‘ಅವಧಿ’ ಬೆಸ್ಟ್ ಬ್ಲಾಗ್: ಇವತ್ತಿನ ಆಯ್ಕೆ-ಅಲೆಮಾರಿಯ ಅನುಭವಗಳು

ಇವತ್ತಿನ ಆಯ್ಕೆ: ಅಲೆಮಾರಿಯ ಅನುಭವಗಳು


ಟ್ರಾವೆಲ್ ಬ್ಲಾಗುಗಳ ಪಟ್ಟಿಯಲ್ಲಿ ಬರುವ ಮೊದಮೊದಲ ಕನ್ನಡ ಬ್ಲಾಗು ರಾಜೇಶ್ ನಾಯ್ಕರ ಅಲೆಮಾರಿಯ ಅನುಭವಗಳು. ೨೦೦೬ರಲ್ಲಿ ಶುರುವಾದ ಇದು, ಹೆಚ್ಚುಕಮ್ಮಿ ಪ್ರವಾಸಿ ತಾಣಗಳ ಪರಿಚಯಕ್ಕೆಂದೇ ಮೀಸಲಾದ ಬ್ಲಾಗು. ರಾಜೇಶ್ ಅದೆಷ್ಟು ಸುತ್ತುತ್ತಾರೆ ಅಂದ್ರೆ, ಜಗತ್ತೇನಾದರೂ ಚಿಕ್ಕದಿದ್ರೆ ಅವರು ಇಷ್ಟರೊಳಗೇ ಒಂದು ರೌಂಡು ಹೋಗಿಬಂದು ಮುಗಿಸಿಬಿಡುತ್ತಿದ್ದರೇನೋ! ಆದಿತ್ಯವಾರ-ರಜಾದಿನ ಬಂತೆಂದರೆ ಸಾಕು, ಈ ಅಲೆಮಾರಿ ಬ್ಯಾಗೇರಿಸಿ ಹೊರಟೇಬಿಡುತ್ತಾರೆ: ಯಾವ ಬೆಟ್ಟವೋ, ಯಾವ ಜಲಪಾತವೋ, ಯಾರೂ ನಡೆಯದ ಕಾಡಹಾದಿಯೋ, ಸಂಗೀತ ಹಾಡುವ ಶಿಲೆಗಳ ಗುಡಿಯೋ. ನಾಯ್ಕರ ಕೆಮೆರಾದಲ್ಲಿ ಧುಮುಕುವ ನೀರು ಸೃಷ್ಟಿಸಿದ ಕಾಮನಬಿಲ್ಲು ಸೆರೆಯಾಗುತ್ತದೆ, ಹಸಿರು ಹುಳು ಇಬ್ಬನಿ ಹನಿ ಹೀರುತ್ತಾ ’ಪೋಸ್’ ಕೊಡುತ್ತದೆ, ಶಿಲಾಬಾಲಿಕೆ ನೃತ್ಯವಾಡುತ್ತಾಳೆ, ಸೂರ್ಯ ಸಹ ಬೇಗ ಮುಳುಗಿ ಬೇಗ ಎದ್ದುಬಂದು ಗುಡ್ಡದ ನೆತ್ತಿಯಲ್ಲಿ ಕೆಂಪಾಗುತ್ತಾನೆ. ನಾಯ್ಕರಿಗೆ ಚಾರಣದಷ್ಟೇ ಕ್ರಿಕೆಟ್ಟಿನಲ್ಲೂ ಆಸಕ್ತಿ. ಹೀಗಾಗಿ ಒಂದಷ್ಟು ಕ್ರಿಕೆಟ್ ಪ್ರೀತಿಯ ಬರಹಗಳೂ ಈ ಬ್ಲಾಗಿನಲ್ಲಿ ಇವೆ.

ಕರ್ನಾಟಕದ ಪ್ರವಾಸಿ ತಾಣಗಳನ್ನು ’ಎಕ್ಸ್‌ಪ್ಲೋರ್’ ಮಾಡಲು ಹೊರಟವರಿಗಂತೂ ರಾಜೇಶರ ಅನುಭವಗಳು ದೀಪಿಕೆಯಾಗಬಲ್ಲವು. ಅವರ ಚಾರಣ ಚಿತ್ರಗಳು ಮತ್ತು ಸಣ್ಣ ಸಾಲುಗಳ ವಿವರಗಳು ಪ್ರವಾಸದಲ್ಲಿ ಆಸಕ್ತಿಯಿಲ್ಲದವರ ಕಣ್ಣನ್ನೂ ಆಕರ್ಷಿಸಬಲ್ಲವು.

-‘ಅವಧಿ’ಗಾಗಿ ಸುಶ್ರುತ ದೊಡ್ಡೇರಿ

* * *

ರಾಜೇಶ್ ನಾಯ್ಕ:

ಮಂಗಳೂರಿನ ಜಾಹೀರಾತು ಸಂಸ್ಥೆಯಲ್ಲಿ ಕೆಲಸ ಮಾಡುವ ರಾಜೇಶ್ ನಾಯ್ಕ ಅವರು ಕಾಲಿನಲ್ಲಿ ಚಕ್ರ ಕಟ್ಟಿಕೊಂಡವರಂತೆ ತಿರುಗುತ್ತಾರೆ.

ಉಡುಪಿ, ನಿಟ್ಟೆ ಹಾಗೂ ಬೆಳಗಾವಿ ಹೀಗೆ ಹಲವೆಡೆ ಓದಿದ್ದೂ ಇದಕ್ಕೆ ಕಾರಣವಿರಬಹುದು.
ಕೋಶ ಎಷ್ಟು ಓದುತ್ತಾರೆ ಗೊತ್ತಿಲ್ಲ ಆದರೆ ದೇಶ ಸುತ್ತುತ್ತಾರೆ ಎಂಬುದಕ್ಕೆ ಅವರ ಬ್ಲಾಗೇ ಸಾಕ್ಷಿ.

* * *

ಆಯ್ದ ಪ್ರವಾಸಕಥನ:

ಹುಲಿ ನೋಡುವ ಹುಚ್ಚು
ಕಳೆದ ತಿಂಗಳು ೩೧ರಂದು ಭಗವತಿ ನಿಸರ್ಗ ಧಾಮದಲ್ಲಿ ರಾತ್ರಿ ಕಳೆದಿದ್ದೆವು. ಹಲವಾರು ಬಾರಿ ಕುದುರೆಮುಖಕ್ಕೆ ತೆರಳಿದರೂ, ಭಗವತಿಗೆ ಇದು ನನ್ನ ಪ್ರಥಮ ಭೇಟಿಯಾಗಿತ್ತು. ನಿಶ್ಯಬ್ದ, ಸುಂದರ ವಾತಾವರಣ ಮತ್ತು ಅಲ್ಲೇ ಹರಿಯುವ ಸದಾ ನೀರಿರುವ ತೊರೆ. ಹುಲಿ ಮತ್ತು ಕಾಡುಕೋಣ (ಇಂಡಿಯನ್ ಗೌರ್) ಇಲ್ಲಿ ಧಾಮದ ಸನಿಹದಲ್ಲೇ ಅಡ್ಡಾಡುತ್ತಿರುತ್ತವೆ ಎಂದು ಕೇಳಿದ್ದೆ. ಮಧ್ಯರಾತ್ರಿಯ ಬಳಿಕ ಒಂಟಿ ಕಾಡುಕೋಣವೊಂದು ಅಡಿಗೆ ಮನೆಯ ಬಳಿ ಬಿದ್ದಿರುವ ತರಕಾರಿ ಚೂರುಗಳನ್ನು ತಿನ್ನಲು ಬರುತ್ತದೆ. ಆದರೆ ಹುಲಿ? ಕಳೆದ ಏಳೆಂಟು ವರ್ಷಗಳಲ್ಲಿ ಹುಲಿಯನ್ನು ಕುದುರೆಮುಖದ ಕಾಡುಗಳಲ್ಲಿ ನೋಡಿದವರು ಆಲ್ಮೋಸ್ಟ್ ಶೂನ್ಯ. ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಂಡ ಬಳಿಕ ಮಲ್ಲೇಶ್ವರದಲ್ಲಿದ್ದ ಕೆಲವು ಸಾಕು ಜಿಂಕೆಗಳನ್ನು ಧಾಮದ ಸನಿಹ ಕಾಡಿನಲ್ಲಿ ಬಿಡಲಾಗಿದೆ. ನಮಗೆ ಕಾಣಸಿಕ್ಕಿದ್ದು ಈ ಜಿಂಕೆಗಳು ಮಾತ್ರ. ಈಗ ಕುದುರೆಮುಖದಲ್ಲಿನ ಹುಲಿಗಳಿಗೆ ಈ ಜಿಂಕೆಗಳು ಸುಲಭ ಆಹಾರ.

ಮೊನ್ನೆ ಕುರಿಂಜಾಲಿಗೆ ಚಾರಣ ಮಾಡಿ ಹಿಂತಿರುಗಿದ ಬಳಿಕ ನಾನು ಸುಸ್ತಾಗಿ ಒಂದು ಡೇರೆಯಲ್ಲಿ ನಿದ್ರೆ ಮಾಡತೊಡಗಿದರೆ ನಮ್ಮಲ್ಲಿ ಕೆಲವರು ಜಲಕ್ರೀಡೆಯಾಡಲು ತೆರಳಿದರು. ಯಾವಾಗಲು ಸ್ನಾನ ಮಾಡುವಲ್ಲಿ ಕೆಲವು ಅನಾಗರೀಕರು ಕೇಕೆ ಹಾಕಿ ಗಲಾಟೆ ಮಾಡುತ್ತಿದ್ದರಿಂದ, ನಮ್ಮವರು ಧಾಮದ ಮೇಟಿ ರುಕ್ಮಯ್ಯನ ಮಾರ್ಗದರ್ಶನದಲ್ಲಿ ಕಾಡಿನೊಳಗೆ ಸ್ವಲ್ಪ ನಡೆದು ಪ್ರಶಾಂತ ಮತ್ತು ವಿಶಾಲವೆನ್ನಬಹುದಾದ ತೊರೆಯ ಮತ್ತೊಂದು ಭಾಗಕ್ಕೆ ತೆರಳಿದರು. ಅಲ್ಲಿ ಮರವೊಂದರಲ್ಲಿ ಹುಲಿಯು ಪರಚಿದ ಗುರುತು ಮತ್ತು ತನ್ನ ’ಟೆರ್ರಿಟರಿ’ಯನ್ನು ಗುರುತಿಸುವ ಸಲುವಾಗಿ ಅದೇ ಮರದ ಮೇಲೆ ಸ್ವಲ್ಪ ಮುತ್ರ ಚಿಮ್ಮಿಸಿದ ಕುರುಹುಗಳು. ತೊರೆಯ ದಂಡೆಯಲ್ಲಿ ಹುಲಿ ನಡೆದಾಡಿದ ಸಾಕ್ಷಿಗೆ ಪೂರಕವಾಗಿ ’ಪಗ್ ಮಾರ್ಕ್’ಗಳು. ನಂತರ ವಿಷಯ ತಿಳಿದು ಬಹಳ ಬೇಜಾರಾಯಿತು. ’ಮನಿಕ್ಕೊಳ್ಳೊ ಬದ್ಲು, ಜಳ್ಕಾ ಮಾಡ್ದಿದ್ರೂ ಪರ್ವಾಯಿಲ್ಲ, ಜಳ್ಕಾ ಮಾಡೋವಲ್ಲಾದ್ರೂ ಹೋಗ್ಬಹುದಿತ್ತಲ್ಲೇ’ ಎಂದು ಪರಿತಪಿಸುತ್ತಿದ್ದೆ.

ಹುಲಿ ಎಂದರೆ ಒಂಥರಾ ರೋಮಾಂಚನ. ಕಾಡಿನಲ್ಲಿ ಹುಲಿ ನೋಡಬೇಕೆಂದು ಬಹಳ ಪ್ರಯತ್ನಪಟ್ಟೆವು. ಇದುವರೆಗೆ ಸಾಧ್ಯವಾಗಿಲ್ಲ. ನಾಗರಹೊಳೆ ಮತ್ತು ಬಂಡೀಪುರಗಳಲ್ಲಿ ಸುಲಭದಲ್ಲಿ ಹುಲಿ ನೋಡಲು ಸಿಗುತ್ತವೆ. ಮನುಷ್ಯರನ್ನು ಕಂಡು ಅವು ದೊಡ್ಡದಾಗಿ ಆಕಳಿಸುವ ಪರಿ ನೋಡಿದರೆ, ನಮ್ಮನ್ನು ನೋಡಿ ಯಾವ ಮಟ್ಟಕ್ಕೆ ಅವುಗಳಿಗೆ ಬೋರ್ ಆಗಿರಬಹುದು ಎಂದು ಯೋಚಿಸಿಯೇ ನಮ್ಮ ’ಈಗೋ’ ಹರ್ಟ್ ಆಗಿಬಿಡುತ್ತೆ. ಆದರೆ ಉಳಿದೆಡೆ ಪರಿಸ್ಥಿತಿ ಭಿನ್ನ. ಇಲ್ಲಿ ಹುಲಿ ಮತ್ತು ಮನುಷ್ಯ ಮುಖಾಮುಖಿಯಾದರೆ ಮನುಷ್ಯ ಓಡುತ್ತಾನೆ ಅಥವಾ ಇಬ್ಬರೂ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡುತ್ತಾ ನಿಧಾನವಾಗಿ ಹಿಂದೆ ಸರಿಯುತ್ತಾರೆ ಅಥವಾ ಹುಲಿ ದಾಳಿ ಮಾಡುತ್ತದೆ.

ತೀರ್ಥಹಳ್ಳಿ ತಾಲೂಕಿನಲ್ಲಿರುವ ಕವಲೇದುರ್ಗ ಹುಲಿಗಳು ಅಲೆದಾಡುವ ಸ್ಥಳ. ರಕ್ಷಿತಾರಣ್ಯವಲ್ಲದೇ ಮನುಷ್ಯ ಮತ್ತು ಹುಲಿ ಇಷ್ಟು ಸಮೀಪ ವಾಸವಿರುವುದು ಅಪರೂಪ. ಹಲವಾರು ಬಾರಿ ಕವಲೇದುರ್ಗಕ್ಕೆ ತೆರಳಿದರೂ ನಮಗೆ ಹುಲಿಯ ದರ್ಶನವಾಗಿಲ್ಲ. ಹೆಜ್ಜೆಯ ಗುರುತು, ಮರ ಪರಚಿದ ಗುರುತು ಇತ್ಯಾದಿ ಕಾಣಸಿಕ್ಕರೂ ಹುಲಿ ಕಾಣಸಿಕ್ಕಿಲ್ಲ. ಅದೊಂದು ಸಲ ಕವಲೇದುರ್ಗದ ಮೇಲಿಂದ ಹಿಂತಿರುಗುವಾಗ ಹುಲಿಯ ’ಪಗ್ ಮಾರ್ಕ್’. ನಾವು ಮೇಲೆ ತೆರಳುವಾಗ ಅದಿರಲಿಲ್ಲ! ಕೇವಲ 30 ನಿಮಿಷಗಳ ಅಂತರದಲ್ಲಿ ಅಲ್ಲೊಂದು ಹುಲಿ ಸುಳಿದಿತ್ತು. ಅಲ್ಲೆಲ್ಲೋ ಕಾಡಿನಿಂದ ನಮ್ಮನ್ನು ಅದೇ ಹುಲಿ ಗಮನಿಸುತ್ತಿರಬಹುದು ಎಂದು ಯೋಚಿಸಿಯೇ ರೋಮಾಂಚನಗೊಂಡೆವು.

ಊರಿನಿಂದ ಕಾಣುವ ಕೋಟೆಯೊಳಗಿರುವ ಬಂಡೆಯೊಂದರ ಮೇಲೆ ಹುಲಿ ಕುಳಿತಿರುವುದನ್ನು ಹಳ್ಳಿಗರು ನೋಡಿದ್ದಾರೆ. ಮೇಟಿಂಗ್ ಸೀಸನ್ ನಲ್ಲಿ ಕಾಣುವ ಸಾಧ್ಯತೆ ಇರಬಹುದು ಎಂದು ಕವಲೇದುರ್ಗಕ್ಕೆ ತೆರಳಿ ಊರಿನ ಅಂಚಿನಲ್ಲಿ ಡೇರೆ ಹಾಕಿ ರಾತ್ರಿಯಿಡೀ ಆ ಬಂಡೆಯನ್ನು ದಿಟ್ಟಿಸುತ್ತಾ ಕುಳಿತರೂ ನೋ ಹುಲಿ. ಮತ್ತೆರಡು ಬಾರಿ, ಮುಂಚೆ ಬೇರೆಯವರಿಗೆ ಹುಲಿ ಕಾಣಸಿಕ್ಕಿದ್ದ ಕೋಟೆಯ ೩ನೇ ಹಂತದೊಳಗೆ ಡೇರೆ ಹಾಕಿ ಕುಳಿತೆವು. ಸ್ಟಿಲ್ ನೋ ಹುಲಿ.

ಅಕ್ಟೊಬರ್ ೨೦೦೫ರಂದು ಇಬ್ಬರು ಆಗಮಿಸಿದ್ದರು ಕವಲೇದುರ್ಗ ನೋಡಲು. ಆಂಗ್ಲ ಭಾಷೆಯಲ್ಲಿ ಹಳ್ಳಿಗರೊಂದಿಗೆ ಮಾತನಾಡುತ್ತಾ ದಾರಿ ಕೇಳಿ ಮಧ್ಯಾಹ್ನ 2ರ ಹೊತ್ತಿಗೆ ಕೋಟೆಯತ್ತ ತೆರಳಿದರು. ಸುಮಾರು 3.30ರ ಹೊತ್ತಿಗೆ ಇಬ್ಬರೂ ಸತ್ತೇವೋ ಕೆಟ್ಟೇವೋ ಎಂಬಂತೆ ಬರೀಗೈಯಲ್ಲಿ ಏದುಸಿರು ಬಿಡುತ್ತಾ ಓಡಿ ಬಂದು ಮನೆಯೊಂದರ ಅಂಗಣದಲ್ಲಿ ಕೋಟೆಯೆಡೆ ಕೈ ತೋರಿಸುತ್ತಾ ಕೂತುಬಿಟ್ಟರು. ಇಬ್ಬರ ಮುಖದಲ್ಲೂ ಪ್ರೇತಕಳೆ. ಸ್ವಲ್ಪ ಸುಧಾರಿಸಿಕೊಂಡ ಬಳಿಕ ’ಟೈಗರ್ ಮ್ಯಾನ್, ಹುಲಿ, ಹುಲಿ’ ಎಂದು ಸೊಂಟದ ಮೇಲೆ ಕೈಯಿಟ್ಟು ’ರೆಸ್ಟ್ ಲೆಸ್’ ಆಗಿ ಅಚೀಚೆ ನಡೆದಾಡತೊಡಗಿದರು. ಅವರ ಪರಿಸ್ಥಿತಿ ಕಂಡು ಮನೆಯವರಿಗೆ ಮುಸಿ ಮುಸಿ ನಗು. ಕೇಳಿದ ನಮಗೂ ನಗು.

ಆದದ್ದೇನೆಂದರೆ ನಿಧಾನವಾಗಿ, ಕಾಲೆಳೆದುಕೊಂಡು ಕೋಟೆಯ 3ನೇ ಹಂತ ತಲುಪಿದ್ದಾರೆ ಇಬ್ಬರೂ. 3ನೇ ಹಂತಕ್ಕೆ ಕಾಲಿಟ್ಟ ಕೂಡಲೇ ಕಾಣಬರುವುದು ಕಾಶಿ ವಿಶ್ವನಾಥ ದೇವಾಲಯ. ಈ ದೇವಾಲಯದ ಚೆಲುವು ನೋಡುತ್ತಾ ಮೈಮರೆತ ಇಬ್ಬರೂ ಬಲಕ್ಕೆ 100-150 ಅಡಿ ದೂರದಲ್ಲಿರುವ ಜೋಡಿಬಾವಿಗಳ ಬಳಿ ತಮ್ಮನ್ನೇ ದುರುಗುಟ್ಟಿ ನೋಡುತ್ತ ಕುಳಿತ ಹುಲಿಯನ್ನು ನೋಡೇ ಇಲ್ಲ! ಒಂದೈದು ಸೆಕೆಂಡುಗಳ ಬಳಿ ಆ ಹುಲಿ ಕೊಟ್ಟ ಸಣ್ಣಗೆ ಘರ್ಜನೆಯನ್ನು ಕೇಳಿ, ತಮ್ಮ ಬಲಕ್ಕೆ ಕತ್ತು ತಿರುಗಿಸಿದ ಇಬ್ಬರೂ ಯಾವ ಪರಿ ಕಂಗಾಲಾಗಿರಬೇಡ ವ್ಯಾಘ್ರನ ಅಪ್ರತಿಮ ರೂಪವನ್ನು ಕಂಡು! ’ಶಾಕ್ ಆಫ್ ದ ಲೈಫ್’ ಹೊಡೆಸಿಕೊಂಡಿರಬೇಕು ಬಡಪಾಯಿಗಳಿಬ್ಬರು. ’ಮೈ ಗಾಡ್’ ಅಂದವರೇ ಬ್ಯಾಕ್ ಪ್ಯಾಕು, ನೀರಿನ ಬಾಟ್ಲು, ಕ್ಯಾಪು, ಇಯರ್ ಫೋನು, ಮೋಬೈಲು, ಸನ್ ಗ್ಲಾಸು, ಕ್ಯಾಮರಾ ಇವೆಲ್ಲವನ್ನೂ ಅಲ್ಲಲ್ಲಿ ಬೀಳಿಸುತ್ತಾ ಕೆಳಗೆ ಓಡೋಡಿ ಬಂದಿದ್ದಾರೆ. ಇವರು ಅದೆಷ್ಟು ’ಲಕ್ಕಿ ಟ್ರೆಕ್ಕರ್ಸ್’ ಆಗಿರಬೇಡ. ಹುಲಿ ದರ್ಶನ ಕೊಡುವುದು ಸಾಮಾನ್ಯ ವಿಷಯವಲ್ಲ. ನಮಗೆಲ್ಲಿ ಇಂತಹ ಅದೃಷ್ಟ?

ಇದಾದ ೨ ತಿಂಗಳುಗಳ ಬಳಿಕ ಸಾಬಿಗಳಿಬ್ಬರು ಏನಾದರೂ ಪುರಾತನ ವಸ್ತುಗಳು ಸಿಗಬಹುದೋ ಎಂದು ಕೋಟೆ ಮೇಲೆ ಹೊರಟವರು ಅದೆಲ್ಲೋ ಹುಲಿ ಕಂಡು ದಡಬಡಿಸಿ ಕೆಳಗೆ ಓಡಿ ಬಂದಿದ್ದಾರೆ. ಇಂತಹ ಕಳ್ಳ ಸಾಬಿಗಳಿಗೆಲ್ಲ ದರ್ಶನ ಕೊಡುವ ಹುಲಿರಾಯ ನಮಗೆ ಒಂದೇ ಒಂದು ಸಲ, ಕೇವಲ ಒಂದೇ ಕ್ಷಣಕ್ಕಾದರೂ ಕಾಣಬಾರದೇ?

2005 ಜನವರಿಯಲ್ಲಿ ಕುದುರೆಮುಖ ಶೃಂಗದಲ್ಲಿ ಹಾಲ್ಟ್ ಮಾಡಿದ್ದೆವು. ನಾವು ರಾತ್ರಿ ಕ್ಯಾಂಪ್ ಮಾಡುವಲ್ಲಿ ತಲುಪಿದ ಹತ್ತೇ ನಿಮಿಷದಲ್ಲಿ ಮುದಿ ಕಾಡುಕೋಣವೊಂದು ಪ್ರತ್ಯಕ್ಷ. ಹೆದರಿದ ನಾವು ಪ್ಲೇಟು, ತಟ್ಟೆ ಇತ್ಯಾದಿಗಳಿಂದ ಶಬ್ದವೆಬ್ಬಿಸಿ ಅದನ್ನು ಓಡಿಸುವ ಪ್ರಯತ್ನ ಮಾಡಿದರೂ ಸ್ವಲ್ಪ ಸಮಯದ ಬಳಿಕ ಅದು ಮರಳಿ ನಮ್ಮಲ್ಲಿ ಬರುತ್ತಿತ್ತು. ನಂತರ ಅದು ನೇರವಾಗಿ ನಾವು ಕೂತಲ್ಲಿ ಬಂದಾಗ ಎಲ್ಲರೂ ಚೆಲ್ಲಾಪಿಲ್ಲಿ. ನಮ್ಮ ಬ್ಯಾಗ್ ಗಳನ್ನು ಮುಸಿ ನೋಡುತ್ತ ಅದು ಅತ್ತ ಸರಿದು ನಂತರ ನಮ್ಮ ಹಿಂದೆ ಇದ್ದ ಪೊದೆಗಳ ಸಂದಿಯಿಂದ ಮುಖವಷ್ಟೇ ಹೊರಗೆ ಕಾಣುವಂತೆ ನಿಂತುಬಿಟ್ಟಿತು. ಎಲ್ಲರೂ ಅದರ ಮುಂದೆ ನಿಂತು ಪೋಸು ಕೊಟ್ಟು ಫೋಟೊ ಹೊಡೆಸಿಕೊಂಡೆವು. ಅದ್ಯಾಕೋ ವಿಪರೀತ ಫ್ರೆಂಡ್ಲಿ ಇದ್ದಿದ್ದರಿಂದ ನಂತರ ನಾವದನ್ನು ಓಡಿಸುವ ಪ್ರಯತ್ನವನ್ನು ಕೈಬಿಟ್ಟೆವು. ಸುಮಾರು ಒಂದು ತಾಸು ಅಲ್ಲೇ ನಿಂತಿದ್ದು ಮತ್ತೆ ಈಚೆಗೆ ಬಂತು. ಸಣ್ಣ ಮಕ್ಕಳಿಗೆ ಬುದ್ಧಿ ಹೇಳುವಂತೆ ನಮ್ಮ ಲೀಡರ್ ಶ್ರೀ ಅಡಿಗರು ತಮ್ಮದೇ ಆದ ವಿಶಿಷ್ಟ ನೃತ್ಯ ಶೈಲಿಯಲ್ಲಿ ಅದಕ್ಕೆ ಮರಳಿ ಕಾಡಿನೊಳಗೆ ಹೋಗುವಂತೆ ತಿಳಿಹೇಳಿದರು. ನಂತರ ನಾವದನ್ನು ಅದರಷ್ಟಕ್ಕೆ ಬಿಟ್ಟುಬಿಟ್ಟೆವು.

ಅಂದು ಕಳೆದ ರಾತ್ರಿ ಅವಿಸ್ಮರಣೀಯವಾಗಿತ್ತು. ಶೃಂಗದ ಮೇಲಿರುವ ಮಳೆಕಾಡಿನ ನಡುವೆ ತೊರೆಯೊಂದು ಹರಿಯುವ ಸ್ಥಳದಲ್ಲಿ ನಾವು ಡೇರೆ ಹಾಕಿದ್ದೆವು. ರಾತ್ರಿ 12ರ ಸುಮಾರಿಗೆ ಡೇರೆ ಬಳಿ ಏನೋ ಸುಳಿದಾಡಿದಂತೆ. ಎಲ್ಲರೂ ಹೆದರಿ ದೊಡ್ಡ ದೊಡ್ಡ ಕಣ್ಣು ಮಾಡಿ ಕುಳಿತಿದ್ದರು. ಹತ್ತು ನಿಮಿಷ ಹಾಗೆ ಕುಳಿತ ಬಳಿಕ, ಉಮಾನಾಥ್ ಧೈರ್ಯ ಮಾಡಿ ಡೇರೆಯಿಂದ ತಲೆ ಹೊರಗೆ ಹಾಕಿ ಟಾರ್ಚ್ ಬಿಟ್ಟರೆ ಮತ್ತದೇ ಕಾಡುಕೋಣ! ನಂತರ ಶುರುವಾಯ್ತು ಒಂದೊಂದೇ ಸದ್ದು. ಅಲ್ಲೊಂದು ಕೂಗು, ಇಲ್ಲೊಂದು ಚೀರಾಟ, ಮತ್ತೆ ಆ ಕಡೆ ಎಲ್ಲೋ ಘರ್ಜನೆ, ಅದರ ಬಳಿಕ ಊಳಿಡುವ ಸದ್ದು. ರಾತ್ರಿ 12.30ರಿಂದ ಮುಂಜಾನೆ 4ರ ವರೆಗೆ ವಿವಿಧ ಸದ್ದುಗಳು. ಅದ್ಯಾವ ಪ್ರಾಣಿ, ಇದ್ಯಾವ ನಿಶಾಚರಿ ಪಕ್ಷಿ ಎಂದು ನಿದ್ರೆ ಮರೆತು ಮಾತನಾಡುತ್ತ ಕಾಲ ಕಳೆದೆವು. ಮುಂಜಾನೆ 5ರ ನಂತರ ಶುರುವಾಯಿತು ಹಕ್ಕಿಗಳ ಕಲರವ. ಶಾಮನ ಇಂಪಾದ ಸೀಟಿ ಹೊಡೆತದಿಂದ ಆರಂಭವಾದ ಹಕ್ಕಿ ಪಕ್ಕಿಗಳ ಇಂಚರದ ನಡುವೆ ನಮ್ಮ ಮುಂಜಾನೆಯ ಕೆಲಸಗಳು ನಡೆದಿದ್ದವು.

ಡೆಸೆಂಬರ್ 2006ರಂದು ಮತ್ತೆ ಹೊರಟೆವು ಕುದುರೆಮುಖಕ್ಕೆ. ಕಳೆದೆರಡು ವರ್ಷಗಳಿಂದ ಕುದುರೆಮುಖದಲ್ಲಿ ಚಾರಣಕ್ಕೆ ಅವಕಾಶವಿರಲಿಲ್ಲವಾದ್ದರಿಂದ ಮತ್ತು ತೊಳಲಿಯಲ್ಲಿ ವಾಸವಿದ್ದ ಜನರನ್ನು ಖಾಲಿ ಮಾಡಿಸಿದ್ದರಿಂದ, ಜನ ಮತ್ತು ಸಾಕುಪ್ರಾಣಿಗಳ ಸಂಚಾರವಿಲ್ಲದೆ, ಕೆಲವು ಕಾಡುಪ್ರಾಣಿಗಳು ಕಾಣಬಹುದು ಮತ್ತು ಹುಲಿಯ ಎಟ್ಲೀಸ್ಟ್ ಪಗ್ಮಾರ್ಕ್ ಆದರೂ ನೋಡಲು ಸಿಗಬಹುದು ಎಂದು ಆಸಕ್ತಿಯಿಂದಲೇ ಹೊರಟೆವು. ಆದರೆ ಅರಣ್ಯ ಇಲಾಖೆ ನಮಗೆ ಶೃಂಗದಲ್ಲಿ ರಾತ್ರಿ ಕಳೆಯಲು ಅವಕಾಶವನ್ನು ನೀಡಲೇ ಇಲ್ಲ.

ನಮ್ಮಲ್ಲೊಬ್ಬರಿದ್ದಾರೆ ರಾಘವೇಂದ್ರ ಎಂದು. 50ರ ಆಸುಪಾಸಿನ ವಯಸ್ಸಿನ ಬ್ರಹ್ಮಚಾರಿ. ಒಬ್ಬರೇ ಎಲ್ಲೆಲ್ಲೋ ಚಾರಣಗೈಯುವುದು ಕಳೆದ 25 ವರ್ಷಗಳಿಂದಲೂ ಇವರ ಹವ್ಯಾಸ. 20 ವರ್ಷಗಳ ಹಿಂದೆ ಕುದುರೆಮುಖದ ಮಳೆಕಾಡೊಂದರಲ್ಲಿ ಕೇವಲ 30ಅಡಿ ದೂರದಲ್ಲಿ ಹುಲಿ ಕಂಡ ಅದೃಷ್ಟ ಇವರದ್ದು. ಅದನ್ನು ನಮಗೆ ಹೇಳಿ ಹೇಳಿ ಹೊಟ್ಟೆ ಉರಿಸುವುದು ಅವರಿಗೆ ಟೈಮ್ ಪಾಸ್. ಐದಾರು ವರ್ಷಗಳ ಹಿಂದೆ ಕವಲೇದುರ್ಗಕ್ಕೆ ತೆರಳಿದಾಗ ಪ್ರಥಮ ದ್ವಾರದಲ್ಲೇ ಹುಲಿ ಅರ್ಧ ತಿಂದು ಹೋಗಿದ್ದ ದನದ ಶವವೊಂದು ಇವರನ್ನು ಸ್ವಾಗತಿಸಿತ್ತು.

ಅದೊಂದು ದಿನ ’ಚಿರತೆ(ಚಿಟ್ಟೆ ಹುಲಿ)ಯೊಂದು ತನ್ನೆರಡು ಮರಿಗಳೊಂದಿಗೆ ಇಲ್ಲೇ ಅಲೆದಾಡುತ್ತಿದೆ’ ಎಂದು ಆಗುಂಬೆಯಿಂದ ಫೋನ್ ಬಂದಾಗ ಆ ಶನಿವಾರ ರಾತ್ರಿ 10ಕ್ಕೆ ರಾಜೇಶ್ ನಾಯಕ್ (ನಾನಲ್ಲ) ರವರ ಕ್ವಾಲಿಸ್ ವಾಹನದಲ್ಲಿ ಹೊರಟೆವು. ರಾತ್ರಿ ಘಟ್ಟದಲ್ಲಿ ಸಂಚರಿಸುತ್ತಿದ್ದ ವಾಹನಗಳ ಚಾಲಕರು ರಸ್ತೆ ಬದಿಯಲ್ಲೇ ಈ ಚಿರತೆ ಮತ್ತದರ ಮರಿಗಳನ್ನು ನೋಡಿದವರಿದ್ದರು. ’ಲೆಟ್ಸ್ ಗೆಟ್ ಲಕ್ಕಿ’ ಎಂದು ನಾವೂ ರಾತ್ರಿ ಹೊರಟೆವು. ಘಟ್ಟದ ಕೆಳಗಿರುವ ಸೋಮೇಶ್ವರದಿಂದ ಮೇಲೆ ಆಗುಂಬೆ ತನಕ ನಂತರ ಮರಳಿ ಕೆಳಗೆ ಸೋಮೇಶ್ವರಕ್ಕೆ ಹೀಗೆ 7 ಬಾರಿ ಘಟ್ಟ ಹತ್ತಿ ಕೆಳಗಿಳಿದೆವು. ರಾತ್ರಿ 11.30ರಿಂದ ಬೆಳಗ್ಗಿನ ಜಾವ 3.30ರವರೆಗೆ ಇದೇ ಕೆಲಸ. ಸೋಮೇಶ್ವರ ಟು ಆಗುಂಬೆ ಮತ್ತೆ ಆಗುಂಬೆ ಟು ಸೋಮೇಶ್ವರ. ಆದರೂ ಆ ಚಿರತೆ ಕಾಣಸಿಗಲಿಲ್ಲ. ನಿರಾಸೆಯಿಂದ ಉಡುಪಿಗೆ ಹಿಂತಿರುಗಿದೆವು. ನಾವು ಹಿಂತಿರುಗಿದ ಕೇವಲ ಅರ್ಧ ಗಂಟೆಯ ಬಳಿಕ ಅಂದರೆ 4 ಗಂಟೆಗೆ ಘಟ್ಟದ 12ನೇ ತಿರುವಿನ ಬಳಿ ಆ ಚಿರತೆ ತನ್ನೆರಡು ಮರಿಗಳೊಂದಿಗೆ 20 ನಿಮಿಷ ಕುಳಿದಿತ್ತು ಎಂದು ಮರುದಿನ ತಿಳಿದಾಗ ಆದ ನಿರಾಸೆ…

ಕಳೆದ ವರ್ಷ ಬೆಂಗಳೂರಿನಿಂದ ಗೆಳೆಯ ರಾಘವೇಂದ್ರ ಮತ್ತು ಗೌರಿ ಕೂಡ್ಲುಗೆ ಬಾ ಎಂದು ಕರ್ಕೊಂಡು ಹೋದಾಗ, ಎಷ್ಟೋ ಸಲ ಕೂಡ್ಲುಗೆ ಹೋಗಿದ್ದೇನೆ ಎಂದು ಕ್ಯಾಮರಾ ಒಯ್ಯಲಿಲ್ಲ. ನಂತರ ಸಮಯವಿದ್ದುದರಿಂದ ಆಗುಂಬೆಗೆ ತೆರಳಿದೆವು. ನಾಲ್ಕನೇ ತಿರುವಿನಲ್ಲಿ ಅಪರೂಪದ ’ಲಯನ್ ಟೇಯ್ಲ್ಡ್ ಮಕ್ಯಾಕ್’ ಜಾತಿಯ ಮಂಗ ರಸ್ತೆ ಬದಿಯಲ್ಲೇ ಕೂತಿತ್ತು, ನಾನು ಆ ’ಲಯನ್ ಟೇಯ್ಲ್ಡ್ ಮಕ್ಯಾಕ್’ ಮಂಗವನ್ನು ನೋಡಿ ಸಂತೋಷದಿಂದ ಕೂಗಾಡಿದ ಪರಿ ನೋಡಿ ಗಾಬರಿಗೊಂಡ ಗೌರಿ, ಧಡಕ್ಕನೆ ಬೊಲೇರೊ ನಿಲ್ಲಿಸಿಬಿಟ್ಟಳು. ನಿಧಾನವಾಗಿ ನಮ್ಮಲ್ಲಿ ಬಂದ ಆ ಮಂಗ, ಒಳಗೆ ಮೂತಿ ತೂರಿ ಏನಾದರೂ ತಿನ್ನಲು ಸಿಗುತ್ತೋ ಎಂದು ಮುದ್ದಾಗಿ ಕೈ ಚಾಚುತ್ತಿತ್ತು. ದಷ್ಟಪುಷ್ಟವಾಗಿ ಬೆಳೆದ, ಆರೋಗ್ಯಕರ ಯುವ ಗಂಡು ಮಂಗ. ಅದು ಎಷ್ಟು ಸುಂದರವಾಗಿತ್ತೆಂದರೆ ಸುಮಾರು ೧೦ ನಿಮಿಷ ನೋಡುತ್ತ ನಿಂತೆವು. ಎಲ್ಲಿ ಸಿಗುತ್ತೆ ’ಲಯನ್ ಟೇಯ್ಲ್ಡ್ ಮಕ್ಯಾಕ್’ ನೋಡಲು? ನಮ್ಮ ಅದೃಷ್ಟ. ಅದರಲ್ಲೂ ವರ್ಷಕ್ಕೆ ಒಂದೆರಡು ಚಾರಣ ಮಾಡುವ ಗೌರಿ ಮತ್ತು ರಾಘವೇಂದ್ರ ಇಬ್ಬರದ್ದಂತೂ ನಸೀಬು. ಆದರೇನು? ಆ ದಿನ ನಾನು ಕ್ಯಾಮಾರಾನೇ ಒಯ್ದಿರಲಿಲ್ಲ. ನಂತರ ಇದುವರೆಗೂ ನಮ್ಮಲ್ಲಿ ಯಾರಿಗೂ ಆ ಮಂಗ ಕಾಣಸಿಕ್ಕಿದ್ದಿಲ್ಲ.

ಇತ್ತೀಚೆಗೊಂದು ’ಟೈಗರ್ ಅಟ್ಯಾಕ್’ ಎಂಬ ಸಣ್ಣ ವಿಡಿಯೋ ಅಂತರ್ಜಾಲದಲ್ಲಿ ಎಲ್ಲರಿಗೂ ಫಾರ್ವರ್ಡ್ ಆಗ್ತಾ ಇದೆ. ಅದ್ಭುತವಾದ ವಿಡಿಯೋ. ಹುಲಿ ಅದ್ಯಾವ ಮಟ್ಟಕ್ಕೆ ಹೋಗಬಲ್ಲದು ವ್ಯಗ್ರವಾಗಿದ್ದರೆ ಎಂದು ತಿಳಿಯುವುದು ಈ ವಿಡಿಯೋ ನೋಡಿದರೆ. ಇದನ್ನು ನೋಡಿಯೇ ಹುಲಿ ಅಷ್ಟು ಎತ್ತರಕ್ಕೆ ಹಾರಬಲ್ಲುದು ಎಂದು ತಿಳಿದುಕೊಂಡೆ. ’ಯು ಟ್ಯೂಬ್’ ನಲ್ಲಿ ’tiger attack’ ಎಂದು ಹುಡುಕಾಡಿದರೆ ಈ ವಿಡಿಯೋ ಸಿಗುತ್ತೆ.

ಆಶಾವಾದಿಗಳಾಗಿ ಇದ್ದೇವೆ, ಯಾವಾಗಾದರೂ ಒಂದು ಚಿರತೆ ಅಥವಾ ಹುಲಿ ಎಲ್ಲಾದರೂ ಕಾಣಸಿಗಬಹುದು ಎಂದು…ಅಫ್ ಕೋರ್ಸ್ ಅವುಗಳನ್ನು ಅಷ್ಟರವರೆಗೆ ಬದುಕಲು ಬಿಟ್ಟರೆ ಮಾತ್ರ!

 

 

‍ಲೇಖಕರು G

May 10, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಧಿ….

3 ಪ್ರತಿಕ್ರಿಯೆಗಳು

  1. ಬಸವ ರಾಜು ಎಲ್.

    ಅದ್ಭುತ ಕಣ್ರೀ!
    ೨೦೦೬ ರಿಂದ ಹಿಡಿದು ಇಂದಿನವರೆಗೆ ರಾಜೇಶ್ ನಾಯ್ಕರು ಸುತ್ತಿದ ತಾಣಗಳಿಗೆಲ್ಲಾ “ಖುದ್ದು ನಾವೇ ಭೇಟಿ ನೀಡಿದಂಥ ಖಡಕ್ ಅನುಭವ ನೀಡುತ್ತಿದೆ ಈ ಬ್ಲಾಗ್” ಎಂದರೆ ಸುಳ್ಳಾಗದು.

    ಧನ್ಯವಾದಗಳು ನಾಯಕರಿಗೆ ಮತ್ತು ಪರಿಚಯಿಸಿದ ಅವಧಿಗೆ…

    ಪ್ರತಿಕ್ರಿಯೆ
    • ಬಸವ ರಾಜು ಎಲ್.

      ಜೊತೆಗೆ ಆಯಾ ಪ್ರದೇಶದ ವಿಶೇಷತೆಯ ಬಗ್ಗೆಯಷ್ಟೇ ಬರೆದು, ಅಲ್ಲಿಗೆ ಭೇಟಿ ನೀಡುವ ಕುರಿತು ಯಾವುದೇ ನೇರ ಮಾಹಿತಿ ನೀಡದೆ ಓದುಗರಲ್ಲಿ ಆಸಕ್ತಿ ಕೆರಳಿಸುವ ಪರಿ ಭಿನ್ನವಾಗಿದೆ.
      ಈ ಅಭ್ಯಾಸದ ಹಿಂದಿರುವ ಅವರ ಪರಿಸರದ ಕಾಳಜಿಯಂತೂ ಮೂಕವಿಸ್ಮಿತರನ್ನಾಗಿಸುತ್ತಿದೆ – ಸೂಪರ್ ಸಾರ್!

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: