ಎ೦ ಎಸ್ ಮೂರ್ತಿಯವರ ರೇಖಾ-ಕಾವ್ಯವನ್ನು ಪ್ರಕಟಿಸಿದ್ದೆವು. (ಅದನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ). ಅದರ ಒ೦ದು ಚಿತ್ರ ರವಿ ಮೂರ್ನಾಡು ಅವರ ಮನದಲ್ಲಿ ಕವಿತೆಯಾಗಿದ್ದು ಹೀಗೆ :
ಇದೊ೦ದು ರೇಖೆ
– ರವಿ ಮೂರ್ನಾಡು, ಕ್ಯಾಮರೂನ್
ಏನನ್ನೋ ಹುಡುಕಿ ಬಾಡಿವೆ ಕಂಗಳು
ಅನುಭವಕ್ಕೆ ಸಿಕ್ಕ ಸುಕ್ಕುಗಳಲಿ
ಕೆದರಿ ಸೋತಿವೆ ಬಿಳಿ ಕೂದಲು
ತಬ್ಬಿಕೊಂಡ ಜೋಡಿ ಬೈತಲೆ ಮೈಗಳು
ಆಗಾಗ್ಗೆ ಬೆದರಿ ನೋಡುತ್ತಿವೆ
ಹಿಂಬದಿ ತಬ್ಬಿದ ನೆರಳುಗಳು
ಬೆತ್ತಲೆ ಬೆನ್ನಿನ ಹುಟ್ಟು ನರಗಳಲಿ
ಮೆಟ್ಟಿಲ ಹುಡುಕಿವೆ ಜಡೆಗಳು
ಇದೀಗ ಮೂರ್ತವಾಯಿತು
ಮಲಗಿ ಸಪೂರ ಬೆಟ್ಟದೆಗಲಿಗೆ
ಚಾಚಿ ಎಡೆಮುರಿ ಕಟ್ಟಿ ಕೈಕಾಲು
ಇದೊಂದು ರೇಖೆ
ಮೂರಡಿಗೆ ಅಳೆದ ಕೋಲು
ಬಿಳಿಗೂದಲು-ಬೆತ್ತಲೆ ಮೈ
ಸಾವಾಧಾನಕೆ ಕುಳಿತಿದೆ
ಕುಳಿತಂತಿದೆ..
ಇನ್ನೇನು ಎತ್ತೋಯ್ಯುವರು.
]]>





ತೀವ್ರ ಭಾವಗಳ ನೇರ ನುಡಿಗಳಲ್ಲಿ ಬರೆಯುವ ರವಿ ಮೂರ್ನಾಡರು ನನಗೆ ಎಂದೂ ಆದರ್ಶ. ಬೆಂಗಳೂರಿಗರೇ ಕನ್ನಡವನ್ನು ಮರೆತು ಎನ್ನಡ ಎಕ್ಕಡ ಅಂತ ಓಡಾಡುತ್ತಿರುವ ಈ ವಿಷಮ ಕಾಲದಲ್ಲಿ ದೂರದ ಆಫ್ರಿಕಾದಿಂದ ಮೊರೆವ ಅವರ ಕನ್ನಡ ಕಂಠ ನಮಗೆಲ್ಲ ಅನುಕರಣೀಯ.
ಈ ಕವನವು ಯಾಕೋ ನನ್ನ ವೃದ್ಧಾಪ್ಯದ ಘೋರ ಭವಿಷ್ಯವನ್ನು ಬರೆದಿಟ್ಟಿರೇನೋ ಅನಿಸಿತು. ಯಾವ ಗಳಿಗೆಯಲ್ಲಿ ಯಾವುದು ಸತ್ಯವೋ ಅದೇ ಮೂರ್ತ ಅಂತಿಟ್ಟುಕೊಂಡರೆ ಈ ಪರಿಯ ಪ್ರೇಮದ ಅಮೂರ್ತತೆಯೂ ಬಲು ಕಾಡುತ್ತದೆ.
ನನ್ನನ್ನು ತೀವ್ರ ಚಿಂತನೆಗೆ ಹೊತ್ತೊಯ್ಯುವ ನಿಮ್ಮ ಬರಹ ಮತ್ತು ಕವನಗಳಿಗೆ ನನ್ನ ಶರಣು.