ಈ 'ವಾಲಿವಧೆ'ಯಲ್ಲಿ ಮನುಷ್ಯತ್ವವಿತ್ತು..

ಕುವೆಂಪುರವರ ವಾಲಿವಧೆ- ಮಹತ್ವದ ರಂಗ ಪ್ರಯೋಗ

 
 
 
 
 
ಜಿ ಎನ್ ನಾಗರಾಜ್ 
 
 
 
 
 
 
ಕುವೆಂಪುರವರ ವೈಚಾರಿಕತೆ, ಭಾಷಾ ಪ್ರಯೋಗ, ಜಾನಪದ ಪ್ರಜ್ಞೆಗಳ ವೈಶಿಷ್ಟ್ಯವನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವ ಯಶಸ್ವೀ ಪ್ರಯೋಗ. ಉಡುಪಿ ಗಣೇಶ್ ರವರು ನಿರ್ದೇಶಿಸಿದ, ಶೇಷಗಿರಿಯ ಗಜಾನನ ಯುವಕ ಮಂಡಲ ತಂಡ ಪ್ರದರ್ಶಿಸಿದ ನಾಟಕ.
ಗಜಾನನ ಯುವಕ ಮಂಡಲಿಯ ಯುವಕರು ರೈತರು, ಸಣ್ಣ ಹಳ್ಳಿ ಹೊಟೆಲ್ ನವರು , ಆಟೋ ಡ್ರೈವರ್ ಗಳು. ಇವರು ಪರಿಣಿತ ನಿರ್ದೇಶಕನ ತರಬೇತಿಯಲ್ಲಿ ಎಂತಹಾ ಕಲಾವಿದರಾಗಬಲ್ಲರು ಎಂದು ತೋರಿಸಿಕೊಟ್ಟ ಪ್ರಯೋಗ.
‘ವಾಲಿ ವಧೆ’ ರಾಮಾಯಣದಲ್ಲಿ ರಾಮನ ಮರ್ಯಾದಾ ಪುರುಷೋತ್ತಮ ವ್ಯಕ್ತಿತ್ವಕ್ಕೆ ಕಳಂಕ ತಂದ ಬಹು ಚರ್ಚಿತ ಪ್ರಸಂಗ. ಕನ್ನಡದ ಬಹಳ ಪ್ರಸಿದ್ಧ ಸಾಹಿತಿಗಳಾದ ಡಿವಿಜಿ , ಮಾಸ್ತಿ, ವೀಸೀ ಮೊದಲಾದವರು ರಾಮನ ವರ್ತನೆಯನ್ನು ಸಮರ್ಥಿಸಿಕೊಳ್ಳಲು ಹೆಣಗಾಡಿ ಸೋತ ಪ್ರಸಂಗ.
ವಾಲ್ಮೀಕಿಯವರದೆಂದು ಪ್ರಚಲಿತವಾಗಿರುವ ರಾಮಾಯಣದಲ್ಲಿ ರಾಮ ಹಿಂದಿನಿಂದ ಬಾಣ ಪ್ರಯೋಗ ಮಾಡಿದ ವಂಚಕನಾಗಿ ಮತ್ತು ಅದನ್ನು ಸಮರ್ಥಿಸಿಕೊಳ್ಳಲು ವಾಲಿಯಂತಹ ವೀರನನ್ನು ” ಕಾಡು ಮೃಗವಾದ ನಿನ್ನನ್ನು ಕಾಡು ಮೃಗದಂತೆ ಬೇಟೆಯಾಡಿ ಕೊಂದಿದ್ದೇನೆ ” ಎಂಬ ಅಮಾನವೀಯ ಮಾತನ್ನಾಡುತ್ತಾನೆ.
ಕುವೆಂಪುರವರು ರಾಮನ ಮೇಲಿನ ಈ ಅಪವಾದಗಳನ್ನು ಒಂದೇ ಏಟಿಗೆ ಕಿತ್ತು ಹಾಕುವಂತೆ ವಾಲಿಯ ಅಪಾದನೆಗಳಿಗೆ ಉತ್ತರವಾಗಿ ರಾಮ ತನ್ನ ತಪ್ಪನ್ನೊಪ್ಪಿ ವಾಲಿಗೆ ಮಣಿದು ಅವನ ಕ್ಷಮೆ ಯಾಚಿಸಿದಂತೆ ಬದಲಾವಣೆ ತಂದಿದ್ದಾರೆ.

“ಕಣ್ಬನಿಯ ಗದ್ಗದದ ರಾಮಚಂದ್ರಂ, ಧನುರ್ಬಾಣಮಂ ತೂಣೀರಮಂ ಕೆಲಕ್ಕೆಸೆದು ವಾಲಿಯ ಮೈಯ್ಗೆ ಸೋಂಕಿ ಕುಸಿದನ್ ನೆಲಕೆ
ಮನ್ನಿಸೆನ್ನ ಮಹಾವೀರ ! ತಪ್ಪಿದನಯ್ಯೋ …ಮಾಡಿದ ತಪ್ಪನೊಪ್ಪಿಕೊಳ್ವುದೆ ಲೌಕಿಕದ ಬೀರಕ್ಕೆ ಸಲ್ಲಕ್ಷಣಂ “

ರಾಮಾಯಣದ ಕಾಡು ಮೃಗದ ಬೇಟೆ ಎಂಬ ರಕ್ಕಸ ಮನೋಭಾವಕ್ಕೂ ಈ ಉದಾತ್ತ ಮಾನವನ ಚಿತ್ರಣಕ್ಕೂ ಎಂತಹ ಅಜಗಜಾಂತರ.
ಆಷ್ಟಕ್ಕೇ ತೃಪ್ತಿಗೊಳ್ಳದ ಕುವೆಂಪುರವರ ಪ್ರತಿಭೆ, ಮಾನವೀಯತೆ ಮತ್ತು ಜಾನಪದ ಪ್ರಜ್ಞೆ ವಾಲಿ ಸುಗ್ರೀವರ ಸಂಬಂಧದ ಬಗೆಗಿನ ತಿರುವುಗಳ ಈ ಪ್ರಸಂಗವನ್ನು ಅಣ್ಣ ತಮ್ಮಂದಿರ ಪ್ರೇಮದ ಅಮೋಘ ಕಥನವನ್ನಾಗಿಸಿದೆ.
ರಾಮ, ಲಕ್ಷ್ಮಣರ ಸೋದರ ಪ್ರೇಮದ ಸಂಬಂಧದ ಉದಾಹರಣೆಯನ್ನು ಮೀರಿಸಿದೆ. ಏಕೆಂದರೆ ರಾಮ, ಲಕ್ಷ್ಮಣರ ಸಂಬಂಧದಲ್ಲಿ ವಿಧೇಯತೆ, ಸೇವೆ ಸೋದರ ಸಂಬಂಧವನ್ನು ಕೆಡಿಸಿದೆ. ರಾಜ ಮತ್ತು ಅವನ ನಂಬಿಕಸ್ತ ಆಪ್ತ ಸೇವಕನ ಸಂಬಂಧವಾಗಿಸಿದೆ . ಇಂತಹುದನ್ನೇ ಆದರ್ಶ ಸೋದರ ಪ್ರೇಮ ಎಂದು ಬಿಂಬಿಸಲಾಗಿದೆ.
ವಾಲಿ, ಸುಗ್ರೀವರ ಸಂಬಂಧ ಪ್ರೀತಿಯ ಸೋದರರು. ಹಿರಿಯ, ಕಿರಿಯ ಎಂಬ ವ್ಯತ್ಯಾಸವಿದ್ದರೂ ಸೇವಕ ಸಂಬಂಧವಾಗಿಲ್ಲ. ಒಬ್ಬರನ್ನೊಬ್ಬರು ಬಿಟ್ಟಿರದ ಈ ಸೋದರರ ನಡುವೆ ಒಂದು ಪ್ರಸಂಗದಲ್ಲಿ ಉದ್ಭವಿಸಿದ ಅಪನಂಬಿಕೆ, ಸುಗ್ರೀವನ ವಿವರಣೆಯನ್ನು ತಾಳ್ಮೆಯಿಂದ ವಿವೇಚಿಸದೆ ಸಿಟ್ಟಿನ ಕೈಯಲ್ಲಿ ಬುದ್ಧಿಯನ್ನು ಕೊಟ್ಟ ವಾಲಿ ತಮ್ಮನನ್ನು ಅವರ ನಾಡಿನಿಂದ ಹೊರಹಾಕುವುದಕ್ಕೆ ಕಾರಣವಾಗುತ್ತದೆ. ಹೀಗೆ ಒಂದು ಪ್ರಸಂಗ ಅಪೂರ್ವ ಸೋದರ ಪ್ರೇಮದ ನಡುವೆ ಬಿರುಕು ತಂದ ಬಗೆಯನ್ನು ಜನರ ಮುಂದಿಡುತ್ತದೆ.
ಈ ಅಪನಂಬಿಕೆಯ ಕಾರಣಕ್ಕಾಗಿ ಕುದಿಯುತ್ತಿದ್ದ ದ್ವೇಷವನ್ನು ತಣ್ಣಗಾಗಿಸಲು, ವಾಲಿಯ ಮನಸ್ಸನ್ನು ಪರಿವರ್ತಿಸಲು ಹೆಂಡತಿ ತಾರೆ ಮಾಡಿದ ಯಶಸ್ವಿ ಪ್ರಯತ್ನದ ಮೂಲಕ ಕುವೆಂಪುರವರ ಜಾನಪದ ಪ್ರಜ್ಞೆ ಇಡೀ ಪ್ರಸಂಗಕ್ಕೆ ಒಂದು ಮಾನವೀಯ ಮಿಡಿತವನ್ನು ತಂದುಕೊಡುತ್ತದೆ. ಕುವೆಂಪುರವರ ತಾರೆ ಹೇಳುತ್ತಾಳೆ

“ನೆನೆ ನಿಮ್ಮೀರ್ವರ ಎಳೆತನದ ಲೀಲೆಯಂ.. ನಿಮ್ಮೊಳಿರ್ದಕ್ಕರೆಯ ಸಗ್ಗಮಂ ನೆನೆ “

ಈ ಮಾತಿನಿಂದ

ಮುಗ್ಧನಾದನೆ ವಚನ ಮಂತ್ರದಿಂದೆಂಬಂತೆ , ವಾಲಿಗೊದಗಿತು ಶಾಂನ್ತಿ

ಇಲ್ಲಿ ಕುವೆಂಪುರವರ ಮಾತನ್ನು ಗಮನಿಸಿ – ತಾರೆಯ ಮಾತುಗಳು ವಚನ ಮಂತ್ರವಂತೆ. ವೇದ ಮೊದಲಾದ ಪವಿತ್ರವೆಂಬ ಗ್ರಂಥಗಳಲ್ಲಿರುವ ಸಂಸ್ಕೃತದ ಶ್ಲೋಕಗಳು ಮಾತ್ರ ಮಂತ್ರವಲ್ಲ, ತಾರೆಯ ಬುದ್ಧಿ ಮಾತು ಕೂಡ ಮಂತ್ರಗಳೇ ಎನ್ನುತ್ತಾರೆ.
ನಂತರ ಕುವೆಂಪುರವರ ಜಾನಪದೀಯ ಮಾನವೀಯತೆಯ ಸುಗ್ಗಿ ಆರಂಭವಾಗುತ್ತದೆ.

“ಅಣ್ಣ ಬಾ ಬಾರೆಂದು ಜೊಲ್ಲ ತೊದಳಿಂ ಚೀರ್ವ ಸಣ್ಣ ಸುಗ್ರೀವನಂ.. ತನ್ನೊಲಿದ ಮುದ್ದು ಸುಗ್ರೀವನಂ ಬೆನ್ನಿನೊಳ್ ಪೊತ್ತು, ಉಪ್ಪು ಬೇಕೇ ಉಪ್ಪು ಎನುತೆ ತಾಂ ಪರಿದಾಡುತನಿಬರಂ ನಗಿಸಿದಾ ಚಿಕ್ಜಂದಿನೊಂದು ಚಿತ್ರಂ ಸ್ಮೃತಿಗೆ ಮೈದೋರೆ ರೋಷಚ್ಯುತಂ ವಾಲಿ ಶಾಂತನಾದನ್. ಮೈತ್ರಿ ಸಂಚರಿಸಿದುದು ಮನದಿ, ವೈರಮಂ ಕೆಲಕ್ಕೊತ್ತಿ “

ಕುವೆಂಪುರವರ ಈ ಮಾನವೀಯ ಜಾನಪದೀಯತೆ ಅವರ ಭಾಷೆ, ಛಂದಸ್ಸುಗಳ ಸುಖವನ್ನು ಅನುಭವಿಸಬಲ್ಲ ಕೆಲ ಸಾಹಿತಿಗಳ ನಡುವೆಯೇ ಹುಗಿದು ಹೋಗಿದೆ ಮತ್ತು ರಾಮಾಯಣ ದರ್ಶನವನ್ನು ಓದುಬಯಸುವವರ ಸಂಖ್ಯೆ ಮಾಯವಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಉಡುಪಿಯ ಗಣೇಶ್ ತಮ್ಮ ವಿಶೇಷ ಪ್ರತಿಭೆ ಮತ್ತು ಸಾಮಾಜಿಕ ಪ್ರಜ್ಞೆಯಿಂದ ಶಬರಿಯ ಆತಿಥ್ಯ, ಮತ್ತು ವಾಲಿ ಸುಗ್ರೀವರ ಇತಿಹಾಸ, ರಾಮ ಸುಗ್ರೀವರ ಭೇಟಿ ಅವರ ಪೂಣ್ದೆನಗ್ನಿಯೇ ಸಾಕ್ಷಿ ಎಂಬ ಪ್ರತಿಜ್ಞೆ ಮತ್ತು ವಾಲಿ ವಧೆಯ ಪ್ರಸಂಗವನ್ನು ರಂಗದ ಮೇಲೆ ತಂದಿದ್ದಾರೆ .
ಅವರ ಗದ್ಯ ಎಪಿಕ್ ಗಳಾದ ಮಹಾ ಕಾದಂಬರಿಗಳನ್ನು ಅನುಭವಿಸುವ ಸುಖದಲ್ಲಿ ಸೊಕ್ಕಿ ರಾಮಾಯಣ ದರ್ಶನವನ್ನು ತಲೆಗಿಂಬಾಗಿಸಿದ್ದ ಮುಂದಿನ ತಲೆಮಾರಿಗೆ ಕುವೆಂಪುರವರ ಅಪೂರ್ವ ಕಾವ್ಯ ಮತ್ತು ವೈಚಾರಿಕ ಪ್ರತಿಭೆಯ ಒಂದು ದರ್ಶನವನ್ನು ಮಾಡಿಸಿದ್ದಾರೆ.
ಈ ರಂಗರೂಪವನ್ನು ತಯಾರಿಸುವಲ್ಲಿ ಕುವೆಂಪುರವರ ದರ್ಶನಕ್ಕೆ ಮೆರುಗು ನೀಡುವಂತೆ ವಿಸ್ತರಿಸಿದ್ದಾರೆ. ಅವರು ಈ ಪ್ರಯೋಗಕ್ಕೆ ಆರಿಸಿಕೊಂಡ ನೃತ್ಯ ಮತ್ತು ಅಂಗಿಕಗಳು, ದೃಶ್ಯ ಸಂಯೋಜನೆ ವಸ್ತುವನ್ನು ಜನರ ಮನಸ್ಸಿನ ಮೇಲೆ ಅಚ್ಚೊತ್ತುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದೆ. ಅದರಲ್ಲಿಯೂ ‘ ಉಪ್ಪು ಬೇಕೆ ಉಪ್ಪು ‘ ಎಂಬ ಮಕ್ಕಳ ಆಟವನ್ನು ರಂಗದ ಮೇಲೆ ಬಿಂಬಿಸಿದ ರೀತಿ ಎಲ್ಲಾ ನೋಡುಗರ ಹೃದಯವನ್ನು ಮಿಡಿಯುತ್ತದೆ.
ಜೊತೆಗೆ ತಾರೆಯ ಪಾತ್ರವನ್ನು ಮತ್ತಷ್ಟು ಬೆಳೆಸಿ ರಾಮನ ಜೊತೆ ವಾಗ್ವಾದ ನಡೆಸುವಂತೆ ಬೆಳೆಸಿದ್ದಾರೆ . ಅಂತ್ಯದಲ್ಲಿ ಕುವೆಂಪುರವರ ಕಾವ್ಯದಲ್ಲಿಲ್ಲದ ಒಂದು ಅಂಶವನ್ನು ಸೇರಿಸಿದ್ದಾರೆ. ನಮ್ಮ ಹಮ್ಮು, ಅಹಂಕಾರವನ್ನು, ದರ್ಪಗಳನ್ನು ಬದಿಗಿರಿಸುವುದೇ ‘ವಾಲಿವಧೆ’ಯ ಸಂದೇಶ ಎಂದು ಈ ರಂಗ ಪ್ರಯೋಗವನ್ನು ಕೊನೆಗಾಣಿಸಿರುವುದು ಔಪಚಾರಿಕವಾಗದೆ ಪರಿಣಾಮಕಾರಿಯಾಗಿ ಮನಮುಟ್ಟುವಂತಿದೆ.
ಈ ಪ್ರಯೋಗ ರಾಜ್ಯಾದ್ಯಂತ ಕಾಲೇಜುಗಳು, ಪ್ರೌಢಶಾಲೆಗಳಲ್ಲಿ ಹಾಗೂ ಜಿಲ್ಲೆಗಳಲ್ಲಿ ಪ್ರದರ್ಶನಗೊಳ್ಳಬೇಕಾದ ರಂಗ ಪ್ರದರ್ಶನ.
ರಾಮಾಯಣ ದರ್ಶನ ಮತ್ತು ಕುವೆಂಪುರವರ ಇತರ ಖಂಡ ಕಾವ್ಯಗಳನ್ನು ಜನರ ಮುಂದಿಡುವ ಪರಿಣಾಮಕಾರಿ ಮಾರ್ಗವನ್ನು ಗಣೇಶ್ ಮತ್ತು ಶೇಷಗಿರಿ ಎಂಬ ಗ್ರಾಮದ ನಟರು ತೆರೆದಿಟ್ಟಿದ್ದಾರೆ .
ಅವರ ಗ್ರಾಮಕ್ಕೆ ಸಿಕ್ಕ ಈ ಅಪೂರ್ವ ಅವಕಾಶ ಕರ್ನಾಟಕದ ಎಲ್ಲ ಗ್ರಾಮಗಳಿಗೆ ಸಿಕ್ಕಲ್ಲಿ ಸಿನೆಮಾ, ಟಿವಿಗಳ ಅಗ್ಗದ ಮನರಂಜನೆಯ ಹೊಡೆತಕ್ಕೆ ಸಿಕ್ಕಿ ಇಂಗಿ ಹೋಗುತ್ತಿರುವ ಜಾನಪದ ಪ್ರತಿಭೆ, ಕಲೆಗಳು ಹೊಸ ಹುಟ್ಟು ಪಡೆದು ಕನ್ನಡದ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ನಾಂದಿಯಾಗುವುದರಲ್ಲಿ ಸಂಶಯವಿಲ್ಲ .


‍ಲೇಖಕರು avadhi

February 6, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: