ಅಂಬಿಯ ಬಗ್ಗೆ ಬರೆದಷ್ಟೂ ಮುಗಿಯದು..

ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ….

ವಿನಯಾ ನಾಯಕ್ 

ಅಂಬಿ ನಮ್ಮನೆಯ ಆಪ್ತ ಸಹಾಯಕಿ. ಅವರ ಮನೆ ನಮ್ಮ ಮನೆಯಿಂದ ತುಸು ದೂರದಲ್ಲಿದೆ. ಅವರು ನಿತ್ಯ ಬಂದು ಮನೆ ಸ್ವಚ್ಛತೆ ಕೆಲಸ ಮಾಡಿ ಕೊಡುವದರಿಂದ ನಮಗೆ ಇನ್ನಿತರ ಕಾರ್ಯಗಳನ್ನು ಸರಾಗವಾಗಿ ಮಾಡಿಕೊಂಡು ಹೋಗಲು ನೆರವಾಗುತ್ತದೆ.

ಅವರು ಆರ್ಥಿಕವಾಗಿ ತೀರಾ ಬಡವರು. ಹಾಗಂತ ಅನಗತ್ಯವಾಗಿ ಎಂದಿಗೂ ದುಡ್ಡು ತೆಗೆದುಕೊಳ್ಳುವದಿಲ್ಲ. ನಾನಾಗೇ ಕೆಲವೊಮ್ಮೆ ಅವರ ಸಂಬಳ ಬಿಟ್ಟು ತುಸು ಸಹಾಯವಾಗಲೆಂದು ಜಾಸ್ತಿ ಹಣ ಕೊಡಲು ಹೋದರೂ ‘ಬೇಡ’ ಎನ್ನುತ್ತಾರೆ.

ಓದಿದವರಲ್ಲ. ಹೊರ ಜಗತ್ತಿನ ಜ್ಞಾನ ಹೆಚ್ಚಿಲ್ಲ. ‘ವರದಕ್ಷಿಣೆ ಕೊಡಲು ದುಡ್ಡಿಲ್ಲದ ಕಾರಣ ನಮ್ಮಪ್ಪನಿಗೆ ನನ್ನ ಮದುವೆ ಮಾಡಲಾಗಲಿಲ್ಲ’ ಎನ್ನುತ್ತಾರೆ. ಆಕೆಗೀಗ ಬಹುಷಃ 45ರ ಆಸುಪಾಸು.

ಅಂಬಿಗೆ ಗಿಡಗಳು, ಪ್ರಾಣಿಗಳೆಂದರೆ ತುಂಬ ಪ್ರೀತಿ. ಅವರು ಕೆಲಸಕ್ಕೆ ಬರುವದಕ್ಕಿಂತ ಮುಂಚೆ ಮನೆಯಲ್ಲಿ ಹೆಚ್ಚುಳಿದ ಅಡಿಗೆ ಪದಾರ್ಥ ಚೆಲ್ಲಿಬಿಡುತ್ತಿದ್ದೆ. ಅವರು ಬಂದ ನಂತರ, ಮನೆ ಹಿಂಭಾಗದಲ್ಲೊಂದು ಪುಟ್ಟ ಪಾತ್ರೆ ಇಟ್ಟು ಉಳಿದ ಆಹಾರವೆಲ್ಲ ಅದರಲ್ಲಿ ಹಾಕಿಬಿಡಿ, ಬೆಕ್ಕು ನಾಯಿ,ಕಾಗೆಗಳಿಗಾಗುತ್ತದೆ ಎಂದರು. ಏನನ್ನೂ ವ್ಯರ್ಥ ಮಾಡಬಾರದೆಂಬ ಆಕೆಯ ನಿಯಮವೀಗ ನನಗೂ ತುಸು ಅಭ್ಯಾಸವಾಗಿದೆ.

ಏನೂ ಓದದಿದ್ದರೂ, ತನ್ನೂರು ಬಿಟ್ಟು ಹೊರ ಜಗತ್ತನ್ನೇ ಕಾಣದಿದ್ದರೂ, ಆಕೆಯ ವಿಚಾರಗಳು, ಪರಿಸರ ಪ್ರೀತಿ, ಮನುಜರೆಲ್ಲ ಸಮಾನರೆಂಬ ನಂಬಿಕೆಗಳು ನನ್ನಲ್ಲಿ ಅಚ್ಚರಿ ಮೂಡಿಸುತ್ತವೆ. ಅವರ ಮನೆಯಲ್ಲಿ ಒಟ್ಟು ಆರು ಜನರಿದ್ದಾರೆ. ಅವರಿಗೇ ದಿನನಿತ್ಯದ ವೆಚ್ಛಗಳನ್ನು ನಿಭಾಯಿಸುವುದು ಕಷ್ಟ. ಆದರೂ ಅವರ ಮನೆಯಲ್ಲಿ ಏನಿಲ್ಲವೆಂದರೂ ಆರೇಳು ನಾಯಿಗಳು, ನಾಲ್ಕೈದು ಬೆಕ್ಕುಗಳಿವೆಯಂತೆ. ರಸ್ತೆಯಲ್ಲಿ ಊಟವಿಲ್ಲದೇ ಕೃಷವಾದ ನಾಯಿ ಬೆಕ್ಕುಗಳೇನಾದರೂ ಕಂಡರೆ ಅಂಬಿಯ ‘ತಮ್ಮ’ ಮನೆಗೇ ಕರೆತಂದು ಬಿಡುವದಂತೆ. ಆಕೆ ನಮ್ಮನೆಯ ಗೇಟು ತೆಗೆದು ಬರುತ್ತಿದ್ದರೆ ಸಾಕು ಎಲ್ಲೆಲ್ಲಿಂದಲೋ ಬೆಕ್ಕು ನಾಯಿ ಓಡೋಡಿ ಬರುತ್ತವೆ. ಅದೇನೋ ಪ್ರಾಣಿಗಳ ಜೊತೆ ವಿಶೇಷ ನಂಟು ಅಂಬಿಗೆ.

ಕೆಲ ದಿನಗಳ ಹಿಂದೆ ಕೆಲಸಕ್ಕೆ ಬಂದವರು ತುಸು ಮಂಕಾಗಿದ್ದರು. ಆಮೇಲೆ ತಾವಾಗಿಯೇ ಹೇಳಿದರು. “ನಮ್ಮನೆಯಲ್ಲಿ ನಿನ್ನೆ ಎರಡು ನಾಯಿ ಸತ್ತವು. ಇವತ್ತು ಮೂರು. ಯಾರೋ ವಿಷ ಹಾಕಿದರು. ಪಾಪ ನಾವವನ್ನು ನಮ್ಮ ಮನೆಗೆ ತಂದು ತಪ್ಪು ಮಾಡಿದೆವು. ಬೇರೆಲ್ಲಾದರೂ ಇದ್ದರೆ ಬದುಕಿಕೊಳ್ಳುತ್ತಿದ್ದವು” .

ವಿಷ ಹಾಕಿದ್ದೇ ಅಂತ ಹೇಗೆ ಹೇಳುತ್ತೀರಿ! ಎಂದೆ.

ಇಲ್ಲಾ ಪಕ್ಕದ ದೊಡ್ಡ ಮನೆಯವರು ಕೇಳುತ್ತಿದ್ದರು “….ಇನ್ನೂ ನಾಯಿ ಬೆಕ್ಕು ಯಾವುದಾದರೂ ಉಳಿದುಕೊಂಡಿವೆಯಾ ನಿಮ್ಮನೆಯಲ್ಲಿ….” ಅಂತ ನಿಟ್ಟುಸಿರುಬಿಟ್ಟರು.

ಇದೆಲ್ಲ ಕೇಳಿದ ಮೇಲೆ ಮನಸ್ಸಿಗೆ ಶಾಂತಿಯೇ ಇಲ್ಲದಂತಾಗಿತ್ತು ನನಗೆ ಒಂದೆರಡು ದಿನ.

ನಾನು ಕಂಡಂತೆ ಅಂಬಿ ತುಂಬ ಒಳ್ಳೆಯ ಹೆಂಗಸು. ಯಾರನ್ನೂ ನೋಯಿಸಲಿಚ್ಚಿಸದ, ಮತ್ತು ಯಾರಿಗೂ ಕೆಡುಕು ಮಾಡದವರು.ನಿತ್ಯ ಕೆಲಸದ ಮಧ್ಯೆ ಒಂದೆರಡು ನಿಮಿಷ ಮಾತನಾಡುತ್ತೇನೆ ಅವರ ಜೊತೆ.

ಆಕೆಯ ಸಾನಿಧ್ಯ ನನ್ನೊಳಗೊಂದು ಒಳ್ಳೆಯತನದ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ.

ಅಂಬಿಯ ಬಗ್ಗೆ ಬರೆದಷ್ಟೂ ಮುಗಿಯದು. ಅವರು ನಮ್ಮನೆಯಂಗಳದಲ್ಲಿ ನೆಟ್ಟ ಸಂಜೆಮಲ್ಲಿಗೆಯ ಗಿಡದ ತುಂಬ ಈಗ ಹೂವುಗಳು ಅರಳುತ್ತಿವೆ.

‍ಲೇಖಕರು avadhi

June 9, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: