‘ಇಂತೀ ನಿನ್ನವಳೇ ಆದ’ವಳ ಹದಬೇಸರಗಳು…

ನಂದಿನಿ ಹೆದ್ದುರ್ಗ ಅವರ ಹೊಸ ಕೃತಿ – ‘ಇಂತೀ ನಿನ್ನವಳೇ ಆದ’

ಸಾವಣ್ಣ ಪ್ರಕಾಶನ ಹೊರತರುತ್ತಿರುವ ಈ ಕೃತಿಗೆ ನಂದಿನಿ ಬರೆದ ಮಾತುಗಳು ಇಲ್ಲಿವೆ-

       ನಂದಿನಿ ಹೆದ್ದುರ್ಗ

ಆತ್ಮ ಆರಾಮದಲ್ಲಿದ್ದಾಗ ಬರೆದದ್ದು ಕವಿತೆಯಾಯ್ತು. ಹೃದಯದ ಗುರುತ್ವ ಕಳೆದು ಕಳವಳಿಸುತ್ತಿದ್ದಾಗ ಬರೆದದ್ದು ಕತೆಯಾಯ್ತು ಎನ್ನಬಹುದೇ?

ಲೇಖನಗಳೊಂದಿಗೆ ಆರಂಭಿಸಿದ ಇತಿಮಿತಿಯ ಸಾಹಿತ್ಯದ ಲೋಕದೊಳಗೆ ಗಪದ್ಯಗಳು ಯಾವಾಗ ಒಳಬಂದವೋ ತಿಳಿಯಲಿಲ್ಲ. ಸಂಕಲನವೆಂದರೇನೆಂದು ಗೊತ್ತಿರದ ಹೊತ್ತಿನಲ್ಲಿ, ಹೇಗಿರಬೇಕು ಎಂಬ ಕಲ್ಪನೆಯೂ ಇಲ್ಲದಿದ್ದಾಗ ನನ್ನ ‘ಅಸ್ಮಿತೆ’ ಲೋಕ ನೋಡಿತ್ತು.

ಒಂದು ಕಾಲವಿತ್ತು ಇಲ್ಲಿ. ಮೊದಲ ಮಳೆಗೆ ತೋಟಕ್ಕೆ ತೋಟವೇ ಹೂವಾಗಿ ಕೃಷ್ಣನ ಬಾಯಿಗೆ ಮೆತ್ತಿದ ಬೆಣ್ಣೆಯಂತೆ ಕಾಣುತ್ತಿದ್ದ ಹೊತ್ತಿನಲ್ಲೂ ಎದೆಯೊಳಗೆರಡು ಅಕ್ಷರಗಳು ಬೆದೆಯಾಗುತ್ತಿರಲಿಲ್ಲ. ಪಟಗುಡುವ ಚಿಟ್ಟೆ ಸಾಲೊಂದು ಹುಟ್ಟುತ್ತಿರಲೂ ಇಲ್ಲ. 

ಬೆಳಕಿಗಾಗಿ ಬದುಕಿಗಾಗಿ ಸರಿಕರ ನಡುವಿನ ಸಮಬಾಳ್ವೆಗಾಗಿ ಗಡಿಯಾರದ ಹಿಂದೆ ಓಡುತ್ತೋಡುತ್ತ ತೋಟ ಹೂವಾದ ಕೂಡಲೇ ಉಳಿದ ಗಿಡಗಸಿ ಮುಗಿಸುವ, ಸ್ಪ್ರೆ ಹೊಡೆದು ಗೊಬ್ಬರ ಹಾಕಿಸುವ, ಕಳೆ ಕೊಚ್ಚಿಸುವ, ಇಳುವರಿ ಹೆಚ್ಚಿಸುವ, ಮಣ್ಣಿನ ಆರೋಗ್ಯ ಕಾಪಾಡಲು ಇರುವ ಬರಹಗಳನ್ನಷ್ಟೇ ಓದಿ ಕೊಂಡಿದ್ದವಳು ನಾನು.

ರಾಜ ಮಾರ್ಗದಲ್ಲಿ ಹಾದು ಹೋಗುವ ಕುದುರೆಗಳಿಗೆ ಬೆದರಿಸುವವರೇ ಅಧಿಕವಂತೆ. ನಾಳೆ ಬರುವುದೇ ನನ್ನ ಪಾಲಿನ ಹುಣ್ಣಿಮೆ ಎಂದುಕೊಂಡು ಇಂದಿನ ಗಾಜುಗೋಡೆಗಳನ್ನು ತೊಳೆದು ಶುಭ್ರಗೊಳಿಸುತ್ತಿದ್ದವಳಿಗೆ ಸದಾ ಮೋಡಗಳದ್ದು ಅಡ್ಡಗಾಲು.

ಹೊರಳು ದಾರಿ ಕರೆದದ್ದು ಆಗಲೇ. ಕಾವ್ಯಗುರುಗಳಾದ ಬಿ ಆರ್ ಲಕ್ಷ್ಮಣರಾಯರ ಮಾರ್ಗದರ್ಶನದಲ್ಲಿ ಎರಡನೇ ಸಂಕಲನ ‘ಒಳಸೆಲೆ’ಬಿಡುಗಡೆ ಆಯ್ತು. ಪರಂಪರೆಯ ಓದಿಲ್ಲ.ಸಮಕಾಲೀನರ ಅರಿವಿಲ್ಲ. ನನ್ನ ಹಿತ್ತಿಲಲ್ಲಿ ಅರಳಿದ್ದೇ ಹೂವು, ನನ್ನ ಹೊಸ್ತಿಲೊಳಗೆ ಇಣುಕಿದ್ದೇ ಬೆಳಗು.

ಸಿಕ್ಕಿದ್ದು ಹೆಕ್ಕಿಕೊಂಡು ಕಾವ್ಯದ ಹಾದಿಯಲ್ಲಿ ಸಾಗುತ್ತಿದ್ದವಳಿಗೆ ‘ಕತೆಕೂಟ’ವೆಂಬ ಹೂದೋಟ ಕರೆಯಿತು. ಮಾಗಿಗೊಂದು ವಸಂತಕ್ಕೊಂದು ಶಿಶಿರಕ್ಕೊಂದು ಎಲೆ ಚಿಗುರಿದಾಗೊಂದು ಹಕ್ಕಿ ಹಾಡಿದಾಗೊಂದು ವಿಷಯವಿಟ್ಟು ‘ಬರೆಯಿರಿ ಕಥೆ’ ಎಂದರು.

ಅಂಜುತ್ತಾ ಅಳುಕುತ್ತಾ ಒಳಬಂದವಳು ಒಂದೊಂದೇ ಹೂವು ಬಿಡಿಸಿದೆ.ಹಣ್ಣು ಹೆಕ್ಕಿದೆ. ದೊಡ್ಡ ಮರದ ನೆರಳಲ್ಲಿ ಏನನ್ನೋ ನೆನೆದು ವೃಥಾ ಬಿಕ್ಕಿದೆ. ಮಿಕ್ಕ ಸಮಯದಲ್ಲಿ ಹೂದೋಟದಲ್ಲಿ ಅಡ್ಡಾಡಿದೆ.

ವಿಧಿ ಹಾಗೆಲ್ಲಾ ಆರಾಮು ಮಾಡಲು ಬಿಡದು‌ ಬದುಕನ್ನು.
ನೋವಿರುವ ಜಾಗಕ್ಕೇ ನಾಲಿಗೆ ತಾಗುವುದು.

ಕೊಟ್ಟ ಕುದುರೆಯನೇರಲರಿಯದೆ 
ಮತ್ತೊಂದು ಕುದುರೆಯನೇರ ಬಯಸುವರು
ವೀರರೂ ಅಲ್ಲ
ಧೀರರೂ ಅಲ್ಲ

ಆ ಕಾಲದಲ್ಲೇ ಹೀಗೆಂದು ಬಯಲನ್ನೇ ಬದುಕಾಗಿಸಿಕೊಂಡ ಆ ಬ್ರಹ್ಮಚಾರಿ. 
ಹೇಳದೇ ಇನ್ನೇನು ಮಾಡಿಯಾನು?

ಇಲ್ಲೋ.. ಸದಾ ಎಂಥದ್ದೋ ಹುಡುಕಾಟ.
ಯಾವುದೋ ವಿಸ್ಮಯವೊಂದು‌ ನಾಳೆ ಘಟಿಸಲಿದೆ ಎಂಬ ಧೃಡವಾದ ನಂಬಿಕೆ. 

ಬೆಳಗನ್ನು ಕಾದು, ಗರಿಕೆ ತುದಿಯ ಹನಿಗಳನ್ನು ಕಣ್ಣಿನೊಳಗಿಳಿಸಿಕೊಂಡು ಸೂರ್ಯನನ್ನೇ ನುಂಗಿದೆ ಎಂದು ಸಂಭ್ರಮಿಸುವುದಕ್ಕೆ ಯಾರದ್ದಾದರೂ ಹೇಳಿಮೆಕೇಳಿಮೆ ಬೇಕೇ?

ಕಥೆಯೊಂದು ಬರೆದ ಮೇಲೆ ಬದುಕು ‌ಮತ್ತಷ್ಟು ಆಪ್ತ.
ಕಥೆಗಳಲ್ಲಿರುವ ಹೂ‌ನಗೆಯ ಸರದಾರ ಇಂದಾದರೂ ಇದಿರಾಗಲಿ ಎಂಬ ನಿತ್ಯದ ನನ್ನ ಕೋರಿಕೆ ಗುಪ್ತ.

ಒಲಿದ ಹೃದಯಗಳೆರಡು ಇಲ್ಲಿ ಪಿಸುಗುಟ್ಟಿವೆ.
ಅದಲುಬದಲಾಗಲಿ ಹೂಮಾಲೆ ಬೇಗ.
ಕಾಲದ ಜಾಲದಲ್ಲಿ ಇವಳು ಇನ್ನಷ್ಟು ಬಿಡಿಹೂವುಗಳನ್ನು ಹೆಕ್ಕಿಕೊಳ್ಳುವಂತಾಗಲಿ.

‍ಲೇಖಕರು Admin

November 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: