ಇವು ಸುದ್ದಿ ಸಮಯದ ವಕ್ರಗಳು.. 

ಕಲ್ಪಿತ ಪದಕೋಶಗಳಲ್ಲಿ ಕರಗಿ ಹೋಗುವ ಸಂವೇದನೆ
ನಾ ದಿವಾಕರ

ಕನ್ನಡದ ಸುದ್ದಿವಾಹಿನಿಗಳು ಸಂವಹನ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿರುವುದೇ ಅದರೆ ಅದು ಈ ವಾಹಿನಿಗಳು ಸೃಷ್ಟಿಸುತ್ತಿರುವ ನೂತನ ಪದಗಳಲ್ಲಿ ಮತ್ತು ಪರದೆಯ ಮೇಲೆ ನಿರೂಪಕರ ಹಾವ ಭಾವ ಭಂಗಿಗಳಲ್ಲಿ ಕಾಣಬಹುದು.

ಪ್ರವಾಹದ ಸುದ್ದಿ ಬಿತ್ತರಿಸಲು ನಿರೂಪಕಿ ನೀರಿನಲ್ಲಿ ಮುಳುಗುತ್ತಾಳೆ, ಒಂದು ಕೋಮುಗಲಭೆ ಅಥವಾ ಯಾವುದೇ ಹಿಂಸಾತ್ಮಕ ಘಟನೆ ನಡೆದರೆ ಅಗ್ನಿ ಜ್ವಾಲೆಯ ನಡುವೆ ನಿರೂಪಕರು ನಿಲ್ಲುತ್ತಾರೆ. ಗುಡ್ಡ ಪ್ರದೇಶಗಳಲ್ಲಿ ಭೂಕುಸಿತ ಉಂಟಾದರೆ ಕುಸಿಯುತ್ತಿರುವ ಗುಡ್ಡಗಳ ನಡುವೆಯೇ ನಿಲ್ಲುತ್ತಾರೆ. ಉಕ್ಕಿ ಹರಿಯುವ ನದಿಗಳನ್ನು ಬಿತ್ತರಿಸುವಾಗ ಪ್ರವಾಹದ ನಡುವಿನ ಒಂದು ಶಿಲೆಯ ಮೇಲೆ ನಿರೂಪಕ ನಿಲ್ಲುತ್ತಾನೆ.

ಎಲ್ಲವೂ ತಂತ್ರಜ್ಞಾನದ ಮಾಯೆಯಾದರೂ ಈ ಮಾಯೆಯ ಮುಸುಕು ನೋಡುಗರನ್ನು ಆವರಿಸುವುದಲ್ಲವೇ ? ಒಂದು ಅಸಹಜ ಸಾವು ಸಂಭವಿಸಿದ ಕೂಡಲೇ ಶವದ ಅಸ್ತಿಪಂಜರವನ್ನೂ ಬಿತ್ತರಿಸಲು ಸಿದ್ಧರಾಗುವ ನಿರೂಪಕರು ಶವದ ಮೆರವಣಿಗೆಯೊಂದಿಗೇ ತಮ್ಮ ಮಾತಿನ ಓಘವನ್ನೂ ಮುಂದುವರೆಸುತ್ತಾರೆ. ಇನ್ನು ಭಯೋತ್ಪಾದಕ ದಾಳಿ, ಸಣ್ಣ ಪ್ರಮಾಣದ ಸೇನಾ ಕಾರ್ಯಾಚರಣೆ ನಡೆದುಬಿಟ್ಟರೆ ವಿಶ್ವದ ಶಸ್ತ್ರಾಸ್ತ್ರ ಮಾರುಕಟ್ಟೆಯ ಗೋದಾಮುಗಳನ್ನೇ ಪರದೆಯ ಮೇಲೆ ಬಿತ್ತರಿಸಿ ಮಕ್ಕಳಿಗೆ ಶಸ್ತ್ರಾಸ್ತ್ರಗಳ ಮ್ಯೂಸಿಯಂಗಳನ್ನೇ ತೋರಿಸುವ ಸಾಹಸ ಮಾಡುತ್ತಾರೆ. ಇವು ಸುದ್ದಿ ಸಮಯದ ವಕ್ರಗಳು.

ಈ ವಕ್ರಗಳ ಚಕ್ರವನ್ನು ಮುಂದುವರೆಸಲು ಅಹೋರೋತ್ರಿಯ ಕೆಲವು ಕಾರ್ಯಕ್ರಮಗಳೂ ಇರುತ್ತವೆ.  ಅತಿಯಾದ ಮಳೆ, ಪ್ರವಾಹ, ಭೂಕುಸಿತ ಮುಂತಾದ ವಿಪತ್ತುಗಳ ಕಾರಣಕರ್ತರನ್ನು ಆಕಾಶದಿಂದಾಚೆಗಿನ ಲೋಕದಲ್ಲಿ ಕಾಣಲಾಗುತ್ತದೆ.

ಯಾವುದೋ ಅತೀತ ಶಕ್ತಿಯ ಶಾಪದಿಂದಲೇ ಎಲ್ಲ ದುರಂತಗಳೂ ಸಂಭವಿಸುತ್ತಿವೆ ಎಂದು ನಂಬಿಸಲು, 1960ರ ದಶಕದ ವಿಠಲಾಚಾರ್ಯರ ಚಿತ್ರಗಳನ್ನು ನೆನಪಿಸುವ ದೃಶ್ಯಗಳನ್ನು ಬಿತ್ತರಿಸುತ್ತವೆ. ಇಂತಹ ಕಾರ್ಯಕ್ರಮಗಳನ್ನು ನಿರ್ವಹಿಸಲೆಂದೇ ತಮ್ಮ ವಿಚಿತ್ರ ಧ್ವನಿಯನ್ನು ದಾನ ಮಾಡುವ ಕಲಾಕಾರರೂ ಮಾಧ್ಯಮಗಳೊಂದಿಗೆ ಇರುವುದು ಒಂದು ರೀತಿಯ ವಿಡಂಬನೆ. ಈ ಧ್ವನಿಗೆ ಮೋದಿಯ ತಪಸ್ಸು, ಮೋದಿ ಸಾಕಿದ ಮೊಸಳೆ, ಪಶ್ಚಿಮ ಘಟ್ಟದ ಭೂಕುಸಿತ, ಕಾವೇರಿ ಕಪಿಲೆಯ ಪ್ರವಾಹ, ಪುಲ್ವಾಮಾದ ಯೋಧರು ಎಲ್ಲವೂ ಕುತೂಹಲ ಮೂಡಿಸುವ ಆಲ್‍ಫ್ರೆಡ್ ಹಿಚ್‍ಕಾಕ್ ಸಿನಿಮಾದ ಪಾತ್ರಗಳಂತೆ ಕಾಣುತ್ತವೆ.

ಸಿನಿಮಾದ ಆರಂಭದಿಂದಲೂ ಬಿಳಿ ಸೀರೆ ಉಟ್ಟು ಮಧ್ಯರಾತ್ರಿಯಲ್ಲಿ ಗೆಜ್ಜೆ ಸದ್ದು ಮಾಡುತ್ತಾ ಮಧುರ ಹಾಡನ್ನು ಹಾಡುತ್ತಾ ಭೀತಿ ಸೃಷ್ಟಿಸುವ ಪಾತ್ರಧಾರಿ ಕೊನೆಗೆ ಚಿತ್ರದ ನಾಯಕಿಯೇ ಆಗಿರುವ ಹಳೆಯ ಚಲನಚಿತ್ರಗಳ ದೃಶ್ಯಗಳನ್ನು ನೆನಪಿಸುವಂತೆ ಸುದ್ದಿವಾಹಿನಿಗಳು ಬೆಳಗಿನಿಂದ ಸಂಜೆಯವರೆಗೂ ಈ ಕುತೂಹಲಕಾರಿ ದೃಶ್ಯಗಳನ್ನು ಬಿತ್ತರಿಸುತ್ತಲೇ ಟಿವಿ ಪರದೆಗಳನ್ನು ಕಲುಷಿತಗೊಳಿಸುತ್ತಿವೆ. ಈ ಮಾಲಿನ್ಯ ಹೆಚ್ಚಿಸಲು ಜ್ಯೋತಿಷಿಗಳ ನೆರವು ದೊರೆಯುತ್ತದೆ. ಬೇಕೊ ಬೇಡವೋ ಇದು ಜನಮನ್ನಣೆ ಗಳಿಸುತ್ತಿರುವ ಒಂದು ವಿದ್ಯಮಾನ ಎನ್ನುವುದೇ ಚಿಂತೆಗೀಡುಮಾಡುವ ವಿಚಾರ.

ಮಾಧ್ಯಮಗಳಲ್ಲಿ ಹೊಸತನದ ತುಡಿತ ಎಷ್ಟು ಹೆಚ್ಚಾಗಿದೆ ಎಂದರೆ ಪ್ರತಿಯೊಂದು ಘಟನೆಯ ಸಂದರ್ಭದಲ್ಲೂ ಹೊಸ ನಿಘಂಟುಗಳನ್ನೇ ಸೃಷ್ಟಿಸಲಾಗುತ್ತಿದೆ. ಮುದ್ರಣ ಮಾಧ್ಯಮಗಳಿಗೆ ಈ ಖಾಯಿಲೆ ಹಲವು ವರ್ಷಗಳ ಹಿಂದೆಯೇ ಅಂಟಿಕೊಂಡಿತ್ತು. ಪ್ರಾಸಬದ್ಧವಾಗಿ ಸುದ್ದಿ ನೀಡುವ ಭರದಲ್ಲಿ ಪತ್ರಿಕೆಗಳ ಸುದ್ದಿ ಶೀರ್ಷಿಕೆಗಳು ವಿಚಿತ್ರವಾಗಿರುವುದನ್ನು ಇಂದಿಗೂ ನೋಡುತ್ತಲೇ ಇದ್ದೇವೆ. ಆದರೆ ಇದು ದೃಶ್ಯ ಮಾಧ್ಯಮದ ಯುಗ. ಮುದ್ರಣ ಮಾಧ್ಯಮ ಒಮ್ಮೆ ಕಣ್ಣು ಹಾಯಿಸಬಹುದಾದ ಸಾಧನ. ದೃಶ್ಯ ಮಾಧ್ಯಮ ದಿನವಿಡೀ ಕಣ್ಣು ಕುಕ್ಕುತ್ತಾ ಮೆದುಳಿಗೇ ಲಗ್ಗೆ ಇಡುವ ಸಾಧನ. ಅಷ್ಟೇ ವ್ಯತ್ಯಾಸ.

ಸಾವಿರಾರು ಜನರಿಗೆ ಸುದ್ದಿ ಮುಟ್ಟಿಸುವ ಗುರುತರ ಜವಾಬ್ದಾರಿ ಹೊತ್ತಿರುವ ಸುದ್ದಿ ವಾಹಕರು ಮತ್ತು ನಿರೂಪಕರು , ಮೂಲತಃ ತಾವು ಹಾವಭಾವಗಳ ಮೂಲಕ ಜನರನ್ನು ಮೆಚ್ಚಿಸಲು ನಿಯೋಜಿಸಲಾಗಿರುವ ನಟಸಾಮ್ರಾಟರಲ್ಲ ಎನ್ನುವ ವಾಸ್ತವವನ್ನು ಅರಿತಿರಬೇಕಲ್ಲವೇ ? ವಿಚಿತ್ರ ಹಾವಭಾವಗಳಿಂದ ವೀಕ್ಷಕರ ತಲೆ ಚಿಟ್ಟುಹಿಡಿಸುವ ನಿರೂಪಕರು ಒಂದು ದುರಂತ ಸನ್ನಿವೇಶವನ್ನು ಬಿತ್ತರಿಸುವಾಗಲೂ ತಮ್ಮ ಧ್ವನಿಯ ಏರಿಳಿತಗಳನ್ನು ನಿಭಾಯಿಸುವುದಿಲ್ಲ. ಎಂತಹ ಹೃದಯ ವಿದ್ರಾವಕ ಘಟನೆಯಾದರೂ ಇವರ ಧ್ವನಿಯಲ್ಲಿ, ಕಣ್ಣುಗಳಲ್ಲಿ ಅನುಕಂಪ, ಕಾಳಜಿ, ಕಳಕಳಿ, ಆದ್ರ್ರತೆ ಕಂಡುಬರುವುದಿಲ್ಲ. ಒಂದು ವಿಹಂಗಮ ದೃಶ್ಯವನ್ನು ವಿವರಿಸುವ ಧಾಟಿಯಲ್ಲೇ ಅತ್ಯಾಚಾರ ನಡೆದ ಸುದ್ದಿಯನ್ನೂ ವಿವರಿಸುವ ಮಟ್ಟಿಗೆ ಸಂವೇದನಾಶೂನ್ಯತೆಯನ್ನು ಪರದೆಯ ಮೇಲೆ ಕಾಣಬಹುದು.

ಇನ್ನು ಈ ವಾಹಿನಿಗಳ ಪದ ಬಳಕೆ ನಿಘಂಟು ತಜ್ಞರನ್ನೂ ನಾಚಿಸುತ್ತದೆ. ವ್ಯಾಕರಣದ ಪ್ರಶ್ನೆ ಬಿಟ್ಟುಬಿಡೋಣ ಏಕೆಂದರೆ ಎಷ್ಟೋ ನಿರೂಪಕರಿಗೆ, ವರದಿಗಾರರಿಗೆ ಉಚ್ಚಾರಣೆಯೇ ಸ್ಪಷ್ಟವಾಗಿರುವುದಿಲ್ಲ. ವರದಿ ಮಾಡುವ ಉತ್ಸಾಹದಲ್ಲಿ ಬಡಬಡಿಸುವ ವಾಕ್ಯಗಳಲ್ಲಿನ ದೋಷ ಸಾಮಾನ್ಯ ಸಂಗತಿಯಾಗಿದೆ. ‘ಅ’ ಕಾರ ‘ಹ’ ಕಾರಗಳಂತೂ ಪರಸ್ಪರ ಬದಲಾಗಿ ಉತ್ತಮ ಮನರಂಜನೆಯನ್ನೇ ನೀಡುತ್ತವೆ.

ಕಳೆದ ಬಾರಿಯ ಮಳೆಯ ಅನಾಹುತದ ಸಂದರ್ಭದಲ್ಲಾದಂತೆಯೇ ಈ ಬಾರಿಯೂ ನದಿಗಳು ಉಕ್ಕಿ ಹರಿದಿವೆ, ಪ್ರವಾಹ ಹೆಚ್ಚಾಗಿದೆ, ಅಣೆಕಟ್ಟುಗಳು ತುಂಬಿಹರಿದಿವೆ, ಭೂಕುಸಿತ ಉಂಟಾಗಿದೆ. ನದಿಗಳನ್ನು ಮಾತೆಯೆಂದೇ ಭಾವಿಸುವ ಸಂಪ್ರದಾಯವಂತೂ ಇದ್ದೇ ಇದೆ. ಆದರೆ ಕಪಿಲೆ, ತುಂಗೆ, ಕಾವೇರಿ ಉಕ್ಕಿ ಹರಿಯುತ್ತಿದ್ದಾಳೆ ಎಂದು ಹೇಳುವ ನಿರೂಪಕರಿಗೆ ಪ್ರವಾಹಾಸುರ ಮತ್ತು ಜಲಾಸುರರು ಎಲ್ಲಿಂದ ಕಂಡುಬರುತ್ತಾರೆ ?

ನೈಸರ್ಗಿಕ ವಿಕೋಪಗಳಿಗೂ ಸುಂದರ ಹೆಸರುಗಳನ್ನು ಸೂಚಿಸುತ್ತಾ ನಾಮಕರಣ ಮಾಡುತ್ತಾ ತಮ್ಮ ಪದವಿನ್ಯಾಸದ ಸಾಮಥ್ರ್ಯ ತೋರುವ ನಿರೂಪಕರು ತಾವು ಬಿತ್ತರಿಸುತ್ತಿರುವ ದುರಂತದ ಹಿಂದೆ ಸಾವು, ನೋವು, ಹಿಂಸೆ, ಯಾತನೆ ಎಲ್ಲವೂ ಅಡಗಿದೆ ಎಂದೇಕೆ ಯೋಚಿಸುವುದಿಲ್ಲ. ಈ ಭಾರಿ ಪ್ರಮಾಣದ ಮಳೆಗೆ ವೈಜ್ಞಾನಿಕವಾಗಿ ಕಾರಣಗಳೇನು ಎಂದು ಹೇಳುವುದನ್ನು ಬಿಟ್ಟು “ ಆಕಾಶದಿಂದಾಚೆಗಿನ ಅದಾವ ಶಕ್ತಿ ಈ ಪ್ರವಾಹಾಸುರನನ್ನು ಸೃಷ್ಟಿಸಿದೆ ” ಎಂಬ ರೋಚಕ ಕಥೆಯನ್ನು ಹೊಸೆಯುವುದು ಮಾಧ್ಯಮಗಳ ಕೆಲಸವಲ್ಲ ಅಲ್ಲವೇ ?

ನಿಜ ಇಂದಿನ ಜಗತ್ತಿನಲ್ಲಿ ಎಲ್ಲವೂ ಮಾರುಕಟ್ಟೆಯನ್ನೇ ಅವಲಂಬಿಸಿರುತ್ತವೆ. ವಿದ್ಯುನ್ಮಾನ ಮಾಧ್ಯಮಗಳಿಗೂ ತಮ್ಮ ಟಿಆರ್‍ಪಿ ಮುಖ್ಯವಾಗುತ್ತದೆ. ಇವುಗಳೇನೂ ಜನಸೇವಾ ಕೇಂದ್ರಗಳಲ್ಲ ಅಥವಾ ಹಿಂದಿನ ಸಿನಿಮಾ ಟೆಂಟುಗಳಂತೆ ಅಗ್ಗದ ದರದಲ್ಲಿ ಮನರಂಜನೆ ನೀಡುವ ತಾಣಗಳೂ ಅಲ್ಲ. ಆದರೂ ಮಾಧ್ಯಮಗಳು ಸಮಾಜದ ಒಂದು ಭಾಗ, ಜನಸಂವೇದನೆಗೆ ಒಂದು ಭೂಮಿಕೆ, ಜನಸಾಮಾನ್ಯರ ಸಮಸ್ಯೆಗಳನ್ನು ಬಿತ್ತರಿಸುವ ಒಂದು ವೇದಿಕೆ.

ಇಷ್ಟು ಕನಿಷ್ಟ ಪ್ರಜ್ಞೆ ಇದ್ದರೆ ಯಾವುದೇ ಮಾಧ್ಯಮವೂ ಅತ್ಯಾಚಾರ, ದೌರ್ಜನ್ಯ, ಹಲ್ಲೆ, ಹತ್ಯೆ, ಅಪಘಾತ ನಡೆದ ಸ್ಥಳಕ್ಕೆ ಧಾವಿಸಿ ನಾವೇ ಫಸ್ಟ್ ಎಂದು ಕನ್ನಡಿ ಹಿಡಿಯುವುದಿಲ್ಲ. ಅಪರೂಪವಾದ ಅಥವಾ ಅನಿರೀಕ್ಷಿತವಾದ ಘಟನೆ ಬ್ರೇಕಿಂಗ್ ನ್ಯೂಸ್ ಆಗುವುದು ಸಹಜ ಆದರೆ ನಮ್ಮ ಮಾಧ್ಯಮಗಳಲ್ಲಿ ಸಿನಿಮಾತಾರೆ ಗರ್ಭಿಣಿಯಾಗುವುದೂ ಬ್ರೇಕಿಂಗ್ ನ್ಯೂಸ್ ಆಗಿಬಿಡುತ್ತದೆ. ಪ್ರವಾಹದ ಸುದ್ದಿ ಸಖತ್ ಸುದ್ದಿಯಾಗುತ್ತದೆ. ನಿಂತಲ್ಲಿ ನಿಲ್ಲದೆ, ಕೂತಲ್ಲಿ ಕೂರದೆ ಚಡಪಡಿಸುವ ನಿರೂಪಕರನ್ನು ನೋಡಿದರೆ ಮೈ ಪರಚಿಕೊಳ್ಳುವಂತಾಗುತ್ತದೆ.

ಏಕೆ ಹೀಗೆ ? ತಮ್ಮ ಕರ್ತವ್ಯ ಜನತೆಗೆ ನೈಜ ಸುದ್ದಿ ಮುಟ್ಟಿಸುವುದು ಮಾತ್ರ ಎಂಬ ಪರಿಜ್ಞಾನ ಇರುವುದಿಲ್ಲವೇ ? ಇಲ್ಲಿ ಸಂವಹನ ಕೌಶಲ, ಭಾಷಾ ಬಳಕೆ, ಮುಖಭಾವ, ಪರಿಸ್ಥಿತಿಗೆ ತಕ್ಕಂತಹ ಧ್ವನಿ ಅನುಕರಣೆ ಇವೆಲ್ಲವೂ ಮುಖ್ಯ ಎಂದು ಮಾಧ್ಯಮ ಮಿತ್ರರಿಗೆ ಎನಿಸುವುದಿಲ್ಲವೇ ? ಕಾರ್ಪೋರೇಟ್ ಒಡೆತನದಲ್ಲಿದ್ದ ಮಾತ್ರಕೆ ಅಥವಾ ಸಂಪಾದಕ ವರ್ಗ ಒಂದು ರಾಜಕೀಯ ಪಕ್ಷದ ಪರ ಇದ್ದ ಮಾತ್ರಕ್ಕೆ ಮಾಧ್ಯಮ ಕ್ಷೇತ್ರದಲ್ಲಿ ಅಗತ್ಯವಾದ ಸಂಹಿತೆಗಳನ್ನು ಪಾಲಿಸಬಾರದು  ಎಂದಿದೆಯೇ ?

ಮಾಧ್ಯಮವನ್ನು ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಎಂದು ಏಕೆ ಹೇಳುತ್ತಾರೆ ? ಆಡಳಿತ ವ್ಯವಸ್ಥೆಯಿಂದ ದೊರೆಯದ ಮಾಹಿತಿಗಳನ್ನು ಜನಸಾಮಾನ್ಯರಿಗೆ ಸತ್ಯಾಸತ್ಯತೆಗಳ ಪರಾಮರ್ಶೆಯೊಂದಿಗೆ ತಲುಪಿಸುವ ಹೊಣೆಗಾರಿಕೆ ಮಾಧ್ಯಮಗಳ ಮೇಲಿರುತ್ತದೆ. ಇದು ಮುದ್ರಣ ಮಾಧ್ಯಮದಷ್ಟೇ ವಿದ್ಯುನ್ಮಾನ ಮಾಧ್ಯಮಗಳಿಗೂ ಅನ್ವಯಿಸುವುದಲ್ಲವೇ ? ಬಹುಶಃ ಈ ನಿಟ್ಟಿನಲ್ಲಿ ನಾವು ಕಳೆದುಹೋಗುತ್ತಿದ್ದೇವೆ. ಸುದ್ದಿಯನ್ನು ಮಾರಾಟಕ್ಕಿಡುವುದು ಆಧುನಿಕ ಮಾರುಕಟ್ಟೆ ಧರ್ಮ ಆಗಬಹುದು ಆದರೆ ಸಂವೇದನೆಯನ್ನು ಮಾರಾಟಕ್ಕಿಡುವುದನ್ನು ಹೇಗೆ ಸಹಿಸಿಕೊಳ್ಳಲು ಸಾಧ್ಯ ?

ಇಲ್ಲಿ ಪಕ್ಷ ರಾಜಕಾರಣವನ್ನು ಬದಿಗಿಟ್ಟು ನೋಡಿದರೂ ಮಾಧ್ಯಮಗಳಲ್ಲಿ ಕಂಡುಬರುವ ಭಾಷಾ ಬಳಕೆ, ಪದ ಬಳಕೆ ಮತ್ತು ದೃಶ್ಯಗಳನ್ನು ಬಿತ್ತರಿಸುವ ಪರಿಯನ್ನು ನೋಡಿದರೆ ಖೇದವಾಗುತ್ತದೆ ಕೆಲವೊಮ್ಮೆ ಅಸಹ್ಯ ಎನಿಸಿದರೂ ಅಚ್ಚರಿಯೇನಿಲ್ಲ. ಸಂವಹನ ಮತ್ತು ಸಂವೇದನೆ ಪರಸ್ಪರ ಪೂರಕವಾದ ವಿದ್ಯಮಾನಗಳು ಎನ್ನುವ ಸೂಕ್ಷ್ಮವನ್ನಾದರೂ ಮಾಧ್ಯಮ ಮಿತ್ರರು ಅರಿತರೆ ನಾಡಿಗೂ ಒಳಿತು, ನಾಳಿಗೂ ಒಳಿತು.

‍ಲೇಖಕರು avadhi

August 17, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: