ಟಿ.ಎಸ್. ಶ್ರವಣ ಕುಮಾರಿ
ನನಗೆ ಪಾಳುಬಿದ್ದ ದೊಡ್ಡ ದೊಡ್ಡ ಮನೆಗಳೆಂದರೆ ವಿಶೇಷ ಆಕರ್ಷಣೆ.
ಈಗ ಯಾರೂ ವಾಸಿಸುತ್ತಿಲ್ಲದ ಹಳೆಯ ಮನೆ.. ಅಲ್ಲಲ್ಲಿ ಬಿದ್ದು ಹೋದ ಗಾರೆ… ಮುರಿದ, ಬಣ್ಣ ಕಳೆದುಕೊಂಡ ಕಿಟಕಿ, ಬಾಗಿಲುಗಳು… ಮಹಡಿಯ ಮೇಲೆ ಇದು ಕೋಣೆಗಳೆಂದು ಹೇಳುವ ಕಿಟಕಿ, ಅದಕ್ಕೆ ಹೊಂದಿಕೊಂಡ ಪುಟ್ಟ ಪುಟ್ಟ ಬಾಲ್ಕನಿಗಳು, ದೊಡ್ಡದಾದ ಬಿಸಿಲು ಮಚ್ಚು… ನಾಡ ಹೆಂಚಿನ ಮನೆ… ಮನೆಯ ಮುಂದೊಂದು ಒಪ್ಪಾರ… ಕುಳಿತುಕೊಳ್ಳುವ ಜಗಲಿ ಕಟ್ಟೆ… ಒಪ್ಪಾರಕ್ಕೆ ಆನಿಸಿಕೊಂಡು ಬೆಳೆದಿರುವ, ಜಾಜಿಯದೋ, ಮಲ್ಲಿಗೆಯದೋ ಬಳ್ಳಿ… ಹಿಂದೆ ಇಲ್ಲೊಂದು ಕೈತೋಟವಿತ್ತೆಂದು ನೆನಪಿಸುವ ಮನೆಯ ಸುತ್ತಮುತ್ತಲ ಜಾಗ… ಹಿತ್ತಲಿನಲ್ಲಿ ಬಿದ್ದಿರುವ ಒರಳು ಕಲ್ಲು, ಗುಂಡುಗಳು, ಮುರಿದು ಬಿದ್ದ ಕುರ್ಚಿ, ಮೇಜು, ಒಡಕಲು ಡಬ್ಬ, ಪಾತ್ರೆ ಪಡಗ.. ಇಂತವನ್ನು ನೋಡಿದಾಗೆಲ್ಲಾ ನಾನು ಯಾವುದೋ ಲೋಕಕ್ಕೆ ಹೊರಟು ಹೋಗಿರುತ್ತೇನೆ…….
ಚರಿತ್ರೆಯ ಸಂಶೋಧನಾಕಾರರಿಗೆ ಹರಪ್ಪ ಮೊಹೆಂಜದಾರೋ ಕಂಡಾಗ ಆಗಬಹುದಾದ ಅಚ್ಚರಿ, ಸಂತೋಷ, ದಿಗ್ಭ್ರಮೆ, ಕುತೂಹಲಗಳು ನನಗೆ ಇಂತಹ ಮನೆಗಳನ್ನು ಕಂಡಾಗ ಆಗುತ್ತದೆ! ನನ್ನ ಈ ಆಕರ್ಷಣೆ ಕೆಲವರಿಗೆ ಅಚ್ಚರಿಯನ್ನು, ಕೆಲವರಿಗೆ ಕುತೂಹಲವನ್ನು ಮತ್ತೆ ಕೆಲವರಲ್ಲಿ ಅನುಕಂಪವನ್ನೂ ಸೃಷ್ಠಿಸಿದೆ. ಒಬ್ಬರಂತೂ ನನ್ನ ಬಗ್ಗೆ ಅತ್ಯಂತ ಕಳಕಳಿಯನ್ನು ತೋರಿ “ಯಾರಾದರೂ ಮನೋವೈದ್ಯರನ್ನು ಕಾಣುವುದೊಳಿತೇನೋ… ಹಳೆಯ ಅರಮನೆಗಳನ್ನೋ, ದೇವಸ್ಥಾನಗಳನ್ನೋ ನೋಡಿದಾಗ ಹೀಗಾಗಬಹುದೇನೋ.. ಆದರೆ ಪಾಳುಬಿದ್ದ ಮನೆಗಳನ್ನು ಕಂಡಾಗ ಹೀಗಾಡಿದರೆ…!” ಎಂದದ್ದುಂಟು.
ನನಗೇನೂ ಬೇಸರವಿಲ್ಲ ಬಿಡಿ, ತೆಲುಗಿನಲ್ಲಿ ಗಾದೆಯೇ ಇಲ್ಲವೇ ʻವಾಳ್ಳ ವಾಳ್ಳ ಪಿಚ್ಚಿ ವಾಳ್ಳ ವಾಳ್ಳಕೇ ಆನಂದಂ (ಅವರವರ ಹುಚ್ಚು ಅವರವರಿಗೆ ಚಂದ)ʼ ಅಂತ.
ಮೊನ್ನೆ ಹೀಗಾಯಿತು… ಗೆಳತಿಯೊಬ್ಬಳ ಜೊತೆಗೆ ದಿನದಂತೆ ಕಾರಿನಲ್ಲಿ ಮನೆಗೆ ವಾಪಸ್ಸು ಬರುತ್ತಿದ್ದೆ. ಅವಳಿಗೆ ಲಕ್ಷ್ಮೀಪುರಂನಲ್ಲಿ ಯಾರದೋ ಮನೆಗೆ ಹೋಗುವ ಕೆಲಸವಿತ್ತು “ಒಂದು ಹತ್ತು ಹದಿನೈದು ನಿಮಿಷ, ನಮ್ಮಜ್ಜಿ ಮನೆ, ಇದೊಂಚೂರು ಕೊಟ್ಟು ಬರಬೇಕು. ನೀನೂ ಒಳಗೆ ಬಾ, ಬೇಗ ಬಂದು ಬಿಡೋಣ” ಎಂದಳು.
ಗುರುತು ಪರಿಚಯವಿಲ್ಲದವರ ಮನೆಗೆ ಹೋಗಲು ಬೇಸರ; ಆದರೆ ದಿನವೂ ಜೊತೆಯಲ್ಲಿ ಬರುವವಳನ್ನು ಬಿಟ್ಟು ನನ್ನ ಪಾಡಿಗೆ ಹೋಗಲು ಸಾಧ್ಯವಿಲ್ಲ. ʻನಾನೇನಾದರೂ ಒಳಗೆ ಹೋದರೆ ಹತ್ತು ನಿಮಿಷಗಳ ಮುಂದೆ ಒಂದು ಗುಣಿಸು ಚಿನ್ಹೆ ಬಿದ್ದು ಮುಂದೆ ಅಂಕಿಗಳನ್ನು ಹಾಕಿಕೊಳ್ಳುತ್ತಾ ಹೋಗುತ್ತದೆʼ ಎನ್ನುವುದು ನನ್ನ ಅನುಭವ.
ʻಹೊರಗೆ ಕಾಯುತ್ತಾ ಇದ್ದಾರೆಂದರೆ ಮನೆಯೊಳಗೆ ಹೋದವರಿಗೆ ಒಂದು ಲಂಗರು ಹಾಕಿದಂತೆʼ ಎಂದುಕೊಂಡು “ಇಲ್ಲ, ಇಲ್ಲೇ ಕಾಯ್ತಾ ಇರ್ತೀನಿ. ನೀನು ಹೋಗಿ ಕೊಟ್ಟು ಬಾ” ಎಂದು ಕಾರೊಳಗೇ ಕುಳಿತುಕೊಂಡೆ. ನಾನು ಅವಳನ್ನು ಬಿಟ್ಟು ಹೋಗುವುದಿಲ್ಲವೆಂದು ಅರಿವಾದೊಡನೆ, ಏನೋ ಸೌಜನ್ಯಕ್ಕಾಗಿ ಕರೆದಿದ್ದವಳು ಹೆಚ್ಚು ಒತ್ತಾಯಿಸದೆ “ಸರಿ ಹಾಗಾದ್ರೆ, ಬೇಗ ಬಂದು ಬಿಡ್ತೀನಿ” ಅನ್ನುತ್ತಾ ಮನೆಯೊಳಗೆ ನಡೆದಳು.
ಆಗ ಸಂಜೆ ಐದು ಗಂಟೆಯಿರಬಹುದೇನೋ… ಆ ಬೀದಿಯ ತುಂಬಾ ಹಳೆಯ ಮನೆಗಳೇ… ಸುತ್ತಲೂ ಕಣ್ಣಾಡಿಸಿದೆ… ಅರೇ! ಇವರ ಮನೆಯೆದುರೇ ನನ್ನ ಕನಸಿನ ಸಾಕಾರದಂತಿದ್ದ ಪಾಳು ಬಿದ್ದ ಮನೆ ಕಾಣಬೇಕೇ!!! ಕಾರಿನಿಂದ ತಕ್ಷಣ ಕೆಳಗಿಳಿದೆ.. “ಸ್ವಲ್ಪ ಬರ್ತೀನಿ” ಅಂತ ಚಾಲಕನಿಗೆ ಹೇಳಿ ಆ ಮನೆಯೆಡೆಗೆ ನಡೆದೆ.
ಕನಸಿನ ಲೋಕದಲ್ಲಿರುವಂತೆ ಚಿತ್ರದುರ್ಗದಲ್ಲಿದ್ದ ಅಜ್ಜಿಯ ಮನೆಯ ಮುಂದೆ ಎಂಬಂತೆ ನಿಂತಿದ್ದೆ! ಪಾಚಿಗಟ್ಟಿದ್ದ ಕಾಂಪೌಂಡು, ತುಕ್ಕು ಹಿಡಿದ ಗೇಟು, ಗೇಟಿನ ಮೇಲೆ ಕಮಾನಿಗೆ ಹಬ್ಬಿಸಿದ್ದ ಕೆಂಜಾಜಿಯ ಬಳ್ಳಿಯಿಂದ ಬಂದ ಸುವಾಸನೆ ನನ್ನನ್ನು ಸ್ವಾಗತಿಸಿತು. ಸುತ್ತಮುತ್ತ ಒಂದು ಸಲ ನೋಡಿದೆ. ಯಾರೂ ಕಾಣಲಿಲ್ಲ. ನಾನೇನೂ ಕಳ್ಳತನ ಮಾಡುತ್ತಿಲ್ಲವಲ್ಲ; ಧೈರ್ಯವಾಗಿ ಗೇಟನ್ನು ತೆರೆದೆ… ಅಷ್ಟೇ ಐವತ್ತು ವರ್ಷ ಹಿಂದಕ್ಕೆ ಒಮ್ಮೆಲೇ ಹೊರಟುಹೋಗಿದ್ದೆ…!!!
***
“ಪುಟ್ಟೀ ಈ ಬುಟ್ಟಿ ಹಿಡ್ಕೊಂಡಿರು. ನಾನು ಮೊಗ್ಗನ್ನ ಕಿತ್ತು ಕಿತ್ತು ಕೊಡ್ತೀನಿ. ಜೋಪಾನವಾಗಿ ಬುಟ್ಟೀಲಿ ಹಾಕ್ಕೋ. ಆಮೇಲೆ ಕೂತ್ಕೊಂಡು ಅದನ್ನ ಕಟ್ಟೋಣ…”. “ಅಜ್ಜಿ ಅಜ್ಜಿ ನಾನೂ ಮೊಗ್ಗು ಕಿತ್ತೀನಿ ಅಜ್ಜಿ” ನನ್ನ ಹಟ. “ಅರೆ, ನೀನಿನ್ನೂ ಪುಟ್ಟೋಳು. ಮೊಗ್ಗು ಕಿತ್ತಕ್ಕೆ ಹೋಗಿ ಬುಟ್ಟಿ ಅಲ್ಲಾಡಿಸ್ತಾ ಇದ್ರೆ ರೊಟ್ಟಿ ಶ್ಯಾಮನ ಕತೇಲಿ ಬುಟ್ಟಿಯಿಂದ ಎಲ್ಲಾ ರೊಟ್ಟೀನೂ ಬಿದ್ದು ಹೋದ್ವಲ್ಲಾ ಹಾಗಾಗತ್ತೆ ಅಷ್ಟೆ”.
“ಅದ್ಯಾವ ಕತೆ ಅಜ್ಜಿ? ನೀನು ಆ ಕತೆ ಹೇಳ್ತಾ ಬಿಡಿಸ್ತಿದ್ರೆ ಮಾತ್ರ ನಾನು ಬುಟ್ಟಿ ಹಿಡ್ಕೊಂಡಿರ್ತೀನಿ” ನನ್ನ ಕರಾರು. “ಸರಿ… ಒಂದೂರಲ್ಲಿ ರಾಮ, ಶ್ಯಾಮ ಅಂತ ಇಬ್ಬರು ಸ್ನೇಹಿತರು ಇದ್ದರು. ಒಂದ್ಸಲ ಏನಾಯ್ತಪ್ಪಾ ಅಂದ್ರೆ ಅವರಿಬ್ಬರೂ….” ಹೀಗೆ ಕತೆ ಮುಂದುವರಿಯುತ್ತಾ ಇತ್ತು, ಅಜ್ಜಿ ಮೊಗ್ಗು ಬಿಡಿಸುವುದು ಮುಗಿಯುವ ತನಕ. ʻಅದು ಹೇಗೆ ಅಜ್ಜಿ ಬಿಡಿಸಿ ಮುಗಿಸೋತನಕ ಕತೆ ಮುಗಿಯುತ್ತಿರಲಿಲ್ಲ!ʼ ಎನ್ನುವುದು ನನಗೆ ಇಂದೂ ಸೋಜಿಗ!!
ಒಂದೊಂದು ದಿನ ಒಂದೊಂದು ಕತೆ; ಇಷ್ಟಪಟ್ಟರೆ ಮತ್ತೆ ಅದೇ ಕತೆಗಳ ಪುನರಾವರ್ತನೆ. ಇದಾದ ಮೇಲೆ ಅಲ್ಲಿ ಕಾಣುತ್ತಿದೆಯಲ್ಲ ಅಂತಹ ಜಗಲಿ ಕಟ್ಟೆಯ ಮೇಲೆ ಹೂಬುಟ್ಟಿ, ದಾರ ಇಟ್ಟುಕೊಂಡು ಕಟ್ಟಲು ಕೂರಬೇಕು… “ಅಜ್ಜಿ ಹೂವನ್ಯಾಕೆ ಕಟ್ಬೇಕು? ಹಾಗೆ ದೇವರಿಗೆ ಹಾಕಿದ್ರೆ ಏನಾಗತ್ತೆ?”. “ಅಯ್ಯಯ್ಯೋ ಹೂವಿಗೆ ಕೋಪ ಬಂದ್ಬಿಡತ್ತೆ ಅಷ್ಟೆ. ʻನನ್ನ ಪಾಡಿಗೆ ನಾನು ಗಿಡದಲ್ಲಿ ನಗ್ತಾ ಇದ್ರೆ ನನ್ನನ್ನ ಕಿತ್ಕೊಂಡು ಬಂದು ಗುಡ್ಡೆ ಹಾಗೆ ಹಾಕಿದೀಯಾ. ಹೋಗ್ಹೋಗು ನಾಳೆಯಿಂದ ನಾನು ನಿಂಗೆ ಸಿಗೋದೇ ಇಲ್ಲʼ ಅಂತ ಅಂದ್ಬಿಡತ್ತೆ. ಹೂವನ್ನು ಕಟ್ಟಿ ದೇವರಿಗೆ ಹಾಕ್ಬೇಕು; ಇಲ್ಲಾ ಹೆಂಗಸರು ಮುಡ್ಕೋಬೇಕು. ಆಗ್ಲೇ ಅದಕ್ಕೆ ಸಂತೋಷ ಆಗೋದು. ಒಂದ್ಸಲ ಮಲ್ಲಿಗೆ, ಜಾಜಿ ಮಧ್ಯ ಜಗಳ ಬಂತಂತೆ ʻನಾನು ಹೆಚ್ಚು ನಾನು ಹೆಚ್ಚುʼ ಅಂತ. ಆಗ ಇಬ್ರೂ ಏನು ಮಾಡಿದ್ರಂತೆ ಬ್ರಹ್ಮನ ಹತ್ರ ಹೋದ್ರಂತೆ…..” ಹೊಸೆದುಕೊಳ್ಳುತ್ತಿತ್ತು ಎಂಥ ಒಳ್ಳೆಯ ಕಲ್ಪನೆ….
ಮನೆ ಬಾಗಿಲ ಕಡೆ ಕಣ್ಣು ಹೊರಳಿತು. ಬಾಗಿಲಲ್ಲಿ ತೋರಣಕ್ಕೆಂದು ಕಟ್ಟಿದ್ದ ಸೆಣಬಿನ ಹಗ್ಗ.. ಹೊಸಿಲ ಮೇಲೆ, ಮುಂದುಗಡೆ ಬಿಳಿಯ ಪೇಂಟಿನಲ್ಲಿ ಬರೆದ ಹಸೆ.. ಅದರ ಮುಂದೆ ಕುಳಿತೆ.. ಹಬ್ಬ ಬಂತೆಂದರೆ ಸಾಕು ಅಜ್ಜಿಗದೆಷ್ಟು ಸಂಭ್ರಮ! “ಮಾವಿನ ಸೊಪ್ಪು ಮರೀದೆ ತಾರೋ” ಹಿಂದಿನ ದಿನವೇ ಮಗನಿಗೆ ತಾಕೀತು. “ಹಾಗೇ ಒಂದು ಹಿಡಿ ಅಕ್ಕಿ ನೆನೆಸಿಡು, ಹಿಟ್ಟು ರುಬ್ಬಿ ರಂಗೋಲಿ ಎಳೀಬೇಕು” ಸೊಸೆಗೆ ಆದೇಶ.
ಒಂದೇ ಅಳತೆಯ ಮಾವಿನೆಲೆಗಳನ್ನು ಬಿಡಿಸಿಟ್ಟುಕೊಂಡು, ಹೆಂಚಿನ ಕಡ್ಡಿ ಸೀಳಿ, ತೋರಣ ಹೆಣೆದು, ಮುಂಬಾಗಿಲಿಗೆ ಕಟ್ಟಿ, ಹಿಟ್ಟಿನ ರಂಗೋಲಿಯೆಂದ ಮನೆಯ ಮುಂದೆ ಎಳೆಯುತ್ತಿದ್ದ ದೊಡ್ಡ ದೊಡ್ಡ ಹಸೆ…. ಒಂದೊಂದು ಹಬ್ಬಕ್ಕೆ ಒಂದೊಂದು ವಿಶೇಷವಾದ ಚಿತ್ತಾರ.
“ಅಜ್ಜಿ ತೋರಣಕ್ಕೆ ಮಾವಿನ ಸೊಪ್ಪೇ ಯಾಕೆ? ಮನೆ ಮುಂದೆ ರಂಗೋಲಿ ಯಾಕೆ ಬರೀಬೇಕು…?” ನನ್ನ ಕುತೂಹಲ. “ಮತ್ತೇ! ಬ್ರಹ್ಮ ಅದಕ್ಕೆ ವರ ಕೊಟ್ಟಿಲ್ವೇ. ಎಲ್ಲಾ ಶುಭ ಸಂದರ್ಭಗಳಲ್ಲೂ ನೀನು ತೋರಣವಾಗಿರ್ಬೇಕೂಂತ. ಮನೆ ಮುಂದೆ ರಂಗೋಲಿ ಹಾಕ್ದೇ ಹೋದ್ರೆ ದುಷ್ಟ ರಾಕ್ಷಸರೆಲ್ಲಾ ಮನೆ ಒಳಗೆ ಬಂದ್ಬಿಡೋಲ್ವೆ. ರಾವಣ ಮನೆ ಒಳಗೆ ಬರ್ಬಾರ್ದು ಅಂತ ಲಕ್ಷ್ಮಣಾನೇ ಮನೆ ಮುಂದೆ ಮೂರು ಗೆರೆ ಎಳೀಲಿಲ್ವೆ. ಅದನ್ನ ದಾಟಿದ್ದಕ್ಕೆ ತಾನೆ ರಾವಣ ಸೀತೇನ ಎತ್ಕೊಂಡು ಹೋಗಿದ್ದು…” ರಂಗೋಲಿ ಹಾಕಿ ಮುಗಿಯುವ ತನಕ ರಾಮಾಯಣದ ಕತೆ ಮುಂದುವರೀತಿತ್ತು…
ಹಾರುಹೊಡೆದ ಕಿಟಕಿಯಿಂದ ಒಳಗೆ ನೋಡಿದೆ. ಕಾಣಿಸಿದ್ದು ದೊಡ್ಡ ಪಡಸಾಲೆ; ಅಲ್ಲಿ ಕಟ್ಟಿದ್ದ ಉಯ್ಯಾಲೆ. ಮದ್ಯಾಹ್ನ ಊಟವಾದ ಮೇಲೆ ಉಯ್ಯಾಲೆಯ ಮೇಲೆ ಕುಳಿತು ತಾಂಬೂಲ ಮಡಿಚಿಕೊಡುತ್ತಿದ್ದ ಅಜ್ಜಿ, ಅದನ್ನು ತನ್ಮಯತೆಯಿಂದ ಆಸ್ವಾದಿಸುತ್ತಿದ್ದ ತಾತ ಕಣ್ಣ ಮುಂದೆ ಬಂದರು. “ಇವತ್ತು ನೀನು ಮಾಡಿದ ಅವರೆಕಾಳು ಹುಳಿ ಬ್ರಹ್ಮಾಂಡವಾಗಿತ್ತು. ಕಾಯಿ ಒಳ್ಳೇ ಸೊಗಡು. ಅದರ ಜೊತೆಗೆ ಕರಿದಿದ್ದ ಬಾಳಕ… ಆಹಾ…! ಏನು ಜೊತೆ ಒಂದಕ್ಕೊಂದಕ್ಕೆ”. “ಅಷ್ಟಲ್ಲದೆ ಮಾಗೀ ಕಾಲಕ್ಕೆ ತೊಗರಿ ಬೇಯಲ್ಲ ಅಂತ ಹೇಳ್ತಾರೆಯೆ. ಇನ್ನು ಮೂರು ತಿಂಗಳು ಅವರೆ ಬಿಟ್ರೆ ಇನ್ಯಾವ್ದೂ ರುಚಿಸಲ್ಲ”. “ಹಂಗಂದ್ರೇನಜ್ಜಿ.. ಈ ಮೂರು ತಿಂಗಳು ತೊಗರಿಬೇಳೆ ಬೇಯೋದೇ ಇಲ್ವ? ಯಾಕೆ?” ನನ್ನ ಇಂತಹ ಪ್ರಶ್ನೆಗಳಿಗೂ ಅಜ್ಜಿಯ ಹತ್ತಿರ ಏನೋ ಒಂದು ಕತೆಯಿರುತ್ತಿತ್ತು.
ಅಲ್ಲೇ ಉಯ್ಯಾಲೆಯ ಮೇಲೆ ನನ್ನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ತಟ್ಟುತ್ತಾ, ನಿದ್ರೆ ಬರುವ ತನಕ ಹೇಳುತ್ತಿದ್ದ ಯಾವುದೋ ಪುರಾಣದ ಕತೆ, ಪಂಚತಂತ್ರದ ಕತೆ, ಬೇತಾಳನ ಕತೆ, ನೀತಿ ಚಿಂತಾಮಣಿಯ ಕತೆ ಅದೆಷ್ಟು ಸೊಗಸಾದ ಕತೆಗಳು… ಅದನ್ನು ಹೇಳುವಾಗ ಅಜ್ಜಿಗಿರುತ್ತಿದ್ದ ತನ್ಮಯತೆ ಕಣ್ಣ ಮುಂದೆಯೇ ಕತೆ ನಡೆಯುತ್ತಿದೆಯೇನೋ ಎಂಬಂತೆ ತೋರುತ್ತಿತ್ತು.
ಇನ್ನು ಊಟ ಮಾಡುವ ಸಮಯ. ಅಜ್ಜಿಯ ಕತೆಯಿಲ್ಲದಿದ್ದರೆ ತುತ್ತು ಗಂಟಲೊಳಗೆ ಇಳಿಯುತ್ತಲೇ ಇರಲಿಲ್ಲವಲ್ಲ! ಕಿಟಕಿಯ ಪಕ್ಕ ಕೂರಿಸಿಕೊಂಡು ತೋಟದಲ್ಲಿನ ಗಿಡ ಮರಗಳನ್ನು, ಹಕ್ಕಿಗಳನ್ನು, ಅಳಿಲುಗಳನ್ನು ತೋರುತ್ತಾ ಎಷ್ಟೊಂದು ಕತೆ ಸೃಷ್ಠಿಯಾಗುತ್ತಿತ್ತು.
ಮಹಡಿಯ ಮೇಲೆ ಹೋದರಂತೂ ಬಿಸಿಲುಮಚ್ಚಿನಿಂದ ಕಾಣುತ್ತಿದ್ದ ದುರ್ಗದ ಬೆಟ್ಟ, ಅದರ ಹಿನ್ನೆಲೆಯಲ್ಲಿ ತೇಲುತ್ತಿದ್ದ ಮೋಡಗಳು, ಎಲ್ಲವೂ ಜೀವಂತವಾಗಿಬಿಡುತ್ತಿದ್ದವು ಅಜ್ಜಿಯ ಬಾಯಲ್ಲಿ. ದುರ್ಗವನ್ನಾಳಿದ ಅದೆಷ್ಟು ಅರಸರ ಕತೆ ಗೊತ್ತಿತ್ತು ಅಜ್ಜಿಗೆ.. ಇನ್ನು ರಾತ್ರಿಯ ಕೈತುತ್ತಿನ ಸಂಭ್ರಮವದೆಷ್ಟು! ಎಲ್ಲ ಮೊಮ್ಮಕ್ಕಳೂ ಬೇಸಿಗೆ ರಜೆಯಲ್ಲಿ ಬಂದಾಗ ಎಂತ ಸಡಗರ. ಚಂದ್ರಲೋಕಕ್ಕೇ ಹೋಗಿದ್ದಂತ ಅನುಭವ.
ಚಂದ್ರನ ಶುಭ್ರವಾದ ಬೆಳದಿಂಗಳ ಬೆಳಕಲ್ಲಿ ಯಕ್ಷರ, ಪುರಾಣದ, ಜಾನಪದ, ಐಂದ್ರಜಾಲಿಕ… ಕತೆಗಳು ಅದೆಂಥ ಅದ್ಭುತ ಲೋಕ ಸೃಷ್ಠಿಯಾಗುತ್ತಿತ್ತು!! ನಮ್ಮ ಮನೆಯ ಈ ಕೈತುತ್ತಿನ ವೈಭವದಲ್ಲಿ ಬೀದಿಯ ಮಕ್ಕಳೆಲ್ಲಾ ಪಾಲ್ಗೊಳ್ಳುತ್ತಿದ್ದರು. ಯಾವುದೋ ಮಾಯಾಲೋಕದಲ್ಲಿ ಮುಳುಗಿ, ಊಟ ಮುಗಿಯುವ ವೇಳೆಗೆ ಒಬ್ಬಿಬ್ಬರು ಸಣ್ಣ ಮಕ್ಕಳು ಅಲ್ಲೇ ಮಲಗಿರುತ್ತಿದ್ದರು. ನಿದ್ರೆ ಮಾಡುತ್ತಿದ್ದ ಅವರ ಮೂತಿಯನ್ನು ಮಲಗಿದ್ದ ಹಾಗೆಯೇ ಒದ್ದೆಕೈಯಿಂದ ಒರೆಸಿ ಒಳಗೆ ಕರೆದುಕೊಂಡು ಹೋಗಿ ಮಲಗಿಸಬೇಕಿತ್ತು…
ಹಾಗೆಯೇ ಮನೆಯ ಪಕ್ಕದಿಂದ ಬಳಸಿಕೊಂಡು ಹೋಗಿ ಹಿತ್ತಲ ಕಡೆಗೆ ಬಂದೆ. ಒಗೆಯುವ ಬಂಡೆ, ಪಕ್ಕದಲ್ಲೇ ನೀರಿನ ತೊಟ್ಟಿ, ಬಟ್ಟೆ ಒಣಗಿಸಲು ಕಟ್ಟಿದ್ದ ತಂತಿಗಳು, ಬಿಸಾಡಿದ್ದ ಪಾರ್ಲೆ ಬಿಸ್ಕತ್ತಿನ ಟಿನ್ನಿನ ಡಬ್ಬಗಳು… ಇಂಥದೇ ಡಬ್ಬಿಯಲ್ಲಿ ಅಜ್ಜಿ ಒಂದು ಸಲ ಹುರಿಗಾಳು ಮಾಡಿ ತುಂಬಿಸಿಟ್ಟಿದ್ದರು. ನನಗೋ ಅದರ ರುಚಿ ಬಲು ಹಿಡಿಸಿತ್ತು. ಇನ್ನೂ ಬೇಕು..
ಇನ್ನೂ ಬೇಕೂಂತ ಹಟ ಮಾಡ್ತಾ ಇದ್ದಾಗ ಅಜ್ಜಿ ಹೇಳಿದ್ದ ಕಾಗಕ್ಕ ಗುಬ್ಬಕ್ಕನ ಕತೆ ನೆನಸಿಕೊಂಡು ಪಕ್ಕನೆ ನಗು ಬಂತು. ದಿನವೂ ತನ್ನ ಮತ್ತು ತಾತನ ಬಟ್ಟೆಯನ್ನು ತಾನೇ ಒಗೆಯುತ್ತಿದ್ದ ಅಜ್ಜಿ ಬಲು ಶುಭ್ರ. ತಾತನಿಗೆ ಬಟ್ಟೆಗಳು ಬೆಳ್ಳಗೆ ಗರಿಗರಿಯಾಗಿ ಇರಬೇಕು. ಅವರು ಸದಾ ತೊಡುತ್ತಿದ್ದದ್ದು ಬಿಳಿಯ ಅಂಗಿ, ಒಳ್ಳೆಯ ಮಲ್ ಪಂಚೆ. ಮೇಲೊಂದು ಕೋಟು ಹಾಕಿಕೊಂಡು ತಲೆಗೆ ರುಮಾಲನ್ನು ಇಟ್ಟುಕೊಂಡು ಕೈಯಲ್ಲೊಂದು ಕೊಡೆ ಹಿಡಿದು ಹೊರಟರೆಂದರೆ ಅವರ ಠೀವಿಯೇ ಬೇರೆ..
“ನಿಮ್ಮ ತಾತಂಗೆ ಬಟ್ಟೆಗಳು ಸದಾ ಕೊಕ್ಕರೆಯ ಗರಿಯ ಹಾಗೆ ಇರಬೇಕು” ಆ ಮಾತನ್ನು ಹೇಳುವಾಗ ಅಜ್ಜಿಗೇನೋ ಗರ್ವ; ತಾನು ಅದನ್ನು ಹಾಗೆ ಇಟ್ಟಿರುತ್ತೇನೆಂಬ ಒಂದು ಅಭಿಮಾನದ ಹಮ್ಮು. ಇಂದು ನಮಗೆ ಎಷ್ಟು ಸಣ್ಣ ವಿಚಾರವೆಂದು ಅನ್ನಿಸುವ ಇಂತ ವಿಷಯಗಳು ಅವಳಿಗೆ ಜೀವನದ ಸಾರ್ಥಕತೆಯನ್ನೇ ತಂದುಕೊಡುತ್ತಿದ್ದವಲ್ಲ!!
ಹಿಂದೆ ಕಾಣಿಸುತ್ತಿರುವ ಕಿಟಕಿ ಅಡುಗೆಮನೆಯದ್ದೇ ಇರಬೇಕು. ಹಣಿಕಿ ನೋಡಿದೆ. ಹೌದು.. ಅಡುಗೆಮನೆಯೇ… ಹೂಡಿದ್ದ ಮಣ್ಣಿನ ಒಲೆ, ಕಬ್ಬಿಣದ ಇಜ್ಜಿಲ ಒಲೆ, ಕರಿ ಹಿಡಿದಿದ್ದ, ಜೇಡ ಕಟ್ಟಿಕೊಂಡಿದ್ದ ಹೊಗೆ ಗೂಡು, ಡಬ್ಬ, ಸಾಮಾನುಗಳಿಡುತ್ತಿದ್ದ ಮಸಿಯಾದ ಮಾಡು, ಮಡಿ ಒಣಗಿ ಹಾಕಿಕೊಳ್ಳುತ್ತಿದ್ದಿರಬಹುದಾದ ಮೇಲೆ ಕಟ್ಟಿದ್ದ ಕೋಲು, ಹಳೆಯ ಕಾಲದ ದೊಡ್ಡ ರುಬ್ಬುವ ಕಲ್ಲು, ಮೂಲೆಯಲ್ಲಿದ್ದ ಕಲ್ಲು ಮರಿಗೆಗಳು, ಉಪ್ಪಿನಕಾಯಿಯ ಜಾಡಿಗಳು, ಒನಕೆ, ಹಾರೆಕೋಲು… ಒಂದೊಂದರ ಜೊತೆಗೂ ಅಜ್ಜಿ ಏನೇನು ಮಾಡುತ್ತಿದ್ದರೆಂಬ ಚಿತ್ರ ಕಣ್ಣ ಮುಂದೆ ಬಂತು.
ಹಬ್ಬಹರಿದಿನಗಳಲ್ಲಿ ಅವೆಲ್ಲದರ ಜೊತೆಗೂ ಅವಳು ಆಟವಾಡುತ್ತಿದ್ದಾಳೇನೋ ಅನ್ನಿಸುತ್ತಿತ್ತು. ಮಾಯಾ ಬಜಾರಿನಂತೆ ಊಟಕ್ಕೆ ಕೂತಾಗ, ರುಚಿರುಚಿಯಾದ ಪಾಯಸ, ಚಿತ್ರಾನ್ನ, ಆಂಬೊಡೆ, ಹೋಳಿಗೆ, ಕೋಸಂಬರಿ… ಇನ್ನೂ ಏನೇನೋ ಎಲೆಯ ಮೇಲೆ ಪ್ರತ್ಯಕ್ಷವಾಗಿಬಿಡುತ್ತಿದ್ದವು. ಅದನ್ನು ಬಡಿಸುತ್ತಿದ್ದ ಕ್ರಮವೇ ಬೇರೆ.. ಪಾಯಸ ಇಲ್ಲೇ ಇರಬೇಕು, ಕೋಸಂಬರಿಯ, ಪಲ್ಯದ ಜಾಗ ಇದು, ಚಿತ್ರಾನ್ನ ಇಲ್ಲೇ ಬಡಿಸಬೇಕು… ಒಂದೊಂದಕ್ಕೆ ಒಂದೊಂದು ನಿಗದಿಯಾದ ಜಾಗ. ಮೊದಲು ಪಾಯಸವನ್ನೇ ಬಡಿಸಬೇಕು. ಅನ್ನದ ಮೇಲೆ ತೊವ್ವೆ – ಅದರ ಮೇಲೆ ತುಪ್ಪ ಬಿದ್ದು ತಾತ ಚಿತ್ರಾವತಿ ಇಟ್ಟು ಊಟ ಶುರುಮಾಡುವ ತನಕ ಯಾರೂ ಎಲೆಗೆ ಕೈಹಾಕುವಂತಿರಲಿಲ್ಲ..
ಒಂದೊಂದು ಹಬ್ಬಕ್ಕೂ ಬೇರೆ ಬೇರೆಯದೇ ಸಂಭ್ರಮ, ಪೂಜೆಯ ಕ್ರಮ. ಮಾಡುತ್ತಿದ್ದ ಅಡುಗೆ, ಭಕ್ಷ್ಯಗಳು, ಆಚರಣೆಯ ವಿಧಾನ ಎಲ್ಲವೂ ಬೇರೆಬೇರೆಯದೇ. ʻಅದು ಏಕೆ ಬೇರೆ ಬೇರೆʼ ಎನ್ನುವುದಕ್ಕೆ ಒಂದೊಂದು ಕತೆ. ಮಕ್ಕಳ ತಲೆಗೆ ಸ್ನಾನ ಮಾಡಿಸುವಾಗ ಎಣ್ಣೆ ಹಚ್ಚುವುದಕ್ಕೇ ಒಂದು ಶಾಸ್ತ್ರ. ನೀರು ಹಾಕುವುದಕ್ಕೇ ಒಂದು ಕ್ರಮ, ಕಡೆಯಲ್ಲಿ ಹೇಳುತ್ತಿದ್ದ ರಕ್ಷೆ, ಆಶೀರ್ವಾದ, ಸ್ನಾನವಾಗಿ, ತಲೆ ಮೈಯೆಲ್ಲಾ ಒರಸಿದ ಮೇಲೆ ಹಂಡೆಯ ಕರಿಯನ್ನು ಹಣೆಗೆ ಹಚ್ಚಿ ಒಲೆಗೆ ಕೈಮುಗಿದು ʻಏಕೆ ಹೀಗೆಲ್ಲಾ ಮಾಡಬೇಕುʼ ಎನ್ನುವುದಕ್ಕೆ ಒಂದು ಸೊಗಸಾದ ಕತೆ… ಅಬ್ಭಾ! ಅದೆಷ್ಟು ಲಕ್ಷ ಕತೆಗಳಿದ್ದವೋ ಅಜ್ಜಿಯ ಮೆದುಳ ಕಂಪ್ಯೂಟರಿನಲ್ಲಿ…!!
ಇನ್ನೂ ಅಲ್ಲಿ ಏನೇನನ್ನು ಉತ್ಕತನ ಮಾಡುತ್ತಿದ್ದೆನೋ… ಅಷ್ಟರಲ್ಲಿ ಬೀದಿಯಲ್ಲಿ ಗೆಳತಿಯ ದನಿ ಕೇಳಿಸಿತು. ಅವಳು ನನ್ನನ್ನೇ ಹುಡುಕಿಕೊಂಡು ಮನೆಯ ಹಿತ್ತಿಲಿನ ಕಡೆಗೆ ಬಂದಳು. “ಇಲ್ಲೇನು ಮಾಡ್ತಾ ಇದೀಯ?!” ಅವಳ ಮುಖದಲ್ಲಿ ಗಾಭರಿ, ಆತಂಕ, ಜೊತೆಯಲ್ಲಿ ಪ್ರಶ್ನೆ. “ಏನಿಲ್ಲ, ನಡಿ ಹೋಗೋಣ” ಎನ್ನುತ್ತಾ ಅವಳನ್ನು ಹಿಂಬಾಲಿಸಿದೆ. ಕಾರಿನಲ್ಲಿ ಕುಳಿತ ಮೇಲೂ ಅವಳ ಮುಖದ ಭಾವ ಬದಲಾಗಿರಲಿಲ್ಲ.
“ನಿನಗೆ ಗೊತ್ತಾ ಆ ಮನೆಯಲ್ಲಿದ್ದವರು?” ಕೇಳಿದಳು “ಯಾರಿದ್ದರು?” ನಾನೆಂದೆ. “ಅಜ್ಜಿಯ ಸ್ನೇಹಿತೆ ಕಮಲಮ್ಮಾಂತ… ಆಕೆ…” ಗೆಳತಿ ಇನ್ನೂ ಹೇಳುತ್ತಿದ್ದಳು. ಅವಳು ಮಾತು ಮುಂದುವರಿಸುವುದಕ್ಕೆ ಬಿಡದೆ ನಾನು ಹೇಳುತ್ತಾ ಹೋದೆ. “ಆಕೆ ಲಕ್ಷಣವಾಗಿದ್ದರು. ಶುಭ್ರವಾದ ಸೀರೆಯುಟ್ಟು ದಿನವೂ ಮಲ್ಲಿಗೆಯನ್ನೋ, ಜಾಜಿಯನ್ನೋ ಮುಡಿಯುತ್ತಿದ್ದರು. ಸುಸಂಸ್ಕೃತ ಹೆಂಗಸು. ಸೊಗಸಾಗಿ ಅಡುಗೆ ಮಾಡುತ್ತಿದ್ದರು. ಹಬ್ಬ, ಹರಿದಿನ ಅಂದರೆ ಅವರ ಮನೆಯಲ್ಲಿ ಸಂಭ್ರಮವೋ ಸಂಭ್ರಮ.
ರಜಾ ದಿನಗಳಲ್ಲಿ ಮೊಮ್ಮಕ್ಕಳು ಸೇರಿಬಿಟ್ಟರೆ ಆಕೆಗೆ ಇನ್ನು ನಾಲ್ಕು ಕೈ, ಕಾಲು. ಆಗ ನೀವೂ ಎಲ್ಲ ಅವರ ಮನೆಯಲ್ಲಿ ಸೇರಿಕೊಂಡು ಸಾಕಷ್ಟು ದಾಂಧಲೆ ಮಾಡುತ್ತಿದ್ದಿರಿ. ಎಲ್ಲರನ್ನೂ ಕೂರಿಸಿಕೊಂಡು ಕತೆ ಹೇಳುತ್ತಿದ್ದರು. ಮಾತಿಗೊಂದು ಕತೆ, ಗಾದೆ. ಮಕ್ಕಳಿಗೆ ಅಲಂಕಾರ ಮಾಡೋದು, ಮೊಗ್ಗಿನ ಜಡೆ ಹೆಣೆಯೋದು, ಕುರುಕುಲು ತಿಂಡಿ ಕೊಡೋದು ಇವೆಲ್ಲಾ ಅವರಿಗೆ ಬಲು ಪ್ರೀತಿ. ರಾತ್ರಿ ಹೊತ್ತು ಚಂದ್ರನ ಬೆಳಕಲ್ಲಿ ಚಾಮುಂಡಿ ಬೆಟ್ಟ ತೋರಿಸುತ್ತಾ, ಕತೆ ಹೇಳುತ್ತಾ ಕೈತುತ್ತು ಹಾಕುತ್ತಿದ್ದರು.
ತಮ್ಮ ಮನೆಯ ಮಕ್ಕಳು, ಬೇರೆ ಮನೆಯ ಮಕ್ಕಳು ಎನ್ನುವ ಬೇಧವಿರಲಿಲ್ಲ. ಈಗ ಒಂದು ಐದಾರು ವರ್ಷಗಳ ಹಿಂದೆ ಆ ಮನೆಯ ಹಿರಿಯರು ಹೋಗಿಬಿಟ್ಟರು. ಮೊಮ್ಮಕ್ಕಳೆಲ್ಲಾ ಫಾರಿನ್ನಿನಲ್ಲಿ ಸೆಟಲ್ ಆಗಿದ್ದಾರೆ. ಆ ಅಜ್ಜಿಯ ಮಕ್ಕಳೂ ತಮ್ಮ ಮಕ್ಕಳ ಜೊತೆಗೆ ಹೋಗಿ ಸೆಟಲ್ ಆಗಿದ್ದಾರೆ…” ನಾನೊಂದು ಕತೆ ಹೇಳುತ್ತಾ ಹೋದೆ. ಗೆಳತಿ ಬಿಟ್ಟ ಕಣ್ಣು, ಬಿಟ್ಟ ಬಾಯಿ ಬಿಟ್ಟುಕೊಂಡು ಕೇಳಿದಳು “ನಿನಗವರು ನೆಂಟರಾ?” “ಇಲ್ಲವಲ್ಲಾ, ನಾನು ಇವತ್ತೇ ಆ ಮನೆಯನ್ನು ನೋಡಿದ್ದು”. ನನ್ನ ಉತ್ತರದಿಂದ ಅವಳಿಗೆ ಸಮಾಧಾನವಾಗಲಿಲ್ಲ “ಮತ್ತೆ?!” ಅವಳ ಕಣ್ಣು ನೂರು ಪ್ರಶ್ನೆಯನ್ನು ಕೇಳಿತು.
“ಇದು ನನಗೆ ಆ ಮನೆ ಹೇಳಿದ ಕತೆ. ಇಂಥ ಎಷ್ಟು ಮನೆಗಳು ಇದ್ದಾವೆ ಈಗ ಎಲ್ಲ ಊರಿನಲ್ಲೂ. ಎಲ್ಲ ಮನೆಗಳ ಕತೆಯೂ ಒಂದೇ. ಒಂದು ತಲೆಮಾರಿನ ಸಂಸ್ಕೃತಿ ನಾಶವಾಗಿ ಹೋಗಿದೆ. ಆ ಮನೆಗಳೆಲ್ಲಾ ಪಾಳುಬಿದ್ದು ಹೋಗಿವೆ. ಅವರ ವಂಶಸ್ಥರಿಗೆ ಆ ಮನೆಯ ಬಗ್ಗೆ, ನೆಲದ ಬಗ್ಗೆ ಯಾವುದೇ ಅಂಟಿಲ್ಲ. ಒಂದು ದಿನ ಯಾವುದೋ ಒಂದು ಒಳ್ಳೆಯ ಬೆಲೆಗೆ ಯಾರಿಗಾದರೂ ಮಾರುತ್ತಾರೆ.
ಅವರು ಆ ಮನೆಯನ್ನು ಕೆಡವಿ ಅಲ್ಲೊಂದು ಅಪಾರ್ಟ್‌ಮೆಂಟನ್ನೋ, ಮಾಲನ್ನೋ ಕಟ್ಟಿ ತಮ್ಮ ಲಾಭವನ್ನು ಮಾಡಿಕೊಳ್ಳುತ್ತಾರೆ. ಇದೂ ಒಂದು ರೀತಿಯ ಚಕ್ರಾಧಿಪತ್ಯದ ಅಂತ್ಯದಂತೆ! ಆ ತಲೆಮಾರಿನವರು ಎಪ್ಪತ್ತು, ಎಂಭತ್ತು ವರ್ಷಗಳ ಕಾಲ ಅಲ್ಲಿ ಒಂದು ರೀತಿಯಲ್ಲಿ ರಾಜ್ಯಭಾರವನ್ನೇ ಮಾಡಿರುತ್ತಾರೆ. ಅವರ ಎಷ್ಟೊಂದು ಕನಸುಗಳು ಆ ಮನೆಯಲ್ಲಿ ಸಾಕಾರ ಪಡೆದಿರುತ್ತವೆ. ಆ ಮನೆಯ ಗೋಡೆಗಳು ಅದೆಷ್ಟು ನಗುವನ್ನು ಕೇಳಿಸಿಕೊಂಡಿರುತ್ತವೆ, ಹಾಗೇನೇ ಅದೆಷ್ಟು ನಿಟ್ಟುಸಿರುಗಳೋ…
ಎಷ್ಟು ಮಕ್ಕಳ ನಗು, ಆಟ, ಪಾಟ ಆ ಮನೆಯ ನೆಲದಲ್ಲಿ… ಹಾಗೇನೇ ರೋಧನಗಳೂ ಇರಬಹುದೇನೋ… ಅಲ್ಲಿರುವ ಒಂದೊಂದು ವಸ್ತುವೂ ಒಂದೊಂದು ಕತೆಯನ್ನು ಹೇಳಬಹುದೇನೋ.. ಕೇಳಲು ಈಗ ಎಲ್ಲರ ಕಿವಿಯೂ ಕಿವುಡಾಗಿದೆ. ಇಂದಿನ ಮಕ್ಕಳಿಗೆ ಅಜ್ಜಿಯ ಕತೆ ಬೇಕಿಲ್ಲ; ಕಾರ್ಟೂನ್ ನೆಟ್‌ವರ್ಕ್, ಪೋಗೋಗಳಿದ್ದರೆ ಸಾಕು. ಅಸಲಿಗೆ ಅಜ್ಜಿಯೇ ಬೇಕಿಲ್ಲ. ಅಜ್ಜಿಯಿದ್ದರೆ ಮನೆಯಲ್ಲಿ ಕಿರಿಕಿರಿ ಎನ್ನುವ ಮೊಮ್ಮಕ್ಕಳು ಈಗ” ಇನ್ನೂ ಏನೇನು ಹೇಳುತ್ತಿದ್ದೆನೋ ಅಷ್ಟರಲ್ಲಿ ನಮ್ಮ ಮನೆ ಬಂದು ಇಳಿದುಕೊಂಡೆ. ಗೆಳತಿಯೂ ಒಂದು ರೀತಿಯ ಮಾತನಾಡದ ಸ್ಥಿತಿಯಲ್ಲಿದ್ದಳು.
ಮನೆಯೊಳಗೆ ಬಂದರೂ ಇನ್ನೂ ಸಂಜೆಯ ಗುಂಗು ಇಳಿದಿರಲಿಲ್ಲ. ಕತ್ತಲಾಗಿದ್ದರೂ ಮನೆಯೊಳಗೆ ದೀಪವನ್ನೂ ಹಾಕದೆ ಮಗಳು ಟೀವಿಯ ಧಾರಾವಾಹಿಯಲ್ಲಿ ಐಕ್ಯಳಾಗಿ ಹೋಗಿದ್ದಳು. ದೀಪ ಹಾಕಿದ ತಕ್ಷಣ ಅಜ್ಜಿ ಹೇಳುತ್ತಿದ್ದ ಮಾತು ಜ್ಞಾಪಕಕ್ಕೆ ಬಂತು. “ಮೂರು ಸಂಜೆ ಹೊತ್ನಲ್ಲಿ ಮನೇಲಿ ದೀಪ ಹಚ್ಚಿ ದೀಪಂಜ್ಯೋತಿ ಪರಂಜ್ಯೋತಿ ಹೇಳಿಕೊಳ್ಳಬೇಕು. ಇಲ್ಲದಿದ್ದರೆ ಲಕ್ಷ್ಮಿ ಮನೆಯೊಳಗೆ ಬರುವುದೇ ಇಲ್ಲವಂತೆ”.
ಈ ಮಾತನ್ನು ನನ್ನ ಮಗಳ ಹತ್ತಿರ ಹೇಳಿದರೆ ನಿರ್ಭಾವುಕಳಾಗಿ ನನ್ನನ್ನು ನೋಡಬಹುದೇನೋ!! ಕೈಕಾಲು ತೊಳೆದು, ದೇವರ ಮುಂದೆ ದೀಪವಿಟ್ಟು ಬಂದವಳಿಗೆ ಟೀವಿಯನ್ನು ನೋಡುವ ಮನಸ್ಸಾಗದೆ, ಏನಾದರೂ ಓದೋಣವೆಂದು ಪುಸ್ತಕದ ಕಪಾಟಿನೆಡೆಗೆ ಬಂದಾಗ ನನ್ನ ನೋಡಿ ನಕ್ಕಿದ್ದು ಅನುಪಮಾ ನಿರಂಜನರ ʻದಿನಕ್ಕೊಂದು ಕತೆʼಯ ಹನ್ನೆರಡು ಸಂಪುಟಗಳು. ಮೊಮ್ಮಕ್ಕಳಿಗಾಗೆ ಆಕೆ ಮಾಸಕ್ಕೊಂದು ಪುಸ್ತಕದಂತೆ ಬರೆದ ಕತೆಗಳು. ನನ್ನ ದೃಷ್ಟಿಯಲ್ಲಿ ಈ ಶತಮಾನದ ಶ್ರೇಷ್ಠ ಕೃತಿಗಳಲ್ಲಿ ಒಂದು. ಮನ ಭಾವುಕವಾಗಿ ಕಣ್ಣುಗಳು ತೇವಗೊಂಡವು. ʻಇನ್ನೆಲ್ಲಿಯ ಅನುಪಮಾ… ಇನ್ನೆಲ್ಲಿಯ ಅಜ್ಜಿ… ಇನ್ನೆಲ್ಲಿಯ ಕತೆ…!!ʼ ಎಂದುಕೊಳ್ಳುತ್ತಾ ʻಚೈತ್ರʼ ಸಂಪುಟವನ್ನು ಕೈಗೆತ್ತಿಕೊಂಡೆ.






0 Comments