ವಾಹ್! ಮುಂಬಯಿ ರಾಣಿ ನೀನೆಷ್ಟು ಚೆಂದವೇ..

ಮಳೆಯ ಹಾಡು

girija-shastri-with-mom

ಗಿರಿಜಾಶಾಸ್ತ್ರಿ

ಆಕಾಶಕ್ಕೆ ತೂತುಬಿದ್ದಹಾಗೆ ಧೋ ಎಂದು 24 ತಾಸು ಒಂದೇ ಸಮನೆ ಸುರಿವ ಮಳೆ. ಇಲ್ಲಿ ಯಾರ ಜೋರು ನಡೆಯಲಾರದು ಎಂದು ‘ಭರ್ರೋ’ ಬೀಸುವ ಗಾಳಿ. ನವ ವಧುವಿನಂತೆ ಮೈತೊಳೆದುಕೊಂಡು ನಿಂತ ಮರಗಿಡಗಳು ಗಗನಚುಂಬಿ ಕಟ್ಟಡಗಳು. ವಾಹ್ ಮುಂಬಯಿ ರಾಣಿ ನೀನೆಷ್ಟು ಚೆಂದವೇ!

ಒಂದು ಸುಸಜ್ಜಿತ ಹೊಟೆಲ್. ಅಲ್ಲಿ ಮಂದವಾದ ಬೆಳಕು. ಮಧ್ಯದಲ್ಲಿ ತನ್ನ ಪೇಟಿಯನ್ನಿಟ್ಟುಕೊಂಡು ತಬಲಾ ಸಾಥಿಯಜೊತೆಗೆ ಗಜಲ್ ಗಾಯಕ ಕುಳಿತಿದ್ದಾನೆ. ಅ ಹೋಟೆಲ್ಲಿನ ಒಂದು ಅರೆಗತ್ತಲೆಯ ಮೂಲೆಯಲ್ಲಿ, ತಮ್ಮ ಇಬ್ಬರು ಮಕ್ಕಳು ಮತ್ತು ಸೊಸೆಯೊಂದಿಗೆ ದಂಪತಿಯೊಬ್ಬರು ಕುಳಿತಿದ್ದಾರೆ. ಮಂದ ಬೆಳಕು ಅವರೆಲ್ಲರ ಮುಖದ ಮೇಲೆ ಅನಂದವನ್ನು ಬೀರುತ್ತಿದೆ.

rain musicಅಂದು ಅ ಹೋಟೆಲ್ ನಲ್ಲಿ ಗಜಲ್ ಗಾಯನ ಇದೆಯೆಂದು ತಿಳಿದು ಮೊದಲೇ ಟೇಬಲ್ ಕಾದಿರಿಸಿ ಆ ಕುಟುಂಬ ಅಲ್ಲಿಗೆ ಬಂದಿದೆ. ಅವಳು ದಿಂಬು ಲೋಡೊಂದನ್ನು ಎಳೆದು ಕೊಂಡು ಸುಖವಾಗಿ ಸೋಫಾದ ಮೇಲೆ ಕುಳಿತುಕೊಳ್ಳುತ್ತಾಳೆ. ಅಮ್ಮನೋಡು ಒಳ್ಳೇ ರಾಣಿ ತರಹಾ… ಆದರೆ ಬರಗೆಟ್ಟವಳ… ಹಾಗೆ…. ಊಟಕ್ಕಲ್ಲ… ಹಾಡಿಗೆ…! ಎಂದು ಅವಳ ಕಿರಿಯ ಮಗ ಛೇಡಿಸುತ್ತಾನೆ.

ಹೌದು ಅವಳಿಗೆ ಹೊಟ್ಟೆ ಎಂದೂ ನಾಜೂಕೇ. ಮಂಗಳಾರತಿ ತೆಗೆದುಕೊಂಡರೆ ಉಷ್ಣ, ತೀರ್ಥ ತೆಗೆದುಕೊಂಡರೆ ಶೀತ. ಆದರೆ ಹಾಡೆಂದರೆ ಮಾತ್ರ ಅವಳಿಗೆ ಎಷ್ಟು ಬಕ್ಕರಿಸಿದರೂ ಸಾಲದು. ಕೇಳಿದಷ್ಟೂ ಅತೃಪ್ತಿ ಹೆಚ್ಚುತ್ತದೆ. ಎಂಥ ಸಂಭ್ರಮ! ಹಾಡಿನ ಜೊತೆಗೆ ಸೊಸೆ, ಮಕ್ಕಳು, ಮತ್ತು ಮಳೆ!!

ಹೊರಗೆ ಮಳೆಯ ಆರ್ಭಟ ಜೋರಾಗುತ್ತದೆ. ಮಕ್ಕಳು ಏನೋ ಜೋಕ್ ಮಾಡಿಕೊಂಡು ನಗುತ್ತಾರೆ. ಮಧ್ಯವಯಸ್ಸು ದಾಟಿದ ಅ ದಂಪತಿಯೂ ಅರ್ಥವಾಗದಿದ್ದರೂ ಮುಗುಳ್ನಗುತ್ತಾರೆ. ಮಳೆ ಭೂಮಿಯನ್ನು ಮಾತ್ರ ತಂಪಾಗಿಸುವುದಿಲ್ಲ ಅದು ತನ್ನ ಭಾವಪ್ರಪಂಚವನ್ನೂ ಆರ್ಧ್ರಗೊಳಿಸುತ್ತದೆ ಎಂಬುದನ್ನು ಅವಳು ಎಂದೋ ಕಂಡುಕೊಂಡಿದ್ದಾಳೆ. ಮಕ್ಕಳ ಜೊತೆಗೆ ಹಾಡಿನ ಹಿನ್ನೆಲೆಯಲ್ಲಿ ಸುರಿಯುವ ಮಳೆ ಅವಳನ್ನು ಅಳಿಸಿಯೇ ಬಿಡುತ್ತದೆ. ವಾಷ್ ರೂಮಿಗೆ ಹೋಗುವ ನೆಪದಲ್ಲಿ ಅವಳು ಕಣ್ಣನ್ನು ಒರೆಸಿಕೊಂಡು ಬರುತ್ತಾಳೆ. ಅವಳಿಗೆ ಅದೊಂದು ಅಮೃತಘಳಿಗೆ. ಯೋಗಾಯೋಗ.

ಅದಕ್ಕಾಗಿಯೇ ಮಳೆಗಾಲದ ಸಂಜೆಯಲ್ಲಿ ಮಕ್ಕಳ ಜೊತೆ ಕಳೆಯುವುದೆಂದರೆ ಅವಳಿಗೆ ಎಲ್ಲಿಲ್ಲದ ಹಪಾಹಪಿ. ಕುಟುಂಬದಲ್ಲಿ ಆಗೀಗ ಏಳುವ ಅಸಮಾಧಾನದ ಕಿಡಿಗಳನ್ನು ನಂದಿಸುವ ಶಕ್ತಿ ಈ ಮಳೆಗೆ ಇದೆ. ಮಕ್ಕಳು ಸದಾ ತನ್ನ ಜೊತೆಗಿರಬೇಕೆಂಬ ಅವಳ ನಿರಂತರವಾದ, ಅವ್ಯಾವಹಾರಿಕ ಕನಸನ್ನು ನನಸು ಮಾಡುವ ಅಮೃತ ಘಳಿಗೆಳೆಂದರೆ ಈ ಮಳೆ ಮತ್ತು ಆ ಹಾಡು. ಅವು ಜಾರಿಹೋಗದಂತೆ ತನ್ನ ಸೆರಗಿನಲ್ಲಿ ಕಟ್ಟಿಕೊಳ್ಳುವ ಬಯಕೆ ಅವಳಿಗೆ.

ಕಾಲವನ್ನು ಕಟ್ಟಿ ಹಾಕುವುದು ಸಾಧ್ಯವಿಲ್ಲ. ನಾವೆಲ್ಲ ಕಾಲವಶರು ಎಂಬ ಅರಿವು ಅವಳಿಗಿದೆ. ಆದರೆ ಎಲ್ಲ ಕಾಲಗಳೂ ಹೊನಲಾಗಿ ಹರಿಯುದೆಂದರೆ ಅದು ಹಾಡಿನೊಳಗೇ, ಎಂಬುದೂ ಅವಳಿಗೆ ಗೊತ್ತಿದೆ. ಭೂತ, ವರ್ತಮಾನ, ಭವಿಷ್ಯತ್ತುಗಳು ಅಲ್ಲಿ ಮೇಳೈಸುತ್ತವೆ. ಆದುದರಿಂದಲೇ ಅಲ್ಲಿ ನಾವು ನಮ್ಮ ಇಷ್ಟವಾದ ಕಾಲದೊಳಗೆ ವಿಲೀನವಾಗಿಬಿಡಬಹುದು. ಅದು ಒಂದು ನಶೆ.

ಆದುದರಿಂದಲೇ ಹಾಡೆಂದರೆ ಅವಳಿಗೆ ಪ್ರಾಣ. ಮಳೆ ಹಾಡನ್ನು ಒದ್ದೆಯಾಗಿಸುತ್ತದೆ. ಮಳೆ ಮತ್ತೆ ಮತ್ತೆ ಹೊಯ್ಯುವಾಗೆಲ್ಲ, ಅದೇ ಹಾಡು ಕೇಳುವಾಗ ಅವಳ ಕನಸುಗಳು ಗರಿಗೆದರುತ್ತವೆ. ಭೌತಿಕವಾಗಿ ಎದುರಿಗೆ ಇಲ್ಲದ ಸಂದರ್ಭವೊಂದು ಭಾವಲೋಕದಲ್ಲಿ ಉಯ್ಯಾಲೆಯಾಡುತ್ತದೆ. ಹಾಡು ತೊಡೆಯ ಮೇಲಾಡುತ್ತದೆ. ಅವಳು ಜೀಕುತ್ತಾಳೆ.

ಓ ಶ್ಯಾಮ್ ಕುಛ್ ಅಜೀಬ್ ಥೀ, ಏ ಶ್ಯಾಮ್ ಭೀ ಅಜೀಬ್ ಹೈಂ. ಓ ಕಲ್ ಭೀ ಪಾಸ್ ಆಯಿಥೀ ಆಜ್ ಭೀ ಕರೀಬ್ ಹೈಂ..(ಅಂದಿನ ಸಂಜೆ ವಿಚಿತ್ರ ಎಂದಿನ ಸಂಜೆಯಂತೆ ಇರಲಿಲ್ಲ. ಇಂದಿನ ಸಂಜೆಯೂ ಹಾಗೆಯೇ ಇದೆ. ಯಾಕೆಂದರೆ ಅಂದು ಅವಳು ನನ್ನ ಬಳಿ ಬಂದಿದ್ದಳು. ಇಂದೂ ಅವಳು ನನ್ನ ಸನಿಹದಲ್ಲೇ ಇದ್ದಾಳೆ..)

ಯಾವುದೋ ಒಂದು ಸಂಬಂಧ ಕಳೆದು ಹೋಗಿದೆ. ಆದರೆ ನೆನಪು ಮಾತ್ರ ಕಳೆದುಹೋಗಿಲ್ಲ. ಮನುಷ್ಯನ ದುರಂತವೆಂದರೆ ಇದೇ. ನೆನಪು ವರವೂ ಹೌದು ಶಾಪವೂ ಹೌದು. ಸಂಬಂಧ, ಕಾಲನ ಕತ್ತರಿಗೆ ಸಿಕ್ಕು ಕಡಿದು ಹೋಗಿದೆ. ನೆನಪು ಅದೇ ಕಾಲನ ಕತ್ತರಿಗೆ ಸಿಕ್ಕಿಯೂ ಕಡಿದುಕೊಳ್ಳಲಾರದೇ ವಿಲ ವಿಲ ಒದ್ದಾಡುತ್ತಿದೆ. ಆದುದರಿಂದಲೇ ನೆನಪಿನ ಝಂಝಾವಾತಕ್ಕೆ ಸಿಕ್ಕಿ ಕಳೆದು ಹೋದ ಸಂಬಂಧವನ್ನು ಹೊಸ ಸಂದರ್ಭದಲ್ಲಿ ನವೀಕರಿಸಿಕೊಳ್ಳಲು ನೋಡುತ್ತಿದ್ದಾನೆ ಹಾಡಿನ ನಾಯಕ.

mumbai rain5ಮತ್ತೆ ಮಳೆಹೊಯ್ಯುತಿದೆ……..
ಬೇಂದ್ರೆಯವರ ‘ಕನ್ನಡ ಮೇಘದೂತ’ ಪಾಠಮಾಡುವಾಗ ಕೆ.ವಿ. ನಾರಾಯಣ್ ಮೇಷ್ಟ್ರು ಆಂಟನಿ ಕ್ಲಿಯೋಪಾತ್ರ ನಾಟಕದ ಹಿ ಪ್ಲೋಡ್ ಹರ್ ಅಂಡ್ ಶಿ ಕ್ರಾಪ್ಡ್ (He plowed her, and she cropped.) ಎನ್ನುವ ಸಾಲುಗಳನ್ನು ಉದ್ಧರಿಸುತ್ತಿದ್ದರು. ಮಳೆಯೆಂದರೆ ಫಲವಂತಿಕೆಯ ಕಾಲ. ಮೇಘ ಅದರ ಪೂರ್ವಸ್ಥಿತಿ. ಉಳುವ ಮತ್ತು ಫಲವಂತಿಕೆಯ ಮಧ್ಯದ ಸ್ಥಿತಿಯೆಂದರೆ ಮಳೆಯೇ.

ಶಾಪಗ್ರಸ್ತನಾದ ಯಕ್ಷ ರಾಮಗಿರಿಯ ಪರ್ವತದಲ್ಲಿ ವಿಪ್ರಲಂಭದಲ್ಲಿ ಬಳಲುತ್ತಿದ್ದಾನೆ. ಅತ್ತ ಯಕ್ಷಿ, ಬಳೆ ಮೊಳಕೈಗೆ ಸರಿಯುವಷ್ಟು ಬಡವಾಗಿದ್ದಾಳೆ. ಯಕ್ಷ ಯಕ್ಷಿಯನ್ನು ಯೋಗಕ್ಕೆ ಸಿದ್ಧಮಾಡುವ ದೂತನಾಗಿದ್ದಾನೆ ಮೇಘ. ‘ಮೇಘದೂತ’ದ ತುಂಬೆಲ್ಲಾ ಯೋಗದ ಕನಸು ವಿಯೋಗದ ಪರದೆಯ ಮೇಲೆ! ಆಂಟನಿ ಕ್ಲಿಯೋಪಾತ್ರದ ಸಾಲುಗಳೂ ಕೂಡ ಒಂದು ಯೋಗದ ಸ್ಥಿತಿಯನ್ನೇ ಸಾರುತ್ತವೆ.. ಭೋಗದಲ್ಲಿ ಮೈಮರೆತಿರುವ ಯಕ್ಷನಿಗೆ ಶಿಕ್ಷೆ ಕೊಡಬೇಕೆಂಬ ಉದ್ದೇಶದಿಂದ ಯಕ್ಷ ಯಕ್ಷಿಯನ್ನು ಬೇರೆಮಾಡಲಾಯಿತಂತೆ. ಆಗ ಅವರು ವಿಯೋಗದಲ್ಲಿ ಬೇಯುವುದರ ಮೂಲಕ ಯೋಗದ ಮಹತ್ವವನ್ನು ಕಂಡುಕೊಂಡರಂತೆ.

ಮನುಷ್ಯನ ದುರಂತವೆಂದರೆ ಯೋಗದಲ್ಲಾಗಲೀ, ವಿಯೋಗದಲ್ಲಾಗಲೀ ಅಸುಖಿಯಾಗಿರುವುದು. ಯೋಗದಲ್ಲಿ ಅದನ್ನು ಕಳೆದುಕೊಳ್ಳುವ ಭಯ. ವಿಯೋಗದಲ್ಲಿ ಯೋಗವನ್ನು ಕಳೆದುಕೊಂಡ ದುಃಖ, ಕಾಡುವ ಯೋಗದ ನೆನಪು. ಭೂತದ ಕನಸು ಮತ್ತು ಭವಿಷ್ಯದ ಭಯದಲ್ಲಿ ಮನುಷ್ಯಕುಲ ತತ್ತರಿಸಿದೆ. ಮೋಹನ್ ರಾಕೇಶ್ ಅವರ ‘ಆಷಾಢ್ ಕೆ ಏಕ್ ದಿನ್’ ಪಾಠಮಾಡುವಾಗಲೂ ಕೆ.ವಿ.ಎನ್. ಮೇಷ್ಟ್ರು ಈ ಮಾತುಗಳನ್ನು ಹೇಳಿದ್ದರು. ಆದುದರಿಂದಲೇ ಈ ಸಂಬಂಧವೆನ್ನುವುದು ‘ಕಟು ಮಧುರ’ ಎಂದು ಬೇಂದ್ರೆ ಹೇಳುತ್ತಾರೆ. ಕಹಿ ಮತ್ತು ಮಾಧುರ್ಯಗಳು ಬದುಕಿನುದ್ದಕ್ಕೂ ಬೇರೆ ಬೇರೆ ಬಣ್ಣಗಳಲ್ಲಿ ಪುನರಾವರ್ತನೆಯಾಗುತ್ತಲೇ ಇರುತ್ತವೆ. ಯಾವುದೂ ನಿತ್ಯವಲ್ಲ ಎಲ್ಲವೂ ಅನಿತ್ಯ.

ಸಂಬಂಧಗಳೇ ಹಾಗೆ ಬದಲಾಗುತ್ತಲೇ ಇರುತ್ತವೆ. ಬದಲಾವಣೆ ಎನ್ನುವುದೇ ಸತ್ಯ. ಅದೇ ಶಾಶ್ವತ ಎಂಬುದು ಅರಿವಿಗೆ ಹತ್ತಿದರೂ ಪ್ರಯೋಗಕ್ಕೆ ತರುವುದು ಎಷ್ಟು ಕಠಿಣ!

ಒಂಬತ್ತು ತಿಂಗಳು ಹೊಟ್ಟೆಯೊಳಗೆ, ಕರುಳಿಗೆ ಅಂಟಿಕೊಂಡ ಮಗು ಹೊರಬಂದು ಎದೆಗೆ ಅಂಟಿಕೊಳ್ಳುತ್ತದೆ. ಅನಂತರ ಮಡಿಲೊಳಗೆ ಬಿದ್ದು ಆಡುವ ಸುಮ್ಮಾನ ಅದಕ್ಕೆ. ಮಡಿಲಿಂದ ಜಾರಿ, ತೆವಳಿ ಅಂಬೆಗಾಲಿಟ್ಟು ತಪ್ಪುಹೆಜ್ಜೆ ಹಿಡಿದು, ವಾಲಾಡುತ್ತಲೇ ನಿಂತು ಏಳುತ್ತ ಬೀಳುತ್ತಾ ಓಡತೊಡಗುತ್ತದೆ. ಹೀಗೆ ಓಡಲು ಸುರುಮಾಡಿದ ಮಗು ಓಡುತ್ತಲೇ ತಾಯಿಯಿಂದ ದೂರ ದೂರ ಓಡಿ ಹೋಗಿಬಿಡುತ್ತದೆ. ಅಮ್ಮನ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಂಡು ಅನಂತ ಆಕಾಶದ ಉದ್ದಗಲಗಳನ್ನು ಅಳೆಯುವ ಬಯಕೆ ಅದಕ್ಕೆ. ಅಮ್ಮ ಬಿಡಲೊಲ್ಲಳು.

ತನ್ನ ಬಯಕೆ ಮತ್ತು ಅಮ್ಮನ ಗುರುತ್ವಾಕರ್ಷಣೆ ಇವೆರೆಡರ ಸೆಳೆತಕ್ಕೆ ಸಿಕ್ಕ ಅ ಮಗುವಾದರೂ ಏನು ಮಾಡಬೇಕು? ಅದಕ್ಕೇ ಇಂಧನ ತೀರಲು ಬಂದೇ ಬರುವೆನು ಮೂರ್ತ ಪ್ರೇಮದೆಡೆಗೆ (ಬಿ.ಆರ್ ಲಕ್ಷ್ಮಣರಾವ್) ಎಂದು ಆ ಮಗು ವಚನ ನೀಡುತ್ತದೆ ತಾಯಿಗೆ. ಅವಳು ಮಾತ್ರ ಕರುಳ ಬಳ್ಳಿಯನ್ನು ಕತ್ತರಿಸಿಕೊಳ್ಳುವುದೇ ಇಲ್ಲ. (ನಮ್ಮ ಭಾರತೀಯ ಚಿಂತನೆಗಳೆಲ್ಲ ಇದರ ಸುತ್ತಲೆ ಗಿರಕಿ ಹೊಡೆಯುತ್ತವೆ.)

music printsದಿನತುಂಬಿದ ಮೇಲೆ ಹೊಟ್ಟೆಯಿಂದ ಹೊರಹಾಕದೇ ಹೋದರೆ ಮಗು ಮತ್ತು ತಾಯಿ ಇಬ್ಬರಿಗೂ ಅಪಾಯ, ಇಬ್ಬರೂ ಬೆಳೆಯಬೇಕೆಂದರೆ ಕರುಳ ಬಳ್ಳಿ ಕತ್ತರಿಸಿಕೊಳ್ಳಬೇಕಾದುದು ಅನಿವಾರ್ಯ ಎಂಬುದು ಅವಳ ಬುದ್ಧಿಗೆ ಗೊತ್ತಿದ್ದರೂ ಕರುಳಿಗೆ ಅರಿವಾಗದು. ಯಾಕೆಂದರೆ ಕರುಳಿಗೆ ಕಣ್ಣಾಗಲೀ ಬುದ್ದಿಯಾಗಲೀ ಇಲ್ಲವಲ್ಲ.

ಸಂಬಂಧಗಳು ಭೌತಿಕವಾಗಿ ಕಡಿದು ಹೋದರೂ ನಾವು ಭಾವನಾತ್ಮಕವಾಗಿ ಅದನ್ನು ಕಡಿದುಕೊಳ್ಳುವುದಿಲ್ಲ. ಬದಲಾವಣೆ ನಮ್ಮ ಬದುಕಿನ ಸತ್ಯ, ಸೃಷ್ಟಿಯ ಚಲಾವಣೆಗೆ ಅನಿವಾರ್ಯ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಪ್ರೇಮ, ವಾತ್ಸಲ್ಯದ ಚೌಕಟ್ಟಿನೊಳಗೆ ಅವುಗಳನ್ನು ಸದಾ ಬಂಧಿಸಿ ನಮ್ಮ ಹಿಡಿತದಿಂದ ಜಾರಿಹೋಗದಂತೆ ನಮ್ಮ ಹದ್ದುಬಸ್ತಿನಲ್ಲಿಟ್ಟುಕೊಳ್ಳುವ ಹಟ ನಮಗೆ. ಅದಕ್ಕೆ ನಾವು ಸದಾ ದುಃಖಿಗಳು. ಅದಕ್ಕೆ ಇರಬಹುದು ದುಃಖದ ಸಂದರ್ಭದಲ್ಲೆಲ್ಲಾ ಚಲನಚಿತ್ರದೊಳಗೆ ಮಳೆ ಬರುತ್ತದೆ. ಚಾರ್ಲಿ ಚಾಪ್ಲಿನ್ ಹೇಳುವಂತೆ ಕಣ್ಣೀರನ್ನು ಮಳೆನೀರಲ್ಲಿ ಮರೆಸುವ ಉಪಾಯವಿರಬಹುದು.

ಮತ್ತೆ ಮಳೆ ಹೊಯ್ಯುತ್ತದೆ. ಇಳೆ ಫಲವಂತಿಕೆಗೆ ಸಿದ್ಧವಾಗುತ್ತದೆ. ಹೊಸ ಸಂಬಂಧಕ್ಕೆ ನಾಂದಿಹಾಡುತ್ತದೆ. ಹಳೆ ಸಂಬಂಧಗಳನ್ನು ಅದರ ಮೂಲಕ ನವೀಕರಿಸಿಕೊಳ್ಳುತ್ತದೆ. ಮಳೆ ಮತ್ತು ಹಾಡು ಸೃಷ್ಟಿಸುವ ರೊಮ್ಯಾಂಟಿಕ್ ಎನ್ನಬಹುದಾದ ಮನಸ್ಥಿತಿ ನಮ್ಮ ವಿಸ್ಮೃತಿಯಯೊಳಗೆ ಅಡಗಿದ ನಮ್ಮೆಲ್ಲಾ ಕಾಲಗಳ ಆದಿಮ ಸಂದರ್ಭಗಳ ಜೊತೆಗೆ ಕೊಂಡಿಯಾಗಿಸಿಬಿಡುತ್ತದೆ ಎನಿಸುತ್ತದೆ.

ಗಾಯಕ ಹಾಡುತ್ತಾನೆ : ಜಿಂದಗೀ ಭರ್ ನಹೀಂ ಭೂಲೇಂಗೆ ಏ ಬರಸಾತ್ ಕಿ ರಾತ್ ..

‍ಲೇಖಕರು Admin

July 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. lalitha sid

    ಬಹಳ ಆಪ್ತ ಎನಿಸುವ ಲೇಖನ ಗಿರಿಜಾ ಅವರೆ.
    ಮಳೆ ಪ್ರೇಮಿಗಳಿಗೇ ಅಲ್ಲ ಬೆಳೆದ ಮಕ್ಕಳ ಅಮ್ಮಂದಿರಿಗೂ ಆಪ್ಯಾಯಮಾನ ಆಗಬಹದೆಂಬ ವಿಚಾರದೆಡೆಗೆ ಮಕ್ಕಳೂ ದೊಡ್ಡವರೂ ಈಗಲಾದರೂ ಗಮನಿಸಬಹುದು. :):):)

    ಪ್ರತಿಕ್ರಿಯೆ
  2. ರಾಜೀವ ನಾರಾಯಣ ನಾಯಕ

    ಮಳೆಯ ಬ್ಯಾಕ್ ಡ್ರಾಪ್ ನಲ್ಲಿ ಸಂಬಂಧಗಳ ರಿಮ್ ಜಿಮ್ ಹಾಡು ಖುಶಿಯನ್ನೂ ಅವ್ಯಕ್ತ ನೋವನ್ನೂ ಅನುಭವಿಸುವಂತೆ ಮಾಡಿತು…

    ಪ್ರತಿಕ್ರಿಯೆ
  3. Jayashree

    “ಮಕ್ಕಳು ಸದಾ ತನ್ನ ಜೊತೆಗಿರಬೇಕೆಂಬ ಅವಳ ನಿರಂತರವಾದ, ಅವ್ಯಾವಹಾರಿಕ ಕನಸನ್ನು ನನಸು ಮಾಡುವ ಅಮೃತ ಘಳಿಗೆಳೆಂದರೆ ಈ ಮಳೆ ಮತ್ತು ಆ ಹಾಡು. ಅವು ಜಾರಿಹೋಗದಂತೆ ತನ್ನ ಸೆರಗಿನಲ್ಲಿ ಕಟ್ಟಿಕೊಳ್ಳುವ ಬಯಕೆ ಅವಳಿಗೆ…..”
    ವ್ಯಾವಹಾರಿಕ, ಅವ್ಯಾವಹಾರಿಕತೆಯ ಅಂಚನ್ನು ಮೀರಿ ನಿಲ್ಲುವ ಅದೇ ಒಂದು ವಿಚಿತ್ರ ಬಯಕೆ.ಮಕ್ಕಳು ತನ್ನಿಂದ ದೂರವಾಗಬಾರದು! ಸಾಧ್ಯಾಸಾಧ್ಯತೆಯನ್ನು ತಿಳಿದಿದ್ದೂ ತಾಯಂದಿರ ಒಡಲಾಳದ ಆಸೆ. ಲೇಖನ ತುಂಬಾ ಸುಂದರವಾಗಿದೆ.

    ಪ್ರತಿಕ್ರಿಯೆ
  4. shama nandibetta

    “ಸಂಬಂಧವೆನ್ನುವುದು ‘ಕಟು ಮಧುರ’”

    Male, sambandha, maadhurya, katu vaasthava ellavannu maleya jathe thaluku haaki katti kotta chitra maleyaste chenda

    ಪ್ರತಿಕ್ರಿಯೆ
  5. Suma

    ತುಂಬಾ ತುಂಬ ಚೆನ್ನಾಗಿದೆ…..ಮಳೆಯಂತೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: