ಇಳೆಯೀಗ ಮಳೆಗೆ !
ಇಳೆಯೀಗ ತುಂಬಿದ ಬಸುರಿ
ಈಗೀಗ ಸುರಿದ ಮಳೆಗೆ
ಹಸಿರು ಸೀರೆಗೆ ಹೂಗಳ ಕುಸುರಿ!
ಮುಖ ಉಬ್ಬಿದೆ ಬೆಟ್ಟ
ಹಣೆಗೆ ಬಿಂದಿ ಚಂದಿರ
ಕೆಳಗೆ ಮೂಗುತಿ ನಕ್ಷತ್ರ
ಬೆಟ್ಟ ಮುಚ್ಚಿದೆ
ಮುಡಿ ಬಿಚ್ಚಿದ ಮೋಡ..!
ಆಗಸ ತುಂಬಿದ ಬಿಂದಿಗೆ
ದೋ..! ಎಂದ ಇಳೆಯ ಜಳಕ
ಮುಡಿ ಜಾರಿದ ನದಿ
ತಗ್ಗು-ದಿಣ್ಣೆಗೆ ಬಡಿದ ಜಲಪಾತ
ಇಳೆ ನಿಂತ ನೆಲ ಕಡಲು..!
ಇಳೆಯೀಗ ತುಂಬಿದ ಬಸುರಿ
ಫಲಭರಿತ ತೋಟ-ತೋಪು
ತೆನೆಬಿಟ್ಟ ಗದ್ದೆ-ಬಯಲು
ಜುಳುಜುಳು ನದಿ-ತೊರೆ-ಹಳ್ಳ
ಇಳೆಯ ಕೈಬಳೆ ನಾದ !
ಇಳೆಯೀಗ ಹಸಿರು ಬಾಣಂತಿ
ಹಣ್ಣುದುರಿ ಬೀಜ ಮೆತ್ತಿದ ಮಣ್ಣು
ತೆನೆ ಬಾಗಿ ನೆಲ ನೋಡಿದ ಕಣ್ಣು
ಅಮ್ಮ… ಎಂದ ಗಾಳಿ ಜೋಕಾಲಿ
ತೊಟ್ಟಿಲು ತೂಗಿದವು ಹಕ್ಕಿ ಚಿಲಿಪಿಲಿ !
]]>






Chennagide kavana