-ವೀರೇಂದ್ರ ರಾವಿಹಾಳ್
ಮೈಕು
ಮೈಕು
ಕೇವಲ ಮೈಕಲ್ಲ.
ಸೂಜಿಗಲ್ಲು
ಮನ ಮನವ ಸೆಳೆವ ಅಯಸ್ಕಾಂತ.
ಒಮ್ಮೆ
ತುಟಿಗೆ ಅಂಟಿಕೊಂಡರೆ ಸಾಕು,
ಬಿಡಿಸಿಕೊಳ್ಳುವುದೇನಷ್ಟು ಸುಲಭವಲ್ಲ.
ಕೆಲವರಿಗೆ
ಇದೊಂದು ಮೋಹ,
ವ್ಯಸನ,
ಅಧಿಕಾರದ ಮೆಟ್ಟಿಲು.
ಮಾತು ಆರಂಭವಾದರೆ
ಎಲ್ಲಿ ನಿಲ್ಲಿಸಬೇಕೆಂಬುದೇ ಮರೆತುಹೋಗುತ್ತದೆ;
ಪದಗಳು ಹರಿಯುವುದಿಲ್ಲ,
ಮುರಿದುಬೀಳುತ್ತವೆ.
ಮೂಗನಿಗೂ
ಮಾತು ಕಲಿಸುವ ಈ ಮೈಕು,
ಮಾತು ಬಂದವನನ್ನು
ಮಹಾಶೂರನನ್ನಾಗಿ ತೋರ್ಪಡಿಸುತ್ತದೆ.
ಇಲ್ಲಿ
ಮಾತೊಂದಿದ್ದರೆ ಸಾಕು
ಸನ್ಮಾನ, ಹಾರ, ಶಾಲು, ಚಪ್ಪಾಳೆ,
ಮನೆಬಾಗಿಲಿಗೇ ಬಂದು ಬೀಳುತ್ತವೆ.
ಮಾತು ತಪ್ಪಿದರೂ
ಮಾತಿನ ಮೋಡಿ ತಪ್ಪದ ಕಾಲ.
ಮಾತಿನ ಮಲ್ಲರ
ಕೈಗೆ ಮೈಕು ಸಿಕ್ಕರೆ
ಸತ್ಯಕ್ಕೆ ಉಳಿಗಾಲವೆಲ್ಲಿ?
ಪುಂಡಪೋಕರಿಗಳು
ಮಾತಿನಲೇ ಮಹಲು ಕಟ್ಟುತ್ತಾರೆ.
ಕಳ್ಳ,
ಸುಳ್ಳುಗಾರ,
ಕೊಲೆಗಾರ,
ಲಂಪಟರೆಲ್ಲರೂ
ಮೈಕಿನ ಎದುರು
ಘನ ಸಂಭಾವಿತರೇ…
ಇದು ಮಾತು ಗೆಲ್ಲುವ ಕಾಲವಲ್ಲ
ಮೈಕು
ಗೆಲ್ಲುವ ಕಾಲ.






0 Comments