ಇನ್ನು ಮುಂದೆ ಆ ಕ್ಷಣಗಳು ಮಾತ್ರವೇ ನನ್ನ ಬಳಿ..

ಜಿ ಎನ್ ಮೋಹನ್

ಅವರಿಗೆ ಖಂಡಿತಾ ಧಣಿವಾಗಿರಲಿಲ್ಲ.
ಆದರೆ ಅವರು ಹೊರಟೇ ಹೋದರು.

ದಣಿವು ಎನ್ನುವ ಶಬ್ದಕ್ಕೂ ಎ ಎನ್ ಮುಕುಂದರಿಗೂ ಆರ್ಥಾತ್ ಸಂಬಂಧ ಇರಲಿಲ್ಲ.
ನಮ್ಮೊಳಗೇ ಒಂದು ಸುಸ್ತು ಆವರಿಸಿದರೂ ಅವರೊಳಗಿನ ಚೈತನ್ಯ, ಮುಖದ ತುಂಬಾ ಹರಡಿಕೊಳ್ಳುತ್ತಿದ್ದ ನಗು ಎರಡಕ್ಕೂ ಕೊನೆ ಇರಲಿಲ್ಲ.

ಮುಕುಂದ್ ಅವರು ಜೊತೆಯಾಗಿದ್ದು ನಮ್ಮ ‘ಅವಧಿ’ಯಲ್ಲಿ. ಸಾಕಷ್ಟು ಲೇಖನ ಬರೆದರು. ಬೇರೆಯವರು ಬರೆದ ಲೇಖನಕ್ಕೆ ಬೇಕಾದಾಗಲೆಲ್ಲಾ ಫೋಟೋ ಕೊಟ್ಟರು. ಆ ಬಾಂಧವ್ಯ ಒಂದು ಆತ್ಮೀಯ ಸಂಬಂಧವಾಗಿ ಬೆಳೆಯಿತು. ನಂತರ ನಮ್ಮ ‘ಬಹುರೂಪಿ’ಗೂ ತಮ್ಮನ್ನು ವಿಸ್ತರಿಸಿಕೊಂಡರು.

ಉಮಾ ಹಾಗೂ ಮುಕುಂದ್ ಇಬ್ಬರೂ ಎಷ್ಟು ಹಚ್ಚಿಕೊಂಡಿರುತ್ತಿದ್ದರೆಂದರೆ ನಾವು ‘ಬಹುರೂಪಿ ಬುಕ್ ಹಬ್’ ಆರಂಭಿಸಿದಾಗ ಅಲ್ಲಿನ ಗೋಡೆಗೆ ಪುಸ್ತಕ ಹಿಡಿದ ಜೋಡಿಯೊಂದು ಬೇಕಲ್ಲಾ ಅನಿಸಿದಾಗ ಸಿಕ್ಕ ನೂರೆಂಟು ಫೋಟೋಗಳಲ್ಲಿ ಇವರಿಬ್ಬರಿದ್ದ ಫೋಟೋವೇ ಗೆದ್ದು ಮುಂದೆ ಬಂದಿತು. ಅದಕ್ಕೆ ಕಾರಣ ಅವರಿಬ್ಬರ ನಡುವೆ ಇದ್ದ ಕೆಮಿಸ್ಟ್ರಿ.

ಮುದ್ದಣ ಮನೋರಮೆ ಹೇಗಿದ್ದರೋ ಗೊತ್ತಿಲ್ಲ ಆದರೆ ಇವರನ್ನು ನೋಡಿದಾಗಲೆಲ್ಲ ಹೀಗಿದ್ದಿರಬಹುದು ಎನ್ನುವ ಒಂದು ಝಲಕ್ ಸಿಕ್ಕಿ ಹೋಗುತ್ತಿತ್ತು.

ಉಮಾ ಮುಕುಂದ್ ಅವರ ‘ಕಡೇ ನಾಲ್ಕು ಸಾಲು’ ಕವನ ಸಂಕಲನವನ್ನು ತಂದದ್ದು ನಮ್ಮ ನಡುವಿನ ಪ್ರೀತಿ ಹೆಚ್ಚಲು ಇನ್ನಷ್ಟು ಕಾರಣವಾಗಿತ್ತು. ಸಂಕಲನ ರೂಪು ಪಡೆಯುವಾಗ, ಬಿಡುಗಡೆಯಲ್ಲಿ ನಂತರ ಅದನ್ನು ಓದುಗರಿಗೆ ದಾಟಿಸಲು ಮುಕುಂದ್ ತಮ್ಮನ್ನು ಇನ್ನಿಲ್ಲದಂತೆ ತೊಡಗಿಸಿಕೊಂಡಿದ್ದರು.

ನಾವು ಎಚ್ ಎಸ್ ವೆಂಕಟೇಶ ಮೂರ್ತಿ ಅವರ ‘ಬೆಳಗಾಗಿ ನಾನೆದ್ದು’ ಕೃತಿ ತರಲು ಹೊರಟಾಗ, ಅದು ರಾಷ್ಟ್ರ ಪ್ರಶಸ್ತಿ ಗೆಲ್ಲಲು ಮುಖ್ಯ ಕಾರಣ ಪುಸ್ತಕದಲ್ಲಿ ನಾವು ಬಳಸಿದ್ದ ಮುಕುಂದ್ ಅವರು ತೆಗೆದಿದ್ದ ಅಸಂಖ್ಯ ಫೋಟೋಗಳೂ ಕಾರಣವಾಗಿದ್ದವು. ನಂತರ ಚೇತನ್ ಸೋಮೇಶ್ವರ ಅವರ ಎ ಎನ್ ಮೂರ್ತಿರಾಯರ ಕುರಿತ ಶೋಧನಾ ಪ್ರಬಂಧ ‘ಲೋಕ ರೂಢಿಯ ಮೀರಿ’ ಪ್ರಕಟ ಮಾಡುವಾಗ ಮೂರ್ತಿರಾಯರ ಫೋಟೋಗಾಗಿ ನಾವು ಪಟ್ಟ ಸಾಹಸ ಅಷ್ಟಿಷ್ಟಲ್ಲ. ಆಮೇಲೆ ನಮಗೆ ಅದು ಸಿಕ್ಕದ್ದು ಮುಕುಂದ್ ರ ಮಾಯಾ ಖಜಾನೆಯಲ್ಲೇ.

ನಾವು ಮಾಡಿದ ಪ್ರತೀ ಸಾಹಸದಲ್ಲೂ ಅವರು, ಅವರ ಮುಗುಳ್ನಗು ಎರಡೂ ಸದಾ ಜೊತೆಗಿರುತ್ತಿತ್ತು. ಉಮಾ ಸಹಿತವಾಗಿ. ಇದು ನಮ್ಮ ವಿಶ್ವಾಸವನ್ನು ಹಲವು ಪಟ್ಟು ಹೆಚ್ಚಿಸುತ್ತಿತ್ತು.

‘ನಿಮ್ಮೊಡನಿದೂ ನಿಮ್ಮಂತಾಗದೆ’ ಎನ್ನುವ ಮಾತು ಮುಕುಂದ್ ಅವರ ವಿಷಯದಲ್ಲಿ ಸುಳ್ಳಾಗಿತ್ತು. ಅವರ ಜೊತೆ ಇದ್ದು ನಾವೂ ಅವರಂತಾಗಿದ್ದೆವು. ನಮ್ಮೊಡನಿದ್ದು ಅವರೂ ನಮ್ಮಂತಾಗಿ ಹೋಗಿದ್ದರು.

ಸಾಹಿತ್ಯ ಅಕಾಡೆಮಿ ‘ಅವಧಿ’ಗೆ ಪ್ರಶಸ್ತಿ ಕೊಟ್ಟಿತ್ತು. ಅದನ್ನು ಸ್ವೀಕರಿಸಿ ರವೀಂದ್ರ ಕಲಾಕ್ಷೇತ್ರದ ಸಭಾಂಗಣದಿಂದ ಹೊರಬಂದರೆ ಅಲ್ಲೊಂದು ಜೋಡಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ ನಿಂತಿತ್ತು. ಅರೆ ಯಾರಪ್ಪಾ ಈ ರಾತ್ರಿಯಲ್ಲಿ ಅಂತ ನೋಡಿದರೆ ನಾಚುತ್ತಾ ಪೋಸ್ ಕೊಡುತ್ತಿದ್ದವರು ಉಮಾ, ಅದನ್ನು ಅಷ್ಟೇ ಎಂಜಾಯ್ ಮಾಡಿ ತೆಗೆಯುತ್ತಿದ್ದವರು ಮುಕುಂದ್. ನಾನು ಆ ಭಾರೀ ಪ್ರಶಸ್ತಿ ಫಲಕವನ್ನು ನೆಲದ ಮೇಲೆ ಇಟ್ಟವನೇ ನನ್ನ ಮೊಬೈಲ್ ತೆರೆದು ಅವರ ಆ ಕ್ಷಣವನ್ನು ಹಿಡಿದಿಟ್ಟುಕೊಂಡೆ.

ಇನ್ನು ಮುಂದೆ ಆ ಕ್ಷಣಗಳು ಮಾತ್ರವೇ ನನ್ನ ಬಳಿ..

‍ಲೇಖಕರು Admin

July 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: