ಲಿಬ್ಯಾದಲ್ಲಿ ಉಪನ್ಯಾಸಕರಾಗಿರುವ ಉದಯ ಇಟಗಿ ಅವರು ಇಲ್ಲಿ ಎರಡು ಕವನಗಳನ್ನು ಅನುವಾದಿಸಿದ್ದಾರೆ.
ಮಂಜಿನ ಹಾಗೆ..
ಅವನು ಗೊತ್ತಿದ್ದೋ ಗೊತ್ತಿಲ್ಲದೆಯೋ
ಮಂಜಿನೊಳಗೆ ಮಂಜಿನ ಹಾಗೆ ನಡೆದು ಬಂದ.
ಅವನ ಕೈ ವಾಸನೆ ನನ್ನ ಮುಟ್ಟುವ ಮೊದಲೇ
ಅವನಾಗಲೇ ನನ್ನ ತಲೆಯೊಳಗಿದ್ದ.
ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ
“ಯಾರೀತ? ಎಂಥ ಹೂಗಳು?”
ನನ್ನ ಪಕ್ಕದಲ್ಲಿ ಕುಳಿತು ಒಂದೊಂದೇ
ಹೂಗಳಿಂದ ನನ್ನ ಮುಚ್ಚುತ್ತಾ ಹೇಳುತ್ತಾನೆ
“ಇವೆಲ್ಲ ನಿನಗೆ, ನಿನಗೊಬ್ಬಳಿಗೆ ಮಾತ್ರ
ಏಕೆಂದರೆ ನೀನು ಹೋಗುತ್ತಿದ್ದೀಯ”
ಆ ಹೂಗಳ ತಣ್ಣನೆಯ ಸ್ಪರ್ಶ
ಹನಿ ಹನಿಯಾಗಿ ಜಿನುಗತೊಡಗಿತ್ತು.
ಎಷ್ಟೊಂದು ಹೊಸದು?
ಈ ಮೊದಲು ಅನುಭವಿಸಿಯೇ ಇರಲಿಲ್ಲ.
ನೀನು ಸಹ ಅಪರಿಚತನೆ!
ಹರಿದು ಹೋಗುವ ಕಣ್ಣೀರನ್ನು ತಡೆಗಟ್ಟುತ್ತಾ
ಅವ ಹೂ ಹಿಡಿದು ಹೇಳುತ್ತಾನೆ.
“ಅಪರಿಚತನೆ?
ಅಲ್ಲ ನಾನಲ್ಲ, ಹುಟ್ಟಿನಿಂದ ನಿನ್ನವನೇ,
ಬಹಳ ದಿನಗಳಿಂದ ಬೆಸೆದ ಬಾಂಧವ್ಯ ನಮ್ಮಿಬ್ಬರದು”
ನಾನು ಅವನೆಡೆಗೆ ನೋಡಿದೆ…..
ಮಂಜಲ್ಲಿ, ಮಂಜಾಗಿ ಕರಗಿ ಎಷ್ಟೊಂದು ಹೊತ್ತಾಗಿತ್ತು
ಆದರೆ ನಾನು ಮಾತ್ರ ಒಂಟಿಯಾಗಿರಲಿಲ್ಲ!
ಮೂಲ ಮರಾಠಿ:ಇಂದಿರಾ ಸಂತ
ಇಂಗ್ಲೀಷಗೆ:ಶಾಂತಾ ಗೋಖಲೆ
ಕನ್ನಡಕ್ಕೆ:ಉದಯ್ ಇಟಗಿ
ಶಾಕುಂತಳೆಯ ಸ್ವಗತಗಳು
ಎಲ್ಲ ಪ್ರಿಯತಮರೂ ಶಾಪಗ್ರಸ್ತರೇ!
ಕಡೆಪಕ್ಷ ಏನಿಲ್ಲವೆಂದರೂ
ತಂತಮ್ಮ ಪ್ರಿಯತಮೆಯನ್ನು
ಒಂದಷ್ಟು ದಿವಸ ಮರೆತು
ಹಾಯಾಗಿ ಇದ್ದುಬಿಡುವಷ್ಟು ಶಾಪಗ್ರಸ್ತರು!
ಪಾಪ, ಅವರು ತಾನೆ ಏನು ಮಾಡಿಯಾರು
ಅವರ ಪ್ರೀತಿ ಮರೆವಿನ ಹೊಳೆಗೆ ಸಿಕ್ಕು ಕೊಚ್ಚಿಹೋಗಿಬಿಟ್ಟರೆ?
ಎಲ್ಲ ಪ್ರಿಯತಮೆಯರೂ ಶಾಪಗ್ರಸ್ತರೇ!
ತನ್ನ ಪ್ರಿಯತಮನ ಸ್ಮರಣೆಯಿಂದಲೇ
ಮರೆತು ಹೋಗುವಷ್ಟು ಶಾಪಗ್ರಸ್ತರು!
ಅವರು ಕಾಯುತ್ತಲೇ ಇರಬೇಕು
ತಮ್ಮ ಗುಟ್ಟು ಅವನ ನೆನಪಿನ
ಬಲೆಯಲ್ಲಿ ಸಿಕ್ಕು ರಟ್ಟಾಗುವವರಿಗೂ!
ಪ್ರತಿ ಮಗುವೂ ಶಾಪಗ್ರಸ್ತನೇ!
ತಂದೆಯಿಲ್ಲದೆ ಬೆಳೆಯುವ
ಸದಾ ಸಿಂಹದ ಬಾಯಿಯಲ್ಲಿಯೇ ಕೈಯಿಟ್ಟುಕೊಂಡು
ಆಟವಾಡುವ ಶಾಪಗ್ರಸ್ತ!
ಮಲಯಾಳಂ ಮೂಲ: ಕೆ. ಸತ್ಚಿದಾನಂದ
ಇಂಗ್ಲೀಷಗೆ: ಕೆ. ಸತ್ಚಿದಾನಂದ
ಕನ್ನಡಕ್ಕೆ: ಉದಯ ಇಟಗಿ








Ondane kavite arthawaglilla. Eradane kavite uttamawagide.
ದಳವಾಯಿಯವರೆ,
ಇಲ್ಲಿ ಕವಯಿತ್ರಿ ತಾನು ಸತ್ತ ಮೇಲೆ ಸಾವಿನೊಂದಿಗೆ ಸಂಭಾಷಿಸುತ್ತಿದ್ದಾಳೆ. ಅಂದರೆ ಸಾವನ್ನು ಮಂಜಿಗೆ ಹೋಲಿಸಲಾಗಿದೆ.ಸಾವು ಹುಟ್ಟಿನಿಂದಲೇ ನಮಗೆ ಅಂಟಿಕೊಂದುಬರುತ್ತದೆ. ಅದನ್ನು ಬೇರಪಡಿಸಲು ಸಾಧ್ಯವಿಲ್ಲ ಹಾಗೂ ಸಾವಿನಲ್ಲಿ ಎಲ್ಲರೂ ಒಂದಾಗುತ್ತಾರೆ ಎಂದು ಕವಯಿತ್ರಿ ಇಲ್ಲಿ ಸೂಚ್ಯವಾಗಿ ಹೇಳಿದ್ದಾಳೆ.
Namage moola kavithegala parichayavilla. Aadare nimma kavitegalu bahala sundara mattu artha poorna Udayravare.