ಇದೇನು ಅಸಾಧಾರಣ ಸಿನಿಮಾ ಅಲ್ಲ..

ಜಾತಿ ವೈಷಮ್ಯದಲ್ಲಿ ಕಮರುವ ಹರೆಯದ ಪ್ರೇಮ 

ರಾಜೀವ ನಾರಾಯಣ ನಾಯಕ

ಸಮಾಜವನ್ನು ವಿಭಜಿಸುವ ಭಾರತೀಯ ವರ್ಣವ್ಯವಸ್ಥೆಯು ಅದೆಷ್ಟು ಪ್ರೇಮಿಗಳ ಆಪೋಶನ ತೆಗೆದುಕೊಂಡಿದೆಯೋ! ಗ್ರಾಮ ಭಾರತದಲ್ಲಿ ಇನ್ನೂ ಉಳಿದುಕೊಂಡಿರುವ ಜಾತಿ ವ್ಯವಸ್ಥೆಗೆ ನಲಗುವ ಹರಯದ ಪ್ರೇಮದ ಕತೆಯನ್ನು ಹಿನ್ನಲೆಯಾಗಿಟ್ಟುಕೊಂಡ ಇತ್ತೀಚಿನ ಮರಾಠಿ ಚಿತ್ರವೊಂದು ಇಡೀ ಮಹಾರಾಷ್ಟ್ರದಲ್ಲಿ ಸಂಚಲನವನ್ನು ಉಂಟುಮಾಡುತ್ತಿದೆ. ನಾಲ್ಕು ಕೋಟಿಯಲ್ಲಿ ನಿರ್ಮಿಸಿದ ಈ ಸಿನಿಮಾ ಈ ವರೆಗೆ ತೊಂಬತ್ತು ಕೋಟಿಗೂ ಹೆಚ್ಚು ಲಾಭವನ್ನು ಗಳಿಸಿದೆ.

sairath2 ಈ ಚಿತ್ರದ ಯಶಸ್ಸನ್ನು ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಅಳೆಯುವುದಕ್ಕಿಂತ ಅದು ಜನರ ಮನಸ್ಸಿನಲ್ಲಿ ಬೀರಿದ ಗಾಢ ಪರಿಣಾಮದ ಹಿನ್ನಲೆಯಲ್ಲಿ ನೋಡಬೇಕಾದ ಅಗತ್ಯವಿದೆ. ಸಿನಿಮಾದ ಕಥಾವಸ್ತುವನ್ನು ಅತಿರಂಜಿಸದೇ ನಿರೂಪಿಸಿದ ರೀತಿ ಎಲ್ಲರ ಮೆಚ್ಚುಗೆ ಗಳಿಸಿದೆ.

ರಾತ್ರೋರಾತ್ರಿ ಖ್ಯಾತಿಯನ್ನೂ ಶ್ರೀಮಂತಿಕೆಯನ್ನೂ ಪಡೆದ ನಟನೆಯ ಗಂಧಗಾಳಿ ಗೊತ್ತಿಲ್ಲದ ಹಳ್ಳಿಯ ಬಡ ಹುಡುಗರ ಬಗ್ಗೆ ಜನರು ಕತೆಗಳಂತೆ ಮಾತಾಡಿಕೊಳ್ಳುತ್ತಿದ್ದಾರೆ. ಹಲವು ಮಾಧ್ಯಮಗಳ ಮೆರವಣಿಗೆಯ ಈ ಕಾಲದಲ್ಲೂ ಸಿನಿಮಾ ಲೋಕವೊಂದು ಅದೆಷ್ಟು ಸಶಕ್ತ ಮಾಧ್ಯಮ ಎನ್ನುವುದನ್ನುಈ ಚಿತ್ರ ಸಾಬೀತು ಮಾಡಿದೆ.

ಹಾಗೆ ನೋಡಿದರೆ ಕತೆಯಲ್ಲಿ ಹೊಸತೇನಿಲ್ಲ. ಬಡ ಹುಡುಗ-ಶ್ರೀಮಂತ ಹುಡುಗಿ, ಮೇಲ್ಜಾತಿಯ ಹುಡುಗಿ-ಕೆಳಜಾತಿಯ ಹುಡುಗ ಪ್ರೇಮದಲ್ಲಿ ಬೀಳುವುದು, ಜಾತಿ ಮತ್ತು ಅಂತಸ್ತಿನ ಪ್ರತಿಷ್ಠೆಯಲ್ಲಿ ಅಂಥ ಪ್ರೇಮ ಪಡಬಾರದ ಕಷ್ಟ ಪಡುವುದು-ನಮ್ಮ ಭಾರತೀಯ ಸಿನಿಮಾಗಳಲ್ಲಿ ಕತೆ-ಕಾದಂಬರಿಗಳಲ್ಲಿ ಸಾಮಾನ್ಯವೇ! ಆದರೆ ಸೈರಾಟ್ ಸಿನಿಮಾ ನಿರ್ದೇಶಕ ನಗರಾಜ್ ಮಂಜುಳೆ ಹಳೆಯ ಕತೆಗೆ ಹೊಸ ಸ್ಪರ್ಷ ನೀಡಿದ್ದಾರೆ.

ನಿರ್ದೇಶನದಲ್ಲಿ ಚುರುಕುತನ ಮತ್ತು ಲವಲವಿಕೆಯನ್ನು ತಂದಿದ್ದಾರೆ. ಮಾತು ಅಗತ್ಯವಿರದ ಕಡೆಯಲ್ಲಿ ಮೌನವಹಿಸಿದ್ದಾರೆ. ಕನಸು ಮತ್ತು ವಾಸ್ತವ ದೃಶ್ಯಗಳ ಹದ ಮಿಶ್ರಣ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಹರೆಯದ ಪ್ರೇಮದ ಪ್ರಾರಂಭದ ಎಳೆಸುತನ, ಹಿಂಜರಿಕೆ, ನವಿರುತನವನ್ನು ಇರುವ ಹಾಗೇ ಹಿಡಿದಿಟ್ಟಿದ್ದಾರೆ. ಈ ಅಂಶಗಳಿಂದಾಗಿಯೇ “ಸೈರಾಟ್” ನೋಡಿದಾಗ

ಕೃತ್ರಿಮ ಅನಿಸುವುದಿಲ್ಲ; ಆಪ್ತವಾಗುತ್ತದೆ ಮತ್ತು ಏನೋ ಹೊಸತನವಿದೆ ಅನಿಸುತ್ತದೆ.

sarath1ಈ ಚಿತ್ರದ ಹೆಗ್ಗಳಿಕೆಯೆಂದರೆ ಪ್ರೀತಿಯನ್ನು ವ್ಯಕ್ತಪಡಿಸಲು ಹೆಚ್ಚು ಮಾತುಗಳ ಮೊರೆಹೋಗದಿರುವುದು. ಹುಡುಗ ಮತ್ತು ಹುಡುಗಿ ನಡುವೆ ಪ್ರೀತಿಯಾದಾಗ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಸಹಜವಲ್ಲದ ಮಾತುಗಳಲ್ಲಿ ಅದನ್ನು ಅಭಿವ್ಯಕ್ತಿಸಲು ಪ್ರಯತ್ನಿಸಲಾಗುತ್ತದೆ. ಡೈಲಾಗ್ ಬರೆಯುವವರು ಅನ್ಯಲೋಕದ ಮಾತುಗಳನ್ನು ಪೋಣಿಸುತ್ತಾರೆ. ಆದರೆ ಇಲ್ಲಿ ಅಂಥ ಮಾತುಗಳು ವಿಜ್ರಂಭಿಸುವುದಿಲ್ಲ. ಐ ಲವ್ ಯು ಎಂದು ಕೂಡ ಹೇಳಲಾಗದ ಬಡ ಮೀನುಗಾರ ಹುಡುಗ ಪರ್ಸ್ಯಾ. ’ನೀನಂದ್ರೆ ತುಂಬಾ ಇಷ್ಟ ಕಣೆ” ಎಂಬುದನ್ನು ಬಹಳ ಕಷ್ಟದಿಂದ ಮಾತ್ರ ಹೇಳಲು ಸಾಧ್ಯ ಅವನಿಗೆ. ತನ್ನ ಕನಸಿನ ಹುಡುಗಿ ತನ್ನೆದುರು ಇರುವಾಗಲೂ ಅದು ವಾಸ್ತವ ಎಂದು ನಂಬುವುದು ಅವನಿಗೆ ಸಾಧ್ಯವಾಗದು.

ಆದರೆ ಅವಳತ್ತ ಅಗಾಧ ಸೆಳೆತ ಇಟ್ಟುಕೊಂಡವನು. ಅದನ್ನು ತನ್ನ ಭಾವಾಭಿನಯದಲ್ಲೇ ಹೇಳಬಲ್ಲವನು. ಆಕೆ “ಆರ್ಚಿ” ಹೆಸರಿನ ಶ್ರೀಮಂತ ಮೇಲ್ಜಾತಿಯ ಹುಡುಗಿ. ಹಳ್ಳಿಯ ಪಾಳೆಗಾರಿಕೆಯ ಕುಟುಂಬದಲ್ಲಿ ಬೆಳೆದ ಹಿನ್ನಲೆಯಿಂದಾಗಿ ಅವಳಲ್ಲಿ ದರ್ಪವಿದೆ. ಆದರೆ ಅದು ಅಮಾಯಕರಿಗೆ ಅನ್ಯಾಯವಾದಾಗ ಸೆಟೆದು ನಿಲ್ಲುವ ಎದೆಗಾರಿಕೆಯನ್ನೂ ನೀಡಿದೆ. ಕುಂತಲ್ಲಿ ನಿಂತಲ್ಲಿ ಕೆಲಸದಲ್ಲಿ ಕಾಲೇಜಿನಲ್ಲಿ ಆರ್ಚಿಯ ಕನಸನ್ನು ಕಣ್ಣುಗಳಲ್ಲಿ ತುಂಬಿಕೊಳ್ಳುವ ಪರ್ಸ್ಯಾನ ಮೇಲೆ ಆರ್ಚಿಗೂ ಕ್ರಮೇಣ ಅನುರಾಗ ಮೊಳೆಕೆಯೊಡೆಯುತ್ತದೆ. ಅದನ್ನು ಬಹಿರಂಗವಾಗಿ ಅಭಿವ್ಯಕ್ತಿಸುವ ಛಾತಿಯನ್ನೂ ತೋರುತ್ತಾಳೆ. ದಾಕ್ಷಿಣ್ಯದ ಹುಡುಗ ಪರ್ಸ್ಯಾನ ಜೊತೆ ಪ್ರೀತಿ ತೀರದಲ್ಲಿ ವಿಹರಿಸುವ ಧೈರ್ಯವನ್ನೂ ಮಾಡುತ್ತಾಳೆ.

ನಿರೀಕ್ಷಿಸಿದಂತೆಯೇ ಊರಿನ ಜಮೀನುದಾರ, ರಾಜಕಾರಣಿಯಾದ ಆರ್ಚಿಯ ಅಪ್ಪನ ವಿರೋಧ ಎದುರಾಗುತ್ತದೆ. ಸ್ವಪ್ರತಿಷ್ಠೆಯ  ಅಮಲಿನಲ್ಲಿ ಎಳೆಯ ಪ್ರೀತಿಯನ್ನು ಮುರಿಯಲು ಸಾಧ್ಯವಿರುವುದನೆಲ್ಲ ಮಾಡುತ್ತಾನೆ. ಯುವಪ್ರೇಮಿಗಳು ತಮ್ಮಊರು  ಬಿಟರ್‌ಗಾಂವ್‌ನಿಂದ ಅದು ಹೇಗೋ ತಪ್ಪಿಸಿಕೊಂಡು ಅಲೆಯುತ್ತಾ ಹೈದರಾಬಾದ್  ತಲುಪುತ್ತಾರೆ. ಅಲ್ಲಿಂದ ಅವರ ಪ್ರೀತಿಯ ಇನ್ನೊಂದು ಮಜಲು ಶುರುವಾಗುತ್ತದೆ. ಹರೆಯದ ಉನ್ಮಾದದ ಪ್ರೀತಿಯು ಕಷ್ಟದ ಸಂದರ್ಭಗಳಲ್ಲಿ ಪರೀಕ್ಷೆಗೊಳಗಾಗುತ್ತದೆ.

ಪ್ರೀತಿಯೇ ಬೇರೆ ಬದುಕೇ ಬೇರೆ ಎನ್ನುವ ವಿಭಾಜಕ ಗಡಿಯಲ್ಲಿ ಅವರನ್ನು ನಿಲ್ಲಿಸುತ್ತದೆ. ಆದರೆ ನೈಜ ಪ್ರೀತಿಗೆ ಅದನ್ನೂ ದಾಟುವ ಶಕ್ತಿಯಿರುತ್ತದೆ! ಅನುಮಾನ ಅವಮಾನಗಳ ಉರಿಕೊಂಡವನ್ನು ಹಾಯುವ ಅವರ ಪ್ರೇಮವು ಇನ್ನಷ್ಟು ಸ್ಪುಟಗೊಳ್ಳುತ್ತದೆ. ಪ್ರೀತಿಯ ನೂಲಿನಲ್ಲಿ ಅದು ಹೇಗೋ ಬದುಕನ್ನೂ ನೇಯ್ದುಕೊಂಡು ಗಂಡ ಹೆಂಡತಿ ಮಗು ಮನೆಯೊಂದಿಗೆ ಇನ್ನೇನು ಚಿತ್ರ ಸುಖಾಂತ್ಯಗೊಳ್ಳಲಿದೆ ಎನ್ನುವಾಗಲೇ ಕ್ಲೈಮ್ಯಾಕ್ಸನ ದುರಂತ  ವೀಕ್ಷಕರನ್ನು ಅಲುಗಾಡಿಸಿಬಿಡುತ್ತದೆ. ಜಾತಿ,ಅಂತಸ್ತು, ಪ್ರತಿಷ್ಠೆಗೆ ಕೊನೆಗೂ ಕೊರಳು ಮುರಿದು ಬೀಳುವ ಪ್ರೀತಿ ಮನಸಿನಲ್ಲಿ ಗಾಢ ಪರಿಣಾಮ ಬೀರುತ್ತದೆ.

sairath3ನಿರ್ದೇಶಕ ನಾಗರಾಜ್ ಮಂಜುಳೆ ಸಹಜ ಪ್ರೀತಿಯನ್ನು ಕಮರಿಸುವ ಕ್ರೂರ ವ್ಯವಸ್ಥೆಯ ವಿರುದ್ಧದ ಸಂದೇಶವನ್ನು ಮನಪರಿವರ್ತನೆಯ ಧಾಟಿಯಲ್ಲಿ ನಿರೂಪಿಸಿದ್ದಾರೆ. ಚಿತ್ರದಲ್ಲಿ ಅಭಿನಯಿಸಿದ ಹುಡುಗ ಹುಡುಗಿಯರನ್ನು ಹಳ್ಳಿಗಳಲ್ಲಿ ಹುಡುಕಾಡಿ ತಂದು, ಅವರನ್ನು ಆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿಸಿದ್ದಾರೆ. ಆರ್ಚಿಯಾಗಿ ಅಭಿನಯಿಸಿದ ರಿಂಕು ರಾಜಗುರು ಎನ್ನುವ ಬಡ  ಕುಟುಂಬದ ದಲಿತ ಹುಡುಗಿ ಇಂದು ಸ್ಟಾರ್ ಆಗಿಬಿಟ್ಟಿದ್ದಾಳೆ.

ಹತ್ತನೆ ತರಗತಿಯಲ್ಲಿರುವ ಈಕೆಯ ಅಭಿನಯ ಅಧ್ಬುತವಾಗಿದೆ. ಪರ್ಸ್ಯಾನ ಪಾತ್ರಧಾರಿ ಆಕಾಶ್ ಕೂಡ ಮೆಚ್ಚುಗೆ ಗಳಿಸುತ್ತಾನೆ. ಬಾಕಿ ಸಿನಿಮಾಗಳಲ್ಲಿಯ ಹಾಗೆ ಈ ಹೀರೋ ತಮ್ಮನ್ನು ತಡೆಯಲು ಬಂದ ದೈತ್ಯಪಡೆಯನ್ನು ನಜ್ಜುಗುಜ್ಜು ಮಾಡುವ ಹೀರೋ ಅಲ್ಲ. ಅಸಹಾಯಕತೆಯಲ್ಲೂ. ತನ್ನೆದೆಯೊಳಗಿಟ್ಟುಕೊಂಡ ಪ್ರೀತಿಯಿಂದಲೇ ಅವನು ಹೀರೋ ಆಗುವುದು! ಅವನ ಗೆಳೆಯರಾಗಿ ಅಭಿನಯಿಸಿದ ಪ್ರದೀಪ್, ಸಲೀಮ್ ಮುಂತಾದ ಹುಡುಗರು ಕೂಡ ಹಳ್ಳಿಯಲ್ಲಿ “ಯಾರೋ” ಆಗಿದ್ದವರು. ಇಂದು ಅವರೆಲ್ಲ ಲಕ್ಷಾಂತರ ಜನ ಅಭಿಮಾನಿಗಳನ್ನು ಪಡೆದಿದ್ದಾರೆ.

ಇದೇನು ಅಸಾಧಾರಣ ಸಿನಿಮಾ ಅಲ್ಲ. ಕತೆ ಕೂಡ ನಾವು ಕೇಳದಂಥದ್ದೂ ನೋಡದಂಥದ್ದೂ ಅಲ್ಲ. ಮೂರು ತಾಸಿನವರೆಗೆ ಎಳೆಯಬೇಕಾದ ಸಿನಿಮಾವೂ ಅಲ್ಲ. ಆದರೆ ಚಿತ್ರಕ್ಕೆ ಜನರನ್ನು ಮೋಡಿ ಮಾಡುವ ಗುಣವೊಂದು ದಕ್ಕಿಬಿಟ್ಟಿದೆ. ಚಿತ್ರದ ಯಶಸ್ಸು ಇರುವುದು ನೋವಿನ ಭಿತ್ತಿಯಲ್ಲಿ ಪ್ರೀತಿಯ ನಿರಂತರತೆಯನ್ನು ವಿನ್ಯಾಸಗೊಳಿಸಿರುವುದು; ಸಹಜ  ದೃಶ್ಯಗಳಲ್ಲಿಯೇ ಬದುಕಿನ ಸನ್ನಿವೇಶಗಳನ್ನು ಕಟ್ಟಿಕೊಟ್ಟಿರುವುದು. ಸಿನಿಮಾದಲ್ಲಿಯ ಪ್ರೇಮವನ್ನು ವಿಷಾದದಲ್ಲಿ ಅಂತ್ಯಗೊಳಿಸಿದರೂ ವೀಕ್ಷಕರ ಎದೆಯಲ್ಲಿ ಪ್ರೀತಿಯ ಹಣತೆಯನ್ನು ಹಚ್ಚುವಲ್ಲಿ ನಿರ್ದೇಶಕರು ಯಶಸ್ವಿಯಾಗುತ್ತಾರೆ!

 

‍ಲೇಖಕರು Admin

June 27, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: