ನದಿ ನಡೆದಂತೆ ದಾರಿ

ಆನಂದ ಸಿ ಕುಂಚನೂರು
ಹಕ್ಕಿ ಹಿಂಡು ಹಾಯಾಗಿ ಹಿಂತಿರುಗುವ
ಆ ಹೊರಳು ದಾರಿಯಿಂದಲೆ
ನಮ್ಮ ಕಾಲು ಯಾತ್ರೆ ಹೂಡುತ್ತವೆ
ಒಮ್ಮೆ ಅವನು ಮುಂದು, ಒಮ್ಮೆ ನಾನು
ಹೆಜ್ಜೆ ಜೋಡಿಸಿ ಹೊರಟರೆ ಸಾಕು
ಕಿರುಬೆರಳ ಮೃದುವಾಗಿ ಆಧರಿಸಿ
ತೋರುಬೆರಳ ತುದಿಯಿಂದ
ತನ್ನ ಬೆರಗುಗಳ ಒಂದೊಂದಾಗಿ
ತೋರುತ್ತಾನೆ
ದೊಡ್ಡ ಕಣ್ಣಾಲಿಯ ಪುಟ್ಟ ಕಂದ
ಅಗೋ ಮರ, ಓ ಹಕ್ಕಿ, ಹಾ ವಿಮಾನು…
ಮತ್ತೆರಡು ಹೆಜ್ಜೆ ಮುಂದಿಟ್ಟರೆ
ರಸ್ತೆಯಂಚಲಿ ಹಗೂರಾಗಿ ಉದುರಿದ ಹೂಗಳ
ಚೆಂದದಿ ಆರಿಸಿ ಅಂದದ ಹೂನಗೆಯಾಗುತ್ತಾನೆ
ಹರಿದ ಎಲೆಯೊಂದ ತಲೆಗೇರಿಸಿ
ಕೃಷ್ಣನಂತೆ ನಟಿಸುತ್ತಾನೆ
ನನ್ನ ಉತ್ತರ ಲೆಕ್ಕಿಸದೆ ಓಡಿ
ಇನ್ನೇನು ಹುದುಗಿ ಮಣ್ಣಾಗಬಹುದಿದ್ದ
ಹಕ್ಕಿ ಪುಕ್ಕವೊಂದ ಎತ್ತಿಹಿಡಿದು ಜೈ ಎನ್ನುತ್ತಾನೆ
ಮತ್ತು
ನನ್ನ ಗಮನಿಸದೆ
ತಾನೇ ಕ್ರಮಿಸಿ
ಅಡ್ಡಾದಿಡ್ಡಿ ಹರಡಿದ ಕಲ್ಲುಗಳಲೊಂದನು ಆರಿಸಿ
ಸಂಭ್ರಮದಲಿ ಕಿಸೆಗಿಳಿಸುತ್ತಾನೆ ಮುತ್ತೇ ದೊರಕಿದಂತೆ
ಇನ್ನು ತಡೆದೆನೋ
ಹಾಗೊಮ್ಮೆ ಹೀಗೊಮ್ಮೆ ಬಾಲನಂದಿ ಶಿವನ ಎಳೆವಂತೆ
ಎಳೆದು ತಂದು ನಿಲ್ಲಿಸಿಬಿಡುತ್ತಾನೆ ಗಡಿಬಿಡಿಯಲಿ
ತಡಬಡಾಯಿಸುತ್ತೇನೆ
ಇನ್ನು ಬೈಯಬಹುದೆನ್ನುವಾಗ
‘ಅಪ್ಪಾ, ತಗೋ’ ಎಂದು ಒಟ್ಟಾಗಿ ಕೈಗಿಟ್ಟು
‘ಹೋ…’ ಎಂದು ಇನ್ನೊಂದು ಬೆರಗ ಬೆನ್ನಟ್ಟಿ ಓಡುತ್ತಾನೆ-
ಅಂಗೈ ತೆಕ್ಕೆಯ ಹೂವು, ಹಕ್ಕಿಪುಕ್ಕ, ಎಲೆ, ಕಲ್ಲನು
ಬೇಕಾದರೆ ಕವಿತೆಮಾಡಿ
ಸುಖವಾಗಿರೆಂದು!





0 Comments