ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈತ ಚಿತ್ರ ನಿರ್ದೇಶಕನಲ್ಲ, ಸಿನಿಮಾ ಸಂತ..

pradeep kumar shetty

                                                             ಪ್ರದೀಪ ಕುಮಾರ್ ಶೆಟ್ಟಿ

‘ಲೈಫ್ ಎಂಡ್ ನತಿಂಗ್ ಮೋರ್’ ಎಂಬ ಕಿಯರೊಸ್ತಾಮಿಯ 1992ರ ಚಿತ್ರವನ್ನು ನೋಡಿದ ಫ್ರೆಂಚ್ ಹೊಸ ಅಲೆಯ ಮಹತ್ವದ ನಿರ್ದೇಶಕ ಜೀನ್-ಲೂಕ್-ಗೊಡಾರ್ಡ್ ಹೀಗೆ ಹೇಳಿದ್ದ, “ಜಗತ್ತಿನಲ್ಲಿ ಸಿನಿಮಾ ಗ್ರಿಫಿತ್‍ನೊಂದಿಗೆ ಆರಂಭವಾಯಿತು. ಮತ್ತದು ಅಬ್ಬಾಸ್ ಕಿಯರೊಸ್ತಾಮಿಯೊಂದಿಗೆ ಮುಗಿಯುತ್ತದೆ”.

ಅಬ್ಬಾಸ್ ಕಿಯರೊಸ್ತಾಮಿ ಬರೀ ಒಬ್ಬ ಚಿತ್ರ ನಿರ್ದೇಶಕನಲ್ಲ, ಬದಲು ಆತ ಆಧುನಿಕ ಸಂದರ್ಭದ ಸಿನಿಮಾ ಸಂತ.

ಬಹುಶ: ಇರಾನಿನ ಮತ್ತು ಜಗತ್ತಿನ ಸಿನಿಮಾ ಪರಂಪರೆಯಲ್ಲೇ ಹೊಸತೊಂದು ಸಿನಿಮಾ ನಿರ್ಮಾಣ ಕ್ರಮದ ಕಾಣ್ಕೆ ಕೊಟ್ಟ ಕಲಾವಿದ. ಕಿಯರೊಸ್ತಾಮಿಯ ಸಿನಿಮಾಗಳು ಇರಾನ್‍ನಲ್ಲಿ ಉಂಟು ಮಾಡಿದ ಪ್ರಭಾವ, ಪರಿಣಾಮಗಳಿಗಿಂತ ಜಾಗತಿಕ ಸಂದರ್ಭದಲ್ಲಿ ಇರಾನ್ ಅನ್ನು ಪ್ರತಿನಿಧಿಸಿದ, ಪ್ರಕಟಪಡಿಸಿದ ಖ್ಯಾತಿ ಬಹಳ ಮುಖ್ಯವಾದುದಾಗಿದೆ. ಬಹುಶ: ಅಂತಹ ವ್ಯಕ್ತಿಯನ್ನು ಕಳೆದುಕೊಂಡು ಇರಾನ್ ಹಾಗೂ ಸಿನಿಮಾ ಜಗತ್ತು ಬಡವಾಗಿದೆ.

Abbas Kiarostami movie stillಇರಾನ್‍ನಲ್ಲಿ ಸಿನಿಮಾ ಪ್ರಕ್ರಿಯೆ ಬಹಳ ಪ್ರೌಢವಾಗಿ ದರಿಯುಶ್ ಮೆಹರ್‍ಜುಯಿಯಿಂದ ಆರಂಭವಾಯಿತಾದರೂ ಕೂಡಾ ಅದಕ್ಕೊಂದು ಅಂತರ್‍ರಾಷ್ಟ್ರೀಯ ಮಾನ್ಯತೆ ದೊರಕಿಸಿಕೊಟ್ಟಿದ್ದು ಕಿಯರೊಸ್ತಾಮಿ ಸಿನಿಮಾಗಳು. ಆತನ ಸಿನಿಮಾಗಳು ಸಿನಿಮಾ ಎನ್ನುವ ಮಾಧ್ಯಮವನ್ನೇ ಮಾನವೀಯಗೊಳಿಸಿದುವು.

ಹಾಲಿವುಡ್‍ನ ಒರಟುತನ ಮತ್ತು ಅಮಾನವೀಯತೆಯ ಆಯಾಮಕ್ಕೆ ಪರ್ಯಾಯವಾಗಿ ಮತ್ತು ಸಮಾನಾಂತರವಾಗಿ ಅವುಗಳು ಸಾಗಿದುವು.

ಸ್ವತ: ಜೀವನವನ್ನು ಪ್ರೀತಿಸುವ ಒಬ್ಬ ವ್ಯಕ್ತಿಯಾಗಿ ಆತನ ಬಹುತೇಕ ಸಿನಿಮಾಗಳು ಜೀವನ ಪ್ರೀತಿಯ ಸತ್ವ ಮತ್ತು ಶಕ್ತಿಯ ನಿರೂಪಣೆಗಳಾಗಿಯೇ ಒದಗಿದುವು. ಈತನ ಟೇಸ್ಟ್ ಆಫ್ ಚೆರ್ರಿ (1997 ಕಾನ್ ಚಿತ್ರೋತ್ಸವದ ಪಾಮ್-ಡಿ-ಓರ್ ವಿಜೇತ ಚಿತ್ರ) ವಿಂಡ್ ವಿಲ್ ಕ್ಯಾರಿ ಅಸ್, ಸರ್ಟಿಫೈಡ್ ಕಾಪಿ ಮುಂತಾದ ಅನೇಕ ಚಿತ್ರಗಳ ಪ್ರತಿಪಾದನೆಯೇ ಜೀವನ ಪ್ರೀತಿ. ಬಹುಶ: ಈ ಚಿತ್ರಗಳನ್ನು ನೋಡಿದ ಮೇಲೆ ನಮಗೆ ಜೀವನ ಪ್ರೀತಿಯ ಪ್ರತಿಶೇಧಾತ್ಮಕ ರೂಪವಾದ ಸಾವನ್ನು, ಆತನ ಸಾವನ್ನು ಸಹಿಸಲಸಾಧ್ಯವಾಗುವುದು.

ಕಿಯರೊಸ್ತಾಮಿಯ ಸಿನಿಮಾ ಜೀವನ ಆರಂಭವಾಗಿದ್ದು ಸರಿ ಸುಮಾರು 1969ರ ಸುಮಾರಿಗೆ. ಟೆಹ್ರಾನ್ ಯುನಿವರ್ಸಿಟಿಯಲ್ಲಿ ‘ಚಿತ್ರಕಲೆ’ಯನ್ನು ಅಧ್ಯಯನ ಮಾಡಿ ಅನೇಕ ಇರಾನಿಯನ್ ಟಿವಿಗಳಿಗೆ ಕಿಯರೊಸ್ತಾಮಿ ಜಾಹೀರಾತುಗಳನ್ನು ನಿರ್ದೇಶಿಸಿದ. 1969ರಲ್ಲಿ ಇರಾನಿನ ‘ಖನೂನ್’ ಅಥವಾ ‘ಸೆಂಟರ್ ಫಾರ್ ಇಂಟೆಲೆಕ್ಚುವಲ್ ಡೆವಲಪ್‍ಮೆಂಟ್ ಆಫ್ ಚಿಲ್ಡ್ರನ್ ಅಂಡ್ ಯಂಗ್ ಅಡಲ್ಟ್ಸ್’ ಸಂಸ್ಥೆಯಲ್ಲಿ ಅಬ್ಬಾಸ್  ಸಿನಿಮಾ ವಿಭಾಗವನ್ನು ಮುನ್ನಡೆಸಿದ.

ಕಿಯರೊಸ್ತಾಮಿಯೇ ಹೇಳುವ ಹಾಗೆ, ‘ಈ ಸಂಸ್ಥೆಯಲ್ಲಿ ಮೊದಲು ಕಾರ್ಯ ನಿರ್ವಹಿಸುತ್ತಾ ಮಕ್ಕಳ ಬಾಲ್ಯದ ಸಮಸ್ಯೆಗಳ ಬಗ್ಗೆಯೇ ಫಿಲ್ಮ್ ಗಳನ್ನು ಮಾಡಬೇಕಿತ್ತು. ಆದರೆ ಅದು ನನ್ನನ್ನು ನಿಜವಾಗಿಯೂ ಒಬ್ಬ ಕಲಾವಿದ ಮತ್ತು ನಿರ್ದೇಶಕನನ್ನಾಗಿಸಿತು. ಸುಮಾರು ಎರಡು ದಶಕ ಇಲ್ಲಿ ದುಡಿದು ಅಬ್ಬಾಸ್ ತನ್ನ ಮೊದಲ ಫೀಚರ್ ಫಿಲ್ಮ್, ‘ದಿ ರಿಪೋರ್ಟ್’ (1977) ಅನ್ನು ಕೂಡಾ ಇಲ್ಲಿಯೇ ತಯಾರಿಸಿದ.

1970ರ ದಶಕದ ಇರಾನಿನ ಖೊಮೇನಿ ಕ್ರಾಂತಿ ಹಾಗೂ ಅದರ ನಂತರದ ತೀವ್ರ ತೆರನಾದ ಸೆನ್ಸಾರ್‍ಗಳ ನಡುವೆ ಹೇಗೋ ಹೊಂದಾಣಿಕೆಯೊಂದಿಗೆ ಇರಾನಿನಲ್ಲೇ ಬದುಕಿದ. ಈತನ ಅನೇಕ ನಿರ್ದೇಶಕ ಮಿತ್ರರು, ಸೃಜನಶೀಲ ಗೆಳೆಯರು ಇರಾನ್ ಅನ್ನು ಬಿಟ್ಟು ಬೇರೆ ದೇಶಗಳಲ್ಲಿ ನೆಲೆಸಿದಾಗಲೂ ಕೂಡಾ, ಅಬ್ಬಾಸ್ ಇರಾನ್‍ನಲ್ಲಿಯೇ ಉಳಿದ.

Abbas Kiarostami 2“ಒಂದು ಮರವನ್ನು ಕಿತ್ತು ಇನ್ನೊಂದು ಜಾಗದಲ್ಲಿ ನೆಟ್ಟರೆ ಆ ಮರ ಹಣ್ಣನ್ನು ಬಿಡುವುದಿಲ್ಲ, ನಾನು ದೇಶವನ್ನು ಬಿಟ್ಟಿದ್ದಿದ್ದರೆ ಅದು ಬೇರೊಂದು ಜಾಗದಲ್ಲಿ ಊರಿದ ಮರದ ಹಾಗಿರುತ್ತದೆ” ಎನ್ನುವ ನಂಬಿಕೆ ಕಿಯರೊಸ್ತಾಮಿ ಜತೆಗಿತ್ತು.

‘ಖನೂನ್’ ಸಂಸ್ಥೆಯಲ್ಲಿದ್ದಾಗಲೇ ಅಬ್ಬಾಸ್ ಮಾಡಿದ ‘ಕೋಕರ್ ಟ್ರಯಾಲಜಿ’ಯು ಆತನನ್ನು ಅಂತರಾಷ್ಟ್ರೀಯ ಚಿತ್ರಪಟದಲ್ಲಿ ಆತನ ತೀವ್ರವಾದ ಸಂವೇದನೆ ಮತ್ತು ಬೌದ್ಧಿಕತೆಗಳೊಂದಿಗೆ ಗುರುತಿಸುವಂತೆ ಮಾಡಿತು. ವಿಶೇಷವಾಗಿ ಟ್ರಯಾಲಜಿಯ ಮೂರು ಚಿತ್ರಗಳಲ್ಲಿ ಒಂದಾದ, ‘ವ್ಹೇರ್ ಈಸ್ ದಿ ಫ್ರೆಂಡ್ಸ್ ಹೋಂ?’ ಕರುಣಾರ್ದ ಕಥೆಯೊಂದಿಗೆ ‘ಲೊಕಾರ್ನೋ ಫಿಲ್ಮ್ ಫೆಸ್ಟ್’ ನ ‘ಬ್ರೋಂಝ್ ಲೆಪರ್ಡ್’ ಪ್ರಶಸ್ತಿಯನ್ನು ಪಡೆಯಿತು. ಬಹುಶ: ಅಬ್ಬಾಸ್‍ಗೆ ಅತ್ಯಂತ ಹೆಸರು ತಂದುಕೊಟ್ಟ ಫಿಲ್ಮ್. 1990ರಲ್ಲಿ ‘ಖನೂನ್’ ಸಂಸ್ಥೆ ಬಿಟ್ಟ ಮೇಲೆ ಮಾಡಿದ, ‘ಕ್ಲೋಸ್-ಅಪ್’.

ಇದು ಕಿಯರಸ್ತೋಮಿಯ ಗೆಳೆಯ, ಇರಾನ್‍ನ ಪ್ರಸಿದ್ಧ ನಿರ್ದೇಶಕ ಮೊಹ್‍ಸಿನ್ ಮಕ್ಮಲ್‍ಬಾಫ್‍ರನ್ನು ಹೋಲುವ ವ್ಯಕ್ತಿಯೊಬ್ಬನ ಅಪರಾಧಿ ವಿಚಾರಣೆ ಸಂಬಂಧಿತ ಡಾಕ್ಯು-ಡ್ರಾಮಾ. ಅಬ್ಬಾಸ್ ಸುಮಾರು 1995ರ ಹೊತ್ತಿಗೆ ಇತರರ ಸಿನಿಮಾಗಳನ್ನು ಬರೆದು ನಿರ್ದೇಶಿಸಿದ ಕೂಡಾ. ಅವುಗಳಲ್ಲಿ ಪ್ರಮುಖವಾದುದು ಜಾಫರ್ ಫನಾಹಿಯ ವೈಟ್ ಬಲೂನ್. ಫನಾಹಿ ಕಿಯರೊಸ್ತಾಮಿಯ ಟೇಸ್ಟ್ ಆಫ್ ಚೆರ್ರಿಯ ಸಹಾಯಕ ನಿರ್ದೇಶಕನಾಗಿದ್ದ.

ಸುಮಾರು 1997ರ ನಂತರ ಅಬ್ಬಾಸ್ ಅಟ್ಯುರ್ ಎಂದು ಗುರುತಿಸಿಕೊಂಡಿದ್ದು ಆತನ ಟೇಸ್ಟ್ ಆಫ್ ಚೆರ್ರಿ, ದಿ ವಿಂಡ್ ವಿಲ್ ಕ್ಯಾರಿ ಅಸ್, ಟೆನ್, ಎಬಿಸಿ ಆಫ್ರಿಕಾ, ನಿರ್ದೇಶಕ ಕೆನ್ ಲೋಚ್ ಮತ್ತು ಎರ್ಮಾನ್ನೋ ಒಲ್ಮಿ ಜತೆಗೆ ನಿರ್ದೇಶಿಸಿದ ‘ಟಿಕೆಟ್ಸ್’ ಮತ್ತು ಶಿರೀನ್’ ಸಿನಿಮಾಗಳ ಮೂಲಕ. ಇದರ ನಂತರ ಇರಾನ್‍ನಲ್ಲಿ ಮಹ್ಮದ್ ಅಹ್ಮದೈನೆಜಾದ್‍ನ ಪಕ್ಷ ಮತ್ತು ರಾಜಕೀಯ ಬಿಕ್ಕಟ್ಟುಗಳು ಕಿಯರೊಸ್ತಾಮಿಗೆ ಇರಾನ್‍ನಲ್ಲಿ ಚಿತ್ರ ನಿರ್ಮಿಸುವ ವಾತಾವರಣವನ್ನೇ ನೀಡಲಿಲ್ಲ.

ಈ ಕಾರಣದಿಂದ ನಟಿ ಜೂಲಿಯಟ್  ಬಿನೋಚ್‍ಗೆ ಶ್ರೇಷ್ಠ ನಟಿ ಪ್ರಶಸ್ತಿ ದೊರಕಿಸಿದ ‘ಸರ್ಟಿಫೈಡ್ ಕಾಪಿ’ ಚಿತ್ರವನ್ನು ಇಟಲಿಯಲ್ಲೂ, ‘ಲೈಕ್ ಸಮ್‍ ಒನ್ ಇನ್ ಲವ್’ ಚಿತ್ರವನ್ನು ಜಪಾನ್‍ನಲ್ಲಿಯೂ ಕಿಯರೊಸ್ತಾಮಿ ನಿರ್ದೇಶಿಸಿದ. ಆದಾಗ್ಯೂ ಈ ಚಿತ್ರಗಳು ಕಿಯರೊಸ್ತಾಮಿಯ ಪ್ರಮುಖ ಕಾಳಜಿಗಳಾದ ಜೀವನ ಪ್ರೀತಿ, ಸಂಬಂಧಗಳ ಅಧಿಕೃತತೆ ಮತ್ತು ಅಗತ್ಯತೆಯ ಮೇಲೆ ಮೂಡಿದುವು.

ಆತನ ದೇಹ ಇಂದು ಇಲ್ಲವಾದರೂ ಅವನ ಸಿನಿಮಾ, ಸಂತತನ, ಗಾಢವಾದ ಜೀವನಪ್ರೀತಿ ನಮ್ಮ ಜೊತೆಗಿದೆ.

‍ಲೇಖಕರು admin

12 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading