ಈತ ಸಮಾಜದ  ಸ್ವಾಸ್ಥ್ಯದ ಕನಸುಗಾರ..

ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಸಿರಿಧಾನ್ಯ ಮೇಳ ಜರುಗುತ್ತಿದೆ. ‘ಗ್ರಾಮೀಣ ಕುಟುಂಬ’ ನಡೆಸುತ್ತಿರುವ ೬ ನೆಯ ಮೇಳ ಇದು. ಇದರ ರೂವಾರಿ ಎಂ ಎಚ್ ಶ್ರೀಧರ ಮೂರ್ತಿ ಅವರು ಈ ಸಂದರ್ಭಕ್ಕಾಗಿ ‘ಭವಿಷ್ಯದ ಆಹಾರ ಸಿರಿಧಾನ್ಯ’ ಎನ್ನುವ ಕೃತಿ ರಚಿಸಿದ್ದಾರೆ. ಈ ಕೃತಿಗೆ ಜಿ ಎನ್ ಮೋಹನ್ ಅವರು ಬರೆದಿರುವ ಮುನ್ನುಡಿ ಇಲ್ಲಿದೆ

ಜಿ ಎನ್ ಮೋಹನ್

ಆತ್ಮೀಯ ಗಳೆಯ ಎಂ ಎಚ್ ಶ್ರೀಧರಮೂರ್ತಿ ಇದ್ದಕ್ಕಿದ್ದಂತೆ ನನ್ನೆದುರು ನಿಂತು ಸಿರಿಧಾನ್ಯ ಕುರಿತ ಪುಸ್ತಕಕ್ಕೆ ಮುನ್ನುಡಿ ಬೇಕು ಎಂದಾಗ ನಾನು ಕಕ್ಕಾಭಿಕ್ಕಿಯಾದೆ.

‘ಎತ್ತಣ ಮಾಮರ ? ಎತ್ತಣ ಕೋಗಿಲೆ’ ಎನ್ನುವ ಪರಿಸ್ಥಿತಿ ನನ್ನದು. ಶ್ರೀಧರಮೂರ್ತಿ ನನ್ನನ್ನು ಗೇಲಿ ಮಾಡುತ್ತಿರಬಹುದೇ ಎಂದು ಒಮ್ಮೆ ಅವನ ಮುಖ ನೋಡಿದೆ. ಖಂಡಿತಾ ಹಾಗಲ್ಲ ಎನ್ನುವುದು ನನಗೆ ಗೊತ್ತು. ಏಕೆಂದರೆ ನನ್ನ ಮತ್ತು ಶ್ರೀಧರನ ಗೆಳೆತನಕ್ಕೆ ಎರಡು ದಶಕದ ನಂಟಿದೆ. ಇಷ್ಟೂ ಕಾಲ ಅವನ ಸಂಗಡದಲ್ಲಿರುವವರಿಗೆ ಆತನ ಪ್ರೀತಿ ಗೊತ್ತೇ ಹೊರತು ಇನ್ನೇನೂ ಅಲ್ಲ.

ಹಾಗಾಗಿಯೇ ನನಗೆ ಗಲಿಬಿಲಿ. ಏಕೆಂದರೆ ನನ್ನ ತೂಕ ಏಕ್‍ದಂ ಒಂದು ಕ್ವಿಂಟಾಲ್. ಆರ್ಥಾತ್ 100ಕೆ.ಜಿ. ನನಗೂ ಸಿರಿಧಾನ್ಯ ಕುರಿತ ಕೃತಿಗೂ ಏನು ಸಂಬಂಧ ?

ಆಗಲೇ ಶ್ರೀಧರಮೂರ್ತಿ ಹೇಳಿದ್ದು- ಮುನ್ನುಡಿ ಬರಿ. ಆ ಕಾರಣಕ್ಕಾಗಿ ನೀನು ಈ ಕೃತಿಯಿಡೀ ಓಡಾಡುತ್ತೀಯಲ್ಲ. ಆಗ ಗೊತ್ತಾಗುತ್ತದೆ. ನೀನು ಏಕೆ ಈ ಸಿರಿಧಾನ್ಯದ ಲೋಕಕ್ಕೆ ಪ್ರವೇಶಿಸಬೇಕು ಎಂದು.

ಅಷ್ಟಕ್ಕೇ ಆತ ಸುಮ್ಮನಾಗಲಿಲ್ಲ- ‘ಎಲ್ಲಿ ಹೀಗೆ ನಿಲ್ಲು, ಈ ಕಡೆ..’ ಎಂದು ಮೊಬೈಲ್ ಜೇಬಿನಿಂದ ಹೊರತೆಗೆದ. ನಾನು ‘ಸೆಲ್ಫಿ’ ತೆಗೆದುಕೊಳ್ಳುತ್ತಾನೆ ಎಂದು ಒಂದಿಷ್ಟು ಹೆಚ್ಚೇ ಹಲ್ಲು ಕಿರಿದೆ. ಆದರೆ ಆತ ಅದನ್ನು ಮುಲಾಜಿಗೇ ತೆಗೆದುಕೊಳ್ಳದೆ ನನ್ನ ಫೋಟೋ ಮಾತ್ರ ‘ಕ್ಲಿಕ್’ ಎನ್ನಿಸಿದ. ‘ಯಾಕೋ ನನ್ನದು ಮಾತ್ರ?’ ಎಂದೆ. ಆತ ಗಂಭೀರವಾಗಿ ಹೇಳಿದ. ಸಿರಿಧಾನ್ಯ ಬಳಸುವ ಮೊದಲು ನೀನು ಹೇಗಿದ್ದೆ ಎನ್ನುವ ಫೋಟೋ ತೆಗೆದೆ. ಒಂದಿಷ್ಟು ತಿಂಗಳು ಬಿಟ್ಟು ಮತ್ತೆ ಬರುತ್ತೇನೆ. ಈ ಪುಸ್ತಕ ಓದಿ ನೀನು ಸಿರಿಧಾನ್ಯ ಬಳಸಿಯೇ ಬಳಸುತ್ತೀಯ, ಆಗಲೂ ಒಂದು ಫೋಟೋ ತೆಗೆಯುತ್ತೇನೆ. ಎರಡನ್ನೂ ಅಕ್ಕಪಕ್ಕ ಇಟ್ಟು ನೋಡೋಣ. ಆಗ ಗೊತ್ತಾಗುತ್ತದೆ ‘ಸಿರಿಧಾನ್ಯದ ಸಿರಿ’ ಎಂದ.

ನಾನಿನ್ನೂ ಆತನ ಮಾತಿನ ಗುಂಗಿನಿಂದ ಹೊರಬಂದಿಲ್ಲ. ಆಗಲೇ ‘ಟಿಣ್’ ಎನ್ನುವ ಸದ್ದು ನನ್ನ ಲ್ಯಾಪ್‍ಟಾಪ್‍ನಲ್ಲಿ. ನೋಡುತ್ತೇನೆ ಮುನ್ನುಡಿಗಾಗಿ ಬಂದ ಆತನ ಕೃತಿ.

ಶ್ರೀಧರಮೂರ್ತಿಯನ್ನ ನಾವು ಆತನ ಸಂಪೂರ್ಣ ಹೆಸರಿನಿಂದ ಎಂದೂ ಕರೆದಿದ್ದಿಲ್ಲ. ‘ಶ್ರೀ’ ಎಂದೇ ಕರೆದು ರೂಢಿ. ಶ್ರೀ ಎಂದರೆ ‘ಸಿರಿ’ ಎಂದೇ ಅರ್ಥ ಅಲ್ಲವೇ. ಹಾಗಾಗಿ ‘ಶ್ರೀ’ ಸಿರಿಧಾನ್ಯದ ಲೋಕದ ಒಳಗೆ ಹೊಕ್ಕಿದ್ದಾನೆ. ಇಂದು ಸಿರಿಧಾನ್ಯ, ಸಾವಯವದ ಬಗ್ಗೆ ಕರಾರುವಾಕ್ಕಾಗಿ ಮಾತಿನಾಡುವ ಕೆಲವೇ ವ್ಯಕ್ತಿಗಳಲ್ಲಿ ಎಂ ಎಚ್ ಶ್ರೀಧರಮೂರ್ತಿ ಒಬ್ಬ.

‘ಭವಿಷ್ಯದ ಆಹಾರ ಸಿರಿಧಾನ್ಯ’ ಕೃತಿಯನ್ನು ಅಚ್ಚರಿಗಣ್ಣುಗಳಿಂದ ಪ್ರವೇಶಿಸಿದ್ದೇನೆ. ಈ ಮೊದಲಿನಿಂದಲೂ ನಾನು ಸಾವಯವ ಕೃತಿ, ಸಿರಿಧಾನ್ಯ, ಸಹಜ ಬೇಸಾಯ, ಕೃಷಿಕರ ಕೈಗೇ ಲೇಖನಿ ಹೀಗೆ ಹಲವು ಚಳವಳಿಗಳ ಭಾಗವಾಗಿದ್ದರೂ ನಾನು ಈ ‘ಸಿರಿಧಾನ್ಯ’ದ ಪ್ರಯೋಗಕ್ಕೆ ನನ್ನನ್ನು ಒಗ್ಗಿಸಿಕೊಂಡಿರಲಿಲ್ಲ.

ಕಾರಣ ಇಷ್ಟೇ, ನಾನು ಅನಿವಾರ್ಯ ಕಾರಣಗಳಿಂದಾಗಿ ಹೆಚ್ಚೆಚ್ಚು ಅಕ್ಕಿಯನ್ನೇ ಬಳಸಬೇಕಾಗಿ ಬಂದವನು. ಅದರಲ್ಲೂ ಸತ್ವರಹಿತವಾದ ಪಾಲಿಷ್ ಅಕ್ಕಿ. ನಾನು ನನ್ನ ಪತ್ರಕರ್ತ ವೃತ್ತಿಯ ಭಾಗವಾಗಿ ಪಟ ಪಟನೆ ಓಡಾಡುತ್ತಾ ಕೆಲಸ ಮಾಡಬೇಕಾಗಿ ಬಂದಿದ್ದಾಗ ನನಗೆ ಆಹಾರ ಏನು ಸೇವಿಸುತ್ತಿದ್ದೇನೆ ಎನ್ನುವ ಯೋಚನೆಯೇ ಇರಲಿಲ್ಲ. ಏಕೆಂದರೆ ನನ್ನ ಅಷ್ಟು ಓಡಾಟವೇ ನನ್ನ ದೇಹವನ್ನು ಹದ್ದುಬಸ್ತಿನಲ್ಲಿಟ್ಟಿತ್ತು.

ಆದರೆ ವೃತ್ತಿಯ ಏಣಿಯಲ್ಲಿ ನಾನು ಮೇಲೆ ಏರಿ ದಿನದ ಅಷ್ಟೂ ಕಾಲ ಕುರ್ಚಿಯಲ್ಲಿ ಕುಳಿತುಕೊಳ್ಳುವುದೇ ಆದಾಗ ನನ್ನ ದೇಹ ನನ್ನ ಮನಸ್ಸಿನೊಂದಿಗೆ ಸಹಕರಿಸದೇ ಇದ್ದುದು, ನಿಧಾನಕ್ಕೆ ನನ್ನ ದೇಹ ನನಗೇ ಭಾರವಾಗುತ್ತಾ ಹೋಗುತ್ತಿರುವುದೂ ಅರಿವಾಗುತ್ತಾ ಬಂತು.

ಆಗ ಮೊದಲ ಬಾರಿಗೆ ನಾನು ತಿನ್ನುತ್ತಿರುವುದು ಏನು? ನನ್ನ ಚಟುವಟಿಕೆ ಇಲ್ಲದ ಬದುಕಿಗೂ ಆಹಾರಕ್ಕೂ ತಾಳೆಯಾಗುತ್ತಿದೆಯಾ.? ಎಂದು ಯೋಚಿಸಲು ಆರಂಭಿಸಿದೆ. ಆಗಲೇ ನನಗೆ ಅಕ್ಕಿ, ಗೋಧಿ, ರಾಗಿ ನಡುವಣ ವ್ಯತ್ಯಾಸದ ಅ,ಆ,ಇ,ಈ…….. ತಿಳಿಯುತ್ತಾ ಹೋಗಿದ್ದು.

ನನಗೆ ಸ್ಪಷ್ಟವಾಗಿ ನಾನು ಏನು ಸೇವಿಸಬೇಕು ಎನ್ನುವ ಅರಿವು ಸಿಕ್ಕಿತು. ಆದರೆ ದಾರಿ ಗೊತ್ತಿರಲಿಲ್ಲ.ದಿಢೀರನೇ ಏರುತ್ತಾ ಹೋದ ಸಿರಿಧಾನ್ಯ- ಸಾವಯವ ಮಳಿಗೆಗಳು.. ನನ್ನನ್ನು ಇನ್ನಷ್ಟು ಗೊಂದಲಕ್ಕೆ ದೂಡಿದವು. ಯಾವುದೇ ಒಂದು ಮಾರುಕಟ್ಟೆಯಲ್ಲಿ ಗಿಟ್ಟುತ್ತದೆ ಎಂದು ಗೊತ್ತಾದಾಗ ಅದು ಸೇವೆಯೋ, ಆರೋಗ್ಯವೋ ಆಗಿರುವ ಬದಲು ಹೇಗೆ  ಲಾಭದ ಮೇಲೆ ಮಾತ್ರ ಕಣ್ಣಿಟ್ಟ ವ್ಯಾಪಾರವಾಗಿಬಿಡುತ್ತದೆ ಎನ್ನುವುದು ನನಗೆ ನನ್ನ ವೃತ್ತಿ ಕಾರಣಕ್ಕೂ ಗೊತಿತ್ತು. ಹಾಗಾಗಿ ಯಾವುದು ನಿಜ, ಯಾವುದು ಅಲ್ಲ ಎನ್ನುವ ಗೊಂದಲ. ಈ ಮಧ್ಯೆ ಸಾವಯವ, ಸಿರಿಧಾನ್ಯ, ರೆಸಾರ್ಟ್- ಹೋಟೆಲ್ ಗಳು  ನನ್ನನ್ನು ಎರಡು ಹೆಜ್ಜೆ ಹಿಂದೆ ಸರಿಯಲು ಮಾತ್ರ ಕಾರಣವಾಯಿತು.

ಆ ಹೊತ್ತಲ್ಲಿ ಶ್ರೀಧರಮೂರ್ತಿ ನನಗೆ ಒಂದು ತಾಸಿಗೂ ಹೆಚ್ಚು ಕಾಲ ಸಿರಿಧಾನ್ಯದ ಬಗ್ಗೆ, ಸಾವಯುವ ಕೃಷಿಯ ಬಗ್ಗೆ, ಇದಲ್ಲದೇ ರೈತರ ಸಂಕಷ್ಟ, ಮಾರುಕಟ್ಟೆಯ ಕುಟಿಲತೆಗಳು, ಅವಸರದ ಸಾವಯವ ಕನಸುಗಾರರು.. ಹೀಗೆ ಎಲ್ಲವನ್ನ ನನ್ನ ಎದುರು ವಿವರಿಸುತ್ತಾ ಹೋದ.

ಇದು ಬಹುಷಃ ನನಗೆ ಅಪರೋಕ್ಷವಾಗಿ ಸಿರಿಧಾನ್ಯ ದೀಕ್ಷೆ ನಿಡಿದ ಕಾರ್ಯಕ್ರಮವಾಗಿತು, ಆಗಲೇ ನನಗೆ ಶ್ರೀಧರ ದೇಹವನ್ನೂ ಮನಸ್ಸನ್ನೂ ಒಂದು ಹೊಂದಾಣಿಕೆಗೆ ತರಲು ಹೇಗೆ ಸಿರಿಧಾನ್ಯ ಆಹಾರ ಪದ್ಧತಿಗೆ ಶರಣಾಗಬೇಕು ಎನ್ನುವುದನ್ನು ಹೇಳುತ್ತಾ ಹೋದ. ನಾನು ನವಣೆ, ಆರ್ಕ, ಸಾಮೆ, ಊದಲ, ಕೊರಲು ಲೋಕಕ್ಕೆ ಪರೋಕ್ಷವಾಗಿ ತೆರೆದುಕೊಂಡಿದ್ದೆ.

ಆ ನಂತರ ಏನು? ಎನ್ನುವಾಗ ಎಂ ಎಚ್ ಶ್ರೀಧರಮೂರ್ತಿಯ ಈ ಕೃತಿ ನನ್ನನ್ನು ಕೈಹಿಡಿದು ಮುನ್ನಡೆಸುವಂತಿದೆ. ಸರಳ ಭಾಷೆಯಲ್ಲಿ ಪ್ರತಿಯೊಬ್ಬರಿಗೂ ತಿಳಿಯುವಂತೆ ಶ್ರೀ ಸಿರಿಧಾನ್ಯ ನಡೆದು ಬಂದ ಹಾದಿಯನ್ನು ಬಿಚ್ಚಿಟ್ಟಿದ್ದಾನೆ. ಇದರಲ್ಲಿನ ಗುಣ ವಿಶೇಷ, ಔಷಧೀಯ ಮಹತ್ವ, ಬೆಳೆಗಳ ವೈಶಿಷ್ಟ್ಯ ಎಲ್ಲವನ್ನೂ ಹೇಳಿದ್ದಾನೆ. ಅಷ್ಟೇ ಅಲ್ಲ ತಿಂದದ್ದು ಜೀರ್ಣವಾಗುವ ಬಗೆಯನ್ನೂ ಆಸ್ಪತ್ರೆಯಿಂದ ದೂರವಿರುವ ವಿಧಾನವನ್ನು ತಿಳಿಸಿದ್ದಾನೆ.

ಶ್ರೀಧರಮೂರ್ತಿಯದ್ದು ಇದು ಮೊದಲನೆಯ ಕೃತಿಯೇನೂ ಅಲ್ಲ. ಈಗಾಗಲೇ ಸಿರಿಧಾನ್ಯ ಅಡುಗೆ, ಬರಗಾಲದ ಮಿತ್ರ ಸಿರಿವಂತಿಕೆಯ ಸಿರಿಧಾನ್ಯಗಳು, ಕಾಡು ಕೃಷಿ – ಡಾ ಖಾದರ್ ರವರ ಪ್ರಯೋಗ ಹೀಗೆ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾನೆ.

ಆಹಾರ – ಆರೋಗ್ಯ – ಆಸ್ಪತ್ರೆ – ಮಾರಾಟಗಾರ ಹೀಗೆ ಮನುಷ್ಯನನ್ನು ಇನ್ನಿಲ್ಲವಾಗಿಸಿಬಿಡುವ  ಜಾಲದ ಮಧ್ಯೆ ಜನರ ಉತ್ತಮ ಬದುಕಿಗಾಗಿ ಶ್ರಮಿಸುತ್ತಿರುವ ಶ್ರೀಧರಮೂರ್ತಿ ಇದ್ದಾನೆ ಎನ್ನುವುದೇ ಖುಷಿಯ ಸಂಗತಿ.

ಸಮಾಜದ ಸ್ವಾಸ್ಥ್ಯಕ್ಕಾಗಿ ಬದುಕುತ್ತಿರುವ ಶ್ರೀಧರಮೂರ್ತಿಯನ್ನು ಅಭಿನಂದಿಸುತ್ತೇನೆ.

ಓಹ್! ಮರೆತೆ..
ಒಂದಿಷ್ಟು ತಿಂಗಳಾದ ನಂತರ ಮತ್ತೆ ಸಂಪರ್ಕಿಸುತ್ತೇನೆ. ಸಿರಿಧಾನ್ಯ ತಿಂದು ಬದಲಾದ ನನ್ನೊಡನೆ ‘ಸೆಲ್ಫಿ’ ತೆಗೆಸಿಕೊಳ್ಳಲು ಬನ್ನಿ..

 

‍ಲೇಖಕರು avadhi

June 8, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ರಘುನಾಥ

    ನಾನು ಶುರು ಮಾಡಿ (ಸಿರಿಧಾನ್ಯ) ಆರು ತಿಂಗಳಿನಿಂದ ಐದು ಕೇಜಿ ತೂಕ ಕಡಿಮೆಯಾಗಿದೆ.ನಿಮಗೂ ಫಲಕೊಡಲಿ ಎಂದು ಹಾರೈಸುವೆ

    ಪ್ರತಿಕ್ರಿಯೆ
  2. Kaligananath Gudadur

    Sir, I have been following Siridhanya meals once a day since a few months. It’s simply digestible and desirable.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: