ಗೀರ್ವಾಣಿ
ಭಯವಾಗಿದೆ ಹಳೆ ನೋವುಗಳು
ಕಳೆದುಹೋದರೆ ಎಂದು
ನೀರಸವಾದ ಖಾಲಿತನಗಳಲ್ಲಿ
ಕಟ್ಟಿರುವೆಯಂಥ ಒಂಟಿತನಗಳಲ್ಲಿ
ಕುದಿ ನೀರಿನಂಥ ತಿರಸ್ಕಾರಗಳಲ್ಲಿ
ನನ್ನ ಪೊರೆದಿವೆ ನೋವುಗಳು !
ಹಳೆ ನೋವುಗಳು ಅನಸ್ತೇಶಿಯ ನನಗೆ
ಮರಗಟ್ಟಿಸಿವೆ ಹಸಿ ಭಾವಗಳನ್ನು.
ಹೊಸ ದೂರು, ಹೊಸ ಅಪಮಾನ
ಹೊಚ್ಚ ಹೊಸ ಆರೋಪ
ಎಲ್ಲದಕ್ಕೂ ಗುರಾಣಿಯಂತಿದೆ ಹಳೆ ನೋವುಗಳು
ಹಳೆ ನೋವುಗಳು ಕಾವು ನನಗೆ
ಮರಿ ಮಾಡಿದೆ ದುಮ್ಮಾನಗಳನ್ನು
ಹೊಸ ಹಂಬಲ, ಹೊಸ ಬೇಡಿಕೆ
ಹೊಸ ಬಯಕೆಗಳಿಗೆ ತಡೆ ಗೋಡೆಯಂತಿವೆ
ದುಮ್ಮಾನಗಳು !
ಹಿಮದಂತೆ ತಣ್ಣಗೆ ಕೊರೆದವು ಮೊದಲ ನೋವುಗಳು
ಆಮೇಲಿನದೆಲ್ಲ ಮಂಜುಗಡ್ಡೆಗಳು
ಹಿಮ ಬಿದ್ದಷ್ಟೂ ನೀರ್ಗಲ್ಲುಗಳು
ಮೇಣದಂತೆಯೂ ಅಂಟಿಕೊಂಡವು ಹಳೆ ನೋವುಗಳು
ಹಸಿ ಮೇಣ ಬಿದ್ದಷ್ಟೂ ಹೊಸ ರೂಪ ತಳೆದವು
ಇವತ್ಯಾಕೋ ಮೋಡ ಸರಿದಿದೆ
ಭಯವಾಗಿದೆ, ಕರಗಿ ಹೋದರೆ ನನ್ನ ಹಳೆ ನೋವುಗಳು ಎಂದು ……

ಕಣ್ಣಂಚಿನ ನೆರಿಗೆಗೆ ನನ್ನಷ್ಟೇ
ನೀನೂ ಹೊಣೆ.
ಅಂತರಂಗಕ್ಕೆ ಇಳಿ ಎಂದರೆ
ಕೇಳದಂತೆ ಹೋದೆ
ನಿನ್ನೊಳಗೆ ಇಣುಕಿದಾಗ
ಕದ ಮುಚ್ಚಿಕೊಂಡೆ
ಪ್ರೀತಿಯ ಲೆಕ್ಕಾಚಾರ ಕೇಳಿದಾಗ
ತಪ್ಪು ಲೆಕ್ಕವನ್ನೇ ಕೊಟ್ಟೆ
ಕಣ್ಣೀರನ್ನು ಗಾಳಿಗೇ ಆರಲು ಬಿಟ್ಟೆ
ತುಸು ದೂರ ಜೊತೆಯಲ್ಲಿ ನಡೆದೆ
ಬೋರಾಯಿತೇನೋ,
ಬಿರು ಹೆಜ್ಜೆಯಿಟ್ಟು ಹೋಗಿಬಿಟ್ಟೆ
ಇನ್ನೂ ವಿವರಿಸಬೇಕಾದ ಕಳವಳಗಳಿತ್ತು ನನಗೆ
ತೆಕ್ಕೆ ಬಿದ್ದು ಹೇಳಬೇಕಿತ್ತು ಕನವರಿಕೆಗಳನ್ನು
ಈಗೀಗ ಕನ್ನಡಿಯಲ್ಲಿ ನನ್ನೊಬ್ಬಳದೇ ಬಿಂಬ
ನೆನಪಾಗುತ್ತಿದೆ ನಿನ್ನ ಬೆಳ್ಳಿ ಕೂದಲು
ಯೋಚಿಸುತ್ತಿದ್ದೇನೆ
ನಾನೆಷ್ಟು ಹೊಣೆ ನಿನ್ನ ಬಿಳಿ ಕೂದಲಿಗೆ !





Haleya novugalu nanage Anesteshiya iddanthe.
Elladakku guraaniyanthide…….Arthavatthaada saalugalu….kavithe ishtavaaythu
Dear , girvani I have started loving your poems . Look forward to read more from you. Great going.
Hey thank u kusuma. You are encouraging me. Thanks a lot.
Thanks to all who are all commenting to my lines.
“ಪ್ರೀತಿಯ ಲೆಕ್ಕಾಚಾರ ಕೇಳಿದಾಗ
ತಪ್ಪು ಲೆಕ್ಕವನ್ನೇ ಕೊಟ್ಟೆ
ಕಣ್ಣೀರನ್ನು ಗಾಳಿಗೇ ಆರಲು ಬಿಟ್ಟೆ”
konegoo preethiyalloo krowrya alwa