ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಬ್ಬನಿ

ಪೂರ್ಣಿಮಾ ಸುರೇಶ್

ಮೊಲೆ ತೊಟ್ಟು ಬಾಯೊಳಗೆ.

ಕಣ್ಣನು ಅರೆ  ಮುಚ್ಚಿ

ಸಪ್ನ ಲೋಕದ ಗಡಿಯಲಿ

ವಿಹರಿಸುತಿಹ 

ಎದೆಗಂಟಿದ ಕಂದನ 

ಮುಗ್ಧ ಸುಖ ಸೆಳೆದು

ನಿಧಾನವಾಗಿ..

ಸದ್ದಾಗದ  ಹೆಜ್ಜೆಯಲಿ

ಅರೆಬೆಳಕಿನಲಿ 

ಕೈಗೆಟಕಿದ ಲೆಗಿಂಗ್ಸ್

ಕುರ್ತಾ ಎಳೆದು

ತಂಬಿಗೆ ನೀರ ಅವಸರದಲಿ 

ಎರೆದು

ಉಡುಪಿನೊಳಗೆ ತನ್ನನು

ತುಂಬಿಸಿ..

ಸ್ಕ್ಯೂಟಿ  ಚಾಲೂ ಮಾಡಿ

ಧಾವಿಸುತ್ತಾಳೆ

ದೇವಾಲಯಕೆ

ಅವಳೆಲ್ಲಿ? ‘

ಅವನು ಎಂದಿನಂತೆ 

ಕಾಯುವನು

ವೃತ್ತದೊಳಗೆ ಎತ್ತಿಟ್ಟ ಪಾದ

ಅವನಲಿ  ಪುಳಕ

ಅಭಿಷೇಕ..

ಬಗೆ ಬಗೆ ಹೂವಿನಲಂಕಾರ

ಮಬ್ಬುಮುಂಜಾವು 

ಬೆರಳೆಣಿಕೆ ಭಕ್ತರು

ಹೂವುಗಳ ನಡುವೆ ಪಾರಿಜಾತ

ದೀನಳು ದೇವನಲಿ  

ಬೇಡುವಳು

ಅವನ ಕಣ್ಣಲಿ ನಗು.

ಬೊಗಸೆ ತುಂಬ ಪ್ರಸಾದ     

ಹೊರ ಬರುತ್ತಾಳೆ

ಧನ್ಯತೆಯ ಭಾವ

ಇನ್ನೇನು..

ಸ್ಕೂಟಿ ಚಾಲೂ ಮಾಡಬೇಕು..

ಮೊದಲ ಮಳೆಗೆ ಕದಲಿ 

ಹೊರಬಂದ  ಚಿಗುರು 

ಮೈ ತುಂಬ ಕಚಕಗುಳಿಯ ನಗು

ಎಳಸು ಮೀಸೆ

ಕನಸು ಕಣ್ಣಿನ ಹುಡುಗ

ಅವಳೀಗ

ಬೆಳಗ್ಗೆ ಮಬ್ಬಿನಮಲಿನಲಿ

ಉಲ್ಟಾ ಧರಿಸಿದ ಕುರ್ತಾದಲ್ಲಿ

ಎದ್ದುನಿಂತ ಹೊಲಿಗೆ..

ಕೈಲಿ ಸವರುತ್ತ 

ತುಸು ಚಡಪಡಿಸಿ

ವಿನಾ ಕಾರಣ ಅತ್ತಿತ್ತ ನೋಡಿ

ಅವನೆಡೆಗೆ ಮುಗುಳು ನಗೆ ತೂರಿ..

ಇನ್ನೂ ಸಿಹಿ ನಿದ್ದೆಯಲಿರುವ ಗಂಡ

ಮಗುವಿನ  ನೆನಪು ನಡುವೆ

ಅವನ ಚಿತ್ರ ಮನಕ್ಕಂಟಿಸಿ

ಭರ್ರೆಂದು 

ಸ್ಕೂಟಿ  ಚಕ್ರ ತಿರುಗುತ್ತೆ

ದೇವರು

ಮರುದಿನದ ಮಕರಂದ

ಸುಪ್ರಭಾತದ  ನಿರೀಕ್ಷೆಯಲ್ಲಿ…

‍ಲೇಖಕರು Avadhi

9 September, 2020

2 Comments

  1. ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

    ವೃತ್ತದೊಳಗೆ ಸುತ್ತುತ್ತಾ ಸುತ್ತುತ್ತಾ ಹಠತ್ತಾನೇ ಎಲ್ಲೋ ಹೊಳೆದ ಮಿಂಚಿಗೆ ಸೋತು ಪರಿಧಿಯಿಂದ ಹೊರಗೆ ಮನಸ್ಸು ಎಳೆದರೂ ಮಿಂಚೆಂಬುದು ಹೀಗೆ ಬಂದು ಹಾಗೆ ಮರೆಯಾಗುವ ಒಂದು ಚಂದದ ಅನುಭವ ಅಷ್ಟೇ ಅನ್ನುವ ವಾಸ್ತವ ಅರಿವಾದಾಗ ಜೀವನ ಸುಂದರ.

    ಕವಿತೆ ಸೂಪರ್ರು

  2. ರೇಣುಕಾ ರಮಾನಂದ

    ಪೂರ್ಣಿಮಾ ಪದ್ಯ ಇಷ್ಟವಾಯ್ತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading