ಇದ್ಯಾವ ಹೊಸ ಕೋತಿ ಬಂದಿದೆ..??

ಕಾಣದ ಕಡಲಿಗೆ ಹಂಬಲಿಸಿದೆ ಮನ..

ಹೆಜ್ಜೆ 16

ನವಿಲು ಧಾಮ

avadhi-column-rahul bw-edited2

ಬಂಕಾಪುರ ಒಂದು ಸಣ್ಣ ಊರೇನಲ್ಲ. ವಿಸ್ತಾರವಾಗಿ ಬೆಳೆದಿರುವ ವ್ಯಾಪಾರಿ ಕೇಂದ್ರ. ಅಂಗಡಿ ಮುಂಗಟ್ಟುಗಳು, ಸುಸಜ್ಜಿತ ಬಸ್ ನಿಲ್ದಾಣ, ಮೂರ್ನಾಲ್ಕು ಲಾಡ್ಜ್ ಗಳು, ಒಂದೆರಡು ಚಿತ್ರಮಂದಿರಗಳು, ಐದಾರು ಶಾಲೆಗಳು ತಲೆಯೆತ್ತಿದ್ದವು.

ಊರಿನ ಬಗ್ಗೆ ವಿಚಾರಿಸಿದಾಗ, ಇದೊಂದು ಐತಿಹಾಸಿಕ ಸ್ಥಳ ಎಂದು ಗೊತ್ತಾಯಿತು. ಮೂರು ಮೈಲು ದೂರದಲ್ಲಿರುವ ಬಾಡ ಎಂಬ ಹಳ್ಳಿಯು ಕನಕದಾಸರ ಜನ್ಮಸ್ಥಳವೆಂದು ಗೊತ್ತಾಯಿತು. ಕನಕದಾಸರ ತಂದೆ ಪಾಳೇಗಾರರಾಗಿದ್ದರೆಂದೂ, ಬಂಕಾಪುರದಲ್ಲಿ ಒಂದು ಕೋಟೆ ಕಟ್ಟಿಸಿ ತಮ್ಮ ಆಳ್ವಿಕೆಯ ಕೇಂದ್ರ ಸ್ಥಾನ avadhi- column- rahul- low res- editedಮಾಡಿಕೊಂಡಿದ್ದಾಗಿ ತಿಳಿಸಿದರು. ಈ ಊರಿನಲ್ಲಿ ಪುರಾತನ ಮತ್ತು ಪ್ರಸಿದ್ಧವಾದ ಕೋಟೆ ಎಲ್ಲಮ್ಮ ಮತ್ತು ಪೇಟೆ ಎಲ್ಲಮ್ಮ ಎಂಬ ದೇವಾಲಯಗಳಿವೆ. ಬಂಕಾಪುರದ ಕೋಟೆಯು ಸುಮಾರು ಇನ್ನೂರು ಎಕರೆಗಳ ವಿಸ್ತೀರ್ಣವಿದ್ದು, ಈಗ ಅದನ್ನು ನವಿಲುಧಾಮವಾಗಿ ಮತ್ತು ಖಿಲಾರಿ ತಳಿ ಗೋವು ಸಂವರ್ಧನಾ ಕೇಂದ್ರವಾಗಿ ಪರಿವರ್ತಿಸಿದ್ದಾರೆ.

ಈ ಊರಿನಲ್ಲಿ ಅಲ್ಲಾವುದ್ದೀನ್ ಶಾ ದರ್ಗಾ ಕೂಡ ಇದ್ದು, ಮುಸಲ್ಮಾನ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದುದು ಕಂಡುಬಂತು. ನನಗೆ ಕೋಟೆ ಸುತ್ತುವ ಮನಸ್ಸಾಯಿತು. ಮಯೂರ ಲಾಡ್ಜ್ ನಿಂದ ಹೊರಟು, ಪಕ್ಕದ ಹೋಟೆಲ್‍ನಲ್ಲಿ ಉಪಹಾರ ಮುಗಿಸಿ ಕೋಟೆಯ ಒಳ ಹೊಕ್ಕಿದೆ. ಕೋಟೆ ನೋಡಲು ಯಾವುದೇ ಶುಲ್ಕವಿರಲಿಲ್ಲ. ಒಳಹೋದರೆ ಗೋವುಗಳನ್ನು ನೋಡಿಕೊಳ್ಳುವ ಸೇವಕರನ್ನು ಬಿಟ್ಟರೆ, ನನ್ನನ್ನು ಕೇಳಲು ಯಾರೂ ಇರಲಿಲ್ಲ. ಕೋಟೆ ಒಳಗೆ ಕಾಲಿಟ್ಟ ತಕ್ಷಣವೇ ಒಂದು ಮರಿ ನವಿಲು ಮರದಿಂದ ನೆಲಕ್ಕೆ ಹಾರಿ ನನ್ನ ಸ್ವಾಗತ ಕೋರಿತು.

ಗೋವು ಸಂವರ್ಧನಾ ಕೇಂದ್ರಕ್ಕೆ ಹೋಗಿ ಖಿಲಾರಿ ತಳಿಯ ಗೋವುಗಳನ್ನು ನೋಡಿದೆ. ಒಂದು ಕಪ್ಪು ಚುಕ್ಕಿಯೂ ಇಲ್ಲದಂತಹ ಬಿಳಿ ಬಣ್ಣದ ಗೋವುಗಳು. ಎತ್ತುಗಳಿಗೆ, ಹಸುಗಳಿಗೆ ಮತ್ತು ಮರಿಗಳಿಗೆ ಪ್ರತ್ಯೇಕ ಕೊಟ್ಟಿಗೆಗಳಿದ್ದವು. ಮೇವು ಬೆಳೆಯಲು ಮೂವತ್ತು ಎಕರೆ ಬಿಟ್ಟು, ಉಳಿದ ಪ್ರದೇಶವನ್ನು ಮರಗಿಡಗಳಿಂದ ಒಂದು ಪುಟ್ಟ ವನವಾಗಿ ಪರಿವರ್ತಿಸಿ ನವಿಲು ಧಾಮವಾಗಿಸಿದ್ದಾರೆ.

ವನದಲ್ಲಿ ಮೃಗ ಪ್ರಾಣಿಗಳಿವೆಯೇ ಎಂದು ಕೇಳಿದೆ. ಗೋವುಗಳು ಮತ್ತು ನವಿಲುಗಳಿರುವುದರಿಂದ ಕೋತಿಗಳನ್ನು ಬಿಟ್ಟರೆ ಬೇರೆ ಯಾವುದೇ ಪ್ರಾಣಿಗಳನ್ನು ಸಾಕಲಾಗಿಲ್ಲ ಎಂದರು. ಧೈರ್ಯ ಬಂದು ಡಾಂಬರು ರಸ್ತೆಯನ್ನು ಬಿಟ್ಟು, ಕೈಯಲ್ಲಿ ಒಂದು ದೊಣ್ಣೆಯನ್ನು ಹಿಡಿದುಕೊಂಡು ವನದ ಒಳ ಹೊಕ್ಕಿದೆ. ಹತ್ತಾರು ನವಿಲುಗಳು ನನ್ನ ಅಕ್ಕ ಪಕ್ಕವೇ ಓಡಾಡಿಕೊಂಡು ತಮ್ಮ ನಾಟ್ಯ ಪ್ರದರ್ಶನ ಮಾಡುತ್ತಿದ್ದವು. ನಾನು ಅದರ ಬಳಿ ಹೋದರೆ ಪಟಪಟನೆ ದೂರ ಓಡಿಬಿಡುತಿದ್ದವು.

ಮರಗಳ ಮೇಲೆ ಕಪ್ಪು ಮುಖದ ಕೋತಿಗಳು ತಂಡ ತಂಡವಾಗಿ ಆಟವಾಡಿಕೊಂಡಿದ್ದವು. ಅವುಗಳ ಕಣ್ಣುಗಳೂ ಕೂಡ ಪೂರ್ಣ ಕಪ್ಪು. ಅವುಗಳನ್ನೇ ನೋಡುತ್ತಾ ನಿಂತೆ. ಅವುಗಳೂ ಕೂಡ ತಮ್ಮ ಆಟವನ್ನು ನಿಲ್ಲಿಸಿ, ಇದ್ಯಾವ ಹೊಸ ಕೋತಿ ಬಂದಿದೆ ಎಂದು ನನ್ನತ್ತ ತಿರುಗಿ ನೋಡಿದವು. ಅವುಗಳ ಹತ್ತಿರ ಹೋಗಿ ಕೋತಿಯಂತೆ ಅಣಕವಾಡಿ ಮಜಾ ತಗೆದುಕೊಂಡೆ. ಹಾಗೆ ಮುಂದೆ ನಡೆದರೆ ಒಂದು ನೀರಿನ ಹೊಂಡ ಕಾಣಿಸಿತು. ಅದರ ಸುತ್ತಲೂ ಕೆಲವು ನವಿಲುಗಳು ತಮ್ಮ ಬೃಹತ್ ರೆಕ್ಕೆಯನ್ನು ಬಿಚ್ಚಿ ನರ್ತಿಸುತ್ತಿದ್ದವು. ಅದೊಂದು ಮೈನವಿರೇಳಿಸುವ ವಿಸ್ಮಯ ನೋಟ. ಖುಷಿಯಿಂದ ಜೋರಾಗಿ ಕೂಗಿದೆ. ರೆಕ್ಕೆ ಮುಚ್ಚಿ ಪಟಪಟನೆ ಕಾಡಿನ ಒಳಹೊಕ್ಕಿದವು. ನಾನೆ ಆ ಕಾಡಿನ ರಾಜ ಎಂಬಂತೆ ಭಾಸವಾಗತೊಡಗಿತು. ಹಾಗೇ ಒಂದು ಗಂಟೆಗಳ ಕಾಲ ಸುತ್ತಾಡಿಕೊಂಡು ಹೊರಬಂದೆ. ಮನಸ್ಸು ಯಾವುದೋ ಹಿಮಾಲಯವನ್ನು ಏರಿ ಬಂದಷ್ಟು ಖುಷಿಯಿಂದ ಪುಟಿಯುತ್ತಿತ್ತು.

ಕೋಟೆಯಿಂದ ನೇರ ಸರ್ಕಾರಿ ಪ್ರೌಢಶಾಲೆಗೆ ತೆರಳಿ, ಮುಖ್ಯೋಪಾಧ್ಯಾಯರನ್ನು ಭೇಟಿ ಮಾಡಿ ನನ್ನ ವಿಷಯ ತಿಳಿಸಿದೆ. ಅವರು ಒಂಬತ್ತನೇ ತರಗತಿಯ ಮಕ್ಕಳಿಗೆ ಮಾತ್ರ ಉಪನ್ಯಾಸ ಕೊಡಲು ಅವಕಾಶ ಮಾಡಿಕೊಟ್ಟರು. ಆ ತರಗತಿಯಲ್ಲಿ ತೊಂಬತ್ತಾರು ವಿದ್ಯಾರ್ಥಿಗಳಿದ್ದರಿಂದ ನನಗೆ ನಿರಾಸೆಯಾಗಲಿಲ್ಲ. ಬಂಕಾಪುರದ ಇತಿಹಾಸವನ್ನು ಬಳಸಿಕೊಂಡು ತಮಾಷೆಯಿಂದ ಉಪನ್ಯಾಸ ನಡೆಸಿಕೊಟ್ಟೆ. ಅಲ್ಲಿಯ ಒಬ್ಬ ಶಿಕ್ಷಕನಿಗೆ ನನ್ನ ಉಪನ್ಯಾಸದಲ್ಲಿನ ನಾಟಕ ಇಷ್ಟವಾಗಿ ಕೇಳಿ ತಿಳಿದುಕೊಂಡರು. ಉಳಿದವರು ಇದಕ್ಕೂ ತಮಗೂ ಏನೂ ಸಂಬಂಧವೇ ಇಲ್ಲದಂತಿದ್ದರು.

ಅಲ್ಲಿಂದ ಹೊರಟು ಮಾರ್ಡ್ನ್ ಕನ್ನಡ ಪ್ರೌಢಶಾಲೆಗೆ ತೆರಳಿದೆ. ಅಲ್ಲಿಯ ಮುಖ್ಯೋಪಾಧ್ಯಾಯರು ನನ್ನ ವಿಚಾರವನ್ನು ಕೂಲಂಕುಷವಾಗಿ ಕೇಳಿ, ನನ್ನ ದಾಖಲಾತಿಗಳನ್ನು ಪರಿಶೀಲಿಸಿ, ಊಟದ ಮುಂಚೆಯೇ ಉಪನ್ಯಾಸ ಕೊಡಲು ನನಗೆ ಅವಕಾಶ ಮಾಡಿಕೊಟ್ಟರು. ಆದಾಗಲೇ ತರಗತಿಗಳು ಶುರುವಾಗಿದ್ದವು. ಅವನ್ನು ಅರ್ಧಕ್ಕೆ ನಿಲ್ಲಿಸಿ, ವಿದ್ಯಾರ್ಥಿಗಳನ್ನು ಹೊರಗೆ ಕರೆಯಿಸಿ, ಶಾಲಾ ಆವರಣದಲ್ಲಿ ನಿಲ್ಲಿಸಿದರು.

ತನ್ನ ಪಾಠವನ್ನು ಅರ್ಧಕ್ಕೆ ನಿಲ್ಲಿಸಿದರಿಂದ ಕೋಪಗೊಂಡು, ಓರ್ವ ಯುವ ಶಿಕ್ಷಕಿ ಹೀಗೆ ಇತರೆ ಕಾರಣಗಳಿಗೆ ಸಮಯಕೊಡುತ್ತಾ ಹೋದರೆ, ಆ ವರ್ಷದ ಪಠ್ಯಕ್ರಮ ಮುಗಿಸುವುದಾದರೂ ಹೇಗೆ ಎಂದು ನಾನು ಅಲ್ಲಿ ನಿಂತಿದ್ದರೂ ನನ್ನ ಬಗ್ಗೆ ಗಮನ ಹರಿಸದೆ ಕಿಡಿಕಾರುತ್ತಿದ್ದರು. ನನಗೂ ಅವರು ಹೇಳುತ್ತಿದ್ದುದು ಸರಿ ಎನಿಸಿತು. ನನಗೆ ಒದಗಿಸಿದ ಧ್ವನಿವರ್ಧಕದಲ್ಲಿ ನನ್ನ ಉಪನ್ಯಾಸ ಶುರುಮಾಡಿ, ದೊಡ್ಡ ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಪ್ರತಿಜ್ಞೆ ಪಡೆದೆ. ಉಪನ್ಯಾಸದ ಮುಂಚೆ ಕಿಡಿಕಾರಿದ್ದ ಯುವ ಶಿಕ್ಷಕಿ ನನ್ನ ಕಡೆ ನಗುತ್ತಾ ಬಂದು ಪರಿಚಯ ಮಾಡಿಕೊಂಡು

“ಹೆಲೋ ಸರ್, ಐ ಆಮ್ ತಸ್ನೀಮ್ ಬಾನು. ಆಮ್ ಎ ಸೈನ್ಸ್ ಟೀಚರ್. ಯು ಆರ್ ಡೂಯಿಂಗ್ ಎ ವಂಡರ್‍ಫುಲ್ ಜಾಬ್. ಇಟ್ ಈಸ್ ಪ್ಲೆಸರ್ ಟು ಮೀಟ್ ಯು ಸರ್” ಎಂದು ಆಂಗ್ಲಭಾಷೆಯಲ್ಲಿ ಹೇಳಿದಳು.

ನಾgreenನೂ ಆಂಗ್ಲಭಾಷೆಯಲ್ಲೇ ಮಾತನಾಡದಿದ್ದರೆ, ನಾನು ಇಂಜಿನೀಯರ್ ಹೌದೋ ಅಲ್ಲವೋ ಎಂಬ ಅನುಮಾನ ಬರಬಹುದು ಎಂದು ಗ್ರಹಿಸಿ, ಆಂಗ್ಲಭಾಷೆಯಲ್ಲೇ ಶುರುಮಾಡಿದೆ.

“ಹೆಲೋ! ಪ್ಲೆಸರ್ ಈಸ್ ಆಲ್ ಮೈನ್. ಹೌ ಡು ಯು ಡು? ವೇರ್ ಆರ್ ಯು ಫ್ರಂ?” ಎಂದು ಕೇಳಿದೆ.

“ಆಮ್ ಫೈನ್. ಥ್ಯಾಂಕ್ಯು. ಆಮ್ ಫ್ರಂ ಶಿವಮೊಗ್ಗ ಬೈ ದ ವೇ”  ಎಂದಳು.

ನನ್ನ ಮಾತನ್ನು ಹಾಗೇ ಕನ್ನಡಕ್ಕೆ ತಿರುಗಿಸಿದೆ. “ಓಹೋ, ನಮ್ಮ ಮಲೆನಾಡಿನವರು. ಪುಣ್ಯವಂತರು ನೀವು. ಎಂತಹ ವಾತಾವರಣದಲ್ಲಿ ಬದುಕುತ್ತಿದ್ದೀರ” ಎಂದೆ.

“ಹಾಗೇನಿಲ್ಲ ಸರ್, ನಮ್ ಕಡೇನು ಪರಿಸರ ತುಂಬಾನೇ ಹಾಳಾಗ್ತಾ ಇದೆ. ತುಂಬ ಬೇಜಾರಾಗುತ್ತೆ. ಆದರೆ ನೀವು ಒಳ್ಳೆ ಕೆಲಸ ಮಾಡ್ತಾ ಇದೀರ ಸರ್. ನಿಮ್ಮ ಕೆಲಸಕ್ಕೆ ನಾನು ಶುಭ ಹಾರೈಸುತ್ತೇನೆ. ಗುಡ್ ಲಕ್” ಎಂದು ಅಭಿನಂದಿಸಿದಳು. ಹಾಗೆ ತಮ್ಮ ಜೊತೆ ಊಟ ಮಾಡುವಂತೆ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಹೋದಳು. ಎಲ್ಲಾ ಶಾಲೆಯಲ್ಲಿ ಇದ್ದಂತೆ ಇಲ್ಲಿಯೂ ತಮ್ಮ ಊಟವನ್ನು ಹಂಚಿಕೊಂಡು ತಿನ್ನುವ ಪರಿಪಾಠ. ಊಟ ಮಾಡಿ ಶಾಲೆಯವರ ಅಭಿನಂದನೆ ಪಡೆದು ಕೂನಿಮೆಲ್ಲಹಳ್ಳಿಯ ಕಡೆಗೆ ನನ್ನ ನಡಿಗೆ ಶುರುಮಾಡಿದೆ.

ಹೆದ್ದಾರಿ ಹಿಡಿದು ಟೋಲ್ಗೇಟ್ ದಾಟಿ ಸುಮಾರು ಆರು ಮೈಲು ನಡೆದು ಕೂನಿಮೆಲ್ಲಹಳ್ಳಿಯ ಶಾಲೆಯ ಆವರಣ ತಲುಪಿದೆ. ಆವರಣವೆಲ್ಲಾ ಮಳೆಯಿಂದ ಒದ್ದೆಯಾಗಿತ್ತು. ಸಿಕ್ಕ ಒಬ್ಬ ಶಿಕ್ಷಕನಿಗೆ ನನ್ನ ವಿಚಾರ ತಿಳಿಸಿದೆ. ನನ್ನನ್ನು ಹತ್ತು ನಿಮಿಷ ಕಾಯಿಸಿದ ನಂತರ ನನ್ನ ದಾಖಲೆಗಳನ್ನು ಪರಿಶೀಲಿಸಿ, ನನಗೆ ಆಘಾತವಾಗುವಂತೆ ಒಂದು ಮಾತು ಹೇಳಿದ.

“ಸರ್ರಾ, ನಿಮ್ಗಾ ಅವಕಾಶ ಕೊಡಾಕ್ ಆಗೊಲ್ಲ್ರೀ. ಒಂದ್ ಕೆಲಸ ಮಾಡ್ರಿ. ನಾವ್ ನಿಮ್ಗಾ ಒಂದು ಅಭಿನಂದನಾ ಪತ್ರವನ್ನ ಕೊಟ್‍ಬಿಡ್ತೀವಿ. ನೀವ್ ತಗೊಂಡು ಮುಂದಿನ ಶಾಲೆಗೆ ಹೊರಟ್ ಬಿಡಿ” ಎಂದು ಹೇಳಿ ಬಿಡೋದೆ.

ನನ್ನ ಕೋಪ ನೆತ್ತಿಗೇರಿತು. “ನಾನು ಬಿಸಿಲಿನಲ್ಲಿ ಒಣಗಿ, ಮಳೆಯಲ್ಲಿ ನೆನೆದು ಶಾಲೆಗಳನ್ನು ತಿರುಗಿ ಉಪನ್ಯಾಸ ಕೊಡುತ್ತಿರುವುದಕ್ಕೆ ಶಾಲೆಯವರು ಮೆಚ್ಚಿ ನನಗೆ ಕೊಡುತ್ತಿರುವ ಅಭಿನಂದನಾ ಪತ್ರ ಅದು. ನಾನೇ ಕಾಡಿ ಬೇಡಿ ಪಡೆದಂತಹುದಲ್ಲ. ಆ ಪತ್ರಗಳಿಂದ ನನಗೇನು ಉಪಯೋಗ? ನಿಮ್ಮ ಪತ್ರವನ್ನು ಹಿಡಿದುಕೊಂಡು ಹೋಗಿ ಪದ್ಮಶ್ರಿ ಪ್ರಶಸ್ತಿ ಪಡೆಯಲಾಗುತ್ತದೆಯೇ? ನನ್ನ ಮೂಲ ಉದ್ದೇಶ ಪತ್ರ ಪಡೆಯುವುದಲ್ಲ. ಜಾಗೃತಿ ಮೂಡಿಸುವುದು. ನೀವು ಉಪನ್ಯಾಸಕ್ಕೆ ಅವಕಾಶ ಕೊಡದೆ, ಬರೀ ಪತ್ರ ಕೊಟ್ಟರೆ ನಿಮ್ಮ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಿದಂತಾಗುತ್ತದೆಯೇ? ಸರಿ ಬಿಡಿ. ನಾನು ಮುಂದಿನ ಶಾಲೆಗೆ ಹೋಗುತ್ತೇನೆ. ನನ್ನ ಸಮಯವನ್ನು ವ್ಯರ್ಥ ಮಾಡುವುದಿಲ್ಲ” ಎಂದು ಎದ್ದು ಹೊರಡಲು ಸಿದ್ಧನಾದೆ.

ಅವನೇ ಸುಧಾರಿಸಿಕೊಂಡು “ಸರಿ, ಒಂದ್ ತರಗತೀಗ ಉಪನ್ಯಾಸ ಮಾಡಲು ಅವಕಾಶ ಮಾಡಿಕೊಡ್ತೀನಿ” ಎಂದು ಹೇಳಿ ಒಲ್ಲದ ಮನಸ್ಸಿನಿಂದ ಕರೆದುಕೊಂಡು ಹೋದ. ಒಂಬತ್ತನೆ ತರಗತಿಗೆ ಉಪನ್ಯಾಸ ಕೊಡುತ್ತಿರುವಾಗ ಅವನು ಕೂಡ ಅಲ್ಲೇ ಕುಳಿತು ವಿದ್ಯಾರ್ಥಿಗಳನ್ನು ಪ್ರಶ್ನೆಯ ಮೇಲೆ ಪ್ರಶ್ನೆ ಕೇಳಿ ನನ್ನ ಉಪನ್ಯಾಸ ಸರಿಯಾಗಿ ನಡೆಯದಂತೆ ನೋಡಿಕೊಂಡ. ಯಥಾಃ ರಾಜಃ ತಥಾಃ ಪ್ರಜಾಃ ಎಂಬಂತೆ ಶಿಕ್ಷಕನಂತೆಯೇ ಮಕ್ಕಳೂ ಕೂಡ ನನ್ನ ಉಪನ್ಯಾಸಕ್ಕೆ ಒಂದು ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ. ಉಪನ್ಯಾಸ ಮುಗಿಸಿ, ಆ ಮಹಾತ್ಮನಿಗೆ ನಮಸ್ಕಾರ ಹೇಳಿ, ಯಾವ ಅಭಿನಂದನಾ ಪತ್ರವನ್ನು ನಿರೀಕ್ಷಿಸದೆ ಅಲ್ಲಿಂದ ಹೊರಟೆ.

ಮನಸ್ಸು ಯೋಚನಾಭರಿತವಾಗಿತ್ತು. ಅಲ್ಲಿಂದ ಮೂರು ಮೈಲಿನಲ್ಲಿ ಒಂದು ಅನುದಾನಿತ ಶಾಲೆಯಿತ್ತು. ಸಮಯವಾದ್ದರಿಂದ ಶಾಲೆ ಮುಚ್ಚಿತು. ನನಗೆ ಆ ಹಳ್ಳಿಯಲ್ಲಿ ರಾತ್ರಿ ಉಳಿದು, ಬೆಳಿಗ್ಗೆ ಎದ್ದು ಶಾಲೆಯಲ್ಲಿ ಉಪನ್ಯಾಸ ಕೊಟ್ಟು ಹೋಗಬೇಕೆಂಬ ಯೋಚನೆ ಇತ್ತು. ಆದರೆ ಕಿವಿಯಲ್ಲಿ ಕೂನಿಮೆಲ್ಲಹಳ್ಳಿಯ ಶಿಕ್ಷಕನ ಮಾತುಗಳು ಗುಣುಗುತ್ತಿದ್ದರಿಂದ ಮನಸ್ಸು ಭಾರವಾಗಿತ್ತು. ದೂರದಲ್ಲಿ ಕಾಣುತ್ತಿದ್ದ ಹಾವೇರಿ ನಗರ ನನ್ನನ್ನು ಆದರದಿಂದ ಸ್ವಾಗತಿಸಲು ಅಣಿಯಾಗುತ್ತಿತ್ತು. ಅದರ ಕಡೆಗೆ ವೇಗವಾಗಿ ನಡೆಯತೊಡಗಿದೆ. ಒಂದು ಮೂರು ಮೈಲುಗಳು ನಡೆಯುವದೊರೊಳಗೆ ವರದಾ ನದಿಯ ವಿಶಾಲತೆ ಕಣ್ಣಿಗೆ ಬಿತ್ತು. ಒಂದು ಮರದ ಕೆಳಗೆ ಅದರ ಹರಿವಿನ ಸದ್ದನ್ನು ಕೇಳುತ್ತಾ ಕುಳಿತೆ. ಮನಸ್ಸಿನೊಳಗೆ ಯೋಚನೆಗಳ ಜ್ವಾಲಾಮುಖಿ ಎದ್ದಿತ್ತು.

monkeyಅದನ್ನು ತಣ್ಣಗಾಗಿಸಲು ಕೆಳಗೆ ಇಳಿದು ವರದಾ ನದಿಯಲ್ಲಿ ಕೈ ಕಾಲು ಮುಖ ತೊಳೆಯುತ್ತಿರುವಾಗ, ಅದೇ  ನೀರಿನಲ್ಲಿ ಎಮ್ಮೆಗಳ ಮೈ ತಿಕ್ಕುತಿರುವುದನ್ನು ಕಂಡೆ. ಈ ಜಗತ್ತಿನಲ್ಲಿ ಸೂಕ್ಷ್ಮತೆಯನ್ನು ದೂರಕ್ಕೆ ಎಸೆದು, ಎಮ್ಮೆ ಚರ್ಮವನ್ನು ಧರಿಸಿದರೆ ಮಾತ್ರ ಜೀವಿಸಲು ಸಾಧ್ಯವಾಗಬಹುದು ಎನಿಸಿತು. ಕತ್ತಲಾಗುವುದರೊಳಗೆ ಹಾವೇರಿ ಸೇರಿಬಿಡಬೇಕೆಂದು, ಎದ್ದು ನಡೆಯಲು ಶುರುಮಾಡಿದೆ. ಸ್ವಲ್ಪ ದೂರ ನಡೆಯುವಷ್ಟರಲ್ಲಿ ಒಂದು ಟ್ರಾಕ್ಟರ್ ನನ್ನ ಮುಂದೆ ಬಂದು ನಿಂತಿತು. ಯಾರಪ್ಪ ಮಹಾಶಯ ಎಂದು ನೋಡಿದರೆ, ನೆನ್ನೆ ಭೂಮಿಯಲ್ಲಿ ರಸಗೊಬ್ಬರ ಹಾಕುತ್ತಿದ್ದ ರೈತ ರಮೇಶ. ಪಕ್ಕದ ಊರಿಗೆ ಕೆಲಸದ ಮೇಲೆ ಹೋಗುತ್ತಿದ್ದ.

ಒತ್ತಾಯ ಮಾಡಿ ಅವನು ಹೋಗುತ್ತಿದ್ದ ಊರಿನ ಬಾಗಿಲಿನ ತನಕ ಬಿಟ್ಟು ಹೊರಟ. ಅವನಿಗೆ ಕೃತಜ್ಞತೆ ಸಲ್ಲಿಸಿ, ಅಲ್ಲಿಂದ ಮುಂದೆ ಹೊರಟೆ. ಒಂದು ಮೂರು ಮೈಲು ನಡೆಯುವಷ್ಟರಲ್ಲಿ ನನ್ನ ಪಾದಗಳು ಉರಿಯುತ್ತಿದ್ದವು. ರಸ್ತೆ ಬದಿಯ ಅಂಗಡಿಯಲ್ಲಿ ಕುಳಿತು ಚಹಾ ಕುಡಿದು, ಪಾದರಕ್ಷೆಗಳನ್ನು ಬಿಚ್ಚಿ ಸ್ವಲ್ಪ ಸಮಯ ಪಾದಗಳಿಗೆ ವ್ಯಾಯಾಮ ಮಾಡಿ ವಿಶ್ರಮಿಸಿದೆ. ಹಾಗೇ ಹೊರಗಿನ ಶಾಲಾ ಕಾಲೇಜು ಆಸ್ಪತ್ರೆಗಳ ಕಟ್ಟಡಗಳನ್ನು ದಾಟಿ, ನಗರವನ್ನು ಹೊಕ್ಕಿದೆ.

ಕೆಲವು ಹೋಟೆಲ್‍ಗಳು ಕಾಣಿಸಿದವು. ಪಿ.ಬಿ ರಸ್ತೆಯಲ್ಲಿರುವ ಶಿವಶಕ್ತಿ ಪ್ಯಾಲೆಸ್‍ನಲ್ಲಿ ಹೋಗಿ ವಿಚಾರಿಸಿದೆ. ಇಬ್ಬರು ಉಳಿದುಕೊಳ್ಳುವ ಸಾಮಾನ್ಯ ಕೋಣೆಗೆ 650 ರೂಪಾಯಿಗಳು ಎಂದು ತಿಳಿಯಿತು. ಹೋಗಿ ನೋಡಿದರೆ, ಎಲ್ಲಾ ಸೌಕರ್ಯಗಳಿರುವ, ಸ್ವಚ್ಛವಾದ, ಕನಿಷ್ಟ ನಾಲ್ಕು ಜನ ಉಳಿದುಕೊಳ್ಳುವಂತಹ ವಿಶಾಲವಾದ ಕೋಣೆ. ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಮೈಸೂರಿನಲ್ಲಿ ಇಂತಹ ಕೋಣೆಯ ಬಾಡಿಗೆ ಕನಿಷ್ಟ 1500 ರೂಪಾಯಿ. ಸರಿ 1000 ರೂಪಾಯಿ ಮುಂಗಡ ನೀಡಿ, ಕೋಣೆ ಪಡೆದು ಕೈಕಾಲು ಮುಖವನ್ನು ತೊಳೆದು, ಬಟ್ಟೆ ಒಗೆದು, ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರೋ ಕಬ್ಬಡಿ ಲೀಗ್‍ನ ಬೆಂಗಳೂರು ತಂಡದ ಪಂದ್ಯವನ್ನು ವೀಕ್ಷಿಸಿದೆ.

ಕಳೆದೆರಡು ರಾತ್ರಿಯಿಂದ ನನ್ನ ಖರ್ಚು ವೆಚ್ಚ ಹೆಚ್ಚತೊಡಗಿತ್ತು. ರಾತ್ರಿ ಉಳಿಯಲು ಸಾವಿರಾರು ರೂಪಾಯಿ ಖರ್ಚಾಗುವ ಆತಂಕ ಮೂಡಿತು. ಈ ವಿಷಯದಲ್ಲಿ ಧಾರವಾಡ-ಹುಬ್ಬಳ್ಳಿಯ ಜನರು ನನ್ನ ಮನಸನ್ನು ಗೆದ್ದಿದ್ದರು. ಅವರ ಜಿಲ್ಲೆಯನ್ನು ದಾಟುವರೆಗೂ ಆತ್ಮೀಯವಾಗಿ ನನ್ನ ಊಟ, ವಸತಿ ವ್ಯವಸ್ಥೆಯನ್ನು ನೋಡಿಕೊಂಡು ನನ್ನ ಪಯಣಕ್ಕೆ ಸಹಕರಿಸಿದ್ದರು. ನನ್ನ ಕಿಸೆಯಿಂದ ಒಂದು ರೂಪಾಯಿಯೂ ಖರ್ಚಾಗದಂತೆ ಶ್ರಮವಹಿಸಿ, ಅಲ್ಲಿಯ ತನಕ ಆಗಿದ್ದ ಖರ್ಚು ವೆಚ್ಚಗಳನ್ನು ತುಂಬಿಕೊಡುತ್ತಿದ್ದರು. ಆ ಜಿಲ್ಲೆಯನ್ನು ದಾಟಿದ ಮೇಲೆ, ಅಲ್ಲಿ ಸಿಕ್ಕಿದ್ದ ಪ್ರೀತಿ ವಿಶ್ವಾಸ ತಿಳಿಯಾಗುತ್ತಾ ಹೋದವು. ಕೊನೆಗೆ ಒಬ್ಬ ಭ್ರಷ್ಟ ಶಿಕ್ಷಕನನ್ನು ನೋಡುವ ಮಟ್ಟಿಗೆ ಇಳಿಯಿತು. ಇನ್ನು ಮುಂದಿನ ದಾರಿ ಅಷ್ಟು ಸುಗಮವಿರುವುದಿಲ್ಲವೆಂದು ತಿಳಿಯಿತು. ಊಟಕ್ಕೆ ಒಂದು ಉತ್ತರ ಭಾರತದ ತಾಲಿ ತರಿಸಿ ಊಟಮಾಡಿ, ಟಿವಿ ನೋಡುತ್ತಾ ಹಾಗೇ ನಿದ್ರೆಗೆ ಜಾರಿದೆ.

ಮಾತು ಒರಟು, ಮೃದು ಮನಸ್ಸು

ಕೊಳಕು ಹಳ್ಳಿಯ ಸ್ವಚ್ಛಂದ ಪ್ರೀತಿ

ಪುಟ್ಟ ಮನೆಯ ಅವಿಭಕ್ತ ಕುಟುಂಬ

ಅತ್ತ ಶರಣರು, ಇತ್ತ ಮುಸಲ್ಮಾನರು

ಅಡಿಕೆ ಜಗಿಯುವ, ರೊಟ್ಟಿ ಅಗಿಯುವ ಕಾಯಕಯೋಗಿಯ ನೋಡಾ,

ಕೈಬೀಸಿ ಕರೆಯುತಿದೆ ನಿನ್ನ ಹುಬ್ಬಳ್ಳಿ-ಧಾರವಾಡ

[ಇಲ್ಲಿಯ ತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ = 121 ಮೈಲುಗಳು]

‍ಲೇಖಕರು Admin

June 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. sarvesh

    ನಮ್ಮ ಉತ್ತರಕರ್ನಾಟಕದ ಮಂದಿ ಅಂದ್ರ ಹಂಗರೀ ನೋಡಕ ಒರಟು, ಮನಸು ತುಂಬ ಪ್ರೀತಿ. ನಿಮ್ಮ ಈ ಬರಹ ಇಷ್ಟ ಆಯ್ತು ಸಾರ್.

    ಪ್ರತಿಕ್ರಿಯೆ
    • ರಾದ

      ಧನ್ಯವಾದಗಳು ಸರ್ವೇಶ್. ಅಲ್ಲಿಯ ಜನ ಎಷ್ಟು ಇಷ್ಟವಾಗಿದ್ದರೆಂದರೆ, ವಾಪಸ್ಸು ಮೈಸೂರಿಗೆ ಬಂದೊಡನೆಯೇ ಧಾರವಾಡದಲ್ಲಿ ಹೋಗಿ ನೆಲೆಸುವ ಯೋಚನೆಯನ್ನು ನನ್ನ ಅರ್ಧಾಂಗಿಗೆ ತಿಳಿಸಿದ್ದೆ. ಅವಳ ಉತ್ತರವನ್ನು ನೀವೇ ಊಹಿಸಿಕೊಳ್ಳಬಹುದು? 😉

      ಹೆಜ್ಜೆ ಹೆಜ್ಜೆಗೂ ನಮ್ಮ ಜೊತೆಯಿದ್ದು ಸಹಕರಿಸಿ. ಹಿಂದಿನ ಮತ್ತು ಮುಂದೆ ಬರುವ ಅಧ್ಯಾಯಗಳನ್ನು ಓದಿ. ಇಷ್ಟಪಟ್ಟರೆ ನಿಮ್ಮ ಸ್ನೇಹಿತರಿಗೂ ತಿಳಿಸಿ.

      ಪ್ರತಿಕ್ರಿಯೆ
  2. Pradeep K S

    Namma lekhakarige yelli yava oorige hodaru sahodariyara preethi sigutthale ede…. Shikshaka Shikshakiyaragali athava vidhyarthigalagali nimmadu aste dodda brathrithva. Vandanegalu.

    ಪ್ರತಿಕ್ರಿಯೆ
    • ರಾದ

      ನಿಮ್ಮ ಮಾತಿನ ಒಳ ಅರ್ಥ ನಮಗೆ ಬಹಳ ನಗು ತಂದಿದೆ. ತಮಗೂ ಧನ್ಯವಾದಗಳು.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: