
ಮೂಲ: ಪಾಬ್ಲೊ ನೆರೂಡ
ಅನುವಾದ: ಡಾ. ಕಾಳೇಗೌಡ ನಾಗವಾರ
ಈ ರಾತ್ರಿ ಬರೆಯುತ್ತೇನೆ-
ನೋವಿನಾಳದ ನನ್ನ ಸಾಲುಗಳನು
ಈಗ ಬರೆಯುತ್ತೇನೆ: ‘ಭಗ್ನವಾಗಿದೆ ಇರುಳು
ದೂರ ನೀಲಿ ನಕ್ಷತ್ರಗಳು ನಡುಗುತ್ತಿವೆ’.
ಇರುಳ ಗಾಳಿ ಗಿರಗಿರ ತಿರುಗಿ ಬಾನಂಗಣದಿ ದನಿಗೈದಿದೆ
ಈ ರಾತ್ರಿ ಬರೆಯುತ್ತೇನೆ-
ನೋವಿನಾಳದ ನನ್ನ ಸಾಲುಗಳನು
ಪ್ರೀತಿಸಿದೆ ನಾನವಳ, ಹಾಗೆಯೇ
ಕೆಲವೊಮ್ಮೆ ಅವಳು ಕೂಡ.
ಇಂಥ ಎಷ್ಟೋ ಇರುಳುಗಳಲ್ಲಿ-
ತೋಳತೆಕ್ಕೆಯೊಳವಳ ಹಿಡಿದಿದ್ದೆನು
ಅನಂತ ಗಗನದ ಕೆಳಗೆ ನಾ-
ಮುದ್ದಾಡಿ ಮುತ್ತಿಟ್ಟೆ ಮತ್ತೆ ಮತ್ತೆ.
ಪ್ರೀತಿಸಿದವಳೆನ್ನ ಹಾಗೆಯೇ-
ಕೆಲವೊಮ್ಮೆ ನಾನು ಕೂಡ
ಅವಳ ಆ ಅದ್ಭುತ ಪ್ರಶಾಂತ-
ಕಣ್ಣುಗಳಿಗಾರು ಒಲಿಯಲಾರ?
ಈ ರಾತ್ರಿ ಬರೆಯುತ್ತೇನೆ-

ನೋವಿನಾಳದ ನನ್ನ ಸಾಲುಗಳನು:
ಬಳಿಯೊಳವಳಿಲ್ಲೆಂದು ತಿಳಿಯಲಿಕ್ಕೆ; ಅವಳ
ಕಳೆದುಕೊಂಡವನೆಂದು ಕೊರಗಲಿಕ್ಕೆ;
ಸುಡುಮೌನದೀ ದೀರ್ಘರಾತ್ರಿಗೆ ಕಿವಿಯನೊಡ್ಡು-
ವುದಕೆ – ಆಕೆ ಇಲ್ಲದೆ ಇನ್ನು ದೀರ್ಘವಾಗಿ
ಮತ್ತೆ ಆತ್ಮದೆಡೆ ಕವಿತೆ ಕುಸಿಯುತಿದೆ, ಎಳೆಹುಲ್ಲ-
ತೊಯ್ವ ಇಬ್ಬನಿಯ ಹಾಗೆ.
ಇನ್ನೇನು ಮಾಡಲಿ ನಾ? ನನ್ನ-
ಕಟ್ಟೊಲ್ಮೆಯವಳನ್ನು ಕಟ್ಟಲಿಲ್ಲ.
ಅಯ್ಯೋ ಭಗ್ನವಾಗಿದೆ ಇರುಳು,-
ಆಕೆ ಎನ್ನೊಡನಿಲ್ಲ.
ಇಷ್ಟೆ ಎಲ್ಲಾ- ಎಲ್ಲೋ ದೂರ ಯಾರೋ
ಹಾಡುವದನಿ, ದೂರದಲ್ಲಿ
ಕಳೆದು ಹೋದವಳಲ್ಲೆ ಮುಳುಮುಳುಗಿ
ಬೆಂಡಾದ ಈ ಮನಕ್ಕಿನ್ನೆಲ್ಲಿ ನೆಮ್ಮದಿ?
ನನ್ನ ನೋಟ ಹುಡುಕಿ ಹೊರಟಿದೆ ಅವಳ-ದಣಿವತನಕ
ಕಾದು ನಿಂತಿದೆ ಹೃದಯ, ಅಯ್ಯೋ ಆಕೆ ಎನ್ನೊಡನಿಲ್ಲ,

ಇದೆ ಚಂದಿರನ ಇರುಳು ಬೆಳಗಿತ್ತು
ಈ ಮರಗಳನ್ನೆ ಆಗ
ನಾವು- ಆ ಸವಿ ಜೋಡಿ- ಜೀವಕೊರಳವರಾಗಿ
ಉಳಿದಿಲ್ಲ ಈಗ.
ನಮ್ಮೊಲುಮೆಯೊಡನಾಟದವಧಿ ಚಿಕ್ಕದು ಬಲ್ಲೆ:
ಅವಳ ಮೆಚ್ಚಿದೆ ನಾನು ಮೈಯೆಲ್ಲ ಕಣ್ಣಾಗಿ ಬೆಳಗಿ
ನನ್ನ ದನಿ ಹುಡುಕುತಿದೆ ಅವಳ-
ಕಿವಿಯೆಡೆಗೊಯ್ವ ಸುಳಿಗಾಳಿಗಾಗಿ.
ಇನ್ನೊಬ್ಬನವಳಾಗಿ ಇರಬಹುದು ಅವಳೀಗ-
ಹಿಂದೆ ಮುತ್ತಿಟ್ಟಂತೆ ನಾನೆ
ಅವಳ ದನಿ, ಅವಳ ಉಜ್ವಲ ದೇಹ;
ಪಾರವಿಲ್ಲದ ಅವಳ ಕಣ್ಣ ಕಡಲು
ನಮ್ಮೊಲುಮೆಯೊಡನಾಟದವಧಿ ಚಿಕ್ಕದು ಬಲ್ಲೆ.
ಆದರೂ ಒಲಿದಿರುವೆ ನಾನವಳನು
ಪ್ರೀತಿ ಬಲು ಪುಟ್ಟಾಣಿ: ಅದರ ಮರೆಯುವಿಕೆ
ಕಟ್ಟುಗ್ರ- ಆಳ ಇನ್ನೂ ಆಳ.
ಏಕೆಂದರೀ ಇಂಥ ಎಷ್ಟೋ ಇರುಳುಗಳಲ್ಲಿ-
ತೋಳತೆಕ್ಕೆಯೊಳವಳ ಹಿಡಿದಿದ್ದೆನು.
ಕಳೆದುಹೋದವಳಲ್ಲೆ ಮುಳುಮುಳುಗಿ ಬೆಂಡಾದ
ಈ ಮನಕ್ಕಿಲ್ಲ ನೆಮ್ಮದಿ:
ಪ್ರಿಯತಮೆಯು ನೀಡಿರುವ ಕೊನೆಯ-
ಯಮಯಾತನೆಯ ಕಡುನೋವಿದಾದರೂ
ಅವಳ ಚಿರನೆನಪಿನಲಿ-
ಬರೆದಿಡುವೆನೀ ಕೊನೆಯ ಚರಣಗಳನು.
(ಕನ್ನಡದಲ್ಲಿ ಮೊಟ್ಟಮೊದಲು ಪಾಬ್ಲೊ ನೆರೂಡನ ಕವಿತೆ ಓದಿದ್ದು ಅಂದರೆ ಪ್ರಿಯ ಕವಿ, ಕತೆಗಾರ, ಜಾನಪದ ತಜ್ಞ ಹಾಗೂ ಸಂಸ್ಕೃತಿ ಚಿಂತಕ ಡಾ. ಕಾಳೇಗೌಡ ನಾಗವಾರ ಅವರು ಅನುವಾದಿಸಿದ “ಈ ರಾತ್ರಿ ಬರೆಯುತ್ತೇನೆ…” ಎಂಬ ಕವಿತೆ. ಇದು ಪಾಬ್ಲೊ ನೆರೂಡನ ವಿಶ್ವಪ್ರಸಿದ್ಧ ಕವಿತೆಯೂ ಹೌದು. ಇದನ್ನು ಇಂಗ್ಲೀಷ್, ಮಲಯಾಳಂ ಭಾಷೆಗಳಲ್ಲೂ ಓದಿದ್ದೇನೆ. ಮಲಯಾಳಂನಲ್ಲಿ ಈ ಕವಿತೆ
ಮೂವರು- ಸಂತ ನಿತ್ಯಚೈತನ್ಯ ಯತಿ, ಬಾಲಚಂದ್ರನ್ ಚುಳ್ಳಿಕ್ಕಾಡ್, ಕೆ. ಸಚ್ಚಿದಾನಂದನ್ -ಅನುವಾದಿಸಿದ್ದಾರೆ. ಚುಳ್ಳಿಕ್ಕಾಡ್ ಅವರ ಅನುವಾದ ಮಲಯಾಳಂನಲ್ಲಿ ಅತ್ಯಂತ ಜನಪ್ರಿಯವಾಗಿದೆ. ಆದರೆ ನನಗೆ ಸಂವೇದನೆ ಮತ್ತು ಸೌಂದರ್ಯದ ದೃಷ್ಟಿಯಿಂದ ಡಾ. ಕಾಳೇಗೌಡ ನಾಗವಾರರ ಈ ಅನುವಾದ ಅತ್ಯಂತ ಇಷ್ಟವಾದುದು. ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಅನುವಾದಗೊಂಡು ‘ಶೂದ್ರ’ ಪತ್ರಿಕೆಯಲ್ಲಿ ಪ್ರಕಟವಾದ ಈ ಕವಿತೆ ಕನ್ನಡದಲ್ಲಿ ಕವಿ ಪಾಬ್ಲೊ ನೆರೂಡ ಕಾವ್ಯದ ಮೊದಲ ಪ್ರಯತ್ನವಾಗಿತ್ತು. ಇದರ ನಂತರ ತೇಜಸ್ವಿನಿ ನಿರಂಜನ ಅವರ ಅನುವಾದದ ಪಾಬ್ಲೊ ನೆರೂಡನ ಮೊದಲ ಕವನ ಸಂಕಲನ ‘ಮರಳಿ ಬರುವೆ’ ಪ್ರಕಟವಾಯಿತು. -ತೇರಳಿ ಶೇಖರ್)






ಅನುವಾದ ಚೆಂದ ಬಂದಿದೆ.ಪಾಬ್ಲೋ ನೆರೋಡಾನ ಕವಿತೆಯೊಂದನ್ನು ಮೋಹನ್ ಹಬ್ಬು ಸಹ ಅನುವಾದಿಸಿದ್ದಾರೆ…
ಕವಿತೆ ತುಂಬಾ ಚೆನ್ನಾಗಿದೆ.ಹ್ರದಯದ ಭಾವನೆಗಳನ್ನು ವ್ಯಕ್ತಮಾಡಿದಪರಿ ಮನೊಜ್ಞವಾಗಿದೆ. ಅನುವಾದಕ್ಕೆ ಅಭಿನಂದನೆಗಳು.
ತೇರಳಿ ಶೇಖರ್ ಅವರ ಗಮನಕ್ಕೆ :
ತಂಜಸ್ವಿ ನಿರಂಜನ ಅವರ ‘ಮರಳಿ ಬರುವೆ’ (ನೆರೂಡ ಕವಿತೆಗಳ ಅನುವಾದ) ಪ್ರಕಟವಾದದ್ದು 1976 ರಲ್ಲಿ. ನಿಸಾರ್ ಅಹಮದ್ ಅವರ ನೆರುಡ ಅನುವಾದ ‘ಬರಿ ಮರ್ಯಾದಸ್ಥರು’ ಪ್ರಕಟವಾದುದು1983.
ಮಾಹಿತಿ ತಪ್ಪಾಗಿ ದಾಖಲಾಗಬಾರದೆಂಬ ಕಾರಣಕ್ಕೆ ಮಾತ್ರ ಈ ವಿವರಣೆ.
“ಮರಳಿ ಬರುವೆ” ಈಗ ಸಿಗುವ ಸಾಧ್ಯತೆ ಇದೆಯೇ?
ಏಕೆಂದರೆ ಅದನ್ನು ಹುಡುಕಿಕೊಂಡು ಅಲೆದು ಪಾದಗಳು ಗಾಯಗೊಂಡಿವೆ. ಬೇಕಿದ್ದರೆ ನೋಡಿ: “ರಕ್ತವಿದೆ ಬೀದಿಯ ಮೇಲೆ”