ರಮೇಶ ಅರೋಲಿಯವರ ಗಜಲ್ ಗಳು

ರಮೇಶ ಅರೋಲಿ

1.
ನಿದ್ರಾನಡಿಗೆಯಲ್ಲೂ ನನ್ನ ಪಾದಗಳುನಿನ್ನೆಡೆಗೆ ನಡೆದಿವೆ ಮತ್ತೆ ಏನಿರಬಹುದು ಗುಟ್ಟು!

ಎಚ್ಚರದ ಮಾತಿನಲ್ಲೂ ನಿನ್ನ ಹೆಸರು ತೊದಲಿದೆ ನಾಲಗೆ ಏನಿರಬಹುದು ಗುಟ್ಟು!

ಕಾಯುತ್ತೇನೆ ಅಂದಿದ್ದರೆ ಸಾಯುವ ವರೆಗೆ ಹಾಕಬಹುದಿತ್ತು ಹೆಜ್ಜೆ ತುಸು  ಹಿಂದೆ ಮುಂದೆ

ನೀನು ಬಳಿ ಸುಳಿದಾಗಲೆಲ್ಲ ನಾನು ಅಲುಗದ ನಕ್ಷತ್ರ  ಏನಿರಬಹುದು ಗುಟ್ಟು!

ತೆರೆದ ಹೊತ್ತಿಗೆ ಬೆನ್ನುಡಿ ಓದಿ ಆಕಾಶಕ್ಕೆ ಪಿಸುನುಡಿದೆ ನಾನು ನಿನಗೆ ಏನೂ ಅಲ್ಲವೆಂದು

ಪರಿವಿಡಿಯಲ್ಲಿ ಗೋಗರೆದ ಉಯಿಲು ನಿನ್ನ ತುಟಿ ಕಟಕಟೆ ಹತ್ತಲಿಲ್ಲ ಏನಿರಬಹುದು ಗುಟ್ಟು!

ಹುಚ್ಚಿ, ಕವಿಯೊಬ್ಬನ ಪ್ರೇಮಕೆ ಸಿಲುಕಿದವಳಿಗೆ ಸಾವಿನ ಮಾತಾದರು ಎಲ್ಲಿಯದು?

“ಅರೋಲಿ” ಒಲವೊಂದು ಮುಗಿದ ಪುಟ ಅಂದವರೇ ಬರೆದರೆಷ್ಟೋ ಕವಿತೆ ಏನಿರಬಹುದು ಗುಟ್ಟು!

2.

ಮಾತು ಕೊಡುವಂತ ಮಾತು ಆಗಿದ್ದಿಲ್ಲ ಎಂದೂ ಅದೆಷ್ಟು ಮಾತು ಕೊಟ್ಟೆ ಆ ಹೊತ್ತಿಗೆ,
ಮಾತು ಬಿಡುವಂತ ಮಾತೂ ಆಗಿದ್ದಿಲ್ಲ ಇಂದು ಅದ್ಯಾಕೆ ಮಾತು ಬಿಟ್ಟೆ ಈ ಸರಿ ಹೊತ್ತಿಗೆ!

ಯಾರು ಕರೆಯರು ದಣಿದ ಹಕ್ಕಿಯನು ಕೈ ಬೀಸಿ, ಸಾಲುಗಟ್ಟಲು ಟೊಂಗೆಯ ಮೇಲೆ,
ಸುಳಿದ ಗಾಳಿಯ ನೆಪಕೆ ರೆಕ್ಕೆ ಸಡಲಿಸಿದವಳೇ ಸುಳಿವಿಲ್ಲ ಅದ್ಯಾಕೆ ಈ ಸರಿ ಹೊತ್ತಿಗೆ!

ಸರಿಯುವ ನೆರಳು ನಿನ್ನದಲ್ಲ ನನ್ನದೂ ಅಲ್ಲ, ಬೆಳಕಿನ ಹುಳಗಳು ರೆಕ್ಕೆ ಕಳಚುವ ಹೊತ್ತಿಗೆ,
ಬಂದು ಹೋಗುವ ಸೂರ್ಯ ಚಂದ್ರರ ಎದುರು ಇಲ್ಲೇ ಇದ್ದು ಬಿಡುವ ಮಾತ್ಯಾಕೆ ಈ ಹೊತ್ತಿಗೆ!

ತೊರೆಯಬಹುದಿತ್ತು ಮನೆ, ಓಣಿ ಅಗಸಿ ಊರದಾರಿ ಅರಿತಿದ್ದರೆ ಜನುಮ ರಹಸ್ಯ,
ಹನಿಗಳ ಋಣ ಬೀಜಕ್ಕಿದ್ದರೂ ಕಿವಿಗೊಡಲಿಲ್ಲ ಮೋಡ ಬೇರಿನ ಕರೆಗೆ ಅದ್ಯಾಕೆ ಈ ಹೊತ್ತಿಗೆ!

ಯಾರಿಗಿದೆ ಹೇಳು ಪುರುಸೊತ್ತು ಇಲ್ಲಿ ಜಾರುವ ತಾರೆಗಳ ಎಣಿಸುವ ದರ್ದು,
‘ಅರೋಲಿ’ ಆಗಸ ಒಂದು ಕವುದಿಯೆಂದರಿತೂ ಸರಿಸಿ ನೋಡುವ ಬಯಕೆ ಅದ್ಯಾಕೆ ಈ ಹೊತ್ತಿಗೆ!

3

ನನ್ನ ನೋಟದಿಂದ ನೀನೆಲ್ಲಿ ತೊರೆದು ಬಿಡುವಿಯೋ ಎಂದು ರೆಪ್ಪೆ ಕಾವಲಿಗಿಟ್ಟಿದ್ದೆ ಸಖ
ಕದಲಬಹುದೆಂದು ನಿನ್ನ ನಡಿಗೆ ಇನ್ನಾರದೋ ದನಿಗೆ, ಕಿವಿ ತಮಟೆ ಕಾವಲಿಗಿಟ್ಟಿದ್ದೆ ಸಖ!

ಶವದ ಮೇಲಿದ್ದರೇನು ಮೂಸದವರು ಯಾರಿಲ್ಲಿ ಘಮಗುಡುವ ಮಲ್ಲಿಗೆಯನು
ಉಚ್ಛಾಸ-  ನಿಶ್ವಾಸಕೆಲ್ಲಿ ಉನ್ಮತ್ತನಾಗುವಿಯೋ ಎಂದು ಕರವಸ್ತ್ರ ಕಾವಲಿಗಿಟ್ಟಿದ್ದೆ ಸಖ!

ತುಟಿ ತುದಿಗಳಲಿ ಸಿಲುಕಿ ಅದೆಷ್ಟು ಮಾತು ಹಾಳಾಗಲಿಲ್ಲ ಈ ನಿರ್ಜನ ಮರದ ಕೆಳಗೆ,
ಬಿಸಿ ಚುಂಬನ ಕೆಲ್ಲಿ ನಶಿಸಿ ಬಿಡುವೆಯೋ ಎಂದು ಕೊನೆಯ ಮುತ್ತುಗಳ ಕಾವಲಿಗಿಟ್ಟಿದ್ದೆ ಸಖ!

ಬೇನಾಮಿ ಪಕಳೆಗಳು ನನ್ನ ಮೊಲೆ ತೊಟ್ಟನ್ನು ಸಂಧಿಸುವ ಈ ಅನಾಮಿಕ ರಾತ್ರಿಯಲಿ
ಎಲ್ಲಿ ನನ್ನ ಪರಾಗಸ್ಪರ್ಶಕೆ ಮೂರ್ಛೆ ಹೋಗುವಿಯೋ ಎಂದು ಎಲೆಗಳನು ಕಾವಲಿಗಿಟ್ಟಿದ್ದೆ ಸಖ!

ತಂಗಿದ್ದೆ ಹೃತ್ಕರಣದಲಿ ಭಂಗ ತರದಿರಲೆಂದು ನಿನ ಸಿಹಿನಿದ್ದೆಗೆ ನನ್ನ ಎದೆ ಬಡಿತ
ಬಂಧಿತ ಹಕ್ಕಿಯಾದ ನೀನು ನನ್ನ ಹೃತ್ಕುಕ್ಷಿಯಿಂದೆದ್ದು ನಡೆದು ಬರಿ ಪಾದ
ಕಾವಲಿಗಿಟ್ಟಿದ್ದೆ ಸಖ!

‍ಲೇಖಕರು avadhi

June 5, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: