'ಆಫೀಸಲ್ಲಿ ನಾವು ಹೆಂಗಿರಬೇಕು ಗೊತ್ತಾ…?'

ನೀವು ಬದಲಾಗಿ,ಕಚೇರಿ ವಾತಾವರಣ ಬದಲಾಗುವುದು

ಪ್ರಪುಲ್ ಚಂದ್ರ ಎಸ್ .ಬಿ


ಅನಾಮತ್ತು 246 ಪುಟಗಳ W.T. ಜೋವೆಟ್ ಬರೆದಿರುವ Defense Mechanism ಎನ್ನುವ ಪುಸ್ತಕನನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವ ವೇಳೆಗೆ ಸರಿಯಾದ ಮಾರ್ಗದರ್ಶನ ಇಲ್ಲದೆ ನಮ್ಮ ಉದ್ಯೋಗಸ್ತರು ನರಳುತ್ತಿದ್ದಾರೆ ಅಂತ ಅನ್ನಿಸಿತು. ಇಂದಿನ ದಿನಮಾನಗಳಲ್ಲಿ ಒಂದು ಕೆಲಸ ಸಿಕ್ಕರೆ ಸಾಕು ಎನ್ನುವ ಮನಸ್ಥಿತಿ ನಮ್ಮ ಯುವಕರಲ್ಲಿ ಇರುತ್ತದೆ.ಹಾಗೆ ಕಷ್ಟಪಟ್ಟು ಹಾಗು ಸರಾಗವಾಗಿ ಸಿಕ್ಕ ಕೆಲಸದ ಕಚೇರಿಯ ಹೊಸ ವಾತವರಣಕ್ಕೆ ನಮ್ಮನ್ನು ನಾವು ಒಗ್ಗಿಕೊಳ್ಳುವಂತೆ ಮಾಡಿಕೊಳ್ಳುವುದು ಅಷ್ಟೆ ಕಷ್ಟದಾಯಕ. ಬದುಕಿನ ಒಂದು ಹಂತದಲ್ಲಿ ಸಾಕಷ್ಟು ಕಷ್ಟ ಅನುಭವಿಸಿ ಸರ್ಕಾರಿ / ಖಾಸಗಿ ಕೆಲಸ ಪಡೆದುಕೊಂಡಿರುತ್ತೇವೆ. ಮತ್ತೊಂದು ಹಂತದಲ್ಲಿ ಅದೇ ಕೆಲಸ ಕಷ್ಟಕರವಾಗಿ, ಕಚೇರಿಯ ಹಾಗು ಕುಟುಂಬದ ಸಮತೋಲನ ಕಳೆದುಕೊಳ್ಳುತ್ತೇವೆ ಅಲ್ವಾ ? ಹಾಗಾದರೆ ಇಂಥ ಪರಿಸ್ಥಿತಿಯಲ್ಲಿ ನಾವು ಹೇಗಿರಬೇಕು. ನಮ್ಮ ವರ್ತನೆ ಹೇಗಿರಬೇಕು ಎನ್ನುವ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

ಸಮಯಪರಿಪಾಲನೆ :-
” ನೀನು ಸಮಯ ಪಾಲಿಸು, ಸಮಯ ನಿನ್ನನ್ನು ಪೋಷಿಸುತ್ತದೆ ” ಎಂಬ ಉಕ್ತಿಯಂತೆ ಕಚೇರಿಯಲ್ಲಿ ಎಲ್ಲರ ಗಮನ ನಿಮ್ಮ ಸಮಯ ಪಾಲನೆಯ ಮೇಲೆ ಇದ್ದೇ ಇರುತ್ತದೆ. ಹಾಗಾಗಿ ಸಮಯ ಪರಿಪಾಲನೆ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದಿರುವುದು ಒಳಿತು. ಕಚೇರಿಗೆ ವಿಳಂಬವಾಗಿ ಬರುವುದು ಒಳ್ಳೆಯ ಲಕ್ಷಣವಲ್ಲ. ಇದರಿಂದ ಸಹೋದ್ಯೋಗಿಗಳು, ಮೇಲಧಿಕಾರಿಗಳಿಗೆ ನೀವು ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ನಿಮ್ಮ ಏಕಾಗ್ರತೆ ಕೇವಲ ನೀವು ಮಾತ್ರ ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದೊಂದೆ ಆಗಿರಲಿ ಬೇರೆಯವರು ಎಷ್ಟು ಹೊತ್ತಗೆ ಬೇಕಾದರೂ ಬರಲಿ.! ಬೆಳಿಗ್ಗೆ ಸ್ವಲ್ಪ ಬೇಗನೆ ಎದ್ದು ಬಿಟ್ಟರೆ ಸರಿಯಾದ ಸಮಯಕ್ಕೆ ತಲುಪಲು ಸಾದ್ಯ.
ವಸ್ತ್ರಸಂಹಿತೆ ಕಡೆ ಗಮನವಿರಲಿ :-
ವಿದ್ಯಾರ್ಥಿಗಳಾಗಿದ್ದಾಗ ಯಾವ ರೀತಿ ಡ್ರೆಸ್ ಮಾಡಿದರೂ ನಡೆಯುತ್ತೆ. ಆದರೆ, ಕಚೇರಿ ಅಂದ ಮೇಲೆ ಅಲ್ಲೊಂದು ಶಿಸ್ತು ಇರುತ್ತದೆ. ಈ ಶಿಸ್ತು ಉಡುಪಿಗೂ ಅನ್ವಯಿಸುತ್ತದೆ. ಈ ಕುರಿತು ಸಹೋದ್ಯೋಗಿಗಳಿಂದ ಮಾಹಿತಿ ಪಡೆದುಕೊಳ್ಳಿ. ನೀವು ಉಡುಗೆ ನಿಮ್ಮ ವ್ಯಕ್ತಿತ್ವಕ್ಕೆ ಹೊಂದುವಂತೆ ಇರಲಿ. ಮುಜುಗರ ತರುವ ಉಡುಪು ತರವಲ್ಲ . ಸಾದ್ಯವಾದ ಮಟ್ಟಿಗೆ ವಸ್ತ್ರಸಂಹಿತೆಗೆ ಹೊಂದುಕೊಳ್ಳಲು ಪ್ರಯತ್ನಿಸಿ.
ನಿಮ್ಮ ಕೆಲಸವನ್ನುಶ್ರದ್ದೆಯಿಂದ ಮಾಡಿ
ನಿಮ್ಮ ಪಾಲಿಗೆ ಬಂದಿರುವ ಕೆಲಸವನ್ನು ನೀವು ಶ್ರದ್ದೆಯಿಂದ ಮಾಡಿದರೆ ಅದರಿಂದ ನೆಮ್ಮದಿ ಸಿಗುತ್ತದೆ . ಎಲ್ಲವೂ ನನಗೇ ಗೊತ್ತಿದೆ ಎಂಬ ಯೋಚನೆಯಿಂದ ದೂರ ಇರಿ. ಸುತ್ತಮುತ್ತಲಿರುವವರು ಮೂಢರೆಂಬ ಅಚಲ ನಂಬಿಕೆಗೆ ಗೆಟ್ಔಟ್ ಅನ್ನಲೇಬೇಕು. ಎಲ್ಲವೂ ಗೊತ್ತಿದೆ ಎಂಬ ಗುಣದಿಂದ ಹೊಸದನ್ನ ಕಲಿಯುವ ಅವಕಾಶವೂ ಕಳೆದುಹೋಗುತ್ತದೆ. ಇನ್ನೊಬ್ಬರು ಯಾವುದೇ ವಿಷಯವನ್ನು ಮಾತನಾಡುವ ವೇಳೆ ಅವರ ಮೊದಲೇ ನಮಗೆ ಗೊತ್ತಿದೆ ಎಂಬುದನ್ನು ತೋರ್ಪಡಿಸಲು ಹೋಗಿ ನಗೆಪಾಟಲಿಗೀಡಾಗಬಾರದು. ನಾನಿನ್ನು ಕಲಿಯುಬೇಕಾಗಿದೆ ಎನ್ನುವ ಮನಸ್ಸಿನಿಂದ ಕಚೇರಿ ಕೆಲಸದಲ್ಲಿ ಉದ್ಧಾರ ಆಗಲು ಸಾಧ್ಯ.ನಿಮಗೆ ಗೊತ್ತಿರುವುದನ್ನ ಸಹ-ಉದ್ಯೋಗಿಗಳಿಗೆ ಕಲಿಸಿಕೊಡಿ ಅದರಿಂದ ನೀವು ಏನು ಕಳೆದುಕೊಳುವುದಿಲ್ಲ ಬದಲಿಗೆ ಎಲ್ಲರಿಗು ನಿಮ್ಮ ಮೇಲೆ ಗೌರವ ಹೆಚ್ಚಾಗುತ್ತದೆ.
ನಿಮ್ಮ ಮತ್ತು ಕುಟುಂಬ ವಿಚಾರಗಳ ಚಿಂತನೆ ಬೇಡ :-
ಕಚೇರಿಯಲ್ಲಿ ನಿಮ್ಮ ವೈಯಕ್ತಿಕ ವಿಚಾರಗಳನ್ನು ಚರ್ಚಿಸುವುದು ಸಭ್ಯವಲ್ಲ. ಎಲ್ಲರ ಬಳಿಯಲ್ಲೂ ನೀವು ನಿಮ್ಮ ವೈಯಕ್ತಿಕ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರೆ ಹಾಸ್ಯದ ವಸ್ತುವಾಗುತ್ತಿರಿ. ನಿಮ್ಮ ವೈಯಕ್ತಿಕ ವಿಚಾರದ ಚರ್ಚಾ ವೇದಿಕೆ ಕಚೇರಿಯಲ್ಲ. ನಿಮ್ಮ ಆತ್ಮೀಯರಾದ ಸಹೋದ್ಯೋಗಿಗಳ ಬಳಿ ಹೇಳಿಕೊಳ್ಳುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಆದರೆ ಒಂದು ನೆನಪಿಟ್ಟುಕೋಳ್ಳಿ ನಿಮ್ಮ ಸಂಕಟಗಳಿಗೆ ಕಚೇರಿಯಲ್ಲಿ ಮಾರುಕಟ್ಟೆ ಇಲ್ಲ. ಅಂತೆಯೇ ತೀರಾ ಜಾಸ್ತಿ ಮಾತನಾಡಬೇಡಿ. ಹಾಗಂತ ಮೌನವಾಗಿರುವುದೂ ಸಲ್ಲ. ಹಿತಮಿತವಾಗಿ ಮಾತನಾಡಿ. ಸಹೋದ್ಯೋಗಿಗಳ ಜತೆಗಿನ ಪರಿಚಯ ಚುಟುಕಾಗಿರಲಿ. ಅಗತ್ಯವಿದ್ದರಷ್ಟೇ ಮಾತನಾಡಿ.
ದೂರು ಹೇಳುವ ಪೆಟ್ಟಿಗೆ ಆಗಬೇಡಿ :-
ಸಹೋದ್ಯೋಗಿ ಅಥವಾ ಕಚೇರಿಯ ವಾತಾವರಣ ಕುರಿತು ಇನ್ನೊಬ್ಬರ ಬಳಿ ದೂರಲು ಹೋಗಬೇಡಿ. ಒಂದು ವೇಳೆ ನಿಮಗೆ ಸಮಸ್ಯೆಗಳೇನಾದರೂ ಎದುರಾದರೆ ಕೆಲ ದಿನ ಹೊಂದಿಕೊಳ್ಳುವ ಪ್ರಯತ್ನ ಮಾಡಿ. ಎಲ್ಲಿ ತಪ್ಪಾಗುತ್ತಿದೆ ಎನ್ನುವುದನ್ನು ಅರಿಯುವ ಪ್ರಯತ್ನ ಮಾಡಿಕೊಳ್ಳಿ. ನಿಮ್ಮ ಸಹೋದ್ಯೋಗಿಗಳ ಕುರಿತು ಟೀಕೆ ಟಿಪ್ಪಣಿ ಮಾಡುವುದಾಗಲಿ, ತಮಾಷೆ ಮಾಡುವುದಾಗಲಿ ಮಾಡಲು ಹೋಗಬೇಡಿ. ಅನುಮಾನದ ಹುತ್ತವನ್ನು ಮನಸ್ಸಲ್ಲಿ ಇಟ್ಟುಕೊಂಡು ಅವರಿವರ ಕುಂದುಕೊರತೆಗಳನ್ನು ಪಟ್ಟಿ ಮಾಡಬೇಡಿ. ನಿಮ್ಮ ವೈಯಕ್ತಿಕ ಬೆಳವಣಿಗೆ ಬಗ್ಗೆ ಹೆಚ್ಚಿನ ಗಮನ ಹರಿಸಿ.ನೀವು ಸಹೋದ್ಯೋಗಿಗಳ ಬಗ್ಗೆ ಅವರ ಬೆನ್ನ ಹಿಂದೆ ಮಾತನಾಡುತ್ತಿದ್ದರೆ,ಅವರು ನಿಮಗಿಂತ ಎರಡು ಹೆಜ್ಜೆ ಮುಂದೆ ಇದ್ದಾರೆ ಎಂದೇ ಅರ್ಥ.!
ನಿಮ್ಮ ಹಿತ್ತಾಳೆ ಕಿವಿ ಕಿತ್ತು ಹಾಕಿ :-
ಮನುಷ್ಯ ಒಳ್ಳೆಯವನು. ಆದರೆ ಕಿವಿ ಮಾತ್ರ ಹಿತ್ತಳೆ! ಬಾಸ್‌ಗಳಿಗೆ ಹಿತ್ತಾಳೆ ಕಿವಿ ಇದ್ದರೆ ಇದರಿಂದ ಅವರ ಕೈ ಕೆಳಗಿರುವ ಅದೆಷ್ಟೊ ಜನರಿಗೆ ಸಂಕಷ್ಟ ಎದುರಾಗುವುದು. ಹೆಚ್ಚಿನ ಸಂದರ್ಭ ಯಾರೋ ಚಾಡಿ ಹೇಳಿದ್ದನ್ನು ತಲೆಯಲ್ಲಿ ತುಂಬಿಕೊಂಡು, ಮುಗ್ಧರ ಮೇಲೆ ದಾಳಿ ಮಾಡುವುದು, ಸತ್ಯ ಗೊತ್ತಾದ ನಂತರ ವಿನಾಕಾರಣ ಮುಗ್ಧನನ್ನು ಟಾರ್ಗೆಟ್ ಮಾಡಿದೆನಲ್ಲ ಎಂದು ಪರಿತಪಿಸುವುದು ಇದೆ. ಇದು ಒಂದು ರೀತಿಯ ವ್ಯಕ್ತಿತ್ವ ಸಮಸ್ಯೆ. ಆಫೀಸಲ್ಲಿ ಇನ್ನೊಬ್ಬರ ದೂರನ್ನು ಕೇಳುವ ಮೊದಲು ಅದರ ಬಗ್ಗೆ ಸರಿಯಾಗಿ ಯೋಚಿಸಿ. ನಿಮ್ಮ ಆತ್ಮೀಯರೆನ್ನುವ ಕಾರಣಕ್ಕೆ ಎಲ್ಲವನ್ನೂ ನಂಬಬೇಡಿ.
ಮನೆ ಮತ್ತು ಕಚೇರಿ ಸಮತೋಲನ :-
ಮಾಡುವ ಎಲ್ಲ ಕೆಲಸಗಳಲ್ಲಿ ಸ್ಥಿರತೆ ಕಾಪಾಡಿಕೊಳ್ಳುವ ಉದ್ದೇಶ ಇರಲಿ. ಸಾದ್ಯವಾದ ಮಟ್ಟಿಗೆ ಕಚೇರಿಯ ಯಾವುದೇ ವಿಚಾರ ವಿನಿಮಯ ಮನೆಯಲ್ಲಿ ಮಾಡಬೇಡಿ. ಬಾಸ್ ಬೈದಿದನ್ನು ತಂದು ಹೆಂಡತಿ /ಪತಿ ಮಕ್ಕಳ ಮೇಲೆ ರೆಗಾಡುವುದರಿಂದ ನಿಮ್ಮ ನೆಮ್ಮದಿಯೇ ಹಾಳಾಗುತ್ತದೆ. ಸರಿಯಾದ ಸಮಯಕ್ಕೆ ಹೇಗೆ ಕಚೇರಿಗೆ ಬರಬೇಕೋ ಹಾಗೆ ವೇಳೆ ಮುಗಿದ ಮೇಲೆ ಮನೆಗೆ ಹೋಗಬೇಕು. ನಿಮ್ಮ ಪ್ರಸ್ತುತತೆ ಹಾಗು ಅವಶ್ಯಕತೆ ನಿಮ್ಮ ಕುಟುಂಬಕ್ಕೆ ಇದೆ.
ಕೊನೆಯ ಮಾತು :
ನಾವು ಸೃಷ್ಟಿಸಿರುವ ಜಗತ್ತು ನಮ್ಮ ಯೋಚನೆಗಳ ಉತ್ಪನ್ನ ನಮ್ಮ ಯೋಚನೆ ಬದಲಾಯಿಸದೇ ಜಗತ್ತನ್ನು ಬದಲಾಯಿಸಲು ಸಾಧ್ಯವಿಲ್ಲ. ನಾನು ಓರ್ವ <ನಿಮ್ಮ ಹುದ್ದೆ >. ಹೆಚ್ಚು ಅಲ್ಲ , ಕಡಿಮೆಯೂ ಅಲ್ಲ. ಎನ್ನುವುದನ್ನು ನೆನೆದು ಕರ್ತವ್ಯ ನೆರವೇರಿಸಿ. ನಿಮ್ಮನ್ನು ನಿಮ್ಮ ಕೆಲಸ ಮಾತ್ರ ಕಾಪಾಡುತ್ತದೆ. ಯೋಚಿಸಿ
 

‍ಲೇಖಕರು avadhi

April 6, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: