿಸಿತ್ತು.

ಇಲ್ಲಿ ಪತ್ರಿಕೆಯ ಎಲ್ಲ ವಿಭಾಗಗಳಲ್ಲೂ ಕೆಲಸ ಮಾಡಿ ಒಂದಿಷ್ಟು ಅನುಭವ ಗಳಿಸಿದರೆ, ಸದ್ಯಕ್ಕೆ ದೂರದ ನಕ್ಷತ್ರಗಳಾದ ದೊಡ್ಡ ಪತ್ರಿಕೆಗಳನ್ನು ಸೇರುವುದು ಸಾಧ್ಯವಾದೀತು ಎಂಬುದೊಂದೇ ಆಗ ನನ್ನ ದಿಗಂತದಲ್ಲಿ ಗೋಚರಿಸುತ್ತಿದ್ದ ಬೆಳ್ಳಿ ಗೆರೆ.

ಹೀಗಿರುವಾಗ ನನ್ನ ಹಿತೈಷಿಯಂತೆ ಮಾತನಾಡುತ್ತಿದ್ದ ಕಂಪೋಸಿಂಗ್ ವಿಭಾಗದ  ಸಹೋದ್ಯೋಗಿಯೊಬ್ಬರು, “ಹುಲಿ-ಸಿಂಹ ಏನೂ ಕಟ್ಟ ಬೇಕಾಗಿಲ್ಲ ಮಾರಾಯ, ಸಂಜೆ ಸ್ವಲ್ಪ ಚೀಫ್‍ನ ನೋಡ್ಕೊ ಕೆಲಸವೂ ಖಾಯಮ್ಮಾಗುತ್ತೆ ಸಂಬಳವೂ ಜಾಸ್ತಿಯಾಗುತ್ತೆ” ಎಂಬ ಸೂಚ್ಯ ಇಂಗಿತ ನೀಡಿದರು.

ಮೂರು ಜನ ಚೀಫ್‍ಗಳಿದ್ದರು. ಯಾವ ಚೀಫ್ ಎಂದು ಕೇಳಿದೆ. “ಸಂಜೆ ಸಿಕ್ಕಿ ವಿವರವಾಗಿ ಮಾತಾಡೋಣ” ಎಂದೂ ಹೇಳಿದರು. ಎಳ್ಳಷ್ಟೂ ಲಜ್ಜೆ ಇಲ್ಲದೆ ಈ ಸಹೋದ್ಯೋಗಿ ನೀಡಿದ ಸೂಚನೆಯಿಂದ ನನಗೆ ಹೇಸಿಗೆ ಅಂಟಿಸಿಕೊಂಡಷ್ಟು ಅಸಹ್ಯವಾಯಿತು.

ತುಂಬಾ ಕಸಿವಿಯಾಯಿತು. ಈ ವಾತಾವರಣದಿಂದ ಕಳಚಿಕೊಳ್ಳಬೇಕು ಎನ್ನುವ ತುಡಿತ ಆ ಕ್ಷಣ ತೀವ್ರವಾಯಿತು. ತಂದೆ ಹೇಳಿದ ಕಾಯಕ ಶುದ್ಧಿಯ ಮಾತು ನೆನಪಾಯಿತು. ಪವಿತ್ರವಾದ ಜ್ಞಾನ ಮೂಲವೂ ಕಲ್ಮಶ ಮುಕ್ತವಲ್ಲ ಎಂದು ತಿಳಿದು ಭ್ರಮನಿರಸನ ಇಣುಕಲಾರಂಭಿಸಿತು.

ಇಷ್ಟೆಲ್ಲ ಮುಜುಗರಗಳ ಮಧ್ಯೆ ‘ಇಂದಿರಾತನಯ’ರನ್ನು ಭೇಟಿ ಮಾಡುತ್ತಿದ್ದೆ. ಆಗ ಅವರು ‘ಸಂಕ’ದಲ್ಲಿ ಮುಖ್ಯ ಉಪಸಂಪಾದಕರಾಗಿದ್ದರು. ಇಬ್ಬರಿಗೂ ರಾತ್ರಿ ಪಾಳಿ ಇದ್ದಾಗ ಮಾತಾಡಲು ಹೆಚ್ಚು ಅವಕಾಶವಿರುತ್ತಿತ್ತು.

ರಾತ್ರಿ ಪಾಳಿ ಇದ್ದಾಗ ನಾನು ಸಂಜೆ 4ರ ವೇಳೆಗೆ ಹನುಮಂತ ನಗರದಲ್ಲಿದ್ದ ಅವರ ಮನೆಗೆ ಹೋಗುವುದು. ಒಂದೆರಡು ಗಂಟೆ ಮಾತು. ನಂತರ ಅವರ ಮನೆಯಲ್ಲೇ ಅವರ ಪತ್ನಿ ಶ್ರೀಮತಿ ವಿಜಯಲಕ್ಷ್ಮಿಯವರು ಕಲಸಿ ಕೊಡುತ್ತಿದ್ದ ಹುಳಿಯನ್ನದ ಊಟ.

ಇಬ್ಬರೂ ಸಂಜೆ ಸುಮಾರು ಏಳರ ವೇಳೆಗೆ ಹನುಮಂತನಗರದಿಂದ ಶಿವಾಜಿ ನಗರದ ಬಸ್ಸು ಹತ್ತುತ್ತಿದ್ದೆವು. ಅವರು ‘ಸಂಕ’ ಎದುರು ಇದ್ದ ರಿಸರ್ವ್ ಬ್ಯಾಂಕ್ ಬಸ್ ಸ್ಟಾಪಿನಲ್ಲಿ ಇಳಿಯುತ್ತಿದ್ದರು. ನಾನು ಬಿ ಆರ್ ವಿ ಸ್ಟಾಪಿನಲ್ಲಿಳಿದು ‘ತಾಯಿನಾಡು’ ಕಚೇರಿಗೆ ಹೋಗುತ್ತಿದ್ದೆ.

ಹೀಗಿರುವಾಗ ಒಂದು ದಿನ ಇಂದಿರಾತನಯರು “ಜೋಶಿಯವರನ್ನೊಮ್ಮೆ ಬಂದು ನೋಡಿ” ಎಂದು ಸೂಚ್ಯವಾಗಿ ಹೇಳಿದರು. ನಾನ ಮರುದಿನವೇ ಆರ್ ಕೆ ಜೋಶಿಯವರನ್ನು ಭೇಟಿಮಾಡಿ ನನ್ನ ಹಿಂದಿನ ಸಂದರ್ಶನ ಪ್ರಸ್ತಾಪಿಸಿ, ಈಗ ‘ತಾಯಿನಾಡು’ನಲ್ಲಿದ್ದೇನೆ ಅವಕಾಶ ಕೊಟ್ಟರೆ ಉಪಕೃತನಾಗುವೆ ಎಂದು ವಿನಂತಿಸಿಕೊಂಡೆ.

ಜೋಶಿಯವರು ಸ್ವಲ್ಪ ಮೀನಮೇಷ ಎಣಿಸಿ ‘ನಾಳೆ ಬನ್ನಿ ನೋಡೋಣ’ ಎಂದರು. ಮರು ದಿನ ದಿವಾಕರ ರಂಗರಾಯರನ್ನು ನೋಡಲು ಹೇಳಿದರು. ನಾನು ದಿವಾಕರರನ್ನು ನೋಡಿದ ವೇಳೆ ಜೋಶಿಯವರೂ ಇದ್ದರು.

“ಈಗ ‘ತಾಯಿನಾಡು’ನಲ್ಲಿದ್ದೀರ? ಅವರು ನಿಮ್ಮನ್ನ ಬಿಟ್ಟು ಕೊಡುತ್ತಾರ?”
ದಿವಾಕರರು ಇಷ್ಟೇ ಮಾತನಾಡಿದ್ದು.

“ನಾನು ಇನ್ನೂ ಪ್ರೊಬೇಷನರ್ ರಾಜೀನಾಮೆಗೆ ತೊಂದರೆಯಾಗಲಿಕ್ಕಿಲ್ಲ” ಎಂದೆ.

“ನೀವಿನ್ನು ಹೋಗಬಹುದು” ಎಂದರು ಜೋಶಿಯವರು. ಹೊರಬಂದು ಕಾದೆ.

“ಯಾವತ್ತಿನಿಂದ ಬರ್ತೀರಿ?” ಜೋಶಿಯವರ ಪ್ರಶ್ನೆ.

-ಎರಡು ದಿನ ಕಾಲಾವಕಾಶ ಕೇಳಿದೆ. “ಅಸ್ತು” ಎಂದರು. ಸಂಬಳ ಇತ್ಯಾದಿ ಏನನ್ನೂ ಕೇಳದೆ ಒಪ್ಪಿಕೊಂಡಿದ್ದೆ. ಅಲ್ಲಿಂದ ನೇರ ಕಚೇರಿಗೆ ಹೋದೆ. ರೈಟಿಂಗ್ ಪ್ಯಾಡಿನ ಹಾಳೆಯಲ್ಲಿ ರಾಜೀನಾಮೆ ಬರೆದು ಸುದ್ದಿ ಸಂಪಾದಕರ ಕೈಯಲ್ಲಿಟ್ಟೆ.

“ಒಳ್ಳೆಯದಾಗಲಿ” ಎಂದು ಆಶೀರ್ವದಿಸಿ ಡಿ ಎಚ್ ಶ್ರೀನಿವಾಸ್ ಬೀಳ್ಕೊಟ್ಟರು.

‘ಸಂಕ’ ಪ್ರವೇಶವೂ ನನಗೆ ಹೆಬ್ಬಾಗಿಲಿನಿಂದ ಆಗಲಿಲ್ಲ. ಅಲ್ಲಿಯೂ ದಿಡ್ಡಿ ಬಾಗಿಲಿನ ಮೂಲಕವೇ. ‘ಸಂಕ’ಗೆ ಹೆಬ್ಬಾಗಿಲಿತ್ತು. ಹೆಬ್ಬಾಗಿಲಿನ ಮೂಲಕ ಸಂಪಾದಕ ರಂಗನಾಥ ದಿವಾಕರರ ಚೇಂಬರಿಗೆ ಮತ್ತು ಆಡಳಿತ ವಿಭಾಗಕ್ಕೆ ಪ್ರವೇಶಾವಕಾಶವಿತ್ತು.

ಸಂಪಾದಕರ ಕೊಠಡಿಯಿಂದ ಸಂಪಾದಕೀಯ ವಿಭಾಗಕ್ಕೆ ಹೋಗಲು ಒಳಬಾಗಿಲೊಂದಿತ್ತಾದರೂ ಅದು ಸಾರ್ವತ್ರಿಕವಾಗಿರಲಿಲ್ಲ. ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುವವರು ಮತ್ತು ಸಾರ್ವಜನಿಕರು ಪಕ್ಕದ ಬಾಗಿಲಿನಿಂದಲೇ ಪ್ರವೇಶಿಸಬೇಕಾಗಿತ್ತು.

ಎರಡು ಪಕ್ಕದ ಬಾಗಿಲುಗಳು. ಪಕ್ಕದ ಒಂದು ಬಾಗಿಲಿನಿಂದ ಪ್ರವೇಶಿಸಿದರೆ ಅದು ಮುಖ್ಯ ವರದಿಗಾರ ಶ್ಯಾಮರಾಯರ ಚೇಂಬರ್ ಮೂಲಕವೇ ಸಂಪಾದಕೀಯ ವಿಭಾಗಕ್ಕೆ ಒಯ್ಯುತ್ತಿತ್ತು.

ಇದೂ ರಾಜಾ ರಸ್ತೆ ಆಗಿರಲಿಲ್ಲ. ಇನ್ನೊಂದು ಪಕ್ಕದ ಬಾಗಿಲ ಮೂಲಕ ಹೋದರೆ ಕಂಪೋಸಿಂಗ್ ವಿಭಾಗ ಸಿಗುತ್ತಿತ್ತು. ನಾವು ಈ ಎರಡನೆಯ ಪಕ್ಕದ ಬಾಗಿಲಿನಲ್ಲಿ, ಕಂಪೋಸಿಂಗ್ ವಿಭಾಗದ ಮೂಲಕವೇ ಸಂಪಾದಕೀಯ ವಿಭಾಗಕ್ಕೆ ಹೋಗುತ್ತಿದ್ದೆವು.

ಪತ್ರಿಕೆಯು ಸಾರ್ವಜನಿಕರಿಗೆ ಮುಡುಪಾದ ಒಂದು ವಿಶ್ವಸ್ಥ ಮಂಡಳಿ (ಪಬ್ಲಿಕ್ ಟ್ರಸ್ಟ್). ಅದು ಸಾರ್ವಜನಿಕರಿಗೆ, ಅವರ ಅಭಿಪ್ರಾಯಕ್ಕೆ ಮುಕ್ತದ್ವಾರ ಆಗಿರಬೇಕು ಎನ್ನುವುದು ಜಗತ್ತಿನಾದ್ಯಂತ ಒಪ್ಪಿತವಾಗಿರುವ ಪತ್ರಿಕಾ ಧರ್ಮ, ಆದರ್ಶ.

ಆದರೆ, ಲೋಕ ಶಿಕ್ಷಣ ಟ್ರಸ್ಟಿನ ‘ಸಂಕ’ ಸಂಪಾದಕೀಯ ವಿಭಾಗ (ವರದಿಗಾರರೂ ಸೇರಿದಂತೆ) ಸಾರ್ವಜನಿಕರಿಗೆ ಸುಲಭ ಸಂಪರ್ಕ ಸಾಧ್ಯವಾಗದಂಥ ಏಳು ಸುತ್ತಿನಕೋಟೆಯೊಳಗಣ ಗವಿಯಲ್ಲಿ ಅಡಗಿದ್ದುದು ನನ್ನಲ್ಲಿ ಶುರುವಿಗೇ ಗಾಬರಿಯುಂಟು ಮಾಡಿತ್ತು.

ಈ ‘ಗವಿ’ಯೊಳಗೆ ನಾನು ತಲೆ ಇಟ್ಟಾಗಿತ್ತು. ಈ ಚಕ್ರವ್ಯೂಹ ಮಾದರಿಯ ಸುತ್ತು-ಬಳಸು ಹಾದಿಗಳ ಮೂಲಕ ಸಂಪಾದಕೀಯ ವಿಭಾಗದ ಒಳಹೊಕ್ಕರೆ, ಬಂದ ದಾರಿ ಯಾವುದೆಂದು ಗೊತ್ತಾಗುತ್ತಿರಲಿಲ್ಲ. ನಿರ್ಗಮನದ ಹಾದಿಯಂತೂ ಮುಕ್ತವಾಗಿರಲಿಲ್ಲ.

1965ರ ಜೂನ್ 10ರಂದು ಮಾಸಿಕ 125 ರೂ., ಸಂಬಳದ ಮೇಲೆ ಪ್ರೊಬೇಷನರಿ ಉಪಸಂಪಾದಕನಾಗಿ ‘ಸಂಯುಕ್ತ ಕರ್ನಾಟಕ’ ಸಂಪಾದಕೀಯ ವಿಭಾಗವನ್ನು ಪ್ರವೇಶಿಸಿದಾಗ ನನ್ನ ಮನಸ್ಸಿನಲ್ಲಿ ಮೂಡಿದ ಚಿತ್ರ ಇನ್ನೂ ನಿಚ್ಚಳವಾಗೇ ಇದೆ.

ಸಂಪಾದಕರ ಚೇಂಬರ್ಸ್, ಆಡಳಿತ ವಿಭಾಗ, ಶ್ಯಾಮರಾಯರ ಕೊಠಡಿ, ಕಂಪೋಸಿಂಗ್ ವಿಭಾಗಗಳ ಮಧ್ಯೆ ಸ್ಯಾಂಡ್ವಿಚ್ ಆಗಿದ್ದ ‘ಸಂಕ’ ಸಂಪಾದಕೀಯ ವಿಭಾಗ. ನಾಲ್ಕು ಗೋಡೆಗಳ ಮಧ್ಯೆ ಇದ್ದ ಒಂದು ದೊಡ್ಡ ಹಜಾರ. ಜೈಲಿನಂಥ ದೊಡ್ಡ ಗೋಡೆಗಳು.

ಗಂವ್ ಎಂದು ಕವುಚಿಕೊಳ್ಳುತ್ತಿದ್ದ ಕಡು ನೀಲಿ ಬಣ್ಣದ ಪೈಂಟಿನ ಗೋಡೆಗಳು. ಮೇಲಿನಿಂದ ಬಲವೆಲ್ಲ ಬಿಟ್ಟು ಅದುಮಿದಂಥ ಉಸಿರು ಕಟ್ಟಿಸುವ ವಾತಾವರಣ. ಈ ಹಜಾರದಲ್ಲಿ ಒಂದು ಮೂಲೆಯಲ್ಲಿ ಸುದ್ದಿ ಸಂಪಾದಕರ ಮೇಜಿತ್ತು. ಸುಮಾರು ಆರಡಿ ನಾಲ್ಕಡಿ ಅಳತೆಯ ದೊಡ್ಡ ಮೇಜಿತ್ತು .

ಅದು ಜನರಲ್ ನ್ಯೂಸ್ ಡೆಸ್ಕ್. ಅದರ ಎರಡು ಬದಿ ಆ ಕಡೆ ನಾಲ್ಕು, ಈ ಕಡೆ ನಾಲ್ಕು ಕುರ್ಚಿಗಳು. ಸಂಪಾದಕರ ಕೊಠಡಿಯ ಬಾಗಿಲಿಗೆ ಹೊಂದಿಕೊಂಡ ಸ್ಥಳದಲ್ಲಿ ಇಂಥದೇ ಇನ್ನೊಂದು ದೊಡ್ಡ ಮೇಜಿತ್ತು. ಅದು ಗ್ರಾಮಾಂತರ ಸುದ್ದಿ ವಿಭಾಗ (ಮೊಫುಸಿಲ್ ನ್ಯೂಸ್ ಡೆಸ್ಕ್).

ಆಗ ಪತ್ರಿಕಾ ವಲಯದಲ್ಲಿ ‘ಮಾಧ್ವ ಮಠ’ ಎನ್ನುವುದು ‘ಸಂಕ’ಕ್ಕೆ ಅನ್ವರ್ಥನಾಮವಾಗಿತ್ತು. ಸಂಪಾದಕೀಯ ವಿಭಾಗಕ್ಕೆ ಪಕ್ಕದ ಎರಡು ಬಾಗಿಲುಗಳ ಹೊರತು ಕಿಟಕಿಗಳಾಗಲೀ, ಬೆಳಕಿಂಡಿಗಳಾಗಲೀ ಇರಲಿಲ್ಲ.

“ಲೆಟ್ ನೊಬೆಲ್ ಥಾಟ್ಸ್ ಕಮ್ ಫ್ರಂ ಆಲ್ ಡೈರೆಕ್ಷನ್ಸ್” ಎಂಬ ಧ್ಯೇಯದಲ್ಲಿ ಆ ‘ಮಠಕ್ಕೆ’ ನಂಬಿಕೆ ಇದ್ದಂತಿರಲಿಲ್ಲ. ಹೊರಗಿನ ಗಾಳಿ, ಬೆಳಕಿಗೆ ಗಡಿಪಾರು. ಕತ್ತಲು ಕವಿದ ಈ   ಪ್ರಪಂಚದಲ್ಲಿ ಟ್ಯೂಬ್ ಲೈಟುಗಳಲ್ಲೇ ‘ಟ್ಯೂಬ್’ಲೈಟುಗಳ ಎಲ್ಲ ಕಾರುಬಾರು, ಎಲ್ಲ ಪಾರುಪತ್ಯೆ. ಕತ್ತು ತಗ್ಗಿಸಿ ಬರೆಯುವುದಷ್ಟೆ ಉಪಸಂಪಾದಕರು/ವರದಿಗಾರರ ಕೆಲಸ. ಚಕ್ರವ್ಯೂಹ ಹೊಕ್ಕ ಅಭಿಮನ್ಯುವಿನಂತೆ ನಾನು ಇಲ್ಲಿ ಪ್ರವೇಶಿಸಿದ್ದೆ.

ನಾನು ಸೇರಿದಾಗ ಸುರೇಂದ್ರ ದಾನಿಯವರು ಸುದ್ದಿ ಸಂಪಾದಕರಾಗಿದ್ದರು. ನಾಗೇಶ ರಾವ್, ಸುದ್ದಿ ವಿಭಾಗದ ಎಲ್ಲ ಕೆಲಸಗಳಿಗೂ ಹೊಣೆಗಾರರಾಗಿದ್ದು ನಮಗೆ ಮಾರ್ಗದರ್ಶನ ನೀಡುತ್ತಿದ್ದರು. ಅನಂತ ಸುಬ್ಬರಾವ್ ಸಂಪಾದಕೀಯ ಪುಟವನ್ನು ನೋಡಿಕೊಳ್ಳುತಿದ್ದರು.

ಇಂದಿರಾತನಯ, ಎನ್ ವಿ ಜೋಶಿ, ಮತ್ತೂರು ಕೃಷ್ಣಮೂರ್ತಿ ಜನರಲ್ ಡೆಸ್ಕಿನ ಮೂರುಪಾಳಿಗಳ ಮುಖ್ಯ ಉಪಸಂಪಾದಕರುಗಳು. ಅರ್ಚಿಕ ವೆಂಕಟೇಶ ಮತ್ತು ವ್ಯಾಸರಾವ್ ಗ್ರಾಮಾಂತರ ಸುದ್ದಿ ಮೇಜಿನಲ್ಲಿ ಮುಖ್ಯ ಉಪಸಂಪಾದಕರಾಗಿದ್ದರು.

ಅರ್ಚಿಕ ವೆಂಕಟೇಶ ಸಾಹಿತಿಗಳಾಗಿದ್ದು ಪ್ರಗತಿಶೀಲ ಸಾಹಿತ್ಯ ಚಳವಳಿಯಿಂದ ಪ್ರೇರಿತರಾಗಿ ‘ಅಸ್ಥಿಪಂಜರ’ ಕಾದಂಬರಿಯಿಂದ ಖ್ಯಾತರಾಗಿದ್ದರು.

ನನ್ನ ಕೆಲಸ ಶುರುವಾದದ್ದು ಮತ್ತೂರರ ಪಾಳಿಯಲ್ಲಿ. ಬೆಳಗ್ಗೆ 10ರಿಂದ ಸಂಜೆ 5, ಮಧ್ಯಾಹ್ನ 2ರಿಂದ 9 ಹಾಗೂ, ರಾತ್ರಿ 9ರಿಂದ ಬೆಳಗ್ಗೆ 2 ಪಾಳಿಯ ವೇಳೆಯಾಗಿತ್ತು. ಎಲ್ಲ ಪಾಳಿಗಳಲ್ಲೂ  ನಾವು ಬಾಯಿ ಮುಚ್ಚಿಕೊಂಡು, ಕತ್ತು ಬಗ್ಗಿಸಿ ಪಿಟಿಐ ಮತ್ತು ಯುಎನ್ ಐ ಕಾಪಿಗಳನ್ನು ಭಾಷಾಂತರಿಸುತ್ತಲೇ ಇರುತ್ತಿದ್ದೆವು.

ಮಧ್ಯಾಹ್ನ, ರಾತ್ರಿ ಪಾಳಿಗಳಲ್ಲಿ ಪೇಜ್ ಮೇಕಪ್ ಮಾಡಿಸುತ್ತಿದ್ದೆವು. ನಮ್ಮಲ್ಲಿ ಸ್ವಲ್ಪ  ವಾಚಾಳಿಗಳು ಎನ್ನಬಹುದಾಂಥ ಇಬ್ಬರು ಉಪಸಂಪಾಕರಿದ್ದರು. ನನಗಿಂತ ಸೀನಿಯರ್ಸ್ -ರಂಗನಾಥ್ ಮತ್ತು ಪಿ ಆರ್ ನಾರಾಯಣ ರಾವ್. ಇಬ್ಬರೂ ರಸಿಕರು. ಇವರು ಇದ್ದಲ್ಲಿ ಸ್ವಲ್ಪ ಹರಟೆ, ವಿನೋದ ಇರುತ್ತಿತ್ತು.

‘ಸಂಕ’ದ ಮಣ್ಣಿನ ಗುಣವೋ ಏನೋ, ಅಲ್ಲಿ ಆಗಾಗ ಕಂಪನಗಳಾಗುತ್ತಿದ್ದವು. ನಾನು ಸೇರಿದ ಕೆಲವೇ ದಿನಗಳಲ್ಲಿ ಹೀಗೊಂದು ಕಂಪನವಾಗಿ ಆರ್ ಕೆ ಜೋಶಿ ಮತ್ತು ದಾನಿ ತೌರಿಗೆ, ಅಂದರೆ ಹುಬ್ಬಳ್ಳಿಗೆ ಮರಳಿದರು. ಶ್ಯಾಮರಾಯರು ಸ್ಥಾನಿಕ ಸಂಪಾದಕರಾದರು. ನಾಗೇಶರಾಯರು ಸುದ್ದಿ ಸಂಪಾದಕರಾದರು.

ದಾವಣಗೆರೆಯಲ್ಲಿ ‘ಸಂಜಯ’ ಎನ್ನುವ ಪತ್ರಿಕೆ ಪ್ರಕಟಿಸಿ ನಂತರ ‘ಸಂಕ’ ಸೇರಿ ಮೇಲೇರಿದ್ದ ಶಾಮರಾಯರದು ‘ವಜ್ರಾದಪಿ ಕಠೋರಾಣಿ’ ವ್ಯಕ್ತಿತ್ವ. ವಜ್ರಮುಷ್ಟಿಯ ಮನುಷ್ಯ. ಅವರ ದೃಷ್ಟಿ, ಮುಖಭಾವಗಳಲ್ಲಿ ಎದುರಾಳಿಯನ್ನು ಹೊಸಕಿ ಹಾಕುವಂಥ ಕ್ರೌರ್ಯ ಕಂಡೂ ಕಾಣದಂತೆ ಇಣುಕು ನೋಟ ಬೀರುತ್ತಿತ್ತು.

ದಿನದ ಕೆಲಸ ಮುಗಿದ ನಂತರವೂ ವರದಿಗಾರರು ಅವರ ಅಪ್ಪಣೆಯಿಲ್ಲದೆ ಮನೆಗೆ ಹೋಗುವಂತಿರಲಿಲ್ಲ. ಉಪಸಂಪಾದಕರು ಊಟದ ವಿರಾಮ ಹೊರತು ಒಂದು ಕಡೆ ಸುಮ್ಮನೆ ಕುಳಿತಿರುವುದನ್ನು ಅವರು ಸಹಿಸುತ್ತಿರಲಿಲ್ಲ. ಸ್ಟೇಟ್ಸ್ ಮನ್ ಅಥವಾ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯನ್ನು ಕೊಟ್ಟು, ಅದರ ಸಂಪಾದಕೀಯ ಪುಟದಲ್ಲಿನ ಲೇಖನವನ್ನು ಭಾಷಾಂತರಿಸಿಯೇ ಮನೆಗೆ ಹೋಗತಕ್ಕದ್ದೆಂದು ನಾಗೇಶರಾಯರ ಮೂಲಕ ಅಪ್ಪಣೆ ಕೊಡಿಸುತ್ತಿದ್ದರು.

ಎರಡು ಗಂಟೆಗೆ ಮಧ್ಯಾಹ್ನದ ಪಾಳಿಯವರು ಬಂದ ನಂತರ ಬೆಳಗಿನ ಪಾಳಿ ಉಪ ಸಂಪಾದಕರ ಕೈಗೆ ಸ್ವಲ್ಪ ಬಿಡುವು ಸಿಗುತ್ತಿತ್ತು. ಆದರೆ ಯಾವಾಗ ಶ್ಯಾಮರಾಯರು ತಮ್ಮ ಚೇಂಬರಿನ ರೆಕ್ಕೆ ಬಾಗಿಲಲ್ಲಿ ನಿಂತುಕೊಂಡು ಗೃಧ್ರ ದೃಷ್ಟಿ ಬೀರುತ್ತಾರೋ ಎಂಬ ಭಯ ನಮ್ಮನ್ನು ಕಾಡುತ್ತಲೇ ಇರುತ್ತಿತ್ತು.

ಈ ಗೃಧ್ರ ದೃಷ್ಟಿಗೆ ಬಿದ್ದವರಿಗೆ ‘ಸ್ಟೇಟ್ಸ್ ಮನ್’ ಶಿಕ್ಷೆ ಖಾತ್ರಿ. ಈ ಶಿಕ್ಷೆ ತಪ್ಪಿಸಿಕೊಳ್ಳಲು ಕೆಲವರು ಮುಂದೆ ಒಂದಷ್ಟು ಏಜೆನ್ಸಿ ಕಾಪಿಗಳನ್ನು ಇಟ್ಟುಕೊಂಡು ತಲೆ ಎತ್ತದೆ ‘ಶ್ರೀ ರಾಮ’ ನಾಮ ಬರೆಯುತ್ತಾ ಬ್ಯುಸಿಯಾಗಿರುವಂತೆ ನಟಿಸುತ್ತಿದ್ದರು.

ಉಪಸಂಪಾದಕರು ಯಾರು ಯಾರು ಎಷ್ಟುಸಲ ಕಾಫಿಗೆ, ಸಿಗರೇಟಿಗೆ ಹೊರಗೆ ಹೋಗಿದ್ದರು ಎಂಬುದನ್ನು ಗುರುತು ಹಾಕಿಕೊಡು ನಾಗೇಶರಾಯರು ಶ್ಯಾಮರಾಯರಿಗೆ ವರದಿ ಮಾಡಬೇಕಿತ್ತು. ಒಂದು ರೀತಿಯ ಹಿಟ್ಲರ್ ಷಾಹಿ. ಶ್ಯಾಮರಾಯರನ್ನು ಪತ್ರಕರ್ತರು ಎನ್ನುವುದಕ್ಕಿಂತ ದಕ್ಷರಾದ ಪತ್ರಿಕಾ ಆಡಳಿತಗಾರ ಎನ್ನುವುದು ಹೆಚ್ಚು ಸಮಂಜಸವಾದೀತು.

ಒಮ್ಮೆ ಶ್ಯಾಮರಾಯರು ತಮ್ಮ ಮೂಗಿನ ನೇರಕ್ಕೆ ಸರಿಯಾಗಿ ಸಂಪಾದಕೀಯ ವಿಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರು. ಉಪಸಂಪಾದಕರನ್ನು  ವರದಿಗಾರರಾಗಿ, ವರದಿಗಾರರನ್ನ ಉಪಸಂಪಾದಕರಾಗಿ ಹಾಗೆಯೇ ಪಾಳಿಯಿಂದ ಪಾಳಿಗೆ ಬದಲಾವಣೆಗಳಾಗಿದ್ದವು. ಇದರಿಂದ ಕೆಲವರಿಗೆ ಅಸಮಾಧಾನವಾಗಿತ್ತು.

ಆಗ ನನಗೆ ರಾತ್ರಿ ಪಾಳಿ. ಮರು ದಿನ ಒಂದು ಪ್ರಮುಖ ಸುದ್ದಿ ಪತ್ರಿಕೆಯಲ್ಲಿ ಬರಲಿಲ್ಲ. ಬೆಳಗ್ಗೆ ಹತ್ತರ ಸಮಯ ಅದೇ ತಾನೇ ಎದ್ದು ಕುಳಿತು ಪತ್ರಿಕೆಯಲ್ಲಿ ಕಣ್ಣಾಡಿಸುತ್ತಿದ್ದೆ. ಶ್ಯಾಮರಾಯರಿಂದ ನನಗೆ ಬುಲಾವ್ ಬಂತು.

ಡ್ರೈವರ್ ನನ್ನನ್ನು ನೇರವಾಗಿ ಶ್ಯಾಮರಾಯರ ಮನೆಗೇ ಕರೆದೊಯ್ದ. ದೂರ್ವಾಸ ಮುನಿಗಳಾಗಿದ್ದ ಶ್ಯಾಮರಾಯರು ಪಡಸಾಲೆಯಲ್ಲಿ ಶತಪಥ ಹಾಕುತ್ತಿದ್ದವರು, ನನ್ನ ಮುಖ ಕಂಡೊಡನೆ ಕೋರ್ಟ್ ಮಾರ್ಷಲ್ ಶುರು ಮಾಡಿದರು. ನನಗೆ ಕುಳಿತುಕೊ ಎಂದೂ ಹೇಳಲಿಲ್ಲಿ. ನಾನು ಕೈಕಟ್ಟಿಕೊಂಡು ನಿಂತಿದ್ದೆ.

September 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಸಿ. ಎನ್. ರಾಮಚಂದ್ರನ್

    ಪ್ರಿಯ ಜಿ ಎನ್ ಆರ್ ಅವರಿಗೆ: ಸುಮಾರು 50 ವರ್ಷಗಳ ಹಿಂದಿನ ಪತ್ರಿಕೋದ್ಯಮದ ಸ್ಥಿತಿ-ಗತಿಗಳನ್ನು ಬಹಳ ಸ್ಪಷ್ಟವಾಗಿ, ವಿವರವಾಗಿ ಕಟ್ಟಿಕೊಡುತ್ತಿದ್ದೀರಿ. ಈ ವಾರದ ಸಂಚಿಕೆಯಲ್ಲಿ ನೀವು ದಾಖಲಿಸಿರುವ ’ಸ್ಟೇಟ್ಸ್ ಮನ್ ಶಿಕ್ಷೆ’ ’ರಾಮನಾಮ ಬರಹ’ ಇತ್ಯಾದಿಗಳು ಆಶ್ಚರ್ಯವನ್ನುಂಟುಮಾಡುತ್ತವೆ. ಈ ಚರಿತ್ರೆಯನ್ನು ಹೀಗೆಯೇ ವಿವರವಾಗಿ ಮುಂದುವರೆಸಿ. ನಿಮ್ಮ, ರಾಮಚಂದ್ರನ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: