ಈಗ ಮಾಡೀವಿ ಆರಂಭ..

ಮಹಾರಾಷ್ಟ್ರದಲ್ಲಿ ಜರುಗುತ್ತಿರುವ ಬೃಹತ್ ರೈತ ಪ್ರತಿಭಟನೆಯ ಹಿನ್ನೆಲೆಯಲ್ಲಿ ಒಂದು ನೆನಪು 

ಜಿ ಎನ್ ನಾಗರಾಜ್ 

ಈಗ ಮಾಡೀವಿ ಆರಂಭ,ವಿಧಾನ ಸೌಧದಿ ರಣಗಂಭ- ನರಗುಂದ ರೈತ ಬಂಡಾಯದ ಆ ದಿನಗಳು.
ಡಿಸೆಂಬರ್,1979ರ ಡಿಸೆಂಬರ್. ನರಗುಂದಕ್ಕೆ ಮುಖ್ಯಮಂತ್ರಿ ಗುಂಡೂರಾಯರ ಭೇಟಿ. ನಾನು ಮುಖ್ಯಮಂತ್ರಿಯ ಹಿಂದಿನ ಕುರ್ಚಿಯಲ್ಲಿ. ಅವರು ಭಾಷಣ ಮಾಡುತ್ತಿರುವಾಗಲೇ ಅಲ್ಲಿಗೆ ರೈತರದೊಂದು ಮೆರವಣಿಗೆ ಬಂತು. ರೈತರು ಘೋಷಣೆ ಕೂಗುತ್ತಿದ್ದರು.

“ನಾನು ಇಂತಹವಕ್ಕೆಲ್ಲಾ ಕೇರ್ ಮಾಡುವುದಿಲ್ಲ” ಎಂದು ಗುಡುಗಿದರು ಗುಂಡೂರಾಯರು.

ನೀರಾವರಿ ಬೆಟರ್ ಮೆಂಟ್ ಲೆವಿ,ಕಂದಾಯ ವಿಪರೀತ. ಅದನ್ನು ಹಿಂತೆಗೆದುಕೊಳ್ಳಿ.
ಹತ್ತಿ,ಮುಸುಕಿನ ಜೋಳಕ್ಕೆ ಲಾಭದಾಯಕ ಬೆಲೆ ಕೊಡಿ.
ಸರ್ಕಾರವೇ ಕೊಳ್ಳಬೇಕು
ಇತ್ಯಾದಿ ಅವರ ಒತ್ತಾಯಗಳಿಗಾಗಿ ರೈತರ ಈ ಹೋರಾಟ

ರೈತರ ಸಮಸ್ಯೆಗಳು ನೈಜ ಮತ್ತು ತೀವ್ರ ಎಂಬುದು ನನಗೆ ಗೊತ್ತಾಗಿತ್ತು.
ಅದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲು ಪ್ರಯತ್ನಿಸಿದೆ. ಅವರು ಕಿವಿಗೆ ಹಾಕಿಕೊಳ್ಳಲೇ ಇಲ್ಲ.
ಬದಲಾಗಿ ತೆರಿಗೆ ಬಾಕಿ ವಸೂಲಿ ಮಾಡಲು ಕಠಿಣ ಕ್ರಮ ಕೈಗೊಳ್ಳಿ ಎಂದು ಆದೇಶ ನೀಡಿದರು.

ನವಲಗುಂದ ತಾಲೂಕಿನಲ್ಲಿ ಆರಂಭವಾದ ಹೋರಾಟ ನೆರೆಯ ನರಗುಂದಕ್ಕೂ ಹಬ್ಬಿತು.. ನರಗುಂದದಲ್ಲಿ ತಹಸೀಲ್ದಾರ್ ಕಛೇರಿ ಮುಂದೆ ನಿತ್ಯ ಸತ್ಯಾಗ್ರಹ ಆರಂಭವಾಯಿತು. ತಿಂಗಳುಗಟ್ಟಲೆ ಸತ್ಯಾಗ್ರಹ ನಡೆದರೂ ಸರ್ಕಾರ ಗಮನ ನೀಡಲಿಲ್ಲ.
ಎರಡೂ ತಾಲೂಕುಗಳ ಹಳ್ಳಿಗಳಲ್ಲಿ ಸಭೆಗಳು, ತಾಲೂಕಾ ಮಟ್ಟದ ಸಮಾವೇಶಗಳು ನಡೆದವು. ಬಹು ದೊಡ್ಡ ಸಂಖ್ಯೆಯಲ್ಲಿ ರೈತರು ಈ ಸಭೆಗಳಲ್ಲಿ ಸೇರಿದರು. ಸರ್ಕಾರಿ ಅಧಿಕಾರಿಯಾಗಿದ್ದರೂ ಹಳ್ಳಿಗಳ ಮಟ್ಟದ ಹಲವು ಸಭೆಗಳಲ್ಲಿ ಪಾಲ್ಗೊಂಡು ರೈತರ ಸಮಸ್ಯೆಗಳ ಮೂಲ ಕಾರಣವನ್ನು ವಿವರಿಸಿ ಹೋರಾಟ ಒಂದೇ ದಾರಿ ಎಂದು ಉತ್ತೇಜಿಸಿದೆ.

ಬೆಳಗಾಂ ಸೌದತ್ತಿ ತಾಲೂಕಿನ ಕೂಡಾ ಈ ಚಳುವಳಿಯಲ್ಲಿ ಪಾಲ್ಗೊಳ್ಳಲು ತೀರ್ಮಾನ ಕೈಗೊಂಡರು.
ಚಳುವಳಿಯ ಕಾವು ಏರ ತೊಡಗಿತು.

ಈ ನಡುವೆ ಗುಂಡೂರಾಯರ ಆದೇಶದಂತೆ ನರಗುಂದದ ತಹಸೀಲ್ದಾರ್ ಬೆಕ್ಕಿನಾಳ್ಕರ್ ತೆರಿಗೆ ಬಾಕಿ ಇದ್ದ ರೈತರ ಮನೆಗಳಿಗೆ ನುಗ್ಗಿ ಅವರ ಸ್ವತ್ತುಗಳನ್ನು ಹರಾಜು ಹಾಕಲಾರಂಭಿಸಿದರು. ಈ ಪ್ರಕರಣಗಳು ರೈತರಲ್ಲಿ ಮತ್ತಷ್ಟು ಸಿಟ್ಟನ್ನುಕ್ಕಿಸಿದವು.
ಮೂರೂ ತಾಲೂಕುಗಳ ರೈತರು ಸೇರಿ ಮಲಪ್ರಭಾ ರೈತ ಹೋರಾಟ ಸಮನ್ವಯ ಸಮಿತಿ ರಚಿಸಿಕೊಂಡರು. ಅದರ ಏಳು ಜನ ಸಂಚಾಲಕರು ಮನೆಮಾತಾದರು.

ಆದರೂ ಸರ್ಕಾರ ಎಚ್ಚತ್ತುಕೊಳ್ಳಲಿಲ್ಲ‌. ಧಾರವಾಡದ ಅಂದಿನ ಜಿಲ್ಲಾಧಿಕಾರಿ ರೇಣುಕಾ ವಿಶ್ವನಾಥನ್ ಮತ್ತಿತರ ಅಧಿಕಾರಿಗಳು ಸರ್ಕಾರದ ಮೆಚ್ಚಿಗೆ ಪಡೆಯಲು ಭರದಿಂದ ಬಾಕಿ ವಸೂಲಿ ಆರಂಭಿಸಿದರು.

ಆಗ ಸಮನ್ವಯ ಸಮಿತಿ ಏಕಕಾಲಕ್ಕೆ ಮೂರು ತಾಲ್ಲೂಕುಗಳಲ್ಲಿ 1980 ರ ಜುಲೈ 21 ರಂದು ಏಕಕಾಲಕ್ಕೆ ಬಂದ್ ಕರೆ ನೀಡಿತು.
ಈ ಬಂದ್ ದಿನವೇ ಗದಗ್ ತಾಲೂಕಿನಲ್ಲಿ ಬೆಲೆಏರಿಕೆ ಬಗ್ಗೆ ಬಂದ್ ಕರೆಯನ್ನು ಅಲ್ಲಿನ ಕೆಲವು ಸಂಘಗಳು ಕರೆ ನೀಡಿದವು.
ಈ ಬಂದ್ ದಿನದ ಘಟನೆಗಳು ರಾಜ್ಯದ ಇತಿಹಾಸದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತು.

ಆ ಬಂದ್ ಗೆ ಮೂರು ನಾಲ್ಕು ದಿನಗಳ ಹಿಂದೆಯೇ ರೈತರು ಗುಂಪು ಗುಂಪಾಗಿ ಸರ್ಕಾರಿ ಕಛೇರಿಗಳಿಗೆ, ಬ್ಯಾಂಕುಗಳಿಗೆ ಭೇಟಿ ನೀಡಿ ಅಂದು ಸರ್ಕಾರಿ ಕಛೇರಿ, ಬ್ಯಾಂಕುಗಳನ್ನೆಲ್ಲಾ ಮುಚ್ಚಲು ತಾಕೀತು ಮಾಡಿದರು.

ನಮ್ಮ ಕೃಷಿ ಕಛೇರಿಯ ಮುಂದೆಯೇ ಹಾದು ಬಿಡಿಒ ಕಛೇರಿ , ಕಾಲೇಜುಗಳ ಕಡೆ ಹೋದರು. ಕಛೇರಿ ಬಾಗಿಲಲ್ಲಿ ನಿಂತಿದ್ದ ನನ್ನನ್ನು ನೋಡಿ , ನಮ್ಮ ಊರಿಗೆ ಬಂದು ರೈತರು ಹೋರಾಟ ಮಾಡಬೇಕು ಅಂತ ಭಾಷ್ಣ ಮಾಡಿದರಲ್ಲಾ ಅವರೇ . ಅವರು ಬಂದ್ ಮಾಡುತ್ತಾರೆ ಬಿಡುಎಂದು ಮಾತಾಡಿಕೊಳ್ಳುತ್ತಾ ಹೋದರು.

ಬಂದ್ ಬಿರುಸನ್ನು ನೋಡಿ ನರಗುಂದದಲ್ಲಿದ್ದ ಅಧಿಕಾರಿಗಳಲ್ಲಿ ಬಹಳ ಹೆದರಿಕೆ ಉಂಟಾಯಿತು. ಅತ್ಯಂತ ಹೆಚ್ಚು ಹೆದರಿದವರು ಅತ್ಯಂತ ಹೆಚ್ಚು ಭ್ರಷ್ಟಾಚಾರ ಮಾಡಿದ್ದ ನೀರಾವರಿ ಇಲಾಖೆಯವರು. ಅವರು ತಮ್ಮ ಕುಟುಂಬಗಳನ್ನು ಮೂರು ನಾಲ್ಕು ದಿನಗಳ ಹಿಂದೆಯೇ ತಮ್ಮ ಊರುಗಳಿಗೆ ರವಾನಿಸಿ, ಬಂದ್ ಹಿಂದಿನ ದಿನವೇ ತಾವೂ ನರಗುಂದ ಬಿಟ್ಟರು. ಇನ್ನೂ ಅನೇಕ ಅಧಿಕಾರಿಗಳು ಕೂಡಾ.

ಯಾರ ಮೇಲೂ ರೈತರು ಕೈ ಮಾಡದೆ ಶಾಂತಿಯುತ ಸತ್ಯಾಗ್ರಹ ಮಾಡಿದ್ದರೂ ಕೂಡಾ ರೈತರ ಕೋಪದ ಬಿಸಿ ಹಾಗಿತ್ತು. ಅಂದು ನರಗುಂದದಲ್ಲಿದ್ದ ಅಧಿಕಾರಿಗಳೆಂದರೆ ತಹಸೀಲ್ದಾರ್ ಮತ್ತು ಕೃಷಿ ಸಹಾಯಕ ನಿರ್ದೇಶಕನಾಗಿದ್ದ ನಾನು ಮಾತ್ರ.
ಜುಲೈ 21 ರ ಬೆಳಗ್ಗೆಯೇ ರೈತರು ನರಗುಂದದಲ್ಲಿ ಹತ್ತಾರು ಸಾವಿರ ಸಂಖ್ಯೆಯಲ್ಲಿ ಸೇರಿದರು. ಒಂದು ದೊಡ್ಡ ಗ್ರಾಮ ಮಾತ್ರವೇ ಆಗಿದ್ದ ನರಗುಂದದಲ್ಲಿ ಅದು ಬಹು ದೊಡ್ಡ ಸಂಖ್ಯೆ. ಬೆಳಗ್ಗೆ ಒಂಬತ್ತು ಗಂಟೆಗೇ ರೈತರು ಮತ್ತೆ ಬಂದು ಕಛೇರಿಗಳಿಗೆ ಬೀಗ ಹಾಕಿಸಿದರು. ನಮ್ಮ ಕಛೇರಿಯಲ್ಲಿ ಕೂಡಾ ಸಿಬ್ಬಂದಿ ಹಾಜರಾಗಲಿಲ್ಲ. ನಾನು ಮತ್ತು ಡ್ರೈವರ್ ಮಾತ್ರ. ಅವನೂ ಕೂಡಾ ಎಷ್ಟು ಧೈರ್ಯ ಹೇಳಿದರೂ ಜೀಪು ತೆಗೆಯಲೊಪ್ಪಲಿಲ್ಲ.ಅವನು ಅದೇ ಊರಿನವನಾದ ಕಾರಣ ಚಳುವಳಿಯ ಶಾಖದ ಅಳತೆ ಅವನಿಗೆ ಚೆನ್ನಾಗಿ ಗೊತ್ತಾಗಿತ್ತು.

ಸರಿ, ಅವನು ಬೇಡ ಬೇಡವೆಂದರೂ ಅವನ ಸೈಕಲ್ ಅನ್ನೇ ತೆಗೆದುಕೊಂಡು ತಹಸೀಲ್ದಾರ್ ಕಛೇರಿಯ ಕಡೆಗೆ ಹೊರಟೆ. ಅದರ ಎದುರಿಗೇ ಮಹಡಿಯ ಮೇಲೆ ನನ್ನ ಮನೆ . ಅದರ ಮೇಲೇರಿದರೆ ತಹಸೀಲ್ದಾರ್ ಕಛೇರಿ ಸ್ಪಷ್ಟವಾಗಿ ಕಾಣುತ್ತಿತ್ತು.
ನನ್ನ ಬಳಿ ಇದ್ದ ಬೈನಾಕ್ಯುಲರ್ ಹಿಡಿದು ಮೇಲಿನ ತಾರಸಿ ಏರಿದೆ.

ಅಂದು ಬೆಳಗ್ಗೆ ಎಂಟು ಗಂಟೆಗೆ ತಹಸೀಲ್ದಾರ್ ಕಛೇರಿಯ ಸುತ್ತ ರೈತರು ಕೈ ಕೈ ಹಿಡಿದು ಯಾರನ್ನೂ ಒಳಗೆ ಬಿಡುವುದಿಲ್ಲವೆಂದು ನಿಂತಿದ್ದರು. ಕಛೇರಿಯ ಸಿಬ್ಬಂದಿ ಎಲ್ಲಾ ಬಂದು ರೈತರನ್ನು ನೋಡುತ್ತಾ ದೂರ ನಿಂತಿದ್ದರು. ತಹಸೀಲ್ದಾರ್ ರವರನ್ನೂ ಒಳಗೆ ಬಿಡಲಿಲ್ಲ. ತಹಸೀಲ್ದಾರ್ ಡಿಸಿಗೆ ಹೊರಗಿನಿಂದ ಫೋನ್ ಮಾಡಿ ವರದಿ ಮಾಡಿದರು. ಡಿಸಿಯವರಿಂದ ಪೋಲೀಸರ ಸಹಾಯ ಪಡೆದು ಒಳಗೆ ಹೋಗಲೇಬೇಕು. ಏನೇ ಆದರೂ ತಾಲೂಕು ಕಛೇರಿ ಮುಚ್ಚುವಂತಿಲ್ಲ ಎಂದು ಖಡಕ್ ಆದೇಶವಾಯಿತು.

ಸರಿ.ಡಿವೈಎಸ್ಪಿ, ಒಬ್ಬ ಸರ್ಕಲ್ ಇನ್ಸ್‌ಪೆಕ್ಟರ್ ತಹಸೀಲ್ದಾರ್ ರವರನ್ನು ಕಛೇರಿಯೊಳಕ್ಕೆ ಹೊಗಿಸಲು ಇನ್ನಿಲ್ಲದ ಪ್ರಯತ್ನ ಮಾಡಿದರು. ರೈತರು ಒಪ್ಪಲಿಲ್ಲ . ಬಲವಂತವಾಗಿ ಪೋಲೀಸ್ ಸಹಾಯದಿಂದ ಒಳ ಹೋಗಲು ಪ್ರಯತ್ನಿಸಿದಾಗ ರೈತರು ದಾರಿಯಲ್ಲಿ ಒತ್ತಾಗಿ ಮಲಗಿ ಹೋಗುವುದಾದರೆ ನಮ್ಮನ್ನು ತುಳಿದು ಹೋಗಿ ಎಂದು ಸವಾಲೆಸೆದರು. ಅಧಿಕಾರಿಗಳು ಮೂವರೂ ರೈತರನ್ನು ತುಳಿಯುತ್ತಲೇ ಕಛೇರಿ ಹೊಕ್ಕು ತಮ್ಮ ಆಸನಗಳಲ್ಲಿ ವಿರಾಜಮಾನರಾದರು.

ಇತ್ತ ಊರಿನ ಒಳಗಿನಿಂದ ಹತ್ತಾರು ಸಾವಿರ ರೈತರ ಮೆರವಣಿಗೆ ಹೊರಟಿತು. ಸಿಪಾಯಿ ದಂಗೆಯ ಬಂಡಾಯದ ಪಾಳೆಯಗಾರ ಬಾಬಾ ಸಾಹೇಬನ ಮೂರ್ತಿಗೆ ಹಾರ ಹಾಕಿ , ಅವನ ಸೈನ್ಯ ಬ್ರಿಟಿಷ್ ಅಧಿಕಾರಿಯ ಶಿರಚ್ಛೇದ ಮಾಡಿ ತೂಗು ಹಾಕಿದ್ದ ಕೆಂಪಗಸಿಗೆ ಗೌರವ ಸಲ್ಲಿಸಿದ ನಂತರ ದಾರಿಯಲ್ಲಿ ತೆರೆದಿದ್ದ ಬ್ಯಾಂಕುಗಳನ್ನು ಮುಚ್ಚಿಸುತ್ತಾ ತಹಸೀಲ್ದಾರ್ ಕಛೇರಿಯ ಕಡೆ ಬರುತ್ತಿತ್ತು.

ಮುಂದುವರೆಯುವುದು.

‍ಲೇಖಕರು avadhi

March 12, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. BVKulkarni

    Well narrated by Mr GN Nagaraj, who was Assistant Director of Agriculture in Naragund, I was Tahsildar Ron which was adjoining Taluk. Mr Nagaraj left service and became active member of Communist Party of India (M). We still continue to be good friends. I admire him though I am not a Communist. We have mutual liking.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: