ಎರಡು ಪಿಎಚ್.ಡಿ. ಮತ್ತು ಒಂದು ಅವಾರ್ಡ್

ನೆನಪು 13
ಅಣ್ಣನ ಎರಡು ಪಿಎಚ್.ಡಿ. ಮತ್ತು ಒಂದು ಅವಾರ್ಡ್

ಸಾಮಾನ್ಯವಾಗಿ ಒಂದು ಪಿಎಚ್.ಡಿ ಮಾಡಿ ಮುಗಿಸುವುದರಲ್ಲೇ ಹೈರಾಣಾಗಿ ಹೋಗುತ್ತೇವೆ. ಅಂತದ್ದರಲ್ಲಿ ಅಣ್ಣ ಎರಡು ಪಿಎಚ್.ಡಿ. ಮಾಡಿ ಮುಗಿಸಿದ. ಆದರೆ ಅವಾರ್ಡ್ ಆಗಿದ್ದು ಒಂದಕ್ಕೆ ಮಾತ್ರ !

ಹಿಂದೆ ವಿಶ್ವವಿದ್ಯಾಲಯದ ಅಧ್ಯಾಪಕರು ಮಾತ್ರ ಪಿಎಚ್.ಡಿ ಗೆ ಮಾರ್ಗದರ್ಶಕರಾಗಬಹುದಾಗಿತ್ತು. ಕಾಲೇಜು ಅಧ್ಯಾಪಕರಿಗೂ ಈ ಅವಕಾಶ ನೀಡಬೇಕೆಂಬ ಒತ್ತಾಯಕ್ಕೆ ಮಣಿದು ನಿಯಮವನ್ನು ಸಡಿಲಿಸಲಾಗಿತ್ತು. ಇದರ ಭಾಗವಾಗಿ ಜಾನಪದ ತಜ್ಞ ಡಾ. ಎನ್. ಆರ್. ನಾಯಕರಿಗೆ ಧಾರವಾಡದ ಕರ್ನಾಟಕ ವಿ.ವಿ ಅಡಿಯಲ್ಲಿ ಪಿಎಚ್.ಡಿ. ಮಾರ್ಗದರ್ಶಕರಾಗುವ ಅವಕಾಶ ಸಿಕ್ಕಿತ್ತು. ಆ ಸಂದರ್ಭದಲ್ಲಿ ಅವರು ಹೊನ್ನಾವರ ಕಾಲೇಜಿನ ಪ್ರಾಚಾರ್ಯರಾಗಿದ್ದರು. ಪದವಿ ಮಾಡುವಾಗ ಅವರು ನನ್ನ ಗುರುಗಳು ಕೂಡ. ಕಾಲೇಜನ್ನು ವಿದ್ಯಾರ್ಥಿಸ್ನೇಹಿ ಮಾಡುವುದಕ್ಕೆ ಸಾಕಷ್ಟು ಶ್ರಮಿಸಿದ್ದರು.

ಕಾಲೇಜಿನ ಆಚೆ ಕೂಡ ಅವರ ಕಾರ್ಯಕ್ಷೇತ್ರ ಹಬ್ಬಿಕೊಂಡಿತ್ತು. ಹೊನ್ನಾವರದಲ್ಲಿ ನಾಟಕ ತಂಡ ಕಟ್ಟುವುದರಿಂದ ಪ್ರಾರಂಭವಾಗಿ ಜಾನಪದ ಪ್ರಕಾಶನ, ಕಾಲೇಜಿನಲ್ಲಿ ಕನ್ನಡ ಸಂಘ, ನಗರದಲ್ಲಿ ಕರ್ನಾಟಕ ಸಂಘ…. ಇತ್ಯಾದಿಗಳನ್ನು ಕೂಡ ಅವರು ಮುನ್ನಡೆಸಿದ್ದರು. ಆಗೆಲ್ಲಾ ಅಣ್ಣ ಅವರ ಪಕ್ಕಾ ಬೆಂಬಲಿಗನಾಗಿದ್ದ.

‘ನಾಗರಿಕ’ ಪತ್ರಿಕೆಯ ಸಂಪಾದಕರಾದ ಜಿ. ಆರ್. ಪಾಂಡೇಶ್ವರ, ವಿ.ಸೀತಾರಾಮಯ್ಯ, ಜಿನದೇವ ನಾಯಕ, ಜಿ.ಎಸ್. ಅವಧಾನಿ, ಅಣ್ಣ, ಎನ್.ಆರ್. ನಾಯಕ, ಎ.ಕೆ. ಶೇಟ್, ಜಿ. ಯು. ಭಟ್, ಡಿ.ಡಿ ನಾಯ್ಕ .. ಹೀಗೆ ಹಲವರು ಹೊನ್ನಾವರ ತಾಲೂಕನ್ನು ಸಾಂಸ್ಕೃತಿಕವಾಗಿ ಜೀವಂತ ಇಡಲು ಇನ್ನಿಲ್ಲದ ಪ್ರಯತ್ನ ಮಾಡಿದವರು. ಎನ್.ಆರ್. ನಾಯಕರು ಆ ಕಾಲದ(ಈಗಲೂ) ಪ್ರಖ್ಯಾತ ಜಾನಪದ ವಿದ್ವಾಂಸರು ಕೂಡ. ಒಂದು ವಿಶ್ವವಿದ್ಯಾನಿಲಯ ಮಾಡಬಹುದಾದ ಕೆಲಸವನ್ನು ಅವರು ಮತ್ತು ಅವರ ಸಂಗಾತಿ ಶಾಂತಿ ನಾಯಕ ಸೇರಿ ಮಾಡಿದ್ದಾರೆ. ‘ಜಾನಪದ ಪ್ರಕಾಶನ’ ಮೂಲಕ ಅವರ ಜಾನಪದ / ಜಾನಪದೇತರ ಸಾಹಿತ್ಯವನ್ನು ಪ್ರಕಟಿಸಿದ್ದಾರೆ. ಅಣ್ಣನಿಗೆ ಅವರೊಂದಿಗೆ ತುಂಬಾ ಸ್ನೇಹ, ಗೌರವಗಳಿದ್ದವು. ಅಣ್ಣನ ಕುರಿತು ಅವರಿಗೂ ಅಷ್ಟೇ ಪ್ರೀತಿ ಗೌರವ ಇತ್ತು.

ಹಾಗಾಗಿ ಡಾ. ನಾಯಕರು ತನ್ನ ಮೊದಲ ಸಂಶೋಧನಾ ವಿದ್ಯಾರ್ಥಿಯಾಗಿ ಅಣ್ಣನನ್ನು ಮತ್ತು ಪ್ರೊ. ಜಿ. ಎಸ್. ಅವಧಾನಿಯವರನ್ನು ಆಯ್ಕೆ ಮಾಡಿಕೊಂಡರು. ಜಿ. ಎಸ್. ಅವಧಾನಿಯವರು ‘ಜಿ. ಎಸ್. ಶಿವರುದ್ರಪ್ಪನವರ ಕಾವ್ಯ’ದ ಕುರಿತು ಮತ್ತು ಅಣ್ಣ ‘ನಿರಂಜನರ ಸಾಹಿತ್ಯ’ದ ಕುರಿತು ಸಂಶೋಧಕರಾಗಿ ಬಹುಶಃ 1984-85 ರಲ್ಲಿ ತಮ್ಮ ಹೆಸರು ನೊಂದಾಯಿಸಿದರು. ಎಷ್ಟೇ ಒತ್ತಾಯ ಮಾಡಿದರೂ ಪ್ರೊ. ಅವಧಾನಿಯವರು ತನ್ನ ಥೀಸಿಸ್‍ನ್ನು ಬರೆದು ಮುಗಿಸಲಿಲ್ಲ. ಆದರೆ ಅಣ್ಣ ಹಠ ಹಿಡಿದು ಮೂರೋ-ನಾಲ್ಕೋ ವರ್ಷಗಳಲ್ಲಿ ಬರೆದು ಮುಗಿಸಿದ. ಅವಧಾನಿಯವರದು ಬರೆದು ಮುಗಿದ ಮೇಲೆ ಒಟ್ಟಿಗೆ ಒಪ್ಪಿಸಿದರಾಯ್ತು ಎಂದು ವರ್ಷಗಟ್ಟಲೆ ಕಾದಿದ್ದ; ಉಪಯೋಗ ಆಗಲಿಲ್ಲ.

ಹಗಲಿಡೀ ಶಾಲೆ, ರಾತ್ರಿ ಕೆಲವು ದಿನ ಅಲ್ಲಿ ಇಲ್ಲಿ ತಾಳಮದ್ದಲೆ, ಬಂಡಾಯ ಸಾಹಿತ್ಯ ಸಂಘಟನೆಯ ಕೆಲಸ, ಒಂದಿಷ್ಟು ಕಾರ್ಯಕ್ರಮಕ್ಕೆ ಭಾಷಣಕ್ಕೆ ಹೋಗುವುದು….ಇವೆಲ್ಲದರ ಮಧ್ಯೆ ಆತ ರಾತ್ರಿ 12-1 ಗಂಟೆಯವರೆಗೆ ಕೂತು ಓದಿ “ನಿರಂಜನರ ಕಾದಂಬರಿಗಳು ಮತ್ತು ಸಾಮಾಜಿಕ ಪ್ರಜ್ಞೆ” ಎನ್ನುವ ವಿಷಯದ ಕುರಿತು ಸುಮಾರು 350 ಪುಟದ ಸಂಪ್ರಬಂಧವನ್ನು 1988 ರಲ್ಲಿ ಬರೆದೊಪ್ಪಿಸಿದ.

ನಿರಂಜನರ ಎಲ್ಲಾ ಪುಸ್ತಕಗಳು ಆಗ ಸಿಗುತ್ತಿರಲಿಲ್ಲ. ಸ್ವತಃ ನಿರಂಜನರಲ್ಲೂ ಇರಲಿಲ್ಲ. ಮಂಗಳೂರು, ಮೈಸೂರು, ಹೀಗೆ ಹಲವು ವಿ.ವಿ. ಗಳಲ್ಲಿ ಪುಸ್ತಕಕ್ಕಾಗಿ ಓಡಾಡಿದ; ಹಲವು ಸ್ನೇಹಿತರ ಮೂಲಕ ತರಿಸಿಕೊಂಡು ಓದಿದ. ಹೆಚ್ಚು ಕಡಿಮೆ ಅವರ ಎಲ್ಲಾ ಕೃತಿಗಳನ್ನು ಓದಿ ಮುಗಿಸುವುದೇ ಒಂದು ಸಾಹಸದ ಕೆಲಸ. ಓದಿದ ಮುಖ್ಯ ಭಾಗಗಳನ್ನು ಆತ 200 ಪುಟದ ಹತ್ತಾರು ಪಟ್ಟಿಯಲ್ಲಿ ಟಿಪ್ಪಣಿ ಮಾಡಿಟ್ಟುಕೊಳ್ಳುತ್ತಿದ್ದ. ಒಮ್ಮೊಮ್ಮೆ ಅಪರೂಪದ ಪುಸ್ತಕವನ್ನು ಇಡಿಯಾಗಿಯೇ ಅಥವಾ ಭಾಗಶಃ ಕೈಯಿಂದಲೇ ಪ್ರತಿ ಮಾಡಿಟ್ಟುಕೊಂಡಿದ್ದೂ ಇದೆ. ಈಗಲೂ ಹಲವು ಟಿಪ್ಪಣಿ ಪಟ್ಟಿಗಳು ಮನೆಯಲ್ಲಿದೆ. ಅವುಗಳನ್ನೆಲ್ಲಾ ಸೇರಿಸಿದರೆ ಇನ್ನೂ ಒಂದೋ ಎರಡೋ ಮಹಾಪ್ರಬಂಧಕ್ಕೆ ಸಾಕಾಗಬಹುದು.

ಆಗ ಬರಹವನ್ನು ಟೈಪ್ ಮಾಡಿಸುವುದು ಒಂದು ರಾಮಾಯಣದ ಕೆಲಸವೆ. ಈಗಿನಂತೆ ಕಂಪ್ಯೂಟರ್ ಇರಲಿಲ್ಲ. ಟೈಪ್‍ರೈಟರ್‍ನಲ್ಲಿ ಹೊಡೆಯಬೇಕು. ಆಗ ಅವನ ಸಹಾಯಕ್ಕೆ ಬಂದಿದ್ದು ಹೊನ್ನಾವರದ ‘ತೇಲಂಗ ಕಂಪ್ಯೂಟರ್ಸ’ನ ವಿಠ್ಠಲದಾಸ್ ತೇಲಂಗ್. ಇಡೀ ಥೀಸಿಸ್‍ನ್ನು ತಿಂಗಳೊಪ್ಪೊತ್ತಿನಲ್ಲಿ ಟೈಪ್ ಹೊಡೆದು ಮುಗಿಸಿದರು. 4 ಪ್ರತಿ ಒಪ್ಪಿಸಬೇಕೆಂದರೆ ಕಾರ್ಬನ್ ಕಾಪಿ ಮಾಡಬೇಕು. ಆಗ ಝೆರಾಕ್ಸ್ ಮಾಡುವ ಪದ್ಧತಿ ಕೂಡ ಜನಪ್ರಿಯವಾಗಿರಲಿಲ್ಲ. 4 ಪ್ರತಿಯೆಂದರೆ 2 ಬಾರಿ (1+1) ಟೈಪ್ ಮಾಡಬೇಕು. ಒಮ್ಮೆ ಟೈಪ್ ಆದ ಮೇಲೆ ತಿದ್ದಲು ಅವಕಾಶ ಇರಲಿಲ್ಲ. ವೈಟ್ನರ್ ಹಾಕಿ ಕೈಯಲ್ಲಿಯೇ ಬರೆಯಬೇಕು. ಥೀಸಿಸ್‍ನ ಬುಕ್ ಬೈಂಡಿಂಗ್ ಕೂಡ ಹೊನ್ನಾವರದಲ್ಲಿ ಇರಲಿಲ್ಲ. ಧಾರವಾಡಕ್ಕೇ ಹೋಗಬೇಕಾಗಿತ್ತು. ಒಂದು ರೀತಿಯಲ್ಲಿ ಆಗ ಪ್ರಬಂಧ ಬರೆದಿರುವುದಕ್ಕೆ ಆಗುವ ಶ್ರಮಕ್ಕಿಂತ ಹೆಚ್ಚು ಶ್ರಮ ಟೈಪಿಂಗ್ ಮತ್ತು ಬುಕ್‍ಬೈಂಡಿಂಗ್ ಮಾಡಲು ತಾಗುತ್ತಿತ್ತು.

ಇದಕ್ಕೆ ಸಂಬಂಧಿಸಿದ ಎಲ್ಲಾ ಕಾಗದ ಪತ್ರದ ಕೆಲಸ ಮುಗಿಸಿ ಧಾರವಾಡ ವಿ.ವಿ.ಗೆ 1988 ರಲ್ಲಿ ಸಂಶೋಧನಾ ಪ್ರಬಂಧ ಒಪ್ಪಿಸಲು ಹೋದರೆ “ನಿಮ್ಮ ರಿಜಿಸ್ಟ್ರೇಶನ್ ಕ್ಯಾನ್ಸಲ್ ಆಗಿದೆ. ನೀವು ಈ ಮಧ್ಯೆ ಮಧ್ಯಂತರ ಪ್ರಗತಿ ವರದಿ ಕೊಡಬೇಕಾಗಿತ್ತು. ಅದನ್ನು ಕೊಟ್ಟಿಲ್ಲ…” ಇತ್ಯಾದಿ ಇತ್ಯಾದಿ….ಹಲವು ಸಬೂಬನ್ನು ಮುಂದಿಟ್ಟು ದೊಡ್ಡ ಶಾಕ್ ಕೊಟ್ಟರು. ಆದರೆ ಈತ ಮಧ್ಯಂತರ ವರದಿಯನ್ನು ಮಾರ್ಗದರ್ಶಕರಿಗೆ ಒಪ್ಪಿಸಿದ್ದ. ವಿ ವಿ ಗೂ ಕಳಿಸಿದ್ದ ಪೋಸ್ಟ್ ಮೂಲಕ.

ಡಾ. ನಾಯಕರ ಮೊದಲ ಅಭ್ಯರ್ಥಿ ಇವನಾಗಿರುವದರಿಂದ ಅವರಿಗೂ ಬಹುಶಃ ಈ ಕುರಿತು ಅಷ್ಟು ಮಾಹಿತಿ ಇದ್ದಿರಲಿಕ್ಕಿಲ್ಲ. ಕುಲಪತಿಗಳನ್ನು ಕೂಡ ಭೇಟಿಯಾಗಿ ವಿನಂತಿಸಿದ; ಹಾರಿಕೆಯ ಉತ್ತರ ಬಂತು. ಹಾಗೆ ಒಪ್ಪಿಸಿಕೊಳ್ಳುವಂತೆ ಕುಲಪತಿಗಳಿಗೆ ಶಿಫಾರಸ್ಸು ಮಾಡುವಂತವರು ಅವನಿಗೆ ಯಾರೂ ಇರಲಿಲ್ಲ. 5 ವರ್ಷಗಳಿಂದ ಕಾಲಕಾಲಕ್ಕೆ ವಿ.ವಿ.ಗೆ ಶುಲ್ಕವನ್ನು ಕೂಡ ತುಂಬಿದ್ದ. ನನ್ನ ರಜಿಸ್ಟ್ರೇಶನ್ ಕ್ಯಾನ್ಸಲ್ ಆಗಿದ್ದರೆ ಪ್ರತಿ 6 ತಿಂಗಳಿಗೊಮ್ಮೆ ನಾನು ತುಂಬಿದ ಹಣ ಎಲ್ಲಿ? ಯಾಕೆ ಮೊದಲೇ ನನಗೆ ತಿಳಿಸಿಲ್ಲ? ನನ್ನ ಶ್ರಮ ಮತ್ತು ಹಣ ಎರಡೂ ವ್ಯರ್ಥವಾಯಿತು ಎಂದು ಹೇಳಿದರೆ “ಯಾವುದೇ ಹಣ ಬಂದರೂ ನಮ್ಮ ವಿ.ವಿ ಯ ಹುಂಡಿಗೆ ಸೇರುತ್ತದೆ. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ” ಎಂದು ಉತ್ತರಿಸಿದರು. ಕೊನೆಗೂ ಧಾರವಾಡ ವಿ.ವಿ. ಇವನ ಸಂಶೋಧನ ಪ್ರಬಂಧವನ್ನು ಕ್ಷುಲ್ಲಕ ತಾಂತ್ರಿಕ ಕಾರಣದಿಂದ ತಿರಸ್ಕರಿಸಿತು.

“4 ದಿನ ಧಾರವಾಡದಲ್ಲಿ ಕುಳಿತು ಪ್ರತಿಯನ್ನು ಬುಕ್‍ಬೈಂಡ್ ಮಾಡಿಸಿ, ಪ್ರತಿಯೊಂದರಲ್ಲಿ ಕಣ್ತಪ್ಪಿನಿಂದ ಉಳಿದುಬಿಟ್ಟಿರುವ ತಪ್ಪುಗಳನ್ನು ತಿದ್ದಿಕೊಂಡು ಹೋಗುವುದರೊಳಗೆ ಹೈರಾಣಾಗಿದ್ದೆ; ನಿಲ್ಲಲಾರದಷ್ಟು ಸೊಂಟ ನೋವು ಬಂದಿತ್ತು” ಎಂದು ಆತ ಹೇಳುತ್ತಿದ್ದ. ಪಾಪ, ಮೂಲ ಪ್ರತಿಯೊಂದಿಗೆ ಅಣ್ಣ ವಾಪಾಸಾದ. ತುಂಬಾ ಬೇಸರ ಮಾಡಿಕೊಂಡ; ಪಿಎಚ್.ಡಿ ಆಗಿಲ್ಲ ಎನ್ನುವ ಕಾರಣದಿಂದಲ್ಲ. “ಪಿಎಚ್.ಡಿ ಮಾಡುತ್ತೇನೆಂದು ಕೆಲವರಿಗೆ ಹೇಳಿದ್ದೇನೆ. ಈಗ ಅವರು ಕೇಳಿದರೆ ಏನು ಹೇಳುವುದು? ಮರ್ಯಾದೆಯ ಪ್ರಶ್ನೆ ಆಗಿದೆ. ಅಲ್ಲಿ ಇಲ್ಲಿ ಸಾಲ ಮಾಡಿ ಒಂದಿಷ್ಟು ಹಣ ಕೂಡಾ ಖರ್ಚಾಗಿದೆ. ಸುಮ್ಮನೆ ಒಂದಿಷ್ಟು ಶ್ರಮ ಹಾಳು. ಅದರ ಬದಲು ಬೇರೆ ಏನಾದರೂ ಕೆಲಸ/ಬರಹ ಮಾಡಬಹುದಾಗಿತ್ತು” ಎನ್ನುತ್ತಿದ್ದ.

3 ತಿಂಗಳ ಹಿಂದೆ ಥೀಸಿಸ್‍ನ ಸಾರಲೇಖ ಕಳುಹಿಸಿದಾಗಲಾದರೂ ಒಂದು ಪತ್ರ ಬರೆದು ತಮ್ಮ ನೋಂದಣಿ ರದ್ದಾಗಿದೆ ಎಂದು ಹೇಳಬಹುದಾಗಿತ್ತು. ಶುದ್ದ ಬೇಜವಾಬ್ದಾರಿಯ ಆಡಳಿತ ವ್ಯವಸ್ಥೆಯಿಂದ ಈತ ಸಂತ್ರಸ್ತನಾಗಿದ್ದ. ಈಗಲೂ ಹಾಗೆಯೆ. ಅಲ್ಲಿಯ ಪಿಎಚ್.ಡಿಯ ಗುಣಮೌಲ್ಯವೂ ಕಡಿಮೆ ಆಗಿದೆ. ಅದು ಪಠ್ಯ ಪುಸ್ತಕದಲ್ಲೂ, ಪ್ರಸಾರಾಂಗದ ಪ್ರಕಟನೆಯಲ್ಲೂ ಮುಂದುವರಿದಿದೆ. ವಿಶ್ವವಿದ್ಯಾಲಯವೊಂದು ಹೊಂದುತ್ತಿರುವ ಅಧಃಪತನದ ಸೂಚನೆ ಇದು. ಹೀಗೆ ಒಂದೆರಡು ವರ್ಷದ ಹಿಂದೆ ಅಂಕೋಲೆಯ ಉದ್ಯಮಿ ಆರ್.ಎನ್.ನಾಯಕ ಅವರಿಗೆ ಗೌರವ ಡಾಕ್ಟರೇಟ್ ಕೊಡುವ ಹಂತಕ್ಕೂ ಹೋಗಿದ್ದನ್ನು ನಾವು ನೋಡುತ್ತೇವೆ. ಹಲವರ ಪ್ರತಿಭಟನೆ ಮತ್ತು ಒತ್ತಾಯದ ಮೇರೆಗೆ ಹಿಂತೆಗೆದುಕೊಳ್ಳಲಾಗಿತ್ತು.

ಹೀಗೆ ಈತನ ಪಿಎಚ್.ಡಿ ಪುರಾಣ ತುಂಬಾ ಜನರಲ್ಲಿ ಬೇಸರವನ್ನು ಮತ್ತು ಆಕ್ರೋಶವನ್ನು ಹುಟ್ಟಿಸಿತು. ಹೇಗೊ ಈ ಸುದ್ದಿ ಡಾ. ಬಿ ಎ ವಿವೇಕ ರೈ ಅವರ ಗಮನ ಸೆಳೆಯಿತು. ಅವರಿಗೂ ಇದರಿಂದ ಬೇಸರ ಆಗಿರಬೇಕು. ಅಣ್ಣನಿಗೆ ಕರೆ ಕಳುಹಿಸಿದರು. ಆಗ ಅವರು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಅಧ್ಯಕ್ಷರಾಗಿದ್ದರು. ತಮ್ಮ ವಿ.ವಿ ಯಲ್ಲಿಯೇ ಪಿಎಚ್.ಡಿ ನೊಂದಾಯಿಸಲು ಒತ್ತಾಯಿಸಿದರು. ಮಾರ್ಗದರ್ಶಕರಾದವರು ಅಣ್ಣನ ಬಂಡಾಯದ ಕಿರಿಯ ಗೆಳೆಯ ಡಾ. ಪುರುಷೋತ್ತಮ ಬಿಳಿಮಲೆಯವರು. ತನಗಿಂತ ಹಿರಿಯರಾದ ಆರ್. ವಿ. ಭಂಡಾರಿಯವರಿಗೆ ತಾನೇನು ಮಾರ್ಗದರ್ಶಕನಾಗುವುದೆಂದು ಅವರಿಗೂ ಮುಜುಗರ ಆಗಿರಬೇಕು. ಆದರೂ ಅವರ ಮಾರ್ಗದರ್ಶನದಲ್ಲಿ ಅಣ್ಣನ ಎರಡನೇ ಪಿಎಚ್.ಡಿ ಪ್ರಾರಂಭ ಆಯ್ತು.

ಹೇಗೂ ಈಗಾಗಲೇ ಬರೆದಿಟ್ಟ ಮಹಾಪ್ರಬಂಧ ಇದೆ. ಮತ್ತೇನು ಹೊಸದಾಗಿ ಬರೆಯಬೇಕಾಗಿಲ್ಲ. ಅಲ್ಪಸ್ವಲ್ಪ ಬದಲಾಯಿಸಿದರಾಯಿತು ಎಂದುಕೊಳ್ಳುತ್ತಿರುವಾಗಲೇ ಇನ್ನೊಂದು ವಿಪತ್ತು ಎದುರಾಯಿತು. ಅಲ್ಲಿ ಯಾರೋ ಒಬ್ಬರು ‘ನಿರಂಜನ’ರ ಕುರಿತು ಈಗಾಗಲೇ ಮಹಾಪ್ರಬಂಧ ಮಂಡಿಸಿರುವುದರಿಂದ ಈತ ತನ್ನ ವಿಷಯವನ್ನು ಬದಲಾಯಿಸಿಕೊಳ್ಳಬೇಕಾಯ್ತು. ‘ಕನ್ನಡ ಕಾದಂಬರಿಗಳಲ್ಲಿ ವರ್ಗ ಮತ್ತು ವರ್ಣ ಸಂಘರ್ಷ’ (ನಿರಂಜನ, ಕಟ್ಟೀಮನಿ, ಚದುರಂಗ ಮತ್ತು ವ್ಯಾಸರಾಯ ಬಲ್ಲಾಳರ ಕಾದಂಬರಿಯನ್ನು ಅನುಲಕ್ಷಿಸಿ) ಎನ್ನುವ ಇನ್ನಷ್ಟು ಹೆಚ್ಚು ವ್ಯಾಪ್ತಿಯುಳ್ಳ ವಿಷಯವನ್ನು ಆಯ್ದುಕೊಂಡ. ಮತ್ತೆ ಓದು…. ಬರವಣಿಗೆ ನಿಗದಿತ ವೇಳೆಯಲ್ಲಿ ಅಧ್ಯಯನ ಮುಕ್ತಾಯ. ಮೊದಲಿನ ತಪ್ಪು ಇಲ್ಲಿ ನಡೆದಿಲ್ಲ. ಹಾಗಾಗಿ 3 ಪ್ರತಿ ಸಲ್ಲಿಕೆಯೂ ಆಯಿತು.

ಇದರ ಮೌಲ್ಯಮಾಪಕರಾದ ಡಾ. ಮ ನ ಜವರಯ್ಯನವರು ಮತ್ತು ಡಾ. ಬಸವರಾಜ ಸಬರದ ಅವರು ಬಹುಬೇಗ ಮೌಲ್ಯಮಾಪನ ವರದಿ ನೀಡಿದರು. “ಈ ಮಹಾಪ್ರಬಂಧವು ತನ್ನ ವಿವೇಚನೆಗೆ ತೆಗೆದುಕೊಂಡಿರುವ ವಸ್ತು ವೈವಿಧ್ಯತೆಯಲ್ಲಿನ ಒಂದು ಮುಖ್ಯ ಗುಣಾಂಶವೆಂದರೆ ಈ ನಾಲ್ಕು ಜನ ಕಾದಂಬರಿಕಾರರ ಕೃತಿಗಳ ವಸ್ತುಗಳಲ್ಲಿಯ ಭಿನ್ನತೆಯ ವೈಶಿಷ್ಟ್ಯ. ನಿರಂಜನರು ಬಹುದೂರದ ವ್ಯವಸ್ಥೆಗಳಿಂದ ಕೃತಿಯ ವಸ್ತುವನ್ನು ಆಯ್ಕೆ ಮಾಡಿಕೊಂಡರೆ, ವ್ಯಾಸರಾಯ ಬಲ್ಲಾಳರು ತಮ್ಮದೇ ಜೀವನ ವ್ಯವಸ್ಥೆಯಲ್ಲೂ ಕೈಗಾರಿಕಾ ವಲಯದಲ್ಲಿನ ಜೀವನವನ್ನು ತೆಗೆದುಕೊಳ್ಳುತ್ತಾರೆ. ಹಾಗೆಯೇ ಚದುರಂಗರು ಜಾತಿ ಜಾತಿಗಳ ನಡುವಿನ ಘರ್ಷಣೆಯಲ್ಲಿನ ದುರ್ಬಲರ ಶೋಷಣೆಯನ್ನು ಚಿತ್ರಿಸುತ್ತಾ ಹೋಗುವುದನ್ನು ಸಂಶೋದಕರು ಮನ ಒಪ್ಪುವಂತೆ ವಿಮರ್ಶಿಸುತ್ತಾ ಹೋಗುತ್ತಾರೆ.” ಎಂದು ಮನಜ ಹೇಳಿದರು.

“ಆರ್. ವಿ. ಭಂಡಾರಿಯವರು ಕನ್ನಡ ಸಾಹಿತ್ಯಕ್ಕೆ ಅಪರಿಚಿತವಾಗಿದ್ದ ಹೊಸ ಸಂಶೋಧನೆ ಕೈಗೊಂಡು ಈ ಮಹಾಪ್ರಬಂಧದ ಮೂಲಕ ಅದನ್ನು ಯಶಸ್ವಿ ಗೊಳಿಸಿದ್ದಾರೆ. ಕನ್ನಡದ ಪ್ರಗತಿಶೀಲ ಸಾಹಿತ್ಯದ ಕುರಿತಂತೆ ಹೆಚ್ಚಿನ ಸಂಶೋಧನೆ ನಡೆದಿರಲಿಲ್ಲ. ಶ್ರೀ ಭಂಡಾರಿಯವರು ಈ ತಮ್ಮ ಸಂಶೋಧನಾ ಕಾರ್ಯದ ಮೂಲಕ ಪ್ರಗತಿಶೀಲ ಸಾಹಿತ್ಯದ ಹೊಸ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದ್ದಾರೆ. ವರ್ಗ ಮತ್ತು ವರ್ಣ ಸಂಘರ್ಷವನ್ನು ಗುರುತಿಸುವ ಇಲ್ಲಿಯ ಪ್ರಯತ್ನ ಬದುಕಿನ ಸಾಮಾಜಿಕ, ಸಾಂಸ್ಕ್ರತಿಕ ನೆಲೆಯಲ್ಲಿ ತುಂಬಾ ಮುಖ್ಯವಾಗುತ್ತದೆ. ಅಂಥ ಕಾರ್ಯವನ್ನು ಇಲ್ಲಿ ಯಶಸ್ವಿಯಾಗಿ ಮಾಡಲಾಗಿದೆ.” ಎಂದು ಡಾ. ಬಸವರಾಜ ಸಬರದರವರು ಹೇಳಿದ ಮಾತನ್ನು ಇಲ್ಲಿ ಗಮನಿಸಬಹುದು.

ಸೆಪ್ಟೆಂಬರ್ 1994 ರಲ್ಲಿ ಪಿಎಚ್.ಡಿ ಪದವಿ ಲಭಿಸಿತು. 1992 ರಲ್ಲಿ ನನ್ನ ಎಂ. ಎ ಕೂಡ ಮುಗಿದಿತ್ತು. ಹಾಗಾಗಿ ಸ್ವಲ್ಪ ಅಕ್ಷರ ತಿದ್ದುವಿಕೆ ಇತ್ಯಾದಿ ಕೆಲದಲ್ಲಿ ಸಹಕರಿಸಿದೆ. ಮೊದಲೊಂದು ಕೆಟ್ಟ ಅನುಭವ ಆಗಿದ್ದರಿಂದ ಈ ಬಾರಿ ಗೊಂದಲ ಆಗಲಿಲ್ಲ. ಡಾ. ಬಿಳಿಮಲೆಯವರು ವಿ.ವಿ ಯಲ್ಲಿಯೇ ಇರುವುದರಿಂದ ಕಾಲಕಾಲಕ್ಕೆ ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದರು. 1995ರಲ್ಲಿ ರಾಜ್ಯಪಾಲರು ಘಟಿಕೋತ್ಸವದಲ್ಲಿ ಅವಾರ್ಡ್ ನೀಡಿದಾಗ (ಅಣ್ಣ ಹೋಗಿರಲಿಲ್ಲ) ಅಣ್ಣನ ನಿವೃತ್ತಿ ಕೂಡ ಆಗಿತ್ತು. ‘ಪಿಎಚ್.ಡಿಯಿಂದ ನಿಮ್ಮ ಪಗಾರ ಹೆಚ್ಚಾಗುತ್ತದೆಯೇ?’ ಎಂದು ಕೇಳುವವರು ಹಲವರಾದರೆ ‘ಬಹುಶಃ ಇದು ನೌಕರಿಯಲ್ಲಿನ ಭಡ್ತಿಗೆ ಸಹಾಯಕವಾಗಬಹುದೆಂದು’ ಕೆಲವರು ತಿಳಿದು ಅಣ್ಣನಿಗೆ ಅಭಿನಂದನೆ ಸಲ್ಲಿಸುತ್ತಿದ್ದರು.

ನಂತರ ಮೊದಲ ಪಿಎಚ್.ಡಿ ಬರಹವನ್ನು ಕೊಡಗಿನ ಕಾಲೇಜು ಅಧ್ಯಾಪಕರೊಬ್ಬರು ( ಮೂಲತಃ ನಮ್ಮ ತಾಲೂಕಿನವನು.) ರೆಫರೆನ್ಸಿಗೆಂದು ತೆಗೆದುಕೊಂಡು ಹೋದವರು ಅದನ್ನೇ ಹಿಂದಿಯಲ್ಲಿ ಬರೆದು ಪಿಎಚ್.ಡಿ ಅವಾರ್ಡ್ ಪಡೆದರೆಂದು ಸುದ್ದಿ ಇತ್ತು. ಅವರಿಗೆ ಅವಾರದ ಆದ ಎಷ್ಟೋ ವರ್ಷದ ಮೇಲೆ ಮೂಲ ಪ್ರತಿಯನ್ನು ತಂದುಕೊಟ್ಟರು. ಇದರ ಕುರಿತು ನಾನು ಸಿಟ್ಟುಗೊಂಡರೂ ಅಣ್ಣ ಏನೂ ಸಿಟ್ಟಾಗಿರಲಿಲ್ಲ. “ಅಂತೂ ಮೊದಲನೆಯದಕ್ಕೂ ಅವಾರ್ಡ್ ಪಡೆಯುವ ಸಾಮರ್ಥ್ಯ ಇದೆ ಎಂದಾಯ್ತಲ್ಲ..” ಎಂದು ನಕ್ಕ. ನಂತರ ಈ ಪುಸ್ತಕವನ್ನು ‘ನಿರಂಜನ’ ಶೀರ್ಷಿಕೆಯಡಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ (ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲೆ) ಪ್ರಕಟವಾಯಿತು.

ಎರಡನೇ ಪಿಎಚ್.ಡಿ ಬರಹ ಅಂಕೋಲೆಯ ರಾಘವೇಂದ್ರ ಪ್ರಕಾಶನದಿಂದ ‘ಕನ್ನಡ ಕಾದಂಬರಿಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷ’ ಶೀರ್ಷಿಕೆಯಡಿ (2003 ರಲ್ಲಿ) ಪ್ರಕಟವಾಯಿತು.

“ವಯಸ್ಸಿನಲ್ಲೂ ಸಂಘಟನೆಯಲ್ಲೂ ನಿನಗಿಂತ ಚಿಕ್ಕವರಾದ ಡಾ. ಬಿಳಿಮಲೆಯವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುವುದು ನಿನಗೆ ಮುಜುಗರ ತಂದಿಲ್ಲವೇ?” ಎಂದು ಒಮ್ಮೆ ಅಣ್ಣನನ್ನು ಕೇಳಿದೆ. ಆತ ಇದನ್ನು ನಯವಾಗಿಯೇ ನಿರಾಕರಿಸಿ “ವಯಸ್ಸು ವಿದ್ವತ್ತನ್ನು ನಿರ್ಧರಿಸುವುದಿಲ್ಲ. ಬಿಳಿಮಲೆಯವರು ಇನ್ನೂ ಉತ್ಸಾಹಿ ಯುವಕರು. ಅವರಲ್ಲಿ ಹೊಸ ಓದಿದೆ. ವಿಶ್ವವಿದ್ಯಾಲಯದಲ್ಲಿರುವುದರಿಂದ ಓದಲು ಹೊಸ ಹೊಸ ಪುಸ್ತಕಗಳು ಲಭ್ಯವಾಗುತ್ತವೆ. ಹೊಸ ಆಲೋಚನೆ ರೂಢಿಸಿಕೊಂಡಿದ್ದಾರೆ. ಅಕಾಡೆಮಿಕ್ ಆಗಿ ಅವರು ನಮಗಿಂತಲೂ ತುಂಬಾ ಮುಂದಿದ್ದಾರೆ. ನನಗಂತೂ ಖುಷಿ ಆಗಿದೆ” ಎಂದನು.

ಒಬ್ಬ ವ್ಯಕ್ತಿಗೆ ಬದ್ಧತೆ, ಬುದ್ಧಿವಂತಿಕೆ, ಹೊಸ ಆಲೋಚನೆ ಇದೆ ಎಂದಾದರೆ ಕಾಲೇಜು ವಿದ್ಯಾರ್ಥಿಯನ್ನು ಕೂಡ ಗೌರವಿಸುವ ವ್ಯಕ್ತಿತ್ವ ಆತನದು.

‍ಲೇಖಕರು avadhi

June 9, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Lalitha siddabasavayya

    ನಮ್ಮಲ್ಲಿ ಅಂದರೆ ಕರ್ನಾಟಕದಲ್ಲಿ ಮಾತ್ರ ವಿ ವಿಗಳು ಹೀಗೆಯೋ , ಎಲ್ಲೆಲ್ಲೂ ಹೀಗೆಯೋ ,,,,,,,

    ಮನುಷ್ಯ ಮಾತ್ರರ ಶ್ರಮ ಸಮಯಗಳ ಬಗ್ಗೆ ನಮ್ಮ ಈ ವಿವಿ ಗಳಿಗೆ ಇರುವ ತಾತ್ಸಾರದ ಕುರಿತು ಬಹುಶಃ ಒಂದು ಪಿಹೆಚ್‌ಡಿ ಮಾಡಬಹುದು.

    ಅಂತೂ ಭಂಡಾರಿಯವರಿಗೆ ಅವಾರ್ಡ್‌ ಆಯಿತಲ್ಲ ,, ಆ ದೀರ್ಘಕಾಲದ ಪರಿಕ್ರಮ ಓದಿಯೇ ನನಗೆ ಏದುಸಿರು ಬಂತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: