ನಾಗೇಶ ತಳವಾರ
ಇದು ನಮ್ಮೂರಿನ ಗಾಂಧಿ ಬಜಾರ್
ತಳಕು ಬಳಕು ಕೊಳಕು
ತುಂಬಿಕೊಂಡ ಬಜಾರ್
ಮಚ್ಚು ಚೂರಿ ಲಾಂಗು
ಮದ್ದು ಗುಂಡು ಬಂದೂಕು
ದಿನದ ಮುತ್ತೈದೆಯರು
ಬಂದು ಹೋಗುವ
ಸಾಲು ಸಾಲು ಶರಾಬಿನ ಅಂಗಡಿ ತೆರೆದು
ವ್ಯಾಪಾರ ಮಾಡುವ ಗಾಂಧಿ ಬಜಾರ್

ಕೈ ಕಾಲು ನೇತು ಹಾಕಿರುವ
ಕಣ್ಣು ಕಿವಿ ಬಾಯಿ…
ನನ್ನವರ ಚರ್ಮ ಸುಲಿದು
ತಕ್ಕಡಿಯಲ್ಲಿಟ್ಟು
ವ್ಯಾಪಾರ ಮಾಡುವ ಗಾಂಧಿ ಬಜಾರ್
ಕೂಗುವರ ಕತ್ತು ಸೀಳಿ
ಚಿರ್ ಎಂದು ನೆತ್ತರು ಹರಿಸಿದ್ದಾರೆ
ಸತ್ತು ಸುಮ್ಮನೆ ಗೋರಿಯೊಳಗೆ
ಮಲಗಿರುವವನೆಳೆದು ತಂದು
ವ್ಯಾಪಾರ ಮಾಡುವ ಬಜಾರ್
ಶಾಂತಿ ಶಾಂತಿ ಶಾಂತಿ
ಶಾಂತಿ ಶಾಂತಿ ಶಾಂತಿ






0 Comments