ನಡೆವ ಹಾದಿ…
ವೇಣು ಜಾಲಿಬೆಂಚಿ
ನಡೆದು ಹೋಗಬೇಕೆಂದು ಹೇಳಿ ಕಳಿಸಿದ್ದಾರೆ
ಇದೇ ದಾರಿಯಲ್ಲಿ ಎಲ್ಲರೂ ನಡೆದು ಹೋದ
ಇದೇ ಇದೇ ದಾರಿಯಲ್ಲಿ…
ಕಾಣುತ್ತಿಲ್ಲ ಹೆಜ್ಜೆಗಳು… ನೆರಳುಗಳೂ… ಮತ್ತಾವ ದನಿಗಳೂ..
ಆದರೂ ನಡೆದು ಹೋಗಬೇಕೆಂದು ಹೇಳಿ ಕಳಿಸಿದ್ದಾರೆ ಇದೇ ದಾರಿಯಲ್ಲಿ
ನಮ್ಮ ಬೆನ್ನು ನಮಗೆ ಕಾಣದೆಂದರೂ
ಕಾಣದ ಬೆನ್ನು ಹೊತ್ತುಕೊಂಡು ಎಷ್ಟು ಊರುಗಳು
ಸುತ್ತಿ ಬರಲಿಲ್ಲ ಹಾಗೆ ನಡೆದು ಹೋಗಬೇಕೆಂದು ಹೇಳಿ ಕಳಿಸಿದ್ದಾರೆ
ಇದೇ ದಾರಿಯಲ್ಲಿ
ಹಾದಿಬದಿ ಒಂದು ಮರವೂ ಇಲ್ಲ ನೆರಳಿಗೆ ಮೈಯೊಡ್ಡಲು ಆದರೂ ಊರು ತಲುಪುವ ತಲುಬು ಇರಲಿ ಜೊತೆ ಯಾವಾಗಲೂ
ಗುಡಿಯೊಳಗೆ ಆರದಂತೆ ದೀಪ ಬೆಳಗುತ್ತಲೇ ಇರುತ್ತದೆ ನಿಲ್ಲಬೇಡ ಎಲ್ಲೂ ನನ್ನಾಣೆ ನಡೆದು ಹೋಗಬೇಕೆಂದು ಹೇಳಿ ಕಳಿಸಿದ್ದಾರೆ
ಇದೇ ದಾರಿಯಲ್ಲಿ
ಕಾಲದ ಕಾಲುಗಳಿಗೆ ಯಾವತ್ತೂ ಗಾಯಗಳಾದ ಕುರುಹುಗಳಂತೂ ಇಲ್ಲ ಭವಿಷ್ಯ ಮರೆತು ಭೂತಕಾಲದಲಿ ಭೂಗತನಾಗಿ ವರ್ತಮಾನದಲ್ಲಿ ಕೊಳೆಯುತ್ತಿರುವ ಮನುಷ್ಯ ಗಟ್ಟಿ ಇತಿಹಾಸ ನಿರ್ಮಾಣ ಮಾಡುವವರೆಗೂ ನಡೆದು ಹೋಗಬೇಕೆಂದು ಹೇಳಿ ಕಳಿಸಿದ್ದಾರೆ ಇದೇ ದಾರಿಯಲ್ಲಿ
ಸಂಶಯದ ಪುಟಗಳು ಕಣ್ಣಮುಂದೆಯೇ ಸುಳಿದಾಡುತ್ತಿವೆ ನಾನು ಮರೆತೂ ಮನುಷ್ಯನಾಗುವ ದಾರಿಯಲ್ಲಿ ಸಾಗುತ್ತಿರುವೆನೋ? ಇಲ್ಲವೋ? ಎಂದು.
ಆದರೂ…
ನಡೆದು ಹೋಗಬೇಕೆಂದು ಹೇಳಿ ಕಳಿಸಿದ್ದಾರೆ ಇದೇ ದಾರಿಯಲ್ಲಿ ಇದೇ ಇದೇ ದಾರಿಯಲ್ಲಿ….!?






ಚೆನ್ನಾಗಿದೆ.
ಧನ್ಯವಾದಗಳು ತಮಗೆ..