ಎ.ಕೆ ರಾಮಾನುಜನ್ ಮತ್ತು ಕೆ.ಕೆ ರಾಮಾನುಜನ್

‘ಮತ್ತೊಬ್ಬನ ಆತ್ಮಚರಿತ್ರೆ’ ಎಂಬ ಪುಸ್ತಕದಲ್ಲಿ

ಬರುವ ಸಂಗತಿಗಳು

ಪ್ರೊಫೆಸರ್ ಸುಬ್ಬರಾಮಯ್ಯನವರದು ೪೦ ವರ್ಷಗಳ ಸಂಸಾರ.  ಅವರ ಹೆಂಡತಿಯ ತವರೂರು ಅರಕಲಗೂಡಿನ ಹತ್ತಿರದ ಒಂದು ಹಳ್ಳಿ. ಅವರಿಗೆ ಗಂಡ ಎಂದರೆ ಬಹಳ ಪ್ರೀತಿ, ಅವರು ಎಲ್ಲರ ಮುಂದೆ ನಿಸ್ಸಂಕೋಚವಾಗಿ ಗಂಡನನ್ನು ಹೊಗಳಿದಾಗ ಗಂಡನ ಮುಖ ಕೆಂಪಾಗುತ್ತಿತ್ತು.

avadhi-column-nagashree- horiz-edited“ನಮ್ಮೆಜಮಾನ್ರು ಎಷ್ಟು ಪುಸ್ತಕ ಓದಿದಾರೇಂತ! ಗಮಗಮಾಂತ ಈರುಳ್ಳಿ ಹುಳಿ ಕೂಡಾ ಮಾಡ್ತಾರೆ!  ನಾನು ಮುಟ್ಟಾದಾಗ ಅವರೆದೆಯೇ ಅಡಿಗೆ. ಆ ಅಡಿಗೆ ರುಚಿಗೆ ನನಗೆ ಮುಟ್ಟಾಗೋದಕ್ಕೆ  ಎಷ್ಟು ಆಸೆ ಆಗ್ತಿತ್ತೂಂತ. ಈಗ ಅದು ನಿಂತ ಮೇಲೆ ಅವರ ಈರುಳ್ಳಿ ಹುಳಿ ರುಚಿ ತಪ್ಪಿತು” ಎಂದು ಹೇಳುವಾಗ ಪ್ರೊಫೆಸರರಿಗೆ ನಾಚಿಕೆಯಾಗಿ ಛೀ, ಸುಮ್ಮನಿರು ಅಂತ ಕೋಪ ತಂದುಕೊಂಡರು.

ಇಷ್ಟಾದರೂ ಅವರಿಬ್ಬರ ಮುಖದಲ್ಲಿ ಪ್ರೀತಿ ತುಂಬಿದ ಆತ್ಮ ತೃಪ್ತಿಯ ಕಳೆಯಿತ್ತು. ೪೦ ವರ್ಷ ಜತೆಗಿದ್ದು ಒಬ್ಬರು ಮತ್ತೊಬ್ಬರ ಪ್ರತಿಬಿಂಬವಾಗಿದ್ದರು. ಎಷ್ಟೋ ವರ್ಷಗಳ ಕಾಲ ಹಗಲೂ ಇರುಳೂ ಜೊತೆಗೆ ಇರುವ ಗಂಡಹೆಂಡಿರು ಬರುಬರುತ್ತಾ ಒಬ್ಬರನ್ನೊಬ್ಬರು ಅನುಕರಿಸಿ ಅನುಕರಿಸಿ ವಯಸ್ಸಾದ ದಂಪತಿಗಳನ್ನು ನೋಡಿದರೆ, ಒಬ್ಬರ ಮುಖ ಮತ್ತೊಬ್ಬರ ಹಾಗೆ ತೋರುತ್ತದೆ.

ಇದು ಎ. ಕೆ. ರಾಮಾನುಜನರ ‘ಮತ್ತೊಬ್ಬನ ಆತ್ಮಚರಿತ್ರೆ’ ಎಂಬ ಪುಸ್ತಕದಲ್ಲಿ ಬರುವ ಸಂಗತಿಗಳು. ‘ಮತ್ತೊಬ್ಬನ ಆತ್ಮಚರಿತ್ರೆ’ ನಾನು ಎಂದೋ ಓದಬೇಕಿದ್ದ ಪುಸ್ತಕ. ಒಂದೇ ಪಟ್ಟಿಗೆ ಓದಿ ಮುಗಿಸಿ ಇದು ಇನ್ನೂ ಇರಬೇಕಿತ್ತು, ಮುಗಿಯಬಾರದಿತ್ತು ಎನಿಸುತ್ತಿತ್ತು. ಆದರೆ ‘ಮತ್ತೊಬ್ಬನ ಆತ್ಮಚರಿತ್ರೆ’ ಎಂಬ ಕಾದಂಬರಿಯೂ ಅಲ್ಲದ ಆತ್ಮಚರಿತ್ರೆಯೂ ಅಲ್ಲದ ಈ ವಿಶಿಷ್ಟ ಪುಸ್ತಕ ನಿಜದ ಹಂಗನ್ನು ಬೇಡುವ ಆತ್ಮಚರಿತ್ರೆಯಿಂದ ದೂರವೇ ಉಳಿಯುತ್ತದೆ. ಹಾಗಾಗಿ, ಇದು ಅವರ ಆತ್ಮಚರಿತ್ರೆ ಮಾತ್ರಲ್ಲದೆ, ಮತ್ತೊಬ್ಬನ ಆತ್ಮ ಚರಿತೆಯೂ ಆಗಬಹುದು.

ಇಲ್ಲಿ ಇಬ್ಬರು ರಾಮಾನುಜನ್ ಬರುತ್ತಾರೆ. ಒಬ್ಬ ಕವಿ, ಎ.ಕೆ  ರಾಮಾನುಜನ್. ಇನ್ನೊಬ್ಬ ಕತೆಗಾರ, ಕೆ.ಕೆ. ರಾಮಾನುಜನ್. ಎ.ಕೆ ರಾಮಾನುಜನ್ ಕೆ.ಕೆ ರಾಮಾನುಜನ್ ಗೆ ಕತೆ ಬರೆಯಲು  ಪ್ರೇರೇಪಿಸುತ್ತಾರೆ. ಅವರು ಬರೆಯುವ ಕತೆಯೇ ಈ ಆತ್ಮಚರಿತ್ರೆ. ಇವರಿಬ್ಬರೂ ಒಬ್ಬರೇ ಆಗಿರದೆ ಒಬ್ಬರು ಇನ್ನೊಬ್ಬರ ಪ್ರತಿಬಿಂಬದ ಹಾಗೆ ಇರುತ್ತಾರೆ. ವಾಸ್ತವ ಮತ್ತು ಕಲ್ಪನೆಯ ಇಬ್ಬರು ರಾಮಾನುಜರಲ್ಲಿ ನಮ್ಮ ನಡುವೆ ಇದ್ದ ನಿಜದ ರಾಮಾನುಜನ್ ಯಾರು? ಅವರ ಸತ್ಯಾನುಸತ್ಯತೆ ಏನು ಎಂದುಕೊಂಡರೆ, ನಮಗೆ ದಕ್ಕುವುದು ಅವರ ಒಟ್ಟು ಸುಖ, ದುಃಖ, ಕೀಟಲೆ, ಭಕ್ತಿ, ವಿರಕ್ತಿ, ದೂರ, ಹತ್ತಿರ, ನಿಜ ಮತ್ತು ಕಲ್ಪನೆ ಎಲ್ಲಾ ಸೇರಿದ ಸಿಹಿಯಾದ ಹೂರಣವಷ್ಟೇ.

ಇನ್ನೊಂದು ಪ್ರಸಂಗದಲ್ಲಿ ರಾಮಾನುಜನ್ ಅಮೇರಿಕನ್ ಹುಡುಗಿಯನ್ನು ಮದುವೆಯಾಗುತ್ತಾರೆ. ಜರ್ಮನ್ ಅಜ್ಜ, ಐರಿಷ್ ಅಜ್ಜಿಯ ಅಮೇರಿಕನ್ ಮೊಮ್ಮಗಳು ಅವರಿಗಿಂತ ಒಂದಂಗುಲ ಉದ್ದವಿದ್ದು, ಕೆಂಚು ಬಣ್ಣದ ಕೂದಲಿನವಳು. ಗುಂಗುರು ಕೂದಲು ಕುಳ್ಳಗಿರುವ, ಕೀರಲು ದನಿಯ ದ್ರಾವಿಡ ಬುಡಕಟ್ಟಿನ ರಾಮಾನುಜನರು ಅವಳೊಂದಿಗೆ ಕಾಮಿಸುವಾಗ ತಾನು ಯಾರು ಅವಳು ಯಾರು ಎಂದು ಅವರಿಗೆ ತಿಳಿಯುವುದಿಲ್ಲ.

ಹಾಗೆಯೇ ಒಂದು ಸಲ ರಾಮಾನುಜನರು ತನ್ನ ೧೪ನೇ ವಯಸ್ಸಿನಲ್ಲಿದ್ದರು. ಮೈಸೂರಿನ ಕಾಲೇಜು ರಸ್ತೆಯ ಹತ್ತಿರ ನಿಂತಿದ್ದರು. ಸಂಜೆಯ ಹೊತ್ತು ಬಿಸಿಲಿಗೆ ಧೂಳು ಎಬ್ಬಿಸುವಂತೆ ಬಿಸಿಲು ಮಳೆಗೆ ಮಣ್ಣಿನ ವಾಸನೆ ಏಳುತ್ತದೆ. ಮಳೆ ನಿಂತ ಮೇಲೆ ಕಂದು ಬಣ್ಣದ ಮೋಡದ ನಡುವೆ ಸೂರ್ಯನ ಪ್ರಭೆ ಕಾಣಿಸಿ ಏನೋ ಸುಖವೊಂದು ಮೈಹೊಕ್ಕಂತೆ ಆಗುತ್ತದೆ. ತನ್ನ ಒಳಗೆ ಉಕ್ಕಿ ಬರುವ ಕಾಮವನ್ನು ಹತ್ತಿಕ್ಕಲಾಗದೆ ಅವರು ಅಲ್ಲಿಯೇ ಇದ್ದ ಮದನಮಸ್ತಿ ಮರವನ್ನು ಅಪ್ಪುತ್ತಾರೆ. ಮರಗಿಡ, ಹೆಣ್ಣು, ಗಂಡು, ಯಾವುದರ ಅರಿವಿಲ್ಲದೆ ಆ ಹೊತ್ತಿಗೆ ಅವರು ಮರವನ್ನು ಅಪ್ಪಿ ಕಾಮಿಸಿದ್ದರು.

ಇದು ಯಾಕೆ ಮತ್ತೊಬ್ಬನ ಆತ್ಮ ಚರಿತ್ರೆ ಆಗುತ್ತದೆ ಎನ್ನುವುದಕ್ಕೆ ರಾಮಾನುಜನ್ ಹೇಳುವಂತೆ ನಮ್ಮ ಮೈ ಎಂಬುದು ಪುರಾತನ ಜೀವಗಳ ಬಯಲಾಜಿಕಲ್ ತೇಪೆ. ಯಾರೋ ನಮ್ಮ ಪೂರ್ವಜರು, ಅವರ ಚಹರೆ, ಅವರ ಕತೆಗಳಿಂದ ನಾವೆಲ್ಲರೂ ಅಂಕುಡೊಂಕುಸಂಕಪಾಲರ ಹಾಗೆ ಈಗ ಇದ್ದೇವೆ.. ಎಲ್ಲಿಯದೋ  ಹೆಂಡತಿ ಇನ್ನೆಲ್ಲಿಯದೋ ಗಂಡ, ಮದುವೆಯಾಗಿ ಹೋಗಹೋಗುತ್ತಾ ಒಂದು ಹಂತದಲ್ಲಿ ಒಬ್ಬರ ಪಡಿಯಚ್ಚಿನಂತೆ ಇನ್ನೊಬ್ಬರು ಕಾಣಿಸುತ್ತಾರೆ. ಪ್ರಾಗೈತಿಹಾಸಿಕ ಕಾಲದಿಂದಲೂ, ಅವನಿಂದ ಇವನು ಇವನಿಂದ ಅವನು, ಒಂದು ಜನಾಂಗದಿಂದ ಇನ್ನೊಂದು ಎಂದು ಮನುಷ್ಯ ಪರಸ್ಪರ ಕೊಂಡುಕೊಳ್ಳುತ್ತಿದ್ದಾನೆ. ಯುದ್ಧ ಮಾಡಿ, ಮತ್ತೆ ರಾಜಿಯಾಗಿ ಮತ್ತೆ ಯುದ್ಧ ಮತ್ತೆ ರಾಜಿ, ಹೀಗೆ ಮುಂದುವರೆಯುತ್ತಲೇ, ‘ಇದು ನಮ್ಮದು ಮಾತ್ರ’ ಎಂಬ ಎರವಲು ಸಂಸ್ಕೃತಿಯ ಅಣಕದಲ್ಲೇ ಲೋಕದಲ್ಲಿ ರಾತ್ರಿ ಹಗಲು ಕಳೆಯುತ್ತಿದೆ.
ನನ್ನತನ ಎನ್ನುವುದು, ಯಾವ ಓಬಿರಾಯನ ಕಾಲದಲ್ಲೂ ಇದ್ದದ್ದಲ್ಲ. ಮನುಷ್ಯ ಎಲ್ಲೆಲ್ಲೋ ಇದ್ದದ್ದೆಲ್ಲಾ ಬಾಚಿಕೊಂಡು, ಇದು ನನ್ನ ಕವಿತೆ, ಇದು ನನ್ನ ಸಂಸ್ಕೃತಿ, ಇದು ನನ್ನದೇ ಕಣ್ಣು ಎಂದರೆ ಅಲ್ಲಿ ಇನ್ಯಾರದೋ ಚಹರೆ, ಇನ್ಯಾರದೋ ಮುದ್ರೆ ಕಾಣಿಸುತ್ತಿರುತ್ತದೆ. ಈ ಆತ್ಮಚರಿತ್ರೆಯಲ್ಲಿ ೧೪ರ ಪ್ರಾಯದ ರಾಮಾನುಜನರು ಕಾಮಿಸಲು ಮರವನ್ನು ಅಪ್ಪುವಾಗಲೂ ಅವರಿಗೆ ಇಡಿಯ ತಾನಾಗಲು ಆಗುವುದಿಲ್ಲ. ಮಾರ್ಜಾಲ ಕಿಶೋರ ನ್ಯಾಯದಂತೆ ಲೋಕವೇ ಬಂದು ನಮ್ಮನ್ನು ಅಪ್ಪುವಂತಿದೆ.

ಇಲ್ಲಿ ರಾಮಾನುಜನರ ಹೆಂಡತಿ ಅಮೇರಿಕನ್. ಇಲ್ಲಿನ ಆಚಾರ ವಿಚಾರ ಗೊತ್ತಿಲ್ಲದ ಹೆಂಡತಿಗೆ ಮೈಸೂರಿನ ಹಳೆಯ ನೆನಪು, ಇಲ್ಲಿನ ಜೋಕುಗಳನ್ನು ಹೇಳುತ್ತಾರೆ. ಅವಳು ಅದೆಲ್ಲಾ ತನ್ನದೇ ಸ್ವಂತದ್ದೆಂದು ಸಲೀಸಾಗಿ ತನ್ನ ಗೆಳತಿಯರ ಹತ್ತಿರ ಹೇಳುತ್ತಾಳೆ.  ಹಾಗೆಯೇ ಅವಳು ಹೇಳಿದ ಅನುಭವಗಳನ್ನು ರಾಮಾನುಜನ್ ತಾನೇ ಅನುಭವಿಸಿದಂತೆ ಗೆಳೆಯರ ಹತ್ತಿರ ಹೇಳಿಕೊಳ್ಳುತ್ತಾರೆ, ಆಮೇಲೆ ಇಬ್ಬರೂ ಅದು ನನ್ನದು ನನ್ನದು ಎನ್ನುತ್ತಾ ಕಾಪಿರೈಟ್ ಕಾದಿರಿಸುವಂತೆ ಆಡುತ್ತಾರೆ. ಇಲ್ಲಿ ಅವರವರ ಸ್ವಂತದ್ದೆನ್ನುವುದು ಎಲ್ಲಿದೆ ಎಂದು ರಾಮಾನುಜನ್ ಹೇಳುತ್ತಾ ಐರಿಷ್ ಕವಿ ಯೇಟ್ಸ್ ನಿಗೆ ನಿದ್ದೆಯಲ್ಲಿ ಕನಸು ಅರ್ಧಕ್ಕೆ ನಿಂತು ಪಕ್ಕದಲ್ಲಿದ್ದ ಹೆಂಡತಿಯ ನಿದ್ರೆಯಲ್ಲಿ ಅದು ಪೂರ್ಣವಾಗುತ್ತಿತ್ತಂತೆ ಎನ್ನುತ್ತಾರೆ.

ನಮ್ಮಲ್ಲಿ ಅಜ್ಜನ ಹೆಸರು ಮೊಮ್ಮಗನಿಗೆ ಇಟ್ಟು ಇಡಿಯ ಬದುಕು ಪುನರ್ಜನ್ಮ ಪಡೆಯುತ್ತಿರುತ್ತದೆ. ಆದರೆ ಆಫ್ರಿಕದ ಕೆಲವು ಕಡೆ ಮುಖ್ಯಸ್ಥ ತೀರಿಕೊಂಡಾಗ ಅವನ ಹೆಸರು ಅದಕ್ಕೆ ಸಂಬಂಧಪಟ್ಟ ವಸ್ತುಗಳ ಹೆಸರು ಎಲ್ಲಾ ಸಾಯುತ್ತದಂತೆ. ಅವರಿಗೇನಾದರೂ ಸಾಂಕ್ರಾಮಿಕ ರೋಗ ಬಂದರೆ ಅವರ ಇಡಿ ಸಮುದಾಯವೇ ಕೊಚ್ಚಿ ಹೋಗಿ ಅವರ ಭಾಷೆಯೇ ಬದಲಾಗುತ್ತದಂತೆ. ಹೀಗಿರುವಾಗ, ನಮ್ಮವರು ಆತ್ಮಕ್ಕೆ ಹೆಸರಿಲ್ಲ, ಚರಿತ್ರೆ ಇಲ್ಲ ಎನ್ನುತ್ತಾರೆ, ಆದರೆ ಆಫ್ರಿಕನ್ನರಿಗೆ ಹೆಸರೇ ಆತ್ಮವಾಗಿದೆ ಎಂದು ರಾಮಾನುಜನ್ ಹೇಳುತ್ತಾರೆ. ಮತ್ತೊಬ್ಬನ ಆತ್ಮಚರಿತ್ರೆಗೆ ಒಬ್ಬನದೇ ಆತ್ಮವಿಲ್ಲ, ನೂರಾರು ಆತ್ಮಗಳ ಬೆಳಕಿನ ಕಿಡಿ ತಾಗಿಸಿಕೊಂಡ ಮನುಷ್ಯ ಅದು ತನ್ನದೇ ಎಂದುಕೊಂಡು ತಾನೇ ಒಂದು ದೊಡ್ಡ ಬೆಳಕಿನ ಪುಂಜವಾಗುತ್ತಾನೆ.

ಮತ್ತೆ ಇದರಲ್ಲಿ ಸಯಾಮಿ ಅವಳಿಜವಳಿಗಳ ಕತೆ ಬರುತ್ತದೆ. ಎರಡು ತಲೆ, ನಾಕು ಕೈ, ನಾಕು ಕಾಲು, ಆದರೆ ಸೊಂಟದ ಹತ್ತಿರ ಅಂಟಿಕೊಂಡಿದ್ದ ಗಂಗಾ ಯಮುನಾ ಎಂಬ ಸಯಾಮಿ ಅವಳಿಗಳ ಕತೆ. ಅವರಿಬ್ಬರಿಗೂ ದೇಹ ಒಂದೇ ಮನಸ್ಸು ಬೇರೆ. ಒಬ್ಬಳು ಬಾತ್ ರೂಂಗೆ ಹೋದರೆ ಇನ್ನೊಬ್ಬಳು ಸುಮ್ಮನೆ ನಿಲ್ಲಬೇಕು, ಬೆಳಗ್ಗೆ ಒಬ್ಬಳಿಗೆ ಎಚ್ಚರವಾದರೆ ಇನ್ನೊಬ್ಬಳು ಮಲಗಿರುತ್ತಾಳೆ. ಒಬ್ಬಳು ತನ್ನ ಗೆಳೆಯನ ಕೊತೆ ಕೂಡುವಾಗ ಇನ್ನೊಬ್ಬಳು ನಾಚಿ ನೀರಾಗುತ್ತಾಳೆ. ಇದೊಂದೇ ವಿಷಯದಲ್ಲಿ ಅವರಿಬ್ಬರೂ ಸಾಮ್ಯವಿದ್ದದ್ದು.  ಬೇರೆ ಸಮಯದಲ್ಲಿ ಇಬ್ಬರ ಮನಸ್ಸೂ ಬೇರೆಬೇರೆ. ಅವರ ಸ್ಪರ್ಶ, ಅನುಭವ ಎಲ್ಲವೂ ಒಬ್ಬರಿಗಿಂತ ಇನ್ನೊಬ್ಬರಿಗೆ ಭಿನ್ನ. ಆದರೂ ಒಬ್ಬಳಿಗೋಸ್ಕರ ಇನ್ನೊಬ್ಬಳು ಕಾಂಪ್ರಮೈಸ್ ಮಾಡಿಕೊಳ್ಳುತ್ತಾ, ಜಗಳವಾಡುತ್ತಾ ಕೊನೆಗೆ ಅವರು ಸಾಯುವಾಗಲೂ ಒಬ್ಬಳು ಸತ್ತ ಮೇಲೆ ಇನ್ನೊಬ್ಬಳು ಎರಡು ದಿನ ಬದುಕಿದ್ದಳಂತೆ.

twinsದೂರದ ಶಿಕಾಗೋದಲ್ಲಿ ನೆಲೆಸಿದ್ದ ರಾಮಾನುಜನರಿಗೆ ಎರಡು ಸಂಸ್ಕೃತಿಗಳು ಇದೇ ರೀತಿಯಲ್ಲಿ ಓವರ್ ಲಾಪ್ ಆಗಿರಬಹುದು. ಭಾರತ ಮತ್ತು ಅಮೇರಿಕಾದಲ್ಲಿ ಇದ್ದ ರಾಮಾನುಜನರಿಗೆ ತನ್ನದ್ದಲ್ಲದ ದೇಶದಲ್ಲಿ ನೆನಪಾದ ಅವರ ಅತ್ತೆಯ ಮುಖ, ಮೂಗು, ಅವರ ವಜ್ರದ ಒಡವೆ, ಮದರಾಸಿನ ನೊರೆನೊರೆ ಸಮುದ್ರದ ಸದ್ದು, ಯಾವಾಗಲೋ ತಿಂದ ಮಸಾಲೆಯ ದೋಸೆ, ಫ್ರುಟ್ ಸಲಾಡಿನ ರುಚಿ ಇನ್ನೆಲ್ಲಿಯೋ ಮೂವತ್ತು ವರ್ಷಗಳ ನಂತರ ಕಾಡುತ್ತದೆ. ಅದೇ ಹೊತ್ತಿಗೆ ಇದೆಲ್ಲಾ ಯಾವುದೂ ತನ್ನದೆಲ್ಲ ಎನ್ನಿಸುವ ವೈರುಧ್ಯವೂ ಸೇರುತ್ತದೆ.

ಮತ್ತೊಬ್ಬನ ಆತ್ಮಚರಿತ್ರೆಯು ಒಂದು ಮುಗಿಯದ ಹಾಡು. ಓಹ್ ಹೌದಲ್ಲ, ಹೌದಲ್ಲ, ಎಂದು ಅನ್ನಿಸುತ್ತಲೇ ಕೊನೆ, ಕೊನೆಯಾಗುವುದಿಲ್ಲ. ಸುಮಾರು ಜನ  ಹಿರಿಯ ಲೇಖಕರಲ್ಲಿ ಆತ್ಮಚರಿತ್ರೆ ಯಾಕೆ ಬರಿಯೋದಿಲ್ಲ  ಕೇಳಿದರೆ, ಸತ್ಯವನ್ನು ಇದ್ದ ಹಾಗೆಯೇ ಬರೆಯುವುದು ಕಷ್ಟ, ಹಾಗೇ ಏನೋ ತಿರುಚಿ ಬರೆದರೆ, ಅಥವಾ ಎಲ್ಲವನ್ನೂ ಹೇಳದಿದ್ದರೆ ಅದು ಆತ್ಮ ಚರಿತ್ರೆ ಆಗುವುದಿಲ್ಲ ಎನ್ನುತ್ತಾರೆ. ಎಂದಿಗೂ ನಮ್ಮ ಆತ್ಮಚರಿತ್ರೆ ನಮ್ಮದಾಗುವುದಿಲ್ಲ, ಅದು ಇನ್ನೊಬ್ಬರದೂ ಮತ್ತೊಬ್ಬರದೂ ಆದರೆ ಮಾತ್ರ ನಮ್ಮದಾಗಬಹುದು ಎಂದು ಇದನ್ನು ಓದಿದ ಮೇಲೆ ಅನ್ನಿಸಿತು.

ನಮ್ಮ ಸಂಬಂಧಿ ಸುಬ್ಬಣ್ಣ ಅಂತ ಇದ್ದರು. ಅವರು ಹೆಂಡತಿ ವೆಂಕಟಲಕ್ಷ್ಮಿ. ಉಡುಪಿ ಹತ್ತಿರದ ಬಾಳ್ಕಟ್ಟದವರು. ವೆಂಕಟಲಕ್ಷ್ಮಮ್ಮನದು ಉಬ್ಬು ಹಲ್ಲು, ಉದ್ದ ಮೂಗು, ಕುಳ್ಳು ದೇಹ. ಥೇಟು ಈ ಪುಸ್ತಕದ ಪ್ರೊಫೆಸರ್ ಸುಬ್ಬರಾಮಯ್ಯನವರ ಹೆಂಡತಿಯಂತೆ ಅರ್ಧನೆರೆತ ಸಪೂರ ಮೋಟು ಜಡೆ. ಜಡೆ ತುಂಬಾ ಕನಕಾಂಬರ ಹೂ ಮುಡಿಯುತ್ತಿದ್ದರು. ಸುಬ್ಬಣ್ಣನವರದು ಗ್ರೀಕ್ ಶಿಲ್ಪಗಳಲ್ಲಿರುವಂತೆ ಉದ್ದ ಮೂಗು, ಕೈತೊಳೆದು ಮುಟ್ಟುವಂತಹ ಕೆನೆಹಾಲಿನ ಬಣ್ಣ. ಉದ್ದಕ್ಕೆ ತುಂಬಾ ಚಂದವಿದ್ದರು. ವೆಂಕಟಲಕ್ಷ್ಮಮ್ಮನಿಗೆ ಹುಟ್ಟಿನಿಂದ ಕಿವಿಕೇಳಿಸುತ್ತಿರಲಿಲ್ಲ. ಅದ್ಯಾವುದೋ ಕಾರಣಕ್ಕೆ ಅವಳೇ ಬೇಕು ಎಂದು ಆ ಕಾಲದಲ್ಲಿ ಹಠ ಹಿಡಿದು ಮದುವೆಯಾಗಿದ್ದರಂತೆ.

ಕೋಪಿಷ್ಟ ಕಿವುಡು ಹೆಂಡತಿಗೆ ಪ್ರೀತಿಯಿಂದ ಯಾವಾಗಲೂ ಕೀಟಲೆ ಮಾಡುತ್ತಿದ್ದರು. ಬೆಂಗಳೂರಿನ ಒಂದೇ ಕೋಣೆಯ ಮನೆಯಲ್ಲಿ ನಾಲ್ಕು ಮಕ್ಕಳ ಜೊತೆ ಅತ್ಯಂತ ಬಡತನದಿಂದ ಇದ್ದವರು. ಸುಬ್ಬಣ್ಣನ ಚಂದದ ಮುಖದಲ್ಲಿ, ಕೊರತೆ ಎಂಬುದಿರಲಿಲ್ಲ. ಒಂದು ಸಲ ಊರಿಗೆ ಬಂದಿದ್ದಾಗ, ಯಾವ ಕಾರಣಕ್ಕೋ ವೆಂಕಟಲಕ್ಷ್ಮಮ್ಮನಿಗೆ ಕೋಪ ಬಂದು, ಅವರ ಕೆನ್ನೆ ದಪ್ಪಗಾಗಿ, ಉಬ್ಬಿದ ಹಲ್ಲುಗಳು ಹೊರಗೆ ಬಂದು, ತುಟಿಗಳು ಅದರುತ್ತಿತ್ತು. ಏನು ಮಾಡಿದರೂ ಸಮಾಧಾನವಾಗದ ಮಗುವಿನಂತಹ ಹೆಂಡತಿಯನ್ನು ಸುಬ್ಬಣ್ಣ ಇದ್ದಕ್ಕಿದ್ದಂತೆ ಎತ್ತಿಕೊಂಡು ಓಡಿ ಅಂಗಳಕ್ಕೆ ಬಂದರು.

ಹೆಂಡತಿಗೆ ವಿಪರೀತ ನಾಚಿಕೆಯಾಗಿ,  ನಕ್ಕು ಅವರ ಉಬ್ಬು ಹಲ್ಲುಗಳು ಇನ್ನೂ ಉಬ್ಬಿದಂತಿತ್ತು. ಆ ಹೊತ್ತಲ್ಲಿ ಅವರಿಬ್ಬರ ಮುಖದಲ್ಲಿನ ಮಾರ್ದವತೆ, ನಮ್ಮೆಲ್ಲರಿಗೂ ಎಲ್ಲಿಗೋ ನಾಟುವಂತಿದ್ದ ಹೇಳಲಾಗದ ಪ್ರೀತಿ ನನ್ನನ್ನು ದಂಗುಬಡಿಸಿತ್ತು. ಆ ಎರಡು ಜೀವಗಳ ಸುಖ ಎಲ್ಲವನ್ನೂ ಮೀರಿದ್ದು. ನಿಜಕ್ಕೂ ಅವರಿಬ್ಬರೂ ಒಂದೇ ತರ ಕಾಣುತ್ತಿದ್ದರು. ಇದೆನ್ನೆಲ್ಲಾ ಬರೆವಾಗ ಇತ್ತೀಚೆಗಷ್ಟೇ ತೀರಿಕೊಂಡ ಇಬ್ಬರೂ ನೆನಪಾಗುತ್ತಿದ್ದಾರೆ.

‍ಲೇಖಕರು Admin

June 16, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ರೇಣುಕಾ

    ಸುಬ್ಬಣ್ಣ ಮತ್ತು ವೆಂಕಟಲಕ್ಷ್ಮಮ್ಮನ ಪ್ರೀತಿ ಗ್ರೇಟ್ ♡

    ಪ್ರತಿಕ್ರಿಯೆ
  2. BS Aravinda Babu, Advocate

    I have more details about your distant relative Subbanna & Venkatalakshamma, as they are my parents.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: