ಈತ 'ಜಲಗಾರ'

ಮನ್ಸೂರ್ ಎಂಬ ಸಮಾಜ ವಿಜ್ಞಾನಿ


ಹೆಗಲ ಮೇಲೊಂದು ಮಾಸಿದ ಉದ್ದನೆ ಚೀಲ, ಕೆದರಿದ ಕೂದಲು, ಕೊಳಕಾದ ಬಟ್ಟೆ, ಹತ್ತಿರ ಹೋದರೆ ಗಪ್ಪಂತ ಮೂಗಿಗೆ ಅಡರುವ ವಾಸನೆ- ಇದು ಕಸ ಆಯುವವರ ಚಿತ್ರಣ. ಅಂತಹವರ ಪಕ್ಕ ನಿಲ್ಲುವುದಕ್ಕೂ ಜನ ಹಿಂಜರಿಯುತ್ತೇವೆ. ದೂರದಿಂದಲೇ ಕಸ ಎಸೆದು ಏಕವಚನದಲ್ಲಿ ಸಂಭೋದಿಸುತ್ತೇವೆ ಅಥವಾ ಮಾತೇ ಆಡದೆ ಎಸೆದು ಹೋಗುತ್ತೇವೆ. ಆದರೆ ಈ ನಮ್ಮ ಕಸ ಆಯುವ ವ್ಯಕ್ತಿಯೇ ಬೇರೆ. ಮಾತು-ಕತೆ, ಕೆಲಸ, ಕಾಳಜಿ ಎಲ್ಲವೂ ಬೇರೆ. ಅವರೆ ಮೂವತ್ನಾಲ್ಕು ವರ್ಷದ ಮನ್ಸೂರ್ ಅಹ್ಮದ್.
‘ನೋಡಿ, ಒಂದು ಟನ್ ಪೇಪರ್ ತಯಾರಿಸಲು 17 ಮರಗಳನ್ನು ಕತ್ತರಿಸಬೇಕು. ಮರ ಇಲ್ಲ ಅಂದರೆ ಸ್ವಚ್ಛಗಾಳಿ ಇಲ್ಲ, ಮಳೆ ಇಲ್ಲ, ನೀರು-ನೆರಳಿಲ್ಲ. ಹೂವು, ಹಣ್ಣು, ಹಸಿರಿಲ್ಲ. ಅದರ ಮೇಲೆ ಕೂತಾಡುವ ಪ್ರಾಣಿ ಪಕ್ಷಿಗಳಿಲ್ಲ. ಕ್ರಿಮಿ ಕೀಟಗಳಿಲ್ಲ. ಅವೆಲ್ಲ ಇಲ್ಲವೆಂದ ಮೇಲೆ ನಮ್ಮ ಬದುಕೂ ಇಲ್ಲ. ಈ ಜೀವನಚಕ್ರವನ್ನು ಪ್ರತಿಯೊಬ್ಬರೂ ಅರಿತರೆ, ನಮ್ಮ ಸುತ್ತಣ ಪರಿಸರವನ್ನು ಕಾಪಾಡಿಕೊಂಡರೆ, ಮುಂದಿನ ತಲೆಮಾರು ಕೊಂಚ ನೆಮ್ಮದಿಯಾಗಿ ಬದುಕಬಹುದು’’  ಎನ್ನುತ್ತಾರೆ ಮನ್ಸೂರ್ ಅಹ್ಮದ್. ಹೀಗೆ ಪರಿಸರದ ಬಗ್ಗೆ ವಿಜ್ಞಾನಿಯಂತೆ ವಿದ್ವತ್ಪೂರ್ಣವಾಗಿ ಮಾತನಾಡುವ ಮನ್ಸೂರ್,  ‘‘ಡಿಜಿಟಲ್ ಇಂಡಿಯಾ ಅಂತೀವಿ, ಪೇಪರ್-ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲ್ಲ. ಮಾಡಿದ ಬಳಿಕ ವಿಂಗಡಿಸಿ ಮರುಬಳಕೆಯತ್ತ ಗಮನ ಹರಿಸಲ್ಲ’’ ಎಂದು ಉದ್ಯಮ-ವ್ಯವಹಾರ-ತಂತ್ರಜ್ಞಾನಗಳ ಮತ್ತೊಂದು ಮಗ್ಗುಲನ್ನು ಬಿಚ್ಚಿಡುತ್ತಾರೆ.
ಐದೂವರೆ ಅಡಿ ಎತ್ತರವಿರುವ, ಕುರುಚಲು ಗಡ್ಡ ಬಿಟ್ಟಿರುವ, ಕಪ್ಪಗಿರುವ, ಬಡಕಲು ದೇಹ ಹೊಂದಿರುವ, ಕನ್ನಡ, ತಮಿಳು, ತೆಲುಗು, ಉರ್ದು, ಹಿಂದಿ ಮಾತನಾಡುವ, ತಲೆತುಂಬಾ ಕಸ ತುಂಬಿಕೊಂಡಿರುವ, ಕಸವೆಂದರೆ ಖುಷಿಪಡುವ, ಕಸದೊಂದಿಗೇ ಬದುಕುತ್ತಿರುವ ಮನ್ಸೂರ್, ‘‘ನಮ್ಮ ಕೆಲಸ ಗ್ರೇಟ್ ಅಲ್ಲ, ಜನ ಮುಖ್ಯ. ಜನಕ್ಕೆ ಕಸ ವಿಂಗಡಿಸುವಷ್ಟು ಬುದ್ಧಿ ಬಂದರೆ, ದಿನದಿಂದ ದಿನಕ್ಕೆ ಕಸ ಕಡಿಮೆ ಮಾಡಿದರೆ, ನೀವು ಊಹಿಸಲು ಸಾಧ್ಯವಿಲ್ಲದ ಬದಲಾವಣೆ ತರಬಹುದು. ಆರೋಗ್ಯಕರ ಸಮಾಜ ನಿರ್ಮಿಸಬಹುದು. ಇಲ್ಲಿ ಕೈ ತುಂಬಾ ಕೆಲಸವಿದೆ, ಹಣವಿದೆ, ಸ್ವಾಭಿಮಾನದ ಬದುಕಿದೆ. ಇದು ಬಹಳ ದೊಡ್ಡ ಉದ್ಯಮ. ಕಸದಂತೆಯೇ ಕಡೆಗಣಿಸಲ್ಪಟ್ಟಿದೆ’’ ಎನ್ನುತ್ತಾರೆ. ಆದರೆ ಮನ್ಸೂರ್ ಮಾತ್ರ ಕಸದ ಕೆಲಸವನ್ನು ಗಂಭೀರವಾಗಿ ಪರಿಗಣಿಸಿ ಒಂದು ವ್ಯವಸ್ಥಿತ ಉದ್ಯಮದಂತೆ ನಡೆಸುತ್ತಿದ್ದಾರೆ. ತನ್ನಂತೆಯೇ ಇರುವ ಹಲವಾರು ಕಸ ಆಯುವ ಅಸಂಘಟಿತ ಕಾರ್ಮಿಕರಿಗೆ ಕೆಲಸ ಕೊಟ್ಟು, ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಕಸ ಆಯುವ ಒಂದು ಸಮುದಾಯವನ್ನೇ ಬಿಗಿದಪ್ಪಿಕೊಂಡು ಬೆಂಗಳೂರಿನ ಕಸದ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸುತ್ತಿದ್ದಾರೆ.
ಬೆಂಗಳೂರಿನ ಯಾರಬ್ ನಗರದಲ್ಲಿ 1983ರಲ್ಲಿ ಹುಟ್ಟಿ, ಬನಶಂಕರಿ ದೇವಸ್ಥಾನದ ಎದುರಿನ ರಾಜೇಶ್ವರಿ ಸ್ಲಮ್‌ನಲ್ಲಿ ಬೆಳೆದ ಮನ್ಸೂರ್‌ಗೆ ಅಪ್ಪನ ಗುಜರಿ ಅಂಗಡಿಯೇ ಶಾಲೆ; ಇಕ್ಕಟ್ಟಾದ ಜೋಪಡಿಗಳ ಗಲ್ಲಿಗಳೇ ಮೈದಾನ; ಹಳೆ ಕಬ್ಬಣ, ಖಾಲಿ ಸೀಸ, ತಗಡಿನ ಡಬ್ಬ, ಕಾರ್ಟೂನ್ ಬಾಕ್ಸ್‌ಗಳೆ ಆಟದ ಸಾಮಾನುಗಳು. ಮನ್ಸೂರ್ ಪೋಷಕರಿಗೆ ಮನೆ ತುಂಬಾ ಮಕ್ಕಳು. ಆರು ಹೆಣ್ಣು, ಮೂರು ಗಂಡು. ಹಿರಿಯ ಮಗನೆ ಮನ್ಸೂರ್. ‘‘ಅಪ್ಪ ಬೆಳಗ್ಗೆ ಸೈಕಲ್‌ಗೆ ಚೀಲ ತಗಲಾಕಿಕೊಂಡು ಹೊರಟರೆ, ಸಂಜೆ ಸುಸ್ತಾಗಿ, ಆ ಸುಸ್ತಿಗೆ ಸ್ವಲ್ಪ ನಶೆ ಏರಿಸಿಕೊಂಡು ಬಂದು ಮಲಗಿಬಿಡುತ್ತಿದ್ದರು. ಅಮ್ಮ ಎರಡು ಸಿಲ್ವರ್ ತಟ್ಟೆಗಳನ್ನು ಬಳಸಿ ತಕ್ಕಡಿ ಮಾಡಿಕೊಂಡು, ಹುಡುಗರು ತಂದುಕೊಡುವ ಹಳೆ ಕಬ್ಬಿಣದ ಬದಲಿಗೆ, ಬೆಲ್ಲದಿಂದ ಮಾಡಿದ ಬರ್ಫಿ ಕೊಟ್ಟು ಉತ್ತೇಜಿಸುತ್ತಿದ್ದರು. ಬರ್ಫಿ ಆಸೆಗೆ ಹುಡುಗರು ಹಳೆ ಸಾಮಾನು ತಂದು ಸುರಿಯುತ್ತಿದ್ದರು. ಅಪ್ಪನ ಅಲ್ಪಸ್ವಲ್ಪದುಡಿಮೆಯ ಜೊತೆಗೆ ಅಮ್ಮನ ಪುಡಿಗಾಸು ಸೇರಿದರೂ, ಮನೆಮಂದಿಯ ಹೊಟ್ಟೆ ತುಂಬುತ್ತಿರಲಿಲ್ಲ-ಬಟ್ಟೆಗೂ ಸಾಲುತ್ತಿರಲಿಲ್ಲ.’’
‘’ಅಪ್ಪನಿಗೆ ಸ್ನೇಹಿತ್ರು ಜಾಸ್ತಿ, ಸೈಕಲ್ ತುಳಿವ ಸುಸ್ತಿಗೆ ಕುಡಿತ ಮದ್ದಾಗಿತ್ತು. ಕುಡಿತ ಅತಿಯಾಗಿ ಖಾಯಿಲೆ ಬಿದ್ರು, ಮನೇಲಿ ಮಲಕ್ಕೊಂಡ್ರು. ಆದಾಯ ನಿಂತೋಯ್ತು. ಮನೆತುಂಬಾ ಮಕ್ಕಳು, ಅದರಲ್ಲೂ ಹೆಣ್ಮಕ್ಕಳು ಆರು ಜನ, ಅಮ್ಮನಿಗೆ ದಿಗಿಲಾಯಿತು. ಕೆಲಸಕ್ಕಾಗಿ ಸಾಲ ಮಾಡಿ ಸೌದಿಗೆ ಹೋದರು. ಹೋಗಿ ಮೂರು ತಿಂಗಳಾದರೂ ಅಲ್ಲಿಂದ ಹಣವಿಲ್ಲ, ಸುದ್ದಿಯೂ ಇಲ್ಲ. ಇತ್ತ ಅಪ್ಪಹಾಸಿಗೆ ಬಿಟ್ಟು ಮೇಲೇಳಲಿಲ್ಲ. ಮನೆ ಜವಾಬ್ದಾರಿ ನನ್ನ ತಲೆ ಮೇಲೆ ಬಿತ್ತು. ಅಪ್ಪನ ಗುಜರಿ ಅಂಗಡಿಯ ಜೊತೆಗೆ ಕಸ ಆಯುವ ಕೆಲಸಕ್ಕಿಳಿದೆ. ಹೇಗೋ ಹೆಣಗಾಡಿ ಅಪ್ಪನ ಕ್ವಾರ್ಟರ್ ಬಾಟಲ್‌ಗೆ, ಔಷಧಿಗೆ, ಮನೆಮಂದಿಯ ಊಟಕ್ಕೆ ಹಣ ಹೊಂದಿಸತೊಡಗಿದೆ. ಒಂದು ದಿನ ಅಪ್ಪತೀರಿಹೋದರು. ಸೌದಿಗೆ ಸುದ್ದಿ ಮುಟ್ಟಿಸಿದೆವು. ಅಪ್ಪಸತ್ತ ಮೂರು ದಿನಕ್ಕೆ ಸೌದಿಯಿಂದ ಮೂರು ತಿಂಗಳ ಸಂಬಳದ ಚೆಕ್ ಬಂತು. ಅದು ಅಪ್ಪನ ಹೆಸರಿನಲ್ಲಿತ್ತು. ವಾಪಸ್ ಕಳಿಸಿದೆವು. ಅಪ್ಪತೀರಿಹೋದ ಸುದ್ದಿ ಕೇಳಿ ಆಘಾತಕ್ಕೊಳಗಾದ ಅಮ್ಮ ಅಲ್ಲಿಂದ ಓಡಿಬಂದರು. ಅಪ್ಪನೂ ಇಲ್ಲ, ಹಣವೂ ಬರಲಿಲ್ಲ. ನಮ್ಮ ಹಸಿವು, ಆಕ್ರಂದನ ಕೇಳುವವರೂ ಇಲ್ಲ.’’
‘’ಸೌದಿಯಿಂದ ಅಮ್ಮ ಖಾಯಿಲೆಯನ್ನೂ ಕರೆತಂದಿದ್ದಳು. ಅವಳ ರಿಪೇರಿಗೆ ಮತ್ತೆ ಸಾಲ. ಅದೇ ಸಮಯಕ್ಕೆ ನನ್ನ ತಮ್ಮ ಮಹಬೂಬ್ ಈಜಲು ಹೋಗಿ ಸಾವನ್ನಪ್ಪಿದ. ಸಾವು, ಸಾಲ, ನೋವು, ಹಸಿವು ಕಿತ್ತು ತಿನ್ನತೊಡಗಿದವು. ನನಗಾಗ 12 ವರ್ಷ. ಬೆಳಗ್ಗೆ ಕಸ ಆಯುವುದು, ರಾತ್ರಿ ವಿಂಗಡಿಸುವುದು- 24 ಗಂಟೆಯೂ ಕೆಲಸ ಮಾಡುತ್ತಿದ್ದೆ. ಅಮ್ಮನೂ ರಾತ್ರಿಯಿಡಿ ವೇಸ್ಟ್ ವಿಂಗಡಿಸುತ್ತಿದ್ದಳು. ಬಂಬೂಬಜಾರ್, ಜಾಲಿ ಮೊಹಲ್ಲಾಗೆ ಸಾಗಿಸಿ ಮಾರಾಟ ಮಾಡಿ ಬರುತ್ತಿದ್ದೆ. ಬಂದ ಪುಡಿಗಾಸಲ್ಲಿ ಮನೆ ನಡೆಯುತ್ತಿತ್ತು. ಬೆಳೆದಂತೆಲ್ಲ ತಂಗಿ, ತಮ್ಮ ಬೆನ್ನಿಗೆ ನಿಂತು ಸಹಕರಿಸಿದರು. ಹೆಂಗೋ ಕಷ್ಟಬಿದ್ದು ಆರು ತಂಗಿಯರನ್ನು ಮದುವೆ ಮಾಡಿದೆವು.’’
‘’2010-11 ರಲ್ಲಿ ಬಿಬಿಎಂಪಿ ಒಣಕಸ ಸಂಗ್ರಹಿಸುವ ಜವಾಬ್ದಾರಿಯನ್ನು ಕೆಲ ಎನ್ಜಿಓಗಳಿಗೆ ವಹಿಸಿತು. ‘ಹಸಿರುದಳ’ ಎನ್ನುವ ಎನ್ಜಿಓ ನನ್ನಂತಹ ಕಸ ಆಯುವವರನ್ನು ಗುರುತಿಸಿ, ಕಸ ಸಂಗ್ರಹಿಸುವ ಮತ್ತು ವಿಂಗಡಿಸುವ ಕುರಿತು ತರಬೇತಿ ನೀಡಿತು. ಗುರುತಿನ ಚೀಟಿ ನೀಡಿ ನಿರ್ಲಕ್ಷಿತ ಕೆಲಸಕ್ಕೂ ಮಾನ್ಯತೆ ನೀಡಿತು. ದಿನವಿಡೀ ದುಡಿಯೋದು, ಕುಡಿಯೋದು, ಮಲಗೋದು ನನ್ನ ದಿನಚರಿಯಾಗಿತ್ತು. ಆದರೆ ಹಸಿರುದಳದ ನಳಿನಿಶೇಖರ್ ಮೇಡಂ, ನನ್ನ ಕೆಲಸಕ್ಕೆ ಬೆಲೆ ತಂದರು. ಕಸ ವಿಂಗಡಣೆ ಮಾಡುವ ವಿಧಾನವನ್ನು ಸರಳಗೊಳಿಸಿ, ಹಣ ನೀಡಿ ಸಹಕರಿಸಿ, ಉತ್ತೇಜಿಸಿ ನಮ್ಮನ್ನು ಈ ಸಮಾಜಕ್ಕೆ ಬೇಕಾದ ಜನರನ್ನಾಗಿ ಮಾಡಿದರು. ವ್ಯವಸ್ಥೆಯ ಭಾಗವನ್ನಾಗಿಸಿದರು.’’
‘’ನಾನು ಬೆಂಗಳೂರಿನ ಬಸವನಗುಡಿ, ಜಯನಗರ, ಬನಶಂಕರಿ 2ನೆ ಹಂತ, ಭೈರಸಂದ್ರ ಸೇರಿ 168 ಮತ್ತು 169 ವಾರ್ಡಿನ ಒಣಕಸ ಸಂಗ್ರಹಿಸುತ್ತೇನೆ. ಈಗ ನನ್ನ ಬಳಿ ಎರಡು ಆಟೋ ಟೆಂಪೋಗಳಿವೆ, 12 ಜನ ಕಸ ವಿಂಗಡಿಸುವವರು, 8 ಜನ ಕಸ ಆಯುವವರು, ಚಾಲಕರು ಕೆಲಸಕ್ಕಿದ್ದಾರೆ. ಬಿಬಿಎಂಪಿ ಕಸ ವಿಂಗಡಿಸಲು ಜಾಗದ ವ್ಯವಸ್ಥೆ ಮಾಡಿಕೊಟ್ಟಿದೆ. ತಿಂಗಳಿಗೆ 70 ಸಾವಿರ ನೀಡುತ್ತಿದೆ. ವಾರಕ್ಕೆ ಎರಡು ದಿನ ಕಸ ಸಂಗ್ರಹಣೆಗೆ ಹೋಗಲಿಲ್ಲವೆಂದರೆ, ಮಹಿಳೆಯರು ವಾಟ್ಸಾಪ್ ಮಾಡಿ ಕರಿತರೆ, ನನ್ನ ಫೇಸ್ ಬುಕ್ ಅಕೌಂಟ್‌ನಲ್ಲಿ ಕಸ ಕುರಿತ ಮಾಹಿತಿ ನೀಡುತ್ತೇನೆ, ಯೂಟ್ಯೂಬ್ನಲ್ಲಿ ನನ್ನ ಮಾತುಗಳನ್ನು ಕೇಳಬಹುದು. ಕಸ ವಿಂಗಡಣೆ ಕುರಿತು ಉಪನ್ಯಾಸ ನೀಡಲು 2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ‘ಯುನೈಟೆಡ್ ನೇಷನ್ಸ್ ಕ್ಲೈಮೇಟ್ ಚೇಂಜ್ ಕಾನ್ಫರೆನ್ಸ್’ಗೆ ವಿಶೇಷ ಆಹ್ವಾನಿತನಾಗಿ ಹೋಗಿದ್ದೆ. ಬಿಬಿಸಿಯಲ್ಲಿ ನನ್ನ ಬಗ್ಗೆ ವರದಿ ಬಂತು. ಮೈಂಡ್ ಟ್ರೀ ಸಾಫ್ಟ್‌ವೇರ್ ಕಂಪನಿ ಆ್ಯಪ್ ತಯಾರಿಸಿ ಕೊಟ್ಟರೆ, ಬಸವನಗುಡಿಯ ಮೈತ್ರಿ ಮಹಿಳಾ ಸದಸ್ಯರು ನನ್ನ ಕೆಲಸ ಶ್ಲಾಘಿಸಿ, ಬೆಂಬಲಕ್ಕೆ ನಿಂತರು. ಕಸಕ್ಕಿಂತಲೂ ಕಡೆಯಾಗಿದ್ದ ನಮ್ಮನ್ನು ಈಗ ಜನ ಪ್ರೀತಿಯಿಂದ, ಗೌರವದಿಂದ ಕಾಣುತ್ತಾರೆ. ಮಾಧ್ಯಮಗಳ ಜನ ಬಂದು ಮಾತನಾಡಿಸಿ, ನಮ್ಮ ಬಗ್ಗೆ ಬರೆದು ಸಮಾಜಕ್ಕೆ ತಿಳಿವಳಿಕೆ ಮೂಡಿಸುತ್ತಾರೆ. ನಾನು ಬದಲಾಗಿದ್ದೇನೆ, ಜನರೂ ಬದಲಾದರೆ, ಉತ್ತಮ ಸಮಾಜ ನಿರ್ಮಾಣ ಮಾಡಬಹುದು, ಬೆಂಗಳೂರನ್ನು ಸ್ವಚ್ಛ ನಗರವನ್ನಾಗಿ ಮಾಡಬಹುದು’’ ಎನ್ನುತ್ತಾರೆ.
ನಗರದಲ್ಲಿ ದಿನವೊಂದಕ್ಕೆ ಐದರಿಂದ ಆರು ಟನ್ ಕಸ ಉತ್ಪತ್ತಿಯಾಗುತ್ತದೆ. ಕಸ ಸಂಗ್ರಹಿಸಲು 20 ಸಾವಿರ ಪೌರಕಾರ್ಮಿಕರಿದ್ದಾರೆ. ಕಸಕ್ಕಾಗಿಯೇ ಬಿಬಿಎಂಪಿ ವರ್ಷಕ್ಕೆ 800ರಿಂದ 900 ಕೋಟಿ ರೂ.ಗಳನ್ನು ವ್ಯಯಿಸುತ್ತಿದೆ. ಇದಲ್ಲದೆ 25 ಸಾವಿರ ಕಸ ಆಯುವ, ವಿಂಗಡಿಸುವ ಅಸಂಘಟಿತ ಕಾರ್ಮಿಕರು ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ‘’ಇದೊಂದು ಬಹುದೊಡ್ಡ ಉದ್ಯಮ. ಹಸಿಕಸದಿಂದ ವಿದ್ಯುತ್ ಮತ್ತು ಗೊಬ್ಬರ ತಯಾರಿಸಿದರೆ, ಒಣಕಸದಿಂದ ಹತ್ತು ಹಲವು ರೀತಿಯ ಉಪಉತ್ಪನ್ನಗಳನ್ನು ತಯಾರಿಸಬಹುದು. ಒಣಕಸದಲ್ಲಿಯೇ 72 ರೀತಿಯ ಕಸವಿದೆ. ಇದನ್ನ ಕ್ರಮಬದ್ಧವಾಗಿ ವಿಂಗಡಿಸಿ ನಾವು ಜಾಲಿಮೊಹಲ್ಲಾ, ನಾಯಂಡಹಳ್ಳಿ, ಕುಂಬಳಗೋಡಿನ ಕೈಗಾರಿಕಾ ಪ್ರದೇಶಗಳಿಗೆ ರವಾನಿಸುತ್ತೇವೆ. ಕುರ್ಕುರೆ ಪ್ಯಾಕೆಟ್‌ನಿಂದ ಕ್ರೂಡ್ ಆಯಿಲ್ ತಯಾರಿಸಬಹುದು. ರವಿಶಂಕರ್ ಆಶ್ರಮದವರು ಕೆಜಿಗೆ 2 ರೂ.ನಂತೆ ಖರೀದಿಸುತ್ತಾರೆ. ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಬರುತ್ತಲ್ಲ, ಅದು ಕೂಡ ಕಸ ಎಸೆಯುವುದರಿಂದಲೇ ಬರುವುದು’’  ಎನ್ನುವ ಮನ್ಸೂರ್, ಕಸದಿಂದಾಗುವ ಅನುಕೂಲ, ಅನನುಕೂಲಗಳನ್ನೆಲ್ಲ ವಿವರಿಸುತ್ತಾರೆ.
ಜೂನ್ 5ರಂದು ವಿಶ್ವ ಪರಿಸರ ದಿನ. ವಿಶ್ವ ಸಂಸ್ಥೆ ‘ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಿ’ ಎಂಬ ಘೋಷಣೆಯನ್ನು ವಿಶ್ವಕ್ಕೆ ನೀಡಿದೆ. ಭಾರತವನ್ನು ಆತಿಥೇಯ ರಾಷ್ಟ್ರವೆಂದು ನಿಯೋಜಿಸಿದೆ. ಕರ್ನಾಟಕ 2016ರಲ್ಲಿಯೇ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ. ಆದರೂ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿಲ್ಲ. ‘‘ನೀವು ಹಾಕಿರೋ ಶರ್ಟಿನಲ್ಲಿರುವ ಬಟನ್, ಜೇಬಿನಲ್ಲಿರುವ ಪೆನ್, ಬಾಚಣಿಗೆ, ಬೆಲ್ಟ್, ಚಪ್ಪಲಿ, ಶೂಸ್, ವಾಟರ್ ಬಾಟಲ್ ಎಲ್ಲವೂ ಪ್ಲಾಸ್ಟಿಕ್. ಪ್ಲಾಸ್ಟಿಕ್ ನಮ್ಮ ಬದುಕಿನೊಂದಿಗೆ ಬೆರೆತುಹೋಗಿದೆ. ನಿಷೇಧ ಕಷ್ಟ. ಬದಲಿಗೆ ಬಳಸಿದ ನಂತರ ಅದನ್ನು ಎಲ್ಲೆಂದರಲ್ಲಿ ಎಸೆಯದೆ, ಕಸಸಂಗ್ರಹಿಸುವವರಿಗೆ ನೀಡಿದರೆ, ಅವರು ಅದನ್ನು ವಿಂಗಡಿಸಿ, ಮರುಬಳಕೆ ಘಟಕಗಳಿಗೆ ತಲುಪಿಸಿದರೆ, ಅದು ಉಪಉತ್ಪನ್ನವಾಗಿ ಬಳಕೆಗೆ ಬರುತ್ತದೆ. ಹಾಗೆ ಮಾಡದಿದ್ದರೆ, ಪರಿಸರಕ್ಕೆ ಮಾರಕ ಮತ್ತು ನರಕ’’ ಎನ್ನುವ ಮನ್ಸೂರ್, ‘‘ಸರಕಾರವೇ ಮುಂದೆ ನಿಂತು ಈ ಕಸ ವಿಂಗಡಣೆ, ರೀಸೈಕ್ಲಿಂಗ್ ಪ್ಲಾಂಟ್, ಮಾರ್ಕೆಟಿಂಗ್ ಮಾಡುವಂತಾದರೆ, ಸಾವಿರಾರು ಜನಕ್ಕೆ ಉದ್ಯೋಗ ಕೊಡಬಹುದು. ವ್ಯಾಪಾರ ವಹಿವಾಟು ಕ್ಷೇತ್ರವನ್ನು ವಿಸ್ತರಿಸಬಹುದು. ಜನರ, ಸರಕಾರದ ಆದಾಯ ಹೆಚ್ಚಾಗಿ ಆರ್ಥಿಕ ಸ್ಥಿತಿ ಸುಧಾರಿಸಬಹುದು’’  ಎಂದು ಅರ್ಥಶಾಸ್ತ್ರಜ್ಞರಂತೆಯೂ ಮಾತನಾಡಿ ಬೆರಗು ಹುಟ್ಟಿಸುತ್ತಾರೆ.
‘’ನಾನು ಚಿಕ್ಕವನಿದ್ದಾಗ ನಮ್ಮಪ್ಪದನ ಎಮ್ಮೆಯ ಮೂಳೆ ಕೂಡ ಖರೀದಿಸುತ್ತಿದ್ದರು, ಮನೆಯಲ್ಲಿಯೇ ಇಡುತ್ತಿದ್ದರು. ಕೆಟ್ಟ ವಾಸನೆ. ಅದರೊಂದಿಗೇ ಮಲಗುತ್ತಿದ್ದೆ. ಅಲ್ಲಿಂದ ಇಲ್ಲಿಯವರೆಗೆ, ಈ ಕಸ ಎನ್ನುವುದು ನನ್ನ ಬದುಕಿನಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದೆ. ಹೆಸರು ತಂದುಕೊಟ್ಟಿದೆ, ನೆಮ್ಮದಿ ತಂದಿದೆ. ನಾನು ಮದುವೆಯಾದಾಗ, ನನ್ನ ಹೆಂಡತಿ ಹಜೀಮಾಗೆ ಕಸದ ಬಗ್ಗೆ ಏನೂ ಗೊತ್ತಿರಲಿಲ್ಲ. ನಾನು ಪ್ಯಾರಿಸ್‌ಗೆ ಹೋಗಿದ್ದಾಗ, ನನ್ನ ಕೆಲಸವನ್ನು ಅವಳೇ ಅಚ್ಚುಕಟ್ಟಾಗಿ ನಿರ್ವಹಿಸಿದಳು. ಅಷ್ಟರಮಟ್ಟಿಗೆ ಅವಳೂ ನನ್ನೊಂದಿಗೆ, ಕಸದೊಂದಿಗೆ ಬೆರೆತುಹೋಗಿದ್ದಾಳೆ. ಮೂವರು ಮಕ್ಕಳಿದ್ದು, ಓದುತ್ತಿದ್ದಾರೆ. ಮೊದಲ ಮಗ 8ನೆ ಕ್ಲಾಸ್ ಓದುತ್ತಿದ್ದಾನೆ. ಆತನಿಗೂ ನನ್ನ ಕೆಲಸದ ಬಗ್ಗೆ ಒಲವಿದೆ. ಅವನು ಇದೇ ಕಸದ ವ್ಯವಹಾರದಲ್ಲಿ ಭಾಗಿಯಾಗಬೇಕು, ನನ್ನನ್ನೂ ಮೀರಿ ಮತ್ತೊಂದು ಹಂತಕ್ಕೆ ಬೆಳೆಯಬೇಕು, ಹೊಸದೇನನ್ನಾದರೂ ಕಂಡುಹಿಡಿದು, ಈ ಸಮಾಜಕ್ಕೆ, ದೇಶಕ್ಕೆ ಬೇಕಾದ ವ್ಯಕ್ತಿಯಾಗಬೇಕೆಂಬ ಆಸೆ’’ ಎನ್ನುತ್ತಾರೆ.
ಹೆಚ್ಚುತ್ತಿರುವ ಪರಿಸರ ಮಾಲಿನ್ಯವನ್ನು ತಡೆಯುವುದರ ಜೊತೆಗೆ, ಪರಿಸರ ರಕ್ಷಣೆಯನ್ನೇ ಲಾಭದಾಯಕ ಉದ್ಯಮವನ್ನಾಗಿ ಮಾಡುವ ಮನ್ಸೂರ್ ಕಾಳಜಿ, ಹಂಬಲ ನಮ್ಮದೂ ಆಗಲಿ; ಸಾಮಾನ್ಯರು ಅಸಾಮಾನ್ಯರಾಗಿ ಬೆಳಕಾಗಲಿ.

‍ಲೇಖಕರು avadhi

June 5, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: