ಇಲ್ಲಿ ಗರ್ಭಕೋಶವೇ ಇಲ್ಲ..

ಈ ಹಿಂದೆ ಗೊಲ್ಲರಹಟ್ಟಿಯ ಮಹಿಳೆಯರ ಶೋಚನೀಯ ಸ್ಥಿತಿ ಬಗ್ಗೆ ವಾಹಿನಿಗಳಲ್ಲಿ ವರದಿಯಾಗಿ ಮಹಿಳಾ ಆಯೋಗದ ಅಧ್ಯಕ್ಷರಲ್ಲದೇ ಅನೇಕ ಅಧಿಕಾರಿಗಳು ಹಟ್ಟಿಗಳಲ್ಲಿ ಅರಿವಿನ ಕ್ರಮ ಕೈಗೊಂಡು ಬದಲಾವಣೆಗೆ ಮುನ್ನುಡಿ ಬರೆದಿದ್ದರು .

ಸಮಸ್ಯೆ ಮೇಲ್ನೋಟಕ್ಕೆ ಬಗೆ ಹರಿದಂತೆ ಕಂಡರೂ ಇನ್ನೊಂದು ಬಗೆಯಲ್ಲಿ , ತನ್ನ ಸ್ವರೂಪವನ್ನ ನಿಗೂಢವಾಗಿ ತೆರೆದಿಟ್ಟಿದೆ.
ಬದಲಾವಣೆಯ ಹರಿವಿಗೆ ಇನ್ನೂ ತೆರೆದುಕೊಳ್ಳುತ್ತಿರುವ ಈ ಮಹಿಳೆಯರನ್ನ ದಾರಿ ತಪ್ಪಿಸುವ ಹೀನ ಶಕ್ತಿಗಳು ತಮ್ಮ ಹಿತಾಸಕ್ತಿ ಸಾಧಿಸಿಕೊಳ್ಳಲು ಇವರ ಮುಗ್ಧತೆಯನ್ನ ಬಂಡವಾಳ ಮಾಡಿಕೊಳ್ಳುತ್ತಿರುವುದು ಶೋಚನೀಯ .

ಇದರ ಬಗ್ಗೆ ಹೇಮ ವೆಂಕಟ್ ಪ್ರಜಾವಾಣಿಯಲ್ಲಿ ವರದಿ ಮಾಡಿದ್ದಾರೆ .

ನಾನು ಗಮನಿಸಿದ ಒಂದು ವಿಷಯವೇನೆಂದರೆ ಅನೇಕ ಹಟ್ಟಿಗಳಿಗೆ ಸ್ವಂತ ಹೆಸರೇ ಇಲ್ಲದಿರುವುದು .ಅವೆಲ್ಲ ತಮ್ಮ ಊರಿನ ಸಮೀಪದ ಸರಿ ಸುಮಾರು ದೊಡ್ಡ ಊರುಗಳ ಹೆಸರಿನಿಂದಲೇ ಗುರುತಿಸಲ್ಪಡುತ್ತಿರುವುದು . ಉದಾ : ಹತ್ತಿರದ ಊರು ಸಿದ್ಧರಳ್ಳಿ ಅಂತಿದ್ದರೆ ಅದರ ಸಮೀಪದ ಹಟ್ಟಿ ಸಿದ್ಧರಳ್ಳಿ ಗೊಲ್ಲರಟ್ಟಿ ಆಗಿರುತ್ತೆ .
ನಾವು ಭೇಟಿ ಕೊಟ್ಟ ಊರು ಸ್ವಲ್ಪ ಆಧುನಿಕತೆಗೆ ಒಡ್ಡಿಕೊಂಡು ಗೋಪಾಲಪುರ ಆಗಿದೆ.

ಮಾರ್ಚ್ 8 ರ ಮಹಿಳಾ ದಿನಾಚರಣೆ ಪ್ರಯುಕ್ತ ರಿಪೋರ್ಟಿಗೆಂದು ಪ್ರಜಾವಾಣಿಯ ಹೇಮಕ್ಕ (ಹೇಮಾ ವೆಂಕಟ್) ಅರಸೀಕೆರೆ ಸಮೀಪದ ಗೊಲ್ಲರಹಟ್ಟಿಗೆ ಬಂದಿದ್ದರು . ಆಗಿನ ಚಿತ್ರಗಳಿವು.

ಜೊತೆಗೆ ಈ ಇಡೀ ವಿಷಯವನ್ನ ಬೆಳಕಿಗೆ ತಂದ ರತ್ನ , ನನ್ನ ಗೆಳತಿ ಮಮತರಾಣಿ , ಹಟ್ಟಿಯ ಹುಡುಗರು ಇದ್ದಾರೆ

-ಮಮತಾ ಅರಸೀಕೆರೆ 

hemavati venkat

ಫೋಟೊ : ಮಾಡಾಳು ಶಿವಲಿಂಗಪ್ಪ

ಜೋಪಾನವಾಗಿ ಕಾಪಿಟ್ಟುಕೊಳ್ಳಬೇಕಾದ ಮಹಿಳೆಯರ ಅತಿಮುಖ್ಯ ಅಂಗ ಗರ್ಭಕೋಶಕ್ಕೆ ಕತ್ತರಿ ಹಾಕುವ ದಂಧೆ ಹಳ್ಳಿಗಳಲ್ಲಿ, ಅದರಲ್ಲೂ ಗೊಲ್ಲರ ಹಟ್ಟಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ.

ಸರ್ಕಾರ, ಆರೋಗ್ಯ ಇಲಾಖೆ, ಮಹಿಳಾ ಅಭಿವೃದ್ಧಿ ಇಲಾಖೆಗಳ ಗಮನಕ್ಕೆ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಅರಸೀಕೆರೆಯ ಗೋಪಾಲಪುರ ಗೊಲ್ಲರಹಟ್ಟಿಗೆ ಭೇಟಿಕೊಟ್ಟಾಗ ಅಲ್ಲಿ ಪುಟ್ಟ ಪುಟ್ಟ ಮಕ್ಕಳ ಕೊರಳಲ್ಲಿ ತಾಳಿ ನೇತಾಡುತ್ತಿತ್ತು. ಎಲ್ಲ ಹೆಣ್ಣುಮಕ್ಕಳದೂ ಬಾಲ್ಯವಿವಾಹ. ಸರ್ಕಾರದ ಎಲ್ಲ ಸೌಲಭ್ಯಗಳು ಅಲ್ಲಿಗೆ ತಲುಪಿವೆ. ರಸ್ತೆ, ಚರಂಡಿ, ಕರೆಂಟು, ಶಾಲೆ, ಇದೆ. ಮನೆಯೊಳಗೆ ಟೀವಿ, ಮಿಕ್ಸಿ , ಮೂಟೆ, ಮೂಟೆ ರಾಗಿ ಇದೆ.

ಆದರೆ ಅಲ್ಲಿನ ಬಹುತೇಕ ಮಹಿಳೆಯರ ಹೊಟ್ಟೆಯಲ್ಲಿ ಗರ್ಭಕೋಶವೇ ಇಲ್ಲ. ಈ ವರದಿ ಓದಿ..

hema venkat story

 

ಗಂಭೀರ ಕಾಯಿಲೆಗಳಿಲ್ಲದಿದ್ದರೂ ಗರ್ಭಕೋಶವನ್ನು  ತೆಗೆದು ಹಾಕುವ ದಂಧೆ ರಾಜ್ಯದೆಲ್ಲೆಡೆ ವ್ಯಾಪಕವಾಗಿ ನಡೆಯುತ್ತಿದೆ. ಹಣ ಮಾಡುವ ಉದ್ದೇಶದಿಂದಲೇ ಇಂತಹ ಕೃತ್ಯ ನಡೆಯುತ್ತಿರುವುದು ಪತ್ತೆಯಾಗಿದ್ದು ಈ ಬಗ್ಗೆ ಸಿಒಡಿ ತನಿಖೆ ನಡೆಸಬೇಕು ಎಂದು ಸರ್ಕಾರವೇ ರಚಿಸಿದ್ದ ಸಮಿತಿ ಶಿಫಾರಸು ಮಾಡಿದ್ದರೂ ಸಮಿತಿ ವರದಿ ದೂಳು ತಿನ್ನುತ್ತಿದೆ.

ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಣ್ಣಪುಟ್ಟ ಸಮಸ್ಯೆಗಳಿಗೂ ಗರ್ಭಕೋಶ ತೆಗೆಯುವುದು ಪರಿಹಾರ ಎಂದು ವೈದ್ಯರು ಹೇಳುತ್ತಿದ್ದು ಒಂದು ಶಸ್ತ್ರ ಚಿಕಿತ್ಸೆಗೆ ₹ 25 ಸಾವಿರದಿಂದ ₹ 1 ಲಕ್ಷದವರೆಗೂ ವೆಚ್ಚವಾಗುತ್ತಿದೆ. ಸರ್ಕಾರಿ ವೈದ್ಯರೂ ಕೂಡ ಗರ್ಭಕೋಶ ಕತ್ತರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಖಾಸಗಿ ಆಸ್ಪತ್ರೆಗಳಿಂದ ಕಮಿಷನ್‌ ಪಡೆಯುತ್ತಿದ್ದಾರೆ ಎಂಬ ಆರೋಪಗಳೂ ಇವೆ.

ಬೀರೂರು ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು 1,475 ಮಹಿಳೆಯರ ಗರ್ಭಕೋಶವನ್ನು ತೆಗೆದು ಹಾಕಿರುವ ಬಗ್ಗೆ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಭಂಡಾರಿ, ವಾಣಿ ಕೋರಿ ಮತ್ತು ಡಾ. ಸುಧಾ ಅವರನ್ನು ಒಳಗೊಂಡ ಸಮಿತಿಯನ್ನು  ಸರ್ಕಾರ ರಚಿಸಿತ್ತು. ಸಮಿತಿ ವರದಿ ನೀಡಿ ವರ್ಷ ಕಳೆದರೂ ಯಾವುದೇ ಕ್ರಮ ಜರುಗಿಸಿಲ್ಲ.

ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿಯೂ ಗರ್ಭಕೋಶ ತೆಗೆಯುವ ದಂಧೆ ನಡೆಯುತ್ತಿರುವ ದೂರು ಬಂದಿದ್ದರಿಂದ ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿ ರಚಿಸಲಾಗಿದೆ.

‘ಬೀರೂರಿನ ಪ್ರಕರಣ ರಾಜ್ಯದಾದ್ಯಂತ ಸುದ್ದಿ ಮಾಡಿದರೂ ಹಾಸನ, ಚಿತ್ರದುರ್ಗ, ದಾವಣಗೆರೆಗಳಲ್ಲಿ  ಗೊಲ್ಲರಹಟ್ಟಿಯ ಮಹಿಳೆಯರ ಗರ್ಭಕೋಶಕ್ಕೆ ಕತ್ತರಿ ಹಾಕುವ ದಂಧೆ ಈಗಲೂ ನಡೆಯುತ್ತಿದೆ’ ಎಂದು ಕೆಲ ಸಾಮಾಜಿಕ ಕಾರ್ಯಕರ್ತರು ದೂರುತ್ತಾರೆ.

ರಾಜ್ಯ ಮಹಿಳಾ ಆಯೋಗ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಅಲ್ಲಿನ ಗೊಲ್ಲರಹಟ್ಟಿಗಳಲ್ಲಿ ಸಮೀಕ್ಷೆ ನಡೆಸಿದಾಗ, ಜಿಲ್ಲೆಯ ಒಟ್ಟು 36 ಗೊಲ್ಲರಹಟ್ಟಿಗಳಲ್ಲಿರುವ 15ರಿಂದ 45ವರ್ಷದೊಳಗಿನ 288 ಹೆಣ್ಣುಮಕ್ಕಳು ಗರ್ಭಕೋಶವನ್ನು ತೆಗೆಸಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಹಾಸನದ ಸಾಮಾಜಿಕ ಕಾರ್ಯಕರ್ತೆ ರೂಪಾ ಹಾಸನ ‘ಪ್ರಜಾವಾಣಿಗೆ’ ಮಾಹಿತಿ ನೀಡಿದರು.

‘ಇದೊಂದು ಗಂಭೀರ ಪ್ರಕರಣ. ಗರ್ಭಕೋಶ ತೆಗೆಸಿಕೊಂಡವರ ಸಮೀಕ್ಷೆ  ಎಲ್ಲ ಜಿಲ್ಲೆಗಳಲ್ಲಿ ನಡೆಸಬೇಕು. ತಪ್ಪಿತಸ್ಥ ವೈದ್ಯರಿಗೆ ಶಿಕ್ಷೆ ವಿಧಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಮುಟ್ಟಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗೊಲ್ಲರಹಟ್ಟಿಯ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳು ಗರ್ಭಕೋಶವನ್ನು ತೆಗೆಸಿಕೊಳ್ಳುತ್ತಿದ್ದಾರೆ.  ಗೊಲ್ಲರಹಟ್ಟಿಯ ನಲವತ್ತು ವರ್ಷದೊಳಗಿನ 90ರಷ್ಟು ಹೆಣ್ಣುಮಕ್ಕಳಿಗೆ ಗರ್ಭಕೋಶಗಳೇ ಇಲ್ಲ.  ಹೆಣ್ಣುಮಕ್ಕಳ ಅಮಾಯಕತೆಯನ್ನು ಬಳಸಿಕೊಂಡು ಕೆಲ ವೈದ್ಯರು ಇದನ್ನೇ ದಂಧೆ ಮಾಡಿಕೊಂಡಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತೆ ರತ್ನಾ ದೂರಿದರು.

‘ಕಲಬುರ್ಗಿ ಜಿಲ್ಲೆಯಲ್ಲಿಯೂ ಇದು ವ್ಯಾಪಕವಾಗಿದೆ. ಆದಿವಾಸಿ ಮಹಿಳೆಯರಲ್ಲಿ ಈ ಪ್ರಕರಣ ಹೆಚ್ಚು ಕಂಡು ಬಂದಿದೆ.  ಇದಕ್ಕೆ ಬಾಲ್ಯ ವಿವಾಹ, ಕುಟುಂಬದ ನಿರ್ಲಕ್ಷ್ಯ, ದಾಂಪತ್ಯ ಸಮಸ್ಯೆಯೂ ಕಾರಣವಾಗಿದೆ’ ಎಂದು ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ  ತಿಳಿಸಿದರು.

‘ಆರೋಗ್ಯ ಸಮಸ್ಯೆಗೆ ಅಂಗವನ್ನೇ ಕಿತ್ತು ಹಾಕುವುದು ಪರಿಹಾರವಲ್ಲ. ಕ್ಯಾನ್ಸರ್‌ನಂಥ ಕಾರಣಗಳಿದ್ದಲ್ಲಿ ಮಾತ್ರ ತೆಗೆದು ಹಾಕಬೇಕು ಎಂಬ  ಅರಿವು ಮೂಡಿಸುವುದು, ಗರ್ಭಕೋಶ ತೆಗೆದು ಹಾಕುವುದರಿಂದ ಉಂಟಾಗುವ  ಸಮಸ್ಯೆಗಳ ಬಗ್ಗೆ ತಿಳುವಳಿಕೆ ನೀಡುವುದು ವೈದ್ಯರ ಜವಾಬ್ದಾರಿ’ ಎಂದು ಅವರು ಹೇಳಿದರು.

‘ಗ್ರಾಮೀಣ ಭಾಗಗಳಲ್ಲಿ ಈ ಪ್ರಕರಣಗಳು ಹೆಚ್ಚು ಕಂಡು ಬರುತ್ತಿರುವುದು ಬಾಲ್ಯ ವಿವಾಹದ ಕಾರಣದಿಂದ ಎಂಬ ಅಂಶ ಅಧ್ಯಯನದಿಂದ ತಿಳಿದುಬಂದಿದೆ’ ಎಂದು ಅವರು ಮಾಹಿತಿ ನೀಡಿದರು.

ಇಲ್ಲಿ  ಕ್ಲಿಕ್ಕಿಸಿ 

‍ಲೇಖಕರು admin

March 10, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: