ಜೀವನ್ ಪ್ರಕಾಶನ, ಕೋಲಾರ ಹಮ್ಮಿಕೊಂಡಿದ್ದ ದಸರಾ ಕವಿತೆ ಸ್ಪರ್ಧೆಯಲ್ಲಿ
ಮೆಚ್ಚುಗೆ ಪಡೆದ ಕವಿತೆ

ಬೀದಲೋಟಿ ರಂಗನಾಥ್
ಸತ್ಯದ ಬಣವೆಗೆ
ಸುಳ್ಳಿನ ಬೆಂಕಿ ತಾಕಿಸಿ
ಸುಟ್ಟೋಗುವ ಮನಸುಗಳ ಮೇಲೆ
ಮನೆಯಾಳರ ಹೆಜ್ಜೆ ಸದ್ದು
ಕಡೆದ ಕನಸುಗಳಲ್ಲಿ
ತುಪ್ಪದಾಸೆಯು ಮರಳುಗಾಡಾಗಿ
ಮಡಿಯಲ್ಲದ ಮನಸಿನ ನೋವು
ಅರಿಯದ ಮಡಿವಂತಿಕೆಯ ಮನಸ್ಸಿಗೆ
ಬ್ರಾಹ್ಮಣ್ಯದ ಜಾಢ್ಯ.
ನಾವಿಟ್ಟ ಹೆಜ್ಜೆಗಳ ಮೇಲೆ
ಬೆಳೆದ ಭಾವ ಸಸಿಗಳ ಗಮ್ಯ
ಜಂಟಿ ಮಾಡುವ ಸಖ್ಯವ ನೋಡಿ,
ಬಂಧದಲಿ ಬದುಕದ ಮನಸ್ಸುಗಳಲ್ಲಿ
ಪಾರ್ಥೇನಿಯಂ ಗಿಡದ ಕನಸು.
ಅಡಿಯಿಟ್ಟ ಹೆಜ್ಜೆಗಳಿಗೆ
ಮುಡಿ ಮೇಲಿನ ಮಡಿ ನೀರು
ಬೆಂಕಿಯಾದೀತೆಂಬ ಚಿಂತೆಯಲಿ
ಕೊರಗಿದ ನನ್ನವರ ಮನಸ್ಸುಗಳು
ನಂದಿಸುವ ನೀರಾಗಲಿ.
ಕಾಲದ ನೆಲದ ಮಹಿಮೆ
ಹೆತ್ತಮ್ಮ ಹೊತ್ತಪ್ಪನ ಆಶಿರ್ವಾದ ಬೆಳಗು
ಅಳಿಸಿ ಹಾಕಲಿ ನೋವಿನಲಿ ಗೀಚಿದ ಹಣೆಬರಹವನು.
ಚಕ್ಕಡಿಯನೇ ಹೊತ್ತ ನೊಗದ ಬದುಕ,
ಚಕ್ಕೆ ಕೆತ್ತಿ ಆಕಾರ ಕೆಡಿಸುವುದೆಷ್ಟು ಸರಿ?
ಅಂಗಾಲಿನ ಒತ್ತಡದ ನೋವಿಗೆ
ಕೆರವ ಹೊಲೆದು ಕೊಡುವ ಮನಸುಗಳಲ್ಲಿ
ಮಮಕಾರದ ತೊಟ್ಟಿಲ ಕಂದನ ಕೇಕೆಯಷ್ಟೆ.
ವೃಥಾ ಸುಮ್ಮನೆ ಕೆಣಕಿದರಷ್ಟೇ
ಸಿಟ್ಟು ಕಣವಾಗಬಹುದು.!
ಹಸಿರು ಕಾಣುವ ಕಣ್ಣುಗಳ ತವಕದಲಿ
ತಾನಿರುವ ಸ್ಥಾನವನೇ ಮರೆತು
ನೀಸಿದ ಬದುಕಿನ ದಾರಿ -ಭಯದ ಬರುಡೆಯ ಅಂತರಂಗ.
ಧೈರ್ಯದ ಕೋಲಿಗೆ ಹೆಜ್ಜೆಗಳಿರದೆ
ಸೊರಗಿದ ದಿನಗಳ ಲೆಕ್ಕವಿಲ್ಲ.
ಬೇಕಿದೆ ಬಿಡುಗಡೆ
ಜಾತಿಜಾಢ್ಯದ ಹೆಸರಲ್ಲಿ ಆಗುವ-
ಅಷ್ಟೂ ಅವಮಾನಕ್ಕೆ, ಅಪಮಾನಕ್ಕೆ.
ಬಣವೆಯಂತೆ ರಾಶಿ ಬಿದ್ದಿರುವ
ಸಂಕಟದ ನೋವಿಗೆ.
ದಾರಿ ಬಿಡಿ,
ಈ ನೆಲದ ಮಕ್ಕಳು ನಾವು





0 Comments