ಡೆಸ್ಡೆಮೋನಾಳ ರೂಪಕವೂ ಸರಸ್ವತಿ ಅಮ್ಮನ ಸಂವಾದವೂ…

ಕಿರಣ್ ಗಿರ್ಗಿ

ಎಂ.ಡಿ. ಪಲ್ಲವಿಯವರ ಹಾಡುಗಳನ್ನಂತೂ ಪಿಯುಸಿಯ ದಿನಗಳಿಂದ ಅದೆಷ್ಟು ಬಾರಿ ಕೇಳಿರುವೆನೋ ಗೊತ್ತಿಲ್ಲ. ನಾಟಕಕಾರರು, ರಂಗಕರ್ಮಿಗಳಾದ ಎ.ಎಸ್.ಮೂರ್ತಿ ಸರ್ ಅವರ ಕೂಸಾಗಿದ್ದ ಪಲ್ಲವಿ ಮೇಡಂ ಅವರಿಗೆ ನಟನೆ ಮನೆಯಿಂದಲೇ ಒದಗಿ, ಮುಂದೆ ಅಕ್ಷರಕ್ಷರಗಳಲ್ಲೂ ಭಾವಹೊಮ್ಮುವಂತೆ ಹಾಡುತ್ತಿದ್ದ ರಾಜು ಅನಂತಸ್ವಾಮಿ ಮತ್ತು ಸಿ.ಅಶ್ವಥ್ ಸರ್ ಅವರಿಂದ ಪಡೆದ ಧ್ವನಿ ಸಂಸ್ಕಾರಗಳ ಕಾರಣ ನನ್ನಂತೇ ಹಲವರನ್ನು “ಎಂ.ಡಿ.ಪಲ್ಲವಿ ಎಂಬ ರಂಗದನಿ”ಯ ಭಾವಗೀತೆಗಳು ಕಾಡಿವೆ; ಕೊಂದಿವೆ; ಸಾಂತ್ವನವನ್ನೂ ನೀಡಿವೆ.

ಬಿಂದುಮಾಲಿನಿ ಹಾಗೂ ಪಲ್ಲವಿಯವರ ‘ರಾಗಾಲಾಪಗಳ ನಟನೆ’ಯ ಡೆಸ್ಡೆಮೋನಾ ರೂಪಕವು, ವೀಕ್ಷಿಸಿದ ಪ್ರತೀ ಕಂಗಳಿಗೆ ಕಿವಿಗಳಿಗೆ ಸಂತೃಪ್ತಿಯ ಊಟ (ಫುಲ್ ಮೀಲ್ಸ್) ಬಡಿಸಿದೆ. ನಾಟಕ ನೋಡದೇ ಇರುವವರು ನೋಡುತ್ತೇವೆಂದರೆ ನಟನಕ್ಕೆ ಮತ್ತೆ ಮತ್ತೆ ಡೆಸ್ಡೆಮೋನಾ ಬಂದೇ ಬರುತ್ತಾಳೆ. ‘ಇಂತಾ ಅಪ್ರೂಪದ್ ನಾಟ್ಕಗಳ್ನ ನಗರದವ್ರುವೇ ಮೈಸೂರಿನ್ ಸುತ್ಮುತ್ತ ಊರಿನವ್ರುವೇ ಏನೇ ಕೆಲ್ಸ ಇದ್ರೂ ಬುಡ್ತಿ ಮಾಡ್ಕಂಡೋಗಿ ನೋಡ್ಕಂಡು ಬರಮು, ಅಲ್ವ…?’

‘ಡೆಸ್ಡೆಮೋನಾ ರೂಪಕಮ್’ನ ನಿರ್ದೇಶಕರಾದ ಅಭಿಷೇಕ್ ಮಜುಂದಾರ್ ಸರ್ ಕರ್ನಾಟಕವಲ್ಲದೇ ಭಾರತೀಯ ರಂಗಭೂಮಿಯಲ್ಲಿ ನಿರ್ದೇಶನ ಹಾಗೂ ನಿರ್ದೇಶನದ ಪಾಠ ಮಾಡುವಲ್ಲಿಯೂ ದೊಡ್ಡ ಹೆಸರು ಅವರದು. ಷೇಕ್ಸ್ ಪಿಯರನ ಡೆಸ್ಡಿಮೋನಾಳೊಂದಿಗೆ ಕಾಳಿದಾಸನ ಶಾಕುಂತಲ, ಮಹಾಭಾರತದ ಗಾಂಧಾರಿ, ರಾಮಾಯಣದ ಕೈಕೇಯಿ, ಜನಪದರ ಎಲ್ಲವ್ವಾ, ರೇಣುಕಾದೇವಿಯರನ್ನು ಒಟ್ಟಿಗೆ ತರುತ್ತಾ “ಡೆಸ್ಡಿಮೋನಾ ರೂಪಕಮ್” ಎಂಬ ಹೆಣ್ಕಥನಗಳ ಭಾವಲಹರಿಯೊಂದಿಗೆ ವಿನ್ಯಾಸಗಳ ಜಾದೂವನ್ನೂ ಸೃಷ್ಟಿಸಿದ್ದರು. ಅಭಿಷೇಕ್ ಸರ್ ಅವರಿಂದ ನಿರ್ದೇಶನದ ಪಾಠ ಕೇಳುವ ಅವಕಾಶ “ರಂಗಶಂಕರದ ಮೇಕಿಂಗ್ ಥಿಯೇಟರ್” ವರ್ಕ್ ಶಾಪ್ ನಲ್ಲಿ ನನಗೂ ಸಿಕ್ಕಿತ್ತು. ಇದೇ ಒಥೆಲೋವನ್ನೇ ಇಟ್ಕೊಂಡು ಪಠ್ಯ ವಿಶ್ಲೇಷಣೆಯ ಪಾಠ ಮಾಡಿದ್ದೂ ನೆನಪಾಯಿತು!

ರಂಗಭೂಮಿ, ಸಾಹಿತ್ಯ, ಮಹಿಳಾ ಮತ್ತು ದಲಿತ ಚಳುವಳಿಯನ್ನು ಒಂದಕ್ಕೊಂದು ಬೆಸೆದುಕೊಂಡು ಬದುಕಾಗಿಸಿಕೊಂಡಿರುವ ದು.ಸರಸ್ವತಿ ಮೇಡಂ ಅವರ ಅಂತಃಕರಣದ ಮಾತುಗಳಿಗೆ ನಮಸ್ಕರಿಸುತ್ತೇನೆ. ಅವರಾಡಿದ ಮಾತುಗಳನ್ನು ಪದೇ ಪದೇ ನೆನಪಿಸಿಕೊಳ್ಳುತ್ತೇನೆ. ‘ಸಣ್ತಿಮ್ಮಿಯ ಪುರಾಣ’ ಪುಸ್ತಕಾನ ಸಂವಾದ ಮುಗಿದ್ಮೇಲೆ ಸರಸ್ವತಿ ಮೇಡಂ ಹತ್ರ ತಗಂಡೆ. ಓದನ್ನೂ ಶುರು ಮಾಡಿದಿನಿ. ಈ ಪುಸ್ತಕವು ನೆನ್ನೆಯ ಸಂವಾದದ ಮತ್ತೊಂದು ರೂಪ ಅಥವಾ ಸಂವಾದವೂ ಪುಸ್ತಕದ ಭಾಗವಾಗಿಯೇ ಇತ್ತು.

ಸರಸ್ವತಿ ಅಮ್ಮ ಅವರೊಂದಿಗಿನ ಸಂವಾದ ಸ್ತ್ರೀಪರವಾದ ಸುದೀರ್ಘ ಅನುಭವದ ಥಿಯರಿಯ ಪಾಠವಾದರೆ, ‘ಡೆಸ್ಡಿಮೋನಾ ರೂಪಕಮ್’ ಅದರ ಪ್ರಾಕ್ಟಿಕಲ್ ಕ್ಲಾಸ್ ಆಗಿತ್ತು. ನನಗಂತೂ ಬಹಳ ಉಪಯೋಗವಾಗಿದೆ. ನಟನ ರಂಗಶಿಕ್ಷಣ ವಿದ್ಯಾರ್ಥಿಗಳಿಗೆ ಇಂಥ ಅನೇಕ ರಂಗಭೂಮಿಯ ಪಾಠಗಳು ಒಂದು ವರ್ಷದ ಅವಧಿಯಲ್ಲಿ ಸಿಗುತ್ತಿರುವುದು ರಂಗಭ್ಯಾಸಿಗಳ ಪುಣ್ಯ.

ಇಷ್ಟೆಲ್ಲಾ ಮಾತಾಡಿ ನಟನ ಸೃಷ್ಟಿಕರ್ತರ ಬಗ್ಗೆ ಹೇಳ್ದೇ ಇರೋದ್ಹೆಂಗೆ…?! ನಟನದ ಯವನಿಕ ಆಪ್ತರಂಗದಲ್ಲಿ ಸಂವಾದ ಶುರುವಾಗಿ ನಡೀತಿತ್ತು, ನಾ ಹೋದಾಗ. ನಟನ ಬಳಗದ ಮಿತ್ರರಿಗೆ ನಮಸ್ಕರಿಸಿ ಮಂಡ್ಯ ರಮೇಶ್ ಸರ್ ಗೆ ಕೈ ಮುಗಿದು ಚೇರ್ ಎಳ್ಕೊಂಡು ಹಿಂದೆ ಕೂರ್ತಿದ್ದೆ. ಅಷ್ಟ್ರಲ್ಲಿ ಅವ್ರೇ ಎದ್ದು ‘ಏ… ಬಾರೋ ಇಲ್ಲಿ’ ಅಂತ ಸಂವಾದಕ್ಕೂ ಡಿಸ್ಟರ್ಬ್ ಆಗ್ದಂಗೆ ಮುಂದಿನ ಸಾಲಿನ ಚೇರಲ್ಲಿದ್ದ ಬ್ಯಾಗ್ ತೆಗ್ದಿಟ್ಟು ಕೂರ್ಸುದ್ರು. ಅವರು ಹಂಗೇನೆ! ನನಗೆ ಅಂತಲ್ಲ; ರಂಗಭೂಮಿಯನ್ನು ಪ್ರೀತಿಸುವ ಯುವ ತಲೆಮಾರು ಇಂಥದ್ದನ್ನೆಲ್ಲ ಕೇಳ್ಬೇಕು, ನೋಡ್ಬೇಕು ಅನ್ನೋದು ಅವರ ಗುರುಮನದ ಇಂಗಿತ. ರಂಗಭೂಮಿಯ ಕುರಿತು ಇಂತಹ ಚಡಪಡಿಕೆ, ಧ್ಯಾನಸ್ಥ ಸ್ಥಿತಿ ಕಾಪಿರಿಸಿಕೊಳ್ಳಲು ಬಿ.ವಿ.ಕಾರಂತರು, ಕೆ.ವಿ.ಸುಬ್ಬಣ್ಣರಂಥ ಗುರುಮನಗಳೇ ಕಾರಣ ಅನ್ಸುತ್ತೆ…!

ಮಂಡ್ಯ ರಮೇಶ ಸಾರ್, ನಟನ ಬಳಗಕ್ಕೆ ಪ್ರೀತಿಯ ವಂದನೆಗಳು

‍ಲೇಖಕರು Admin

July 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: