ಅನಸೂಯಾ ದೇವಿ ನೋಡಿದ ‘ಅಗ್ನಿವರ್ಷ’

ಡಾ ಅನಸೂಯಾ ದೇವಿ

ಬಹಳ ಕಾಲದ ನಂತರ ಒಂದು ಸದಭಿರುಚಿಯ ಚಲನಚಿತ್ರವನ್ನು ನೋಡುವ ಸದವಕಾಶ ಒದಗಿಬಂದಿತು. ನಿನ್ನೆ HVV plaza ದಲ್ಲಿ “ಅಗ್ನಿವರ್ಷ” ಚಿತ್ರದ ಪ್ರೀಮಿಯರ್ ಶೋಗೆ ನಿರ್ಮಾಪಕರಾದ ನಿಡಸಾಲೆ ಪುಟ್ಟಸ್ವಾಮಯ್ಯ ನವರ ಅಹ್ವಾನದ ಮೇರೆಗೆ ( ನನ್ನ ಕಾಲುನೋವು ವಿಪರೀತವಿತ್ತಾದರೂ ಅದನ್ನು ಕಡೆಗಣಿಸಿ ) ಹೋಗಿದ್ದೆ. ಸರಳ ಸುಂದರ ಸಮಾರಂಭ, ಎಲ್ಲ ಹಿರಿಯರ, ಕಲಾವಿದರ ಆತ್ಮೀಯತೆಯ ಒಡನಾಟವಿದ್ದು ಅದೊಂದು ಅಮೂಲ್ಯ ಸಂಜೆಯಾಗಿತ್ತೆಂದರೆ ಅತಿಶಯೋಕ್ತಿಯಲ್ಲ.

ಪರಸ್ಪರ ಮಾನವ ಸಂಬಂಧಗಳ ತಾಕಲಾಟಗಳು, ತಲೆಮಾರುಗಳ ನಡುವೆ ಕಾಣಿಸಿಕೊಳ್ಳುವ ಅಂತರಗಳು ತರುವ ಸಂಘರ್ಷಗಳು, ನೋವು ನಿರೀಕ್ಷೆ ನಿರಾಸೆಗಳು , ಪ್ರಕೃತಿ ಮತ್ತು ಮಾನವನ ನಡುವಿನ ಭಾವಬಾಂಧವ್ಯಕ್ಕೆ ಧಕ್ಕೆ ತರುವ ನಗರೀಕರಣದ ಕಾರಣಗಳು, ಇವೆಲ್ಲವನ್ನೂ ಯಾವ ಗದ್ದಲವಿಲ್ಲದೆ ತೋರುತ್ತ ಹೋಗುವ ಈ ಚಿತ್ರದಲ್ಲಿ ಗಂಡು ಹೆಣ್ಣಿನ ಸಂಬಂಧಗಳ ಸೂಕ್ಷ್ಮತೆಯನ್ನು ಕೂಡಾ ಮಾತುಗಳು ಹೆಚ್ಚಿಲ್ಲದ ಮೌನ ಗಾಂಭೀರ್ಯದಲ್ಲಿ ಪರಿಣಾಮಕಾರಿಯಾಗಿ ತೋರಲಾಗಿದೆ ಎನ್ನುವುದು ಪ್ರಶಂಸನಾರ್ಹವಾಗಿದೆ.

ಮಲೆನಾಡಿನ ಪರಿಸರದಲ್ಲಿ ಬೆಟ್ಟ ಗುಡ್ಡಗಳ ನಡುವೆ ಬದುಕು ಕಟ್ಟಿಕೊಂಡಿರುವ ಕುಟುಂಬಗಳ ಕಥೆ ವ್ಯಥೆಗಳ ಸುತ್ತಲೇ ಹೆಣೆದಿರುವ ಈ ಚಿತ್ರದ ಮೂಲ ಕಥೆ ಗಾರ್ಗಿ ಕಾರೇಹಕ್ಲು ಅವರ ಅಗ್ನಿವರ್ಷ ಕಾದಂಬರಿಯದು. ಅದನ್ನು ಚಲನಚಿತ್ರವಾಗಿಸುವಲ್ಲಿ ನಿಡಸಾಲೆ ತಂದೆಮಕ್ಕಳು ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ. ಗಂಡುಹೆಣ್ಣಿನ ಪ್ರೀತಿಯಲ್ಲಿ ಈಗಿನ ಉಳಿದ ಚಿತ್ರಗಳಲ್ಲಿರುವಂಥಾ ಹುಚ್ಚು ಅರೆಬೆತ್ತಲೆ ನರ್ತನಗಳಿಲ್ಲ, ಯಾವುದೇ ಕ್ಮಾಮೆರಾ ಕೈಚಳಕದ ಘನ ಫೈಟಿಂಗ್ ದೃಶ್ಯಗಳಿಲ್ಲಿಲ್ಲ. ಇರುವುದೆಲ್ಲ ಮನಮಿಡಿಯುವ ಹೃದಯಕ್ಕೆ ತಟ್ಟುವ ಪರಿಣಾಮಕಾರಿ ಹೆಚ್ಚು ಮಾತಿಲ್ಲದೇ ಸಾಗುವ ಮೌನತುಂಬಿದ ಭಾವಾಭಿನಯ ಮಾತ್ರ!

ಈ ಭಾವಾಭಿನಯದಲ್ಲೇ ಪ್ರೇಕ್ಷಕರನ್ನು ಪೂರ್ಣ ಗೆಲ್ಲುವವರು ಕೃಷ್ಣಯ್ಯನ ಪಾತ್ರಧಾರಿ ನಟ ರಮೇಶ್ ಭಟ್ ಹಾಗೂ ಅವರ ಗೆಳೆಯನ ಪಾತ್ರದಲ್ಲಿ ನಿಡಸಾಲೆ ಪುಟ್ಟಸ್ವಾಮಿಯವರು. ನಿಡಸಾಲೆಯವರು ತಮ್ಮ ಕಣ್ಣುಗಳಲ್ಲೇ ಪಾತ್ರದ ಸಂಕಟ, ನಿರಾಸೆಯ ದು:ಖವನ್ನು ವ್ಯಕ್ತಪಡಿಸುವಲ್ಲಿ ಪ್ರತಿಭೆ ಮೆರೆದಿದ್ದಾರೆ. ವೃದ್ಧಾಪ್ಯದ ಅಶಕ್ತತೆ, ಹತಾಶೆ , ನೋವುಗಳನ್ನು ರಮೇಶಭಟ್ ಹೃದಯಂಗಮವಾಗಿ ಅಭಿನಯಿಸಿದ್ದಾರೆ. ರತ್ನಳ ಪಾತ್ರದಲ್ಲಿ ಪ್ರತಿಮಾ ನಾಯಕ್ ವಿಶೇಷವಾಗಿ ಅಭಿನಯಿಸಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಈ ಚಿತ್ರದ ಉಳಿದ ಕಲಾವಿದರೆಲ್ಲರೂ ಅಷ್ಟೇ ಅಭಿನಂದನೀಯರು.

ಕಥೆ, ಪಾತ್ರಗಳ ಅಭಿನಯಕ್ಕೆ ಪೂರಕವಾಗಿ ಮೆರುಗು ತಂದಿರುವ ಅಂಶಗಳೆರಡು. ಅತ್ಯಂತ ಮೋಹಕವಾಗಿ ಅದ್ಭುತವಾಗಿ ಮಲೆನಾಡಿನ ಸುಂದರ ಪ್ರಾಕೃತಿಕ ಸೌಂದರ್ಯ ವನ್ನು ಸರೆಹಿಡಿದು ತೋರಿಸುವ ಛಾಯಾಗ್ರಹಣ! ಮತ್ತೊಂದು ಇವೆಲ್ಲಕ್ಕೂ ವಿಶೇಷವಾಗಿ ಕಳೆಗಟ್ಟಿಸುವ ಪ್ರವೀಣ್ ಗೋಳ್ಖಂಡಿಯವರ ಹಿನ್ನೆಲೆಸಂಗೀತ! ಸಂಭಾಷಣೆ ಕೂಡ ತುಂಬ ಮೌಲಿಕವಾಗಿ ಹೆಣೆಯಲಾಗಿದ್ದು ಮನಸ್ಸನ್ನು ಆವರಿಸಿ ನಿಲ್ಲುತ್ತದೆ.

ಹೊರಗಿನ ಪ್ರಕೃತಿಯ, ಪರಿಸರದ ನಡುವೆ ಹೋರಾಡುತ್ತ, ಅದರ ಅಗ್ನಿವರ್ಷದಲ್ಲಿಗುದ್ದಾಡುತ್ತ, ಒದ್ದಾಡುತ್ತ ಬದುಕುವುದಷ್ಠೇ ಅಲ್ಲ, ಮನುಷ್ಯ ತನ್ನೊಳಗಿನ ಆಂತರ್ಯದ ಅಗ್ನಿವರ್ಷವನ್ನೂ ಎದುರಿಸುತ್ತ ಬದುಕಬೇಕಾಗತ್ತದೆನ್ನುವ ಕಟುಸತ್ಯವನ್ನು ಈ ಚಲನಚಿತ್ರ ಕಡೆಗೆ ಸಾರುತ್ತದೆ!

ಎಳೆಯ ವಯಸ್ಸಿನಲ್ಲಿಯೇ ತಾವೊಬ್ಬ ಸಮರ್ಥ ನಿರ್ದೇಶಕರೆಂದುಈ ಮೂಲಕ ವಿಜಯ್ ನಿಡಸಾಲೆಯವರು ತೋರಿಸಿಕೊಟ್ಟಿದ್ದಾರೆ. ಹಿತಮಿತ ಮೃದು ವಚನರಾದ ವಿಜಯ್ ಈ ತಮ್ಮ ಸದಭಿರುಚಿಯ ಚಿತ್ರದಲ್ಲೂ ಹಿತಮಿತ ಮೃದು ವಚನದಲ್ಲೇ ಎಲ್ಲವನ್ನೂ ತೋರಗೊಡುವಂಥ ಸಮರ್ಥ ನಿರ್ದೇಶನ ಮಾಡಿ ಯಶಸ್ಸು ಗಳಿಸಿದ್ದಾರೆ. ನಿಡಸಾಲೆ ಪುಟ್ಟಸ್ವಾಮಯ್ಯ ಅವರ ಚಿಗುರು ಕ್ರಿಯೇಶನ್ ಈ ವಿಜಯ್ ನಿಡಸಾಲೆಯವರು ಮುಂದೆ ನಿರ್ದೇಶನದಲ್ಲಿ ತಾನು ಚಿಗುರು ಮಾತ್ರವಲ್ಲ ಆಲದಮರವಾಗಿಯೂ ಬೆಳೆಯಬಲ್ಲೆನೆಂದು ತೋರಿಸಿಕೊಟ್ಟಿದ್ದಾರೆ.

ನಿಡಸಾಲೆ ತಂದೆಮಕ್ಕಳನ್ನು ಅಭಿನಂದಿಸುತ್ತ ಅಭಿವಂದಿಸುತ್ತೇನೆ.

ನೀವೂ ಖಂಡಿತಾ ಈ ಚಿತ್ರವನ್ನು ತಪ್ಪದೇ ನೋಡಬೇಕು ಎಂದು ಆಶಿಸುತ್ತೇನೆ

‍ಲೇಖಕರು Admin

July 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: