ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊಳ್ಳಿದೆವ್ವಗಳು ನಮ್ಮ ಮನೆಗೆ ಬಂದಿದ್ವು!

ಎಂ ಆರ್ ಕಮಲ 

ದೆವ್ವದ ಸಿನೆಮಾ ನೋಡಿ ಬಂದಾಗಿನಿಂದ ದೆವ್ವ ನನ್ನನ್ನು ಬಿಡುತ್ತಿಲ್ಲ ಅಥವಾ ನಾನು ದೆವ್ವವನ್ನು ಬಿಡುತ್ತಿಲ್ಲ. ಇವತ್ತು ಈ ದೆವ್ವಕ್ಕೆ ಒಂದು ಗತಿ ಕಾಣಿಸಲೇ ಬೇಕು ಎಂದು ನೂರು ಕೆಲಸವಿದ್ದರೂ ಬಂದು ಬರೆಯಲು ಕುಳಿತಿದ್ದೇನೆ.

`ನೀನೆಲ್ಲಿ ಹೋಗಲಿ, ನಾನಲ್ಲೇ ಕಾಣುವೆ, ಎಲ್ಲೇ ಇರು, ಹೇಗೆ ಇರು ನೆರಳಾಗಿ ಕಾಡುವೆ’ ಅಂತ `ಧನಪಿಶಾಚಿ’ ಸಿನೆಮಾದಲ್ಲಿ ಬಿಳಿ ಸೀರೆ ಉಟ್ಟುಕೊಂಡು ಸಂಪತ್ ಅವರನ್ನು ಕಲ್ಪನಾ ಹಿಂಬಾಲಿಸುತ್ತಾಳಲ್ಲ …ಹಾಗೆ!

ಈ ಫೋಟೋದಲ್ಲಿ ನಾವೇ ಕೊಳ್ಳಿದೆವ್ವಗಳಂತೆ ಕಾಣುತ್ತಿದ್ದೇವೆ!

ಈ ಫೋಟೋದಲ್ಲಿ ನಾವೇ ಕೊಳ್ಳಿದೆವ್ವಗಳಂತೆ ಕಾಣುತ್ತಿದ್ದೇವೆ!

ಎಷ್ಟೋ ವರ್ಷದ ಮೇಲೆ ನಮ್ಮೂರಿನವರು ಯಾರೋ ಸಿಕ್ಕಿದ್ದರು.. ಮಾತಾಡ್ತಾ `ಕಲ್ಲುಬಾವಿಯಲ್ಲಿ ನೀರಿಲ್ಲ’ ಅಂದರು. ತಟಕ್ ಅಂತ `ಜಡೆಮುನಿ’ ನನ್ನನ್ನು ಹಿಡಿದೇಬಿಟ್ಟಿತು. ಊರಲ್ಲಿ ಅಮ್ಮ ಹಿತ್ತಲಲ್ಲಿ ಗುಸುಗುಸು ಮಾಡ್ತಿದ್ದಾಗ ಕಲ್ಲು ಬಾವಿಗೆ ಯಾರೋ ಬಿದ್ದು ದೆವ್ವವಾಗಿ ತಿರುಗುತ್ತಿರುವುದರ ಬಗ್ಗೆ ಹೇಳಿದ್ದು ಕೇಳಿಸಿಕೊಂಡಿದ್ದೆ.

ನನ್ನ ಅಪ್ಪನ ಭಯಂಕರ ಕಥೆಗಳಲ್ಲೆಲ್ಲ ದೆವ್ವಗಳು ಅದ್ಯಾಕೋ ಕಲ್ಲುಬಾವಿಯ ಸುತ್ತ ಮಾತ್ರ ಕುಣಿಯುತ್ತಿದ್ದವು!!! ಚಿಕ್ಕವಳಿದ್ದಾಗ ನಾನು ಆಸೆ ಪಟ್ಟು `ಜಡೆಮುನಿ’ ಯ ಕಥೆಯನ್ನು ಕೇಳುತ್ತಿದ್ದೆ. ಜಡೆಮುನಿಯ ಬಗ್ಗೆ ವಿವರವಾಗಿ ತಿಳಿಯಲು ಆಸೆಯಿದ್ದವರು ಎ ಎನ್ ಮೂರ್ತಿರಾಯರ ಪ್ರಬಂಧ ಓದಿ.( ಬಹುಶಃ `ಗಾಡಿಯ ಪ್ರಯಾಣ’ ಇರಬಹುದು).

ಈ ದರಿದ್ರ ಜಡೆಮುನಿ ಅದೇಕೋ ಅಣ್ಣನ ಕಥೆಯಲ್ಲಿ ನಮ್ಮ ಮನೆಯ ಮುಂದೆಯೇ ದಿನವೂ ರಾತ್ರಿ ಹನ್ನೆರಡು ಗಂಟೆಗೆ ನಡೆದು ಹೋಗುತ್ತಿತ್ತು. ಅದರ ಮುಂದೆ ಕೊಳ್ಳಿದೆವ್ವಗಳ ಸಾಲು. ಕಿಲೋಮೀಟರ್ಗಳಷ್ಟು ಉದ್ದದ ಜಡೆಮುನಿಯ ಜಡೆಯನ್ನು ವಿಕಾರವಾದ ದೆವ್ವಗಳು ಹೊತ್ತೊಯ್ಯುತ್ತಿದ್ದವು. ಈ ಜಡೆಮುನಿಯ ಜಡೆಯ ಒಂದು ಕೂದಲನ್ನು ಕಿತ್ತುಕೊಂಡರೆ ಸಾಕು ಅದು ಬೇಡಿದ್ದೆಲ್ಲವನ್ನು ನೀಡುತ್ತಿತ್ತು..

ಅಕಸ್ಮಾತ್ ಹೀಗೆ ಕೀಳುವಾಗ ಅದರ ದೃಷ್ಟಿಗೆ ಬಿದ್ದರೆ ಅಲ್ಲೇ ರಕ್ತಕಾರಿ ಸಾಯಬೇಕು..ನಾವು ಜಡೆಮುನಿಯನ್ನು ನೋಡಬಹುದು! ಅದು ನಮ್ಮನ್ನು ನೋಡುವಂತಿಲ್ಲ..ಈ ಜಡೆಮುನಿ ನಮ್ಮ ತೋಟವನ್ನೆಲ್ಲ ಸುತ್ತಿ, ಕಲ್ಲುಬಾವಿಗೆ ಬಂದು ಸ್ನಾನ ಮಾಡಿ ಮತ್ತೆ ನಮ್ಮ ಬೀದಿಯ ಮೂಲಕವೇ ಹಾದು ಹೋಗುತ್ತಿತ್ತು. ನಮ್ಮೂರಿನಲ್ಲಿ ಇಷ್ಟು ಬೀದಿಗಳಿದ್ದರೂ ಅದು ನಮ್ಮ ಮನೆಯ ಬೀದಿಯನ್ನೇ ಯಾಕೆ ಆರಿಸಿಕೊಳ್ಳುತ್ತಿತ್ತು ಎಂಬುದೇ ನನಗೆ ಒಗಟಾಗಿತ್ತು. ಸೆಕೆಂಡ್ ಷೋ ಸಿನೆಮಾ ನೋಡದಂತೆ ಅಣ್ಣ(ತಂದೆ) ಮಾಡಿದ ಉಪಾಯ ಎಂದು ಮುಗ್ಧ ಮನಸ್ಸಿಗೆ ಆಗ ಹೊಳೆಯಲೇ ಇಲ್ಲ.

hand fireಕೊಳ್ಳಿದೆವ್ವಗಳು ಹೇಗಿರುತ್ತವೆ ಎಂದು ಒಮ್ಮೆ ಅಣ್ಣಂದಿರನ್ನು ಕೇಳಿದ್ದೆ. ಕೈಯಲ್ಲಿ ಪಂಜು ಹಿಡಿದು, ಬಾಯಲ್ಲಿ ಕೆಂಡ ಕಾರುತ್ತವೆ ಎಂದೇನೋ ಹೇಳಿದ್ದರು. ಒಂದು ದಿನ ರಾತ್ರಿ ಹನ್ನೆರಡು ಗಂಟೆಯವರೆಗೆ ಪಗಡೆಯಾಡುತ್ತ ಕುಳಿತಿದ್ದೆವು. ಇದ್ದಕ್ಕಿದ್ದಂತೆ ಕರೆಂಟ್ ಹೋಯಿತು..`ಥತ್’ ಎಂದು ಬೈದುಕೊಂಡು ಕುಳಿತಿರುವಾಗ ನಮ್ಮ ದಿವಾನಖಾನೆಯಿಂದ ನಡುಮನೆಗೆ ಇದ್ದಕ್ಕಿದ್ದಂತೆ ಮೂರು ಕೊಳ್ಳಿದೆವ್ವಗಳು ಬಂದವು!!!

ಬಾಯಲ್ಲಿ ಕೆಂಡ ಕಾರುತ್ತಿವೆ. ಬೆಂಕಿಯಂಥ ಹಲ್ಲುಗಳು `ಗರ್ ಗರ್’ ಎನ್ನುತ್ತಿವೆ. ನಾವೆಲ್ಲಾ ಹೆಣ್ಣುಮಕ್ಕಳು ದಿಕ್ಕಾಪಾಲಾಗಿ ಕಿರುಚಿಕೊಳ್ಳುತ್ತ, ಮನೆಯ ಮೂಲೆಯಲ್ಲಿ ಇಟ್ಟಿದ್ದ ಕೊಬ್ಬರಿ ಮೂಟೆಗಳ ಮೇಲೆ ಹತ್ತಿಬಿಟ್ಟೆವು. ಅಟ್ಟಕ್ಕೆ ಹೋಗೋಣವೆಂದರೆ ಅಲ್ಲಿ ಅಜ್ಜ ಹೇಳುತ್ತಿದ್ದ `ಕೊಮ್ಮೆ ಭೂತ’ಗಳು! ಅಷ್ಟರಲ್ಲಿ `ಬಾಯಿ ಮುಚ್ಚಿಕೊಂಡು ಬಿದ್ದುಕೊಳ್ಳಿ, ಪೊರಕೆ ತಗೊಂಡು ಬಾರಿಸ್ತೀನಿ’ ಅಂತ ಅಣ್ಣ ಈಚಲು ಪೊರಕೆಯನ್ನು ಹಿಡಿದುಬಂದರು. `ಯಾವನೋ ಮೇನ್ ಸ್ವಿಚ್’ ಆರಿಸಿದ್ದು, ಪಕ್ಕದ ಮನೆಯಲ್ಲಿ ದೀಪ ಉರೀತಿದೆ? ಕರೆಂಟ್ ಹೋಗಿಲ್ಲ’ ಎಂದು ಅಣ್ಣ ಗುಡುಗಿದ ತಕ್ಷಣ ದೀಪಗಳು ಹತ್ತಿಕೊಂಡವು.

`ಇಳೀರೆ ಕೆಳಗೆ’ ಅಂತ ನಮಗೆ ಪೊರಕೆಯಲ್ಲಿ ಬಾರಿಸಿದರು.. `ಅಯ್ಯೋ, ಹೆಣ್ಣುಮಕ್ಕಳಿಗೆ ಪೊರಕೆಯಲ್ಲಿ ಯಾರಾದರೂ ಹೋಡೀತಾರಯೇ ?’ ಅಂತ ಅಮ್ಮ ಮಧ್ಯೆ ಬಂದರು! ರೂಲು ದೊಣ್ಣೆಗಿಂತ ಪೊರಕೆಯೇ ವಾಸಿ ಎಂದು ನಮಗನ್ನಿಸಿತ್ತು. ಅಣ್ಣಂದಿರು ತಾವು ಹುಟ್ಟಿರುವುದೇ ತಂಗಿಯರನ್ನು ಹೆದರಿಸುವುದಕ್ಕೆ ಎನ್ನುವಂತೆ ಈ ವಿಚಿತ್ರ ಉಪಾಯವನ್ನು ಮಾಡಿದ್ದರು (ಬಹುಶಃ ಪ್ರಭು, ಶಂಕರ, SN ) . ಹತ್ತಾರು ಊದಿನ ಕಡ್ಡಿಗಳನ್ನು ಹೊತ್ತಿಸಿ ನಾಲಗೆಗೆ ತಾಗದಂತೆ ಬಾಯಿಯಲ್ಲಿ ಇಟ್ಟುಕೊಂಡು ಉಫ್ ಎಂದರೆ ಹಲ್ಲುಗಳ ಸಂದಿಯಿಂದ ಕಿಡಿಗಳು ಹಾರುತ್ತವೆ. ಹಲ್ಲುಗಳು ಕೆಂಡದುಂಡೆಗಳಂತೆ ಕಾಣುತ್ತವೆ.

ಇದನ್ನು ಕಷ್ಟಪಟ್ಟು ಕಲಿತುಕೊಂಡು ಪಾತ್ರೆ ತೊಳೆಯುತ್ತಿದ್ದ ಅಮ್ಮನನ್ನು ಹೆದರಿಸಲು ಒಂದು ರಾತ್ರಿ ಕರೆಂಟ್ ಇಲ್ಲದ ಸಮಯದಲ್ಲಿ , ಬಾಯಲ್ಲಿ ಊದುಗಡ್ಡಿಯಿಟ್ಟುಕೊಂಡು ಹೋದೆ. ಅಮ್ಮ ನನ್ನ ಕಡೆ ತಿರುಗಿಯೂ ನೋಡದೆ ಮೆಲುದನಿಯಲ್ಲಿ, `ಸಾಕು ಹೋಗಿ ಮಲಕ್ಕೋ, ನಿಮ್ಮಪ್ಪನ ಕೈಯಲ್ಲಿ ಬೈಸಿಕೋಬೇಡ’ ಅಂದರು. ನನ್ನ ಜೀವನದಲ್ಲಿ ಇಷ್ಟು ನಿರಾಸೆ ಮಾಡಿದ ದೆವ್ವ ಮತ್ತೊಂದು ಇರಲಾರದು!

‍ಲೇಖಕರು Admin

10 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading